​ಯುಗಾದಿ

~.~

​ಯುಗಾದಿ

ಯುಗಾದಿ ಎಂದರೆ ಯುಗ+ಆದಿ. ಅಂದರೆ, ಯುಗದ ಪ್ರಾರಂಭ. ನಾವಿರುವ ಯುಗದ ಪ್ರಾರಂಭ ಆದ ದಿನ ಇದು ಎಂದೂ, ಅದಕ್ಕಾಗಿ ಇದನ್ನು ಹಿಂದೂ ವರುಷಾರಂಭ ಎಂದೂ ಆಚರಿಸುತ್ತರಂತೆ.
ಯುಗದ ಆರಂಭ ಆಗಿದ್ದು ಯಾರಿಗೆ ? ಹಿಂದುಗಳಿಗೆ ಮಾತ್ರವಾ ? ಇರಬೇಕು. ಯಾಕೆಂದರೆ ಆ ಯುಗ, ಈ ಯುಗಗಳು ಕಾಣಸಿಗೋದು ಹಿಂದೂ ಪುರಾಣಗಳಲ್ಲಿ. ಆದ್ದರಿಂದ ಹಿಂದುಗಳಿಗೆ ಯುಗಾರಂಭ ಎನ್ನಬಹುದೇನೋ. ಬೇರೆಯವರಿಗೂ ಆರಂಭ ಆಗಿರುತ್ತೆ ಅನ್ನಿ. ಅವರವರ ಯುಗ ಅವರವರಿಗೆ.
ಯುಗ ಪ್ರಾರಂಭ ಆಗಿದ್ಯೋ ಇಲ್ವೋ ಅದು ಹಾಗಿರಲಿ, ನಾವು ಬಳಸುತ್ತಾ, ಅನುಸರಿಸುತ್ತಾ ಇರೋ ಕ್ಯಾಲಂಡರ್ ಪ್ರಕಾರ ಡಿಸೆಂಬರ್ 31ರ ರಾತ್ರಿ /ಜನವರಿ 1 ಹೊಸ ವರುಷದ ಆರಂಭ. ಆದರೂ, ನಾವು ಹಿಂದುಗಳಾದ್ದರಿಂದ ಹಿಂದೂ ಕ್ಯಾಲೆಂಡರ್ ಪ್ರಕಾರ ನಮಗೆ ಹೊಸ ವರುಷ ಯುಗಾದಿ ಅಂತೆ. ಹಾಗಂತ ಜನವರಿ ೧ರಂದು ಸುಮ್ಮನಿರಲ್ಲ ಬಿಡಿ. ಸಂಭ್ರಮ ಜೋರಾಗೇ ನಡೆಯುತ್ತೆ ಯುಗಾದಿಗಿಂತ.

ಅದೇನೇ ಇರಲಿ, ಯುಗಾದಿಯ ಈ ಸಮಯ ಗಮನಿಸಿದರೆ, ಪ್ರಕೃತಿಯಲ್ಲೂ ಕೂಡ ನಿಜಕ್ಕೂ ಹೊಸದೇನೊ ಬದಲಾವಣೆಯ ಸಮಯ. ಒಣಗಿದೆಲೆಗಳೆಲ್ಲ ಉದುರಿ, ಹೊಸ ಚಿಗುರು ಮೂಡಿ, ಹೊಸ ವಸಂತಕ್ಕೆ ಕಾಲಿಡುತ್ತಾ, ಹರುಷ ಕಾಣುವುದು ನೋಡಿದ್ರೆ ಖಂಡಿತ ಈ ಸಮಯದಲ್ಲೇ, ಪ್ರಕೃತಿಯ ಮರ-ಮಾಮರಗಳು ಮರುಹುಟ್ಟು ಪಡೆದುದನ್ನು ನೋಡುತ್ತಾ, ನಾವೂ ನಮ್ಮ ಹಳೆಯ ಕಹಿ ನೆನಪನ್ನು ಮರೆತು ಹೊಸ ಸಿಹಿ ಕ್ಷಣಗಳಿಗೆ ತಯಾರಾಗಬೇಕು, ಮರುಹುಟ್ಟು ಪಡೆಯಬೇಕು ಬದುಕು ಎನಿಸುತ್ತೆ. ಇದೆ ಸೂಕ್ತ ಸಮಯ ಹೊಸ ವರುಷದಾರಂಭಕೆ.

ಹಿಂದೂ ದೇಶದಲ್ಲಿ ಮಾತ್ರ ಈ ಸಮಯದಲ್ಲಿ ಪ್ರಕೃತಿಯಲ್ಲಿ ಈ ವಸಂತದ ವಾತಾವರಣ,  ಬೇರೆ ಕಡೆ ಬೇರೆ ಸಮಯ ಎನಿಸುತ್ತೆ.  ಬೇರೆ ದೇಶದ ಕಥೆ ಬೇಡ, ಹಿಂದೂ ದೇಶದಲ್ಲಿ ಮೂಡುತಿದೆ ಅಂದರೆ ಹಿಂದೂ ದೇಶದವರೆಲ್ಲ ಧರ್ಮದಾಚೆಗೆ ನಿಂತು ಪ್ರಕೃತಿಯ ಈ ಸೊಬಗನ್ನು ನೋಡಿ ಹರುಷ ವ್ಯಕ್ತಪಡಿಸುತ್ತಾ ಹೊಸ ಬದುಕಿಗೆ ಸಂತೋಷದಿಂದ ತಯಾರಾಗಬೇಕು ಅಲ್ವಾ. ಆದರೆ ಹಾಗಾಗುತ್ತಿದೆಯಾ.

ಯುಗಾದಿ ಹಿಂದೂಗಳ ಹೊಸವರುಷ ಅಂತೇ. ಅಂದರೆ ಎಲ್ಲಾ ಹಿಂದೂಗಳಿಗೂ ತಾನೇ ? ಹಿಂದೂಗಳು ಅಂದರೆ ಅಖಂಡ ಭಾರತದಲ್ಲಿ ಜೀವಿಸಿರುವ ಪ್ರತಿಯೊಬ್ಬರೂ ಕೂಡ ಅಲ್ಲವಾ? ಬೇಡ, ರಾಮ-ಕೃಷ್ಣರ ಪೂಜಿಸುವ ಜನರೇ ಹಿಂದೂಗಳೆನ್ನೋಣ, ಅವರಾದರೂ ಎಲ್ಲರೂ ಆಚರಿಸಬೇಕಲ್ಲವ?
ಹಿಂದೂ ಹೊಸ ವರುಷ ಕನ್ನಡ,ತೆಲುಗು,ಮರಾಠಿ ಹಿಂದುಗಳಿಗೆ ಮಾತ್ರವಾ ?
ದಕ್ಷಿಣ ದೇಶದ ಕೆಲ ಪ್ರದೇಶಗಳು ಮಾತ್ರ  ಅದ್ಧೂರಿ ಆಚರಣೆ ಮಾಡುತ್ತಾರೆ ಅನಿಸುತ್ತೆ, ಅದೂ 'ಯುಗಾದಿ' ಎಂಬ ಸೂಕ್ತ ಹೆಸರಿಂದ. ಯಾಕೆ ?
ಉಳಿದ ಪ್ರದೇಶಗಳಲ್ಲಿ ಕೆಲವು ಕಡೆ 'ಹಿಂದಿ ವರ್ಷ್ ಆರಂಭ್' ಅಂತ ಅನ್ಕೋತಾರೆ ನಿಜ, ಇಲ್ಲಿಯಂತೆ ಆಚರಿಸ್ತಾರಾ? ಸಂಭ್ರಮ ಜೋರಾಗಿರುತ್ತಾ ? ಗೊತ್ತಿಲ್ಲ. ಯಾಕೆ ?
ಹಿಂದೂ ದೇಶದಲ್ಲಿ ಕೇವಲ ಚಂದ್ರನ ಚಲನೆ ಅಥವಾ ಸೂರ್ಯನ ಚಲನೆ (ಸಿದ್ಧಾಂತ)ಯ ಆಧಾರದಲ್ಲಿರುವ ಕ್ಯಾಲೆಂಡರ್ ಪದ್ಧತಿ ಮತ್ತು ಸೂರ್ಯ-ಚಂದ್ರ ಎರಡನ್ನೂ ಗಮನದಲ್ಲಿಟ್ಟುಕೊಂಡು ತಯಾರಾದ ಕ್ಯಾಲೆಂಡರ್ ಪದ್ಧತಿ ಇವೆ . ಹಾಗಾಗಿ, ಅವರವರ ಕ್ಯಾಲೆಂಡರ್ ಪದ್ಧತಿಗನುಗುಣವಾಗಿ ಹೊಸ ವರುಷ ಆಚರಣೆ ಮಾಡುತ್ತಾರೆ.   
ಕೆಲವು ಪ್ರದೇಶದಲ್ಲಿ ಜನವರಿ ೧ ಮಾತ್ರ ಆಚರಣೆ.

ಹಿಂದೂ ಹೊಸ ವರುಷಾರಂಭ ಎಂದಮೇಲೆ ಎಲ್ಲಹಿಂದೂಗಳಿಗೂ ಒಂದೇ ದಿನ ಇರಬೇಕಿತ್ತು ಅನಿಸುತ್ತೆ, ಆ ಹಿಂದೂಗೆ ಆಗ, ಈ ಹಿಂದೂಗೆ ಈಗ ಯುಗ ಆರಂಭ ಅನ್ನೋಕಾಗತ್ತಾ?

ಈ ದಿನವೇ ರಾಮ ವಾಲಿಯನ್ನು ಕೊಂದನಂತೆ, ಬ್ರಹ್ಮ ಸೃಷ್ಟಿ ಮಾಡಿದನಂತೆ, ಶಾಲಿವಾಹನ ಗೆದ್ದನಂತೆ, ಕೃಷ್ಣ ಯುಗ ಬಿಟ್ಟನಂತೆ, ಇತ್ಯಾದಿ ಪ್ರಸಂಗಗಳಿವೆ. ನಿಜವಾಗಿ ಯಾವ ಕ್ಯಾಲೆಂಡರ್ ಗೆ ಇವುಗಳನ್ನು ಸೇರಿಸೋದು ? ಯಾರು ಆಚರಿಸುವ ಹೊಸ ವರುಷಕ್ಕೆ ಇವನ್ನು ತಳುಕು ಹಾಕೋದು? ಯಾಕೆಂದರೆ ಘಟನೆ ಒಂದು ಸಲ ಮಾತ್ರ ನಡೆದಿರುತ್ತೆ. ಇವರಿಗಾಗಿ ಈಗ, ಅವರಿಗಾಗಿ ಇನ್ನೊಮ್ಮೆ ಅಂತ ಒಂದಕ್ಕಿಂತ ಹೆಚ್ಚು ಸಲ ಅವು ನಡೆದಿರೋಲ್ಲ ಅಲ್ವ.

ಹಿಂದೂ ಪಂಚಾಗದ ಪ್ರಕಾರ ನಾವಿರೋದು ಶಾಲಿವಾಹನ ಶಕೆ ಮತ್ತು ವಿಕ್ರಮ ಸಂವತ್ಸರದಲ್ಲಿ. ಆಫ್ಟರ್ ಕ್ರೈಸ್ಟ್ ನಲ್ಲಲ್ಲ. ಈ ಎರಡೂ ಕಾಲಘಟ್ಟ ಆರಂಭ ಆಗಿದ್ದು ಶಾಲಿವಾಹನ ಹಾಗೂ ವಿಕ್ರಮಾದಿತ್ಯ ಎಂಬ ರಾಜರ ಆಳ್ವಿಕೆ ಆರಂಭ ಆದಾಗ. ಅಂದರೆ ಒಂದು ಯೋಚನೆ ಬರುತ್ತೆ. ಈ ಇಬ್ಬರೂ ರಾಜರೂ ಆಳಿದ್ದು ಯುಗಾದಿಯನ್ನು ಆಚರಿಸೋ ಈ ಪ್ರದೇಶಗಳಲ್ಲಿ ಮಾತ್ರ, (ಆದರೆ ಈಗಿರುವಂತೆ ಕನ್ನಡನಾಡು, ತೆಲುಗುದೇಶ, ಮರಾಠಿ ನಾಡು, ಬೆಂಗಳೂರು ಅಂತ ಬಿಡಿ ಭಾಗಗಳಾಗಲ್ಲ). ಆ ರಾಜರು ಅವರ ಆಗಿನ ಕ್ಯಾಲೆಂಡರ್ ಗೆ ಮಹತ್ವ ಕೊಟ್ಟು ಆಚರಣೆ ಆರಂಭ ಮಾಡಿದ್ದಕ್ಕೆ  ಇಂದಿಗೂ ಅದು ನಡೆದುಬರುತ್ತಿರಬೇಕು ಎನಿಸುತ್ತೆ.
ಶಾಲಿವಾಹನ ಶಕೆ ಅನುಸರಿಸುತ್ತಿದ್ದೇವೆ ಎಂದರೆ ಅರ್ಥ ಇರೊಲ್ಲ, ಯಾಕಂದರೆ ನನಗನಿಸುತ್ತೆ ಆತ ಹಿಂದೂ ರಾಜ ಅಲ್ಲ ಅಂತ. ಹಾಗಾದಮೇಲೆ ಹಿಂದೂ ಜನ ಅದನ್ನು ಯಾಕೆ ಅನುಸರಿಸಬೇಕು. ವಿಕ್ರಮ ಆದರೆ ಪರವಾಗಿಲ್ಲ. ಯಾರು ಮಾಡಿಟ್ಟದ್ದೇ ಆಗಲಿ, ಬಳಕೆಯಲ್ಲಿದೆ ಅದು ಮುಖ್ಯ ಅಂದರೂ ಸರಿ. ಈಗ ಬಿಫೋರ್ ಅಂಡ್ ಆಫ್ಟರ್ ಕ್ರಿಸ್ಟ್ ಕೂಡ ಬಳಕೆಯಲ್ಲಿಲ್ಲವೇ ಹಾಗೆ. 

ಆ ಶಕೆ, ಈ ಸಂವತ್ಸರ, ರಾಮ, ಬ್ರಹ್ಮ, ಕೃಷ್ಣ, ಕಲಿಯುಗ, ಹಿಂದಿ-ಹಿಂದು ಅಂತ ಹೋದರೆ ಸಂಪೂರ್ಣವಾಗಿ ನಿಖರ ಮಾಹಿತಿ ಎಲ್ಲಿ ಸಿಗುತ್ತೊ ಗೊತ್ತಿಲ್ಲ. ಆದರೆ, ಕಣ್ಮುಂದಿನ ಪ್ರಕೃತಿ ಗಮನಿಸಿದರೆ, ಒಣಗಿದ, ಉಪಯೋಗಕ್ಕೆ ಬರದ ಎಲೆ ಉದುರಿಸಿ, ಹೊಸ ಚಿಗುರು ಮೂಡಿಸಿ, ಪ್ರಕೃತಿಯೂ ಹೊಸ ನಲಿವನ್ನು ತೋರುತ್ತಿರಲು, ಹೊಸ ವರುಷ ಆರಂಭ ಮಾಡ್ತಿದೆ ಅನ್ಸಲ್ವಾ. ಇದನ್ನು ಕಂಡು, ಆ ಮರುಹುಟ್ಟು ನೋಡಿ, ಅದರಿಂದ ಪ್ರೇರಿತವಾಗಿ, ನಾವೂ ಕೂಡ, ಹಳೆಯದ, ಬೇಡವಾದುದನ್ನು ಮನಸಿಂದ ಉದುರಿಸಿ, ಮರೆತು, ಹೊಸ ಯೋಚನೆ ಮೂಡಿಸಿಕೊಂಡು, ಹೊಸ ಅನುಭವಕ್ಕೆ ತಯಾರಾಗಿ ನಗುತ್ತಿರಬೇಕು,  ನನಗೂ ಹೊಸ ಕಾಲ ಬಂತೆಂದು ನಲಿಯಲು, ಹೊಸ  ವರುಷಾರಂಭ ಮಾಡಲು ಇದೇ ಸೂಕ್ತ ಸಮಯ ಅನಿಸಲ್ವಾ...


..... ಹೊಂಗೆ ಹೂವ ತೊಂಗಲಲಿ ಭೃಂಗದ ಸಂಗೀತ ಕೇಳಿ ಮತ್ತೆ ಕೇಳಿ ಬರುತಿದೆ
ಬೇವಿನ ಕಹಿ ಬಾಳಿನಲ್ಲಿ ಹೂವಿನ ನಸುಗಂಪು ಸೂಸಿ ಜೀವ ಕಳೆಯ ತರುತಿದೆ
ವರುಷಕೊಂದು ಹೊಸತು ಜನ್ಮ ವರುಷಕೊಂದು ಹೊಸತು ನೆಲೆಯು ಅಖಿಲ ಜೀವಜಾತಕೆ
ಒಂದೆ ಒಂದು ಜನ್ಮದಲ್ಲಿ ಒಂದೆ ಬಾಲ್ಯ ಒಂದೆ ಹರಯ ನಮಗದಷ್ಟೆ ಏತಕೋ
ನಿದ್ದೆಗೊಮ್ಮೆ ನಿತ್ಯ ಮರಣ ಎದ್ದ ಸಲ ನವೀನ ಜನನ ನಮಗೆ ಏಕೆ ಬಾರದೋ... -ದ.ರಾ. ಬೇಂದ್ರೆ. 

ಶುಭವಾಗಲಿ.

ಮಸಿಯೋ ರಂಗೋ..

!! ಜ್ಞಾನಾರ್ಪಣಮಸ್ತು !!

~.~

'ಮಸಿ' ಬಳಿದುಕೊಂಡ ಗೋಡೆಗಳ ನಡುವೆ ಎಷ್ಟೇ ಜಾಗರೂಕತೆಯಿಂದ ನಿಂತರೂ 'ಮಸಿ' ಹೇಗಾದರೂ ತಾಗಿಬಿಡುತ್ತದೋ, ಹಾಗೆಯೇ ಹೆಂಗಳೆಯರ ನಡುವೆ ಇದ್ದಾಗ ತಿಳಿದೋ ತಿಳಿಯದೋ ಕಾಮದ ವಾಸನೆ ತಾಗಿಬಿಡುತ್ತದೆ’ - ಪರಮಹಂಸರು.

ನಾನು ಹುಡುಗಿಯರ ಜೊತೆ ಬೆರೆಯುತ್ತಿದ್ದುದು ತುಂಬಾ ವಿರಳ, ಇಲ್ಲವೇ ಇಲ್ಲ ಎನುವಷ್ಟು.
ನನ್ನ ಈ ಶೈಲಿಯ ಬಗ್ಗೆ ಸಮರ್ಥನೆಗಾಗಿ ಈ ಮೇಲಿನ ಮಾತು ಹೇಳಿದಾಗ ‘ತಪ್ಪು.. ನೀನು ಹುಡುಗಿಯರ ಜೊತೆ ಬೆರೆಯುತ್ತಿಲ್ಲವೆಂದರೆ, ನೀನು Strong ಅಂತ ಅಂದುಕೊಬೇಡ.  ಅದು ನಿನ್ನ Weakness ಅಷ್ಟೆ. ಬೆರೆಯಬೇಕು. ಮುಂದಿನ ಬದುಕಲ್ಲಿ ನೀನೊಬ್ಬನೇ ಇರುವುದಿಲ್ಲ, ಕೇವಲ ಗಂಡಸರೇ ಇರುವುದಿಲ್ಲ.. ಹೆಂಗಸರ ನಡುವೆ ಬೆರೆಯುವುದನ್ನು ಅಭ್ಯಾಸ ಮಾಡಿಕೊ.. ' ಎಂದಿದ್ದರು ನನ್ನ ಗುರುಗಳು. ಪ್ರಯತ್ನಿಸಿದ್ದೆ ಕೂಡ.
ಇರಲಿ, 
ಆ ಮೊದಲ ಹೇಳಿಕೆ ನನ್ನದಲ್ಲ. ಸನಾತನ ಸಂಸ್ಕೃತಿಯ ಮಹಾಪುರುಷ ಪರಮಹಂಸರು ತುಂಬಾ ಹಿಂದೆಯೇ ಹೇಳಿರೋದು. ಯಾವ ಅರ್ಥದಲ್ಲಿ.. ಗೊತ್ತಿಲ್ಲ.  ನಾನು ಓದಿದ್ದು ಅಷ್ಟೆ. ನನ್ನ ಅಂದಿನ ಮನಸ್ಥಿತಿಗೆ ಆಗ ಅದು ಇಷ್ಟವೂ ಆಗಿದ್ದು ನಿಜ. 
ಇದನ್ನ ಇಂದಿಗೆ ಹೋಲಿಸಿ ತೂಗಿ ಅಳೆದು ನೋಡಿದರೆ....


(ಫೋಟೋ ಕೃಪೆ : ಅಂತರ್ಜಾಲ )

ಮಣ್ಣಿಗೆ ಹಲವಾರು ಔಷದ ಸೇರಿಸುತ್ತಾ ಹೋದಾಗ ಮಣ್ಣಿನ ಬಣ್ಣ ಬದಲಿಸಬಹುದಾದ್ರೂ ಮಣ್ಣು ಮಣ್ಣಾಗಿಯೇ ಇರುತ್ತದೆ, ಹಾಗೆಯೇ,
ಸ್ನೇಹ, ಸಮಾನತೆ, ಹಕ್ಕು, ಅರಿವು, ಹೀಗೆ ಹಲವಾರು ಬದಲಾವಣೆಗಳ ಬಣ್ಣ ಹಚ್ಚುತ್ತಿದ್ದರೂ ನಮ್ಮ ಈ ಮಣ್ಣು ತನ್ನತನವನ್ನು ಇಂದಿಗೂ  ಉಳಿಸಿಕೊಂಡಿದೆ ಎನ್ನಬಹುದಾ.. ಅಂದರೆ, ಈ ಮಣ್ಣಲ್ಲಿ ನಾವೆಷ್ಟೇ ಬದಲಾವಣೆ ನಮ್ಮಲ್ಲಿ ಮಾಡಿಕೊಳ್ಳುತ್ತಿದ್ದರೂ ನಮ್ಮ ಮಣ್ಣಿನ ಗುಣ ನಮ್ಮ ರಕ್ತದಲ್ಲಿ ಸೇರಿ ಕಾಣದೆ ಹರಿಯುತ್ತಿರಬಹುದು, ಅದಕ್ಕೆ ನಾವು ಸ್ಪಂದಿಸುತ್ತಲೂ ಇರಬಹುದು. ಹಿಂದಿನವರು ಹೇಳಿದವು, ಅವರ ಆಚರಣೆ,ನಿಯಮಗಳು, ನಂಬಿಕೆಗಳು ನಿಜ, ಅದರ ಹಿಂದಿನ ಅರ್ಥ ಸರಿಯಾಗಿ ತಿಳಿಯುತ್ತಿಲ್ಲ ಎಂದೆನಿಸೋ ಸಮಯಗಳು ಒಮ್ಮೊಮ್ಮೆ ಎದುರಾಗುತ್ತಾ, ಇದು ಈ ಮಣ್ಣಿನ ಪ್ರಭಾವ ಎನಿಸುತ್ತಿರಲೂಬಹುದು.

ನಾವು ತುಂಬಾ ದೂರ ಹೋಗುತ್ತಿದ್ದೇವಾ.. ಅಳತೆ ಮೀರುತ್ತಿದ್ದೇವಾ.. ಅಥವಾ ಕೆಲವನ್ನು ವಿಚಾರ ಮಾಡಿ ತಪ್ಪೆಂದು ಹೇಳಿ ಒಪ್ಪದೆ ಸರಿ ಎನಿಸಿದ ಉತ್ತಮ ಹಾದಿಯಲ್ಲೇ ಸಾಗುತ್ತಿದ್ದೇವಾ..?

ಆ ಹೇಳಿಕೆ ಕುರಿತು, ಇಲ್ಲಾ, ಹಾಗೇನಿಲ್ಲ ‘ಇದು purely uneducated human beings ಮಾತ್ರ ಹಾಗಂದುಕೊಳ್ಳಬಲ್ಲರು ಎಂದುಕೊಳ್ಳೋಣ.., ಆದರೆ ಹಿಂದಿನ/ಈಗಿನ ಸಮಾಜವನ್ನೊಮ್ಮೆ ಅವಲೋಕಿಸಿದರೆ ಯಾರು ಬುದ್ಧಿಶಾಲಿಗಳು, ತಿಳಿದವರು, ವೀರರು, ಸ್ವಾಮಿಗಳು, ಮಹಾಪುರುಷರು ಎಂದೆನಿಸಿಕೊಳ್ಳುವರೋ ಅವರೇ ಮಸಿ ಬಳಿದುಕೊಳ್ಳೋದು ಕಾಣಿಸುತ್ತಿದೆ.
'ಮಸಿ' ಆಗೋದು ತಪ್ಪೇನಿಲ್ಲ ಅದು ಸಹಜ ಎನ್ನೋದು ಇನ್ನೊಂದು ಮಾತು. 

ಇಲ್ಲ,.. ಅದೆಲ್ಲ ಅರ್ಥ ಹೀನ ಎಂದುಕೊಳ್ಳೋಣ.
ಅರಿವಿರುವವರು,  ವಿದ್ಯಾವಂತರು ಎಂದು ಹೇಳಿಕೊಳ್ಳೋ ಎಷ್ಟೋ ಆಧುನಿಕ ಜನಗಳ ಜೀವನ ಜಂಜಾಟದಲ್ಲಿ ಜಾರಿಹೋಗಿ ಅವರ ಸ್ನೇಹ-ಸಂಬಂಧಗಳಲ್ಲಿ ಕೆಲವೊಮ್ಮೆ ಮನಸ್ಸು ಜಾರಿ-ಮೀರಿರುತ್ತದೆ, ಮೀರಲೂ ಬಹುದು. 'ಮಸಿ' ಮೆತ್ತಿಕೊಂಡಿರಬಹುದು.  
ಆದರೆ ಆ 'ಮಸಿ'ಯ ಗುರುತನ್ನು ಬಚ್ಚಿಡಲು ಬಯಸಿದರೆ, ಆ ಸತ್ಯ ಹೇಳಲು, ಅದನ್ನು ನೆನೆಯಲು ಅಂಜುವಂತಾಗಿ-ಅಸಹ್ಯ ಹುಟ್ಟಿ, ತನ್ನ ಸ್ಥಿತಿಗೆ ಮರುಗಿ, ಅದು ತಪ್ಪೇ - ಸರಿಯೆ ಎನ್ನುತ್ತಾ ಹೇಳಿಕೊಳ್ಳಲಾಗದಂತಹ ಗೊಂದಲವನ್ನುಆ ಸತ್ಯಕ್ಕೆ ಸಾಕ್ಷಿಯಾದ 'ಮಸಿ' ಮೆತ್ತಿಕೊಂಡ ಮನಸ್ಸುಗಳು ಅನುಭವಿಸುತ್ತವೆ/ತ್ತಿವೆ ಎಂದರೆ ಆ ಮನಸ್ಸುಗಳು ಇನ್ನೂ WEAK ಆಗಿಯೇ ಇವೆ ಎನ್ನಬಹುದಾ.. ಅದಿರಲಿ,'ಮಸಿ'ಯಾದ ಮೇಲೆ ಭುಗಿಲೇಳುವ ಆ ಗೊಂದಲ ಸೃಷ್ಟಿಗೆ ಕಾರಣ - ಆ ಮನಸ್ಸು ಬೆಳೆದಿದ್ದು, ಅದರ ಯೋಚನೆಗಳು ಚಿಗುರಿದ್ದು ಈ ಮಣ್ಣಲ್ಲಿ ಎಂದಾ..? ಅದಕ್ಕೆ ಈ ರೀತಿ ಸ್ಪಂದಿಸುತ್ತಿದೆಯಾ..?  ನಮ್ಮ ಮಣ್ಣಿನ ಗುಣವೇ ಅಂತಹುದು ಎನ್ನಬಹುದೇ... ಗೊತ್ತಿಲ್ಲ. 

ತನ್ನ ಮನಸ್ಸು Weak ಇರುವವರು ಮಾತ್ರ ಅಂತಹ ಹೇಳಿಕೆಗಳನ್ನು, ಮಾತುಗಳನ್ನು ಆಡಬಲ್ಲರು ಎಂದುಕೊಂಡರೆ, ಖಂಡಿತವಾಗಿ ಸ್ಪಷ್ಟವಾಗಿ ಹೇಳಬೇಕಾಗುತ್ತದೆ ಆ ಹೇಳಿಕೆ ನೀಡಿದವರು ಮನಸ್ಸು STRONG ಇಲ್ಲ ಎಂದು. ಅವರ ದೃಷ್ಟಿಕೋನ ತಪ್ಪೆಂದು. 
ಇಲ್ಲ ಹೇಳಲಾಗುವುದೇ ಇಲ್ಲ. ಆದರೆ, ಎಲ್ಲದರಲ್ಲೂ ಉತ್ತಮ ಮಾರ್ಗದರ್ಶನ ನೀಡಿರುವವರ ಮಾತಲ್ಲಿ ಕೆಲವೊಮ್ಮೆ ಇಂತಹ ಅರ್ಥವಿಲ್ಲದ ಮಾತುಗಳು ಬಂದಿರಬಹುದು ಎಂದಿಟ್ಟುಕೊಳ್ಳೋಣ. ಅಂತಹ ಮಹನೀಯರ ಮಾತಲ್ಲಿ, ಒಪ್ಪವಾದವನ್ನು ಒಪ್ಪಿ ತಪ್ಪಿದ್ದಲ್ಲಿ ಅಂತಹವುಗಳನ್ನು ತಿದ್ದಿ ಸರಿಯಾದ ಅರ್ಥ ನಾವು ಕಂಡುಕೊಳ್ಳುತ್ತಿದ್ದೇವೆ ಎಂದು ಭಾವಿಸೋಣ..

ಹೆಣ್ಣು-ಗಂಡಿನ ಸ್ನೇಹದಲ್ಲಿ ಅಂತಹ ಭಾವನೆ ಬರುತ್ತಿದ್ದರೆ,  ಅದಕ್ಕೆ ಕಾರಣ ನಮ್ಮ ಮಣ್ಣಿನ ಗುಣ, ನಾವು ನಡೆದು ಬಂದ ದಾರಿ, ನಮ್ಮ ಆಲೋಚನೆಗಳು ಏನೇ ಇರಲಿ ಅಥವಾ ಸತ್ಯವಾಗಿ ಅದು ಪರಿಸರ ಸಹಜ ಧರ್ಮವಿರಬಹುದು.
ಪರಿಸರ ಧರ್ಮವೇ ಸರಿ, ಯಾಕೆಂದರೆ ಅದು ಈ ಮಣ್ಣಲ್ಲಲ್ಲ ಎಲ್ಲ ನೆಲದಲ್ಲೂ ಕಾಣುವ ಸಹಜತೆಯ ಭಾವ.
ಹೊತ್ತಿಬರುವ ಆ ಭಾವಗಳ ತಡೆದು, ಹತ್ತಿಕ್ಕಿ, ಮೀರಿನಿಂತು ನಡೆಯುವುದು ನಮ್ಮ ನೆಲದಲ್ಲೇ ಹೆಚ್ಚಾಗಿ ಕಂಡ/ಕಾಣಬಲ್ಲ ಇನ್ನೊಂದು ಬಗೆ. 
ಅಂತಹ  ಪ್ರಕೃತಿ-ಧರ್ಮವನ್ನು ಗೊಂದಲಗಳಿಲ್ಲದೇ, ಪಾಪ-ಪ್ರಜ್ಞೆಗಳಿಲ್ಲದೆ ಸ್ವೀಕರಿಸುವಷ್ಟು STRONG MIND ಇರುವವರು ನಾವಾಗಬೇಕು ಎಂದರೆ ಅದು ಕೂಡ ಸರಿ. ಬೇರೆಯದೇ ನೆಲದಲ್ಲಿ ಕಾಣುವ ಆ ಗುಣ ಇಲ್ಲಿ ಅನುಕರಣೆ ಆಗಬಹುದು. 

ಅದೇನೇ ಆಗಲಿ, ಎಂತಹ ಬದಲಾವಣೆ ಆಗುತ್ತಿದ್ದರೂ ಇಲ್ಲಿನ ಮನಸ್ಸುಗಳು ತುಡಿಯುವ ರೀತಿಯೇ ಬೇರೆ,  ಇನ್ನೂ ಕೂಡ ಸೂಕ್ಷ್ಮ ಭಾವಗಳಿಗೆ ಸ್ಪಂದಿಸುತ್ತವೆ... ಅಷ್ಟು ಬೇಗ ಅಂತಹ ದಿಟ್ಟತನ ತೋರಲಾರವಾದರೂ ಕೂಡ ಒಂದು ಮಾತು:
ಹೆಣ್ಣು ಪವಿತ್ರ ಅಂತ ಹೇಳಿರೋದು ಅದು ನಮಗೆ ಮಾತ್ರ ಸೇರಿದ ಸ್ವತ್ತಾಗಬೇಕು ಎಂಬ ಮನಸ್ಸುಗಳಿಂದ’ ಎಂದ ಜನರು ನಮ್ಮ ಜನರ ಮನಸ್ಸನ್ನು ಬದಲಾಯಿಸುವಲ್ಲಿ ಈಗೀಗ ಯಶಸ್ವಿಯಾಗುತ್ತಿದ್ದಾರೆ, ಅದಕ್ಕೆ ಪೂರಕವಾಗಿ ಆಧುನಿಕತೆಯ ಗಾಳಿ ಬೀಸುತ್ತಿದೆ,ಹಸಿವು ಆಸೆಯಾಗುತ್ತಿದೆ,  ನಮ್ಮದೇ ನೆಲವ ಅದೇಕೋ ಕಾರಣವಿಲ್ಲದೆ ನಾವೇ ವಿರೋಧಿಸುವ, ಅಣಕಿಸುವ ಮನಸ್ಥಿತಿ ಅದಕ್ಕೆ ಸಹಕಾರ ನೀಡುತ್ತಿದೆ ಕೂಡ.
ಹೆಣ್ಣು-ಗಂಡು ಎಂಬ ಬೇಧವಿಲ್ಲದೆ ಸಮಾನತೆಯ ಕಡೆ ಹೆಜ್ಜೆ ಸಾಗುತ್ತಿವೆ. ಇಲ್ಲಿ ಮಸಿ-ಮಣ್ಣು ಪದಗಳಿಗೆ ಅರ್ಥವಿಲ್ಲ ಎನ್ನೋಣ.
ಆಗಲಿ, ವಿದ್ಯೆ, ಅರಿವು ಕಾಣದ ಜನಗಳಲ್ಲೂ ಇಂತಾ ಮಸಿ ಪ್ರಸಂಗಗಳು ಹೊಸದೇನಲ್ಲ. ಪ್ರಪಂಚದ ಇತರ ಬಹುಪಾಲು ಜೀವಿಗಳ ಬಾಳು ಸಹಜಧರ್ಮ ಮೀರಿದ್ದಲ್ಲ. ಹಾಗಾಗಿ ಅದು ಮಣ್ಣನ್ನು ಮೀರಿದ ಪ್ರಕೃತಿ ಧರ್ಮದ ಸ್ಪಂದನ.

ಇಂತಹವನ್ನು ಸಣ್ಣ ಪುಟ್ಟ ವಿಚಾರಗಳೆಂದು, ಸಾಮಾನ್ಯವೆಂದು ಪರಿಗಣಿಸಿ, ಹೊಂದಿಕೊಂಡು ನಡೆದರೂ ಸಂತೋಷ.. 
ಹಿಂದಿನವರ ಮಾತಲ್ಲಿಯೇ ಸ್ವಲ್ಪ ತಪ್ಪಿದೆ ಎನ್ನೋಣ.
ಅಂತಹ ಹಾದಿಗಳಲ್ಲಿ 'ಮಸಿ' ಆಗದಂತೆ ಜಾಗರೂಕತೆಯಿಂದ ಸಾಗಿದರೂ ಖುಷಿ, ಕೆಲವೊಮ್ಮೆ 'ಮಸಿ' ಆದರೂ ಅದು ಸಾಮಾನ್ಯವೆಂದು ತಿಳಿದು ಲೆಕ್ಕಿಸದೆ ಅಥವಾ ಅದು 'ಮಸಿ' ಅಲ್ಲ 'ರಂಗು' ಎಂದು ಮೆಚ್ಚಿಕೊಂಡರೂ, ಮುಂದೆಂದೂ ಅದರ ತಪ್ಪು - ಒಪ್ಪುಗಳನ್ನು ನೆಲ-ಧರ್ಮ ಎಂಬ ವಿಷಯದಲ್ಲಿ ತೂಗಿ ನೋಡಿ ಪಾಪ-ಪ್ರಜ್ಞೆಗಳಿಗೆ ಸಿಲುಕದಂತೆ, ಕೊರಗದಂತೆ, ದಿಟ್ಟತನದಿ ದೃಷ್ಟಿಕೋನ ಬದಲಿಸಿ ಬೆಳೆದು ನಿಂತು ಬದುಕಿ STRONGNESS ತೋರಿದರೆ ಮಾತ್ರ ಆ ಹೇಳಿಕೆ ಅಲ್ಲ ಅಂತಹ ನೂರು ಹೇಳಿಕೆಗಳನ್ನುಅರ್ಥವಿಲ್ಲದವು, ಅದನ್ನು ಹೇಳಿದವರು ಕೂಡ ಸರಿಯಾಗಿ ಬಲಿತಿಲ್ಲದ ಮನದವರು, WEAK MINDED ನವರು ಎನ್ನಬಹುದು. ಹೊಸ ಅರ್ಥ ಕೊಡಬಹುದು. 
ಅಂತಹ ಭಾವಗಳ ಮೀರುವುದು ಸುಲಭದ ಮಾತಲ್ಲವಾದರೂ ಸಾಧ್ಯವಿದೆ, ಪ್ರಯತ್ನಿಸಿ. ನೋಡೋಣ.
ದೃಷ್ಟಿಕೋನ ಬದಲಿಸಿಕೊಳ್ಳೋಣ.

ಮಸಿ ಕತ್ತಲೆಯೋ, ಬಣ್ಣದಾಸೆಗಳೋ, ರಂಗು ಬಯಕೆಗಳೋ ಕಾಣೆ, ಒಂದೆರಡು ಸಾಲಿನ ಕುರಿತು ಈ ರೀತಿ ಇಷ್ಟು ತರ್ಕ ಮಾಡುವುದು ಎಷ್ಟು ಸರಿ.~-~
Related Posts Plugin for WordPress, Blogger...