ಹೂ ಚೆಲ್ಲಿ ಕರೆದಿರುವೆ..


[ ನಾನು ತುಂಬಾ ಸಂಕಷ್ಟಕ್ಕೆ ಸಿಲುಕಿ ತುಂಬಾ ನೊಂದು ಏಕಾಂಗಿಯಂತೆ ಇದ್ದಾಗ ಬರೆದ ಕವಿತೆ ನಿಮ್ಮ ಮುಂದೆ.. ]


ಢಮರೆ ಢಮರೆ ಢಮ ಢಮಢಮ ಢಮಢಮ
ಢಮರೆ ಢಮರೆ ಢಮ ಢಮಢಮ ಢಮಢಮ
ಎದ್ದೇಳು ಎದ್ದೇಳು ನೀನು ಎದ್ದೇಳು
ಹರಶಿವನೆ ಪರಶಿವನೇ
ಏಳು ಏಳು ಎದ್ದೇಳು

ಏಕೆ ನೀನು ಅಲ್ಲಿರುವೆ
ನಾನು ಇಲ್ಲಿ ನೊಂದಿರುವೆ


ಬದುಕಲು ಬೇಕು ಗುರಿಯೆಂದೆ
ನೀ ಕೊಟ್ಟಿದ್ದು ಕೆಡಿಸೋ ಮನಸೊಂದೆ

ಹೆತ್ತವರೆಲ್ಲ ವೈರಿಗಳಾಗಿ
ಕಾಣುತಿಹರು ಕಣ್ಣೆದುರಲ್ಲಿ
ಸೋದರತ್ವವು ದ್ವೇಷವಾಗಿ
ಕಾಡುತಿಹುದು ನನ್ನನಿಲ್ಲಿ


ಸ್ನೇಹಿತರೆಲ್ಲ ಬಂಧುಗಳೆಲ್ಲ
ಎತ್ತ ಹೋದರೂ ನನಗಿಲ್ಲ


ಪ್ರೇಮದ ದೀವಿಗೆ ನೀ ಕೊಟ್ಟು
ಕಾಮದ ಬೆಂಕಿ ಹಚ್ಚಿರುವೆ
ಜ್ಞಾನದ ಬುತ್ತಿ ನೀ ಕೊಟ್ಟು
ಕನಸನ್ನು ಇನ್ನು ಉಳಿಸಿರುವೆ

ತಪ್ಪನು ಮಾಡಿಸಿ ನಗುತಿಹ ಶಿವನೇ
ಶಿಕ್ಷೆಯ ನೀಡಿ ಹೊರಟಿರೊ ಹರನೇ
ನಿನ್ನಯ ಮೇಲೆಯೇ ಎಲ್ಲ ಭಾರ
ಬಂದು ನೀಡೋ ಪರಿಹಾರ

ನಿನ್ನಯ ದಾರಿಯ ಕಾದಿರುವೆ
ಹೂ ಚೆಲ್ಲಿ ಕರೆದಿರುವೆ
ಏಕೆ ನೀನು ಅಲ್ಲಿರುವೆ
ನಾನು ಇಲ್ಲಿ ನೊಂದಿರುವೆ
~.~ ~.~ ~.~ ~.~ ~.~ ~.~ ~.~

ಬೇವುಂಡು ಬೆಲ್ಲದ ತುಣುಕಿಗಾಗಿ..


[ಸೂಚನೆ:ಹಿಂದೆ ನಾ ಬರೆದಿದ್ದ "ಇದು ನನ್ನಾ.. ಕಥೆ" ಸ್ವಲ್ಪ ದೊಡ್ದದೆನಿಸಿ ಹಲವರು ಇನ್ಮುಂದೆ ಸ್ವಲ್ಪ ಚಿಕ್ಕದಾಗಿರಲಿ ಎಂಬುದಾಗಿ ಅಭಿಪ್ರಾಯ ತಿಳಿಸಿದ್ದರು,ಅಂತೆಯೇ ಸಾಧ್ಯವಾದಷ್ಟು ಚಿಕ್ಕದಾಗಿ ಮಾಡಿದರೂ ಈ ಬರಹ ತುಸು ದೊಡ್ದದೆನಿಸುತ್ತಿದೆ.. ಎಲ್ಲರೂ ಸಹಕರಿಸಿರಿ..]


''ಈ ಬಾಳು ಬೇವು-ಬೆಲ್ಲ
ಎಲ್ಲಾನೂ ಸವಿಲೇಬೇಕು..''ಕಳೆದ ಸಂವತ್ಸರದ ಸಿಹಿ-ಕಹಿ ಅನುಭವಗಳನ್ನು ಮೆಲುಕು ಹಾಕುತ್ತ ಹೊಸ ಸಂವತ್ಸರಕ್ಕೆ ಕಾಲಿಡುತ್ತಿರುವ ನನ್ನೆಲ್ಲ ಬಾಂಧವರಿಗೂ "ಹೊಸ ವರ್ಷ ಯುಗಾದಿ ಹಬ್ಬದ ಹಾರ್ದಿಕ ಶುಭ ಆಶಯಗಳು..
"ಬದುಕಿನಲ್ಲಿ ಕಷ್ಟ-ಸುಖಗಳು ಸಹಜ.., ಕಷ್ಟದ ದಾರಿ ಬಂದಾಗ ಮುಂದೆ ಸುಖದ ದಾರಿ ಇದ್ದೇ ಇರುತ್ತದೆ,ಆದರೆ ಆ ಸುಖದ ಹಂತ ತಲುಪಲು ತಾಳ್ಮೆಯಿಂದ ಕಷ್ಟದ ದಾರಿಯನ್ನು ಸವೆಸಲೇಬೇಕು..
ಕಳೆದೆರಡು ವರ್ಷಗಳು ಜೀವನದ ಮೆಟ್ಟಿಲೇರುವ ದಾರಿಯಲ್ಲಿ ನನ್ನನ್ನು ಹೆಚ್ಚಾಗಿಯೇ ಬೀಳಿಸಿವೆ.. ಆ ಕಹಿ ಅನುಭವಗಳನ್ನು ನಿಮ್ಮ ಮುಂದಲ್ಲದೆ ಇನ್ಯಾರ ಮುಂದೆ ಹಂಚಿಕೊಳ್ಳಲಿ ಹೇಳಿ.

2008 ರಲ್ಲಿ ಅನಿರೀಕ್ಷಿತ ತಿರುವು ಕಂಡ ನನ್ನ ಜೀವನ..:ಹಳ್ಳಿಯಲ್ಲಿ ಹೊಲ-ಗದ್ದೆ ಕೆಲಸ ಮಾಡ್ಕೊಂಡು ಎಸ್.ಎಸ್.ಎಲ್.ಸಿ. ಮುಗಿಸಿದ ನಾನು, ನಮ್ಮೂರಿನಲ್ಲೇ ಆಗಲೇ ಓದುತ್ತಿದ್ದವರಂತೆಯೇ ದಿನಾಗಲೂ ಬಸ್ಸಿನಲ್ಲಿ ಊರಿಗೂ-ನಗರದ ಕಾಲೇಜಿಗೂ ಪ್ರಯಾಣಿಸುತ್ತ ಕಾಲೇಜು ಶಿಕ್ಷಣ ಮುಗಿಸುತ್ತೇನೆ ಎಂದುಕೊಂಡಿದ್ದೆ...
ಆದರೆ,ನನ್ನ ಜನ್ಮಜರು ನಮಗೆ(ನನ್ನ ಒಡಹುಟ್ಟಿದವರನ್ನು ಸೇರಿಸಿಕೊಂಡು) ಉಜ್ವಲ ಭವಿಷ್ಯ ರೂಪಿಸಿಕೊಡುವ ಉದ್ದೇಶದಿಂದ ಪಟ್ಟಣಕ್ಕೆ ಬಂದು ಜೊತೆಯಲ್ಲೇ ಇದ್ದುಕೊಂಡು ಓದಿಸಬೇಕೆಂಬ ದಿಢೀರ್ ನಿರ್ಧಾರ ಕೈಗೊಂಡರು.. ಅಂತೆಯೇ ಪಟ್ಟಣದಲ್ಲಿ ವಾಸ ಆರಂಭವಾಯಿತು.. ಬವಳಿಕೆ ಕಡಿಮೆ ಇದ್ದು,ವ್ಯವಹಾರಿಕ ಜೀವನದಲ್ಲಿ ತುಸು ದಡ್ದನೆ ಆಗಿದ್ದ ನನಗೆ ಹೊಸ ಸ್ಥಳ,ಹೊಸ ಜನರು, ಹೊಸ ಜೀವನದ ಹೊಂದಾಣಿಕೆ ಮೊದಮೊದಲು ಕಷ್ಟವೆನಿಸಿದರೂ ನಂತರದಲ್ಲಿ ಹೊಂದಿಕೊಂಡಿತು.. ಯಾರ ಪರಿಚಯವಿಲ್ಲದ ನಾನು ಕಾಲೇಜು-ಮನೆ-ಪಾಠ-ಓದು ಇಷ್ಟರಲ್ಲೇ ಅರ್ಧ ವರ್ಷ ಕಳೆದೆ,ನಂತರದಲ್ಲಿ ಹುಡುಗರ ಸ್ನೇಹವಾಯಿತು.
ಕಾಲೇಜು ಅಂದಮೇಲೆ ಹುಡುಗರ ಸಂಘ ಇರುತ್ತದೆ ಅಲ್ಲವೇ, ಅದೂ ಅಲ್ಲದೆ ನಗರದಲ್ಲಿ ಬೇರೆ ಇದ್ದೇನಲ್ಲ ,ಹುಡುಗರ ಸಹವಾಸ ತುಸು ಹೆಚ್ಚೇ ಆಯಿತು..
ಗುರುವೃತ್ತಿಗೆ ಅನರ್ಹರಾದ ಗುರು ಎನಿಸಿಕೊಂಡಿದ್ದವರನ್ನೇ ಚಿಕ್ಕಂದಿನಿಂದಲೂ ನೋಡುತ್ತಿದ್ದ ನನಗೆ ಇಲ್ಲಿಯೂ ಅದೇ ಪುನರಾವರ್ತನೆ ಆದರೂ ಒಬ್ಬ ಶ್ರೇಷ್ಠ ಗುರುಗಳು ನನಗೆ ದೊರೆತಿದ್ದು ನನ್ನ ಪುಣ್ಯವೇ ಸರಿ., ಅವರಿಂದ ಜ್ಞಾನಬುತ್ತಿ ಸಂಪಾದಿಸುವುದರ ಜೊತೆಗೆ ಜೀವನಕ್ಕೆ ಅವಶ್ಯಕವಾದ ಸಂಸ್ಕಾರ,ನಡತೆ.. ಮುಂತಾದ ಅಂಶಗಳನ್ನು ಕಲಿತ ನಾನು ಅವರ ಮಾರ್ಗದರ್ಶನ ಅನುಸರಿಸಲು ಶ್ರಮಿಸಿ,ಸೋತು,ಶ್ರಮಿಸುತ್ತಿದ್ದೇನೆ... ನಾನು ಈಗ ತುಸುವಾದರೂ ಮುಂದೆ ಬಂದಿದ್ದೇನೆ ಎಂದರೆ ಅವರ ಮಾರ್ಗದರ್ಶನವೇ ಕಾರಣ ಎಂದರೆ ತಪ್ಪಿಲ್ಲ..
ನೋಡಲು ಸಣ್ಣವನಾದರೂ ಮಾತಿನಲ್ಲಿ ಮಾತ್ರ ಯಾರಿಗೂ ಸೋಲಲಿಚ್ಚಿಸದಿದ್ದ ನನ್ನ ಪುಂಡ ಪ್ರದರ್ಶನ ಒಮ್ಮೆ ಕಾಲೇಜಿನ ಅಧ್ಯಾಪಕರ ಮುಂದೆಯೂ ನಡೆದಿದ್ದರಿಂದ ನನಗೆ ಪುಂಡರ ಸಹವಾಸವು ಹೆಚ್ಚಿತು,ಪುಂಡರ ಸಹವಾಸ ನನ್ನ ಓದಿಗೆ ತೊಂದರೆಯೇನಾಗಿರಲಿಲ್ಲ....
ಇವೆಲ್ಲದರ ನಡುವೆ ಮೊದಲ ವರ್ಷದ ನನ್ನ ಫಲಿತಾಂಶ ಎಲ್ಲರ ನಿರೀಕ್ಷೆಯನ್ನೂ ಮೀರಿತ್ತು...
ಜೀವನದಲ್ಲಿ ಎರಡನೇ ವರ್ಷದ ಪಿ.ಯು. ಮುಖ್ಯ ಘಟ್ಟ ಎಂಬ ನನ್ನ ಗುರುಗಳ ಮಾತು ನನ್ನನ್ನು ಪದೇ ಪದೇ ಎಚ್ಚರಿಸುತ್ತಿದ್ದ ಫಲವಾಗಿ ಎರಡನೇ ವರ್ಷದ ಪಿ.ಯು. ಆರಂಭದಲ್ಲಿ ನನ್ನ ಗುರಿಯನ್ನು ಸಾಧಿಸಲು ನಾನು ಪಡುತ್ತಿದ್ದ ಶ್ರಮ ನನ್ನ ಕೈಯಲ್ಲಿ ದಾಖಲೆ ಬರೆಸುವಷ್ಟು ಶರವೇಗದಲ್ಲಿತ್ತು.., ಅದರ ಪರಿಣಾಮವಾಗಿ ನನಗೆ ಎಲ್ಲ ಕಡೆಯಿಂದಲೂ ಪ್ರಶಂಸೆಗಳೂ ಬರುತ್ತಾ ನನ್ನಲ್ಲಿ ಇನ್ನಷ್ಟು ಉತ್ಸಾಹ ತುಂಬುತ್ತಿದ್ದವು..

ಆರಂಭವಾಯ್ತು ಕೆಟ್ಟ ಘಳಿಗೆ..:ಹೀಗಿದ್ದಾಗ ಒಂದು ದಿನ ಗೆಳೆಯನ ಮನೆಯಲ್ಲಿ, ನನ್ನ ಜೀವನದಲ್ಲಿಯೇ ಮೊದಲಬಾರಿಗೆ,(ಅಲ್ಲಿಯವರೆಗೂ ಕೇವಲ ಕೇಳಿದ್ದೆ,ಓದಿದ್ದೆ) ನೋಡಿದ ಅಶ್ಲೀಲ ಸಿನಿಮಾ ಚಿಕ್ಕಂದಿನಿಂದ ನನಗಿದ್ದ ಲೈಂಗಿಕತೆಯ ಆಸಕ್ತಿಯನ್ನು ಹೆಚ್ಚುವಂತೆ ಮಾಡಿ ನನ್ನ ಮನಸನ್ನು ಸ್ಥಿಮಿತ ಕಳೆದುಕೊಳ್ಳುವಂತೆ ಮಾಡಿತು.. ಒಂದೆರಡು ದಿನ ಕಾಮಾಂಧನಾಗಿ ಅವನ ಹತ್ತಿರವಿದ್ದ ಎಲ್ಲ ಅಶ್ಲೀಲ ಸಿನಿಮಾಗಳನ್ನು ವೀಕ್ಷಿಸಿದ ನಾನು, ಅಷ್ಟೇ ಬೇಗ ಅದರ ಕಡೆ ಗಮನ ಬಿಟ್ಟು ಓದಿನ ಕಡೆಗೆ ಹೆಚ್ಚಾಗಿ ಗಮನ ಹರಿಸಲು ಮುಂದಾದೆ..
ನನ್ನಲಿ ಚಟವಿತ್ತು,ಹಣವಿತ್ತು. ನನ್ನ ಗೆಳೆಯನೊಬ್ಬನ ಹತ್ತಿರ ಚಟವಿತ್ತು, ಹಣವಿರಲಿಲ್ಲ..ಹಾಗಾಗಿ ನನ್ನಿಂದ ಹಣ ಖರ್ಚು ಮಾಡಿಸಿ ಅವನೂ ತನ್ನಾಸೆ ತೀರಿಸಿಕೊಳ್ಳುವ ಉದ್ದೇಶವಿಟ್ಟುಕೊಂಡು ನನ್ನನ್ನು ಸೈಬರ್ ಲೋಕಕ್ಕೆ ಪರಿಚಯಿಸಿದ್ದ..(ಅವನು ಹಾಗೆ ಮೊದಲೇ ಯೋಜನೆ ಹಾಕಿದ್ದನೆಂದು ಇತ್ತೀಚಿಗೆ ತಿಳಿಯಿತು/),ಅಲ್ಲಿಯವರೆಗೆ ನನಗೆ ಅಂತರ್ಜಾಲದ ಬಗ್ಗೆ ಸ್ವಲ್ಪವೂ ತಿಳಿದಿರಲಿಲ್ಲ... ನಂತರದಲ್ಲಿ ನನಗೆ ಅಂತರ್ಜಾಲದ ಬಗ್ಗೆ ಒಲವು ಮೂಡಿತು...
ದುರುದ್ದೇಶದಿಂದ ಸೈಬರ್ ಲೋಕಕ್ಕೆ ಕಾಲಿರಿಸಿದ್ದ ನಾನು ಕ್ರಮೇಣ ಆರ್ಕುಟ್ ಕಡೆ ಮುಖ ಮಾಡಿದೆ... ಮೊದಲ ವರ್ಷದಿಂದ ಅಂದಿನ ದಿನದ ಓದು ಮುಗಿಸಿ ಒಂಟಿಯಾಗಿ ಕೂತು ಚಿಂತನೆ ನಡೆಸುವುದನ್ನು ಅಭ್ಯಾಸ ಮಾಡಿಕೊಂಡಿದ್ದ ನನಗೆ ಆ ಸಮಯದಲ್ಲಿ ಬೇಸರ ಕಳೆಯಲು ಆರ್ಕುಟ್ ಜೊತೆಯಾಯಿತು... ಆದರೆ ಅದರ ಸೆಳೆತ ಆರ್ಕುಟ್ ಲೋಕ ನನ್ನನ್ನು ವಶಪಡಿಸಿಕೊಳ್ಳುವಂತೆ ಮಾಡಿತು.. ಆರ್ಕುಟ್ ವ್ಯಸನಾಸಕ್ತನಾದ ನಾನು ಕ್ಲಾಸ್ಗೆ,ಮನೆಪಾಠಕ್ಕೆ ಚಕ್ಕರ್,ನೋಟ್ಸ್ ಇನ್ ಕಂಪ್ಲೀಟ್, ಟೆಸ್ಟ್ ಗೆ ಆಬ್ಸೆಂಟ್.. ಹೀಗೆ ತಪ್ಪುಗಳ ಸರಣಿಯನ್ನೇ ಶುರು ಮಾಡಿದೆ.. ಪರಿಣಾಮವಾಗಿ ನನ್ನ ಇಷ್ಟ ಗುರುಗಳಿಂದಲೇ ಬೈಗುಳ, ನನ್ನ ಮೇಲೆ ಭರವಸೆ ಇಟ್ಟಿದ್ದ ಕಾಲೇಜು ಅಧ್ಯಾಪಕ ವೃಂದರ ಹೀಯಾಳಿಕೆ, ಮನೆಯವರ ಚುಚ್ಚುಮಾತುಗಳು,ಜೊತೆಗೆ ಬದಲಾದ ಸ್ನೇಹಿತರ ನಡೆ-ನುಡಿ.... ನನ್ನ ಮನಸನ್ನು ಛಿದ್ರಗೊಳಿಸಿದವು... ನನಗೆ ಓದುವುದರ ಬಗ್ಗೆ ಆಸಕ್ತಿ ಹೊರಟೆ ಹೋಯಿತು.. ಎಷ್ಟೇ ಪ್ರಯತ್ನ ಮಾಡಿದರೂ ಓದುವುದರ ಬಗ್ಗೆ ಒಲವು ಮೂಡಿಸಿಕೊಳ್ಳಲಾಗದೆ ಹಣೆಯಲ್ಲಿ ಬರೆದಂತಾಗುತ್ತದೆ ಎಂಬ ನಿರ್ಧಾರವನ್ನು ಮನದಲ್ಲಿ ಆಳವಾಗಿ ತುಂಬಿಕೊಂಡೆ...
ಇದರ ನಡುವೆ ಶಾಂತಿಗೆಂದು ಆರ್ಕುಟ್ ಅನ್ನೇ ಸಂಗಾತಿಯಾಗಿ ಸ್ವೀಕರಿಸಿ ಹೆಚ್ಚು ಕಾಲ ಅಂತರ್ಜಾಲವನ್ನೇ ತಬ್ಬಿ ಕೂರುತ್ತಿದ್ದ ನನಗೆ ಜ್ಞಾನಮೂರ್ತಿ ಎಂಬ ಭಾವಜೀವಿಯೊಬ್ಬರು ನನಗೆ ಆರ್ಕುಟ್ ಮೂಲಕ ಪರಿಚಯವಾದರು..., ಬ್ಲಾಗ್ ಲೋಕಕ್ಕೆ ಪರಿಚಯಿಸಿ ನನ್ನನ್ನು ಒಬ್ಬ ಬ್ಲಾಗಿಗನನ್ನಾಗಿ ಮಾಡಿದರು.. ಅವರ ಮುಂದೆ ಎಲ್ಲವನ್ನೂ ಹೇಳಿಕೊಂಡೆ.., ಯಾರ ಮಾತು ಹಿಡಿಸದಿದ್ದ ನನಗೆ ಅದೇಕೋ ಅವರ ಮಾತು ಹಿಡಿಸತೊಡಗಿದವು.. ಅವರೂ ಸ್ವಲ್ಪ ಬುಧ್ಧಿಮಾತು ಹೇಳಿದರು, ಸಮಾಧಾನ ಮಾಡಿ ಮತ್ತೆ ಹುರುಪು ತುಂಬುವ ಪ್ರಯತ್ನ ಮಾಡಿದರು.. ಅವರ ಮಾತಿಗೆ ಬೆಲೆಕೊಟ್ಟು ಕಷ್ಟಪಟ್ಟು ಓದಲು ಅನುವಾದೆ..
ಆದರೆ ಸಮಯ ಕಳೆದುಹೋಗಿತ್ತು!
ಜ್ಞಾನಮೂರ್ತಿಯವರು ಸಿಕ್ಕಿದ್ದು,ಅವರ ಸಹಕಾರದಿಂದ ಬ್ಲಾಗಿಗನಾಗಿದ್ದು,ಬ್ಲಾಗಿಗನಾಗಿ ನೀವೆಲ್ಲರೂ ಸಿಕ್ಕಿದ್ದು.. ಇವೇ ಅಂತರ್ಜಾಲದಿಂದ ನನಗಾದ ಉಪಯೋಗಗಳು ..

ಇವೆಲ್ಲದರ ನಡುವೆ ೫೦-೬೦% ನಿರೀಕ್ಷೆ ಮಾಡಿದ್ದ ನನಗೆ ೭೦% ಫಲಿತಾಂಶ ಬಂದು ಆಶ್ಚರ್ಯ ಹಾಗೂ ಸೋಜಿಗವನ್ನು ಉಂಟುಮಾಡಿತು.. ಪ್ರಯತ್ನವೇ ಇಲ್ಲದೆ ಬಂದ ನನ್ನ ಫಲಿತಾಂಶ ನನ್ನದಲ್ಲ ಎಂದು ಇಂದಿಗೂ ಅನಿಸುತ್ತಿದೆ.. ಎಲ್ಲಾ ದೈವೇಚ್ಛೆ ಎಂದುಕೊಂಡೆ..
ನಂತರದಲ್ಲಿ ಇಂಜಿನಿಯರ್ ಓದಬೇಕೆನ್ನುವ ಎಲ್ಲರ ಮಾತನ್ನು ತಿರಸ್ಕರಿಸಿ ಬಿ.ಎಸ್ಸಿ. ಆರಿಸಿಕೊಂಡಿದ್ದು ನನಗೆ ಮನೆಯಲ್ಲಿ,ಊರಲ್ಲಿ,ಸುತ್ತಮುತ್ತಲಲ್ಲಿ,.. ಎಲ್ಲೂ ಗೌರವ ಇಲ್ಲದಂತೆ ಮಾಡಿತು.
ಸುತ್ತಮುತ್ತಲಲ್ಲಿ ನನಗೆಂದೆ ಇದ್ದ ಸ್ಥಾನಮಾನ ಕಳೆದು ಹೋಗಿ,ಒಂಟಿಯೆನಿಸಿ ನನ್ನದೇ ಲೋಕ ಸೃಷ್ಟಿಸಿಕೊಂಡೆ. ಯಾವುದಾದರೊಂದು ಕೆಲಸ ಸೇರಿಬಿಡಬೇಕು ಎಂದುಕೊಂಡು ಇತ್ತೀಚಿಗೆ ಒಂದು ಕೆಲಸಕ್ಕೆ ಅರ್ಜಿ ಹಾಕಿ ತಿರಸ್ಕೃತವಾದ ನನಗೆ ಇತ್ತೀಚಿಗೆ ಜೀವನದ ತಪ್ಪುಗಳು ಅರಿವಾಗತೊಡಗಿವೆ..


ಕಾಲವು ನನಗೆ ಸರಿಯಾಗೇ ಉತ್ತರ ನೀಡಿದ್ದು ನಾ ಮಾಡಿದ ತಪ್ಪುಗಳಿಗೆ ಪಶ್ಚಾತ್ತಾಪ ಪಡುತ್ತಿದ್ದೇನೆ...
ಮುಂದಾದರೂ ಚೆನ್ನಾಗಿ ಓದಿ ನನ್ನ ಸ್ಥಾನಮಾನಗಳನ್ನು ದೊರಕಿಸಿಕೊಳ್ಳಬೇಕೆಂದು ನಿರ್ಧರಿಸಿ ಆ ನಿಟ್ಟಿನಲ್ಲಿ ಪ್ರಯತ್ನಿಸುತ್ತಿದ್ದೇನೆ.. ಹಲವಾರು ಕುರುಡು ಕನಸು ಕಾಣುತ್ತಿದ್ದ ನನಗೆ ಈಗ ಕಣ್ಣ ಮುಂದಿರುವುದು ಡಿಗ್ರಿಯಲ್ಲಿ ರಾಂಕ್ ಪಡೆಯಬೇಕು,ಜೊತೆಗೆ ಬ್ಲಾಗಿನಲ್ಲಿ ಒಳ್ಳೆ ಹೆಸರು ಮಾಡಬೇಕು ಎಂಬ ಆಸೆ.. ಅದೇ ನಿಟ್ಟಿನಲ್ಲಿ ಶ್ರಮಿಸುತ್ತಿರುವ ನನಗೆ ಕೆಲವು ಒಡಕುಗಳು ಎದುರಾಗುತ್ತಿವೆ,ಒಂದು ದಿನ ನಾ ಅಂದುಕೊಂಡಂತೆ ನಡೆದರೆ ಮುಂದಿನ ಐದಾರು ದಿನಗಳು ವ್ಯರ್ಥವಾಗುತ್ತಿವೆ,ಮನಸ್ಸು ಸರಿಯಿಲ್ಲವಾಗಿದೆ..
ಯಾಕೋ ದೈವಶಕ್ತಿ ದೂರ ಉಳಿದು ನನ್ನ ಸಾಮರ್ಥ್ಯ ಪರೀಕ್ಷಿಸಲು ಮುಂದಾಗಿದೆ ಎನಿಸುತ್ತಿದೆ..
ಆದರೂ ಛಲಬಿಡದೆ ಪ್ರಯತ್ನಿಸುತ್ತಾ ಕನಸನ್ನು ಸಾಕಾರಗೊಳಿಸುವ ಕುಸುರಿ ಕೆಲಸ ನಡೆಸುತ್ತಿದ್ದೇನೆ..
ಹೇಗೋ ಆಗಿದ್ದು ಆಗಿಹೋಯ್ತು, ಮುಂದಿನ ವರ್ಷಗಳಲ್ಲಾದರೂ ಒಳ್ಳೆಯದಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತಿದ್ದೇನೆ..
ಹೀಗೆ ಜೀವನದಲ್ಲಿ ಇಲ್ಲಿಯವರೆಗೂ ಕಹಿಯನ್ನೇ ಉಂಡು ಮುಂದೆ ಸಿಹಿ ತಿನ್ನುವ ತವಕದಲ್ಲಿದ್ದೇನೆ..


ಆದರೂ,ಯಾವುದೇ ಕೆಲಸವಾದರೂ ನಮ್ಮ ಶ್ರಮ ಎಷ್ಟೇ ಇದ್ದರೂ ದೈವಾನುಗ್ರಹವೂ ಬೇಕಲ್ಲವೇ ಕಾದುನೋಡೋಣ..
~ . ~
Related Posts Plugin for WordPress, Blogger...