ತಿರುಗಿ ನೋಡಿದಾಗ...

[ ಹಲವು ನೆನಪುಗಳ ಬುತ್ತಿ..]


ಕಾಲವು ನಮ್ಮೆಲ್ಲರನ್ನೂ ೨೦೧೦ ರಿಂದ ತಂದು ೨೦೧೧ ರ ಹೊಸ್ತಿಲಲ್ಲಿ ತಂದು ನಿಲ್ಲಿಸಿದೆ..
ಈ ಸಮಯದಲ್ಲಿ ೨೦೧೦ರ ಕೆಲವು ನೆನಪುಗಳನ್ನು ಮೆಲುಕು ಹಾಕೋಣ ಎನಿಸುತ್ತಿದೆ..
೨೦೧೦ ರ ಆರಂಭ ಕನ್ನಡಿಗರ ಪಾಲಿಗೆ ಶುಭಾರಂಭ ಆಗಲಿಲ್ಲ..
ನಿಮಗೆ ತಿಳಿದಿರುವಂತೆಯೇ ಕಾರಣ ೨೦೦೯ರ ಕರಾಳ ಅಂತ್ಯ..

೨೦೦೯ರ ಅಂತ್ಯದಲ್ಲಿ ಕನ್ನಡ ಭಾವಗೀತಾ,ಜಾನಪದಗೀತ ಹಾಗೂ ಸುಗಮ ಸಂಗೀತ ಲೋಕದ ಕಂಚಿನ ಕಂಠದ ಖ್ಯಾತ ಗಾಯಕರಾದ ಸಿ.ಅಶ್ವತ್ಥ ನಾರಾಯಣ ಅವರು ಅವರ ೭೦ ನೆ ಜನ್ಮದಿನವಾದ ಡಿಸೆಂಬರ್ ೨೯ ರಂದೇ ನಮ್ಮನ್ನು ಅಗಲಿದ್ದರು.. ಇವರ ಅಗಲಿಕೆಯಿಂದ ಸುಗಮ ಸಂಗೀತ ಲೋಕದಲ್ಲಿ ಕಣ್ಣೀರು ಕೇಳುವ ಸಂಗೀತ ಮೊರೆಯತೊಡಗಿತು..

ನೋವಿನಿಂತ ಚೇತರಿಸಿಕೊಳ್ಳುವಷ್ಟರಲ್ಲೇ ಡಿಸೆಂಬರ್ ೩೦ ರಂದು ಕನ್ನಡ ಕಲಾದೇವಿಯ ಕಿರೀಟದಿಂದ ಇನ್ನೊಂದು ಮುತ್ತು ಉದುರಿಹೋಯಿತು.. ಆ ಮುತ್ತು ಕನ್ನಡ ಸಿನಿಮಾರಂಗದ ಫೀನಿಕ್ಸ್,ಕರ್ನಾಟಕ ಸುಪುತ್ರ, ಕನ್ನಡ ಚಲನಚಿತ್ರರಂಗದ ಖ್ಯಾತ ನಟ ಸಾಹಸಸಿಂಹ ಡಾ.ವಿಷ್ಣುವರ್ಧನ್.
ಅವರು ಸಾವನ್ನಪ್ಪಿ ಕನ್ನಡಾಭಿಮಾನಿಗಳಿಗೆ ಭಾರಿ ಆಘಾತ ಉಂಟಾಯ್ತು..
'ಅಪ್ಪಾಜಿ ಇಲ್ಲ ಹೊಸವರ್ಷದ ಸಂಭ್ರಮ ನಮಗೇಕೆ' ಎಂದು ಅಭಿಮಾನಿಗಳು ಕಣ್ಣೀರು ಹರಿಸಿದ್ದರು..

ಹೀಗೆ ೨೦೧೦ ಕೆಟ್ಟದಾಗಿ ಆರಂಭವಾಯ್ತು..
ಆರಂಭದಲ್ಲೇ ಸುಮಾರು ೩೭೦ ಚಲಚಿತ್ರಗಳಲ್ಲಿ ನಟಿಸಿದ್ದ ಕನ್ನಡ ಚಿತ್ರರಂಗದ ಮತ್ತೊಬ್ಬ ಕಲಾವಿದ ಕೆ.ಎಸ್. ಅಶ್ವಥ್ ಅವರು ಕಾಲವಾಗಿ ಹೋದರು..

ವಿಷ್ಣು ಅವರಿಲ್ಲದೆ ಅವರ ಜನ್ಮದಿನವಾದ ಸೆಪ್ಟೆಂಬರ್ ೧೮ ಅಭಿಮಾನಿಗಳೆಲ್ಲ ಅನಾಥರಾಗಿ ಕಂಗಾಲಾಗಿ ಕುಳಿತಿದ್ದರು..
ಈಗಲೂ ಅವರ ಭಾವುಕ ನಟನೆಯ ದೃಶ್ಯಗಳು ನನ್ನ ಕಣ್ಣುಗಳನ್ನು(ನನ್ನ ಕಣ್ಣನಷ್ಟೇ ಅಲ್ಲ ,ಕೋಟಿ ಕೋಟಿ ಅಭಿಮಾನಿಗಳ) ತೇವ ಮಾಡುತ್ತವೆ..

'ಅವರ ನೆನಪು ಮತ್ತೆ ಮತ್ತೆ ಕಣ್ಣೀರು ತರುವಂತಿದ್ದರೂ ಅವರ ನೆನಪನ್ನು ಕಳೆದುಕೊಳ್ಳಲು ಇಚ್ಚಿಸದ ನಾನು ಆ ಕಣ್ಣೀರು ತರುವ ಆ ಕ್ಷಣಗಳನ್ನೇ ಮತ್ತೆ ಮತ್ತೆ ಬಯಸಲು ಇಷ್ಟಪಡುತ್ತೇನೆ..'
ಆ ನೆನಪಿಗೆ ನನ್ನ ಮತ್ತಷ್ಟು ಅಶ್ರುತರ್ಪಣ..

ಹೇಳಬೇಕೆಂದರೆ ಸಿ. ಅಶ್ವಥ್ ಅವರ ಬಗ್ಗೆ ನನಗೆ ಅಷ್ಟಾಗಿ ಆಸಕ್ತಿ ಇರಲಿಲ್ಲ.. ಆದರೆ ಇತ್ತೀಚಿಗೆ ಅವರ ಬಗ್ಗೆ ತುಂಬಾ ಆಸಕ್ತಿ ಹೆಚ್ಚುತ್ತಿದೆ..
ಅದು ಎಂತದ್ದೆ ಸಾಹಿತ್ಯವಾದರೂ ಕೆಲವು ಗಾಯಕರ ದನಿ ಸೋಕಿದೊಡನೆ ಆ ಹಾಡಿಗೆ ಜೀವ ಬರುವುದುಂಟು.. ಅಂತಹ ಗಾಯಕರಲ್ಲಿ ಒಬ್ಬರು ಸಿ.ಅಶ್ವಥ್..
ಅವರ ಧ್ವನಿ ಯಾವ ಹಾಡಿನಲ್ಲಿದ್ದರೂ ಗುರುತಿಸುವಂತಹದ್ದು.. ಇತ್ತೀಚೆಗಂತೂ ಅವರ ಹಾಡುಗಳು ನನ್ನ ಮನಸ್ಸಿಗೆ ಹೆಚ್ಚೇ ಇಷ್ಟವಾಗುತ್ತಿವೆ..
ಅವರ ದನಿಯಿಲ್ಲದೆ ೨೦೧೦ ರ ಕನ್ನಡ ರಾಜ್ಯೋತ್ಸವ ಕಳೆಗುಂದಿತ್ತೇನೋ..?

ಇತ್ತೀಚಿಗೆ ತುಂಬಾ ಕಾಡುತ್ತಿರುವ ಅವರ ಮಾಧುರ್ಯಗಾನದ ಒಂದು ಹಾಡಿನ ಸಾಲುಗಳನ್ನು ಇಂದು ಇಲ್ಲಿ ಹಾಕಲು ಇಷ್ಟಪಡುತ್ತೇನೆ..

ನನ್ನ ಬಾಳಿನ ಇರುಳ
ತಿಳಿಯಾಗಿಸಲು ಅವಳ
ಕೆಂಪುತುಟಿಗಳ ಹವಳ
ಬೆಳಗಲೇಬೇಕು..
ನನ್ನ ಬಾ..ಳಿನ ಇರುಳ
ತಿಳಿಯಾ..ಗಿಸಲು ಅವಳ
ನನ್ನ ಬಾ..ಳಿನ ಇರುಳ
ತಿಳಿಯಾ..ಗಿಸಲು ಅವಳ
ಕೆಂಪುತುಟಿಗಳ ಹವಳ
ಬೆಳಗಲೇಬೇಕು..

ಬೆಳಗಲೇಬೇಕು..

ಕವಿದಿರುವ ಮೋಡಗಳ
ಸೀಳಿಹಾಕಲು ಅವಳ
ಕವಿದಿರುವ ಮೋಡಗಳ
ಸೀಳಿಹಾಕಲು ಅವಳ
ಕಣ್ಣ ಸುಳಿಮಿಂಚುಗಳು
ಹೊಳೆಯಲೇಬೇಕು..

ಹೊಳೆಯಲೇಬೇಕು..
ನನ್ನ ಬಾ..ಳಿನ ಇರುಳ
ತಿಳಿಯಾ..ಗಿಸಲು ಅವಳ
ಕೆಂಪುತುಟಿಗಳ ಹವಳ
ಬೆಳಗಲೇಬೇಕು..

ಒಣಗಿದಾ ಎದೆಯನೆಲ
ನೆನೆಯಲು ನನ್ನವಳ
ಆನಂದ ಬಾಷ್ಪಗಳ
ಮಳೆಯಾಗಬೇಕು..
ಒಣಗಿದಾ... ಎದೆಯನೆಲ
ನೆನೆಯಲೂ.. ನನ್ನವಳ
ಆನಂದ ಬಾಷ್ಪಗಳ
ಮಳೆಯಾ...ಗಬೇಕು..
ಮಳೆಯಾಗಬೇಕೂ..

ನನ್ನ ಬಾ..ಳಿನ ಇರುಳ
ತಿಳಿಯಾ..ಗಿಸಲು ಅವಳ
ಕೆಂಪುತುಟಿಗಳ ಹವಳ
ಬೆಳಗಲೇಬೇಕು..

ನನ್ನ ಬಾನಿನ ನೀಲಿ
ಆ............................................ಅ
ಆಆಆ ಆಆಆ ಆಆಆಆಅ
ನನ್ನ ಬಾ...ನಿನ ನೀಲಿ...
ನನ್ನವಳ ಕಣ್ಣಾಲಿ
ಚಂದ್ರಿಕೆಯ ಸುಧೆಯಲ್ಲಿ
ತೋಯಲೇಬೇಕು..
ತೋಯಲೇ..ಬೇಕೂ..

ನನ್ನ ಬಾ..ಳಿನ ಇರುಳ
ತಿಳಿಯಾ..ಗಿಸಲು ಅವಳ
ಕೆಂಪುತುಟಿಗಳ ಹವಳ
ಬೆಳಗಲೇಬೇಕು..
ಬೆಳಗಲೇಬೇಕು..
ಬೆಳಗಲೆಬೇಕೂ..
ಬೆಳಗಲೇಬೇಕೂ..


_,_,_,_,_,_

ಮತ್ತೆ ಜೊತೆಗೆ ಇನ್ನೊಂದು ವಿಷಯ...
ನೆನ್ನೆ ಮೊನ್ನೆಯಷ್ಟೇ ಕಳೆದ ಈ ಡಿಸೆಂಬರ್ ೨೪ ನನಗೆ ಒಂದು ವಿಶೇಷವಾದ ದಿನ.. ಕಾರಣ ನನ್ನ ಜೀವನದ ಏಕೈಕ ಆಪ್ತರೊಬ್ಬರ ಜನ್ಮದಿನ.. ಅವರೇ ಈ 'ಮನಸಿನಮನೆ' ಕಟ್ಟಲು ಕಾರಣರಾದ ಗುರು..

ಅಂದೇ ಈ ಲೇಖನ ಹಾಕಬೇಕೆಂದಿದ್ದೆ.. ತಪ್ಪು ಮಾಡಿದೆ.. ಕ್ಷಮೆಯಿರಲಿ..
ಆದರೂ ನನಗೊಂದು ಅಳುಕಿದೆ..
ಕಳೆದ ನವೆಂಬರ್ ೨ ನನ್ನ ಗೆಳತಿಯೊಬ್ಬಳ ಜನ್ಮದಿನ.. ಅಂದು ನಾನು ತುಂಬಾ ಕ್ರಿಯಾಶೀಲತೆಯಿಂದ ಓಡಾಡಿಕೊಂಡು ಅವಳಿಗೆ ಕೊಡುಗೆ ಇತ್ತು ತಕ್ಕಮಟ್ಟಿಗೆ ಸಂಭ್ರಮ ಆಚರಿಸಿದೆ..
ಹಲವಾರು ಸಲ ಜಗಳ,ಮುನಿಸುಗಳೊಂದಿಗೆ ಇರುವ ನನ್ನ ಗೆಳತಿಯ ಹುಟ್ಟುಹಬ್ಬಕ್ಕೆ ಬಹಳ ತಲೆ ಕೆಡಿಸಿಕೊಂಡಿದ್ದ ನಾನು ಇವರ ಜನ್ಮದಿನದ ಬಗ್ಗೆ ಏಕೆ ಅಷ್ಟೊಂದು ತಲೆಕೆಡಿಸಿಕೊಳ್ಳದೆ ಕೇವಲ ತಡವಾದ ಶುಭಾಷಯ ಮಾತ್ರ ಹೇಳಿ ಅವರ ಜನ್ಮದಿನ ಮುಗಿಸಿದ್ದೇಕೆ ...?
ಹೇಳಬೇಕೆಂದರೆ ಆಕೆಗಿಂತ ಇವರೇ ನನಗೆ ಮುಖ್ಯವಾದವರು..(ಇದನ್ನು ಓದಿದ ಆಕೆ ಬೇಸರಾಗದಿರಲಿ..)
ಅವಳಿಗಾಗಿಯೇ ಅಂದೊಂದು ಕವಿತೆ ಕೂಡ ಬರೆದಿದ್ದೆ..
ಇವರಿಗೆ ಬರೆಯಬೇಕೆನ್ದುಕೊಂದಿದ್ದರೂ ಕೊನೆಯಲ್ಲಿ ಕೈಬಿಟ್ಟೆ..
ತಪ್ಪಾಗಿದೆ ಮತ್ತೊಮ್ಮೆ ಕ್ಷಮೆಯಾಚನೆ ಮಾಡುತ್ತೇನೆ..

~.~

ಕಾಡದಿರು ಪ್ರಭುವೆನ್ನ ನೊಂದಿರುವೆ ಸಾಕಷ್ಟು..

[ಬರೆಯಲೇನೂ ವಿಷಯವಿಲ್ಲದೆ ಬರೆದದ್ದು.. ]ಈ ಲೇಖನ ಅವಶ್ಯಕವೋ ಅನಾವಶ್ಯಕವೋ ನನಗೆ ತಿಳಿದಿಲ್ಲ.. ಬರೀಬೇಕು ಅನಿಸಿತು ಬರೆಯುತ್ತಿದ್ದೇನೆ..
ನಾನು ದ್ವಿತೀಯ ಪಿ.ಯು.ಸಿ. ವಿಜ್ಞಾನ ವಿಭಾಗದಲ್ಲಿ ಉತ್ತಮ ಅಂಕಗಳನ್ನೇ ಪಡೆದೆನಾದರೂ ಯಾರ ಮಾತು ಕೇಳದೆ ಬಿ. ಎಸ್ಸಿ. ಆಯ್ಕೆ ಮಾಡಿಕೊಂಡದ್ದು ಎರಡನೇ ವಿಷಯ..
ಮೊದಲ ಸೆಮಿಸ್ಟರ್ ನಲ್ಲಿ ಯಾವುದೋ ಒಂದು ಕೆಲಸಕ್ಕೆ ಅರ್ಜಿ ಹಾಕಿದ್ದು ಆ ಕೆಲಸ ಸಿಕ್ಕೆ ಸಿಗುವುದೆಂಬ ಅಪೇಕ್ಷೆಯಿಂದ ಓದುವುದರ ಕಡೆ ಗಮನ ಬಿಟ್ಟಿದ್ದೆ.. ಆದರೆ ಕೆಲಸವೂ ಸಿಗಲಿಲ್ಲ.. ಓದುವುದರ ಕಡೆ ಗಮನ ಕೊಡದೆ ಇದ್ದುದರಿಂದ ಸುಮಾರಾಗಿ ಮಾತ್ರ ಅಂಕ ಗಳಿಸಲು (೬೦%) ಸಾಧ್ಯವಾಯ್ತು..
ಎರಡನೇ ಸೆಮಿಸ್ಟರ್ ನಲ್ಲಿ ಓದುವುದರ ಕಡೆ ಗಮನ ಹರಿಸಿದ್ದರೂ ವಯಸ್ಸಲ್ಲವೇ ಕೆಲವು ವಿಷಯಗಳು ಮನಸಿನ ಮೇಲೆ ದಾಳಿ ಮಾಡಿದ್ದವು.. ಆದರೂ ದೇವರ ಕೃಪೆಯಿಂದ ಮೊದಲ ಸೆಮಿಸ್ಟರ್ ಗಿಂತ ಹೆಚ್ಚು ಅಂಕ (೭೫%) ಗಳಿಸಲು ಸಾಧ್ಯವಾಯಿತು..
ಇನ್ಮುಂದೆ ಬೇರೆ ಕಡೆ ಗಮನ ಕೊಡದೆ ಓದುವುದರ ಕಡೆ ಹೆಚ್ಚು ಗಮನ ಕೊಡಬೇಕು ಎಂದುಕೊಂಡು ಮೂರನೇ ಸೆಮಿಸ್ಟರ್ ಆರಂಭ ಮಾಡಿದೆ.. ಅಂತೆಯೇ ಮೊದಮೊದಲು ಓದುವುದರ ಕಡೆ ಗಮನ ಹರಿಸಿ ಓದುತ್ತಲೇ ಇದ್ದೆ.. ನೂರೆಂಟು ಕನಸುಗಳನ್ನು ಕಟ್ಟಿದ್ದೆ..
ಕೆಲವು ದಿವಸಗಳ ನಂತರ ಇದ್ದಕ್ಕಿದ್ದಂತೆ ಓದುವುದರ ಕಡೆ ಗಮನ ಕಡಿಮೆಯಾಯಿತು.. ತರಗತಿಗಳಿಗೆ ಹೋಗಲು ಮನಸ್ಸು ಒಪ್ಪದಾಯಿತು.. ಓದು ಅಂತಲ್ಲ ಯಾವುದೇ ಬೇರೆ ವಿಷಯದ ಕಡೆಗೂ ಗಮನ ಇರದಾಯಿತು.. ನಿರುತ್ಸಾಹಿಯಾಗಿಬಿಟ್ಟೆ.. ಪ್ರತಿಯೊಂದಕ್ಕೂ ಕಾರಣ ಇರಲೇಬೇಕೆಂದು ಎಲ್ಲರಿಗೂ ಹೇಳುತ್ತಿದ್ದ ನನಗೇ ಈಗ ನನಗೆ ಉತ್ಸಾಹ ಕುಗ್ಗಿ ಹೋಗಲು ಕಾರಣ ತಿಳಿದುಬರುತ್ತಿಲ್ಲ..
ಮನಸ್ಸು ಏನೇನೋ ಹಳೆಯ ಕಹಿನೆನಪನ್ನು ಮೆಲುಕು ಹಾಕುತ್ತದೆ ಸದಾ..
ಈ ಹಿಂದೆ ನನ್ನ ಭವಿಷ್ಯದ ಬಗ್ಗೆ ನಾ ತೆಗೆದುಕೊಂಡ ಕೆಲವು ನಿರ್ಧಾರಗಳು ತಪ್ಪೆಂದು ಅರಿವಾಗುತ್ತಿವೆ..
ಹಳೆಯದೆಲ್ಲ ಕಹಿ ನೆನಪುಗಳು ಬೇಡ ಬೇಡವೆಂದರೂ ನನ್ನ ಮನದಂಗಳಕ್ಕೆ ಸತ್ತ ಭೂತಗಳನ್ನು ತಂದು ಬಿಸಾಡುತ್ತಿವೆ..
ನನ್ನ ಬದುಕೀಗ ಮುಳ್ಳಿನ ಹಾಸಿಗೆ ಮೇಲೆ ಮಲಗಿ ಶಾಂತಿಗಾಗಿ ಅತ್ತಿತ್ತ ಹೊರಳಾಡುತ್ತಿರುವಂತಾಗಿದೆ..
ಎಲ್ಲ ಸಂಬಂಧಗಳನ್ನು ಕಳಚಿಕೊಂಡು ಒಂಟಿಯಾಗಬೇಕು ಎನಿಸುತ್ತದೆ..
ಕೆಲವೊಮ್ಮೆ ದೇಹಕ್ಕೆ ಆತ್ಮದೊಂದಿಗಿರುವ ಬಂಧವನ್ನು ತೊರೆಯಬೇಕೆಂದು ಎನಿಸುತ್ತದೆ..
ಇಂಥ ಸಮಯದಲ್ಲಿ ಸಮಾಧಾನ ಹೇಳುವ ಜೀವಗಳೇ ಬಳಿ ಇಲ್ಲ.. ನಾನಿರುವುದು ಹಂಗಿಸುವ ಜೀವಗಳ ಎಡೆಯಲ್ಲಿ.. ಬಲಿಪಶು ಮಾಡುವವರ ಮಧ್ಯದಲ್ಲಿ.
ಹಲವಾರು ಉತ್ತರಗಳಿಲ್ಲದ ಪ್ರಶ್ನೆಗಳು ಪದೇ ಪದೇ ಕಾಡುತ್ತವೆ..
ಬ್ಲಾಗ್ ಕಡೆ ಬರಲು ಸಾಧ್ಯವಾಗುತ್ತಿಲ್ಲ..
ನನಗೇನಾಗಿದೆ ಅಂತ ಹೇಳೋಕೆ ನನಗೇ ಆಗುತ್ತಿಲ್ಲ..
ವಿದ್ಯಾಭ್ಯಾಸ ಮುಂದುವರೆಸಿ ಏನನ್ನಾದರೂ ಸಾಧಿಸುತ್ತೇನೆ ಎಂಬುದರ ಬಗ್ಗೆ ನಂಬಿಕೆಯೇ ಇಲ್ಲವಾಗಿದೆ.. ಓದುವುದರ ಬಗ್ಗೆ ಸಂಪೂರ್ಣ ಆಸಕ್ತಿ ಕುಗ್ಗಿಹೋಗಿದೆ..
ಇತ್ತೀಚೆಗಷ್ಟೇ ನಡೆದ ಪರೀಕ್ಷೆಯನ್ನು ಬಹಳ ಕೆಟ್ಟದಾಗಿ ಮಾಡಿದ್ದೇನೆ..
ಈ ಅಶಾಂತಿ ತುಂಬಿದ ಸಮಯದಲ್ಲಿ ಒಂದು ಹುದ್ದಗೆ ಅರ್ಜಿ ಆಹ್ವಾನ ಬಂದಿತ್ತು.
ಹೇಗಿದ್ದರೂ ಓದುವುದರ ಗಮನ ಕಡಿಮೆಯಿದೆ ಎಂದು ಈ ಕೆಲಸಕ್ಕೆ ಅರ್ಜಿ ಸಲ್ಲಿಸಿ ಸಿಕ್ಕೆ ಸಿಗುವುದೆಂಬ ನಂಬಿಕೆಯಿಂದಿದ್ದೇನೆ..
ಇದೇ ಡಿಸೆಂಬರ್ ೨ ರಿಂದ ಮೂರನೇ ಸೆಮಿಸ್ಟರ್ ಅಂತಿಮ ಪರೀಕ್ಷೆ ಇದ್ದು ನನ್ನ ತಯಾರಿ ಆರಂಭವಾಗೆ ಇಲ್ಲ..
ಒಟ್ಟಿನಲ್ಲಿ ಈ ವರ್ಷದ ಕೊನೆಯಲ್ಲಿ ನನ್ನ ಬದುಕು ಮಹಾತಿರುವು ಕಾಣಲಿದೆ.. ಹೊಸವರುಷಕ್ಕೆ ಹೊಸಬೆಳಕು ಬಾಳಿನಲ್ಲಿ ಮೂಡುವುದೋ ಇಲ್ಲವೋ ಕಾದು ನೋಡಬೇಕಾಗಿದೆ..
ಮತ್ತೆ ಉತ್ಸಾಹ ಮರುಕಳಿಸುವ ತನಕ ನಾನು ಇತ್ತ ಬರಲಾರೆನು ಕ್ಷಮಿಸಿ..
ಮರೆಯದಿರಿ..-..-..-..-..-..-..-..-..-..-..-..-..-
ಪದೇ ಪದೇ ಕೇಳುವಂತೆ ನನ್ನ ಕಾಡುವ ಸಾಲುಗಳು :


ನಿನ್ನ ನೆರವಿಲ್ಲದೆಯೇ
ತೊಳಲಿರುವೆ ನೆಲದಲ್ಲಿ
ಚೇತನವನುದ್ಘರಿಸೋ ದೇವ ದೇವ
ಹಗಲಿರುಳು ನಿನ್ನೊಂದು
ಕೃಪೆಗಾಗಿ ಕಾದಿರುವೆ
ನಿನ್ನ ಕಂದನ ಸಲಹೋ ದೇವ ದೇವ
ನಿನ್ನ ನೆರವಿಲ್ಲದೆಯೇ
ತೊಳಲಿರುವೆ ನೆಲದಲ್ಲಿ

ಎನರ ಹಾ...ದಿಯ ನಂಬಿ
ನಾವೇ ತಾನುಲಿವಂತೆ
ಎನರ ಹಾ...ದಿಯ ನಂಬಿ
ನಾವೇ ತಾನುಲಿವಂತೆ
ಗುರಿಯಿಲ್ಲದಲೆದಿರುವೆ ನೆಲೆಯನರಸೀ..
ದಿವ್ಯಅಂಬಿಗ ನೀನು
ಬಂದೆನ್ನ ಪೊರೆಯ...ಯ್ಯ
ದಿವ್ಯಅಂಬಿಗ ನೀನು
ಬಂದೆನ್ನ ಪೊರೆಯ...ಯ್ಯ
ದೂರತೀರದ ಬಳಿಗೆ ನನ್ನ ನಡೆಸೀ..
ನಿನ್ನ ನೆರವಿಲ್ಲದೆಯೇ
ತೊಳಲಿರುವೆ ನೆಲದಲ್ಲಿ

ತೋರು ಶಾಂ..ತಿಯ ತಂದೆ
ನನ್ನ ಸೋ..ತಿರುವೆದೆಗೆ
ತೋರು ಶಾಂ..ತಿಯ ತಂದೆ
ನನ್ನ ಸೋ..ತಿರುವೆದೆಗೆ
ಭಕ್ತಿ-ಭಾವವ ಉಳಿದ ಶಕ್ತಿದೇವಾ..
ಕಾ...ಡದಿರು ಪ್ರಭುವೆನ್ನ
ನೊಂದಿರುವೆ ಸಾ...ಕಷ್ಟು
ಕಾ...ಡದಿರು ಪ್ರಭುವೆನ್ನ
ನೊಂದಿರುವೆ ಸಾ...ಕಷ್ಟು
ನಿನ್ನ ಅಭಯದ ಹಸ್ತ ನೀಡು ದೇವಾ..

ನಿನ್ನ ನೆರವಿಲ್ಲದೆಯೇ
ತೊಳಲಿರುವೆ ನೆಲದಲ್ಲಿ
ಚೇತನವನುದ್ಘರಿಸೋ ದೇವ ದೇವಾ..
ಹಗಲಿರುಳು ನಿನ್ನೊಂದು
ಕೃಪೆಗಾಗಿ ಕಾದಿರುವೆ
ನಿನ್ನ ಕಂದನ ಸಲಹೋ ದೇವ ದೇವಾ..
ನಿನ್ನ ನೆರವಿಲ್ಲದೆಯೇ..
~.~
ಒಂದೆರಡು ಸಾಲಿನಲ್ಲಿ:
'ಕಣ್ಣಿಗೇಳದೆ ನೋವು ನುಂಗುತ್ತ ಬಿಕ್ಕಳಿಸುವ ತುಟಿಗಳು..
ತುಟಿಗಳಿಗೆ ತಿಳಿಸದೇ ನೀರು ತುಂಬಿಕೊಳ್ಳುವ ಕಣ್ಣುಗಳು..
ಅವೆರಡರ ಗಮನಕ್ಕೂ ಕೊಡದೆ ಒಳಗೆ ನೋವು ನುಂಗಿ ಬಿರಿಯುತ್ತಿರುವ ಎದೆ..
ನನ್ನದೆ!!"
~.~
ಎ.ಕಾ.ಗುರುಪ್ರಸಾದಗೌಡ.

ಬಾ ನನ್ನೆದೆಯ ಅಂಗಳಕೆ..

ಮೊದಲನೆಯದಾಗಿ ಎಲ್ಲರಿಗೂ ನಲ್ಮೆಯ 'ನ್ನ ರಾಜ್ಯೋತ್ಸವ' ದ ಶುಭಾಶಯಗಳು..
ಹಾಗೂ
'ದೀಪಾವಳಿ ಹಬ್ಬ' ದ ಶುಭ ಹಾರೈಕೆಗಳು..

ಬಾ ನನ್ನೆದೆಯ ಅಂಗಳಕೆ
ನನ್ನ ಮನಸಿನಮನೆಗೆ
ಚೂರಾದ ಕನಸುಗಳ ಗುಡಿಸು ಬಾ..
ರಂಗೋಲಿ ಇಟ್ಟು ಬಲಗಾಲಿಟ್ಟು ಬಾ ..
ಕತ್ತಲ ಮನೆಗೆ ದೀವಿಗೆ ಹಿಡಿದು ಬಾ..
ಮನದಂಗಳಕೆ ಬೆಳದಿಂಗಳ ಬಾಲೆಯಾಗಿ ನೀ ಬಾ..
ನನ್ನೆದೆಯ ವೀಣೆ ನುಡಿಸಲು
ನನ್ನೊಂದಿಗೆ ಕೈ ಜೋಡಿಸು ಬಾ..
ಬಂಧ ತೊರೆದಿಹ ಜೀವಕ್ಕಿಲ್ಲಿ..
ಬಂಧುವಾಗಿ ನೀ ಬಾ..
ಎದೆಗೆ ನಾಟಿದ ಮುಳ್ಳುಗಳ
ಹೆಕ್ಕಿ ನೇವರಿಸು ಬಾ..
ನೊಂದ ಮನಸಿಗೆ ಸಾಂತ್ವನಿಸಲು
ನಗುವ ಹೂ ಹಿಡಿದು ಬಾ..
ನೋವನ್ನೆಲ್ಲ ತೋಡಿಕೊಳ್ಳಲು
ಮಡಿಲ ನೀಡು ಬಾ..
ಕಣ್ಣ ನೀರ ಒರೆಸಲು
ಸೆರಗ ನೀಡು ಬಾ..
ಹುಚ್ಚು ಮನಸಿಲ್ಲಿ ಬೆಚ್ಚಿ ಕುಳಿತಿಹುದಿಲ್ಲಿ..
ಅನಾಥಮಗುವಂತೆ ಅಳುತಿಹುದಿಲ್ಲಿ
ಮಗುವಿನಂತೆ ಮುದ್ದುಮಾಡಿ
ಕಣ್ಣೀರೊರೆಸಿ ಕೈ ಹಿಡಿವೆ ಬಾ..

.~-~.~-~.


ಎರಡು ಸಾಲಿನಲ್ಲಿ..:
ಅವಳು ಕೊಟ್ಟ ಖಾಲಿ ಪತ್ರವನ್ನೇ ಮತ್ತೆ ಮತ್ತೆ ಓದುತ್ತಾನಿವನು..!!~.~-~

ಹೀಗೂ ಇರ್ತಾರಪ್ಪ ಜನ..


1.ಯುವಕನ್ನೊಬ್ಬ ಇನ್ನು ನಂಬರೇ ಹಾಕಿರದ ತನ್ನ ಹೊಸ ಪಲ್ಸರ್ ಗಾಡಿಯನ್ನು ಮುಖ್ಯರಸ್ತೆಯಲ್ಲಿ ವೇಗವಾಗಿ ಉತ್ಸಾಹದಿಂದ ಓಡಿಸುತ್ತಾ ಬರುತ್ತಿದ್ದಾನೆ..ದುರದೃಷ್ಟವಶಾತ್ ಅಲ್ಲೊಬ್ಬ ಟ್ರಾಫಿಕ್ ಪೋಲಿಸ್ ಇದ್ದ. ತಕ್ಷಣ ಆ ಹುಡುಗನನ್ನು ಹಿಡಿದು ನಿಲ್ಲಿಸಿದನು..ಆ ಯುವಕ ಆ ಪೋಲಿಸ್ ಕಿವಿಯಲ್ಲಿ ಏನೋ ಗುನುಗುತ್ತಿದ್ದಾನೆ.. ತಕ್ಷಣ ಆ ಪೋಲಿಸ್ 'ಹೌದ ಸರ್,ನಂಗೊತ್ತಿರ್ಲಿಲ್ಲ.... ನಡೀರಿ ಸರ್..' ಎಂದು ಏನೇನೋ ಹೇಳುತ್ತಾ ಆ ಯುವಕನನ್ನು ಕಳುಹಿಸಿಯೇ ಬಿಟ್ಟ..
ಇನ್ನೊಂದು ದಿವಸ ಮೂವರು ಯುವಕರು ಒಂದೇ ಬೈಕಿನಲ್ಲಿ ಬರುತ್ತಿರಲು ಟ್ರಾಫಿಕ್ ಪೋಲಿಸ್ ಕಣ್ಣಿಗೆ ಬಿದ್ದರು.. ಆ ಬೈಕಿಗೆ ಅಪ್ಪ-ಅಮ್ಮ(ಡಾಕ್ಯೂಮೆಂಟ್ಸ್ ) ಇಲ್ಲದಿರುವುದನ್ನು ತಿಳಿದ ಪೋಲಿಸ್ ಬಾಯಿ ಜೋರು ಮಾಡಿ ಕೂಗಾಡಲು ಶುರುಮಾಡಿದ.. ಸುಮಾರು ಹೊತ್ತಿನ ತನಕ ಮಾತಿನ ಚಕಮಕಿಯ ನಂತರ ಅವರಲ್ಲೊಬ್ಬ ಯುವಕ ಆ ಪೋಲಿಸ್ ಕೈಗೆ ೩೦೦/- ರೂಪಾಯಿ ಇಟ್ಟ.'ಆದ್ರೂ... ತಪ್ಪಲ್ವಾ' ಎಂದ ಪೋಲಿಸ್..'ಇರ್ಲಿ..ಇಟ್ಕೊಳ್ಳಿ.. ಮುಂದೆ ಸಿಗೋಣ ಸರ್..' ಅಂತ ಹೇಳಿ ಆ ಪೋಲಿಸ್ ಗೊಂದು ಸಿಗರೆಟ್ ಕೊಟ್ಟು ಬೈಕ್ ಏರಿ ಹೊರಟೇಬಿಟ್ಟ.!!
ಮತ್ತೊಂದು ದಿನ ಟ್ರಾಫಿಕ್ ಪೋಲಿಸ್ ಮಹಾಶಯ ಯಾವುದೋ ಟಿ.ವಿ.ಎಸ್ ಹಿಡಿದು ನಿಲ್ಲಿಸಿದ್ದ.. ಆ ಟಿ.ವಿ.ಎಸ್. ಮಾಲೀಕ ತನ್ನ ೫-೬ ವರ್ಷದ ಮಗನನ್ನು,ಹೆಂಡತಿಯ ಜೊತೆ ಆಸ್ಪತ್ರೆಗೆ ಕರೆದುಕೊಂಡು ಹೋಗ್ತಿದ್ದ.. ಅವನು ರಸ್ತೆ 'ಒನ್ ವೇ' ಆಗಿರೋದ್ನ ತಿಳಿಯದೆ ಬೈಕನ್ನು ಆರಸ್ತೆಯಲ್ಲಿ ಓಡಿಸಲು ಮುಂದಾಗಿದ್ದ ಅಷ್ಟೇ! ಅಷ್ಟಕ್ಕೇ ಹಿಡಿದು ಏನೇನೋ ಕೇಳಿ ಪಾಪ ಗಾಡಿನ ನಿಲ್ಲಿಸಿಕೊಂಡಿದ್ದ ಆ ಪೋಲಿಸ್. ಆ ಟಿ.ವಿ.ಎಸ್. ಗಾಡಿಯವನನ್ನು ನೋಡ್ತಾ ಇದ್ರೆ ಅವನೊಬ್ಬ ಏನೂ ಅರಿಯದ ಪಕ್ಕ ಹಳ್ಳಿಗುಗ್ಗು ತರಹ ಕಾಣುತ್ತಿದ್ದ. ಅವನ,ಅವನ ಫ್ಯಾಮಿಲಿಯ ವೇಷ-ಭೂಷಣ ನೋಡಿದ್ರೆ ಗೊತ್ತಾಗುತ್ತೆ ಅವನು ಕಡುಬಡವ ಅಂತ.ಅವನ ಹೆಂಡತಿ 'ಅದೇನೋ ನಂಗ್ ಗೊತ್ತಗಕ್ಕಿಲ್ಲ ಕಣಪ್ಪ.. ತಪ್ಪಾಯ್ತು ಬುಟ್ಬುಡಪ್ಪ.. ಆಸ್ಪತ್ರೆಗೆ ಹೋಗ್ಬೇಕು..' ಎಂದು ಎಷ್ಟು ಅಂಗಲಾಚಿದರೂ ಪ್ರಯೋಜನ ಆಗುತ್ತಿಲ್ಲ.
ಈ ಪ್ರಸಂಗಗಳನ್ನು ನೋಡಿ ಏನಂತೀರ..?
2.ಅದೊಂದು ಕಾಲೇಜು.. ಎಲ್ಲ ಕಾಲೇಜುಗಳಂತೆ ಅಲ್ಲೂ ಮೊಬೈಲ್ ಫೋನುಗಳ ನಿಷೇಧವಿದ್ದರೂ ಸೈಲೆಂಟ್ ಮೋಡ್ ನಲ್ಲಿ ಎಷ್ಟೋ ಮೊಬೈಲ್ ಫೋನುಗಳಿದ್ದವು..
ಈಗಿನ ಕೆಲವು ಹುಡುಗರು ಹುಡುಗಿಯರನ್ನು ಆಕರ್ಷಣೆ ಮಾಡೋದಕ್ಕೆ ಸ್ವಲ್ಪ ಜಾಸ್ತಿ ಸೌಂಡ್ ಬಾರೋ ಮೊಬೈಲ್ ಫೋನುಗಳನ್ನು ತಕೊಂಡು ಜೋರಾಗಿ ಹಾಡು ಹಾಕ್ತಾರೆ..
ಹಾಗೆಯೇ ಒಂದು ದಿನ ಬೆಳ್ಳಂಬೆಳಿಗ್ಗೆನೆ ೯ ಕ್ಕೆ ಕಾಲೇಜಿಗೆ ಬಂದ ಹುಡುಗನೊಬ್ಬ ಪಾಪ ಪೇಪರ್ ರೀಡಿಂಗ್ ಮಾಡೋಕೆ ಆ ಕಾಲೇಜ್ ನಲ್ಲಿ ಪೇಪರ್ ರೂಂ ನೆ ತೆಗೆಯೋದು ತುಂಬಾ ಅಪರೂಪ ಆದ್ದರಿಂದ ಒಂದು ಹುಡುಗ ಜೋರಾಗಿ ಹಾಡು ಹಾಕಿ ಕೂತಿದ್ದಾನೆ.. ಹಿಂದಿನಿಂದ ಒಬ್ಬ ಉಪನ್ಯಾಸಕರು ಬರುತ್ತಿರೋದ್ನ ಗಮನಿಸಿಲ್ಲ.. ಆ ಉಪನ್ಯಾಸಕರು ಬಂದವರೇ ಅವನಿಂದ ಮೊಬೈಲ್ ಕಸಿದುಕೊಂಡು ಹೊರಟೆಬಿಟ್ರು.. ಆ ಹುಡ್ಗ ಎಷ್ಟು ಬೇಡಿದರೂ ಉಪಯೋಗ ಆಗ್ಲಿಲ್ಲ..
ಅದೆ ಕಾಲೇಜಿನಲ್ಲಿ ಒಂದು ದಿನ ಭೌತಶಾಸ್ತ್ರ ಪ್ರಯೋಗಾಲಯದಲ್ಲಿ ವಿದ್ಯಾರ್ಥಿಗಳೆಲ್ಲ ಗುಂಪುಗುಂಪಾಗಿ ತಮ್ಮ ತಮ್ಮ ಎಕ್ಷ್ ಪರಿಮೆಂಟ್(ಪ್ರಯೋಗ) ಮಾಡ್ತಿದಾರೆ.. ಅಲ್ಲೇ ಇಬ್ಬರು ಉಪನ್ಯಾಸಕರು ಮಾತುಕತೆ ನಡೆಸುತ್ತಿದ್ದಾರೆ..ಒಂದು 'ಸುಂದರ' ಹುಡುಗಿಯ ಜನರಲ್ ಮೋಡ್ ನಲ್ಲೆ ಮೊಬೈಲ್ ಫೋನ್ 'ಹುಡುಗರು ಬೇಕು..' ಎಂದು ಹಾಡುತ್ತ ರಿಂಗಣಿಸಿತು.. ಆಕೆ ತಕ್ಷಣ ರಿಸೀವ್ ಮಾಡಿ ಮಾತನಾಡೋಕೆ ಶುರುಮಾಡಿದಳು.. ಪಾಪ ಆ ಎಕ್ಷ್ಪರಿಮೆಂಟ್ ಮಾಡ್ತಿದ್ದವರಿಂದ ಸ್ವಲ್ಪ ಡಿಸ್ಟರ್ಬ್ ಆಗಿರಬೇಕು.. ಫೋನು ಎತ್ತುಕೊಂಡು ಸೈಡಿಗೆ ಹೋಗಿ ಮೂಲೆಯಲ್ಲಿ ನಿಂತ್ಕೊಂಡು ಗೋಡೆಗೆ ಮುಖ ಮಾಡಿ ನಗು ನಗುತ್ತ ಮಾತನಾಡೋಕೆ ಶುರುಮಾಡಿದಳು..
ಒಂದೈದು ನಿಮಿಷದ ನಂತರ ಉಪನ್ಯಾಸಕರೊಬ್ಬರು ಅಲ್ಲೇ ಇದ್ದ ಒಂದು ಗುಂಪಿಗೆ ಪ್ರಯೋಗದ ಬಗ್ಗೆ ಸ್ವಲ್ಪ ವಿವರಣೆ ನೀಡಿ ಅಲ್ಲೇ ಅಡ್ಡಾಡುತ್ತಿದ್ದಾರೆ.. ಅವರಿಗೆ ಆ 'ಮಾತೆ' ಕಾಣಿಸುತ್ತಿದ್ದಾಳೆ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.. ಸುಮಾರು ೨೦ ನಿಮಿಷ ಮಾತಾಡಿ ಸುಸ್ತಾದ ಆ ಮಾತೆ ಪ್ರಯೋಗ ಮಾಡ್ತಿದ್ದ ಅವರ ಗುಂಪಿನೊಡನೆ ಬೆರೆತುಕೊಂಡಳು..
ಇದರ ಬಗ್ಗೆ ಏನು ಹೇಳಬಹುದು..?
3.ಒಂದು ತಾಲೋಕ್ ಆಫೀಸ್..ಬೆಳಿಗ್ಗೆ ೧೦ ಗಂಟೆ, ಇನ್ ಕಂ ಸರ್ಟಿಫಿಕೇಟ್ ಪಡೆಯಲು ಜನರೆಲ್ಲಾ ಸಾಲಾಗಿ ಕಿಟಕಿ ಬಾಗಿಲ ಬಳಿ ನಿಂತಿದ್ದಾರೆ..
ಒಬ್ಬಾತ ಬಂದ., ಸಾಲು ನೋಡಿ ನೇರವಾಗಿ ಆಫೀಸ್ ಒಳಗೆ ಹೋದವನೇ ೧೫ ರೂಪಾಯಿ ಕೊಟ್ಟು ಪಡೆಯಬೇಕಿದ್ದ ಸರ್ಟಿಫಿಕೇಟ್ಗೆ ೧೫೦ ಕೊಟ್ಟ. ತಕ್ಷಣ ಕ್ರಿಯಾಶೀಲನಾದ ಸರ್ಟಿಫಿಕೇಟ್ ವಿತರಕ ಎಲ್ಲೆಲ್ಲೋ ತಡಕಾಡಿದ.. ಆದರೆ ಆವ್ಯಕ್ತಿ ಇದಕ್ಕೆ ಮೊದಲು ಅಪ್ಲೈ ಮಾಡೇ ಇರ್ಲಿಲ್ಲ.. ಆದರಾಗಲೀ ಎಂದು ಅವರನ್ನು ಕುಳ್ಳಿರಿಸಿ ೧೦ ನಿಮಿಷದಲ್ಲಿ ರೆಡಿ ಮಾಡಿ ಸರ್ಟಿಫಿಕೇಟ್ ಕೊಟ್ಟುಕಳುಹಿಸಿದ.. ಅಷ್ಟೊತ್ತಿಗೆ ೧ ಗಂಟೆ ಆಯ್ತು.. ಕಿಟಕಿ ಬಾಗಿಲು ಮುಚ್ಚಿ ನಡೆದ ವಿತರಕ ಮತ್ತೆ ಬಾಗಿಲು ತೆರೆದಿದ್ದು ನಾಲ್ಕು ಘಂಟೆಗೆ.. ಈ ಮೂರು ಘಂಟೆ ಅವನಿಗಿದ್ದುದು ಊಟ ಮಾಡೋ ಕೆಲಸ..ಹದಿನೈದು ದಿನದ ಹಿಂದೆಯೇ ಅಪ್ಲೈ ಮಾಡಿ ಕಾದು ಕೂತಿದ್ದ ಜನರಲ್ಲಿ ಕೆಲವರು ಸಾಲು ಬಿಟ್ಟು ಹೊರಟುಹೋಗಿದ್ದರು.. ಅವರಿಗೂ ಹೊಟ್ಟೆ ಇದೆಯೆಂದು ನನ್ನ ಅನಿಸಿಕೆ.
ಇದರ ಬಗ್ಗೆ ನಿಮ್ಮ ಅಭಿಪ್ರಾಯ?
ಏನಾದರೂ ಹೊಸದಾಗಿ ಹೇಳಿದ್ನ..?
)()()()()()()()()()()()()()()()()()(


~.~

ಯೌವ್ವನದ ನಾಕ..!

[ಯೌವ್ವನ ನರಕವಾಗುವ ಪರಿಯನ್ನು ನನಗೆ ತಿಳಿದಷ್ಟು ಶಬ್ಧಗಳಲ್ಲಿ ಹಿಡಿದಿಡಲು ಪ್ರಯತ್ನಿಸಿದ್ದೇನೆ...]


ಕತ್ತಲೆಮನೆಯಾಗಿದೆ ಯೌವ್ವನದ ನಾಕ
ಆಸೆಪತಂಗಕಿದು ಬೆಲ್ಲದ ಬಿಸಿಪಾಕ..
ಮನಸು ಅಂದು ತಿಳಿ ತಿಳಿ ಹಾಲು
ಯೌವ್ವನದ ಹನಿ ಆ ಹಾಲಿಗಿಳಿಯಲು
ಆಸೆ ತರಂಗಗಳು ಹೊಮ್ಮುತಿರಲು
ಕಾಡಿವೆ ಅರಿಷಡ್ವರ್ಗಗಳ ಕವಲು..
ಏಕಾಂತವ ಪದೆಪದೆ ಬಯಸಲು
ತನುಮನಕೀಗ ಏಕಾಂತವೆ ಸ್ವರ್ಗವು..
ಕಾಡುತಿರಲು ವಿರಹವು
ಮೂಡುತಿರಲು ಸಿಹಿನೋವು
ಜೇನು ತುಂಬಿದ ಕುಸುಮಗಳ
ಕೆರಳಿಸಿ ಅರಳಿಸುವ ಆಸೆ..
ಆಸೆಪತಂಗಕೆ ಸಿಹಿಪಾಕಕಾದರೂ
ಅಂಟಿ ಕ್ಷಣಿಕ ಸುಖಿಯಾಗುವ ಆಸೆ
ಸುಡುವ ಬಿಸಿಜ್ವಾಲೆಯನೆ ಬಳಸಿ
ತಂಪುಗಾಳಿಯ ಬಿಸಿಯುಸಿರಾಗಿಸುವ ಆಸೆ..
ಸಾಗುತಿರಲು ಕಾಲಬ್ರಹ್ಮನು
ನೂಕುತಿರಲು ಜೀವನಚಕ್ರ
ನನ್ನ ಜೀವನದ ಹಾದಿಗಳು
ಮುಂದೆ ಹೆಜ್ಜೆ ಇಟ್ಟು ಸವೆಸಲಾಗಿ
ಕುಸಿದುಹೋಗಿ ಮರೆಯಾಗುತಿವೆ
ಮತ್ತೊಮ್ಮೆ ತಲುಪಲಾಗದಂತೆ ತಿರುಗಿ..
ನಾಗಾಲೋಟದಲ್ಲಿ ಓಡುತಿರುವ
ಹುಚ್ಚುಕುದುರೆಗಳ
ಮನೋರಥವ ನಿಯಂತ್ರಿಸಲು
ಸಾರಥಿಯಾಗಬೇಕಿದೆ ನಾ..
ಮದವೇರಿ ಮೈಮರೆಯದೆ..
ಮನಸಿನಮನೆಗೆ ತಂಗಲು ಬರುವ
ಮೋಹಕಮಾಯೆಗಳ
ಮುಚ್ಚಿ ಬಾಗಿಲ ಹಿಂದೆ ನಿಂತು
ಹೋಗೆನ್ನಬೇಕಿದೆ ನಾ..
ಎದೆಹಾಸಿ ಸ್ವಾಗತಿಸದೆ..
.~~-~~.~~-~~.~~-

~.~-~

ಜೈ ಗಣೇಶ..

[ಈ ವರ್ಷ ನಮ್ಮೂರಿನಲ್ಲಿ ನಡೆದ ಗಣೇಶೋತ್ಸವ ಕುರಿತು ಈ ಲೇಖನ.. ]ನೋಡಿ ನೋಡಿ ಐಸ
ಗಣಪನ್ ನೋಡಿ ಐಸ
ಅವನ್ ಕಿರೀಟ ನೋಡಿ ಐಸ
ಅವನ್ ತಲೆ ನೋಡಿ ಐಸ
ಅವನ್ ಹಣೆ ನೋಡಿ ಐಸ
ಅವನ್ ಹುಬ್ಬು ನೋಡಿ ಐಸ
ಅವನ್ ಕಣ್ಣು ನೋಡಿ ಐಸ
ಅವನ್ ಕಿವಿ ನೋಡಿ ಐಸ
ಅವನ್ ಸೊಂಡ್ಳು ನೋಡಿ ಐಸ
ಅವನ್ ದಂತ ನೋಡಿ ಐಸ
ಅವನ್ ಸರ ನೋಡಿ ಐಸ
ಅವನ್ ಹೊಟ್ಟೆ ನೋಡಿ ಐಸ
ಅವನ್ ಹಾವ್ ನೋಡಿ ಐಸ
ಅವನ್ ಕೈ ನೋಡಿ ಐಸ
ಅವನ್ ಕಾಲು ನೋಡಿ ಐಸ
ಅವನ್ ಇಲಿ ನೋಡಿ ಐಸ

ಗೌರಮ್ಮನ್ ನೋಡಿ ಐಸ
ಅವಳ್ ಹೂ ನೋಡಿ ಐಸ
ಅವಳ್ ಕಣ್ ನೋಡಿ ಐಸ
ಅವಳ್ ಮುಖ ನೋಡಿ ಐಸ
ಅವಳ್ ಮೂಗ್ಬೆಟ್ ನೋಡಿ ಐಸ
ಅವಳ್ ವಾಲೆ ನೋಡಿ ಐಸ
ಅವಳ್ ಜುಮಕಿ ನೋಡಿ ಐಸ
ಅವಳ್ ಸರ ನೋಡಿ ಐಸ

ಹೀಗೆ ಘೋಷಣೆಗಳು ಮೊಳಗುತ್ತಲೇ ಇದ್ದವು..

ನಮ್ಮ "ಎಲೆಚಾಕನಹಳ್ಳಿ ಶ್ರೀ ಪಟ್ಟಲದಮ್ಮ ಗೆಳೆಯರ ಬಳಗ"ದ ಯುವಕರ ಗಣಪತಿ ಹಬ್ಬ ಉತ್ಸಾಹ ನೋಡ್ಬೇಕು..
ಸ್ವಲ್ಪ ಹೆಚ್ಚೇ ಎನ್ನುವಷ್ಟು ಪುಂಡಾಟಿಕೆಗಳಿಗೆ ಹೆಸ್ರಾದ ಈ ನಮ್ ಯುವಕರ ಬಳಗ ಪ್ರತಿ ವರ್ಷ ಗಣಪನನ್ನು ಕೂರಿಸಿ ಆಚರಣೆ ಮಾಡುವುದನ್ನು ಹಲವಾರು ವರ್ಷಗಳಿಂದ ನಡೆಸಿಕೊಂಡು ಬರುತ್ತಿದೆ..
ಈ ವರ್ಷ ಗಣೇಶನ ಹಬ್ಬದ ರಂಗೇ ಈ ಬಳಗದಲ್ಲಿ ಇರಲಿಲ್ಲ.. ಗಣೇಶನನ್ನು ಕೂರಿಸುವ ಯೋಚ್ನೆ ಯಾರೂ ಮಾಡಿರ್ಲಿಲ್ಲ..
ಹಬ್ಬಕ್ಕೆ ಇನ್ನೆರಡು ದಿನ ಇರುವಾಗ ಯಾರೋ ಒಬ್ಬ ಈ ವಿಷಯ ಪ್ರಸ್ತಾಪ ಮಾಡಿದಾಗ ಎಲ್ಲರೂ ಕೂರಿಸುವುದಾಗಿ ನಿರ್ಧರಿಸಿ ಸುಮಾರು ೩೦ ಜನರ ಪಟ್ಟಿ ಹಾಕಿ ತಲಾ ೩೦೦ ರೂಪಾಯಿ ನಿಗದಿ ಮಾಡಲಾಗಿತ್ತು.. ಅಂತೆಯೇ ಮಾರನೆಯ ದಿನ ತೆಂಗಿನಗರಿಗಳನ್ನು ಹೆಣೆದು ಚಪ್ಪರಕ್ಕೆ ಕೆಲವರು ಸಿದ್ದತೆ ಮಾಡಿಕೊಂಡರು ಅಷ್ಟೇ.. ಮತ್ತೆ ಆ ವಿಚಾರವೇ ಇಲ್ಲ.. ಎಲ್ಲ ತಣ್ಣಗಾಯಿತು.. ಹಬ್ಬಕ್ಕೆ ಇನ್ನೊಂದು ದಿನ ಬಾಕಿ ಉಳಿದಿದ್ದರೂ ೧೦೦೦ ರೂಪಾಯಿ ಕೂಡ ಸಂಗ್ರಹ ಆಗಿರಲಿಲ್ಲ.. ಹೆಣೆದ ಗರಿಗಳನ್ನು ಬಿಟ್ಟರೆ ಏನೂ ರೆಡಿ ಆಗಿರಲಿಲ್ಲ.. ಒಬ್ಬ ಹುಡುಗನೂ ಪತ್ತೆ ಇಲ್ಲ..
ರಾತ್ರಿ ಆಯ್ತು.."ಈ ಐಕ್ಳು ಗಣಪತಿ ಕುಂಡ್ರಿಸವ.. ಅದಾಗು ಮಾತ..?" ಎಂಬ ಮಾತುಗಳನ್ನು ಕೇರಿ ಜನರೆಲ್ಲಾ ಮಾತಾಡಿಕೊಳ್ಳುತ್ತಿದ್ದರು.. ಊರಿನ ಬೇರೆ ಕಡೆಯೆಲ್ಲ ಗಣಪತಿ ಮಂಟಪ ರೆಡಿ ಮಾಡಿ ತಂದ್ ಕೂರ್ಸೋದ್ ಒಂದ್ ಬಾಕಿ ಇತ್ತು.. ಆದ್ರೆ ಇಲ್ಲಿ ಇನ್ನು ಏನು ಆಗೇ ಇಲ್ಲ.. ಕುಂಡ್ರಿಸ್ತಿವಿ ಅಂತ ಗ್ಯಾರಂಟಿನೂ ಇಲ್ಲ.

ರಾತ್ರಿ ಒಂಬತ್ತು ಗಂಟೆ ಆದಂತೆ ಎಲ್ಲೋ ಒಬ್ಬೊಬ್ಬರು ಹುಡುಗರು ಅಡ್ಡಕ್ಕೆ ಬರತೊಡಗಿದರು.. ಅಲ್ಲಿ ಇಲ್ಲ ನೀಲಗಿರಿ ಗಳ ಹಂಬ್ರಿಸಿ ತಂದ್ರು.. ಹುಡುಗರು ಬರಬರುತ್ತ ಹೆಚ್ಚಾದ್ರು.. ಗರಿ,ತಾಟು,ಗಳ,ಎಲ್ಲಾನು ಹಂಬ್ರಿಸ್ಕಂಡು ತರೋ ಹೊತ್ಗೆ ರಾತ್ರಿ ಹತ್ ಘಂಟೆ ಆಗಿ ಊರ್ ಜನ್ವೆಲ್ಲ ಮಲಗಿದ್ರು.. ಎಲ್ರೂ ಒಂದೊಂದ್ ಕೆಲ್ಸ ಕೈಗೆತ್ಕೊಂಡು ಮಂಟಪ ರೆಡಿ ಮಾಡೋಕೆ ಶುರು ಮಾಡಿದ್ವು.. ಕೆಲವ್ರು ಆಗ್ಲೇ ತತ್ ಆಗಿದ್ರಿಂದ ಅವ್ರ್ ಗಲಾಟೆಗೆ ಬೀದಿನಾಯಿಗಳು ಅರ್ಚ್ತಾ ಇದ್ವು..

ಚಪ್ರ ಹಾಕೋಕೆ ಎನ್ಬೇಕೋ ಅದ್ನ ಕದ್ದಾದ್ರು ಸರಿ ಅಲ್ಲಿ ಇಲ್ಲಿ ಹೊಂಚಾಕೊಂಡ್ ಬಂದು ರಾತ್ರಿ ೨ ಗಂಟೆ ಹೊತ್ಗೆ ಚಪ್ರ ಫುಲ್ ರೆಡಿ ಮಾಡಿ ಎಲ್ರು ನಾಳೆ ದುಡ್ ಕೊಟ್ಬಿಡಿ ಅಂತ ಹೇಳಿ ನಾಳೆ ಆಗ್ಬೇಕಾದ ಕೆಲ್ಸ ತಿಳ್ಸಿ ಮನೆಗ್ಹೋಗಿ ಮಲ್ಕೊಂಡೊ.
ಬೆಳಿಗ್ಗೆ ಎದ್ ನೋಡಿದ ಜನ್ವೆಲ್ಲ "ಅಲಾಲೆ ಅದ್ಯಾವಾಗ್ ಚಪ್ರ ಹಾಕುದ್ರು.." ಅಂತ ಆಶ್ಚರ್ಯ ಪಡೊಹಂಗೆ ರಾತ್ರೋ ರಾತ್ರಿ ಚಪ್ರ ರೆಡಿ ಮಾಡಿದ್ದೋ. ಹಬ್ಬದ ದಿನ ಆದ್ರೂ ಇನ್ನು ಪೂರ್ತಿ ದುಡ್ ಬಂದಿಲ್ಲ..
ಸಾಯಂಕಾಲ ೩ ಗಂಟೆಗಂಟ ಬಾಳೆಕಂಬ,ಕಬ್ಬುನ್ ಗರಿ, ಮಾವುನ್ ಸೊಪ್ಪು.. ಎಲ್ಲಾನು ತಂದ್ ಚಪ್ರದ ಕೆಲ್ಸ ಫುಲ್ ಮಾಡಿದ್ವಿ.ಮಂಡ್ಯದಿಂದ ಒಬ್ಬ " ಬೇಗ್ ಬರ್ರುಲಾ.. ಈ ವರ್ಷ ಗಣಪತಿ ಕಡ್ಮೆ ಅವೆ.. ಬೇಗ್ ಬರ್ದಿದ್ರೆ ಚೆನಾಗಿರೋದ್ ಸಿಗುಕಿಲ್ಲ.. ತೀರೋಗುಕ್ ಮುಂಚಿಯೇ ಬೇಗ ಬನ್ರುಲ.." ಅಂತ ಫೋನ್ ಹಾಕಿದ್ದ..

ನಾವುನು ಗಣಪತಿ ತರೋಕ್ ಆಗೋವಷ್ಟು ದುಡ್ ಕಿತ್ಕಂದು ಮಂಡಿಕ್ ಹೋಗಿ ಗಣಪತಿ ಕಡ್ಮೆ ಇದ್ದುದ್ರಿಂದ ಯಾವ್ದೋ ಒಂದ್ ಗಣಪತಿನ ತಂದೆಬಿಟ್ವಿ..

ಗಣಪತಿ ಚಪ್ರುತಕ್ಕೆ ಮೈಕು,ಪೆಂಡಾಲ್.. ಅದು ಇದು ಅಂತ ತರೋಹೊತ್ಗೆ ೭ ಗಂಟೆ ಆಗೇ ಹೋಯ್ತು..
ಇದ್ದ ಒಂದೈದಾರ್ ಆಳ್ಗೊಳೆ ಸೇರ್ಕೊಂಡು ಹೆಂಗೋ ಅತಗೆ ಗಣಪತಿನ ಕೂರ್ಸಿ ಜೈ ಅಂದೇ ಬಿಟ್ವಿ.. ಮೈಕ್ಸೆಟ್ ಸರ್ಯಾಗ್ ವರ್ಕ್ ಆಗದೆ ಇದ್ದುದ್ಕೆ ಯಾರ್ ಮನೆಲೋ ಅತಗೆ ಹೋಂ ತಿಯೇಟ್ರು ತಂದು ಹಾಕ್ದೊ.

ಇನ್ಮೇಲೆ ಇರುದು ಕೆಲ್ಸ..
ದಿನ ಪೂಜೆ ಮಾಡ್ಸುದು,ಗಣಪತಿ ಕಾಯ್ಕೊಳುದು,ಬುಡು ದಿನ ಜೋರಾಗ್ ಮಾಡುದು.. ಹೀಗೆ ಬೇಜಾನ್ ಕೆಲ್ಸ ಐಕ್ಳು ತಲೆ ಮ್ಯಾಲಿತ್ತು.. ಇನ್ನು ಸುಮಾರ್ ಜನ್ರು ದುಡ್ನೆ ಕೊಟ್ಟಿರ್ಲಿಲ್ಲ.. ರಾಜಧಾನಿಗೆ ಹೋಗಿ ಸೇರ್ಕಂಡಿದ್ದ ಸ್ವಲ್ಪ್ ಹುಡುಗ್ರು ಪತ್ತೇನೆ ಇರ್ಲಿಲ್ಲ.. ಹೇಗೋ ಮಾಡಿ ಒಂಬತ್ ದಿನುಕೆ ಬುಟ್ ಬುಡುದು ಅಂತ ನಿರ್ಧಾರ ಮಾಡಿದ್ವಿ.. ಭಾನ್ವಾರ ಸಿಗೋದ್ರಿಂದ ಬೆಂಗಳೂರ್ ಹುಡುಗ್ರು ಬತ್ತಾರೆ ಅಂತ ನಮ್ ಲೆಕ್ಕಾಚಾರ.
ಗಣಪತಿ ಹತ್ರ ನೋಡ್ಕೋಕೆ ಯಾರೋ ಪತ್ತೇನೆ ಇರ್ತಿರ್ಲಿಲ್ಲ,ರಾತ್ರೆ ೭ ಗಂಟೆಗೆ ಪೂಜೆಗೆ ಸರ್ಯಾಗಿ ಬಂದ್ಬುಡುರು.. ಪ್ರಸಾದಕ್ಕೆ.,
ಎಲ್ರೂ ಅದು ಇದು ತಿಂದು ಸ್ನಾನ ಮಾಡ್ದೆ ಇರ್ತುದ್ರಿಂದ ಪೂಜೆ ಮಾಡುಕೆ ಯಾರ್ನದ್ರು ಹುಡ್ಕಿ ಕರಿಬೇಕಿತ್ತು.. ಹೇಗೋ ಒಂಬತ್ ದಿನ ಆಯ್ತಾ ಬತ್ತು,ಗಣಪತಿ ಕುಂಡ್ರಿಸ್ರುಲ ನೋಡ್ಕಮ ಅಂತ ಹೇಳಿದ್ದೊರ್ ಯಾರೂ ಪತ್ತೇನೆ ಇಲ್ಲ.. ಇನ್ನು ಬರ್ಬೇಕಾದ್ ದುಡ್ಡು ಸರ್ಯಾಗ್ ಬಂದಿಲ್ಲ..
ಕಳೆದ ಭಾನ್ವಾರ ಬುಡುಕೆ ಎಲ್ಲ ರೆಡಿ ಮಾಡ್ದೊ,ಊರಲಿ ಕೆಲವ್ರು ದೊಡ್ಡೋರ್ ಹತ್ರ ಒಂದ್ಅಷ್ಟ್ ದುಡ್ ಈಸ್ಕಂಡು ಪುಳಿಹೊಗ್ರೆ,ಬುಗ್ರಿಕಾಳು,ಪಂಚಾಮೃತ ಮಾಡ್ಸುಕೆ ಹೇಳಿದ್ದೊ.
ಈ ಸಲ ಸೌಂಡ್ ಸಿಸ್ಟಂ ತಂದು ಜೋರಾಗಿ ಮಾಡ್ಮ ಅಂತ ಅಂದ್ಕೊಂಡಿದ್ದೊ.. ದುಡ್ಡ್ ಹೇಗೋ ರೆಡಿ ಮಾಡ್ದೊ,ಆದ್ರೆ ಡಕ್ ಗಳು ಸಿಗಲೇ ಇಲ್ಲ.. ಹೇಗೋ ಸ್ವಲ್ಪ್ ಜನ ಸೇರ್ಕಂಡು ಅಡ್ಗೆಗೆ ರೆಡಿ ಮಾಡ್ ಕೊಟ್ವಿ.. ಅಡ್ಗೆ ಮಾಡೋಕೆ ಒಂದಿಬ್ರು ದೊಡ್ದೊರ್ಗೆ ಎಣ್ಣೆ ಹಾಕ್ಸಿ ಬಿಟ್ಟಿದ್ವಿ.. ಎಣ್ಣೆ ಪಾರ್ಟಿ ಅದೆ ಬನ್ರುಲ ಅಂದಿದ್ರೆ ಸಾಕು ತಕ್ಷಣವೇ ಬತ್ತಿದ್ದ ಬೆಂಗಳೂರ್ ನಲ್ಲಿದ್ದ ನಮ್ಮೂರ ಹುಡುಗ್ರು ಗಣಪತಿ ಹಬ್ಬಕ್ಕೆ ಬನ್ರಿ ಅಂದಿದ್ರೆ ಕಾಸಿಲ್ಲ ಬರುಕಿಲ್ಲ ಅಂದಿದ್ರು.. ಆಮೇಲೆ ಬೋದ್ ಹೇಳಿದ್ಮೇಲೆ ಬತ್ತಿವಿ ಅಂತ ಹೇಳಿದ್ರು.. ಇವತ್ ಹೆಂಗರ ಮಾಡಿ ಡಕ್ ತತ್ತಿವಿ ಅಂತ ಹೋಗಿದ್ದೊರು ರಾತ್ರಿ ಆಯ್ತಾ ಬತ್ತಿದ್ರು ಪತ್ತನೆ ಇಲ್ಲ.. ಸಾಯಂಕಾಲ ಆಯ್ತಿದ್ದಂಗೆ ಜನಾನೋ ಜನ.. ಸುತ್ತ ಹಸಿರು.. ಗಣಪತಿಗೆ ಪೂಜೆ ಮಾಡಿ ಟ್ರಾಕ್ಟರ್ ಗೆ ಕುಂಡ್ರಿಸಿ ಡಕ್ ತರುಕ್ ಹೋಗಿದ್ದೊರ್ನ ಕಾಯ್ತಾ ಕೂತಿದ್ವಿ.. ಅಷ್ಟೊತ್ಗೆ ಆಲೆ ಬಣ್ಣ ಏರ್ಚ್ಕಂಡು ಹುಡುಗ್ರೆಲ್ಲ ಗುರ್ತೆ ಹಿಡಿಕಾಗ್ದಂಗೆ ಆಗಿದ್ರು.. ತಮಟೆಗಳು ಅದಾಗಲೇ ಬಂದಿದ್ದೋ.. ಬೆಂಗಳೂರ್ ಹುಡುಗ್ರು ಅಷ್ಟೊತ್ಗೆ ಸಾವ್ರಾರುಪಾಯಿ ಕೊಟ್ಟು ಪಟಾಕಿ ತಕಂದು ಬಂದ್ರು.. ಪಟಾಕಿನು ಸಿಡ್ಸಿ ಪೂಜೆ ಮಾಡಿ ಎಲ್ರುಗೂ ಪ್ರಸಾದ ಕೊಟ್ಟು ರೆಡಿಯಾಗ್ ಕುತ್ಕಂಡೊ..ಯಾಕೋ ಡಕ್ ತರುಕ್ಹೊದೊರು ಇವತ್ ಬರಿಕಿಲ್ಲ ಅನ್ನಿಸ್ತು.. ರಾತ್ರೆ ಆಯ್ತಾ ಲೇಟ್ ಆಗ್ತಿತ್ತು..
ಸರಿ ಅವ್ರ್ ಬರುದಾದ್ರೆ ಆಮೇಲ್ ಬರ್ಲಿ ಅನ್ಕಂಡು ಹೊರಡೋಕೆ ಶುರು ಮಾಡ್ದೊ.. ಎಲ್ಲ ಹುಡುಗ್ರು ಕೈಲಿ-ಮೈಲಿ ಬಣ್ಣ.. ಪಟಾಕಿಗಳು.. ತಮಟೆ-ಕುಣಿತ.. ಸೂಪರ್ರಾಗಿತ್ತು..
ಇದೆ ಫಸ್ಟ್ ಟೈಮ್ ನಾನೂ ಈ ಸಂಭ್ರಮದಲ್ಲಿ ಭಾಗವಹಿಸಿದ್ದೆ..
ಸ್ವಲ್ಪ ದೂರ ಹೋದಂತೆ ಕೆಲವ್ರು ಎಣ್ಣೆ ಬಿಟ್ಕಂಡು ಕುಣಿಕೆ ಟೈಟ್ ಆಗ್ಬುಟ್ರು.. ಊರಲ್ಲಿ ಅರ್ಧ ಮೆರವಣಿಗೆ ಬತ್ತಿದ್ದಂಗೆ ಡಕ್ ಸಿಗ್ಲಿಲ್ಲ ಅನ್ಕಂಡು ಅವರು ವಾಪಸ್ ಬಂದು ಕುಣಿಕೆ ಸೇರ್ಕಂಡರು.. ಊರಿಗೆ ನಮ್ದೆ ದೊಡ್ ಗಣಪತಿ ಆದ್ದ್ರಿಂದ ಜೋರು ಸ್ವಲ್ಪ್ ಜಾಸ್ತಿನೆ ಇತ್ತು..ನಮ ಕೇರಿ ಹುಡುಗ್ರು ಅನ್ಮೇಲೆ ಊರ್ಗೆಲ್ಲ ಗೊತ್ತಿತ್ತು ಹೇಗೆ ಅಂತ.
ಕೆಲವು ಕಡೆ ಪಟಾಕಿ ಹೊಡಿಬೇಡಿ ಅಂತ ಕೆಲವ್ರು ಹೇಳಿದ್ರು ಜಗ್ಳಾನೆ ಮಾಡ್ಕಂಡು ಪಟಾಕಿ ಹೊಡ್ದು ಮತ್ತೊಮ್ಮೆ ನಮ್ ಪುಂಡಾಟಿಕೆ ತೋರ್ಸೇಬಿಟ್ವಿ.. ಊರಲೆಲ್ಲ ಮೆರವಣಿಗೆ ಹಾಕಿ ಬಟ್ಟೆ ಬಿಚ್ಕಂಡು ಇಚ್ಛೆ ಬಂದಂಗೆ ಹುಚ್ರು ಅನ್ನೋ ಹಾಗೆ ಕುಣ್ಕಂದು ಎಣ್ಣೆ ಹಾಕಿದ್ ಬಾಯಲ್ಲೇ ಘೋಷಣೆ ಹಾಕಂಡು ಜೋರಾಗಿ ಪಟಾಕಿ ಹೊಡ್ಕಂದು ಅರಚಾಡ್ಕಂಡು ಸಖತ್ ಜೋರಾಗಿ ಊರಿಗೆಲ್ಲ ನಮ್ ಏರಿಯಾದ ಪವರ್ ತೋರ್ಸ್ದೋ..
ಪಕ್ಕದೂರಿನ (ವಿಶ್ವೇಶ್ವರಯ್ಯ ನಾಲೆ) ಕಾವ್ಲಿಗೆ ಬುಡ್ಬೇಕಿತ್ತು..
ನಾವು ಕುಣ್ಕಂದು ಊರ್ ಬಿಟ್ಟಾಗ ಅದಾಗ್ಲೆ ೧೦ ಗಂಟೆ,ಅಷ್ಟೊತ್ಗೆ ಕೆಲವ್ರ್ ಮುಕ ಮೂತಿ ನೋಡಕ್ ಆಗ್ದಂಗೆ ಬಣ್ಣ ಆಗಿತ್ತು.. ಮೈಮೇಲ್ ಇರಬೇಕಾದ್ ಅಂಗಿ ಸೊಂಟದಲ್ಲಿತ್ತು.. ತಮಟೆ ಸದ್ ಕೇಳ್ತಾ ಕುಣಿತಿದ್ರೆ ಪಕ್ಕ್ದೊರು ಬಂದ್ ಕುಣಿಬೇಕು ಅನ್ನೋಹಾಗಿತ್ತು.. ಒಂದ್ಅಷ್ಟ್ ಜನ ಎಣ್ಣೆ ಪಾರ್ಟಿಗಳು ಅದೆಷ್ಟ್ ಸಲ ಬಿದ್ ಒದ್ದಾಡಿದ್ರೋ..
ಟ್ರಾಕ್ಟರ್ ನಲ್ಲಿ ಗಣೇಶ,ಇನ್ನೊಂದ್ ಟಾಟ ಏಸ್ ನಲ್ಲಿ ಅರೆಬೆತ್ಲೆ ಹುಡುಗ್ರು, ಪಕ್ದೂರ್ಗೆ ಹೋದಾಗ ಆ ಊರ್ ಜನ್ವೆಲ್ಲ ಮಲಗಿ ಕತ್ಲೆ ಗುವ್ ಅಂತಿತ್ತು.. ಕಾವ್ಲಿ ಹತ್ರ ಹೋದಾಗ ೧೧ ಗಂಟೆ..
ಕಾವ್ಲಿಗೆ ಕುಡ್ದೊರ್ ನೆಗುದ್ಬುಡ್ತಾರೆ ಅಂತ ಒಬ್ಬನ್ನ ಕಾವ್ಲು ಕಾಯಿಕೆ ನಿಲ್ಲಿಸ್ದೋ.. ನೆಟ್ಟಗಿರೋ ಐದಾರ್ ಜನ ಸೇರ್ಕಂಡು ಪೂಜೆ ಮಾಡಿ ನಿಧಾನಕ್ಕೆ,ಹುಷಾರಾಗಿ ಗಣೇಶನ ಕಾವ್ಲಿಗೆ ಮುಳ್ಗಿಸಿ ಕೈಮುಗ್ದು ಮನೆಗೆ ಬಂದಾಗ ಅದಾಗ್ಲೆ ೧೨.೩೦..
ಆಗ ಎಲ್ರೂ ಊಟ ಮಾಡಿ ಎಲ್ಬೇಕೋ ಅಲ್ಲೇ ಬಿದ್ಕಂಡ್ವಿ.. ಬೆಂಗಳೂರ್ ಹುಡುಗ್ರು ಬೆಳ್ಗೆ ಡ್ಯೂಟಿಗೆ ಹೋಗ್ಬೇಕು ಅಂತೇಳಿ ಬಂದಿದ್ ಕಾರ್ನಲ್ಲೇ ಆಗ್ಲೇ ಹೊರಟ್ರು..
ಮಾರನೆ ದಿನ ಚಪ್ರನ ಎಲ್ಲಾನು ಬಿಚ್ಚಿ ಏನೇನು ವಾಪಸ್ ಮಾಡ್ಬೇಕು ಅದ್ನ ವಾಪಸ್ ಮಾಡಿ ಈ ವರ್ಷದ ಗಣೇಶನ ಹಬ್ಬನ ಮುಗಿಸಿದ್ವಿ..
ಈ ವರ್ಷದ ಕಥೆ ನೋಡಿದ್ರೆ ಮುಂದ್ಲ್ ವರ್ಷ ಕೂರಿಸ್ಬಾರ್ದು ಅಂತ ಅಂದ್ಕಂಡಿವಿ.. ನೋಡೋಣ..ಗಣೇಶ ಎಲ್ರುಗೂ ಒಳ್ಳೇದ್ ಮಾಡ್ಲಿ..

"ಜೈ ಏಕದಂತ.."


~.~

"ಆಚಾರ್ಯ ದೇವೋಭವ!!"

ನನ್ನ ಕಲಿಕಾ ಜೀವನದಲ್ಲಿ 'ಗುರು' ಎಂಬ ಪಟ್ಟವನ್ನೇರಿದ್ದವರ ಸವಿ ನೆನಪಿನಲ್ಲಿ ಮೂಡಿಬಂದ ಲೇಖನ..]" ಗುರುಬ್ರಹ್ಮ ಗುರುವಿಷ್ಣು ಗುರುಮಹೇಶ್ವರ ಗುರುಸಾಕ್ಷಾತ್ ಪರಬ್ರಹ್ಮ ತತ್ಮೈಶ್ರೀ ಗುರುವೇ ನಮಃ ": ಈ ಸಾಲುಗಳನ್ನು ನಾನೂ ಸಂಪೂರ್ಣವಾಗಿ ಅರಿತುಕೊಂಡಿಲ್ಲವೆಂದೆನಿಸುತ್ತದೆ..
'ತಾಯಿಯೇ ಮೊದಲ ಗುರು' ಎಂಬುದರ ಬಗ್ಗೆಯೂ ನಂಗೆ ಅರಿವಿಲ್ಲ.. ತಂದೆ ನನಗೆ ಗುರುವಾಗಿದ್ದು ಅಕ್ಷರಶಃ ಸತ್ಯ..
'...ಕಾಲ(ಅನುಭವ)ವೇ ನನ್ನ ಗುರು...' ಎಂದೆನಿಸುತ್ತದೆ..

ನಾನು ಮೊದಲಬಾರಿಗೆ ಶಿಶುವಿಹಾರ ಸೇರಿದಾಗ ಅಲ್ಲಿನ ಶಿಕ್ಷಕಿ ಕಂಡರೆ ಭಯವಿತ್ತು..
ನಮ್ಮೂರಿನಲ್ಲಿ ಒಂದೇ ಕಾಂಪೌಂಡಿನ ಒಳಗಡೆ ಶಿಶುವಿಹಾರ,ಪ್ರಾಥಮಿಕ ಶಾಲೆ,ಆಸ್ಪತ್ರೆ... ಎಲ್ಲವೂ ಸೇರಿದ್ದವು..
ನಾನು ಶಿಶುವಿಹಾರದಲ್ಲಿದ್ದಾಗ ಅಲ್ಲಿ ಆಗೊಮ್ಮೆ ಈಗೊಮ್ಮೆ ಕಾಣುತಿದ್ದ ಶಾಲಾ ಶಿಕ್ಷಕರನ್ನು ಕಂಡರೆ ತುಂಬಾ ಭಯ-ಭಕ್ತಿ ಇತ್ತು..
ಶಿಶುವಿಹಾರದಲ್ಲಿ ಸಣ್ಣ -ಪುಟ್ಟ ಆಟಗಳನ್ನು ಕಲಿತು ಶಾಲೆಗೇ ಸೇರಿದ್ದು ಆಯಿತು..

ನಾನು ಪ್ರಾಥಮಿಕಶಾಲೆಯಲ್ಲಿ''ಬೋರಲಿಂಗಯ್ಯ,ಎನ್.ಬೆಟ್ಟಯ್ಯ,ಲಕ್ಷ್ಮಿನಾರಾಯಣಪ್ಪ,ಪುಷ್ಪಮಂಜುಳಾಬಾಯಿ ,ಅನಂತಕುಮಾರ್,ಪ್ರೇಮ,ಅನುಸೂಯ,ಪಾರ್ವತಿ,ಎನ್.ಮಲ್ಲಿಕಾರ್ಜುನ್,ಸರಸ್ವತಿ..' ಹೀಗೆ ತುಸುದೊಡ್ಡದೇ ಎನಿಸುವ ಶಿಕ್ಷಕ/ಕಿ ವೃಂದವನ್ನು ಕಂಡಿದ್ದೇನೆ..
ಬೋರಲಿಂಗಯ್ಯ ನಾನು ಶಾಲೆ ಸೇರಿದಾಗ ನಮ್ಮ ಶಾಲೆಯ ಮುಖ್ಯಶಿಕ್ಷಕರಾಗಿದ್ದರು..,ಅವರು ನಮ್ಮೂರಿನಲ್ಲಿಯೇ ಉಳಿಯುತ್ತಿದ್ದರು ಎಂದು ನೆನಪು,ಅವರಿದ್ದಾಗ ನಮ್ಮ ಶಾಲೆಯಲ್ಲಿ ಹಲವಾರು ಕಾರ್ಯಕ್ರಮಗಳು ನಡೆಯುತ್ತಿದ್ದವು..
ಎನ್.ಬೆಟ್ಟಯ್ಯ ಅವರು ನನ್ನ ತಾಯಿಗೂ ಶಿಕ್ಷಕರಾಗಿದ್ದರಂತೆ.. ಅವರು ಬಹುಪಾಲು ನನ್ನೂರಿನ ಜನರಿಗೆಲ್ಲ ಮೆಚ್ಚಿನ ಶಿಕ್ಷಕರು..
ಬೋರಲಿಂಗಯ್ಯ ಅವರ ವರ್ಗಾವಣೆ ನಂತರ ಎನ್.ಮಲ್ಲಿಕಾರ್ಜುನ್ ಅವರು ಬಂದಿದ್ದು ಅವರು ಒಂದು ರೀತಿಯ ತುಸು ವಿಶೇಷ ವ್ಯಕ್ತಿ..
'ಅನಂತಕುಮಾರ್ ಅವರು ಕನ್ನಡ ಅಕ್ಷರಗಳನ್ನು ಮುದ್ದಾಗಿ ಬರೆಯುವುದರಲ್ಲಿ ಅವರಿಗೆ ಅವರೇ ಸಾಟಿ..'
ನಾನು ಐದನೆಯ ತರಗತಿಗೆ ಬಂದಾಗ ಎನ್.ಬೆಟ್ಟಯ್ಯ ಅವರ ವರ್ಗಾವಣೆ ಯಾಗಿತ್ತು.. ಅವರು ವರ್ಗಾವಣೆಯಾಗುವ ಹಿಂದಿನ ದಿನ ತರಗತಿಗೆ ಬಂದು ಭಾವುಕರಾಗಿ ಈ ಶಾಲೆಯ ಅವರ ಋಣದ ಬಗ್ಗೆ ಮಾತಾಡುತ್ತಿದ್ದರು.. ಅದು ಅಷ್ಟಾಗಿ ನನಗೆ ತಿಳಿಯುತ್ತಿರಲಿಲ್ಲ..ನಾನು ಆರನೆಯ ತರಗತಿಗೆ ಬಂದಾಗ ಪುಷ್ಪಮಂಜುಳಾಬಾಯಿ ಅವರ ವರ್ಗಾವಣೆಯೂ ಆಯಿತು..
ಇನ್ನು ಲಕ್ಷ್ಮಿನಾರಾಯಣಪ್ಪ ಮಾಸ್ತರರು ಎಂದರೆ ಎಲ್ಲರಿಗೂ ಭಯ.. ಅವರ ಹೊಡೆತ ತಾಳಲಾರದೆ ಕೆಲವರು ಶಾಲೆ ಬಿಟ್ಟಿದ್ದಾರೆ ಎಂಬುದು ಮತ್ತೊಂದು ವಿಚಾರ.. ಅವರು ರೂಲರ್ ಹಿಡಿದು ಆವರಣದಲ್ಲಿ ನಿಂತಾಗ ಎಲ್ಲರೂ ಬಾಯಿಮೇಲೆ ಬೆರಳಿಟ್ಟು ಸದ್ದುಗದ್ದಲವೆಲ್ಲ ಅಡಗಿ ಮೌನ ಆವರಿಸುತ್ತಿತ್ತು.. ಅವರು ವರ್ಗಾವಣೆ ಆಗಿ ಒಮ್ಮೊಮ್ಮೆ ಕಾಣಸಿಗುತ್ತಾರೆ..
ಎನ್.ಮಲ್ಲಿಕಾರ್ಜುನ್ ಅವ್ರ ವಿಷಯದಲ್ಲಿ ಎಲ್ಲರಿಗೂ ಬೇಸರ ಇತ್ತು ಎಂದೆನಿಸುತ್ತಿತ್ತು.. ಅವರ ಕಾರ್ಯವೈಖರಿ ಸರಿಯಿಲ್ಲ ಎಂದು ಅಪವಾದಿಸಿ ಅವರನ್ನು ವರ್ಗಾವಣೆ ಮಾಡಿಸಿ ಅವರ ಜಾಗಕ್ಕೆ ಹಿಂದೊಮ್ಮೆ ಇದ್ದ ಎನ್.ಬೆಟ್ಟಯ್ಯ ಅವರನ್ನೇ ತರುವುದಾಗಿ ಘೋಷಿಸಿದ್ದ ನಮ್ಮೂರ ನಾಯಕರು ಅವರ ಮಾತಿನಂತೆ ಗೆದ್ದಿದ್ದರು.. ಅವರಂತೆಯೇ ಎನ್.ಬೆಟ್ಟಯ್ಯ ಅವರು ಬಂದ ಮೇಲೆ ನಮ್ಮ ಶಾಲೆಗೇ ಹೊಸಕಳೆ ಬಂದಿತ್ತು.. ಶಾಲೆಯ ಅಭಿವೃದ್ಧಿಗಾಗಿ ಬಹಳ ಶ್ರಮಿಸುತ್ತ ಎಲ್ಲರಿಗೂ ಅಚ್ಚುಮೆಚ್ಚಾಗಿದ್ದರವರು..
ಇತ್ತೀಚಿಗೆ ಅವರಿಗೆ ಪಾರ್ಶ್ವವಾಯು ಬಡಿದು ವಿಧಿ ತನ್ನ ಕ್ರೂರತೆಯನ್ನು ಮೆರೆದಿದೆ.. ಅವರನ್ನು ಈಗಲೂ ಶಾಲೆಗೇ ಕರೆತರಲಾಗುತ್ತಿದೆ.. ಸಮಯಸಾಧಕ,ಬಿರುಸಿನ ನಡಿಗೆಯ ಆ ದಿವ್ಯಜ್ಯೋತಿ,ಕೈಯಲ್ಲಿ ಕೋಲನ್ನು ಹಿಡಿದು ಗದರಿಸಿ ಬುದ್ದಿ ಹೇಳುತ್ತಿದ್ದ ಅವರು,ಇಂದು ಊರುಗೋಲನ್ನು ನೆಲಕ್ಕೂರಿ ಒಬ್ಬನ ಸಹಾಯದಿಂದ ಕುಂಟುತ್ತ ಕೃಶದೇಹಿಗಳಾಗಿ ಶಾಲೆಯ ಆವರಣದಲ್ಲಿ ಕಂಡೊಡನೆ ಕಣ್ಣುಗಳು ತೇವವಾಗಿ ಮನ ಮರುಗುವುದೆಕೋ..

ಅವರು ಹಿಂದೊಮ್ಮೆ ಅವರ ದೂರವಾಣಿಗೆ 'ಏನಾಗಲಿ ಮುಂದೆ ಸಾಗು ನೀ' ಹಾಡನ್ನು ಹಲೋಟ್ಯೂನಾಗಿ ಹಾಕಿಸಿದ್ದುದು ನೆನಪಾಗುತ್ತದೆ.. ಅವರ ಈ ಸ್ಥಿತಿಗೆ ಎಲ್ಲರೂ ಮರುಗುತ್ತ ದೇವರಿಗೆ ಹಿಡಿಶಾಪ ಹಾಕುವುದುಂಟು..ನಾನು ಪ್ರಾಥಮಿಕ ಶಾಲೆಯಲ್ಲಿ ಜಾಣನಾಗಿದ್ದು ಒಳ್ಳೆ ಹೆಸರು ಪಡೆದಿದ್ದೆ ಎನಿಸುತ್ತದೆ..

ನಾನು ಪ್ರಾಥಮಿಕ ಶಾಲೆ ಮುಗಿಸುವಷ್ಟರಲ್ಲಿ ನಮ್ಮೂರಿನಲ್ಲಿಯೇ ಪ್ರೌಢಶಾಲೆ ಆರಂಭವಾಗಿತ್ತು.. ಪ್ರೌಢಶಾಲೆಯ ಕಟ್ಟಡ ನಿರ್ಮಾಣಕ್ಕಾಗಿ ನಾನೂ ಓದಿದ ಶಿಶುವಿಹಾರ,ನಾನು ಆಟವಾಡಿದ ಜಾರುಗುಪ್ಪೆ ಮಣ್ಣಾಗಿ.. ಈಗ ಬರೀ ನೆನಪಾಗಿವೆ.. ಆಸ್ಪತ್ರೆ ಪ್ರೌಢಶಾಲಾ ಶಿಕ್ಷಕರ ಕೊಠಡಿಯಾಯಿತು..
ಅಂತೂ-ಇಂತೂ ಪ್ರೌಢಶಾಲೆ ಸೇರಿಯೂ ಆಯಿತು..
ಪ್ರೌಢಶಾಲೆಯಲ್ಲಿ 'ಮಂಜುನಾಥ್,ಮೂರ್ತಿ,ಮಹಮ್ಮದ್ ಖುರೇಶ್,ಕುಮಾರ್,ಯೋಗಾನರಸಿಂಹ,ಪುಷ್ಪಲತ,ಸುಧಾ,ನಾಗಾರಾಜ್.. 'ಇವರೆಲ್ಲರನ್ನು ಕಂಡಿದ್ದೇನೆ..
ಪುಷ್ಪಲತ ಅವರು ನಾನು ಓದುತ್ತಿದ್ದಾಗ ಮುಖ್ಯಶಿಕ್ಷಕಿಯಾಗಿದ್ದರು.. ಈಗ ವರ್ಗಾವಣೆಯಾಗಿದ್ದರಂತೆ..
ಮಂಜುನಾಥ ಅವರು ಕನ್ನಡ ಭೋಧನೆ ಮಾಡುತ್ತಿದ್ದರು.. ಜೊತೆಗೆ ಎಲ್ಲ ಸಭೆ-ಸಮಾರಂಭದಲ್ಲಿ ವಿದ್ಯಾರ್ಥಿಗಳನ್ನು ಭಾಷಣಕಾರರನ್ನಾಗಿ ಮಾಡುತ್ತಿದ್ದರು.. ನಾನು ಇಂದು ಪ್ರತಿ ಸಭೆ-ಸಮಾರಂಭಗಳಲ್ಲಿ ಯಾವುದೇ ಅಂಜಿಕೆಯಿಲ್ಲದೆ,ಎದೆಗುಂದದೆ ಧೈರ್ಯವಾಗಿ ಮಾತನಾಡುತ್ತೆನೆಂದರೆ ಆ ಪ್ರತಿಭೆ ಹೊರಹೊಮ್ಮಲು ಅವರದು ಬಹುಪಾಲು..ನಾನಷ್ಟೇ ಅಲ್ಲ ನಮ್ಮ ಶಾಲೆಯಲ್ಲಿ ಓದಿದ ಎಷ್ಟೋ ವಿಧ್ಯಾರ್ಥಿಗಳು ಭಾಷಣಕಾರರಾಗಲು ಅವರೇ ಪ್ರಮುಖರು..
ಅವರಿಗೆ ನಾನೆಂದೆಂದಿಗೂ ಕೃತಜ್ಞನಾಗಿದ್ದೇನೆ...
ಮೂರ್ತಿ ಅವರು ಇಂಗ್ಲಿಷ್ ಹಾಗೂ ರಸಾಯನಶಾಸ್ತ್ರ ಪಾಠ ಮಾಡುತ್ತಿದ್ದರು.. ಅವರು ನಾಸ್ತಿಕರಂತೆ ಮಾತನಾಡುತ್ತಿದ್ದರು..
ಮಹಮ್ಮದ್ ಖುರೇಶ್ ಅವರು ಹಿಂದಿ ವಿಷಯ ತೆಗೆದುಕೊಂಡಿದ್ದರು.. ಅವರು ತುಂಬಾ ತಾಳ್ಮೆ ಹೊಂದಿದ್ದರು,ಆದರೆ ಅವರ ತಾಳ್ಮೆ ಪರೀಕ್ಷೆ ಮಾಡಿದಲ್ಲಿ ಅವರ ಇನ್ನೊಂದು ಮುಖ ದಿಗ್ದರ್ಶನವಾಗುತ್ತಿತ್ತು.. ಅವರು ಸ್ನೇಹಿತರಂತೆ ಬೆರೆಯುತ್ತಿದ್ದರು.. ಅವರನ್ನು ನಾನು ತುಂಬಾ ವಿಧೇಯತೆಯಿಂದ ಕಾಣಲು ಪ್ರಯತ್ನಿಸುತ್ತಿದ್ದೆ.. ಅಕ್ಷರಗಳನ್ನು ವಿಶಿಷ್ಟವಾಗಿ ಬರೆಯುವುದರಲ್ಲಿ ಅವರು ಪರಿಣಿತರು.. ಈಗ ಅವರೂ ವರ್ಗಾವಣೆಯಾಗಿದ್ದಾರೆ..
ಕುಮಾರ್ ಅವರು ಗಣಿತ ವಿಷಯದವರಾಗಿದ್ದು ಪಾಠ ಅಚ್ಚುಕಟ್ಟಾಗಿ ಮಾಡುವುದರಲ್ಲಿ ಅವರ ಬಗ್ಗೆ ಇನ್ನೊಂದು ಮಾತಿಲ್ಲ..
ಯೋಗಾನರಸಿಂಹ ಅವರು ಭೌತಶಾಸ್ತ್ರ ಪಾಠ ಹೇಳುತ್ತಿದ್ದು ತುಂಬಾ ಹಾಸ್ಯಪ್ರಿಯರು..
ಸುಧಾ ಅವರು ವಿಶೇಷ ಶಿಕ್ಷಕಿಯಾಗಿದ್ದು ಅವರು ಮಾಡುತ್ತಿದ್ದ ವಿಶೇಷ ತರಗತಿಗಳಿಂದ ನನ್ನ ಬಹುಗುಣಗಳು ಸಹಪಾಠಿಗಳಿಗೆ ತಿಳಿದವು.. ಸಾಮಾಜಿಕವಾಗಿ ಮುಕ್ತವಾಗಿ ಚರ್ಚೆ ಮಾಡುತ್ತಿದ್ದರಾ ಸಮಾಜ ವಿಷಯದ ಶಿಕ್ಷಕಿ..
ನಾಗರಾಜ್ ಅವರು ದೈಹಿಕ ಶಿಕ್ಷಕರಾಗಿದ್ದು ಅವರೇ ಒಂದು ವಿಶೇಷ..
ಈ ಗುರುವೃಂದದ ನಡುವೆ ಕೆಂಪಮ್ಮ ಎಂಬುದೊಂದು ಮುಖ್ಯಪಾತ್ರ.. ಅವರು ಯಾವುದೇ ವಿಷಯದ ಶಿಕ್ಷಕಿಯಲ್ಲದಿದ್ದರೂ ಕೆಲವು ವಿದ್ಯಾರ್ಥಿಗಳು ಕೆಂಪಮ್ಮ ಅವರನ್ನು ಬಿಟ್ಟು ಮತ್ಯಾರನ್ನು ಸೌಜನ್ಯದಿಂದ ಕಾಣುವುದಿಲ್ಲ ಎಂಬುದು ಅವರ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿ..
ನಾನು ಪ್ರೌಢಶಾಲೆಯಲ್ಲಿ ಹೆಚ್ಚು ಸಮಯವನ್ನು ಆಟದ ಮೈದಾನದಲ್ಲೇ ಕಳೆದುದರಿಂದ ಅವರೆಲ್ಲರನ್ನು ಹೆಚ್ಚಾಗಿ ತಾಳೆ ಹಾಕುವುದು ತಿಳಿದಿಲ್ಲ..
ಪ್ರೌಢವಯಸ್ಕನಲ್ಲವೇ.. ತೀಟೆ,ತಕರಾರು,ತರಲೆ,.. ಎಲ್ಲ ಗುಣಗಳಿಂದ ಕಾಣಿಸಿಕೊಂಡೆ. ಇಲ್ಲಿನ ಶಿಕ್ಷಕರು ನನಗೆ 'ಅಹಂಕಾರಿ' ಎಂಬ ಪಟ್ಟ ಕೊಟ್ಟಿದ್ದು ನನ್ನ ಜನ್ಮಜರ ಮೂಲಕ ಹಲವು ದಿನಗಳ ನಂತರ ಗೊತ್ತಾಯಿತು..
ನನ್ನವರಾದ ಕೆಲವರ ನಾಮಬಲದಿಂದ ನನ್ನೆಲ್ಲ ತಪ್ಪುಗಳನ್ನು ಈ ಶಿಕ್ಷಕರು ಮನ್ನಿಸಿದ್ದರು ಎಂದು ಭಾವಿಸುತ್ತೇನೆ..
ನಾನು ಇಲ್ಲಿ ಹಲವಾರು ವಿವಾದಗಳನ್ನು ಸೃಷ್ಟಿಸಿಕೊಂಡಿದ್ದರೂ 'ನಾನು ನನಗೆ ತಿಳಿದಂತೆ ನನ್ನ ಆತ್ಮಸಾಕ್ಷಿಯಾಗಿ ಯಾವ ಶಿಕ್ಷಕರ ವಿಷಯದಲ್ಲೂ ತಪ್ಪೆಸಗಿಲ್ಲ ಎಂದು ಪ್ರಮಾಣ ಮಾಡುತ್ತೇನೆ.. ಪರೋಕ್ಷವಾಗಿ ನನ್ನ ಬಗ್ಗೆ ತಪ್ಪು ತಿಳಿದಿದ್ದರೆ ಅದಕ್ಕೆ ಕಾರಣ ನನಗೆ ತಿಳಿದಿಲ್ಲ.."ಈಗಲೂ ಆಗಿನ ಕೆಲವು ಶಿಕ್ಷಕರು ಕಣ್ಮುಂದೆ ಕಂಡಾಗ ನಮಸ್ಕರಿಸುವುದು ನಮಸ್ಕರಿಸಲೆಬೇಕಂತಲ್ಲ///

ಏನೇ ಇರಲಿ ನನ್ನ ಜೀವನದಲ್ಲಿ ಗುರು ಪಟ್ಟವನ್ನೇರಿದ್ದ ಎಲ್ಲರಿಗೂ ನಾನು ಚಿರಋಣಿ..
ಸೂಚನೆ:ಈ ಮೇಲ್ಕಂಡ ಕೆಲವು ಶಿಕ್ಷಕರ ನಡುವಿನ ಒಡನಾಟದಲ್ಲಿ ನಡೆದ ಕೆಲವು ಅಹಿತಕರ ಘಟನೆಗಳನ್ನು ಇಲ್ಲಿ ಈಗ ಪ್ರದರ್ಶನ ಮಾಡುವುದು ಸರಿಯಿಲ್ಲ ಎಂದು ಮರೆಮಾಚಲಾಗಿದೆ..


~-~

ಜ್ಞಾನದೀವಿಗೆ ಬೆಳಗುತಿರಲು..ನೂರೆಂಟು ನೋವ ಅಂಧಕಾರದೊಳಗೆ


ನೋವ ಮರೆಸಿ ಮಾತೊಂದು ಮೊಳಗುತಿರಲು


ದಿವ್ಯದೀವಿಗೆಯು ಆರಿಹೋಗಿರಲು


ಜ್ಞಾನದೀವಿಗೆಯು ಬೆಳಗುತಿರಲು


ಕತ್ತಲ ನುಂಗಿ ಬೆಳೆಯುತಿರಲು


ಮೂಕಮನಸು ಹೂಂಕರಿಸುತಿದೆ
ಗುರಿಯತ್ತ ನೆಟ್ಟಿರುವ ನೋಟದೊಳಗೆ


ನಿದಿರೆಯ ಮಂಪರು ಕಣ್ಣು ಕುಕ್ಕುತಿರಲು


ಕನಸಿಗೆ ಗಾಂಪರು ಬುದ್ಧಿ ಹೇಳಿರಲು


ಮುಗಿದ ಕೈಗಳು ಮುಗಿಯುತಲೇ ಇರಲು


ಬಾಯಿ ಮಂತ್ರವ ಜಪಿಸುತಲೇ ಇರಲು


ಮನಸು ಬೆತ್ತಲೆಯಾಗಿ ಓಡುತಿದೆ..
ಕತ್ತಲ ಮನಸಿನಮನೆಯೊಳಗೆ


ಗೆಲುವೆಂಬುದು ನೆರಳಾಗಿರಲು


ಕುರುಡುಮನ ಬೆಳಕಿಗೆ ಬಾರದಿರಲು


ನೆರಳಂತಿರುವ ಗೆಲುವ ಕಾಣದಿರಲು


ಗಗನತಾರೆಯ ಕೀಳಲೆತ್ನಿಸುತ್ತಿರಲು


ಕಾಣದ ಕೈ ಶೋಧಿಸುತ್ತಲೇ ಇದೆ..
ದಿವ್ಯದೀವಿಗೆಯು ಕತ್ತಲ ನೆಟ್ಟಿದೆ


ಜ್ಞಾನದೀವಿಗೆಯು ಬೆಳಕ ನೆಟ್ಟಿದೆ
..-..-..-..-..-..-..-..-..-..-..-..-..-..-..-..-..-..-..-..-..-..-..

ಆರ್ಕುಟ್ : http://www.orkut.co.in/Main#Profile?rl=fpp&uid=4606487278641111312,

~.~


ಬಣ್ಣಬಣ್ಣದ ನೆನಪನಾಲೆ..

[ಇದೀಗ ನಿಮ್ಮ ಮುಂದಿಟ್ಟಿರುವ ಲೇಖನ ಒಂದು ವರ್ಷದ ಹಿಂದೆ ನನ್ನ ಹಳೆ 'ಬ್ಲಾಗ್' ನಲ್ಲಿ ಪ್ರಕಟಿಸಿದ್ದು., ಸರಿಯಾದ ಪ್ರತಿಕ್ರಿಯೆಗಳು ಸಿಗದೇ ಹೋದುದರಿಂದ, ಈ ಒಂದು ವರ್ಷದ ನೆನಪುಗಳನ್ನೂ ಬೆರೆಸಿ ಈಗ ಮತ್ತೆ ನಿಮ್ಮ ಮುಂದಿಡುತ್ತಿದ್ದೇನೆ..]ಅಮ್ಮ ದೃಷ್ಟಿ ತೆಗೆಯುವಾಗ ಸುಡುವ ಬಟ್ಟೆಯು ಹಾಯತಪ್ಪಿ ಕಾಲಮೇಲೆ ಬಿದ್ದು ಗಾಯ ಆಗಿರೋದು,ಅಪ್ಪ ಕೈ ಹಿಡಿದು ಬರೆಸುತ್ತಿದ್ದುದು,ನಾನು ಓದುತ್ತಿದ್ದ ಶಿಶುವಿಹಾರದ ಟೀಚರ್ ಕಂಡ ಕೂಡಲೇ ಅಡಗಿ ಕೂರುತ್ತಿದ್ದುದು,ಮನೆಮುಂದೆ ಕೂರುತ್ತಿದ್ದ ಹಿರಿಯರಿಗೆಲ್ಲ ಲಾರಿ ತಂದು ಹಾಯಿಸುವೆನೆಂದು ಬೆದರಿಕೆ ಹಾಕುತ್ತಿದ್ದುದು, ತಿಳಿಯದೆ ನಾಣ್ಯ ನುಂಗಿದ್ದು.....

ಅಪ್ಪ ಅವರು ಕೆಲಸ ಮಾಡುವ ಶಾಲೆಗೆ ಕರೆದುಕೊಂಡು ಹೋದಾಗ ಅಲ್ಲಿಯ ಪ್ರಾಂಶುಪಾಲರು ನನ್ನ ಪ್ರತಿಭೆ ಮೆಚ್ಚಿ ೫೦೦/- ರೂ. ಕೊಟ್ಟಿದ್ದು,ಯಾರೋ ಆಹಾರದಲ್ಲಿ ಮದ್ದು ಬೆರೆಸಿ ಕೊಟ್ಟು ಆರೋಗ್ಯ ಹದಗೆಟ್ಟಿದ್ದು,.....

ಪ್ರಾಥಮಿಕ ಶಾಲೆಗೆ ಸೇರಿದ್ದು,ಪ್ರತಿಭಾವಂತನೆಂದು ಹೆಸರು ಗಳಿಸಿದ್ದು,ಎಲ್ಲ ಮಾಸ್ತರರನ್ನು ಹಚ್ಚಿಕೊಂಡಿದ್ದು,ಗೋಲಿ ಆಡಿದ್ದು,ಚಿತ್ರನಟಿಯರನ್ನು ಪ್ರೀತಿಸಿದ್ದು,ಅಕ್ಕನ ಮಗಳನ್ನು ಮುದ್ದಾಡಿದ್ದು,.....

ಹೈಸ್ಕೂಲಿಗೆ ಸೇರಿದ್ದು,ಪೋಲಿ ಹುಡುಗರ ಸಹವಾಸ ಸೇರಿದ್ದು, ಜೊತೆಗೆ ವ್ಯವಸಾಯದ ಬೆನ್ನಿಗೆ ಬಿದ್ದಿದ್ದು,ರಜಾದಿನದಲ್ಲಿ ಆಡು ಮೇಯಿಸಲು ಹೋದಾಗ ಈಜು ಹೊಡೆಯುತ್ತಿದ್ದುದು,ರೈಲ್ವೆ ಹಳಿಯಲ್ಲಿ ಕಬ್ಬಿ ಣ ಹಾಯುತ್ತಿದ್ದುದು,ಇಸ್ಪೀಟ್ ಆಟ ಆಡುತ್ತಿದುದು,ಮುಂಜಾನೆಯೇ ಎದ್ದು ಹೊಲಕ್ಕೆ ನೀರು ಹಾಯಿಸುತ್ತಿದ್ದುದು.....

ಶಾಲೆಯಲ್ಲಿ ಮಾಸ್ತರರನ್ನು ರೇಗಿಸಿದ್ದು,ಬೆಂಚಿನ ಮೇಲೆ ಕೆತ್ತಿದ್ದು,ಅಹಂಕಾರಿ ಎಂಬ ಪಟ್ಟ ಪಡೆದಿದ್ದುದು,ಪ್ರತಿ ಸಭೆ ಸಮಾರಂಭದಲ್ಲೂ ಭಾಷಣ ಮಾಡುತ್ತಿದ್ದುದು,ಓದದಿದ್ದರೂ ಅಂಕ ಪಡೆಯುವ ಸಾಮರ್ಥ್ಯ ಪಡೆದು ಭೇಷ್ ಎನಿಸಿಕೊಂಡಿದ್ದುದು.....

ಒಂದು ಹುಡುಗಿಗೆ ಆಕೆಯ ಸ್ನೇಹಿತೆಯ ಮೂಲಕ ಪ್ರಪೋಸ್ ಮಾಡಿ ಒಪ್ಪಿ ಸಿ ಪ್ರೀತಿ ಮಾಡಿದ್ದು,ಪ್ರತಿದಿನ ಪ್ರೇಮಪತ್ರ ಕೊಡುತ್ತಿದ್ದುದು, ನಾನು ಇನ್ನೊಬ್ಬಳನ್ನು ಪ್ರೀತಿಸುವ ವಿಷಯ ತಿಳಿದು ಆಕೆ ಮುನಿಸಿಕೊಳ್ಳುತ್ತಿದ್ದುದು..
ಮತ್ತೆ ಮತ್ತೆ ಜಗಳ ಅಡಿ ಒಂದಾಗುತ್ತಿದ್ದುದು,ಪ್ರೇಮದ ಕಾಣಿಕೆ ನೀಡುತ್ತಿದ್ದುದು.....

ಮೊದಲ ಬಾರಿಗೆ ಸೆಕ್ಸ್ ಬುಕ್ ಓದಿದ್ದು,ಹಸ್ತಮೈಥುನ ಮಾಡಿಕೊಂಡದ್ದು,ಲೈಂಗಿಕತೆಯ ಬಗ್ಗೆ ತಲೆಕೆಡಿಸಿಕೊಂಡು ಹೆಚ್ಚು ಹಾಳಾಗಿದ್ದುದು,ಓದೋದು ಬಿಟ್ಟರೂ ಉತ್ತಮ ಅಂಕವನ್ನೇ ಪಡೆದುಕೊಂ ಡದ್ದು.....

ಅನಿರೀಕ್ಷಿತವಾಗಿ ನಗರಕ್ಕೆ ಬಂದು ನೆಲೆಸಿ ಚೆನ್ನಾಗಿ ಓದಬೇಕೆಂಬ ಹಂಬಲದಿಂದ ಕಾಲೇಜು ಸೇರಿ ಓದುತ್ತಿದ್ದುದು, ಮೊದಮೊದಲು ಅಪರಿಚಿತರ ನಡುವೆಯೇ ಸಾಗಿದ್ದುದು,ಮುಗ್ದನಾಗಿ ಶ್ರಮಪಟ್ಟು ಓದಿ ಕಾಲೇಜಿನವರಿಂದ ಶಹಬ್ಬಾಸ್ ಗಿರಿ ಪಡೆದಿದ್ದುದು,ನಾನಾಯ್ತು ನನ್ನ ಪುಸ್ತಕ ಆಯ್ತು ಎಂದು ಇದ್ದುದು,ಹಲವಾರು ಕನಸು ಕಂಡಿದ್ದುದು, ಕಾಲೇಜಿನವರು ಅತ್ಯುತ್ತಮ ದ ರ್ಜೆಯಲ್ಲಿ ತೇರ್ಗಡೆ ಆಗುವ ವಿದ್ಯಾರ್ಥಿ ಪಟ್ಟಿಯಲ್ಲಿ ನಾನು ಒಬ್ಬನಾದದ್ದು.....

ಮೀಸೆ ಚಿಗುರಿದ್ದು, ಕಾಲಕ್ರಮೇಣ ಹುಡುಗರ ಸಹವಾಸ ಸೇರಿದ್ದು, ಹಳೆ ಚಾಳಿ ಮುಂದುವರೆಸಿದ್ದು,ಕಾಲೇಜಿನಲ್ಲಿ ಉಪನ್ಯಾಸಕರನ್ನು ರೇಗಿಸಿದ್ದು,ಹುಡುಗಿಯರ ಹಿಂದೆ ಅಲೆದಿದ್ದುದು, ಓದುವುದು ಕಡಿಮೆ ಮಾಡಿ ಹಾಳಾಗಿದ್ದುದು.. ಆದ್ರೂ ಉತ್ತಮ ಅಂಕವನ್ನೇ ಪಡೆದಿದ್ದುದು.....

'ರಾಹುದೆಸೆ'ಯ ಪರಿಣಾಮ ಹೆಚ್ಚಾದದ್ದು..,ಕೆಲವು ದೇವರುಗಳೆಲ್ಲ ಮುನಿಸಿಕೊಂಡದ್ದು..

ಮೊದಲಬಾರಿಗೆ ಬ್ಲೂ ಫಿಲಂ ನೋಡಿದ್ದು, ಮತ್ತೆ ಮತ್ತೆ ನೋಡಬೇಕೆನಿಸಿ ಕಾಲೇಜು ನಿಲ್ಲಿಸಿ ನೋಡಿದ್ದು, ಅಂತರ್ಜಾಲಕ್ಕೆ ಕಾಲಿಟ್ಟಿದ್ದುದು, ಬ್ಲಾಗ್ ಪರಿಚಯ ಆಗಿ ಬ್ಲಾಗ್ ಬರೆದುದು, ಸ್ನೇಹಿತರ ಜೊತೆಗೂ ಡಿ ಕಾಲೇಜಿಗೆ ಬಂಕ್ ಹಾಕಿ ಫಿಲಂ ಗೆ ಹೋಗಿದ್ದುದು, ಮನೆ ಪಾಠಗಳಲ್ಲಿ ಓದುವುದಕ್ಕಿಂತ ಹೆಚ್ಚು ಆಟ ಆಡಿದ್ದು, ಬೈಕ್ ಏರಿ ಹುಡುಗಿಯರನ್ನು ಚುಡಾಯಿಸಿ ಪೋಲೀಸರ ಕಣ್ತಪ್ಪಿಸಿ ಓಡಿದ್ದುದು, ಹಲವಾರು ಗಲಾಟೆಗಳಲ್ಲಿ ಪಾಲುಗೊಂಡದ್ದು, ಮಂಡ್ಯ ಪೋಲಿಗಳಲ್ಲಿ ಒಬ್ಬನಾಗಿ ಗುರುತಿಸಿಕೊಂಡಿದ್ದು..

ಅದ್ದೂರಿ ಆಗಿದ್ದ ಜೀವನ ಹಾಳಾಗಿದ್ದು, ಓದು ಬಿಟ್ಟು ನಪಾಸು ಆಗುವೆನೆಂ ದು ನಂಬಿದ್ದರೂ ದೇವರ ದಯೆಯಿಂದ ಉತ್ತಮ ಅಂಕ ಪಡೆದಿದ್ದು.....

ಕಡಿಮೆ ಅಂಕ ತೆಗೆದಿದ್ದಕ್ಕೆ ಮನೆಯವರಿಂದ ,ಕಾಲೇಜಿನವರಿಂದ ಬೈಸಿಕೊಂಡದ್ದು.. ಪಶ್ಚಾತ್ತಾಪ ಪಟ್ಟಿದ್ದು,ತಪ್ಪುಗಳು ಅರಿವಾದದ್ದು.....
ಹೊಸಕನಸು ಹೊತ್ತಿ ಈಗ ತಾನೇ ಡಿಗ್ರಿ ಸೇರಿ ಹೊಸ ಜೀವನ ಪ್ರಾರಂಭಿಸಿದ್ದು...

ಇಂತ ಹಲವಾರು ಹನಿಹನಿ ನೆನಪುಗಳು ಇನ್ನು ನನ್ನ ಕಣ್ಣೆದುರಲ್ಲೇ ಇರುವಾಗ, ಹಿರಿಯರ ಮುಂದೆ ಬಾಲಕ ಎಂದು ಇರುವಾಗ ನನಗೆ ಕಳೆದ ೨೦೦೯ರ ಜುಲೈ ೨೯ ಕ್ಕೆ ಆಗಲೇ ಹದಿನೆಂಟು ವರ್ಷಗಳಾದ ಸಂಭ್ರಮ.....

ಆಗಲೇ ದೊಡ್ದವನಾದೆನ ಎಂಬ ಕುತೂಹಲ, ಜವಾಬ್ದಾರಿಗಳು ಶುರುವಾಗುವುವೇನೋ ಎಂಬ ಕಾತಾಳ.....

ಹಲವಾರು ಕನಸು ಕಾಣುತ್ತ ಹದಿನೆಂಟರ ಹರೆಯದಲ್ಲಿ ಬಿಸಿನೆತ್ತರ ದೇಹವನ್ನು ಹಿಡಿತದಲ್ಲಿಟ್ಟು, ಇನ್ನು ಮುಂದೆಯಾದರೂ ಹೊಸ ಜೀವನ ಪ್ರಾರಂಭಿಸೋಣ ಎಂದುಕೊಂಡು ನವಚೈತನ್ಯದಲ್ಲಿ ನವಘಳಿಗೆಗೆ ಕಾಲಿಡುತ್ತಿರುವ ನನಗೆ ಭಗವಂತನಾದಿಯಾಗಿ ತಮ್ಮೆಲ್ಲರ ಆಶಿರ್ವಾದ ಬೇಡಿ ಮುಂದೆ ನಡೆದಿದ್ದು..

**

ಪ್ರಥಮ ಡಿಗ್ರಿಯಲ್ಲಿ ಕಾಲೇಜಿನ ಪಾಠಕ್ಕಿಂತ ಜೀವನದ ಪಾಠವನ್ನೇ ಹೆಚ್ಚು ಕಲಿತು ಎರಡನೇ ಡಿಗ್ರಿಗೆ ಬಂದಿರುವುದು..
ಹೊಸ ಬ್ಲಾಗ್ ಸೃಷ್ಟಿಸಿ ಬ್ಲಾಗಿಗನಾಗಿ ಚಿಗುರುತ್ತ ಇರೋದು..
ಎಲ್ಲ ವಿದ್ಯಾರ್ಥಿಗಳಿಗೂ ನಾನೊಬ್ಬನೇ ಸರ್.ಸಿ.ವಿ.ರಾಮನ್ ವಿದ್ಯಾರ್ಥಿ ವೇತನ ಪಡೆದು ಖುಷಿ ಪಟ್ಟಿದ್ದು..
ನನ್ನ ಆಪ್ತರೊಬ್ಬರ ಜೊತೆ ಒಂದು ದಿನ ಪ್ರವಾಸ ಹೋಗಿದ್ದು.. ಅದು ನನ್ನ ಜೀವನದ ಅಮೃತಘಳಿಗೆ .

ನನ್ನ ಪ್ರೇಮದ ದೀವಿಗೆಗೆ ಕಾಮದಜ್ವಾಲೆ ಸೋಕಿ ಆರಿಹೋದದ್ದು..

ಸ್ತ್ರೀ ವ್ಯಾಮೋಹಕ್ಕೆ ಬಲಿಯಾಗುತ್ತಿರುವ ಮನಸನ್ನು ನಿಯಂತ್ರಿಸಲು ಎಣಗಾಡುತ್ತಿರುವುದು..
ಜೊತೆಗೆ ಯಾರೊಂದಿಗೂ ಹೊಂದಾಣಿಕೆ ಇಲ್ಲದೆ ಜೀವನದಲ್ಲಿ ಸಮರಸ ಇಲ್ಲದೆ ಇರುವುದು..

ಸ್ವಂತ ನಿರ್ಧಾರ (ಯಾರಿಗೂ ಇಷ್ಟವಿಲ್ಲದ)ದಿಂದ ಎಲ್ಲರ ವಿಶ್ವಾಸ ಕಳೆದುಕೊಂಡ ನನ್ನನ್ನು ಮತ್ತೆ ನಾನೇ ಸ್ಥಾಪಿಸಿಕೊಳ್ಳಲು ಶ್ರಮಿಸುತ್ತಿರುವುದು..


ಯಾರಿಗೂ ಬೇಡವಾಗಿರುವ ನನಗೆ ಕೆಲವೊಮ್ಮೆ ಲೋಕವೇ ಬೇಡವೆನಿಸಿದರೂ ಕೆಲವು ಕನಸುಗಳನ್ನು ನನಸಾಗಿಸಲು ಇನ್ನು ಬದುಕಿರೋದು!!

ಈ ಎಲ್ಲ ಬಣ್ಣಬಣ್ಣದ ನೆನಪುಗಳ ಜೊತೆಗೆ ಬಣ್ಣಬಣ್ಣದ ಕನಸುಗಳನ್ನು ತುಂಬಿಕೊಂಡು ಮುಂದೆ ಹೋಗುತ್ತಿರುವ ನನಗೆ ನಿಮ್ಮ ಆಶೀರ್ವಾದ ಸದಾ ಇರಲಿ..~.~


ಮಳೆ ಬಂದಿದೆ ಮನ ತುಂಬಿದೆ

[ಎಂದೋ ಬರೆದಿದ್ದ ಈ ಮಳೆಹನಿಕವನವನ್ನು(ನನ್ನ ಪ್ರಕಾರ ಅಷ್ಟೇನೂ ಗಂಧವಿಲ್ಲದ...) ಇಂದು ನಿಮ್ಮ ಮುಂದಿಡುತ್ತಿದ್ದೇನೆ...]
ಬಿಸಿಲ ಝಳದಲಿ ನಿಂತು

ಬಿರಿದ ನೆಲದಲಿ ಕುಂತು

ಆಕಾಶವನ್ನೇ ದಿಟ್ಟಿಸುತ್ತಿದ್ದ

ಗುಳಿಹೋದ ಕಣ್ಣುಗಳೀಗ

ಛಾವಣಿಯ ನೆರಳಲಿ

ಬಲು ಸಂತಸದಿ

ಕಣ್ಮುಚ್ಚಿ ವಿಶ್ರಮಿಸುತ್ತಿವೆ..


ಕಾಡಿನಲ್ಲಿ ಕಾಲಿಡಲು

ಬಿರಿಬಿಸಿಲ ಬೇಗೆಯಲಿ

ಉದುರಿಹೋದ ಒಣ ಎಲೆಗಳು

ತೂರಿ ಹಾರಾಡುತ್ತಿದ್ದವು ಅಂದು

ಕಾಡಿನಲ್ಲಿ ನಡೆದಾಡಲು

ಬೀಸುವ ಸುಯ್ಯನೆ ಗಾಳಿಲಿ

ಚಿಗುರೆಲೆಗಳಲ್ಲಿ ಅಡಗಿರುವ ಹನಿಗಳು

ತಂಪನೆರಚುತ್ತಿವೆ ಇಂದು..


ಹಳ್ಳ-ತೊರೆಗಳು ತುಂಬಿ ಹರಿದು

ಮನದಲೂ ಕನಸ ಕೋಡಿ ಹೊಡೆದಿದೆ

ಹರುಷದ ಮಳೆ ಬಂದು..


ಬಿಸಿಲ ಬೇಡವೆಂದಿದ್ದ ಜೀವಗಳೆಲ್ಲ

ಮಳೆಯ ಚುಮುಚುಮುಚಳಿಗೆ

ಎಳೆಬಿಸಿಲು ಕಾಯಲು

ಹಾತೊರೆದು ಮೈಮುರಿದು ಕಾದಿವೆ..


ಒಣಭೂಮಿಗೆ ಬಾಯಾಕಿ

ಎಣಗುತ್ತಿದ್ದ ದನ-ಕರುಗಳು

ಚಿಗುರಿದ ಗರಿಕೆಲಿ ಕುಳಿತ

ಮಳೆಹನಿ ಸೋಕಲು

ಮುಸಿಮುಸಿ ನಕ್ಕು ಕುಣಿಯುತ್ತಿವೆ..


ಬಿರಿಬಿಸಿಲ ಲೆಕ್ಕಿಸದೆ ಓಡಾಡುತ್ತಿದ್ದ ಮಕ್ಕಳು

ಜಾರಿ ಬೀಳುವೆವೆಂಬ ಭಯದಿ

ಎಚ್ಚರಿಕೆಯ ಆಟವಾಡುತ್ತಿವೆ..


ಅಂತೂ ಇಂತೂ ಮಳೆ ಬಂದಿದೆ

ಮನ ತುಂಬಿ ಹರಿದಿದೆ..~-~

ಕನ್ನಡಚಿತ್ರಗಳು v/s ಕನ್ನಡಚಿತ್ರರಂಗ


ಈ ಲೇಖನ ನೋಡಿ, "ಸಣ್ಣ ಬಾಯಲ್ಲಿ ದೊಡ್ಡ ಮಾತು","ದೊಡ್ಡೋರ ಇಚಾರ ಸಣ್ಣವರಿಗೆ ಯಾಕೆ.." ಅಂತ ಅನ್ಕೊತಿರೆನೋ..?
ಯಾಕಂದ್ರೆ ನಂಗೂ ಕೂಡ ಒಂದೊಂದ್ ಸಲ 'ನಾನು ಮುಚ್ಕಂಡು ನನ್ ಕೆಲಸ(ಓದೋದು) ಏನಾಯ್ತೋ ಅದ್ ಮಾಡ್ದೆ ಈ ವಿಚಾರಕ್ಕ್ಯಾಕ್ ಬಂದೆ' ಅಂತ ಅನ್ಸುತ್ತೆ..
ನಾನು ಈಗ ಕನ್ನಡ ಚಲಚಿತ್ರರಂಗದ(ಅಬ್ಬಾ!!) ಬಗ್ಗೆ ನಂಗ್ ತಿಳ್ದಷ್ಟು ವಿಷಯನ ಇಟ್ಕಂಡು ವಿಮರ್ಶೆ ಮಾಡ್ತೀನಿ.. ತಪ್ಪಿದ್ದರೆ ದಯವಿಟ್ಟು ಮನ್ನಿಸಿ..
"ಕನ್ನಡ ಚಿತ್ರರಂಗ 'ಗಂಧವಿಲ್ಲದ ಗಂಧದಮರ' ದಂತೆ ದೀನ ಸ್ಥಿತಿ ತಲುಪಿದೆ..
ಕೆಲವರು ರಾಜಕೀಯ ಹಾಗೂ ಚಿತ್ರರಂಗ ಎಂಬ ಎರಡೂ ದೋಣಿಗಳ ಮೇಲೂ ಕಾಲಿಟ್ಟು ಪಯಣಿಸುತ್ತಿದ್ದಾರೆ..
ನಟನೆಯನ್ನೇ ಉಸಿರಾಗಿಸಿಕೊಂಡಿದ್ದ ಕೆಲವು ಅಮೋಘ ನಟರು-ನಿರ್ದೇಶಕರು ಚಿತ್ರರಂಗವನ್ನು ಬಿಟ್ಟುಹೋಗಿರುವುದು ತುಂಬಲಾರದ ನಷ್ಟವಾಗಿದೆ..
ಇತ್ತೀಚಿಗೆ ದಿನಕ್ಕೊಬ್ಬರಂತೆ ನಟರು(ನಟನೆಯ ಗಂಧವೇ ಇಲ್ಲದವರು) ಉಧ್ಭವ ಆಗುವುದರ ಮೂಲಕ ಚಿತ್ರರಂಗವನ್ನು ಹಾಳುಗೆಡವುತ್ತಿದ್ದಾರೆ..
ಒಂದು ಕಾಲದಲ್ಲಿ ಅದ್ಭುತ ಚಿತ್ರಗಳನ್ನು ನೀಡಿದ್ದ ಕೆಲವು ಸೃಜನಾಶೀಲ ನಿರ್ದೇಶಕರು ಇಂದು ಪ್ರೇಕ್ಷಕನನ್ನು ೨.೩೦ ಗಂಟೆಗಳ ಕಾಲ ಚಿತ್ರಮಂದಿರದಲ್ಲಿ ಹಿಡಿದಿಡಲು ಎಣಗಾಟ ನಡೆಸುತ್ತಿದ್ದಾರೆ..
ಪ್ರತಿವಾರ ಚಿತ್ರಗಳು ತೆರೆ ಕಾಣುತ್ತಿದ್ದರೂ ಒಂದು ಚಿತ್ರವೂ ನೆಲೆನಿಲ್ಲದೆ ಬಂದಷ್ಟೇ ಬಿರುಸಾಗಿ ಹೋಗುತ್ತಿದೆ.. ಇತ್ಯಾದಿ..
ಹಲವಾರು ತಪ್ಪುಗಳನ್ನು ಪದೇ ಪದೇ ಮಾಡುತ್ತಾ ಕನ್ನಡ ಚಿತ್ರವೆಂದರೆ ಪ್ರೇಕ್ಷಕನಿಗೆ ಅಲರ್ಜಿ ಎನಿಸುವ ಮಟ್ಟಿಗೆ ಚಿತ್ರರಂಗ ಹೊಲಸಾಗಿ ಬೆಳೆದಿದೆ..ಇದು ಬಹುಶಃ ಎಲ್ಲರಿಗೂ ತಿಳಿದ ವಿಷಯವೇ."
ಇಂತಹ ಸಮಯದಲ್ಲಿ ಚಿತ್ರರಂಗದ ಕೀರ್ತಿಯನ್ನು ಸ್ವಲ್ಪವಾದರೂ ಹೆಚ್ಚಿಸಲು ಬರುತ್ತಿರುವ ಕೆಲವು ಚಿತ್ರಗಳು ''ಭೂಮಿಯಿಂದ ಮೊಳೆತು ಮೇಲೆದ್ದು ಸೂರ್ಯನಿಗೆ ಮುಖ ಮಾಡುವಷ್ಟರಲ್ಲೇ ಕತ್ತು ಮುರಿದು ಬಿದ್ದಂತೆ.." ಪ್ರೇಕ್ಷಕನಿಗೆ ತಲುಪುವಷ್ಟರಲ್ಲೇ ಮರೆಯಾಗುತ್ತಿವೆ.. ಅಂತಹ ಚಿತ್ರಗಳ ಬಗ್ಗೆ ಒಂದೆರಡು ಮಾತನಾಡಲು ಇಷ್ಟ ಪಡುತ್ತೇನೆ..;

"ದಿಲ್ದಾರ":

ಕೇವಲ ಮಚ್ಚು-ಲಾಂಗು,ರೌಡಿಸಂ,ಕಣ್ಣನ್ನು ಹುರಿಗೊಳಿಸುವ ವಿಚಿತ್ರ ಪ್ರೇಮ,ತಂಪೇ ಇಲ್ಲದ ಮಮತೆ-ವಾತ್ಸಲ್ಯ-ಸ್ನೇಹ-ಪ್ರೀತಿ,ಕೇವಲ ಅಂಗಾಂಗ ಪ್ರದರ್ಶನ,..ಹೀಗೆ ಅಸಹ್ಯ ವಿಷಯಗಳನ್ನೊಳಗೊಂಡ ಚಿತ್ರಗಳೇ ಇತ್ತೀಚಿಗೆ ಬರುತ್ತಿದ್ದ ಈ ಕಾಲದಲ್ಲಿ ಒಂದು ಸುಂದರ ಸೊಗಸಾದ(ಸ್ವಮೇಕ್) ಚಿತ್ರ :'ದಿಲ್ದಾರ' ಎಂಬ ತಲೆಬರಹದಲ್ಲಿ 'ನಾನಿನ್ನ ಹುಟ್ಸು ಅಂತ ಕೇಳಿದ್ನ..? ಆದ್ರು ಬೇಜಾರಿಲ್ಲ...!' ಎಂಬ ವಿಶೇಷ ತಲೆಬರಹದಡಿಯಲ್ಲಿ ಬೆಳ್ಳಿತೆರೆ ಮೇಲೆ ಕಾಣಿಸಿಕೊಂಡಿತ್ತು..
ನನ್ನ ಜೀವನದಲ್ಲಿ ನಾನು ಕಂಡ ಉತ್ತಮ,ಹೃದಯಸ್ಪರ್ಶಿ ಭಾವನಾತ್ಮಕ ಚಿತ್ರ ಇದು. ಹುಣ್ಣಿಮೆಯ ಚಂದ್ರನಂತಿದ್ದ ಈ ಚಿತ್ರದಲ್ಲಿ ಒಂದೆರಡು ಕಂಡೂ ಕಾಣದಂತ ಒಂದೆರಡು ಕಪ್ಪು ಚುಕ್ಕಿಗಳಿದ್ದವು..
'ತಂದೆಯ ಅಲ್ಲದ ತಂದೆಯ ವಿಶೇಷ ಪ್ರೀತಿ,ಮುದ್ದಾದ ಸೋದರಿ ವಾತ್ಸಲ್ಯ,ನಮ್ಮದೇ ಸಂಸ್ಕೃತಿಯಲ್ಲಿ ಕಾಣಿಸಿಕೊಂಡಿದ್ದ ಸುಸಂಸ್ಕೃತ ನಾಯಕಿಯ ಮೌನಮಾತು,ವಿಶೇಷವಾಗಿ ಕಾಣುವ ಅನಾಥನಾದರೂ ತಂದೆ ಪ್ರೀತಿ ಪಡೆದ ನಾಯಕ,ಭಾವುಕ ಸಂಭಾಷಣೆಗಳು,ತಂಪಾದ ದೃಶ್ಯಗಳು-ಹಾಡುಗಳು,ತುಸು ರಾಜಕಾರಣ(ಅವಶ್ಯಕವಿಲ್ಲ),ದುರಂತ ಮುಕ್ತಾಯ..' ಇಷ್ಟು ವಿಷಯಗಳನ್ನು ಹೊಂದಿದ್ದ ನವಿರಾದ ಈ ಚಿತ್ರಕ್ಕೆ ಪತ್ರಿಕೆಗಳಲ್ಲಿ ಉತ್ತಮ ವಿಮರ್ಶೆಯ ಬರಹಗಳು ಬಂದಿದ್ದೂ ಸಹ ಪ್ರೇಕ್ಷಕ ಚಿತ್ರತಂಡಕ್ಕೆ ಬೇಸರಗೊಳಿಸಿದ್ದ..
ಪರಿಣಿತರೆ ಒಳ್ಳೆ ಚಿತ್ರ ಕೊಡಲಾಗದ ಈ ಸಂದರ್ಭದಲ್ಲಿ ಹೊಸಮುಖಗಳ ಈ ಚಿತ್ರದ ಬಗ್ಗೆ ಪ್ರೇಕ್ಷಕನಿಗೆ ಅರಿವೇ ಇಲ್ಲವಾಯಿತೇನೋ./
ಎಲ್ಲೂ ಬಳಸಿರದ ದುಬಾರಿ ವಿಶೇಷ ಛಾಯಾಗ್ರಹಣವನ್ನು ಛಾಯಾಗ್ರಾಹಕ ಈ ಚಿತ್ರದಲ್ಲಿ ಬಳಸಿದ್ದುದು ಈ ಚಿತ್ರದ ಒಂದು ವಿಶೇಷ..
ಈ ಚಿತ್ರದ ವಿಷಯದಲ್ಲಿ ನನಗಂತೂ ತುಂಬಾ ಬೇಸರವಾಯಿತು..
ಆದರೂ ಆತ್ಮವಿಶ್ವಾಸ ಕಳೆದುಕೊಳ್ಳದ ನಿರ್ದೇಶಕ ಕೇವಲ ಪತ್ರಿಕೆ ವಿಮರ್ಶೆಗಳಿಗೆ ಖುಷಿಪಟ್ಟು ಇಂತಹುದೇ ಇನ್ನೊಂದಿಷ್ಟು ಕಥೆಗಳನ್ನು ಜೋಳಿಗೆಯಲ್ಲಿ ಇಟ್ಟುಕೊಂಡು ಪ್ರಯೋಗಕ್ಕೆ ಮುಂದಾಗುತ್ತಿದ್ದಾನೆ..
ನಂತರ ಬಂದ 'ನಾನು ನನ್ನ ಕನಸು' ಕೂಡ ಉತ್ತಮ ಚಿತ್ರವಾಗಿದ್ದರೂ ಅದು 'ರಿಮೇಕ್' ಚಿತ್ರವಾದ್ದರಿಂದ ನಾನು ಅದರ ಬಗ್ಗೆ ಮಾತನಾಡಲೂ ಇಷ್ಟ ಪಡುವುದಿಲ್ಲ..
ಸ್ವಲ್ಪ ಹಿಂದೆ ಹೋಗೋಣ...


~-~

ಶಿಕ್ಷೆಯೋ.. ಭಿಕ್ಷೆಯೋ..

[ ನಾನು ಈಗ ಪರೀಕ್ಷೆಯ ಒತ್ತಡದಲ್ಲಿದ್ದು, ಬ್ಲಾಗನ್ನು ಖಾಲಿ ಬಿಡಬಾರದೆಂದು ಹಿಂದೆ ಎಂದೋ ಬರೆದಿದ್ದ ಈ ಕವನವನ್ನು ನಿಮ್ಮ ಮುಂದಿಡುತ್ತಿದ್ದೇನೆ.. ]
ಹೆತ್ತ ತಂದೆ-ತಾಯಿಗಳು ತಾತ್ಸಾರ ಮಾಡುವುದು

ಒಡಹುಟ್ಟಿದ ಜೀವಗಳು ಪಿಂಡಕ್ಕೆ

ಕಾದ ಕಾಗೆಗಳಂತೆ ಆಗಿರುವುದು

ಒಡನಾಟ ಆಡಿದ ಸ್ನೇಹಿತರೆಲ್ಲ

ಮಿತ್ರದ್ರೋಹಿಗಳಾಗಿ(ದ್ದುದು)ರುವುದು

ನಾ ಏನೂ ತಪ್ಪು ಮಾಡದಿದ್ದರೂ

ಎಲ್ಲರೂ ನನ್ನೆಡೆಗೆ ಬೆರಳು ಮಾಡುವುದು

ಹೃದಯ ಕಲಕುವ ದೃಶ್ಯಗಳು

ಮತ್ತೆ ಮತ್ತೆ ಕಣ್ಣೆದುರಾಗುವುದು

ಒಬ್ಬನೇ ಏಕಾಂತವಾಗಿ ಕುಳಿತು

ಬಿಕ್ಕಿ ಬಿಕ್ಕಿ ಅಳುವಂತಾಗುವುದು

ಎಲ್ಲವನ್ನೂ ನೋಡಿ ದೇವರೇ

ನೀ ನಗುತ್ತಲಿಯೇ ಇರುವುದು

ಇದು ಶಿಕ್ಷೆಯೋ ....? ಇಲ್ಲಾ

ನೀನೆ ಕೊಟ್ಟ ಭಿಕ್ಷೆಯೋ?


ಪರಿಚಯವಿಲ್ಲದವರೆಲ್ಲರೂ

ಆತ್ಮೀಯರಂತಾಗಿರುವುದು

ಕೆಲವೊಮ್ಮೆ ಅಂದುಕೊಂಡಂತೆ ಆಗಿ

ಅದೃಷ್ಟ ಖುಲಾಯಿಸುವುದು

ಹಲವೊಮ್ಮೆ ನಿರೀಕ್ಷೆಗೆ ಮೀರಿದ

ಅನಿರೀಕ್ಷಿತ ಫಲ ನೀಡುವುದು

ಗುರುತು ಇಲ್ಲದವರಿಂದ

ಸೋದರವಾತ್ಸಲ್ಯ ಪಡೆಯುವುದು

ಎಂದೂ ನೋಡದವರೆಲ್ಲಾ...

ಮಮತೆ ವಾತ್ಸಲ್ಯ ತೋರುವುದು

ಒಮ್ಮೊಮ್ಮೆ ಏನೇನೂ ಆಗಿ

ನನ್ನೊಳಗೆ ನಾನೇ ತುಸು ನಾಚಿ

ನೀರಾಗುವ ಕ್ಷಣಗಳು ಬರುವುದು

ಮನಸ್ಸು ಇಚ್ಚೆಬಂದಂತೆ ಮಾಡುವ

ಮಹಾಮರ್ಕಟವಾಗಿರುವುದು

ಇದು ಭಿಕ್ಷೆಯೋ ...ಇಲ್ಲಾ

ನೀನೆ ಕೊಟ್ಟ ಶಿಕ್ಷೆಯೋ ?


~-~

ಶೂ-ಷೋ !!

[ನನ್ನ ಬ್ಲಾಗಿನಲ್ಲಿ ಲೇಖನಗಳಡಿಯಲ್ಲಿ ಇಲ್ಲಿಯವರೆಗೂ ಅನುಭವಮಾಲಿಕೆಗಳನ್ನೇ ಪೋಸ್ಟ್ ಮಾಡಿದ್ದೇನೆ..ಅಂತೆಯೇ ಇದೀಗ ಒಂದು ವಿಭಿನ್ನ ಅನುಭವದ ಪ್ರಸಂಗದ ಬಗ್ಗೆ ಬರೆದು ನಿಮ್ಮ ಮುಂದಿಟ್ಟಿದ್ದೇನೆ..]

..ಎಂದಿನಂತೆ ಬಸ್ಸಿನಲ್ಲಿ ಊರಿಗೆ ಹೋಗುತ್ತಿರಬೇಕಾದರೆ ವಿಶ್ವೇಶ್ವರಯ್ಯ ಪಾರ್ಕ್ ಹತ್ತಿರ ಸ್ಟಾಪ್ ಕೊಟ್ಟಾಗ ಹಾಗೆ ಸುಮ್ಮನೆ ಪಾರ್ಕ್ ಕಡೆ ಗಮನಹರಿಸಿದಾಗ ನನಗೊಂದು ಆಶ್ಚರ್ಯ ಕಾದಿತ್ತು..ಅಲ್ಲಿ ನೂರಾರು ಜನರು ಜಮಾಯಿಸಿದ್ದರು... ಅಲ್ಲಿ ಟಿಬೆಟ್ ನವರು ಶೂ ಪ್ರದರ್ಶನ & ಮಾರಾಟ ಮಾಡ್ತಾ ಇದ್ರು ಅಂತ ತಿಳೀತು... ನಂಗೆ ಅಲ್ಲಿದ್ದ ಜನರನ್ನು ನೋಡಿ, ..ಮಂಡ್ಯದಲ್ಲಿ ಶೂ ತಕೊಳ್ಳೋಕೆ ಇಷ್ಟೊಂದು ಜನಾನ ? ಅದೂ ಕೂಡ ಜೊತೆಗೆ ಮುದುಕರು ಮತ್ತು ಮೋಟರು ಬೇರೆ.. ನಂಗೆ ತುಂಬಾನೇ ಸೋಜಿಗ ಉಂಟಾಯ್ತು...
ಅದಾದ ಸುಮಾರು ದಿನಗಳ ನಂತರ ನಮ್ಮ ಕಾಲೇಜಿನ ಮುಂದೆಯೇ ಅಷ್ಟು ಜನರು ಜಮಾಯಿಸಿದ್ದರು,ಹತ್ತಿರ ಹೋಗಿ ನೋಡಿದರೆ ಅದೇ ಟಿಬೆಟಿಯನ್ನರು ನಮ್ಮ ಕಾಲೇಜಿನ ಮುಂದೆ ಶೂ ಮಾರಾಟ ಮಳಿಗೆ ಹಾಕೊಂಡಿದ್ದರು..
ಆ ಟಿಬೆಟಿಯನ್ನರಲ್ಲಿ ಸುಮಾರು ನಾಲ್ವರು ಹೆಂಗಸರು (ಅವರಲ್ಲಿ ಇಬ್ಬರು ೨೦-೨೨ರ ವಯಸ್ಸಿನವರು,ಒಬ್ಬಾಕೆ ೧೭-೧೮ರ ಹರೆಯದಾಕೆ ಜೊತೆಗೆ ಒಬ್ಬಳು ೩೫-೪೦ ರ ವಯಸ್ಕ ಹೆಂಗಸು ) ಮೂವರು ಗಂಡಸರು (ಎಲ್ಲರೂ ೨೫-೩೦ ರ ಪ್ರಾಯದವರು..)ಆ ಹೆಂಗಸರೆಲ್ಲ ತೆಳುವಾದ ಅವರ ಅಳತೆಗೆ ತುಂಬಾ ದೊಡ್ದದೆನಿಸುವ ಮೇಲುಡುಗೆ ,ಜೊತೆಗೆ ಚರ್ಮಕ್ಕೆ ಅಂಟಿದಂತಿದ್ದ ಜೀನ್ಸ್ ಪ್ಯಾಂಟ್ ತೊಟ್ಟಿದ್ದರು.. ಅವರ ಹಾಕಿದ್ದ ಬಟ್ಟೆಯಲ್ಲೇ ಅವರ ಎದೆಯ,ನಡುವಿನ,ನಿತಂಬಗಳ ಸುತ್ತಳತೆ ಸಿಗುವಂತಿತ್ತು..
ಅವರು ಶೂ ತೋರಿಸಲು ಬಗ್ಗಿದಾಗ ಅವರು ಯಾವುದೇ ಮೇಲಿನ ಒಳಉಡುಪು ಧರಿಸಿರಲಿಲ್ಲ ಎಂದು ತಿಳಿಯಿತು..
ಆಗ ತಿಳಿಯಿತು ಇಷ್ಟು ಜನರೇಕೆ ಬರುತ್ತಿದ್ದಾರೆಂದು!
ಹಲವರು ಬೇಕಂತಲೇ ಅದಾದ ಮೇಲೆ ಇದು,ಇದಾದ ಮೇಲೆ ಅದು ತೋರಿಸಿ ಎಂದು ಅವರನ್ನು ಬಗ್ಗುವಂತೆ ಮಾಡಿ ಕೇವಲ ನೋಡುತ್ತಿದ್ದರೆ ಹೊರತು ಯಾರೂ ಕೈಯಲ್ಲಿ ಹಿಡಿದು ಹೋಗುತ್ತಿರಲಿಲ್ಲ 'ಶೂಗಳನ್ನ !!
ನಾವೂ ಹರೆಯದವರೇ ಆದ್ದರಿಂದ ಅವರ ಎದೆಯೆಡೆಗೆ ಬೀರಿದ ದೃಷ್ಟಿ 'ಬೇರತ್ತ' ಸಾಗಲೇ ಇಲ್ಲ..
[...ಸೆನ್ಸಾರ್..]

ಅಲ್ಲಿದ್ದ ಹದಿಹರೆಯದವಳು ಹಿಂದೆ ತಿರುಗಿದಾಗ ಕಾಣುತ್ತಿದ್ದ ಅವಳ ನಡುವಿನ ದೃಶ್ಯ ಅಲ್ಲಿದ್ದವರೆಲ್ಲರ ನಿದ್ದೆಗೆಡಿಸಿದ್ದಂತು ನಿಜ.!
ನಮ್ಮ ಕಾಲೇಜು ಮುಖ್ಯರಸ್ತೆಯಲ್ಲೇ ಇದ್ದುದ್ದರಿಂದ ಕೆಲವರು ವಾಹನಗಳನ್ನು ನಿಲ್ಲಿಸಿ ಶೂ-ಷೋ ನೋಡಲು ಮುಂದಾಗುತ್ತಿದ್ದರು..
ಅವರು ಅಲ್ಲಿ ಮಳಿಗೆ ಹಾಕಿದ್ದ ಮೂರು ದಿನವಂತೂ ಕಾಲೇಜಿನ ಹುಡುಗರಿಗಂತೂ ಕಣ್ಣು ಗುಳಿ ಬೀಳುವಂಥ ದೃಶ್ಯಗಳು..ಅದೂ ಅಲ್ಲದೆ ಡಿಗ್ರೀ ಕಾಲೇಜು ಬೇರೆ ! ಇನ್ನು ಕೇಳಬೇಕೆ..!/
ಅಂತೂ-ಇಂತೂ ಅಲ್ಲಿ ಶೂಗಳು ಪರವಾಗಿಲ್ಲ ಎನ್ನುವಂತೆ ಖಾಲಿಯಾದವು..
ಕೊಳ್ಳುವವರಿಗೆ ಉತ್ತಮ ಶೂ-ಗಳು,ನೋಡುವವರಿಗೆ ಉತ್ತಮ ಷೋ-ಗಳು ಅಲ್ಲಿ ದೊರೆತವು..
ಕೊನೆಯದಾಗಿ ನನಗೆ..
ಆ ಮಾನಿನಿಯರು ಶೂ ಮಾರಾಟವಾಗಲೆಂದು ಷೋ ಮಾಡಿದರೋ ಅಥವಾ ಅವರ ಉಡುಗೆಯೇ ಹಾಗೋ ಅಥವಾ ಇಂಥ ದೃಶ್ಯಗಳು ಸ್ವಲ್ಪ ಕಡಿಮೆ ಎನಿಸುವಂಥ ಮಂಡ್ಯದಲ್ಲಿ ಅಪರೂಪಕ್ಕೆ ಕಂಡುಬಂದದ್ದರಿಂದ ಜನರು ಹೀಗೆ ಮುಗಿಬಿದ್ದಿದ್ದರೋ ಅಥವಾ ನೋಡುಗರ ದೃಷ್ಟಿಯೇ ಹಾಗೋ... ಇನ್ನೂ ಹಲವಾರು ಪ್ರಶ್ನೆಗಳು ನನ್ನ ಕಣ್ಮುಂದೆ ಬರಹತ್ತಿದ್ದವು..
ಜನ ಏನೆಲ್ಲಾ ಮಾಡ್ತಾರಪ..
ಏನ ಜನ್ಗಳಪ..ಇವ್ರು..!!
ಜನರು ಹೀಗೂ ಇರ್ತಾರ..: ಅಂತ ಯಾರ್ಗೆ ಹೇಳೋಣ. ನೋಡಿದೋರ್ಗ,ತೋರಿಸಿದೋರ್ಗ..!?
ಅವ್ರು ಮಾರಾಟಕ್ಕೆ (ಶೂ) ಹಾಗೆ ಮಾಡ್ತಾ ಇರಬಹುದು.. ಆದ್ರೆ ನಮ್ಮಲ್ಲಿ ಕೆಲವರು ಮಾರಾಟಕ್ಕೆ(ಶೂನಲ್ಲ) ಮಾಡ್ತಾರ ?

~-~

ಕುಡುಕನಾದೆ ನಾ ಕುಡುಕನಾದೆ..

[ಕುಡುಕರ ಬಗ್ಗೆ ಒಂದು ಕವಿತೆ ಬರೆಯಬೇಕೆಂದು ನನ್ನ ಆಪ್ತ ಗೆಳೆಯರು ಹೇಳಿದ್ದರು.ಆದ್ದರಿಂದ ನಾನು ಸಾಧ್ಯವಾದಷ್ಟು ಪ್ರಯತ್ನಿಸಿ ಬರೆದ ಈ ಕವಿತೆ ಈಗ ನಿಮ್ಮಮುಂದೆ...]
ಕುಡುಕನಾದೆ ನಾ ಕುಡುಕನಾದೆ
ಪ್ರೀತಿ ಪ್ರೇಮ ನಂಬಿ
ಕುರುಡಾದ ದುಂಬಿ
ನಾ ಕುಡುಕನಾದೆ..


ಬುದ್ಧಿ ಹೇಳಬೇಕಾದ ಜ್ಞಾನಿ
ಬುದ್ಧಿ ಹೇಳಿಸಿಕೊಳ್ಳುವಂತಾದ ಅಜ್ಞಾನಿ
ನಾ ಕುಡುಕನಾದೆ..


ಸೋದರರ ವಾತ್ಸಲ್ಯ ಉಂಡು
ತಂದೆ-ತಾಯ ಜಪಿಸುತ್ತಿದ್ದ ಜ್ಞಾನಿ
ತಪ್ಪು ಮಾಡಿ ಶಿಕ್ಷೆ ಉಂಡು
ಮೋಸಹೋಗಿ ಕೊರಗುತ್ತಿರುವ ಮೌನಿ
ಸ್ನೇಹಕ್ಕಾಗಿ ಜೀವಿಸಿದ ಹುಂಬತನದ
ಪ್ರೀತಿಗಾಗಿ ಸ್ನೇಹ ಮರೆಸೋ ಜಂಭತನದ
ನಾ ಕುಡುಕನಾದೆ..


ಹೊಸಬೆಳಕು ಬರುವಾಗ
ಕಾರ್ಮೋಡ ಕವಿಸಿಕೊಂಡವ
ನಾ ಕುಡುಕನಾದೆ..


ಪ್ರೇಮದೆದೆಯ ಗೂಡದೀಪ
ಆರಿ ಹೋಗಿ ಕತ್ತಲಾಗಿ
ಒಡೆದ ಗಾಜಬಾಟಲಿಯಂತೆ
ಕನಸೆಲ್ಲ ಚೂರುಚೂರಾಗಿ
ಚುಚ್ಚುತ್ತಿರಲು ಮನವನೀಗ
ನಾ ಕುಡುಕನಾದೆ..


ಕಾಡುತಿರುವ ನೆನಪ ನೆರಳ
ಕತ್ತಲ ಕೋಣೆಲಿಡಲು
ಬೆಳಕ ಬಿಟ್ಟು ಕತ್ತಲಿಗೊರಗಿ
ನಾ ಕುಡುಕನಾದೆ..


ನಂಬಬೇಡ ನಂಬಬೇಡ
ಪ್ರೀತಿ-ಪ್ರೇಮ ನೋವು ನೋಡ
ಮಾಡಬೇಡ ಪ್ರೇಮಕೆಡುಕ
ಆಗಬೇಡ ಬೀದಿ ಕುಡುಕ


~.~


ಅಪ್ಪಾಜಿಯ ನೆನಪ ಬಂಧನದಲ್ಲಿ..


ಪ್ರತಿದಿನ ೫-೬ ರ ಹೊತ್ತಿಗೆ ನಿದ್ರೆಗೆ ಗುಡ್ ಬೈ ಹೇಳಿ ಸೂರ್ಯಂಗೆ ಗುಡ್ ಮಾರ್ನಿಂಗ್ ಹೇಳ್ತಿದ್ದ ನಾನು ಅಂದು ನಿದ್ರೆ ಮುಗಿಸಿ ಹೇಳುವಷ್ಟರಲ್ಲಿ ಸಮಯ ೬-೩೦ ಆಗಿತ್ತು.. ರಾತ್ರಿ ಕಂಡ ಕನಸಿನ ಚಿತ್ರಣ ಇನ್ನೂ ಕಣ್ಣಿನ ಪರದೆ ಸರಿಸಿ ಹೊರಟಿರಲಿಲ್ಲ..
ಎದ್ದ ತಕ್ಷಣ ಮಲಗಿದ್ದಲ್ಲಿಂದಲೇ ದೇವರ ಚಿತ್ರ ನೋಡಿ,ನಮಿಸಿ ಪಕ್ಕದಲ್ಲಿದ್ದ ಮೊಬೈಲ್ ಫೋನ್ ಕೈಗೆತ್ತಿಕೊಂಡಾಗ 'No space for new message' ಎಂದು ಮಿಂಚಿ ಮಿಂಚಿ ಮರೆಯಾಗುತ್ತಿತ್ತು.. ಇನ್ ಬಾಕ್ಸ್ ನಲ್ಲಿದ್ದ ಸುಮಾರು ಹತ್ತು ಸಂದೇಶಗಳನ್ನು ಡಿಲೀಟ್ ಮಾಡಿದ ಕೂಡಲೇ ೮-೧೦ ಸಂದೇಶಗಳು ನನ್ನ ಮೊಬೈಲ್ ಫೋನ್ ಗೆ ಕ್ಷಣಮಾತ್ರದಲ್ಲಿ ಬಂದುಕೂತವು..
ಮೊದಲೆರಡು ಸಿ.ಅಶ್ವಥ್ ರ ಸಾವಿಗೆ ಸಂಬಂಧ ಪಟ್ಟಿದ್ದವು..
ಹಾಗೆಯೇ, ಪ್ರತಿಯೊಂದನ್ನು ತೆರೆದು ನೋಡುತ್ತಿದ್ದಂತೆ ಕಣ್ಣಲ್ಲಿದ್ದ ಕನಸಿನ ಉಳಿಕೆ ಮರೆಯಾಗಿ ಕಣ್ಣುಗಳು ಅರಳಿನಿಂತವು,ಆಶ್ಚರ್ಯ ಉಂಟಾಯಿತು..
ವಿಷ್ಣುವರ್ಧನ್ ಸತ್ತ್ಹೊಗಿದಾರೆ,..ವಿಷ್ಣು ಇನ್ನಿಲ್ಲ.. ಎಂಬ ಹಲವಾರು ಸಂದೇಶಗಳನ್ನು ನೋಡಿ ನಾನು ವಿಷ್ಣುವರ್ಧನ್ ಅಭಿಮಾನಿಯೆಂದು ತಿಳಿದಿದ್ದ ನನ್ನ ಗೆಳೆಯ-ಗೆಳತಿಯರು ನನ್ನನ್ನು ಮೂರ್ಖನನ್ನಾಗಿ ಮಾಡುತ್ತಿದ್ದಾರೆ ಎನ್ನಿಸಿತು..
ಆದ್ರೆ ಎಲ್ಲರೂ ಒಟ್ಟಿಗೆ..!!?
ತಕ್ಷಣವೇ, ನಮ್ಮ ಮನೆಯಲ್ಲಿ ಟಿವಿ ಇಲ್ಲದಿದ್ದುದುರಿಂದ,ಒಂದೇ ಮನೆಗೆ ಅಂಟಿಕೊಂಡಿದ್ದ ದೊಡ್ಡಪ್ಪನ ಮನೆಗೆ ಕೂಗಿ 'ಅತ್ತಿಗೆ tv9 ಆನ್ ಮಾಡಿ ಎಂದೆ..
'ಅಲ್ಲಿಂದ ಕೇಳಿಬಂದ ಅತ್ತಿಗೆಯ ಮಾತುಗಳು ನನ್ನ ಊಹೆಯನ್ನು ಸುಳ್ಳುಮಾಡಿದ್ದವು.., ತಕ್ಷಣದಲ್ಲಿ ಕನ್ನಡಿಯಲ್ಲಿ ಮುಖ ನೋಡದೆ ಟಿವಿ ಮುಂದೆ ಹೋರಾಟ ನನಗೆ ಟಿವಿ ಪರದೆಯ ಮೇಲೆ 'ವಿಷ್ಣುವರ್ಧನ್' ರ ಪಾರ್ಥೀವ ಶರೀರದ ದರ್ಶನವಾಗಿ ಕಣ್ಣುಗಳು ತಾನೆತಾನಾಗಿ ತೇವಗೊಂಡವು,ದುಃಖ ಇಮ್ಮಡಿಸಿ ಇಮ್ಮಡಿಸಿ ಬರುತಿತ್ತು... ವಿಷ್ಣು ಸಾವಿನ ಸುದ್ದಿ ನಂಬಲಾರದ ಸತ್ಯವಾಗಿತ್ತು..
ಅದೇನೋ ನಾನು ಚಿಕ್ಕಂದಿನಿಂದಲೂ ವಿಷ್ಣುವರ್ಧನ್ ಅವರನ್ನು ತುಂಬಾನೇ ಹಚ್ಚಿಕೊಂಡಿದ್ದೆ,ಅವರ ಚಲನಚಿತ್ರಗಳೆಂದರೆ ನನಗೆ ಅಚ್ಚುಮೆಚ್ಚು.., ಅವರಂತೆ ಕೈಬಳೆ ಧರಿಸಿ ಮೆರೆದಿದ್ದು ಉಂಟು.
ತುಂಬಾನೇ ಹಚ್ಚಿಕೊಂಡವರನ್ನು ಕಳೆದುಕೊಂಡಾಗ ಆಗುವ ಅನುಭವ ನನಗೆ ಅಂದು ಮೊದಲನೆಯದಾಗಿತ್ತು..ವಿಷ್ಣು ಅವರನ್ನು ಎಂದಾದರೂ ಕಣ್ತುಂಬ ನೋಡಿ ಕೈಕುಲುಕಬೇಕು ಎಂದುಕೊಂಡಿದ್ದ ನನ್ನ ಕನಸು ಅಂದು ಎಳ್ಳು-ನೀರು ಬಿಡಿಸಿಕೊಂಡು ಕನಸಾಗೆ ಉಳಿಯಿತು..
ಪಕ್ಕದಲ್ಲಿಯೇ ಕೂತು ಮಾತನಾಡುತ್ತಿದ್ದವರು ಕಣ್ಮುಚ್ಚಿ ಬಿಡುವಷ್ಟರಲ್ಲಿ ಅದೃಶ್ಯವಾದಂತೆ ಭಾಸವಾಗುತ್ತಿತ್ತು,ಕಣ್ಣ ಮುಂದೆ ಶವ ಕಾಣುತ್ತಿದ್ದರೂ 'ಅದು ಸುಳ್ಳು..' ಎಂದು ಮನಸ್ಸು ಹಾತೊರೆಯುತ್ತಿತ್ತು.. ಆ ದಿನ ನನ್ನ ಜೀವನದಲ್ಲಿ 'ಕನ್ನಡಿ ನೋಡದ ದಿನ' ವಾಗೆ ಉಳಿದುಹೋಗಿದೆ..
ಇಂದಿಗೆ ವಿಷ್ಣು ಅವರ ದೇಹ ಮಣ್ಣಾಗಿ ನೂರಾರು ದಿನಗಳೇ ಸಂದಿವೆ,ಅದರೂ ಆ ಸತ್ಯ ಸುಳ್ಳೇನೋ ಎಂದೆನಿಸುತ್ತಿದೆ..
ಭಿತ್ತಿಪತ್ರಗಳಲ್ಲಿ ಮೀಸೆ ತಿರುಗುತ್ತಿರುವ ನಾಗಮಾಣಿಕ್ಯನ ನೋಡಿದರೆ ಮೈ ರೋಮಗಳು ನಿಂತು,ತುಟಿಯಲ್ಲಿ ಸುಳಿದಾಡುವ ನಗು, ಅದು 'ಮರೆಯಾಗಿ ಹೋದ ಮಾಣಿಕ್ಯ' ಎಂಬ ಸತ್ಯ ತಿಳಿಯುತ್ತಿದ್ದಂತೆ ಮಾಯವಾಗುತ್ತದೆ..ಅವರು ನಟಿಸಿರುವ ಚಿತ್ರಗಳ ಹಾಡುಗಳು ಕೇಳಿಬಂದರೆ ಇದ್ದಕ್ಕಿದ್ದಂತೆ ಭಾವುಕನಾಗುತ್ತೇನೆ..,ಅವು ಜೀವವಿಲ್ಲದ ಹಾಡುಗಳೇನೋ ಎನಿಸುತ್ತದೆ..
ಅದೆಷ್ಟೋ ಅಭಿಮಾನಿದೇವರುಗಳು ಅವರಿಗೆ ಏನೇನೋ ಹೃದಯದ ಕಾಣಿಕೆ ನೀಡಬೇಕೆಂದು ಕನಸು ಕಟ್ಟಿದ್ದರು,ಆದರೆ ಅವರ ಕನಸನ್ನು ನನಸಾಗಿಸಲು ಅವಕಾಶ ಕೊಡದೆ ಕೇವಲ ಹೃದಯವನ್ನು ಬಸಿದು ಕಣ್ಣಿಂದ ಒಂದು ಬಿಂದುವನ್ನು ಮಾತ್ರ ಅಪ್ಪಾಜಿಗೆ ಅರ್ಪಿಸಲು ಅವಕಾಶ ಮಾಡಿಕೊಟ್ಟ ವಿಧಿಯೇ ನಿನಗಿದು ಸರಿಯೇ..
ಅಪ್ಪಾಜಿ ಇಲ್ಲದ ಹೊಸವರ್ಷದ ಸಂಭ್ರಮ ನಮಗೇಕೆ ಎನ್ನುವ, ಕೋಟಿಗೊಬ್ಬನನ್ನು ಯಜಮಾನನನ್ನಾಗಿ ಮಾಡಿಕೊಂಡಿದ್ದ, ಅದೆಷ್ಟೋ ಕೋಟ್ಯಂತರ ಅಭಿಮಾನಿಗಳ ಕಣ್ಣೀರು ಇಷ್ಟು ಬೇಗ ನಿನಗೆ ಬೇಕಾಯಿತೇ,ಅವರ ಹೃದಯಕ್ಕೇ ಬೆಂಕಿ ಇಟ್ಟು ಆ ಬೆಂಕಿಯ ಆರಿಸಲು ಈ 'ಕಣ್ಣೀರಿನ ಕೊಯ್ಲು' ಮಾಡಿದೆಯ..
ಸಾವಿರಾರು ಅಂದಾಭಿಮಾನಿಗಳನ್ನು ಒಂಟಿಕುಡುಕರಾಗಿಸಿ,ಕೋಟಿ ಕೋಟಿ ಹೃದಯಗಳ ಒಡೆದು ಅವರನ್ನು ಒಂಟಿಯಾಗಿಸಬೇಕೆಂದು ಯೋಚಿಸಿ ಅಭಿಮಾನಿಗಳ ಹೃದಯಸಿಂಹಾಸನ ಕೋಟೆಯನ್ನು ಭೇದಿಸಿ ಕತ್ತಲಲ್ಲಿ ಬಂದು ವಿಷ್ಣುವನ್ನು ಕರೆದೊಯ್ದೆಯ,ಪುಣ್ಯಾತ್ಮನೊಬ್ಬನಿಗಾಗಿ ಹುಡುಕಾಡಿ ಸಿಗದಿರಲು ಅಪ್ಪಾಜಿಯನ್ನೇ ಕರೆದೊಯ್ದೆಯ,ಹೇಳು ಏಕೆ ಅಪ್ಪಾಜಿಯನ್ನೇ ಕರೆದೊಯ್ದೆ.
ಮುತ್ತೇ ಇಲ್ಲದ ಕಡಲ ನೀ ನೋಡಿರುವೆಯ.. ನೋಡೀಗ ಅಭಿಮಾನಿಗಳ ಕಡಲಲ್ಲಿ ಮುತ್ತೇ ಇಲ್ಲವಾಗಿದೆ.
ಅಭಿಮಾನಿಗಳೆಲ್ಲ ಈಗ ಗಂಧ ಚೆಲ್ಲದ ಹೂಗಳಂತೆ ಇದ್ದಾರೆ..
ಇಲ್ಲಿ ಕಂಗಾಲಾಗುವ ಅಭಿಮಾನಿಗಳ ಬಗ್ಗೆ,ಜೀವದ ಗೆಳೆಯರ ಬಗ್ಗೆ ತುಸು ಮುಂದಾಲೋಚನೆ ನೀ ಮಾಡದೇ ಹೋದೆಯಾ,ನಮ್ಮ ಶಾಪ ನಿನಗೆ ತಟ್ಟದಿರದು ಬ್ರಹ್ಮನೇ ತಟ್ಟದಿರದು..
ನಿನ್ನೀ ಘೋರತನದಿಂದ ಯಮನ ಕಣ್ಣೂ ಒದ್ದೆಯಾದದ್ದು ಕಾಣಲಿಲ್ಲವೇ..ವಿಧಿಯೇ ನೀ ನಗದಿರು.., ಮಣ್ಣಾಗಿರುವುದು ದೇಹ ಮಾತ್ರ !!
ಘೋರವರ್ಷ ಹೇ ೨೦೦೯ ನಿನಗೆ ಜೊತೆಗಾಗಿ ಕರೆದೊಯ್ಯಲು ಯಾರು ಸಿಗಲಿಲ್ಲವೇ.
ಅಪ್ಪಾಜಿ ನೆನಪು ಚಿರಾಯುವಾಗಲಿ..

-()-()-()-
ಅಪ್ಪಾಜಿಯ ಅಗಲಿಕೆಯಿಂದ ತುಂಬಾ ನೊಂದ ನನ್ನ ಆಪ್ತ ನಾಗೇಂದ್ರಕುಮಾರ್ (ನಾಗ್ ವಿಷ್ಣು) ಅವರ ಮಾತುಗಳು..:
ವಿಷ್ಣುವರ್ಧನ್ ಅವರು ಕನ್ನಡ ಚಿತ್ರರಂಗದಲ್ಲಿ 'ಮೇಣದ ಬತ್ತಿ'ಯಂತಿದ್ದು ತಾನು ಅಳುತಿದ್ದರೂ ಚಿತ್ರರಂಗಕ್ಕೆ ಬೆಳಕನ್ನು ನೀಡಿದ ಕರುಣಾಮಯಿ..
ಅವರೊಬ್ಬ ಅದ್ಭುತ ಕಲಾವಿದ..
ವಿಷ್ಣು ಅವರು ಕನ್ನಡದ ಸಾಯಿಬಾಬರಂತಿದ್ದರು..
ಅವರ ಅಗಲಿಕೆಯಿಂದ ನನ್ನ ಹೃದಯಕ್ಕೆ ಸುನಾಮಿ ಅಪ್ಪಳಿಸಿದೆ. ಹೃದಯಕ್ಕೆ ಬರಸಿಡಿಲು ಬಡಿದು ಮೋಡ ಕವಿದ ಕತ್ತಲೆ ತುಂಬಿದೆ, ಅವರ ಚಿತ್ರಗಳಿಗೆ ಇದೀಗ ಜೀವವೆ ಇಲ್ಲವೆನಿಸುತ್ತಿದೆ..
ಗಣೇಶನಿಲ್ಲದ ದೇವಸ್ಥಾನದಂತೆ,ವಿಷ್ಣು ಮಹಾರಾಜನಿಲ್ಲದ ಕನ್ನಡ ಚಿತ್ರರಂಗ ಹಾಳುಕೊಂಪೆಯಷ್ಟೇ ಸರಿ..
ಅಂದು ಅಣ್ಣ ಸತ್ತಾಗ ನಾನೇ ಸತ್ತಿದ್ದರೆ ಚೆನ್ನಾಗಿರುತ್ತಿತ್ತು ಎಂದೆನಿಸಿತು.. ಏಕೆಂದರೆ ನಾ ಸತ್ತರೆ ದುಃಖ ಪಡುತ್ತಿದ್ದವರು ಕೆಲವರಷ್ಟೆ.
"ವಿಷ್ಣು ಅಣ್ಣ ನೀ ಮತ್ತೆ ಹುಟ್ಟಿ ಬಾ.."
ನೀನಿಲ್ಲದೆ ನಮ್ಮ ಹೃದಯ ಸಿಂಹಾಸನ ಬರಿದಾಗಿ ಹೃದಯದಲ್ಲಿ ಮಾಸದ ರಂಧ್ರವಾಗಿದೆ..
~.~

ಹೂ ಚೆಲ್ಲಿ ಕರೆದಿರುವೆ..


[ ನಾನು ತುಂಬಾ ಸಂಕಷ್ಟಕ್ಕೆ ಸಿಲುಕಿ ತುಂಬಾ ನೊಂದು ಏಕಾಂಗಿಯಂತೆ ಇದ್ದಾಗ ಬರೆದ ಕವಿತೆ ನಿಮ್ಮ ಮುಂದೆ.. ]


ಢಮರೆ ಢಮರೆ ಢಮ ಢಮಢಮ ಢಮಢಮ
ಢಮರೆ ಢಮರೆ ಢಮ ಢಮಢಮ ಢಮಢಮ
ಎದ್ದೇಳು ಎದ್ದೇಳು ನೀನು ಎದ್ದೇಳು
ಹರಶಿವನೆ ಪರಶಿವನೇ
ಏಳು ಏಳು ಎದ್ದೇಳು

ಏಕೆ ನೀನು ಅಲ್ಲಿರುವೆ
ನಾನು ಇಲ್ಲಿ ನೊಂದಿರುವೆ


ಬದುಕಲು ಬೇಕು ಗುರಿಯೆಂದೆ
ನೀ ಕೊಟ್ಟಿದ್ದು ಕೆಡಿಸೋ ಮನಸೊಂದೆ

ಹೆತ್ತವರೆಲ್ಲ ವೈರಿಗಳಾಗಿ
ಕಾಣುತಿಹರು ಕಣ್ಣೆದುರಲ್ಲಿ
ಸೋದರತ್ವವು ದ್ವೇಷವಾಗಿ
ಕಾಡುತಿಹುದು ನನ್ನನಿಲ್ಲಿ


ಸ್ನೇಹಿತರೆಲ್ಲ ಬಂಧುಗಳೆಲ್ಲ
ಎತ್ತ ಹೋದರೂ ನನಗಿಲ್ಲ


ಪ್ರೇಮದ ದೀವಿಗೆ ನೀ ಕೊಟ್ಟು
ಕಾಮದ ಬೆಂಕಿ ಹಚ್ಚಿರುವೆ
ಜ್ಞಾನದ ಬುತ್ತಿ ನೀ ಕೊಟ್ಟು
ಕನಸನ್ನು ಇನ್ನು ಉಳಿಸಿರುವೆ

ತಪ್ಪನು ಮಾಡಿಸಿ ನಗುತಿಹ ಶಿವನೇ
ಶಿಕ್ಷೆಯ ನೀಡಿ ಹೊರಟಿರೊ ಹರನೇ
ನಿನ್ನಯ ಮೇಲೆಯೇ ಎಲ್ಲ ಭಾರ
ಬಂದು ನೀಡೋ ಪರಿಹಾರ

ನಿನ್ನಯ ದಾರಿಯ ಕಾದಿರುವೆ
ಹೂ ಚೆಲ್ಲಿ ಕರೆದಿರುವೆ
ಏಕೆ ನೀನು ಅಲ್ಲಿರುವೆ
ನಾನು ಇಲ್ಲಿ ನೊಂದಿರುವೆ
~.~ ~.~ ~.~ ~.~ ~.~ ~.~ ~.~

ಬೇವುಂಡು ಬೆಲ್ಲದ ತುಣುಕಿಗಾಗಿ..


[ಸೂಚನೆ:ಹಿಂದೆ ನಾ ಬರೆದಿದ್ದ "ಇದು ನನ್ನಾ.. ಕಥೆ" ಸ್ವಲ್ಪ ದೊಡ್ದದೆನಿಸಿ ಹಲವರು ಇನ್ಮುಂದೆ ಸ್ವಲ್ಪ ಚಿಕ್ಕದಾಗಿರಲಿ ಎಂಬುದಾಗಿ ಅಭಿಪ್ರಾಯ ತಿಳಿಸಿದ್ದರು,ಅಂತೆಯೇ ಸಾಧ್ಯವಾದಷ್ಟು ಚಿಕ್ಕದಾಗಿ ಮಾಡಿದರೂ ಈ ಬರಹ ತುಸು ದೊಡ್ದದೆನಿಸುತ್ತಿದೆ.. ಎಲ್ಲರೂ ಸಹಕರಿಸಿರಿ..]


''ಈ ಬಾಳು ಬೇವು-ಬೆಲ್ಲ
ಎಲ್ಲಾನೂ ಸವಿಲೇಬೇಕು..''ಕಳೆದ ಸಂವತ್ಸರದ ಸಿಹಿ-ಕಹಿ ಅನುಭವಗಳನ್ನು ಮೆಲುಕು ಹಾಕುತ್ತ ಹೊಸ ಸಂವತ್ಸರಕ್ಕೆ ಕಾಲಿಡುತ್ತಿರುವ ನನ್ನೆಲ್ಲ ಬಾಂಧವರಿಗೂ "ಹೊಸ ವರ್ಷ ಯುಗಾದಿ ಹಬ್ಬದ ಹಾರ್ದಿಕ ಶುಭ ಆಶಯಗಳು..
"ಬದುಕಿನಲ್ಲಿ ಕಷ್ಟ-ಸುಖಗಳು ಸಹಜ.., ಕಷ್ಟದ ದಾರಿ ಬಂದಾಗ ಮುಂದೆ ಸುಖದ ದಾರಿ ಇದ್ದೇ ಇರುತ್ತದೆ,ಆದರೆ ಆ ಸುಖದ ಹಂತ ತಲುಪಲು ತಾಳ್ಮೆಯಿಂದ ಕಷ್ಟದ ದಾರಿಯನ್ನು ಸವೆಸಲೇಬೇಕು..
ಕಳೆದೆರಡು ವರ್ಷಗಳು ಜೀವನದ ಮೆಟ್ಟಿಲೇರುವ ದಾರಿಯಲ್ಲಿ ನನ್ನನ್ನು ಹೆಚ್ಚಾಗಿಯೇ ಬೀಳಿಸಿವೆ.. ಆ ಕಹಿ ಅನುಭವಗಳನ್ನು ನಿಮ್ಮ ಮುಂದಲ್ಲದೆ ಇನ್ಯಾರ ಮುಂದೆ ಹಂಚಿಕೊಳ್ಳಲಿ ಹೇಳಿ.

2008 ರಲ್ಲಿ ಅನಿರೀಕ್ಷಿತ ತಿರುವು ಕಂಡ ನನ್ನ ಜೀವನ..:ಹಳ್ಳಿಯಲ್ಲಿ ಹೊಲ-ಗದ್ದೆ ಕೆಲಸ ಮಾಡ್ಕೊಂಡು ಎಸ್.ಎಸ್.ಎಲ್.ಸಿ. ಮುಗಿಸಿದ ನಾನು, ನಮ್ಮೂರಿನಲ್ಲೇ ಆಗಲೇ ಓದುತ್ತಿದ್ದವರಂತೆಯೇ ದಿನಾಗಲೂ ಬಸ್ಸಿನಲ್ಲಿ ಊರಿಗೂ-ನಗರದ ಕಾಲೇಜಿಗೂ ಪ್ರಯಾಣಿಸುತ್ತ ಕಾಲೇಜು ಶಿಕ್ಷಣ ಮುಗಿಸುತ್ತೇನೆ ಎಂದುಕೊಂಡಿದ್ದೆ...
ಆದರೆ,ನನ್ನ ಜನ್ಮಜರು ನಮಗೆ(ನನ್ನ ಒಡಹುಟ್ಟಿದವರನ್ನು ಸೇರಿಸಿಕೊಂಡು) ಉಜ್ವಲ ಭವಿಷ್ಯ ರೂಪಿಸಿಕೊಡುವ ಉದ್ದೇಶದಿಂದ ಪಟ್ಟಣಕ್ಕೆ ಬಂದು ಜೊತೆಯಲ್ಲೇ ಇದ್ದುಕೊಂಡು ಓದಿಸಬೇಕೆಂಬ ದಿಢೀರ್ ನಿರ್ಧಾರ ಕೈಗೊಂಡರು.. ಅಂತೆಯೇ ಪಟ್ಟಣದಲ್ಲಿ ವಾಸ ಆರಂಭವಾಯಿತು.. ಬವಳಿಕೆ ಕಡಿಮೆ ಇದ್ದು,ವ್ಯವಹಾರಿಕ ಜೀವನದಲ್ಲಿ ತುಸು ದಡ್ದನೆ ಆಗಿದ್ದ ನನಗೆ ಹೊಸ ಸ್ಥಳ,ಹೊಸ ಜನರು, ಹೊಸ ಜೀವನದ ಹೊಂದಾಣಿಕೆ ಮೊದಮೊದಲು ಕಷ್ಟವೆನಿಸಿದರೂ ನಂತರದಲ್ಲಿ ಹೊಂದಿಕೊಂಡಿತು.. ಯಾರ ಪರಿಚಯವಿಲ್ಲದ ನಾನು ಕಾಲೇಜು-ಮನೆ-ಪಾಠ-ಓದು ಇಷ್ಟರಲ್ಲೇ ಅರ್ಧ ವರ್ಷ ಕಳೆದೆ,ನಂತರದಲ್ಲಿ ಹುಡುಗರ ಸ್ನೇಹವಾಯಿತು.
ಕಾಲೇಜು ಅಂದಮೇಲೆ ಹುಡುಗರ ಸಂಘ ಇರುತ್ತದೆ ಅಲ್ಲವೇ, ಅದೂ ಅಲ್ಲದೆ ನಗರದಲ್ಲಿ ಬೇರೆ ಇದ್ದೇನಲ್ಲ ,ಹುಡುಗರ ಸಹವಾಸ ತುಸು ಹೆಚ್ಚೇ ಆಯಿತು..
ಗುರುವೃತ್ತಿಗೆ ಅನರ್ಹರಾದ ಗುರು ಎನಿಸಿಕೊಂಡಿದ್ದವರನ್ನೇ ಚಿಕ್ಕಂದಿನಿಂದಲೂ ನೋಡುತ್ತಿದ್ದ ನನಗೆ ಇಲ್ಲಿಯೂ ಅದೇ ಪುನರಾವರ್ತನೆ ಆದರೂ ಒಬ್ಬ ಶ್ರೇಷ್ಠ ಗುರುಗಳು ನನಗೆ ದೊರೆತಿದ್ದು ನನ್ನ ಪುಣ್ಯವೇ ಸರಿ., ಅವರಿಂದ ಜ್ಞಾನಬುತ್ತಿ ಸಂಪಾದಿಸುವುದರ ಜೊತೆಗೆ ಜೀವನಕ್ಕೆ ಅವಶ್ಯಕವಾದ ಸಂಸ್ಕಾರ,ನಡತೆ.. ಮುಂತಾದ ಅಂಶಗಳನ್ನು ಕಲಿತ ನಾನು ಅವರ ಮಾರ್ಗದರ್ಶನ ಅನುಸರಿಸಲು ಶ್ರಮಿಸಿ,ಸೋತು,ಶ್ರಮಿಸುತ್ತಿದ್ದೇನೆ... ನಾನು ಈಗ ತುಸುವಾದರೂ ಮುಂದೆ ಬಂದಿದ್ದೇನೆ ಎಂದರೆ ಅವರ ಮಾರ್ಗದರ್ಶನವೇ ಕಾರಣ ಎಂದರೆ ತಪ್ಪಿಲ್ಲ..
ನೋಡಲು ಸಣ್ಣವನಾದರೂ ಮಾತಿನಲ್ಲಿ ಮಾತ್ರ ಯಾರಿಗೂ ಸೋಲಲಿಚ್ಚಿಸದಿದ್ದ ನನ್ನ ಪುಂಡ ಪ್ರದರ್ಶನ ಒಮ್ಮೆ ಕಾಲೇಜಿನ ಅಧ್ಯಾಪಕರ ಮುಂದೆಯೂ ನಡೆದಿದ್ದರಿಂದ ನನಗೆ ಪುಂಡರ ಸಹವಾಸವು ಹೆಚ್ಚಿತು,ಪುಂಡರ ಸಹವಾಸ ನನ್ನ ಓದಿಗೆ ತೊಂದರೆಯೇನಾಗಿರಲಿಲ್ಲ....
ಇವೆಲ್ಲದರ ನಡುವೆ ಮೊದಲ ವರ್ಷದ ನನ್ನ ಫಲಿತಾಂಶ ಎಲ್ಲರ ನಿರೀಕ್ಷೆಯನ್ನೂ ಮೀರಿತ್ತು...
ಜೀವನದಲ್ಲಿ ಎರಡನೇ ವರ್ಷದ ಪಿ.ಯು. ಮುಖ್ಯ ಘಟ್ಟ ಎಂಬ ನನ್ನ ಗುರುಗಳ ಮಾತು ನನ್ನನ್ನು ಪದೇ ಪದೇ ಎಚ್ಚರಿಸುತ್ತಿದ್ದ ಫಲವಾಗಿ ಎರಡನೇ ವರ್ಷದ ಪಿ.ಯು. ಆರಂಭದಲ್ಲಿ ನನ್ನ ಗುರಿಯನ್ನು ಸಾಧಿಸಲು ನಾನು ಪಡುತ್ತಿದ್ದ ಶ್ರಮ ನನ್ನ ಕೈಯಲ್ಲಿ ದಾಖಲೆ ಬರೆಸುವಷ್ಟು ಶರವೇಗದಲ್ಲಿತ್ತು.., ಅದರ ಪರಿಣಾಮವಾಗಿ ನನಗೆ ಎಲ್ಲ ಕಡೆಯಿಂದಲೂ ಪ್ರಶಂಸೆಗಳೂ ಬರುತ್ತಾ ನನ್ನಲ್ಲಿ ಇನ್ನಷ್ಟು ಉತ್ಸಾಹ ತುಂಬುತ್ತಿದ್ದವು..

ಆರಂಭವಾಯ್ತು ಕೆಟ್ಟ ಘಳಿಗೆ..:ಹೀಗಿದ್ದಾಗ ಒಂದು ದಿನ ಗೆಳೆಯನ ಮನೆಯಲ್ಲಿ, ನನ್ನ ಜೀವನದಲ್ಲಿಯೇ ಮೊದಲಬಾರಿಗೆ,(ಅಲ್ಲಿಯವರೆಗೂ ಕೇವಲ ಕೇಳಿದ್ದೆ,ಓದಿದ್ದೆ) ನೋಡಿದ ಅಶ್ಲೀಲ ಸಿನಿಮಾ ಚಿಕ್ಕಂದಿನಿಂದ ನನಗಿದ್ದ ಲೈಂಗಿಕತೆಯ ಆಸಕ್ತಿಯನ್ನು ಹೆಚ್ಚುವಂತೆ ಮಾಡಿ ನನ್ನ ಮನಸನ್ನು ಸ್ಥಿಮಿತ ಕಳೆದುಕೊಳ್ಳುವಂತೆ ಮಾಡಿತು.. ಒಂದೆರಡು ದಿನ ಕಾಮಾಂಧನಾಗಿ ಅವನ ಹತ್ತಿರವಿದ್ದ ಎಲ್ಲ ಅಶ್ಲೀಲ ಸಿನಿಮಾಗಳನ್ನು ವೀಕ್ಷಿಸಿದ ನಾನು, ಅಷ್ಟೇ ಬೇಗ ಅದರ ಕಡೆ ಗಮನ ಬಿಟ್ಟು ಓದಿನ ಕಡೆಗೆ ಹೆಚ್ಚಾಗಿ ಗಮನ ಹರಿಸಲು ಮುಂದಾದೆ..
ನನ್ನಲಿ ಚಟವಿತ್ತು,ಹಣವಿತ್ತು. ನನ್ನ ಗೆಳೆಯನೊಬ್ಬನ ಹತ್ತಿರ ಚಟವಿತ್ತು, ಹಣವಿರಲಿಲ್ಲ..ಹಾಗಾಗಿ ನನ್ನಿಂದ ಹಣ ಖರ್ಚು ಮಾಡಿಸಿ ಅವನೂ ತನ್ನಾಸೆ ತೀರಿಸಿಕೊಳ್ಳುವ ಉದ್ದೇಶವಿಟ್ಟುಕೊಂಡು ನನ್ನನ್ನು ಸೈಬರ್ ಲೋಕಕ್ಕೆ ಪರಿಚಯಿಸಿದ್ದ..(ಅವನು ಹಾಗೆ ಮೊದಲೇ ಯೋಜನೆ ಹಾಕಿದ್ದನೆಂದು ಇತ್ತೀಚಿಗೆ ತಿಳಿಯಿತು/),ಅಲ್ಲಿಯವರೆಗೆ ನನಗೆ ಅಂತರ್ಜಾಲದ ಬಗ್ಗೆ ಸ್ವಲ್ಪವೂ ತಿಳಿದಿರಲಿಲ್ಲ... ನಂತರದಲ್ಲಿ ನನಗೆ ಅಂತರ್ಜಾಲದ ಬಗ್ಗೆ ಒಲವು ಮೂಡಿತು...
ದುರುದ್ದೇಶದಿಂದ ಸೈಬರ್ ಲೋಕಕ್ಕೆ ಕಾಲಿರಿಸಿದ್ದ ನಾನು ಕ್ರಮೇಣ ಆರ್ಕುಟ್ ಕಡೆ ಮುಖ ಮಾಡಿದೆ... ಮೊದಲ ವರ್ಷದಿಂದ ಅಂದಿನ ದಿನದ ಓದು ಮುಗಿಸಿ ಒಂಟಿಯಾಗಿ ಕೂತು ಚಿಂತನೆ ನಡೆಸುವುದನ್ನು ಅಭ್ಯಾಸ ಮಾಡಿಕೊಂಡಿದ್ದ ನನಗೆ ಆ ಸಮಯದಲ್ಲಿ ಬೇಸರ ಕಳೆಯಲು ಆರ್ಕುಟ್ ಜೊತೆಯಾಯಿತು... ಆದರೆ ಅದರ ಸೆಳೆತ ಆರ್ಕುಟ್ ಲೋಕ ನನ್ನನ್ನು ವಶಪಡಿಸಿಕೊಳ್ಳುವಂತೆ ಮಾಡಿತು.. ಆರ್ಕುಟ್ ವ್ಯಸನಾಸಕ್ತನಾದ ನಾನು ಕ್ಲಾಸ್ಗೆ,ಮನೆಪಾಠಕ್ಕೆ ಚಕ್ಕರ್,ನೋಟ್ಸ್ ಇನ್ ಕಂಪ್ಲೀಟ್, ಟೆಸ್ಟ್ ಗೆ ಆಬ್ಸೆಂಟ್.. ಹೀಗೆ ತಪ್ಪುಗಳ ಸರಣಿಯನ್ನೇ ಶುರು ಮಾಡಿದೆ.. ಪರಿಣಾಮವಾಗಿ ನನ್ನ ಇಷ್ಟ ಗುರುಗಳಿಂದಲೇ ಬೈಗುಳ, ನನ್ನ ಮೇಲೆ ಭರವಸೆ ಇಟ್ಟಿದ್ದ ಕಾಲೇಜು ಅಧ್ಯಾಪಕ ವೃಂದರ ಹೀಯಾಳಿಕೆ, ಮನೆಯವರ ಚುಚ್ಚುಮಾತುಗಳು,ಜೊತೆಗೆ ಬದಲಾದ ಸ್ನೇಹಿತರ ನಡೆ-ನುಡಿ.... ನನ್ನ ಮನಸನ್ನು ಛಿದ್ರಗೊಳಿಸಿದವು... ನನಗೆ ಓದುವುದರ ಬಗ್ಗೆ ಆಸಕ್ತಿ ಹೊರಟೆ ಹೋಯಿತು.. ಎಷ್ಟೇ ಪ್ರಯತ್ನ ಮಾಡಿದರೂ ಓದುವುದರ ಬಗ್ಗೆ ಒಲವು ಮೂಡಿಸಿಕೊಳ್ಳಲಾಗದೆ ಹಣೆಯಲ್ಲಿ ಬರೆದಂತಾಗುತ್ತದೆ ಎಂಬ ನಿರ್ಧಾರವನ್ನು ಮನದಲ್ಲಿ ಆಳವಾಗಿ ತುಂಬಿಕೊಂಡೆ...
ಇದರ ನಡುವೆ ಶಾಂತಿಗೆಂದು ಆರ್ಕುಟ್ ಅನ್ನೇ ಸಂಗಾತಿಯಾಗಿ ಸ್ವೀಕರಿಸಿ ಹೆಚ್ಚು ಕಾಲ ಅಂತರ್ಜಾಲವನ್ನೇ ತಬ್ಬಿ ಕೂರುತ್ತಿದ್ದ ನನಗೆ ಜ್ಞಾನಮೂರ್ತಿ ಎಂಬ ಭಾವಜೀವಿಯೊಬ್ಬರು ನನಗೆ ಆರ್ಕುಟ್ ಮೂಲಕ ಪರಿಚಯವಾದರು..., ಬ್ಲಾಗ್ ಲೋಕಕ್ಕೆ ಪರಿಚಯಿಸಿ ನನ್ನನ್ನು ಒಬ್ಬ ಬ್ಲಾಗಿಗನನ್ನಾಗಿ ಮಾಡಿದರು.. ಅವರ ಮುಂದೆ ಎಲ್ಲವನ್ನೂ ಹೇಳಿಕೊಂಡೆ.., ಯಾರ ಮಾತು ಹಿಡಿಸದಿದ್ದ ನನಗೆ ಅದೇಕೋ ಅವರ ಮಾತು ಹಿಡಿಸತೊಡಗಿದವು.. ಅವರೂ ಸ್ವಲ್ಪ ಬುಧ್ಧಿಮಾತು ಹೇಳಿದರು, ಸಮಾಧಾನ ಮಾಡಿ ಮತ್ತೆ ಹುರುಪು ತುಂಬುವ ಪ್ರಯತ್ನ ಮಾಡಿದರು.. ಅವರ ಮಾತಿಗೆ ಬೆಲೆಕೊಟ್ಟು ಕಷ್ಟಪಟ್ಟು ಓದಲು ಅನುವಾದೆ..
ಆದರೆ ಸಮಯ ಕಳೆದುಹೋಗಿತ್ತು!
ಜ್ಞಾನಮೂರ್ತಿಯವರು ಸಿಕ್ಕಿದ್ದು,ಅವರ ಸಹಕಾರದಿಂದ ಬ್ಲಾಗಿಗನಾಗಿದ್ದು,ಬ್ಲಾಗಿಗನಾಗಿ ನೀವೆಲ್ಲರೂ ಸಿಕ್ಕಿದ್ದು.. ಇವೇ ಅಂತರ್ಜಾಲದಿಂದ ನನಗಾದ ಉಪಯೋಗಗಳು ..

ಇವೆಲ್ಲದರ ನಡುವೆ ೫೦-೬೦% ನಿರೀಕ್ಷೆ ಮಾಡಿದ್ದ ನನಗೆ ೭೦% ಫಲಿತಾಂಶ ಬಂದು ಆಶ್ಚರ್ಯ ಹಾಗೂ ಸೋಜಿಗವನ್ನು ಉಂಟುಮಾಡಿತು.. ಪ್ರಯತ್ನವೇ ಇಲ್ಲದೆ ಬಂದ ನನ್ನ ಫಲಿತಾಂಶ ನನ್ನದಲ್ಲ ಎಂದು ಇಂದಿಗೂ ಅನಿಸುತ್ತಿದೆ.. ಎಲ್ಲಾ ದೈವೇಚ್ಛೆ ಎಂದುಕೊಂಡೆ..
ನಂತರದಲ್ಲಿ ಇಂಜಿನಿಯರ್ ಓದಬೇಕೆನ್ನುವ ಎಲ್ಲರ ಮಾತನ್ನು ತಿರಸ್ಕರಿಸಿ ಬಿ.ಎಸ್ಸಿ. ಆರಿಸಿಕೊಂಡಿದ್ದು ನನಗೆ ಮನೆಯಲ್ಲಿ,ಊರಲ್ಲಿ,ಸುತ್ತಮುತ್ತಲಲ್ಲಿ,.. ಎಲ್ಲೂ ಗೌರವ ಇಲ್ಲದಂತೆ ಮಾಡಿತು.
ಸುತ್ತಮುತ್ತಲಲ್ಲಿ ನನಗೆಂದೆ ಇದ್ದ ಸ್ಥಾನಮಾನ ಕಳೆದು ಹೋಗಿ,ಒಂಟಿಯೆನಿಸಿ ನನ್ನದೇ ಲೋಕ ಸೃಷ್ಟಿಸಿಕೊಂಡೆ. ಯಾವುದಾದರೊಂದು ಕೆಲಸ ಸೇರಿಬಿಡಬೇಕು ಎಂದುಕೊಂಡು ಇತ್ತೀಚಿಗೆ ಒಂದು ಕೆಲಸಕ್ಕೆ ಅರ್ಜಿ ಹಾಕಿ ತಿರಸ್ಕೃತವಾದ ನನಗೆ ಇತ್ತೀಚಿಗೆ ಜೀವನದ ತಪ್ಪುಗಳು ಅರಿವಾಗತೊಡಗಿವೆ..


ಕಾಲವು ನನಗೆ ಸರಿಯಾಗೇ ಉತ್ತರ ನೀಡಿದ್ದು ನಾ ಮಾಡಿದ ತಪ್ಪುಗಳಿಗೆ ಪಶ್ಚಾತ್ತಾಪ ಪಡುತ್ತಿದ್ದೇನೆ...
ಮುಂದಾದರೂ ಚೆನ್ನಾಗಿ ಓದಿ ನನ್ನ ಸ್ಥಾನಮಾನಗಳನ್ನು ದೊರಕಿಸಿಕೊಳ್ಳಬೇಕೆಂದು ನಿರ್ಧರಿಸಿ ಆ ನಿಟ್ಟಿನಲ್ಲಿ ಪ್ರಯತ್ನಿಸುತ್ತಿದ್ದೇನೆ.. ಹಲವಾರು ಕುರುಡು ಕನಸು ಕಾಣುತ್ತಿದ್ದ ನನಗೆ ಈಗ ಕಣ್ಣ ಮುಂದಿರುವುದು ಡಿಗ್ರಿಯಲ್ಲಿ ರಾಂಕ್ ಪಡೆಯಬೇಕು,ಜೊತೆಗೆ ಬ್ಲಾಗಿನಲ್ಲಿ ಒಳ್ಳೆ ಹೆಸರು ಮಾಡಬೇಕು ಎಂಬ ಆಸೆ.. ಅದೇ ನಿಟ್ಟಿನಲ್ಲಿ ಶ್ರಮಿಸುತ್ತಿರುವ ನನಗೆ ಕೆಲವು ಒಡಕುಗಳು ಎದುರಾಗುತ್ತಿವೆ,ಒಂದು ದಿನ ನಾ ಅಂದುಕೊಂಡಂತೆ ನಡೆದರೆ ಮುಂದಿನ ಐದಾರು ದಿನಗಳು ವ್ಯರ್ಥವಾಗುತ್ತಿವೆ,ಮನಸ್ಸು ಸರಿಯಿಲ್ಲವಾಗಿದೆ..
ಯಾಕೋ ದೈವಶಕ್ತಿ ದೂರ ಉಳಿದು ನನ್ನ ಸಾಮರ್ಥ್ಯ ಪರೀಕ್ಷಿಸಲು ಮುಂದಾಗಿದೆ ಎನಿಸುತ್ತಿದೆ..
ಆದರೂ ಛಲಬಿಡದೆ ಪ್ರಯತ್ನಿಸುತ್ತಾ ಕನಸನ್ನು ಸಾಕಾರಗೊಳಿಸುವ ಕುಸುರಿ ಕೆಲಸ ನಡೆಸುತ್ತಿದ್ದೇನೆ..
ಹೇಗೋ ಆಗಿದ್ದು ಆಗಿಹೋಯ್ತು, ಮುಂದಿನ ವರ್ಷಗಳಲ್ಲಾದರೂ ಒಳ್ಳೆಯದಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತಿದ್ದೇನೆ..
ಹೀಗೆ ಜೀವನದಲ್ಲಿ ಇಲ್ಲಿಯವರೆಗೂ ಕಹಿಯನ್ನೇ ಉಂಡು ಮುಂದೆ ಸಿಹಿ ತಿನ್ನುವ ತವಕದಲ್ಲಿದ್ದೇನೆ..


ಆದರೂ,ಯಾವುದೇ ಕೆಲಸವಾದರೂ ನಮ್ಮ ಶ್ರಮ ಎಷ್ಟೇ ಇದ್ದರೂ ದೈವಾನುಗ್ರಹವೂ ಬೇಕಲ್ಲವೇ ಕಾದುನೋಡೋಣ..
~ . ~

ಒಡೆದ ಕನ್ನಡಿ ಮುನ್ನುಡಿಯಾಗಿ..

ನಾನು ಬ್ಲಾಗ್ ಸಾಗರ ನೋಡಿ ಆಸೆಯಿಂದ ಚಡಪಡಿಸುವಷ್ಟರಲ್ಲೇ ಆ ಸಾಗರದಲ್ಲಿ ಈಜುತ್ತಿದ್ದೆ... ಈಜುತ್ತಾ ಈಜುತ್ತಾ ಬೇಸರವಾಯ್ತು.. ಜೊತೆಗಿದ್ದ ಒಂದು ಜೀವ ಕೂಡ ಈಜುವಿಕೆ ಸಾಕೆನಿಸಿ ದಡ ಸೇರಿತ್ತು.. ಬ್ಲಾಗ್ ನನಗೆ ಬೇಸರವಾಗಿ ಸಹಕಾರವಿಲ್ಲದೆ ಬರೆಯುವುದನ್ನೇ ನಿಲ್ಲಿಸಬೇಕು ಎಂದುಕೊಂಡೆ.. ಆದರೆ ಅದಕ್ಕೆ ಮನಸ್ಸು ಆಸ್ಪದ ಮಾಡಿಕೊಡಲಿಲ್ಲ..ಏನು ಬರೆಯಲಿ,ಏಕೆ ಬರೆಯಲಿ,ಸಹಕಾರ ಸಿಗುವುದೇ.. ಇನ್ನು ಮುಂತಾದ ಪ್ರಶ್ನೆಗಳಿಗೆ ಮನಸ್ಸು ನೀಡಿದ ಉತ್ತರವೇ ಈಗ ನಿಮ್ಮ ಮುಂದಿರುವ ಈ... 'ಮನಸಿನ ಮನೆ'ಯ ಕನ್ನಡಿ..


.-..-..-..-..-..-..-..-..-..-..-..-..-..-..-..-..-..-..-..-..-..-..-..-..-..-..-..-..-..-..-..-..-..-..-..-..-..-.


ಒತ್ತರಿಸಿ ಬರುವ ನಿನ್ನ ದುಃಖದ ಸ್ವರ
ನೀ ಬರೆಯಲೆಂದೇ ಬಂದ ಓಂ ಕಾರ.!

ಒಡೆದುಹೋದ ಕನ್ನಡಿ
ನೀ ಬರೆವ ಬರಹಕೆ ಮುನ್ನುಡಿ..!

ಅಳಿದುಳಿದ ನೆನಪುಗಳಿಗೆ
ಬಳಿದುಳಿದ ಬಣ್ಣ ತುಂಬು..!

ಬರೆಯಲಾಗದೆಂಬ ನಿನ್ನ ನಾಚಿಕೆ
ಬರೆಯಲು ನಿನಗೆ ಸಿಕ್ಕ ಶೀರ್ಷಿಕೆ..!

ಒಮ್ಮೆ ನೆನೆದು ದೇವರನ್ನು
ಹಿಡಿ ನೀ ಲೇಖನಿಯನ್ನು..!

ದೇವರ ಕಣ್ಣಿನ ತೇಜಸ್ಸು
ನಿನಗೆ ನೀಡುವುದು ಹುಮ್ಮಸ್ಸು..!

ನೊಂದ ನಿನ್ನ ಒಂಟಿಪಯಣದ ಸುಸ್ತು
ಬರೆಯಲು ಸಿಕ್ಕ ವಿಷಯವಸ್ತು..!

ಸುಳಿದು ಅಳಿದ ಪಠ್ಯಗಳು
ಬರಹವ ರಂಜಿಸಲು ನಾಟ್ಯಗಳು..!

ನಿನ್ನ ಕಾಡುವ ಹೆಜ್ಜೆಸದ್ದು
ಆ ನಾಟ್ಯಕೆ ಗೆಜ್ಜೆಸದ್ದು..!

ವಿರಹದ ಹೃದಯದ ಕೂಗು
ನಿನ್ನ ಕಾವ್ಯಕೆ ಮೌನರಾಗ..!

ನಿನ್ನ ಕ್ಷಣಿಕ ಮೌನಗಳು
ನಿನಗೆ ಸಿಗುವ ವಿರಾಮಗಳು..!

ನಿನ್ನ ತೋಯಿಸಿದ ಜೀವಗಳು
ಬರೆವ ಬರಹದ ಪಾತ್ರಗಳು..!

ಕಾಣದೆ ನಿನ್ನ ಸಂತೈಸುವ ಭಾವುಕರು
ನಿನ್ನ ಬರಹದ ಪಾಲಕರು..!


.-..-..-..-..-..-..-..-..-..-..-..-..-..-..-..-..-..-..-..-..-..-..-..-..-..-..-..-.

ನೆನಪಿನ ಕಾಣಿಕೆಯಲ್ಲಿ...[ ಮೊದಲ ಲೇಖನದಲ್ಲೇ ತಿಳಿಸಿದಂತೆ 'ಜ್ಞಾನಮೂರ್ತಿ' ಯವರು ನನಗೆಅನಿರೀಕ್ಷಿತವಾಗಿ ಆರ್ಕುಟ್ನಲ್ಲಿ ಪರಿಚಯವಾದವರು.. ಕಾಲ ಕಳೆದಂತೆ ಆಪರಿಚಯ ನಮ್ಮಿಬ್ಬರ ನಡುವೆ ಗಾಢವಾದ ಸ್ನೇಹಕ್ಕೆ ಕಾರಣವಾಯಿತು,ಇಬ್ಬರುತುಂಬಾ ಆತ್ಮೀಯರಾದೆವು .. ಅವರ ಜನ್ಮದಿನದ ಸಂದರ್ಭದಲ್ಲಿ ಅವರು ನನಗೆಕಾಣಿಕೆ ಕೊಡುವೆನೆಂದು ಹೇಳಿ ಅವರ ಬ್ಲಾಗ್ ಲಿಂಕ್ ಕೊಟ್ಟಿದ್ದರು.. ಅದೇ ಪ್ರಥಮನಾನು ಬ್ಲಾಗ್ ನೋಡಿದ್ದು.. ನಂತರ ಬ್ಲಾಗ್ ಬಗ್ಗೆ ಸಂಪೂರ್ಣ ವಿವರಿಸಿ ನನ್ನನ್ನುಬ್ಲಾಗ್ ಮಾಡಲು ಪ್ರೇರೇಪಿಸಿದ್ದರು.. ಮೊದಮೊದಲು ನನಗೆ ಅದುಹಾಸ್ಯವೆನಿಸಿದರೂ ಬರುಬರುತ್ತಾ ನನಗೂ ಬರೆಯಬೇಕೆಂಬ ಆಸೆಮೊಳೆಯಿತು..ಅವರನ್ನು ಒಮ್ಮೆ ಭೇಟಿಯಾಗಿದ್ದಾಗ ಅವರು ನನಗೊಂದು ಕಾಣಿಕೆನೀಡಿದ್ದರು, ಮನೆಗೆ ಬಂದು ಅದನ್ನು ತೆರೆದಾಗಲೇ ತಿಳಿದಿದ್ದು ಅದು 'ಲೇಖನಿಯೆಂದು'.. ಅವರ ಲೇಖನಿಯಿಂದ ಹಾಗೂ ಅವರ ಮಾತಿನಿಂದ ಇನ್ನಷ್ಟುಪ್ರೇರೆಪಿತನಾದ ನಾನು ಅಂದೇ ಬರೆಯಲು ನಿರ್ಧರಿಸಿ ಆ ಲೇಖನಿಯ ಮೇಲೆಯೇನನ್ನ 'ಕೈಚಳಕ' ಪ್ರಯೋಗಿಸಿದೆ.. ಆಗ ಮೂಡಿಬಂದ 'ನೆನಪಿನ ಕಾಣಿಕೆಯಲ್ಲಿ' ಎಂಬ ಈ ಕವನವನ್ನು ಈಗ ನಿಮ್ಮ ಮುಂದಿಟ್ಟಿದ್ದೇನೆ..
ನನ್ನ ಮೊದಲ ಪ್ರಯೋಗದ ಬಗ್ಗೆ ನಿಮ್ಮ ಅನಿಸಿಕೆ ಹೇಗಿದೆ ಎಂದು ತಿಳಿಯುವ ಕುತೂಹಲದಲ್ಲಿದ್ದೇನೆ.. ]
...

ಬರೆಯಲೇ ಒಂದು ಲೇಖನವ
ನೀ ಕೊಟ್ಟ ಲೇಖನಿಯಲ್ಲಿ,
ಬರೆಯಲೇ ಒಂದು ಸಿಹಿಗವನವ
ನೀ ಕೊಟ್ಟ ಲೇಖನಿಯಲ್ಲಿ,
ಬರೆಯಲೇ ಒಂದು ಸವಿಗೀತೆಯ
ನೀ ಕೊಟ್ಟ ಲೇಖನಿಯಲ್ಲಿ,
ಬರೆಯಲೇ ನನ್ನ ಆತ್ಮಕಥೆಯ
ನೀ ಕೊಟ್ಟ ಲೇಖನಿಯಲ್ಲಿ,
ಬರೆಯಲೇ ನಿಮಗೊಂದು ಸಂದೇಶವ
ನೀ ಕೊಟ್ಟ ಲೇಖನಿಯಲ್ಲಿ,
ಆ ನೆನಪಿನ ಕಾಣಿಕೆಯಲ್ಲಿ..

ಪರೀಕ್ಷಾರಂಗ ಎಂಬ ರಣರಂಗದಿ
ಖಡ್ಗದಂತ ಈ ಲೇಖನಿಯ ಹರಿತದಿ
ಶ್ವೇತಪುಟದ ಮೇಲೆ ಶಾಯಿನೆತ್ತರ
ಎರಚಾಡಿ ಹೋರಾಡಲೇ
ನೀ ಕೊಟ್ಟ ಲೇಖನಿಯಲ್ಲಿ..

ಆ ಲೇಖನಿಯಲ್ಲಿ ತುಂಬಿಕೊಂಡಿದೆ
ಶಾಯಿಯೆಂಬ ಜೀವದ್ರವ್ಯ
ಆ ಜೀವದ್ರವ್ಯದ ಕಣಕಣದಲ್ಲಿದೆ
ನಮ್ಮಿಬ್ಬರ ಮಧುರಬಾಂಧವ್ಯ..
ಚಿರನೂತನ ಸವಿಸ್ನೇಹಬಾಂಧವ್ಯ..
ಆದ್ದರಿಂದ..
ಬರೆಯಲಾರೆನು ಗುರುವೇ ಈ ಲೇಖನಿಯಲ್ಲಿ
ನೀವು ಕೊಟ್ಟ ನೆನಪಿನ ಕಾಣಿಕೆಯಲ್ಲಿ..

ನೆನಪಿಡಿ ಗುರುವೇ...
ಅಂತರ್ಜಲ ಬತ್ತಿಹೋಗುವ ತನಕ
ಲೇಖನಿಯ ಬರಿದುಮಾಡದೇ
ಕಾಯ್ದುಕೊಳ್ಳುವೆ ಜೀವದ್ರವ್ಯವ
ಎಂದೆಂದಿಗೂ ಅಮರವಾದ
ನಮ್ಮಿಬ್ಬರ ಅನುಬಾಂಧವ್ಯವ..
ಬರೆಯದೆ ಈ ನೆನಪಿನ ಕಾಣಿಕೆಯಲ್ಲಿ..

~ . ~

ಆರಂಭದ ಮುನ್ನ...

ಜ್ಞಾನಮೂರ್ತಿ...

ಹೌದು ಅವ್ರೆ.

ನನ್ನ ಬದುಕು ಕಂಡ ಅನಿರೀಕ್ಷಿತ ತಿರುವುಗಳಲ್ಲಿ ಅನಿರೀಕ್ಷಿತವಾಗಿ ಪರಿಚಯವಾದವರು.,ನನ್ನ ಸಂಬಂಧಿ-ಮಿತ್ರರಿಂದಲೇ ನಾನು ದುಃಖಕ್ಕೀಡಾಗಿ ಜೀವನದ ಬಗ್ಗೆ ಬೇಸರಗೊಂಡಿದ್ದಾಗ 'ಸಂತೆಯೊಳಗೊಬ್ಬ ಸಂತ'ನಂತೆ ಸಿಕ್ಕಿ ಸಾಂತ್ವನ ಹೇಳಿದ ಆಪ್ತರು..

ಬ್ಲಾಗ್ ಎಂಬ ಸಾಗರದ ಹತ್ತಿರ ಕರೆದೊಯ್ದು,ಸಣ್ಣ-ಪುಟ್ಟ ದೋಣಿಗಳಿಂದ ಹಿಡಿದು ಬೃಹದಾಕಾರದ ನೌಕೆಗಳಿದ್ದ ಅಲ್ಲಿ ಅದಾಗಲೇ ಅಲ್ಲಿದ್ದ ಅವರ ಒಂದು ಪುಟ್ಟ ಹಡಗಿನಲ್ಲಿ ನೌಕಾಯಾನ ಮಾಡಿಸಿದರು... ಆ ಸಾಗರದ ಆಳ-ಅಗಲಗಳನ್ನು ನನಗೆ ವಿವರಿಸಿಕೊಟ್ಟು, ಆ ಸಾಗರದಿ ನನ್ನದೊಂದು ಪುಟ್ಟ ಹಾಯಿದೋಣಿ ಹಾಯ್ದುಬಿಡಲು ನನ್ನೊಂದಿಗೆ ಭಾಗಿಯಾದವರು.ನನಗೆ ತಿಳಿಯದೆ ನನ್ನಲ್ಲಿ ಅಡಕವಾಗಿದ್ದ ಪ್ರತಿಭೆಯನ್ನು ಬಡಿದೆಬ್ಬಿಸಿ ನನ್ನಲ್ಲಿ ಬರೆಯುವ ಉತ್ಸಾಹ ತುಂಬಿ,ನಾನೊಬ್ಬ ಬ್ಲಾಗಿಗನಾಗಲು ಕಾರಣರಾದವರು...


ನಾ ಕಂಡಂತೆ ಅವರು "ಬಿರುಗಾಳಿಯಲ್ಲಿ ಸಿಕ್ಕ 'ಹಡಗು' ''.

ಅದೇಕೋ ನಾನು ಬ್ಲಾಗಿಗೆ ಕಾಲಿಡುತ್ತಿದ್ದಂತೆ ನಾನಿಟ್ಟ ಹೆಜ್ಜೆಗಳು ಮರಳುಗಾಡಿನಲ್ಲಿ ಇಟ್ಟ ಅಂಬೆಗಾಲಿನ ಹೆಜ್ಜೆಯಂತೆ ಮರೆಯಾಗುತ್ತಾ, ಬ್ಲಾಗಿನಲ್ಲಿ ನಾ ಕಾಣುತ್ತಿದ್ದ ಸೋಲಿನ ಪ್ರಶ್ನೆಗೆ ಹಲವರ ಸಾಂತ್ವನ ಹಾಗೂ ನನ್ನ ವ್ಯರ್ಥಪ್ರಯತ್ನ ಉತ್ತರ ನೀಡಲೇ ಇಲ್ಲ...

ಜಾತಕವನ್ನು ನಂಬುವ ನಾನು ಈ ಸೋಲಿಗೆ ನನ್ನ ಜಾತಕದಲ್ಲಿ ಕಂಡುಬಂದ ''ರಾಹುದೆಸೆ"(ಕಳೆದ ಹದಿನೆಂಟು ವರ್ಷ ಕಾಡಿದ ವಿಷಘಳಿಗೆ) ಕಾರಣ ಎಂದುಕೊಂಡೆ.

ಮುಂದೊಂದು ದಿನ ಬ್ಲಾಗೆಂಬ ಸಾಗರದಲ್ಲಿ ನನ್ನ ಪುಟ್ಟ ದೋಣಿ ಕೇಂದ್ರಬಿಂದುವಾಗಿ ಅಲೆಯೆಬ್ಬಿಸಬಲ್ಲದು ಎಂಬ ನಿರೀಕ್ಷೆಯಲ್ಲಿ ಇಂದಿನಿಂದ ಆರಂಭವಾಗುವ "ಗುರುದೆಸೆ''ಯಲ್ಲಿ ಮತ್ತೊಮ್ಮೆ ಬ್ಲಾಗಿನತ್ತ ನನ್ನ ಪುಟ್ಟ ದೋಣಿಯನ್ನು ಪಾದಾರ್ಪಣೆ ಮಾಡಿಸುತ್ತಿದ್ದೇನೆ...

ಈ ನನ್ನ "ಮನಸಿನ ಮನೆ"ಯನ್ನು ಯಾವುದೇ ಬಿರುಗಾಳಿಯ ಹೊಡೆತಕ್ಕೆ ಸಿಲುಕದಂತೆ ಕಾಪಾಡಲು ತಾವೆಲ್ಲರೂ ಸಹಕರಿಸುತ್ತೀರೆಂದು ನಂಬಿದ್ದೇನೆ...

ನಮ್ಮ ನಾಡದೇವತೆ ಶ್ರೀ ಭುವನೇಶ್ವರಿಗೆ ನಮಿಸಿ, ಕುಲದೇವತೆ ಶ್ರೀ ವೆಂಕಟರಮಣಸ್ವಾಮಿಗೆ ಶರಣಾಗಿ, ಗ್ರಾಮದೇವತೆ ಶ್ರೀ ಪಟ್ಟಲದಮ್ಮನಿಗೆ ತಲೆಬಾಗಿ, ಮನೆದೇವತೆ ನಿರಾಭರಣ ಸುಂದರಿ ಚಾಲಮ್ಮನ ಪಾದಾರವಿಂದಗಳಿಗೆ ಎರಗಿ ಎಲ್ಲರ ಕೃಪೆ ಬೇಡುತ್ತಾ, ಸಮಸ್ತ ಬ್ಲಾಗಿಗರಿಗೂ.. ಎಲ್ಲ ಕನ್ನಡಿಗರಿಗೂ ವಂದಿಸುತ್ತಾ...ಜೊತೆಗೆ,


'ಅಪ್ಪಾಜಿ' ಇಲ್ಲದ ಹೊಸವರ್ಷದ ಸಂಭ್ರಮ ನಮಗೇಕೆ..
'ಕಂಬನಿಯ ಕುಯಿಲು'೩ ದಶಕಗಳ ಕಾಲ ಕನ್ನಡಾಭಿಮಾನಿಗಳ ಹೃದಯ ಸಿಂಹಾಸನವನ್ನು ಆಳಿ ಇತ್ತೀಚಿಗಷ್ಟೇ ಸಿಂಹಘರ್ಜನೆ ನಿಲ್ಲಿಸಿ ನಮ್ಮನ್ನು ಅಗಲಿದ ಭಾವಶಿಲ್ಪಿ 'ಡಾ.ವಿಷ್ಣುವರ್ಧನ' ಅವರ ಆತ್ಮಕ್ಕೆ ಚಿರಶಾಂತಿ ಕೋರುತ್ತೇನೆ...

ವಂದನೆಗಳು..

ಇಂತಿ ನಿಮ್ಮವ /-
Related Posts Plugin for WordPress, Blogger...