ವಿಘ್ನೇಶ್ವರನ ವಿಸರ್ಜನೆ

!!ಜ್ಞಾನಾರ್ಪಣಮಸ್ತು!!

[
ಕಳೆದ ಸಲ ನಮ್ಮೂರಿನಲ್ಲಿ ನಡೆದ ಗಣಪನ ವಿಸರ್ಜನೆ ಕುರಿತು ಬರೆದಿದ್ದೆ.. ಇಂದು ಗಣಪತಿ ಕೂರಿಸುವುದರಲ್ಲಿ ನನಗಿರುವ ಅನುಭವದ ಬಗ್ಗೆ ಬರೀತಿದೀನಿ..]

ಮೊದಲನೆಯದಾಗಿ ಸರ್ವರಿಗೂ ಹಬ್ಬದ ಶುಭಾಷಯಗಳು...

ಗೌರಿ-ಗಣೇಶನ ಹಬ್ಬ ಬಂದಿದೆ,ಹಬ್ಬದ ಸಡಗರ ಸಂಭ್ರಮದ ಕುರಿತು ಹೇಳಬೇಕಿಲ್ಲವೆನಿಸುತ್ತದೆ.
ಗೌರಿ ಹಬ್ಬ ಸಾಮಾನ್ಯವಾಗಿ ಹೆಣ್ಮಕ್ಕಳಿಗಾದ್ರೂ ಗಣಪತಿ ಕೂರಿಸಿ ವಿಜೃಂಭಿಸುವುದು ಗಂಡ್ಮಕ್ಕಳಿಗೆ ಮೀಸಲಾದ ಕೆಲಸವಲ್ಲಲೇ.
ನಾ ಕಂಡಂತೆ ಹೇಳಬೇಕಂದ್ರೆ: ನಮ್ಮ ಹಳ್ಳಿಯಲ್ಲಿ ನಮ್ ಏರಿಯಾ ಹುಡುಗರ ವರ್ಸೇನೆ ಬೇರೆ,ಹಿಂದಿನಿಂದಲೂ ಪೋಲಿ ಪುಂಡಾಟಿಕೆಗಳಿಗೆ ಹೆಸರಾದ ಹುಡುಗರು ಗಣಪತಿ ಹಬ್ಬ ಬಂತಂದ್ರೆ ತುಂಬಾ ಬ್ಯುಸಿಯಾಗಿಬಿಡ್ತಾರೆ,ಬೇರೆ ಏರಿಯಾ ಹುಡುಗರಿಗಿಂತ ಜೋರಾಗಿ ಗಣಪತಿ ಕೂರಿಸಬೇಕು ಅಂತ ಯೋಜನೆ ಹಾಕೊಂಡ್ರು ಅದನ್ನ ಸಫಲ ಮಾಡೋದ್ರಲ್ಲಿ ಎಲ್ರೂ ಸೋಮಾರಿಗಳೆ.
ನಾನು ಚಿಕ್ಕವನಾಗಿದ್ದಾಗ ಹಬ್ಬದ ದಿನದಂದು ಊರಲ್ಲಿ ತಂದಿರುವ ಗಣಪತಿಗಳನ್ನು ನೋಡೋದ್ರಲ್ಲೆ ತೃಪ್ತಿ ಪಡ್ತಿದ್ದೆ.
ನಾನು ಸ್ಕೂಲಿಗೆ ಸೇರಿದ್ದ ವಯಸ್ಸಿನಲ್ಲಿ ನಾನು ಕೂಡ ಗಣಪತಿ ಕೂರಿಸಲು ನನ್ನ ಕೈಲಾದಷ್ಟು ಹಣ ನೀಡಿ ಅವರೊಳಗೊಬ್ಬನಾಗಿರುತ್ತಿದ್ದೆ.
ಆಗ ಗಣಪತಿ ಕಾಯಲು ಶಾಲೆಗೆ ಚಕ್ಕರ್ ಹಾಕ್ತಿದ್ದೆ,ರಾತ್ರಿ ವೇಳೆ ಗಣಪತಿ ಇಟ್ಟಿದ್ದ ಕಡೆಯೇ ಹುಡುಗರು ಮಲಗೋದು ರೂಢಿ,ಅವರೊಡನೆ ಮಲಗಲು ನನ್ನ ಮನೆಯವರು ಒಪ್ಪದಿದ್ದಾಗ ತುಂಬಾ ಅಳ್ತಿದ್ದೆ,ಗಣಪತಿ ಎಡೆಗೆ ತಿಂಡಿ ಮಾಡಿಕೊಡಿರೆಂದು ನಮ್ಮ ಮನೆಯವರನ್ನು ಪೀಡಿಸಿ ಮಾಡಿಸಿಕೊಳ್ಳುತ್ತಿದ್ದೆ.
ಅಕ್ಕಪಕ್ಕದೂರಿಗಳಿಗೆ ಹೋಗಿ ಅಲ್ಲಿಟ್ಟಿರುವ ಗಣಪತಿಗಳನ್ನು ನೋಡಿಬರೋದು ಒಂದು ಹವ್ಯಾಸವಾಗಿತ್ತು/ದೆ.
ಗಣಪತಿ ವಿಸರ್ಜನೆ ಮಾಡುವ ದಿನದಂದು ಹಬ್ಬವೋ ಹಬ್ಬ.. ಮೊದಲೇ ಶಾಲೆಗೆ ರಜ ಹಾಕಿ, ಸಂಜೆ ಆದಂತೆ ಮನೆಯಲ್ಲಿರುವ ಯಾವುದಾದರೂ ಹಳೆ ಬಟ್ಟೆ ಹಾಕಿಕೊಂಡು ಅಂಗಡಿಗಳಲ್ಲಿ ಬಣ್ಣ ತಕ್ಕೊಂಡು ವಿಸ್ಕಿ ಬಾಟಲಿಗೆ ನೀರಿನ ಜೊತೆ ಬಣ್ಣ ತುಂಬಿ ಇಟ್ಟುಕೊಂಡಿರುತ್ತಿದ್ದೆ, ಮೆರವಣಿಗೆ ಹೊರಡುವಾಗ ಬಣ್ಣ ಹಾಕುವುದು,ನಮಗೆ ಹಾಕಲು ಬಂದವರಿಂದ ತಪ್ಪಿಸಿಕೊಳ್ಳುವುದು ನಮ್ಮ ಕೆಲಸವಾಗಿತ್ತು.. ವಿಸರ್ಜನೆ ಮುಗಿಸಿ ಮನೆಗೆ ಬಂದಾಗ ಮನೆಯಲ್ಲಿ ಬೈಗುಳವೂ ಜೋರಾಗಿಯೇ ಇರುತ್ತಿತ್ತು.. ತಲೆ ತುಂಬಾ ಬಣ್ಣ ತುಂಬಿಕೊಂಡಿರುತ್ತಿತ್ತು ,ಸ್ನಾನ ಮಾಡಲು ಕೂತು ನೀರು ಹಾಕಿಕೊಂಡರೆ ಬಣ್ಣದ ನದಿಯೇ ಹರಿಯುತ್ತಿತ್ತು.. ನಮ್ಮ ಮೈ ಸಂಪೂರ್ಣ ಬಣ್ಣಮುಕ್ತವಾಗಲು ಒಂದು ವಾರವೇ ಬೇಕಿರುತ್ತಿತ್ತು..
ದೊಡ್ಡವನಾದಂತೆ ಗಣಪತಿ ಕೂರಿಸುವ ಕಡೆಗಿನ ಒಲವು ಹೊಸ ರೀತಿ ಅರ್ಥ ಪಡೆದುಕೊಂಡಿತು.

ಈಗ ನಮ್ ಏರಿಯಾಗೆ ನಾವೇ ದೊಡ್ಡ ಹುಡುಗರು,ನಮ್ ಏರಿಯಾ/ಏರಿಯಾದ ಜನರು ಬದಲಾಗಿದ್ದಾರೆ.
ಹಬ್ಬಕ್ಕೆ ಇನ್ನೂ ಒಂದು ವಾರ ಇರುವಂತೆ ತಲಾ ಇಷ್ಟಿಷ್ಟು ಕೊಡಬೇಕೆಂದು ಹೇಳಲಾಗುತ್ತದೆ,ಕೆಲವು ಯಜಮಾನರೊಡನೆ ನಮ್ ಹುಡುಗರಿಗೆ ಕೆಲವು ವಿಷಯಗಳಿಗೆ ವೈಮನಸ್ಯವಿದೆ, ಆ ಕೋಪವನ್ನು ಗಣಪತಿ ಕೂರಿಸಲು ಹಣ ಪಡೆಯಲು ಹೋದಾಗ ಅವರ ಹತ್ತಿರ
ಹೆಚ್ಚು ಹಣ ಕೀಳುತ್ತೇವೆ,ನಮ್ಮ ಪುಂಡಾಟಿಕೆ ಅರಿತ ಜನರು ನಮ್ಮ ಜೊತೆ ವಿರೋಧ ಕಟ್ಟಿಕೊಳ್ಳಲಿಚ್ಛಿಸದೆ ಕೇಳಿದಷ್ಟನ್ನೆ ಕೊಟ್ಟುಬಿಡುತ್ತಾರೆ.
ಪುಂಡಾಟಿಕೆಯನ್ನೆ ಇಷ್ಟಪಡುವ ನಮ್ ಹುಡುಗರು ರಸ್ತೆಯಲ್ಲೆ ಚಪ್ಪರ ಹಾಕಿ ಹಾದಿಯನ್ನೇ ಬದಲಾಯಿಸುತ್ತಾರೆ, ಚಪ್ಪರ ಹಾಕಲು ಸಿಕ್ಕಸಿಕ್ಕವರ ಮರ ಏರಿ ತೆಂಗಿನಗರಿ ತಂದು,ಹೇಳದೆ ಕೇಳದೆ ಗಳಗಳು ಕಂಡಲ್ಲಿ ಹೊತ್ತುತಂದು ಪುಂಡಾಟಿಕೆ ಮೆರೆಯುತ್ತಾರೆ.
ಗಣಪನ ವಿಸರ್ಜನೆಯ ದಿನ ಬೀದಿಬೀದಿಗಳಲ್ಲಿ ಕಟ್ಟಿರುವ ದನಕರುಗಳು ಬೆದರುತ್ತವೆ ಪಟಾಕಿ ಸಿಡಿಸಬೇಡಿ ಎಂದರೂ ಜಗಳ ಮಾಡುತ್ತಲೇ ಪಟಾಕಿ ಸಿಡಿಸುತ್ತಾರೆ. ಸಿಕ್ಕಸಿಕ್ಕವರಿಗೆ ಬೇಡವೆಂದರೂ ಬಣ್ಣ ಹಾಕಿ ಕಿರಿಕ್ ತೆಗೆಯುತ್ತಾರೆ. ಈ ಗುಂಪಲ್ಲಿ ಅಂದೇ ಎಣ್ಣೆ ಕುಡಿದು
ಟೈಟಾಗಿ ಕುಣಿದು ಕಿರುಚಾಡುವವರೂ ಇದ್ದಾರೆ.
ಕೆಲವು ಮನೆಯವರು ಈ ಗುಂಪಿನ ಜೊತೆಯಲ್ಲಿ ತಮ್ಮ ಹುಡುಗರು ಹೋದಾರೆಂದು ಹೆದರಿ
ತಮ್ಮವರನ್ನು ಹುಡುಕುತ್ತಾರೆ. ನಾವು ವಿಸರ್ಜನೆಗೆ ಹೋದಾಗ ಅನಾಹುತ ಆಗಬಹುದೆಂದು ಹೆದರಿ ಹಲವಾರು ಮುನ್ನೆಚ್ಚರಿಕೆ ನೀಡಿ ಜೋಪಾನವೆಂದು ಹೇಳುತ್ತಾರೆ..
ಈ ಗಲಾಟೆ ಗದ್ದಲ ಬೇಡ. ಇನ್ಮುಂದೆ ಗಣೇಶ ಕೂರಿಸೋದು ಬೇಡ,ಮುಂದಿನ ವರ್ಷದಿಂದ ನಮ್ ಏರಿಯಾದ ಚಿಕ್ಕವರಿಗೆ ಮುಂದಾಳತ್ವ ನೀಡಿ ನಾವು ಹಣ ನೀಡಿ ಸುಮ್ಮನಿರೋಣ ಎಂದುಕೊಂಡರೂ,ಬೇರೆ ಏರಿಯಾದ ಮೇಲೆ ಪೈಪೋಟಿ ಸಾಧಿಸಲು ನಾವೇ ಇರಬೇಕು ಎಂದುಕೊಂಡು ನಾವೇ ಕೂರಿಸುತ್ತೇವೆ.
ಯಾವ ವರ್ಷವೂ ನಮ್ ಊರಲ್ಲಿ ಗಣಪತಿ ಹಬ್ಬಕ್ಕೆ ಕಟ್-ಔಟ್ ಗಳನ್ನೂ ಪ್ರಿಂಟ್ ಹಾಕಿಸಿರಲಿಲ್ಲ.. ಈ ಸಲ ಕೆಳಗಿನ ಏರಿಯಾದವರು ಪ್ರಿಂಟ್ ಹಾಕಿಸಿ ಊರ ಬಾಗಿಲಲ್ಲಿ ಹಾಕಿದ್ದರು,ಅವರಿಗೆ ನಾವೇನು ಕಮ್ಮಿ ಎಂದುಕೊಂಡ ನಮ್ಮ ಬಳಗ ಹಿಂದೆಂದೂ ಕಂಡರಿಯದ ೫೦ ಜನರನ್ನೊಳಗೊಂಡ ದೊಡ್ಡ ಬ್ಯಾನರನ್ನೇ ಕಟ್ಟಿರೋದು ನಮ್ ಹುಡುಗರ ಬಗ್ಗೆ ಹೇಳುತ್ತೆ..
ನಮ್ ಹುಡುಗರು ಎಷ್ಟೇ ಪೋಲಿ-ಪಟಾಲಂ ಗಳಾದರೂ ದೇವರ ವಿಷಯ ಬಂದರೆ ಮಾತ್ರ ತುಂಬಾ ಭಯ ಭಕ್ತಿಯಿಂದ ಕೆಲಸದಲ್ಲಿ ತೊಡಗಿಕೊಳ್ಳುತ್ತಾರೆ..
ಗಣಪತಿ ಕೂರಿಸುತ್ತೇವೆ ಎಂದುಕೊಂಡು ನಾವು ಮಾಡಿಕೊಳ್ಳುವ ಗಲಾಟೆ ನನೆದರೆ ನಮ್ ಏರಿಯಾಗೆ ಬರುವ ಗಣಪ ಅದೆಷ್ಟು ಪಾಪ ಮಾಡಿದೆಯೊ ಎನಿಸುತ್ತದೆ..


~.

ಚಿಂತನಾ ಕೂಟ..

!!ಜ್ಞಾನಾರ್ಪಣಮಸ್ತು!!

[ಇದು ಒಂದು ದೊಡ್ಡ ಲೇಖನವೆನಿಸುತ್ತದೆ.. ಸಂಪೂರ್ಣ ಓದಲು ಸಮಯದ ಕೊರತೆ ಇದ್ದವರಿಗಾಗಿ ಮುಖ್ಯವಾದ ಸಾಲುಗಳಿಗೆ ಬಣ್ಣ ತುಂಬಿದ್ದೇನೆ..]
ಅಂದು ಪ್ರಜಾವಾಣಿ ದಿನ ಪತ್ರಿಕೆಯ ಉಪಸಂಪಾದಕರಾಗಿ ಕಾರ್ಯ ನಿರ್ವಹಿಸಿದ್ದ ವಾದಿರಾಜ್ ಅವರು ಮಂಡ್ಯದ ಕಮಲಮಂದಿರಕ್ಕೆ ಆರ್.ಎಸ್.ಎಸ್. ವಿದ್ಯಾರ್ಥಿಗಳೊಂದಿಗೆ ಚಿಂತನಾಕೂಟ ನಡೆಸಲು ಬಂದಿದ್ದರು..
ಒಂದು ಮಾತು ಹೇಳಲೇಬೇಕು.. ಅಂತ ಕೂಟಗಳ ವಿಚಾರಮಂಥನ ನಮ್ಮ(?) ಮನೋಭಾವಕ್ಕೆ ಒಪ್ಪುವಂತಹದಲ್ಲ..
ನಾನು ಆರ್.ಎಸ್.ಎಸ್. ವಿದ್ಯಾರ್ಥಿ ಅಲ್ಲದಿದ್ದರೂ ನನ್ನ ಲೇಖನ ಪತ್ರಿಕೆಯಲ್ಲಿ ಪ್ರಕಟವಾಗಿದ್ದನ್ನು ತಿಳಿದಿದ್ದ ನನ್ನ ಗೆಳೆಯ ಯೋಗೇಶ್ ನನಗೆ ಸಂಪಾದಕರೊಬ್ಬರನ್ನು ಅವರನ್ನು ಭೇಟಿ ಮಾಡಿಸುವುದಾಗಿ ಹೇಳಿ ಕರೆದುಕೊಂಡು ಬಂದಿದ್ದ.., ನನಗೂ ಉಪಯೋಗವಾಗಬಹುದೆಂದು ಬಂದಿದ್ದೆ.
ಸುಮಾರು ೪೦-೫೦ ವಿದ್ಯಾರ್ಥಿಗಳು(ಅಷ್ಟೆ ವಿದ್ಯಾರ್ಥಿಗಳು ಕುಳಿತುಕೊಳ್ಳುವ ಸ್ಥಳವದು) ಸೇರಿದ್ದರು.
ಅಲ್ಲಿದ್ದ ಒಂದು ಕುರ್ಚಿಯ ಮೇಲೆ ಬಂದು ವಾದಿರಾಜ್ ಅವರು ಆಸೀನರಾದರು, ಅವರ ಪರಿಚಯವನ್ನು ಗೆಳೆಯನೊಬ್ಬ ನಮಗೆಲ್ಲ ನೀಡಿದ.
ಕೂಟ ಆರಂಭಿಸಿದ ವಾದಿರಾಜ್ ಅವರು ಮೊದಲಿಗೆ ವಿದ್ಯಾರ್ಥಿಗಳನ್ನು ಕುರಿತು ಏನು ಓದುತ್ತಿದ್ದೀರಿ?,ಹಳ್ಳಿಯಿಂದ ಬರುವವರೆಷ್ಟು?,ನಗರದಲ್ಲೇ ಇರುವವರೆಷ್ಟು?,ಇಲ್ಲಿಗೆ ಓದು ಮುಗಿಸುವವರೆಷ್ಟು, ಮುಂದುವರಿಸುವವರೆಷ್ಟು? ಎಂದು ಕೇಳಿದರು.
ನಂತರ,
'ನಮ್ಮ ದೇಶಕ್ಕೆ ಸ್ವಾತಂತ್ರ ತಂದುಕೊಡಲು ಭಗತ್ ಸಿಂಗ್,ಸಾವರ್ಕರ್, ಹೀಗೆ ಲಕ್ಷ ಜನರು ಶ್ರಮಿಸಿದ್ದಾರೆ ಅವರ ಹೆಸರೆಲ್ಲ ನಿಮಗೆ ತಿಳಿದಿದೆಯೇ..? ಒಂದು ಹಾಳೆಯನ್ನು ನಿಮಗೆ ನೀಡಿ ಸ್ವಾತಂತ್ರ್ಯ ಹೋರಾಟಗಾರರ ಹೆಸರನ್ನು ಬರೆಯಿರಿ ಎಂದರೆ ನಿಮ್ಮಲ್ಲಿ ಯಾರಾದರೂ ಮತ್ತೊಂದು ಹೆಚ್ಚುವರಿ ಹಾಳೆ ಕೇಳುವಿರಾ?' ಎಂದರು, ನಾವೆಲ್ಲಾ ತಲೆತಗ್ಗಿಸಿ ಕೂತೆವು.
'ನಿಮಗೆ ಸ್ವಾತಂತ್ರ್ಯ ತಂದುಕೊಟ್ಟವರ ಹೆಸರೇ ನೆನಪಿಲ್ಲವಲ್ಲ. ಅದೇ ಸಿನಿತಾರೆಯರ ಹೆಸರನ್ನೋ,ಕ್ರಿಕೆಟಿಗರ ಹೆಸರನ್ನೋ ಬರೆಯಿರಿ ಎಂದರೆ ಹೆಚ್ಚುವರಿ ಹಾಳೆಗಳು ಅದೆಷ್ಟು ಬೇಕಾಗುತ್ತವೆಯೋ..?' ಎಂದರು. ನಿಜಕ್ಕೂ ಮಾತುಗಳು ಆತ್ಮಾವಲೋಕನ ಮಾಡುವಂತಿದ್ದವು.

ನಂತರ ಅವರು, 'ನಾವೀಗ ಎಲ್ಲಿದ್ದೇವೆ..?,'ಸ್ವಾತಂತ್ರ್ಯ ಭಾರತದಲ್ಲಿ.', ಹಾಗಾದರೆ ಮತ್ತೊಮ್ಮೆ ನಾವು ಸ್ವಾತಂತ್ರ್ಯ ತಂದುಕೊಡುವ ಅಗತ್ಯವಿಲ್ಲ,ಅದಾಗಲೇ ಬಂದಿದೆ.. ಹಾಗಾದ್ರೆ ನಾವು ದೇಶಭಕ್ತರೆಂದು ತೋರಲು ಏನು ಮಾಡಬೇಕು..?' ಎಂದರು..
ನಾವೆಲ್ಲಾ ಉತ್ತರ ತೋಚದೆ ಮೌನವಾದೆವು.. 'ಪ್ರಜ್ಞಾವಂತರಾಗಿ ಬಾಳಬೇಕು,ನಮಗೆ ಬಂದಿರುವ ಸ್ವಾತಂತ್ರ್ಯಕ್ಕೆ ಅರ್ಥ ತರುವಂತೆ ಬಾಳಬೇಕು,ನಮ್ಮ ಹಕ್ಕುಗಳಿಗೆ ಹೋರಾಡಬೇಕು,ಅದು ಮತ್ತೆ ಬೇರೊಬ್ಬರ ಪಾಲಾಗದಂತೆ ಕಾಪಾಡಬೇಕು..' ಎಂದು ಹೇಳಬೇಕೆಂದು ನನಗನಿಸಿದರೂ ನನ್ನಲ್ಲಿದ್ದ ಅಂಜಿಕೆಯಿಂದ ಸುಮ್ಮನೆ ಕುಳಿತಿದ್ದೆ., ಆಗ ಅಒಂದಿಬ್ಬರು ಸಮಂಜಸವಲ್ಲದ ಉತ್ತರ ನೀಡಿದರು.
ಆಗ ಅವರು,
'ನಿಮಗೇಕೆ ಯೋಧರಾಗಬೇಕು ಎಂದೆನಿಸಲಿಲ್ಲ.. ಎಂದು ಹೇಳಿ ಯೋಧರ ಕುರಿತು ಹೇಳಲು ಮುಂದಾದರು.
ಅಲ್ಲಿ ಅವರಿರುವುದರಿಂದಲೇ ನಾವಿಲ್ಲಿ ಸುರಕ್ಷಿತ., ಭಾರತದ ತುದಿಯಲ್ಲಿ ಸಿಯಾಚಿನ್ ಎಂಬ ಭಾರತದ್ದೆ ಭಾಗವಿದೆ ಕೇಳಿದ್ದೀರಾ.. ಅಲ್ಲಿ ಕಲ್ಪನೆ ಮಾಡಿಕೊಳ್ಳಲಾಗದಷ್ಟು ಚಳಿ ಇರುತ್ತದೆ. ಎಷ್ಟೆಂದರೆ ಮೂತ್ರ ಮಾಡಲು ಮುಂದಾದರೆ ಮೂತ್ರ ನೆಲವನ್ನು ಸಾಕುವ ಮೊದಲೇ ಮಂಜುಗಡ್ಡೆಯಾಗುವಷ್ಟು! ಅಂತಹ ಭಾಗಗಳೆಲ್ಲ ಅವರು ಹೊಂದಿಕೊಂಡು ಹೋಗುತ್ತಾರೆ..',
'ರವಿಬೆಳಗೆರೆಯವರ 'ಹಿಮಾಲಯನ್ ಬ್ಲೆನ್ಡರ್' ಎಂಬ ಪುಸ್ತಕ ಓದಿದ್ದೀರ.. ಓದಿರಿ, ಅದರ ಒಂದು ಭಾಗ ಹೇಳುತ್ತೇನೆ
'ಅದು ಭಾರತ-ಚೀನಾ ಯುದ್ಧ ನಡೆಯುವ ಸಮಯ.. ೭೦೦ ಜನರಿದ್ದ ಒಂದು ಸೇನಾ ತುಕಡಿಯ ಮುಖ್ಯಸ್ಥರಾಗಿದ್ದವರೊಬ್ಬರ ಅನುಭವವಿದು.. ಸೇನಾತುಕಡಿಯನ್ನು ಒಂದೊಂದು ಕಡೆಗೆ ಮತ್ತೆ ಮತ್ತೆ ಕಳುಹಿಸುವಂತೆಯೇ ಇವರ ತುಕಡಿಯನ್ನು ಬೇರೊಂದು ಕಡೆಗೆ ಒಮ್ಮೆ ಸ್ಥಳಾಂತರ ಮಾಡಲಾಯಿತು, ಹೊಸ ಪ್ರದೇಶಕ್ಕೆ ಸೇನೆ ಬಂದ ದಿನ ಸೈನಿಕರಿಗೆ ರೊಟ್ಟಿಯ ಬದಲಾಗಿ ಅನ್ನವನ್ನು ಮಾತ್ರ ನೀಡಲಾಗುತ್ತಿದ್ದುದನ್ನು ಕಂಡ ಮುಖ್ಯಸ್ಥರು 'ಸೈನಿಕರಿಗೆ ಅನ್ನ ಮಾತ್ರ ನೀಡಿದರೆ ಅನ್ನ ತಿಂದು ಯುದ್ಧ ಮಾಡಲಾಗುತ್ತದೆಯೇ.. ಎಂದು ಅಡುಗೆಯವರನ್ನು ಪ್ರಶ್ನಿಸಿದರು. ಆಗ ಒಬ್ಬರು 'ನೋಡಿ ಸ್ವಾಮಿ ೭೦೦ ಜನರಿಗೆ ರೊಟ್ಟಿ ಮಾಡುವುದು ಸುಲಭದ ಮಾತಲ್ಲ,ಹಳೆ ಜಾಗದಲ್ಲಿ ೭೦೦ ಜನರಿಗೆ ರೊಟ್ಟಿ ಬೇಯಿಸುತ್ತಿದ್ದ ನೂರಾರು ಕೆ.ಜಿ. ತೂಕದ ರೊಟ್ಟಿಕಲ್ಲುಗಳನ್ನು ಇಲ್ಲಿಗೆ ತಂದಿಲ್ಲ, ಕಲ್ಲನ್ನು ಹೊತ್ತು ತರುವ ಬದಲಾಗಿ ಅಷ್ಟೆ ತೂಕದ ಮದ್ದು-ಗುಂಡುಗಳನ್ನು ತಂದಿದ್ದೇವೆ.. ಊಟದಲ್ಲಿ ಕೊರತೆಯಾದರೆ ಹೇಗೋ ನಡೆಯುತ್ತದೆಅ ಆದರೆ ಮುಖ್ಯವಾಗಿ ಬೇಕಾದ್ದು ಮದ್ದು-ಗುಂಡಲ್ಲವೇ..!' ಎಂದು ಉತ್ತರಿಸಿದ್ದರು.'

ಈ ಕಥೆ ಹೇಳಿದ ವಾದಿರಾಜ್ ಅವರು 'ಅವರು ಅಲ್ಲಿ ಗಡಿ ಕಾಯ್ತಾರೆ, ನೀವು ದೇಶದೊಳಗೆ ಕಾಯಬೇಕು, ಈಗ ಭಾರತದ ಕೆಲವು ಭಾಗಗಳು ಭಾರತದ ಭಾಗದಂತೆ ಕಾಣುವುದೇ ಇಲ್ಲ.
ಭಾರತದೊಳಗೆ ಸಿಕ್ಕಸಿಕ್ಕಲ್ಲಿ ಹಲವಾರು ಚರ್ಚ್ ಗಳು,ಮಸೀದಿಗಳು ತಲೆಎತ್ತುತ್ತಾ ಮಿನಿ ಪಾಕಿಸ್ತಾನಗಳು,ಮಿನಿ ಇಂಗ್ಲೆಂಡ್ ಗಳು ಹುಟ್ಟಿಕೊಂಡಿವೆ..ಅದನ್ನು ತಡೆಯಬೇಕು ನಮ್ಮ ಜಾಗವನ್ನು ಬೇರೆಯವರು ಆಕ್ರಮಿಸಿಕೊಳ್ಳದಂತೆ ಕಾಪಾಡಬೇಕು. ಇಲ್ಲದಿದ್ದರೆ ಮತ್ತೆ ನಾವು ಬೇರೆಯವರ ಅಧೀನದಲ್ಲಿ ಇರಬೇಕಾಗುತ್ತದೆ.

ಹೀಗೆ ಹೇಳಿ ಭಗತ್ ಸಿಂಗ್ ವಿಷಯ ಎತ್ತಿಕೊಂಡರು.
'ಅಂದಿನ ಕಾಲದಲ್ಲಿ ಭಾರತದ ಶಕ್ತಿ ಎಷ್ಟಿದೆ ಎಂದು ತೋರಿಸಲು ಜನರಿಲ್ಲದ ಕಡೆ ಬಾಂಬುಗಳನ್ನು ಸಿಡಿಸುತ್ತ ಬ್ರಿಟಿಷರಿಗೆ ನಡುಕ ಹುಟ್ಟಿಸುತ್ತಿದ್ದರು, ಹಾಗೊಮ್ಮೆ ಭಗತ್ ಸಿಂಗ್ ಅವರನ್ನು ಬ್ರಿಟಿಷ್ ಸರ್ಕಾರ ಬಂಧಿಸಿ ನೇಣುಗೇರಿಸುವುದಾಗಿ(ನೂರಾರು ಜನರು ವಿರೋಧ ವ್ಯಕ್ತಪಡಿಸಿದರೂ) ಹೇಳಿತು. ಆಗ ಭಾರತೀಯರೆಲ್ಲ ನೇಣುಗೇರಿಸಿದ ನಂತರ ಶವವನ್ನು ಹೊತ್ತು ಲಕ್ಷಾಂತರ ಜನರ ಅಭಿಮುಖದಲ್ಲಿ ಮೆರವಣಿಗೆ ಮಾಡಿ ಅಂತ್ಯಕ್ರಿಯೆ ಮಾಡುವುದಾಗಿ ನಿರ್ಧರಿಸಿಕೊಂಡಿತು. ಇದನ್ನು ತಿಳಿದ ಸರ್ಕಾರದವರು ಮತ್ತೆ ಜನರೆಲ್ಲಾ ಕೂಡಿದರೆ ತಮಗೆ ತೊಂದರೆಯಾಗುತ್ತದೆ ಎಂಬುದನ್ನು ಅರಿತು ಗೊತ್ತು ಮಾಡಿದ್ದ(ಜನರಿಗೆ ತಿಳಿಸಿದ್ದ) ಹಿಂದಿನ ದಿನವೇ ನೇಣು ಹಾಕಲು ನಿರ್ಧರಿಸಿ ಭಗತ್ ಸಿಂಗರ ಕೊನೆ ಆಸೆ ಕೇಳಿದ್ದ ಭಗತ್ ಸಿಂಗರು 'ನನ್ನ ತಾಯಿ ಮಾಡಿದ ರೊಟ್ಟಿ ತಂದುಕೊಟ್ಟರೆ ಅದನ್ನು ತಿಂದು ನೆಮ್ಮದಿಯಿಂದ ಸಾಯುತ್ತೇನೆ ಎಂದರಂತೆ.. ಆಗ ನೇಣಿಗೇರಿಸುವವನು ಯೋಚಿಸಿ 'ಈಗ ೨೦೦ ಕಿಲೋಮೀಟರ್ ದೂರ ಹೋಗಿ ಇವನ ತಾಯಿಯಿಂದ ರೊಟ್ಟಿ ತರುವಷ್ಟರಲ್ಲಿ ಮರುದಿನವಾಗುತ್ತದೆ,ಆಗ ಜನ ಸೇರಿಬಿಡುತ್ತಾರೆ.. ಈಗೇನು ಮಾಡುವುದು..' ಎಂದು ಚಿಂತಿಸುತ್ತಿದ್ದಾಗ, ಭಗತ್ ಸಿಂಗ್ ' ನನ್ನ ತಾಯಿ ಮಾಡಿದ ರೊಟ್ಟಿ ಎಂದರೆ ನೀವು ಆಕೆ ಇರುವಲ್ಲಿಗೆ ಹೋಗಬೇಕಿಲ್ಲ.. ಜೈಲಿನ ಪಕ್ಕ ತೇಲೂರಾಮ( ಜೈಲಿನ ಚರಂಡಿ,ಮೋರಿ ಸುದ್ಧ ಮಾಡುವವನು..) ಮನೆಯಿಂದ ತಂದರೆ ಸಾಕು.. ಯಾಕೆಂದರೆ ಆತ ಮಾಡುವ ಕೆಲಸ ಮಾಡಲು ತಾಯಿಹೃದಯ ಬೇಕು.. ನಾವು ಚಿಕ್ಕವರಿದ್ದಾಗ ನಮ್ಮ ಹೊಲಸನ್ನು ತಾಯಿ ಹೇಸಿಗೆ ಪಟ್ಟುಕೊಳ್ಳದೆ ತೆಗೆಯುತ್ತಿದ್ದಳೋ, ಹಾಗೆ ಹೇಸಿಗೆ ತೆಗೆಯಲು ತಾಯಿ ಹೃದಯವಿದ್ದರೆ ಮಾತ್ರ ಸಾಧ್ಯ, ತೇಲೂರಾಮನಿಗೆ ಅದಿದೆ., ಹಾಗಾಗಿ ಅವನು ನನ್ನ ತಾಯಂತೆಯೇ,ಅವನಿಂದಲೇ ರೊಟ್ಟಿ ಮಾಡಿಸಿ ತನ್ನಿ..' ಎಂದು ಹೇಳಿ ತರಿಸಿಕೊಂಡು ತಿಂದು ನೇಣಿಗೇರಿದರಂತೆ.'

ಎಂದು ಹೇಳಿದ ವಾದಿರಾಜ್ ಅವರು ಒಗ್ಗಟ್ಟಾಗಿ ದೇಶ ಕಾಪಾಡಿ ಎಂದು ಹೇಳಿ ಕೂಟಕ್ಕೆ ತೆರೆ ಎಳೆದರು..
ಅವರು ಹೇಳಿದ ಮಾತುಗಳು ಆತ್ಮಸಾಕ್ಷಿಯನ್ನು ಬಡಿದೆಬ್ಬಿಸುವಂತಿದ್ದವು..

~.

Related Posts Plugin for WordPress, Blogger...