'ಅಷ್ಟವಿನಾಯಕ'

~.~


​​ಸಂಸ್ಕೃತದಲ್ಲಿ 'ಅಷ್ಟ' ಎಂದರೆ ಕನ್ನಡದಲ್ಲಿ 'ಎಂಟು' ಎಂಬ ಅರ್ಥ ಬರುತ್ತದೆ. 
ಅಷ್ಟಮಠ ಎಂದರೆ ಎಂಟು ಮಠಗಳು, ಅಷ್ಟಾಂಗ ಯೋಗ, ಅಷ್ಟವಕ್ರ,.. ಹೀಗೆ ಹಲವಾರು ಪದಗಳಿವೆ.

'ಅಷ್ಟವಿನಾಯಕ' ಎಂಬ ಪದ ಬಹುಷಃ ನಿಮಗೆ ಪರಿಚಯವಿರಬಹುದು..

ಅಷ್ಟವಿನಾಯಕ ಎಂದರೆ ಸಾಮಾನ್ಯ ಅರ್ಥ; ಅಷ್ಟ = ಎಂಟು, ವಿನಾಯಕ = ಗಣೇಶ. ಎಂಟು ಗಣೇಶಗಳು.
ನಮ್ಮೂರ ಸುತ್ತಲೂ, ನಿಮ್ಮೂರ ಸುತ್ತಲೂ, ಭಾರತ ದೇಶದಾದ್ಯಂತ, ದೇಶದ ಹೊರಗೂ ಹಲವಾರು ಗಣೇಶಗಳಿವೆ.. ಯಾವುದೋ ಎಂಟು ಗಣೇಶಗಳನ್ನು ಸೇರಿಸಿ 'ಅಷ್ಟ ವಿನಾಯಕ' ಎನ್ನಲಾಗುವುದಿಲ್ಲವಂತೆ... ಹಾಗಾದರೆ ಯಾವ ಎಂಟು ಗಣೇಶಗಳು 'ಅಷ್ಟವಿನಾಯಕ' ಎನಿಸಿಕೊಳ್ಳುತ್ತವೆ..


ಇದರ ಕುರಿತು ಒಂದು ಶ್ಲೋಕ ಇದೆ. ಅದು 'ಅಷ್ಟವಿನಾಯಕ ಸ್ತೋತ್ರ' ಅದರಲ್ಲಿ ಆ ಎಂಟು ಗಣೇಶಗಳು ಮತ್ತು ಅವು ಎಲ್ಲೆಲ್ಲಿ ಇವೆ ಎಂಬ ಉಲ್ಲೇಖವಿದೆ.

ಅಷ್ಟವಿನಾಯಕ ಸ್ತೋತ್ರ:
ಸ್ವಸ್ತಿ ಶ್ರೀಗಣನಾಯಕಂ ಗಜಮುಖಮಂ ಮೋರೇಶ್ವರಂ ಸಿದ್ಧಿದಾಂ ll
ಬಲ್ಲಾಳಮ್  ಮುರುಡೇ ವಿನಾಯಕಂಹಂ ಚಿಂತಾಮಣಿಂ ಥೇವರೇ ll
ಲೇಣ್ಯಾದ್ರೌ ಗಿರಿಜಾತ್ಮಜಂ ಸುವರದಾಂ ವಿಘ್ನೇಶ್ವರಂ ಓಝರೇ ll
ಗ್ರಾಮೇ ರಾಂಜಣನಾಮಕೇ ಗಣಪತಿಂ ಕುರ್ಯಾತ್ ಸದಾ ಮಂಗಳಂ ll

ಇದನ್ನು ಕನ್ನಡೀಕರಿಸಿದರೆ ಇದರ ಅರ್ಥ ಬಹುಶಃ ಹೀಗಿರಬಹುದು..

ಕ್ಷೇಮ ತರುವ ಶ್ರೀ ಗಣನಾಯಕನು, ಗಜ(ಆನೆಯ) ಮುಖ ಹೊತ್ತ "ಮೊರೇಶ್ವರ"ನು, "ಸಿದ್ಧಿದಾತ"ನು ll
"ಬಲ್ಲಾಳ"ನು, ಮುರುಡದ "ವಿನಾಯಕ"ನು, ಥೇವರೆಯ "ಚಿಂತಾಮಣಿ"ಯು  ll
ಲೇಣ್ಯಾದ್ರಿಯ "ಗಿರಿಜಾತ್ಮಜ"ನು, ಓಝರೆಯಲ್ಲಿ ವರನೀಡೊ "ವಿಘ್ನೇಶ್ವರ"ನು ll
ರಾಂಜಣ ಗ್ರಾಮದಲ್ಲಿ "ಗಣಪತಿ"ಯಾದವನು, ಯಾವಾಗಲು ಮಂಗಳವನ್ನು ಕರುಣಿಸುವನು ll

ಈ ಸ್ತೋತ್ರದಲ್ಲಿ ಆ ಎಂಟು ಗಣೇಶಗಳ ಉಲ್ಲೇಖವಿದೆ, ಅವುಗಳೆಂದರೆ..
೧. "ಮೊರೇಶ್ವರ" ಅಥವಾ ಮಯೂರೇಶ್ವರ - ಮಯೂರ(ನವಿಲು)ವನ್ನು ಏರಿ ಬಂದವನು - ಇದು ಪುಣೆಯ ಮೊರಗಾವ್ ನಲ್ಲಿದೆ.
೨. "ಸಿದ್ಧಿದಾತ" - ಸಿದ್ಧಿಗಳ ಕರುಣಿಸುವ ಸಿದ್ಧಿವಿನಾಯಕ - ಇದು ಅಹ್ಮದ್ ನಗರದ ಸಿದ್ಧಟೆಕ್ ನಲ್ಲಿದೆ. ಸಿದ್ಧಟೆಕ್ ಗಣೇಶ ಎಂದೇ ಹೆಸರುವಾಸಿಯಾಗಿದೆ.
೩. "ಬಲ್ಲಾಳ" - ಬಲ್ಲಾಳ ಎಂಬ ಭಕ್ತನಿಗೆ ವರ ನೀಡಿದ್ದಕ್ಕೆ ಬಲ್ಲಾಳೇಶ್ವರ ಎಂಬ ಹೆಸರಿದೆ - ಇದು ರಾಯಘಡದ ಪಾಳಿ ಎಂಬಲ್ಲಿದೆ.
೪. "ವಿನಾಯಕ" - ಮುರುಡದ ವಿನಾಯಕ - ಇದು ರಾಯಘಡದ ಮಹಡ(ಮುರುಡ)ದಲ್ಲಿದೆ.
೫. "ಚಿಂತಾಮಣಿ" - ಚಿಂತಾಮಣಿ ಎಂದರೆ ಇಚ್ಛೆ ಪೂರೈಸುವ ಮಣಿ - ಪುಣೆಯ ಥೇವರೆ (ಥೇವೂರ್) ನಲ್ಲಿದೆ.
೬. 'ಗಿರಿಜಾತ್ಮಜ" - ಗಿರಿಜೆಯ ಮಗ - ಪುಣೆಯಲ್ಲಿ ಲೇಣ್ಯಾದ್ರಿಯಲ್ಲಿದೆ.
೭. "ವಿಘ್ನೇಶ್ವರ" - ವಿಘ್ನನಿವಾರಕ - ಪುಣೆಯ ಓಜ್ಹರೆಯಲ್ಲಿದೆ.
೮. "ಗಣಪತಿ" - ಪುಣೆಯ ರಂಜಾಗಾವ್ ನಲ್ಲಿರುವ ಮಹಾಗಣಪತಿ.

ಸ್ತೋತ್ರದಲ್ಲಿ ಮೊರಗಾವ್, ಸಿದ್ಧಟೆಕ್ ಮತ್ತು ಪಾಳಿ ಪ್ರದೇಶಗಳನ್ನು ಹೊರತುಪಡಿಸಿ ಉಳಿದೆಲ್ಲ ಸ್ಥಳಗಳನ್ನು ಉಲ್ಲೇಖಿಸಲಾಗಿದೆ, ಗಮನಿಸಿ.
ವಿಶೇಷ ಎಂದರೆ ಎಲ್ಲ ಮೂರ್ತಿಗಳು ಮಹಾರಾಷ್ಟ್ರದ ಪುಣೆಯ ಸುತ್ತಮುತ್ತಲೇ ಇವೆ..  ಬಹುಶಃ ಇಲ್ಲಿದ್ದ ಜನರು ಅಥವಾ ಇಲ್ಲಿ ಆಳಿದ ಜನರು ಗಣಪತಿ ಮೇಲೆ ಬಹಳ ಭಕ್ತಿ ಹೊಂದಿದ್ದರು ಎನಿಸುತ್ತದೆ, ಹಾಗಾಗಿ ಇಲ್ಲಿಯೇ ಅಷ್ಟವಿನಾಯಕರ ಸೃಷ್ಟಿ ಆಗಿರಬಹುದು. ಪೇಶ್ವೇ ಮರಾಠರ ಮನೆದೇವರೇ "ಗಣಪತಿ" ಯಂತೆ.
ಇಲ್ಲಿನ ಎಲ್ಲಾ ಮೂರ್ತಿಗಳು 'ಸ್ವಯಂಭು'ವಾದವು. ಅಂದರೆ ಯಾರೋ ಈ ಶಿಲ್ಪಗಳನ್ನು ಕೆತ್ತಿದ್ದಲ್ಲ, ಪ್ರಕೃತಿದತ್ತವಾಗಿಯೇ ಉದ್ಭವವಾದವು - 'ಉದ್ಭವ ಮೂರ್ತಿ' ಗಳು ಎಂದು ಹೇಳುತ್ತಾರೆ.
ಈ ಮೂರ್ತಿಗಳು ಒಂದಕ್ಕೊಂದು ವಿಭಿನ್ನವಾಗಿದ್ದು, ಪ್ರತಿಯೊಂದಕ್ಕೂ ತನ್ನದೇ ಆದ ದಂತಕಥೆ ಇದೆ.. ಬರೆದರೆ ಒಂದೊಂದರ ಮೇಲೂ ಒಂದೊಂದು ಲೇಖನ ಬರೆಯಬಹುದು..
ಇನ್ನೊಂದು ವಿಶೇಷ ಎಂದರೆ ಅಷ್ಟವಿನಾಯಕ ದರುಶನ ಮಾಡಲು ಇಚ್ಚಿಸುವವರು ಸ್ತೋತ್ರದ ಪ್ರಕಾರ ಮೊದಲು ಕ್ರಮಬದ್ಧವಾಗಿ ಮೊದಲು ಮೊರೇಶ್ವರನ ದರ್ಶನ ಮಾಡಿ, ಎಂಟನೆಯದಾಗಿ ಮಹಾಗಣಪತಿ ದರ್ಶನ ಮಾಡಿ ಮತ್ತೆ ಕೊನೆಯಲ್ಲಿ ಮೊರೇಶ್ವರನ ದರ್ಶನ ಮಾಡಿದರೇನೇ ಅಷ್ಟವಿನಾಯಕ ಯಾತ್ರೆ ಸಂಪೂರ್ಣವಾಗುತ್ತಂತೆ... ಈಗಲೂ ಅದನ್ನೇ ಅನುಸರಿಸುತ್ತಿದ್ದಾರೆ. ಗೊತ್ತಿಲ್ಲ.
ಉದ್ಭವ ಮೂರ್ತಿಗಳಾದ ಮೇಲೆ ಅವುಗಳ ಮೇಲೆ ಸ್ತೋತ್ರ ರಚನೆಯಾಗಿರಬಹುದು, ಹೇಳಿ ಬರೆಯಿಸಿರಬಹುದು. ಅಥವಾ ಸ್ತೋತ್ರದ ಆಧಾರದ ಮೇಲೆ ಮೂರ್ತಿಗಳನ್ನು ಗುರುತಿಸಿರಬಹುದು, ಮಾಹಿತಿ ನನಗೆ ಗೊತ್ತಿಲ್ಲ.
ಅಷ್ಟವಿನಾಯಕರು ಯಾರು ಎಂಬ ಪ್ರಶ್ನೆಗೆ ನಾನು ಕಂಡುಕೊಂಡ ಸಮಾಧಾನಕರ ಸರಳ ಮಾಹಿತಿಯಷ್ಟೇ ಇದು.
ಅಷ್ಟವಿನಾಯಕರ ದರ್ಶನ ಮಾಡಿ, ಶುಭಾಲೋಚನೆ ಮಾಡಿ.


ವಂದನೆಗಳು

~-~


ವರಮಹಾಲಕ್ಷ್ಮಿ ಪೂಜೆ : ಅಷ್ಟ ಶಕ್ತಿಗೆ ನಮನ

~.~


ಶ್ರೀಗಣೇಶನನ್ನು ಬಿಟ್ಟರೆ ಈ ಮಣ್ಣಲ್ಲಿ ಹೆಚ್ಚು ಪೂಜೆ ಪಡೆವವಳು ತಾಯಿ ಲಕ್ಷ್ಮಿಯೇ ಇರಬೇಕು.

ವರಮಹಾಲಕ್ಷ್ಮಿ ಹಬ್ಬ..
ಇದು ಯಾವಾಗ ಆರಂಭವಾಗಿದ್ದು.. ವಿಶೇಷತೆಗಳೇನು.. ಯಾಕೆ ಈ ದಿನವೇ ಆಚರಿಸುತ್ತಾರೆ.. ಇವುಗಳಿಗೆ ಮನವರಿಕೆಯಾಗುವಂತ ಮಾಹಿತಿ ಸ್ಪಷ್ಟವಾಗಿಲ್ಲ, ನನಗೆ. 
ಹಾಗಂತ, ಒಂದೇ ಏಟಿಗೆ ಇದರ ಆಚರಣೆಯೇ ತಪ್ಪು, ಅವೈಜ್ಞಾನಿಕ, ಹಾಗೆ, ಹೀಗೆ ಎಂದು ಹೇಳಿಬಿಡಲಾರೆ..
ಓದಿ, ಕೇಳಿ, ಚಿಂತಿಸಿ ಒಂದು ಲೇಖನ ಬರೆದಿದ್ದೇನೆ..


ವರಮಹಾಲಕ್ಷ್ಮಿ ಹಬ್ಬ/ಪೂಜಾ/ವ್ರತ :

ಹಿಂದೂಗಳು 'ವಿಷ್ಣು' ವನ್ನು ಜಗದೊಡೆಯ, ರಕ್ಷಕ ಎಂದು ಆರಾಧಿಸುತ್ತಾರೆ.

ಈ ಜೀವನ ಪೂರೈಕೆಗೆ ಅವಶ್ಯಕವಾದವುಗಳು ಯಾವುವು ಎಂದು ಯಾರೋ, ಹಿಂದೆಯೇ ಜಿಜ್ಞಾಸೆ ಮಾಡಿ,- ಸಿರಿ, ಭೂ, ಸರಸ್ವತಿ, ಪ್ರೀತಿ, ಕೀರ್ತಿ, ಶಾಂತಿ, ಸಂತುಷ್ಟಿ ಮತ್ತು ಪುಷ್ಟಿ ಎಂಬ ಎಂಟು ಅಂಶಗಳನ್ನು ಗುರುತಿಸಿ ಇವು ಸುಂದರ ಜೀವನಕ್ಕೆ ಮೂಲವಾಗಿ ಬೇಕಾದವು ಎಂದು ಹೇಳಿದ್ದಾರೆ. ಇವುಗಳನ್ನು 'ಶಕ್ತಿಗಳು' ಎಂದೂ ಕರೆದಿದ್ದಾರೆ. 
ಈ ಜೀವನಕ್ಕೆ ಬೇಕಾದ ಇವು ಈ ಜಗದಿಂದಲೇ ಬರಬೇಕು. ವಿಷ್ಣು ಜಗದೊಡೆಯ ಆದ್ದರಿಂದ, ಈ ಎಲ್ಲವೂ ಅವನಿಂದಲೇ ಬರಬೇಕು.
ಲಕ್ಷ್ಮಿ ವಿಷ್ಣುವಿನ ಪತ್ನಿ. ವಿಷ್ಣು ಲಕ್ಷ್ಮಿಗೆ ಒಡೆಯ ಎನ್ನಬಹುದು.
ಹಾಗಾಗಿ ಲಕ್ಷ್ಮಿಯನ್ನು ಆ ಶಕ್ತಿಗೆ ಹೋಲಿಸಲಾಗಿದೆ. ಎಲ್ಲ ಎಂಟು ಶಕ್ತಿಗಳನ್ನೂ ಸೇರಿಸಿ 'ಅಷ್ಟ ಲಕ್ಷ್ಮಿ' ಎನ್ನಲಾಗಿದೆ. ಲಕ್ಷ್ಮಿಪತಿಯಾದ ವಿಷ್ಣು ಜಗದ ಆ ಎಲ್ಲಾ ಶಕ್ತಿಗಳ ಒಡೆಯನಾದ್ದರಿಂದ 'ಅಷ್ಟಲಕ್ಷ್ಮೀಪತಿ'ಯಾಗಿದ್ದಾನೆ.

ಎಂಥಹ ಸುಂದರವಾದ ಕಲ್ಪನೆ ಮತ್ತು ಹೋಲಿಕೆ. 


( ಚಿತ್ರಕೃಪೆ : ಅಂತರ್ಜಾಲ )

ನಮ್ಮ ಜೀವನಕ್ಕೆ ಮೂಲಭೂತವಾದ ಅವಶ್ಯಕತೆಗಳನ್ನು ಪೂಜಿಸಿ ಆರಾಧಿಸುವುದು ಹಿಂದೂಧರ್ಮದಲ್ಲಿ (ಬೇರೆ ಧರ್ಮಗಳ ಬಗ್ಗೆ ಗೊತ್ತಿಲ್ಲ ) ನಡೆದುಬಂದಿರುವ ಒಂದು ವಾಡಿಕೆ/ಪದ್ಧತಿ. ಉದಾಹರಣೆಗೆ ಪಂಚಭೂತಗಳು - ಬೇಕೇ ಬೇಕಾದ ಭೂಮಿ, ನೀರು, ಬೆಳಕು, ಗಾಳಿ ಮತ್ತು ಆಕಾಶ ಇವುಗಳ ಪೂಜೆ ಇದೆ.   
ಹಾಗೆಯೇ, ಜೀವನ ಸುಖವಾಗಿರಲು, ಈ ಎಂಟು ಶಕ್ತಿಗಳು ಅವಶ್ಯಕವಾದ್ದರಿಂದ ಅವುಗಳನ್ನು ಪೂಜಿಸಿ, ಆರಾಧಿಸುವ ಪದ್ಧತಿ ಆರಂಭವಾಗಿದೆ. ಶಕ್ತಿಗಳನ್ನೇ ಲಕ್ಷ್ಮಿ ಎಂದಿರುವುದರಿಂದ ಶಕ್ತಿಗಳ ಆರಾಧನೆ ಲಕ್ಷ್ಮೀಪೂಜೆ ಎಂದು ನಡೆದುಬಂದಿದೆ. 
ಅಂದರೆ, ನಾವು ಲಕ್ಷ್ಮಿಯನ್ನು ಪೂಜಿಸುತ್ತಿದ್ದೇವೆ, ಆದರೆ ಮೂಲದಲ್ಲಿ ಆ ಶಕ್ತಿಗಳಿಗೆ ನಮಿಸುತ್ತಿದ್ದೇವೆ.
ಖುಷಿಯಾಗುತ್ತದೆ ಹಾಗೆ ನೆನೆಯಲು. 

ಸಂತೋಷ.. ಆದರೆ ಇಂದೇ ಈ ಶುಕ್ರವಾರದಂದೇ ವರಲಕ್ಷ್ಮೀಪೂಜೆ ಏಕೆ ?
ಇದರ ಬಗ್ಗೆ ಸ್ಪಷ್ಟವಾಗಿ ನನಗೆ ತಿಳಿಯಲಿಲ್ಲ..
ಹಿಂದಿನ ಯಾವುದೋ ಒಂದು ಶ್ಲೋಕದಲ್ಲಿ ' ಶ್ರಾವಣಮಾಸದಲ್ಲಿ, ಶುಕ್ಲಪೂರ್ಣಿಮೆಯ ಹಿಂದೆ ಬರುವ ಎರಡನೇ ಶುಕ್ರವಾರದಂದು ಲಕ್ಷ್ಮಿಯನ್ನು ಪೂಜಿಸಲು ಯೋಗ್ಯದಿನ' ಎಂದು ಬರೆಯಲಾಗಿದೆ. ಇಂದು ಲಕ್ಷ್ಮೀಪೂಜೆ ಮಾಡಿದರೆ, ಅಷ್ಟಲಕ್ಷ್ಮೀ (ಅಷ್ಟಶಕ್ತೀ)ಗಳಿಗೂ ಪೂಜೆ ಮಾಡಿದಂತಾಗುತ್ತದೆ, ಲಕ್ಷ್ಮಿ ಪ್ರಸನ್ನಳಾಗಿ ವರಕೊಡುವ ವರಲಕ್ಷ್ಮಿಯಾಗಿ ಒಲಿಯುತ್ತಾಳೆ ಎಂಬ ನಂಬಿಕೆಯಿದೆ. 

[ಆದರೆ ಹಿಂದಿನಿಂದ ಈ ಶುಕ್ರವಾರದಂದೇ ನಡೆದುಬರುತ್ತಿದ್ದ ಪೂಜೆ ನೋಡಿ ಶ್ಲೋಕ ರಚನೆಯಾಯಿತಾ ಅಥವಾ ಶ್ಲೋಕ ರಚನೆಯಾದಮೇಲೆ ಶುಕ್ರವಾರದಲ್ಲಿ ಪೂಜೆ ಆರಂಭವಾಯಿತಾ ಎಂಬುದರ ಬಗ್ಗೆ ನನಗೆ ಗೊಂದಲವಿದೆ. ಇರಲಿ ಬಿಡಿ.]

ಹೀಗೆ ವರಮಹಾಲಕ್ಷ್ಮಿ ಪೂಜೆ ಆರಂಭವಾಯಿತು ಎಂದುಕೊಳ್ಳೋಣ. 

ಈ ಪೂಜೆಯ ಹಿಂದೆ ತುಂಬಾ ಕಥೆಗಳಿವೆ:

೧.  ಒಮ್ಮೆ ತಾಯಿ ಪಾರ್ವತಿದೇವಿ ತನ್ನ ಸಂಸಾರ (ಶಿವ ಮತ್ತು ಮಕ್ಕಳು) ಸುಖವಾಗಿರಲು ಒಂದು ವ್ರತ ಮಾಡಬೇಕೆಂದು ಆಸೆಪಟ್ಟು ಶಿವನನ್ನು ಕೇಳುತ್ತಾಳೆ. ಶಿವ ಪಾರ್ವತಿಗೆ 'ವರಮಹಾಲಕ್ಷ್ಮಿ ವ್ರತ' ಮಾಡಲು ಹೇಳಿ, ಅದನ್ನು ಹೇಗೆ ಆಚರಿಸಬೇಕೆಂದೂ ಹೇಳುತ್ತಾನೆ. ಈ ವ್ರತವನ್ನು ಹಿಂದೆ ಒಬ್ಬರು ಮಾಡಿ ಲಕ್ಷ್ಮೀಕೃಪೆಗೆ ಪಾತ್ರವಾಗಿದ್ದರು ಎಂದೂ ಹೇಳುತ್ತಾನೆ. ಆ ಒಬ್ಬಾಕೆಯೇ ಚಾರುಮತಿ. 
ಚಾರುಮತಿ ಹಿಂದಿನ ಕುಂದಿನ(ಕೌಂಡಿನ್ಯ) ದ ಒಬ್ಬ ಗೃಹಿಣಿ. ಆಕೆ ತನ್ನ ಸಂಸಾರವೇ ಸ್ವರ್ಗವೆಂದುಕೊಂಡು ಸದಾ ಅದಕ್ಕಾಗಿಯೇ ದುಡಿಯುತ್ತಿರುತ್ತಾಳೆ. ಆದರ್ಶ ಸತಿ, ಆದರ್ಶ ತಾಯಿ, ಸೊಸೆ ಯಾಗಲು ಬೇಕಾದ ಎಲ್ಲಾ ಗುಣಗಳಿದ್ದ ಆಕೆಯ ಸಂಸಾರ ಭಕ್ತಿಗೆ ಮೆಚ್ಚಿ ಲಕ್ಷ್ಮಿದೇವಿ ಆಕೆಯ ಕನಸಿನಲ್ಲಿ ಬಂದು ವರಲಕ್ಷ್ಮಿ ವ್ರತ ಮಾಡೆಂದು ಆದೇಶಿಸುತ್ತಾಳೆ. ಅಂತೆಯೇ, ಚಾರುಮತಿ ತನ್ನ ನೆರೆಹೊರೆಯ ಹೆಂಗಸರೊಡನೆ 'ವರಮಹಾಲಕ್ಷ್ಮಿ ವ್ರತ' ಮಾಡಿದ ನಂತರ, ಆಕೆಯ ಸಂಸಾರ ಹಾಗೂ ಆ ವ್ರತದಲ್ಲಿ ಭಾಗವಹಿಸಿದ್ದವರ ಸಂಸಾರವೂ ಲಕ್ಷ್ಮೀಕೃಪೆಗೆ ಪಾತ್ರರಾಗಿ ಅವರದು ಸುಖಸಂಸಾರವಾಯಿತು.
ಹೀಗೆ ಶಿವ ಪಾರ್ವತಿಗೆ ವಿವರಿಸುತ್ತಾನೆ. 

[ ಸ್ವತಃ ಆಕೆಯೇ ದೇವತೆಯಾಗಿದ್ದ ಪಾರ್ವತಿದೇವಿ ವ್ರತ ಮಾಡುವ ಅವಶ್ಯಕತೆಯಿತ್ತೇ? ಅಥವಾ ಆಕೆ ಸಂಸಾರ ಎಂದುಕೊಂಡಿದ್ದು ಸಕಲ ವಿಶ್ವವನ್ನೇ ಇರಬಹುದು, ಗೊತ್ತಿಲ್ಲ. ಚಾರುಮತಿ ಪಾರ್ವತಿದೇವಿಗೂ ಹಿಂದಿನವಳೇ, ಅದೂ ಗೊತ್ತಿಲ್ಲ... ಏನೇ ಇರಲಿ , ನಾವು ಪೂಜೆ ಮಾಡಲಾಗದಿದ್ದಾಗ ನೆರೆಹೊರೆಯ ಪೂಜೆಗೆ ಭಾಗವಹಿಸಿ ಲಕ್ಷ್ಮೀಕೃಪೆಗೆ ಪಾತ್ರವಾಗುವುದು ಈ ಕಥೆಯ ಹಿಂದಿನ ಉದ್ದೇಶ ಎನ್ನೋಣ]

೨. ಮಹಾಭಾರತದಲ್ಲಿ ಎಲ್ಲವನ್ನು ಕಳೆದುಕೊಂಡಿದ್ದ ಯುಧಿಷ್ಠಿರ, ಎಲ್ಲವನ್ನೂ ಮತ್ತೆ ಪಡೆದುಕೊಳ್ಳಲು ಏನು ಮಾಡಬೇಕೆಂದು ಶ್ರೀಕೃಷ್ಣನನ್ನು ಕೇಳಿದಾಗ, ಶ್ರೀಕೃಷ್ಣ, ಯುಧಿಷ್ಠಿರನಿಗೆ 'ವರಮಹಾಲಕ್ಷ್ಮಿ ಪೂಜೆ' ಮಾಡಿ ಲಕ್ಷ್ಮೀಕೃಪೆಗೆ ಪಾತ್ರನಾಗು, ಎಲ್ಲವೂ ಸಿಗುತ್ತದೆ ಎಂದನಂತೆ.

[ಎಲ್ಲವೂ ಶೂನ್ಯ ಎಂದು ಕೊನೆಯಲ್ಲಿ ಗೀತೆಹೇಳಿದ ಶ್ರೀಕೃಷ್ಣ, ಆಗ ಯುಧಿಷ್ಠಿರನಿಗೆ ಪ್ರಪಂಚದ ಸುಖಗಳಿಗೆ ಬಯಸುವುದು ತಪ್ಪೆಂದು ಹೇಳದೆ ಪೂಜೆ ಮಾಡಿ ಪಡೆದುಕೋ ಎಂದು ಯಾಕೆ ಹೇಳಿದನೋ ಗೊತ್ತಿಲ್ಲ. ಅದಿರಲಿ.
ಆದರೆ, ಎಲ್ಲವನ್ನೂ ಕಳೆದುಕೊಂಡರೂ ನಿರಾಶಾವಾದಿಯಾಗದೆ, ಆಶಾವಾದದಿಂದ ಬದುಕಬೇಕು ಎಂಬುದು ಮತ್ತು ಗಂಡಸರೂ ಪೂಜೆ ಮಾಡಬಹುದು ಎಂಬುದು ಈ ಕಥೆಯ ಉದ್ದೇಶ ಇರಬಹುದು.]  

ಕಥೆಗಳೇನೇ ಇರಲಿ, ಅವುಗಳ ಉದ್ದೇಶದ ಸಂದೇಶ ಸರಿಯಾಗಿದೆ. 

ಸಾಮನ್ಯವಾಗಿ 'ವರಮಹಾಲಕ್ಷ್ಮಿ ಪೂಜೆ'ಯನ್ನು ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡುಗಳಲ್ಲಿ ಕಾಣಬಹುದು.
ಕಥೆಯಲ್ಲಿ ಬಂದ ಚಾರುಮತಿಯ ಸ್ಥಳ ಈಗಿನ ಮಹಾರಾಷ್ಟ್ರಕ್ಕೆ ಹತ್ತಿರವಾದದ್ದು, ಕೌಂಡಿನ್ಯಕ್ಕೆ ಸಮೀಪವಾದದ್ದು. ಬಹುಶಃ ಅದು ವರದಾ ನದಿ ತೀರದ ವಿದರ್ಭ ಪ್ರದೇಶವಿರಬೇಕು.  ಬಹುಶಃ ಹಾಗಾಗಿ ಈ ಪೂಜೆ ಆಂಧ್ರದ ಗಡಿಯಿಂದ ಆರಂಭವಾಗಿ ಈ ರಾಜ್ಯಗಳಿಗೆ ಮಾತ್ರ ಸೀಮಿತವಾಯಿತೇನೋ. ಕಥೆಯ, ಪೂಜೆಯ ಹಿಂದಿನ ಉದ್ದೇಶ ಸುಂದರವಾಗಿದ್ದರೂ, ಸರಿಯಾಗಿ ಪ್ರಚಾರವಾಗದೆ ಬೇರೆ ರಾಜ್ಯಗಳಿಗೆ ಅಷ್ಟಾಗಿ ತಲುಪಿಲ್ಲದಿರುವುದು ಬೇಸರದ ಸಂಗತಿ.
ಹೊಸದಾಗಿ ಮದುವೆಯಾದವರು, ಬದುಕಿನ ಬಗ್ಗೆ ಹೊಸ ಕನಸು ಕಾಣುತ್ತಿರುತ್ತಾರಲ್ಲ ಅದಕ್ಕೆ ಅವರೇ ಈ ಪೂಜೆಯಲ್ಲಿ ಹೆಚ್ಚು ಭಾಗವಹಿಸುವುದನ್ನು ಕಾಣಬಹುದು. 

ಭಕ್ತಿಯ ಶಕ್ತಿ, ಶುದ್ಧತೆ, ಸಂಕಲ್ಪ,..  ಎಲ್ಲದರಲ್ಲೂ ಹೆಣ್ಣೇ ಗಂಡಿಗಿಂತ ಹೆಚ್ಚು ಶಕ್ತಿಯುಳ್ಳವಳು ಎಂದೇನೋ ಆ ಶಕ್ತಿಪೂಜೆಗೆ ಈ ಶಕ್ತಿ - ಹೆಣ್ಣು ಸೂಕ್ತ ಎಂದಿರಬಹುದು. ಸುಖಸಂಸಾರಕ್ಕೆ ಹೆಣ್ಣು ಮುಖ್ಯ ಪಾತ್ರ ವಹಿಸುವುದರಿಂದ, ಆಕೆಯೇ ಬೇಡಲಿ ಇದನ್ನು - ನನ್ನ ಅಭಿಮತವಿದೆ.
ಗಂಡಸರೇ ಹೆಚ್ಚು ಭಾಗವಹಿಸುವ ಹಲವು ಹಬ್ಬ ಆಚರಣೆಗಳಿರುವಾಗ ಈ ಹಬ್ಬದಲ್ಲಿ ತನ್ನ ಭಕ್ತಿಶಕ್ತಿ ಬಳಸಲು, ಅಧ್ಯಾತ್ಮದ ಮಟ್ಟ ಏರಲು ಹೆಣ್ಣಿಗಿದು ಸುಂದರ ಅವಕಾಶ ಎನ್ನೋಣವೇ. ತನ್ನ ಹಬ್ಬ ಎಂದು ಹೆಮ್ಮೆಯಿಂದ ಆಕೆ ಹೇಳಲಿ.

ಇನ್ನೂ ಪೂಜಾವಿಧಾನಕ್ಕೆ ಬಂದರೆ,
ಅವರವರ ಸಂಪ್ರದಾಯಕ್ಕನುಗುಣವಾಗಿ, ಅವರವರ ಸಮಯ, ಸಾಧ್ಯತೆಗೆ ತಕ್ಕಂತೆ ಒಂದೊಂದು ಕಡೆ ಒಬ್ಬೊಬ್ಬರೂ ಒಂದೊಂದು ತರಹ ಪೂಜಿಸುತ್ತಾರೆ. ಸಂಪತ್ತಿಗೆ ತಕ್ಕಂತೆಯೂ.(ಪೂಜಾ ವಿಧಾನಗಳ ಕುರಿತು ಚರ್ಚಿಸುವ ಆಸಕ್ತಿಯಿಲ್ಲ)
ಆದರೆ, ಹೀಗೆಯೇ, ಇಂತೆಯೇ ಪೂಜಿಸಬೇಕೆಂಬ ನಿಯಮವಿಲ್ಲ.
ಮನಶುದ್ಧಿಯಿಂದ, ಭಕ್ತಿಯಿಂದ ಮನದಲ್ಲಿ ನಮಿಸಿದರೂ ಆ ಅಷ್ಟಲಕ್ಷ್ಮೀ ಒಲಿದು, ಅಷ್ಟಶಕ್ತಿಗಳನ್ನೂ ಕರುಣಿಸುತ್ತಾಳೆ.
ಸಂಸ್ಕೃತ ಶ್ಲೋಕ ಹೇಳಿಯೇ ಪೂಜೆ ಮಾಡಬೇಕಿಲ್ಲ. 'ತಾಯೇ ಲಕ್ಷ್ಮಿ, ಒಳ್ಳೆಯದು ಮಾಡು' ಎಂದರಾಯಿತು. ಇನ್ನೂ ಹೆಚ್ಚೆಂದರೆ, ಭಾವುಕರಾಗಿ
'ಕಮಲದ ಮೇಲೆ ಕುಂತವಳೇ, ಕಮಲವನ್ನು ಹಿಡಿದವಳೇ, ಕೃಪೆತೋರೆ ತಾಯೇ ಎಲ್ಲರಿಂದ ಪೂಜೆ ಪಡೆವವಳೇ..' ಎಂದರಾಯಿತು.


ಏನೇ ಇರಲಿ, ಮೂಲಭೂತ ಅವಶ್ಯಕತೆಗಳ ಗುರುತಿಸಿ, ಅವುಗಳನ್ನು ಪೂಜಿಸುವುದು (ಯಾವ ಹೆಸರಿಟ್ಟರೂ ಸರಿ ) ಸುಂದರ, ಒಳ್ಳೆಯ ಕಲ್ಪನೆ.
ಪ್ರತಿಯೊಬ್ಬರಿಗೂ ಈ ಶಕ್ತಿಗಳು ಅವಶ್ಯವಾದ್ದರಿಂದ, ಜಾತಿ,ಬೇಧ,ದೇಶ,ಭಾಷೆ ತೊರೆದು ಎಲ್ಲರೂ ಮಾಡಬೇಕಾದ ಪೂಜೆಯಿದು, ಅವರವರ ಸಂಪ್ರದಾಯದಂತೆ.

[ಹೇಳಬೇಕಾದ ವಿಚಾರ ಎಷ್ಟರ ಮಟ್ಟಿಗೆ ಮನವರಿಕೆ ಮಾಡಿಸಿದನೋ ತಿಳಿಯದು, ಮಧ್ಯೆ ಮಧ್ಯೆ ಎತ್ತಿರುವ ಪ್ರಶ್ನೆ ನನ್ನ ಪೂರ್ವಗ್ರಹ ಪೀಡಿತವಾದವು, ಅವನ್ನು ಬಿಡಿ]

~.~
Related Posts Plugin for WordPress, Blogger...