ಹೀಗೂ ಇರ್ತಾರಪ್ಪ ಜನ..


1.ಯುವಕನ್ನೊಬ್ಬ ಇನ್ನು ನಂಬರೇ ಹಾಕಿರದ ತನ್ನ ಹೊಸ ಪಲ್ಸರ್ ಗಾಡಿಯನ್ನು ಮುಖ್ಯರಸ್ತೆಯಲ್ಲಿ ವೇಗವಾಗಿ ಉತ್ಸಾಹದಿಂದ ಓಡಿಸುತ್ತಾ ಬರುತ್ತಿದ್ದಾನೆ..ದುರದೃಷ್ಟವಶಾತ್ ಅಲ್ಲೊಬ್ಬ ಟ್ರಾಫಿಕ್ ಪೋಲಿಸ್ ಇದ್ದ. ತಕ್ಷಣ ಆ ಹುಡುಗನನ್ನು ಹಿಡಿದು ನಿಲ್ಲಿಸಿದನು..ಆ ಯುವಕ ಆ ಪೋಲಿಸ್ ಕಿವಿಯಲ್ಲಿ ಏನೋ ಗುನುಗುತ್ತಿದ್ದಾನೆ.. ತಕ್ಷಣ ಆ ಪೋಲಿಸ್ 'ಹೌದ ಸರ್,ನಂಗೊತ್ತಿರ್ಲಿಲ್ಲ.... ನಡೀರಿ ಸರ್..' ಎಂದು ಏನೇನೋ ಹೇಳುತ್ತಾ ಆ ಯುವಕನನ್ನು ಕಳುಹಿಸಿಯೇ ಬಿಟ್ಟ..
ಇನ್ನೊಂದು ದಿವಸ ಮೂವರು ಯುವಕರು ಒಂದೇ ಬೈಕಿನಲ್ಲಿ ಬರುತ್ತಿರಲು ಟ್ರಾಫಿಕ್ ಪೋಲಿಸ್ ಕಣ್ಣಿಗೆ ಬಿದ್ದರು.. ಆ ಬೈಕಿಗೆ ಅಪ್ಪ-ಅಮ್ಮ(ಡಾಕ್ಯೂಮೆಂಟ್ಸ್ ) ಇಲ್ಲದಿರುವುದನ್ನು ತಿಳಿದ ಪೋಲಿಸ್ ಬಾಯಿ ಜೋರು ಮಾಡಿ ಕೂಗಾಡಲು ಶುರುಮಾಡಿದ.. ಸುಮಾರು ಹೊತ್ತಿನ ತನಕ ಮಾತಿನ ಚಕಮಕಿಯ ನಂತರ ಅವರಲ್ಲೊಬ್ಬ ಯುವಕ ಆ ಪೋಲಿಸ್ ಕೈಗೆ ೩೦೦/- ರೂಪಾಯಿ ಇಟ್ಟ.'ಆದ್ರೂ... ತಪ್ಪಲ್ವಾ' ಎಂದ ಪೋಲಿಸ್..'ಇರ್ಲಿ..ಇಟ್ಕೊಳ್ಳಿ.. ಮುಂದೆ ಸಿಗೋಣ ಸರ್..' ಅಂತ ಹೇಳಿ ಆ ಪೋಲಿಸ್ ಗೊಂದು ಸಿಗರೆಟ್ ಕೊಟ್ಟು ಬೈಕ್ ಏರಿ ಹೊರಟೇಬಿಟ್ಟ.!!
ಮತ್ತೊಂದು ದಿನ ಟ್ರಾಫಿಕ್ ಪೋಲಿಸ್ ಮಹಾಶಯ ಯಾವುದೋ ಟಿ.ವಿ.ಎಸ್ ಹಿಡಿದು ನಿಲ್ಲಿಸಿದ್ದ.. ಆ ಟಿ.ವಿ.ಎಸ್. ಮಾಲೀಕ ತನ್ನ ೫-೬ ವರ್ಷದ ಮಗನನ್ನು,ಹೆಂಡತಿಯ ಜೊತೆ ಆಸ್ಪತ್ರೆಗೆ ಕರೆದುಕೊಂಡು ಹೋಗ್ತಿದ್ದ.. ಅವನು ರಸ್ತೆ 'ಒನ್ ವೇ' ಆಗಿರೋದ್ನ ತಿಳಿಯದೆ ಬೈಕನ್ನು ಆರಸ್ತೆಯಲ್ಲಿ ಓಡಿಸಲು ಮುಂದಾಗಿದ್ದ ಅಷ್ಟೇ! ಅಷ್ಟಕ್ಕೇ ಹಿಡಿದು ಏನೇನೋ ಕೇಳಿ ಪಾಪ ಗಾಡಿನ ನಿಲ್ಲಿಸಿಕೊಂಡಿದ್ದ ಆ ಪೋಲಿಸ್. ಆ ಟಿ.ವಿ.ಎಸ್. ಗಾಡಿಯವನನ್ನು ನೋಡ್ತಾ ಇದ್ರೆ ಅವನೊಬ್ಬ ಏನೂ ಅರಿಯದ ಪಕ್ಕ ಹಳ್ಳಿಗುಗ್ಗು ತರಹ ಕಾಣುತ್ತಿದ್ದ. ಅವನ,ಅವನ ಫ್ಯಾಮಿಲಿಯ ವೇಷ-ಭೂಷಣ ನೋಡಿದ್ರೆ ಗೊತ್ತಾಗುತ್ತೆ ಅವನು ಕಡುಬಡವ ಅಂತ.ಅವನ ಹೆಂಡತಿ 'ಅದೇನೋ ನಂಗ್ ಗೊತ್ತಗಕ್ಕಿಲ್ಲ ಕಣಪ್ಪ.. ತಪ್ಪಾಯ್ತು ಬುಟ್ಬುಡಪ್ಪ.. ಆಸ್ಪತ್ರೆಗೆ ಹೋಗ್ಬೇಕು..' ಎಂದು ಎಷ್ಟು ಅಂಗಲಾಚಿದರೂ ಪ್ರಯೋಜನ ಆಗುತ್ತಿಲ್ಲ.
ಈ ಪ್ರಸಂಗಗಳನ್ನು ನೋಡಿ ಏನಂತೀರ..?
2.ಅದೊಂದು ಕಾಲೇಜು.. ಎಲ್ಲ ಕಾಲೇಜುಗಳಂತೆ ಅಲ್ಲೂ ಮೊಬೈಲ್ ಫೋನುಗಳ ನಿಷೇಧವಿದ್ದರೂ ಸೈಲೆಂಟ್ ಮೋಡ್ ನಲ್ಲಿ ಎಷ್ಟೋ ಮೊಬೈಲ್ ಫೋನುಗಳಿದ್ದವು..
ಈಗಿನ ಕೆಲವು ಹುಡುಗರು ಹುಡುಗಿಯರನ್ನು ಆಕರ್ಷಣೆ ಮಾಡೋದಕ್ಕೆ ಸ್ವಲ್ಪ ಜಾಸ್ತಿ ಸೌಂಡ್ ಬಾರೋ ಮೊಬೈಲ್ ಫೋನುಗಳನ್ನು ತಕೊಂಡು ಜೋರಾಗಿ ಹಾಡು ಹಾಕ್ತಾರೆ..
ಹಾಗೆಯೇ ಒಂದು ದಿನ ಬೆಳ್ಳಂಬೆಳಿಗ್ಗೆನೆ ೯ ಕ್ಕೆ ಕಾಲೇಜಿಗೆ ಬಂದ ಹುಡುಗನೊಬ್ಬ ಪಾಪ ಪೇಪರ್ ರೀಡಿಂಗ್ ಮಾಡೋಕೆ ಆ ಕಾಲೇಜ್ ನಲ್ಲಿ ಪೇಪರ್ ರೂಂ ನೆ ತೆಗೆಯೋದು ತುಂಬಾ ಅಪರೂಪ ಆದ್ದರಿಂದ ಒಂದು ಹುಡುಗ ಜೋರಾಗಿ ಹಾಡು ಹಾಕಿ ಕೂತಿದ್ದಾನೆ.. ಹಿಂದಿನಿಂದ ಒಬ್ಬ ಉಪನ್ಯಾಸಕರು ಬರುತ್ತಿರೋದ್ನ ಗಮನಿಸಿಲ್ಲ.. ಆ ಉಪನ್ಯಾಸಕರು ಬಂದವರೇ ಅವನಿಂದ ಮೊಬೈಲ್ ಕಸಿದುಕೊಂಡು ಹೊರಟೆಬಿಟ್ರು.. ಆ ಹುಡ್ಗ ಎಷ್ಟು ಬೇಡಿದರೂ ಉಪಯೋಗ ಆಗ್ಲಿಲ್ಲ..
ಅದೆ ಕಾಲೇಜಿನಲ್ಲಿ ಒಂದು ದಿನ ಭೌತಶಾಸ್ತ್ರ ಪ್ರಯೋಗಾಲಯದಲ್ಲಿ ವಿದ್ಯಾರ್ಥಿಗಳೆಲ್ಲ ಗುಂಪುಗುಂಪಾಗಿ ತಮ್ಮ ತಮ್ಮ ಎಕ್ಷ್ ಪರಿಮೆಂಟ್(ಪ್ರಯೋಗ) ಮಾಡ್ತಿದಾರೆ.. ಅಲ್ಲೇ ಇಬ್ಬರು ಉಪನ್ಯಾಸಕರು ಮಾತುಕತೆ ನಡೆಸುತ್ತಿದ್ದಾರೆ..ಒಂದು 'ಸುಂದರ' ಹುಡುಗಿಯ ಜನರಲ್ ಮೋಡ್ ನಲ್ಲೆ ಮೊಬೈಲ್ ಫೋನ್ 'ಹುಡುಗರು ಬೇಕು..' ಎಂದು ಹಾಡುತ್ತ ರಿಂಗಣಿಸಿತು.. ಆಕೆ ತಕ್ಷಣ ರಿಸೀವ್ ಮಾಡಿ ಮಾತನಾಡೋಕೆ ಶುರುಮಾಡಿದಳು.. ಪಾಪ ಆ ಎಕ್ಷ್ಪರಿಮೆಂಟ್ ಮಾಡ್ತಿದ್ದವರಿಂದ ಸ್ವಲ್ಪ ಡಿಸ್ಟರ್ಬ್ ಆಗಿರಬೇಕು.. ಫೋನು ಎತ್ತುಕೊಂಡು ಸೈಡಿಗೆ ಹೋಗಿ ಮೂಲೆಯಲ್ಲಿ ನಿಂತ್ಕೊಂಡು ಗೋಡೆಗೆ ಮುಖ ಮಾಡಿ ನಗು ನಗುತ್ತ ಮಾತನಾಡೋಕೆ ಶುರುಮಾಡಿದಳು..
ಒಂದೈದು ನಿಮಿಷದ ನಂತರ ಉಪನ್ಯಾಸಕರೊಬ್ಬರು ಅಲ್ಲೇ ಇದ್ದ ಒಂದು ಗುಂಪಿಗೆ ಪ್ರಯೋಗದ ಬಗ್ಗೆ ಸ್ವಲ್ಪ ವಿವರಣೆ ನೀಡಿ ಅಲ್ಲೇ ಅಡ್ಡಾಡುತ್ತಿದ್ದಾರೆ.. ಅವರಿಗೆ ಆ 'ಮಾತೆ' ಕಾಣಿಸುತ್ತಿದ್ದಾಳೆ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.. ಸುಮಾರು ೨೦ ನಿಮಿಷ ಮಾತಾಡಿ ಸುಸ್ತಾದ ಆ ಮಾತೆ ಪ್ರಯೋಗ ಮಾಡ್ತಿದ್ದ ಅವರ ಗುಂಪಿನೊಡನೆ ಬೆರೆತುಕೊಂಡಳು..
ಇದರ ಬಗ್ಗೆ ಏನು ಹೇಳಬಹುದು..?
3.ಒಂದು ತಾಲೋಕ್ ಆಫೀಸ್..ಬೆಳಿಗ್ಗೆ ೧೦ ಗಂಟೆ, ಇನ್ ಕಂ ಸರ್ಟಿಫಿಕೇಟ್ ಪಡೆಯಲು ಜನರೆಲ್ಲಾ ಸಾಲಾಗಿ ಕಿಟಕಿ ಬಾಗಿಲ ಬಳಿ ನಿಂತಿದ್ದಾರೆ..
ಒಬ್ಬಾತ ಬಂದ., ಸಾಲು ನೋಡಿ ನೇರವಾಗಿ ಆಫೀಸ್ ಒಳಗೆ ಹೋದವನೇ ೧೫ ರೂಪಾಯಿ ಕೊಟ್ಟು ಪಡೆಯಬೇಕಿದ್ದ ಸರ್ಟಿಫಿಕೇಟ್ಗೆ ೧೫೦ ಕೊಟ್ಟ. ತಕ್ಷಣ ಕ್ರಿಯಾಶೀಲನಾದ ಸರ್ಟಿಫಿಕೇಟ್ ವಿತರಕ ಎಲ್ಲೆಲ್ಲೋ ತಡಕಾಡಿದ.. ಆದರೆ ಆವ್ಯಕ್ತಿ ಇದಕ್ಕೆ ಮೊದಲು ಅಪ್ಲೈ ಮಾಡೇ ಇರ್ಲಿಲ್ಲ.. ಆದರಾಗಲೀ ಎಂದು ಅವರನ್ನು ಕುಳ್ಳಿರಿಸಿ ೧೦ ನಿಮಿಷದಲ್ಲಿ ರೆಡಿ ಮಾಡಿ ಸರ್ಟಿಫಿಕೇಟ್ ಕೊಟ್ಟುಕಳುಹಿಸಿದ.. ಅಷ್ಟೊತ್ತಿಗೆ ೧ ಗಂಟೆ ಆಯ್ತು.. ಕಿಟಕಿ ಬಾಗಿಲು ಮುಚ್ಚಿ ನಡೆದ ವಿತರಕ ಮತ್ತೆ ಬಾಗಿಲು ತೆರೆದಿದ್ದು ನಾಲ್ಕು ಘಂಟೆಗೆ.. ಈ ಮೂರು ಘಂಟೆ ಅವನಿಗಿದ್ದುದು ಊಟ ಮಾಡೋ ಕೆಲಸ..ಹದಿನೈದು ದಿನದ ಹಿಂದೆಯೇ ಅಪ್ಲೈ ಮಾಡಿ ಕಾದು ಕೂತಿದ್ದ ಜನರಲ್ಲಿ ಕೆಲವರು ಸಾಲು ಬಿಟ್ಟು ಹೊರಟುಹೋಗಿದ್ದರು.. ಅವರಿಗೂ ಹೊಟ್ಟೆ ಇದೆಯೆಂದು ನನ್ನ ಅನಿಸಿಕೆ.
ಇದರ ಬಗ್ಗೆ ನಿಮ್ಮ ಅಭಿಪ್ರಾಯ?
ಏನಾದರೂ ಹೊಸದಾಗಿ ಹೇಳಿದ್ನ..?
)()()()()()()()()()()()()()()()()()(


~.~

ಯೌವ್ವನದ ನಾಕ..!

[ಯೌವ್ವನ ನರಕವಾಗುವ ಪರಿಯನ್ನು ನನಗೆ ತಿಳಿದಷ್ಟು ಶಬ್ಧಗಳಲ್ಲಿ ಹಿಡಿದಿಡಲು ಪ್ರಯತ್ನಿಸಿದ್ದೇನೆ...]


ಕತ್ತಲೆಮನೆಯಾಗಿದೆ ಯೌವ್ವನದ ನಾಕ
ಆಸೆಪತಂಗಕಿದು ಬೆಲ್ಲದ ಬಿಸಿಪಾಕ..
ಮನಸು ಅಂದು ತಿಳಿ ತಿಳಿ ಹಾಲು
ಯೌವ್ವನದ ಹನಿ ಆ ಹಾಲಿಗಿಳಿಯಲು
ಆಸೆ ತರಂಗಗಳು ಹೊಮ್ಮುತಿರಲು
ಕಾಡಿವೆ ಅರಿಷಡ್ವರ್ಗಗಳ ಕವಲು..
ಏಕಾಂತವ ಪದೆಪದೆ ಬಯಸಲು
ತನುಮನಕೀಗ ಏಕಾಂತವೆ ಸ್ವರ್ಗವು..
ಕಾಡುತಿರಲು ವಿರಹವು
ಮೂಡುತಿರಲು ಸಿಹಿನೋವು
ಜೇನು ತುಂಬಿದ ಕುಸುಮಗಳ
ಕೆರಳಿಸಿ ಅರಳಿಸುವ ಆಸೆ..
ಆಸೆಪತಂಗಕೆ ಸಿಹಿಪಾಕಕಾದರೂ
ಅಂಟಿ ಕ್ಷಣಿಕ ಸುಖಿಯಾಗುವ ಆಸೆ
ಸುಡುವ ಬಿಸಿಜ್ವಾಲೆಯನೆ ಬಳಸಿ
ತಂಪುಗಾಳಿಯ ಬಿಸಿಯುಸಿರಾಗಿಸುವ ಆಸೆ..
ಸಾಗುತಿರಲು ಕಾಲಬ್ರಹ್ಮನು
ನೂಕುತಿರಲು ಜೀವನಚಕ್ರ
ನನ್ನ ಜೀವನದ ಹಾದಿಗಳು
ಮುಂದೆ ಹೆಜ್ಜೆ ಇಟ್ಟು ಸವೆಸಲಾಗಿ
ಕುಸಿದುಹೋಗಿ ಮರೆಯಾಗುತಿವೆ
ಮತ್ತೊಮ್ಮೆ ತಲುಪಲಾಗದಂತೆ ತಿರುಗಿ..
ನಾಗಾಲೋಟದಲ್ಲಿ ಓಡುತಿರುವ
ಹುಚ್ಚುಕುದುರೆಗಳ
ಮನೋರಥವ ನಿಯಂತ್ರಿಸಲು
ಸಾರಥಿಯಾಗಬೇಕಿದೆ ನಾ..
ಮದವೇರಿ ಮೈಮರೆಯದೆ..
ಮನಸಿನಮನೆಗೆ ತಂಗಲು ಬರುವ
ಮೋಹಕಮಾಯೆಗಳ
ಮುಚ್ಚಿ ಬಾಗಿಲ ಹಿಂದೆ ನಿಂತು
ಹೋಗೆನ್ನಬೇಕಿದೆ ನಾ..
ಎದೆಹಾಸಿ ಸ್ವಾಗತಿಸದೆ..
.~~-~~.~~-~~.~~-

~.~-~
Related Posts Plugin for WordPress, Blogger...