ನೆನಪಿನ ಕಾಣಿಕೆಯಲ್ಲಿ...[ ಮೊದಲ ಲೇಖನದಲ್ಲೇ ತಿಳಿಸಿದಂತೆ 'ಜ್ಞಾನಮೂರ್ತಿ' ಯವರು ನನಗೆಅನಿರೀಕ್ಷಿತವಾಗಿ ಆರ್ಕುಟ್ನಲ್ಲಿ ಪರಿಚಯವಾದವರು.. ಕಾಲ ಕಳೆದಂತೆ ಆಪರಿಚಯ ನಮ್ಮಿಬ್ಬರ ನಡುವೆ ಗಾಢವಾದ ಸ್ನೇಹಕ್ಕೆ ಕಾರಣವಾಯಿತು,ಇಬ್ಬರುತುಂಬಾ ಆತ್ಮೀಯರಾದೆವು .. ಅವರ ಜನ್ಮದಿನದ ಸಂದರ್ಭದಲ್ಲಿ ಅವರು ನನಗೆಕಾಣಿಕೆ ಕೊಡುವೆನೆಂದು ಹೇಳಿ ಅವರ ಬ್ಲಾಗ್ ಲಿಂಕ್ ಕೊಟ್ಟಿದ್ದರು.. ಅದೇ ಪ್ರಥಮನಾನು ಬ್ಲಾಗ್ ನೋಡಿದ್ದು.. ನಂತರ ಬ್ಲಾಗ್ ಬಗ್ಗೆ ಸಂಪೂರ್ಣ ವಿವರಿಸಿ ನನ್ನನ್ನುಬ್ಲಾಗ್ ಮಾಡಲು ಪ್ರೇರೇಪಿಸಿದ್ದರು.. ಮೊದಮೊದಲು ನನಗೆ ಅದುಹಾಸ್ಯವೆನಿಸಿದರೂ ಬರುಬರುತ್ತಾ ನನಗೂ ಬರೆಯಬೇಕೆಂಬ ಆಸೆಮೊಳೆಯಿತು..ಅವರನ್ನು ಒಮ್ಮೆ ಭೇಟಿಯಾಗಿದ್ದಾಗ ಅವರು ನನಗೊಂದು ಕಾಣಿಕೆನೀಡಿದ್ದರು, ಮನೆಗೆ ಬಂದು ಅದನ್ನು ತೆರೆದಾಗಲೇ ತಿಳಿದಿದ್ದು ಅದು 'ಲೇಖನಿಯೆಂದು'.. ಅವರ ಲೇಖನಿಯಿಂದ ಹಾಗೂ ಅವರ ಮಾತಿನಿಂದ ಇನ್ನಷ್ಟುಪ್ರೇರೆಪಿತನಾದ ನಾನು ಅಂದೇ ಬರೆಯಲು ನಿರ್ಧರಿಸಿ ಆ ಲೇಖನಿಯ ಮೇಲೆಯೇನನ್ನ 'ಕೈಚಳಕ' ಪ್ರಯೋಗಿಸಿದೆ.. ಆಗ ಮೂಡಿಬಂದ 'ನೆನಪಿನ ಕಾಣಿಕೆಯಲ್ಲಿ' ಎಂಬ ಈ ಕವನವನ್ನು ಈಗ ನಿಮ್ಮ ಮುಂದಿಟ್ಟಿದ್ದೇನೆ..
ನನ್ನ ಮೊದಲ ಪ್ರಯೋಗದ ಬಗ್ಗೆ ನಿಮ್ಮ ಅನಿಸಿಕೆ ಹೇಗಿದೆ ಎಂದು ತಿಳಿಯುವ ಕುತೂಹಲದಲ್ಲಿದ್ದೇನೆ.. ]
...

ಬರೆಯಲೇ ಒಂದು ಲೇಖನವ
ನೀ ಕೊಟ್ಟ ಲೇಖನಿಯಲ್ಲಿ,
ಬರೆಯಲೇ ಒಂದು ಸಿಹಿಗವನವ
ನೀ ಕೊಟ್ಟ ಲೇಖನಿಯಲ್ಲಿ,
ಬರೆಯಲೇ ಒಂದು ಸವಿಗೀತೆಯ
ನೀ ಕೊಟ್ಟ ಲೇಖನಿಯಲ್ಲಿ,
ಬರೆಯಲೇ ನನ್ನ ಆತ್ಮಕಥೆಯ
ನೀ ಕೊಟ್ಟ ಲೇಖನಿಯಲ್ಲಿ,
ಬರೆಯಲೇ ನಿಮಗೊಂದು ಸಂದೇಶವ
ನೀ ಕೊಟ್ಟ ಲೇಖನಿಯಲ್ಲಿ,
ಆ ನೆನಪಿನ ಕಾಣಿಕೆಯಲ್ಲಿ..

ಪರೀಕ್ಷಾರಂಗ ಎಂಬ ರಣರಂಗದಿ
ಖಡ್ಗದಂತ ಈ ಲೇಖನಿಯ ಹರಿತದಿ
ಶ್ವೇತಪುಟದ ಮೇಲೆ ಶಾಯಿನೆತ್ತರ
ಎರಚಾಡಿ ಹೋರಾಡಲೇ
ನೀ ಕೊಟ್ಟ ಲೇಖನಿಯಲ್ಲಿ..

ಆ ಲೇಖನಿಯಲ್ಲಿ ತುಂಬಿಕೊಂಡಿದೆ
ಶಾಯಿಯೆಂಬ ಜೀವದ್ರವ್ಯ
ಆ ಜೀವದ್ರವ್ಯದ ಕಣಕಣದಲ್ಲಿದೆ
ನಮ್ಮಿಬ್ಬರ ಮಧುರಬಾಂಧವ್ಯ..
ಚಿರನೂತನ ಸವಿಸ್ನೇಹಬಾಂಧವ್ಯ..
ಆದ್ದರಿಂದ..
ಬರೆಯಲಾರೆನು ಗುರುವೇ ಈ ಲೇಖನಿಯಲ್ಲಿ
ನೀವು ಕೊಟ್ಟ ನೆನಪಿನ ಕಾಣಿಕೆಯಲ್ಲಿ..

ನೆನಪಿಡಿ ಗುರುವೇ...
ಅಂತರ್ಜಲ ಬತ್ತಿಹೋಗುವ ತನಕ
ಲೇಖನಿಯ ಬರಿದುಮಾಡದೇ
ಕಾಯ್ದುಕೊಳ್ಳುವೆ ಜೀವದ್ರವ್ಯವ
ಎಂದೆಂದಿಗೂ ಅಮರವಾದ
ನಮ್ಮಿಬ್ಬರ ಅನುಬಾಂಧವ್ಯವ..
ಬರೆಯದೆ ಈ ನೆನಪಿನ ಕಾಣಿಕೆಯಲ್ಲಿ..

~ . ~

ಆರಂಭದ ಮುನ್ನ...

ಜ್ಞಾನಮೂರ್ತಿ...

ಹೌದು ಅವ್ರೆ.

ನನ್ನ ಬದುಕು ಕಂಡ ಅನಿರೀಕ್ಷಿತ ತಿರುವುಗಳಲ್ಲಿ ಅನಿರೀಕ್ಷಿತವಾಗಿ ಪರಿಚಯವಾದವರು.,ನನ್ನ ಸಂಬಂಧಿ-ಮಿತ್ರರಿಂದಲೇ ನಾನು ದುಃಖಕ್ಕೀಡಾಗಿ ಜೀವನದ ಬಗ್ಗೆ ಬೇಸರಗೊಂಡಿದ್ದಾಗ 'ಸಂತೆಯೊಳಗೊಬ್ಬ ಸಂತ'ನಂತೆ ಸಿಕ್ಕಿ ಸಾಂತ್ವನ ಹೇಳಿದ ಆಪ್ತರು..

ಬ್ಲಾಗ್ ಎಂಬ ಸಾಗರದ ಹತ್ತಿರ ಕರೆದೊಯ್ದು,ಸಣ್ಣ-ಪುಟ್ಟ ದೋಣಿಗಳಿಂದ ಹಿಡಿದು ಬೃಹದಾಕಾರದ ನೌಕೆಗಳಿದ್ದ ಅಲ್ಲಿ ಅದಾಗಲೇ ಅಲ್ಲಿದ್ದ ಅವರ ಒಂದು ಪುಟ್ಟ ಹಡಗಿನಲ್ಲಿ ನೌಕಾಯಾನ ಮಾಡಿಸಿದರು... ಆ ಸಾಗರದ ಆಳ-ಅಗಲಗಳನ್ನು ನನಗೆ ವಿವರಿಸಿಕೊಟ್ಟು, ಆ ಸಾಗರದಿ ನನ್ನದೊಂದು ಪುಟ್ಟ ಹಾಯಿದೋಣಿ ಹಾಯ್ದುಬಿಡಲು ನನ್ನೊಂದಿಗೆ ಭಾಗಿಯಾದವರು.ನನಗೆ ತಿಳಿಯದೆ ನನ್ನಲ್ಲಿ ಅಡಕವಾಗಿದ್ದ ಪ್ರತಿಭೆಯನ್ನು ಬಡಿದೆಬ್ಬಿಸಿ ನನ್ನಲ್ಲಿ ಬರೆಯುವ ಉತ್ಸಾಹ ತುಂಬಿ,ನಾನೊಬ್ಬ ಬ್ಲಾಗಿಗನಾಗಲು ಕಾರಣರಾದವರು...


ನಾ ಕಂಡಂತೆ ಅವರು "ಬಿರುಗಾಳಿಯಲ್ಲಿ ಸಿಕ್ಕ 'ಹಡಗು' ''.

ಅದೇಕೋ ನಾನು ಬ್ಲಾಗಿಗೆ ಕಾಲಿಡುತ್ತಿದ್ದಂತೆ ನಾನಿಟ್ಟ ಹೆಜ್ಜೆಗಳು ಮರಳುಗಾಡಿನಲ್ಲಿ ಇಟ್ಟ ಅಂಬೆಗಾಲಿನ ಹೆಜ್ಜೆಯಂತೆ ಮರೆಯಾಗುತ್ತಾ, ಬ್ಲಾಗಿನಲ್ಲಿ ನಾ ಕಾಣುತ್ತಿದ್ದ ಸೋಲಿನ ಪ್ರಶ್ನೆಗೆ ಹಲವರ ಸಾಂತ್ವನ ಹಾಗೂ ನನ್ನ ವ್ಯರ್ಥಪ್ರಯತ್ನ ಉತ್ತರ ನೀಡಲೇ ಇಲ್ಲ...

ಜಾತಕವನ್ನು ನಂಬುವ ನಾನು ಈ ಸೋಲಿಗೆ ನನ್ನ ಜಾತಕದಲ್ಲಿ ಕಂಡುಬಂದ ''ರಾಹುದೆಸೆ"(ಕಳೆದ ಹದಿನೆಂಟು ವರ್ಷ ಕಾಡಿದ ವಿಷಘಳಿಗೆ) ಕಾರಣ ಎಂದುಕೊಂಡೆ.

ಮುಂದೊಂದು ದಿನ ಬ್ಲಾಗೆಂಬ ಸಾಗರದಲ್ಲಿ ನನ್ನ ಪುಟ್ಟ ದೋಣಿ ಕೇಂದ್ರಬಿಂದುವಾಗಿ ಅಲೆಯೆಬ್ಬಿಸಬಲ್ಲದು ಎಂಬ ನಿರೀಕ್ಷೆಯಲ್ಲಿ ಇಂದಿನಿಂದ ಆರಂಭವಾಗುವ "ಗುರುದೆಸೆ''ಯಲ್ಲಿ ಮತ್ತೊಮ್ಮೆ ಬ್ಲಾಗಿನತ್ತ ನನ್ನ ಪುಟ್ಟ ದೋಣಿಯನ್ನು ಪಾದಾರ್ಪಣೆ ಮಾಡಿಸುತ್ತಿದ್ದೇನೆ...

ಈ ನನ್ನ "ಮನಸಿನ ಮನೆ"ಯನ್ನು ಯಾವುದೇ ಬಿರುಗಾಳಿಯ ಹೊಡೆತಕ್ಕೆ ಸಿಲುಕದಂತೆ ಕಾಪಾಡಲು ತಾವೆಲ್ಲರೂ ಸಹಕರಿಸುತ್ತೀರೆಂದು ನಂಬಿದ್ದೇನೆ...

ನಮ್ಮ ನಾಡದೇವತೆ ಶ್ರೀ ಭುವನೇಶ್ವರಿಗೆ ನಮಿಸಿ, ಕುಲದೇವತೆ ಶ್ರೀ ವೆಂಕಟರಮಣಸ್ವಾಮಿಗೆ ಶರಣಾಗಿ, ಗ್ರಾಮದೇವತೆ ಶ್ರೀ ಪಟ್ಟಲದಮ್ಮನಿಗೆ ತಲೆಬಾಗಿ, ಮನೆದೇವತೆ ನಿರಾಭರಣ ಸುಂದರಿ ಚಾಲಮ್ಮನ ಪಾದಾರವಿಂದಗಳಿಗೆ ಎರಗಿ ಎಲ್ಲರ ಕೃಪೆ ಬೇಡುತ್ತಾ, ಸಮಸ್ತ ಬ್ಲಾಗಿಗರಿಗೂ.. ಎಲ್ಲ ಕನ್ನಡಿಗರಿಗೂ ವಂದಿಸುತ್ತಾ...ಜೊತೆಗೆ,


'ಅಪ್ಪಾಜಿ' ಇಲ್ಲದ ಹೊಸವರ್ಷದ ಸಂಭ್ರಮ ನಮಗೇಕೆ..
'ಕಂಬನಿಯ ಕುಯಿಲು'೩ ದಶಕಗಳ ಕಾಲ ಕನ್ನಡಾಭಿಮಾನಿಗಳ ಹೃದಯ ಸಿಂಹಾಸನವನ್ನು ಆಳಿ ಇತ್ತೀಚಿಗಷ್ಟೇ ಸಿಂಹಘರ್ಜನೆ ನಿಲ್ಲಿಸಿ ನಮ್ಮನ್ನು ಅಗಲಿದ ಭಾವಶಿಲ್ಪಿ 'ಡಾ.ವಿಷ್ಣುವರ್ಧನ' ಅವರ ಆತ್ಮಕ್ಕೆ ಚಿರಶಾಂತಿ ಕೋರುತ್ತೇನೆ...

ವಂದನೆಗಳು..

ಇಂತಿ ನಿಮ್ಮವ /-
Related Posts Plugin for WordPress, Blogger...