ತಿರುಗಿ ನೋಡಿದಾಗ...

[ ಹಲವು ನೆನಪುಗಳ ಬುತ್ತಿ..]


ಕಾಲವು ನಮ್ಮೆಲ್ಲರನ್ನೂ ೨೦೧೦ ರಿಂದ ತಂದು ೨೦೧೧ ರ ಹೊಸ್ತಿಲಲ್ಲಿ ತಂದು ನಿಲ್ಲಿಸಿದೆ..
ಈ ಸಮಯದಲ್ಲಿ ೨೦೧೦ರ ಕೆಲವು ನೆನಪುಗಳನ್ನು ಮೆಲುಕು ಹಾಕೋಣ ಎನಿಸುತ್ತಿದೆ..
೨೦೧೦ ರ ಆರಂಭ ಕನ್ನಡಿಗರ ಪಾಲಿಗೆ ಶುಭಾರಂಭ ಆಗಲಿಲ್ಲ..
ನಿಮಗೆ ತಿಳಿದಿರುವಂತೆಯೇ ಕಾರಣ ೨೦೦೯ರ ಕರಾಳ ಅಂತ್ಯ..

೨೦೦೯ರ ಅಂತ್ಯದಲ್ಲಿ ಕನ್ನಡ ಭಾವಗೀತಾ,ಜಾನಪದಗೀತ ಹಾಗೂ ಸುಗಮ ಸಂಗೀತ ಲೋಕದ ಕಂಚಿನ ಕಂಠದ ಖ್ಯಾತ ಗಾಯಕರಾದ ಸಿ.ಅಶ್ವತ್ಥ ನಾರಾಯಣ ಅವರು ಅವರ ೭೦ ನೆ ಜನ್ಮದಿನವಾದ ಡಿಸೆಂಬರ್ ೨೯ ರಂದೇ ನಮ್ಮನ್ನು ಅಗಲಿದ್ದರು.. ಇವರ ಅಗಲಿಕೆಯಿಂದ ಸುಗಮ ಸಂಗೀತ ಲೋಕದಲ್ಲಿ ಕಣ್ಣೀರು ಕೇಳುವ ಸಂಗೀತ ಮೊರೆಯತೊಡಗಿತು..

ನೋವಿನಿಂತ ಚೇತರಿಸಿಕೊಳ್ಳುವಷ್ಟರಲ್ಲೇ ಡಿಸೆಂಬರ್ ೩೦ ರಂದು ಕನ್ನಡ ಕಲಾದೇವಿಯ ಕಿರೀಟದಿಂದ ಇನ್ನೊಂದು ಮುತ್ತು ಉದುರಿಹೋಯಿತು.. ಆ ಮುತ್ತು ಕನ್ನಡ ಸಿನಿಮಾರಂಗದ ಫೀನಿಕ್ಸ್,ಕರ್ನಾಟಕ ಸುಪುತ್ರ, ಕನ್ನಡ ಚಲನಚಿತ್ರರಂಗದ ಖ್ಯಾತ ನಟ ಸಾಹಸಸಿಂಹ ಡಾ.ವಿಷ್ಣುವರ್ಧನ್.
ಅವರು ಸಾವನ್ನಪ್ಪಿ ಕನ್ನಡಾಭಿಮಾನಿಗಳಿಗೆ ಭಾರಿ ಆಘಾತ ಉಂಟಾಯ್ತು..
'ಅಪ್ಪಾಜಿ ಇಲ್ಲ ಹೊಸವರ್ಷದ ಸಂಭ್ರಮ ನಮಗೇಕೆ' ಎಂದು ಅಭಿಮಾನಿಗಳು ಕಣ್ಣೀರು ಹರಿಸಿದ್ದರು..

ಹೀಗೆ ೨೦೧೦ ಕೆಟ್ಟದಾಗಿ ಆರಂಭವಾಯ್ತು..
ಆರಂಭದಲ್ಲೇ ಸುಮಾರು ೩೭೦ ಚಲಚಿತ್ರಗಳಲ್ಲಿ ನಟಿಸಿದ್ದ ಕನ್ನಡ ಚಿತ್ರರಂಗದ ಮತ್ತೊಬ್ಬ ಕಲಾವಿದ ಕೆ.ಎಸ್. ಅಶ್ವಥ್ ಅವರು ಕಾಲವಾಗಿ ಹೋದರು..

ವಿಷ್ಣು ಅವರಿಲ್ಲದೆ ಅವರ ಜನ್ಮದಿನವಾದ ಸೆಪ್ಟೆಂಬರ್ ೧೮ ಅಭಿಮಾನಿಗಳೆಲ್ಲ ಅನಾಥರಾಗಿ ಕಂಗಾಲಾಗಿ ಕುಳಿತಿದ್ದರು..
ಈಗಲೂ ಅವರ ಭಾವುಕ ನಟನೆಯ ದೃಶ್ಯಗಳು ನನ್ನ ಕಣ್ಣುಗಳನ್ನು(ನನ್ನ ಕಣ್ಣನಷ್ಟೇ ಅಲ್ಲ ,ಕೋಟಿ ಕೋಟಿ ಅಭಿಮಾನಿಗಳ) ತೇವ ಮಾಡುತ್ತವೆ..

'ಅವರ ನೆನಪು ಮತ್ತೆ ಮತ್ತೆ ಕಣ್ಣೀರು ತರುವಂತಿದ್ದರೂ ಅವರ ನೆನಪನ್ನು ಕಳೆದುಕೊಳ್ಳಲು ಇಚ್ಚಿಸದ ನಾನು ಆ ಕಣ್ಣೀರು ತರುವ ಆ ಕ್ಷಣಗಳನ್ನೇ ಮತ್ತೆ ಮತ್ತೆ ಬಯಸಲು ಇಷ್ಟಪಡುತ್ತೇನೆ..'
ಆ ನೆನಪಿಗೆ ನನ್ನ ಮತ್ತಷ್ಟು ಅಶ್ರುತರ್ಪಣ..

ಹೇಳಬೇಕೆಂದರೆ ಸಿ. ಅಶ್ವಥ್ ಅವರ ಬಗ್ಗೆ ನನಗೆ ಅಷ್ಟಾಗಿ ಆಸಕ್ತಿ ಇರಲಿಲ್ಲ.. ಆದರೆ ಇತ್ತೀಚಿಗೆ ಅವರ ಬಗ್ಗೆ ತುಂಬಾ ಆಸಕ್ತಿ ಹೆಚ್ಚುತ್ತಿದೆ..
ಅದು ಎಂತದ್ದೆ ಸಾಹಿತ್ಯವಾದರೂ ಕೆಲವು ಗಾಯಕರ ದನಿ ಸೋಕಿದೊಡನೆ ಆ ಹಾಡಿಗೆ ಜೀವ ಬರುವುದುಂಟು.. ಅಂತಹ ಗಾಯಕರಲ್ಲಿ ಒಬ್ಬರು ಸಿ.ಅಶ್ವಥ್..
ಅವರ ಧ್ವನಿ ಯಾವ ಹಾಡಿನಲ್ಲಿದ್ದರೂ ಗುರುತಿಸುವಂತಹದ್ದು.. ಇತ್ತೀಚೆಗಂತೂ ಅವರ ಹಾಡುಗಳು ನನ್ನ ಮನಸ್ಸಿಗೆ ಹೆಚ್ಚೇ ಇಷ್ಟವಾಗುತ್ತಿವೆ..
ಅವರ ದನಿಯಿಲ್ಲದೆ ೨೦೧೦ ರ ಕನ್ನಡ ರಾಜ್ಯೋತ್ಸವ ಕಳೆಗುಂದಿತ್ತೇನೋ..?

ಇತ್ತೀಚಿಗೆ ತುಂಬಾ ಕಾಡುತ್ತಿರುವ ಅವರ ಮಾಧುರ್ಯಗಾನದ ಒಂದು ಹಾಡಿನ ಸಾಲುಗಳನ್ನು ಇಂದು ಇಲ್ಲಿ ಹಾಕಲು ಇಷ್ಟಪಡುತ್ತೇನೆ..

ನನ್ನ ಬಾಳಿನ ಇರುಳ
ತಿಳಿಯಾಗಿಸಲು ಅವಳ
ಕೆಂಪುತುಟಿಗಳ ಹವಳ
ಬೆಳಗಲೇಬೇಕು..
ನನ್ನ ಬಾ..ಳಿನ ಇರುಳ
ತಿಳಿಯಾ..ಗಿಸಲು ಅವಳ
ನನ್ನ ಬಾ..ಳಿನ ಇರುಳ
ತಿಳಿಯಾ..ಗಿಸಲು ಅವಳ
ಕೆಂಪುತುಟಿಗಳ ಹವಳ
ಬೆಳಗಲೇಬೇಕು..

ಬೆಳಗಲೇಬೇಕು..

ಕವಿದಿರುವ ಮೋಡಗಳ
ಸೀಳಿಹಾಕಲು ಅವಳ
ಕವಿದಿರುವ ಮೋಡಗಳ
ಸೀಳಿಹಾಕಲು ಅವಳ
ಕಣ್ಣ ಸುಳಿಮಿಂಚುಗಳು
ಹೊಳೆಯಲೇಬೇಕು..

ಹೊಳೆಯಲೇಬೇಕು..
ನನ್ನ ಬಾ..ಳಿನ ಇರುಳ
ತಿಳಿಯಾ..ಗಿಸಲು ಅವಳ
ಕೆಂಪುತುಟಿಗಳ ಹವಳ
ಬೆಳಗಲೇಬೇಕು..

ಒಣಗಿದಾ ಎದೆಯನೆಲ
ನೆನೆಯಲು ನನ್ನವಳ
ಆನಂದ ಬಾಷ್ಪಗಳ
ಮಳೆಯಾಗಬೇಕು..
ಒಣಗಿದಾ... ಎದೆಯನೆಲ
ನೆನೆಯಲೂ.. ನನ್ನವಳ
ಆನಂದ ಬಾಷ್ಪಗಳ
ಮಳೆಯಾ...ಗಬೇಕು..
ಮಳೆಯಾಗಬೇಕೂ..

ನನ್ನ ಬಾ..ಳಿನ ಇರುಳ
ತಿಳಿಯಾ..ಗಿಸಲು ಅವಳ
ಕೆಂಪುತುಟಿಗಳ ಹವಳ
ಬೆಳಗಲೇಬೇಕು..

ನನ್ನ ಬಾನಿನ ನೀಲಿ
ಆ............................................ಅ
ಆಆಆ ಆಆಆ ಆಆಆಆಅ
ನನ್ನ ಬಾ...ನಿನ ನೀಲಿ...
ನನ್ನವಳ ಕಣ್ಣಾಲಿ
ಚಂದ್ರಿಕೆಯ ಸುಧೆಯಲ್ಲಿ
ತೋಯಲೇಬೇಕು..
ತೋಯಲೇ..ಬೇಕೂ..

ನನ್ನ ಬಾ..ಳಿನ ಇರುಳ
ತಿಳಿಯಾ..ಗಿಸಲು ಅವಳ
ಕೆಂಪುತುಟಿಗಳ ಹವಳ
ಬೆಳಗಲೇಬೇಕು..
ಬೆಳಗಲೇಬೇಕು..
ಬೆಳಗಲೆಬೇಕೂ..
ಬೆಳಗಲೇಬೇಕೂ..


_,_,_,_,_,_

ಮತ್ತೆ ಜೊತೆಗೆ ಇನ್ನೊಂದು ವಿಷಯ...
ನೆನ್ನೆ ಮೊನ್ನೆಯಷ್ಟೇ ಕಳೆದ ಈ ಡಿಸೆಂಬರ್ ೨೪ ನನಗೆ ಒಂದು ವಿಶೇಷವಾದ ದಿನ.. ಕಾರಣ ನನ್ನ ಜೀವನದ ಏಕೈಕ ಆಪ್ತರೊಬ್ಬರ ಜನ್ಮದಿನ.. ಅವರೇ ಈ 'ಮನಸಿನಮನೆ' ಕಟ್ಟಲು ಕಾರಣರಾದ ಗುರು..

ಅಂದೇ ಈ ಲೇಖನ ಹಾಕಬೇಕೆಂದಿದ್ದೆ.. ತಪ್ಪು ಮಾಡಿದೆ.. ಕ್ಷಮೆಯಿರಲಿ..
ಆದರೂ ನನಗೊಂದು ಅಳುಕಿದೆ..
ಕಳೆದ ನವೆಂಬರ್ ೨ ನನ್ನ ಗೆಳತಿಯೊಬ್ಬಳ ಜನ್ಮದಿನ.. ಅಂದು ನಾನು ತುಂಬಾ ಕ್ರಿಯಾಶೀಲತೆಯಿಂದ ಓಡಾಡಿಕೊಂಡು ಅವಳಿಗೆ ಕೊಡುಗೆ ಇತ್ತು ತಕ್ಕಮಟ್ಟಿಗೆ ಸಂಭ್ರಮ ಆಚರಿಸಿದೆ..
ಹಲವಾರು ಸಲ ಜಗಳ,ಮುನಿಸುಗಳೊಂದಿಗೆ ಇರುವ ನನ್ನ ಗೆಳತಿಯ ಹುಟ್ಟುಹಬ್ಬಕ್ಕೆ ಬಹಳ ತಲೆ ಕೆಡಿಸಿಕೊಂಡಿದ್ದ ನಾನು ಇವರ ಜನ್ಮದಿನದ ಬಗ್ಗೆ ಏಕೆ ಅಷ್ಟೊಂದು ತಲೆಕೆಡಿಸಿಕೊಳ್ಳದೆ ಕೇವಲ ತಡವಾದ ಶುಭಾಷಯ ಮಾತ್ರ ಹೇಳಿ ಅವರ ಜನ್ಮದಿನ ಮುಗಿಸಿದ್ದೇಕೆ ...?
ಹೇಳಬೇಕೆಂದರೆ ಆಕೆಗಿಂತ ಇವರೇ ನನಗೆ ಮುಖ್ಯವಾದವರು..(ಇದನ್ನು ಓದಿದ ಆಕೆ ಬೇಸರಾಗದಿರಲಿ..)
ಅವಳಿಗಾಗಿಯೇ ಅಂದೊಂದು ಕವಿತೆ ಕೂಡ ಬರೆದಿದ್ದೆ..
ಇವರಿಗೆ ಬರೆಯಬೇಕೆನ್ದುಕೊಂದಿದ್ದರೂ ಕೊನೆಯಲ್ಲಿ ಕೈಬಿಟ್ಟೆ..
ತಪ್ಪಾಗಿದೆ ಮತ್ತೊಮ್ಮೆ ಕ್ಷಮೆಯಾಚನೆ ಮಾಡುತ್ತೇನೆ..

~.~

ಕಾಡದಿರು ಪ್ರಭುವೆನ್ನ ನೊಂದಿರುವೆ ಸಾಕಷ್ಟು..

[ಬರೆಯಲೇನೂ ವಿಷಯವಿಲ್ಲದೆ ಬರೆದದ್ದು.. ]



ಈ ಲೇಖನ ಅವಶ್ಯಕವೋ ಅನಾವಶ್ಯಕವೋ ನನಗೆ ತಿಳಿದಿಲ್ಲ.. ಬರೀಬೇಕು ಅನಿಸಿತು ಬರೆಯುತ್ತಿದ್ದೇನೆ..
ನಾನು ದ್ವಿತೀಯ ಪಿ.ಯು.ಸಿ. ವಿಜ್ಞಾನ ವಿಭಾಗದಲ್ಲಿ ಉತ್ತಮ ಅಂಕಗಳನ್ನೇ ಪಡೆದೆನಾದರೂ ಯಾರ ಮಾತು ಕೇಳದೆ ಬಿ. ಎಸ್ಸಿ. ಆಯ್ಕೆ ಮಾಡಿಕೊಂಡದ್ದು ಎರಡನೇ ವಿಷಯ..
ಮೊದಲ ಸೆಮಿಸ್ಟರ್ ನಲ್ಲಿ ಯಾವುದೋ ಒಂದು ಕೆಲಸಕ್ಕೆ ಅರ್ಜಿ ಹಾಕಿದ್ದು ಆ ಕೆಲಸ ಸಿಕ್ಕೆ ಸಿಗುವುದೆಂಬ ಅಪೇಕ್ಷೆಯಿಂದ ಓದುವುದರ ಕಡೆ ಗಮನ ಬಿಟ್ಟಿದ್ದೆ.. ಆದರೆ ಕೆಲಸವೂ ಸಿಗಲಿಲ್ಲ.. ಓದುವುದರ ಕಡೆ ಗಮನ ಕೊಡದೆ ಇದ್ದುದರಿಂದ ಸುಮಾರಾಗಿ ಮಾತ್ರ ಅಂಕ ಗಳಿಸಲು (೬೦%) ಸಾಧ್ಯವಾಯ್ತು..
ಎರಡನೇ ಸೆಮಿಸ್ಟರ್ ನಲ್ಲಿ ಓದುವುದರ ಕಡೆ ಗಮನ ಹರಿಸಿದ್ದರೂ ವಯಸ್ಸಲ್ಲವೇ ಕೆಲವು ವಿಷಯಗಳು ಮನಸಿನ ಮೇಲೆ ದಾಳಿ ಮಾಡಿದ್ದವು.. ಆದರೂ ದೇವರ ಕೃಪೆಯಿಂದ ಮೊದಲ ಸೆಮಿಸ್ಟರ್ ಗಿಂತ ಹೆಚ್ಚು ಅಂಕ (೭೫%) ಗಳಿಸಲು ಸಾಧ್ಯವಾಯಿತು..
ಇನ್ಮುಂದೆ ಬೇರೆ ಕಡೆ ಗಮನ ಕೊಡದೆ ಓದುವುದರ ಕಡೆ ಹೆಚ್ಚು ಗಮನ ಕೊಡಬೇಕು ಎಂದುಕೊಂಡು ಮೂರನೇ ಸೆಮಿಸ್ಟರ್ ಆರಂಭ ಮಾಡಿದೆ.. ಅಂತೆಯೇ ಮೊದಮೊದಲು ಓದುವುದರ ಕಡೆ ಗಮನ ಹರಿಸಿ ಓದುತ್ತಲೇ ಇದ್ದೆ.. ನೂರೆಂಟು ಕನಸುಗಳನ್ನು ಕಟ್ಟಿದ್ದೆ..
ಕೆಲವು ದಿವಸಗಳ ನಂತರ ಇದ್ದಕ್ಕಿದ್ದಂತೆ ಓದುವುದರ ಕಡೆ ಗಮನ ಕಡಿಮೆಯಾಯಿತು.. ತರಗತಿಗಳಿಗೆ ಹೋಗಲು ಮನಸ್ಸು ಒಪ್ಪದಾಯಿತು.. ಓದು ಅಂತಲ್ಲ ಯಾವುದೇ ಬೇರೆ ವಿಷಯದ ಕಡೆಗೂ ಗಮನ ಇರದಾಯಿತು.. ನಿರುತ್ಸಾಹಿಯಾಗಿಬಿಟ್ಟೆ.. ಪ್ರತಿಯೊಂದಕ್ಕೂ ಕಾರಣ ಇರಲೇಬೇಕೆಂದು ಎಲ್ಲರಿಗೂ ಹೇಳುತ್ತಿದ್ದ ನನಗೇ ಈಗ ನನಗೆ ಉತ್ಸಾಹ ಕುಗ್ಗಿ ಹೋಗಲು ಕಾರಣ ತಿಳಿದುಬರುತ್ತಿಲ್ಲ..
ಮನಸ್ಸು ಏನೇನೋ ಹಳೆಯ ಕಹಿನೆನಪನ್ನು ಮೆಲುಕು ಹಾಕುತ್ತದೆ ಸದಾ..
ಈ ಹಿಂದೆ ನನ್ನ ಭವಿಷ್ಯದ ಬಗ್ಗೆ ನಾ ತೆಗೆದುಕೊಂಡ ಕೆಲವು ನಿರ್ಧಾರಗಳು ತಪ್ಪೆಂದು ಅರಿವಾಗುತ್ತಿವೆ..
ಹಳೆಯದೆಲ್ಲ ಕಹಿ ನೆನಪುಗಳು ಬೇಡ ಬೇಡವೆಂದರೂ ನನ್ನ ಮನದಂಗಳಕ್ಕೆ ಸತ್ತ ಭೂತಗಳನ್ನು ತಂದು ಬಿಸಾಡುತ್ತಿವೆ..
ನನ್ನ ಬದುಕೀಗ ಮುಳ್ಳಿನ ಹಾಸಿಗೆ ಮೇಲೆ ಮಲಗಿ ಶಾಂತಿಗಾಗಿ ಅತ್ತಿತ್ತ ಹೊರಳಾಡುತ್ತಿರುವಂತಾಗಿದೆ..
ಎಲ್ಲ ಸಂಬಂಧಗಳನ್ನು ಕಳಚಿಕೊಂಡು ಒಂಟಿಯಾಗಬೇಕು ಎನಿಸುತ್ತದೆ..
ಕೆಲವೊಮ್ಮೆ ದೇಹಕ್ಕೆ ಆತ್ಮದೊಂದಿಗಿರುವ ಬಂಧವನ್ನು ತೊರೆಯಬೇಕೆಂದು ಎನಿಸುತ್ತದೆ..
ಇಂಥ ಸಮಯದಲ್ಲಿ ಸಮಾಧಾನ ಹೇಳುವ ಜೀವಗಳೇ ಬಳಿ ಇಲ್ಲ.. ನಾನಿರುವುದು ಹಂಗಿಸುವ ಜೀವಗಳ ಎಡೆಯಲ್ಲಿ.. ಬಲಿಪಶು ಮಾಡುವವರ ಮಧ್ಯದಲ್ಲಿ.
ಹಲವಾರು ಉತ್ತರಗಳಿಲ್ಲದ ಪ್ರಶ್ನೆಗಳು ಪದೇ ಪದೇ ಕಾಡುತ್ತವೆ..
ಬ್ಲಾಗ್ ಕಡೆ ಬರಲು ಸಾಧ್ಯವಾಗುತ್ತಿಲ್ಲ..
ನನಗೇನಾಗಿದೆ ಅಂತ ಹೇಳೋಕೆ ನನಗೇ ಆಗುತ್ತಿಲ್ಲ..
ವಿದ್ಯಾಭ್ಯಾಸ ಮುಂದುವರೆಸಿ ಏನನ್ನಾದರೂ ಸಾಧಿಸುತ್ತೇನೆ ಎಂಬುದರ ಬಗ್ಗೆ ನಂಬಿಕೆಯೇ ಇಲ್ಲವಾಗಿದೆ.. ಓದುವುದರ ಬಗ್ಗೆ ಸಂಪೂರ್ಣ ಆಸಕ್ತಿ ಕುಗ್ಗಿಹೋಗಿದೆ..
ಇತ್ತೀಚೆಗಷ್ಟೇ ನಡೆದ ಪರೀಕ್ಷೆಯನ್ನು ಬಹಳ ಕೆಟ್ಟದಾಗಿ ಮಾಡಿದ್ದೇನೆ..
ಈ ಅಶಾಂತಿ ತುಂಬಿದ ಸಮಯದಲ್ಲಿ ಒಂದು ಹುದ್ದಗೆ ಅರ್ಜಿ ಆಹ್ವಾನ ಬಂದಿತ್ತು.
ಹೇಗಿದ್ದರೂ ಓದುವುದರ ಗಮನ ಕಡಿಮೆಯಿದೆ ಎಂದು ಈ ಕೆಲಸಕ್ಕೆ ಅರ್ಜಿ ಸಲ್ಲಿಸಿ ಸಿಕ್ಕೆ ಸಿಗುವುದೆಂಬ ನಂಬಿಕೆಯಿಂದಿದ್ದೇನೆ..
ಇದೇ ಡಿಸೆಂಬರ್ ೨ ರಿಂದ ಮೂರನೇ ಸೆಮಿಸ್ಟರ್ ಅಂತಿಮ ಪರೀಕ್ಷೆ ಇದ್ದು ನನ್ನ ತಯಾರಿ ಆರಂಭವಾಗೆ ಇಲ್ಲ..
ಒಟ್ಟಿನಲ್ಲಿ ಈ ವರ್ಷದ ಕೊನೆಯಲ್ಲಿ ನನ್ನ ಬದುಕು ಮಹಾತಿರುವು ಕಾಣಲಿದೆ.. ಹೊಸವರುಷಕ್ಕೆ ಹೊಸಬೆಳಕು ಬಾಳಿನಲ್ಲಿ ಮೂಡುವುದೋ ಇಲ್ಲವೋ ಕಾದು ನೋಡಬೇಕಾಗಿದೆ..
ಮತ್ತೆ ಉತ್ಸಾಹ ಮರುಕಳಿಸುವ ತನಕ ನಾನು ಇತ್ತ ಬರಲಾರೆನು ಕ್ಷಮಿಸಿ..
ಮರೆಯದಿರಿ..



-..-..-..-..-..-..-..-..-..-..-..-..-
ಪದೇ ಪದೇ ಕೇಳುವಂತೆ ನನ್ನ ಕಾಡುವ ಸಾಲುಗಳು :


ನಿನ್ನ ನೆರವಿಲ್ಲದೆಯೇ
ತೊಳಲಿರುವೆ ನೆಲದಲ್ಲಿ
ಚೇತನವನುದ್ಘರಿಸೋ ದೇವ ದೇವ
ಹಗಲಿರುಳು ನಿನ್ನೊಂದು
ಕೃಪೆಗಾಗಿ ಕಾದಿರುವೆ
ನಿನ್ನ ಕಂದನ ಸಲಹೋ ದೇವ ದೇವ
ನಿನ್ನ ನೆರವಿಲ್ಲದೆಯೇ
ತೊಳಲಿರುವೆ ನೆಲದಲ್ಲಿ

ಎನರ ಹಾ...ದಿಯ ನಂಬಿ
ನಾವೇ ತಾನುಲಿವಂತೆ
ಎನರ ಹಾ...ದಿಯ ನಂಬಿ
ನಾವೇ ತಾನುಲಿವಂತೆ
ಗುರಿಯಿಲ್ಲದಲೆದಿರುವೆ ನೆಲೆಯನರಸೀ..
ದಿವ್ಯಅಂಬಿಗ ನೀನು
ಬಂದೆನ್ನ ಪೊರೆಯ...ಯ್ಯ
ದಿವ್ಯಅಂಬಿಗ ನೀನು
ಬಂದೆನ್ನ ಪೊರೆಯ...ಯ್ಯ
ದೂರತೀರದ ಬಳಿಗೆ ನನ್ನ ನಡೆಸೀ..
ನಿನ್ನ ನೆರವಿಲ್ಲದೆಯೇ
ತೊಳಲಿರುವೆ ನೆಲದಲ್ಲಿ

ತೋರು ಶಾಂ..ತಿಯ ತಂದೆ
ನನ್ನ ಸೋ..ತಿರುವೆದೆಗೆ
ತೋರು ಶಾಂ..ತಿಯ ತಂದೆ
ನನ್ನ ಸೋ..ತಿರುವೆದೆಗೆ
ಭಕ್ತಿ-ಭಾವವ ಉಳಿದ ಶಕ್ತಿದೇವಾ..
ಕಾ...ಡದಿರು ಪ್ರಭುವೆನ್ನ
ನೊಂದಿರುವೆ ಸಾ...ಕಷ್ಟು
ಕಾ...ಡದಿರು ಪ್ರಭುವೆನ್ನ
ನೊಂದಿರುವೆ ಸಾ...ಕಷ್ಟು
ನಿನ್ನ ಅಭಯದ ಹಸ್ತ ನೀಡು ದೇವಾ..

ನಿನ್ನ ನೆರವಿಲ್ಲದೆಯೇ
ತೊಳಲಿರುವೆ ನೆಲದಲ್ಲಿ
ಚೇತನವನುದ್ಘರಿಸೋ ದೇವ ದೇವಾ..
ಹಗಲಿರುಳು ನಿನ್ನೊಂದು
ಕೃಪೆಗಾಗಿ ಕಾದಿರುವೆ
ನಿನ್ನ ಕಂದನ ಸಲಹೋ ದೇವ ದೇವಾ..
ನಿನ್ನ ನೆರವಿಲ್ಲದೆಯೇ..
~.~
ಒಂದೆರಡು ಸಾಲಿನಲ್ಲಿ:
'ಕಣ್ಣಿಗೇಳದೆ ನೋವು ನುಂಗುತ್ತ ಬಿಕ್ಕಳಿಸುವ ತುಟಿಗಳು..
ತುಟಿಗಳಿಗೆ ತಿಳಿಸದೇ ನೀರು ತುಂಬಿಕೊಳ್ಳುವ ಕಣ್ಣುಗಳು..
ಅವೆರಡರ ಗಮನಕ್ಕೂ ಕೊಡದೆ ಒಳಗೆ ನೋವು ನುಂಗಿ ಬಿರಿಯುತ್ತಿರುವ ಎದೆ..
ನನ್ನದೆ!!"
~.~
ಎ.ಕಾ.ಗುರುಪ್ರಸಾದಗೌಡ.

ಬಾ ನನ್ನೆದೆಯ ಅಂಗಳಕೆ..

ಮೊದಲನೆಯದಾಗಿ ಎಲ್ಲರಿಗೂ ನಲ್ಮೆಯ 'ನ್ನ ರಾಜ್ಯೋತ್ಸವ' ದ ಶುಭಾಶಯಗಳು..
ಹಾಗೂ
'ದೀಪಾವಳಿ ಹಬ್ಬ' ದ ಶುಭ ಹಾರೈಕೆಗಳು..





ಬಾ ನನ್ನೆದೆಯ ಅಂಗಳಕೆ
ನನ್ನ ಮನಸಿನಮನೆಗೆ
ಚೂರಾದ ಕನಸುಗಳ ಗುಡಿಸು ಬಾ..
ರಂಗೋಲಿ ಇಟ್ಟು ಬಲಗಾಲಿಟ್ಟು ಬಾ ..
ಕತ್ತಲ ಮನೆಗೆ ದೀವಿಗೆ ಹಿಡಿದು ಬಾ..
ಮನದಂಗಳಕೆ ಬೆಳದಿಂಗಳ ಬಾಲೆಯಾಗಿ ನೀ ಬಾ..
ನನ್ನೆದೆಯ ವೀಣೆ ನುಡಿಸಲು
ನನ್ನೊಂದಿಗೆ ಕೈ ಜೋಡಿಸು ಬಾ..
ಬಂಧ ತೊರೆದಿಹ ಜೀವಕ್ಕಿಲ್ಲಿ..
ಬಂಧುವಾಗಿ ನೀ ಬಾ..
ಎದೆಗೆ ನಾಟಿದ ಮುಳ್ಳುಗಳ
ಹೆಕ್ಕಿ ನೇವರಿಸು ಬಾ..
ನೊಂದ ಮನಸಿಗೆ ಸಾಂತ್ವನಿಸಲು
ನಗುವ ಹೂ ಹಿಡಿದು ಬಾ..
ನೋವನ್ನೆಲ್ಲ ತೋಡಿಕೊಳ್ಳಲು
ಮಡಿಲ ನೀಡು ಬಾ..
ಕಣ್ಣ ನೀರ ಒರೆಸಲು
ಸೆರಗ ನೀಡು ಬಾ..
ಹುಚ್ಚು ಮನಸಿಲ್ಲಿ ಬೆಚ್ಚಿ ಕುಳಿತಿಹುದಿಲ್ಲಿ..
ಅನಾಥಮಗುವಂತೆ ಅಳುತಿಹುದಿಲ್ಲಿ
ಮಗುವಿನಂತೆ ಮುದ್ದುಮಾಡಿ
ಕಣ್ಣೀರೊರೆಸಿ ಕೈ ಹಿಡಿವೆ ಬಾ..

.~-~.~-~.


ಎರಡು ಸಾಲಿನಲ್ಲಿ..:
ಅವಳು ಕೊಟ್ಟ ಖಾಲಿ ಪತ್ರವನ್ನೇ ಮತ್ತೆ ಮತ್ತೆ ಓದುತ್ತಾನಿವನು..!!



~.~-~

ಹೀಗೂ ಇರ್ತಾರಪ್ಪ ಜನ..


1.ಯುವಕನ್ನೊಬ್ಬ ಇನ್ನು ನಂಬರೇ ಹಾಕಿರದ ತನ್ನ ಹೊಸ ಪಲ್ಸರ್ ಗಾಡಿಯನ್ನು ಮುಖ್ಯರಸ್ತೆಯಲ್ಲಿ ವೇಗವಾಗಿ ಉತ್ಸಾಹದಿಂದ ಓಡಿಸುತ್ತಾ ಬರುತ್ತಿದ್ದಾನೆ..ದುರದೃಷ್ಟವಶಾತ್ ಅಲ್ಲೊಬ್ಬ ಟ್ರಾಫಿಕ್ ಪೋಲಿಸ್ ಇದ್ದ. ತಕ್ಷಣ ಆ ಹುಡುಗನನ್ನು ಹಿಡಿದು ನಿಲ್ಲಿಸಿದನು..ಆ ಯುವಕ ಆ ಪೋಲಿಸ್ ಕಿವಿಯಲ್ಲಿ ಏನೋ ಗುನುಗುತ್ತಿದ್ದಾನೆ.. ತಕ್ಷಣ ಆ ಪೋಲಿಸ್ 'ಹೌದ ಸರ್,ನಂಗೊತ್ತಿರ್ಲಿಲ್ಲ.... ನಡೀರಿ ಸರ್..' ಎಂದು ಏನೇನೋ ಹೇಳುತ್ತಾ ಆ ಯುವಕನನ್ನು ಕಳುಹಿಸಿಯೇ ಬಿಟ್ಟ..
ಇನ್ನೊಂದು ದಿವಸ ಮೂವರು ಯುವಕರು ಒಂದೇ ಬೈಕಿನಲ್ಲಿ ಬರುತ್ತಿರಲು ಟ್ರಾಫಿಕ್ ಪೋಲಿಸ್ ಕಣ್ಣಿಗೆ ಬಿದ್ದರು.. ಆ ಬೈಕಿಗೆ ಅಪ್ಪ-ಅಮ್ಮ(ಡಾಕ್ಯೂಮೆಂಟ್ಸ್ ) ಇಲ್ಲದಿರುವುದನ್ನು ತಿಳಿದ ಪೋಲಿಸ್ ಬಾಯಿ ಜೋರು ಮಾಡಿ ಕೂಗಾಡಲು ಶುರುಮಾಡಿದ.. ಸುಮಾರು ಹೊತ್ತಿನ ತನಕ ಮಾತಿನ ಚಕಮಕಿಯ ನಂತರ ಅವರಲ್ಲೊಬ್ಬ ಯುವಕ ಆ ಪೋಲಿಸ್ ಕೈಗೆ ೩೦೦/- ರೂಪಾಯಿ ಇಟ್ಟ.'ಆದ್ರೂ... ತಪ್ಪಲ್ವಾ' ಎಂದ ಪೋಲಿಸ್..'ಇರ್ಲಿ..ಇಟ್ಕೊಳ್ಳಿ.. ಮುಂದೆ ಸಿಗೋಣ ಸರ್..' ಅಂತ ಹೇಳಿ ಆ ಪೋಲಿಸ್ ಗೊಂದು ಸಿಗರೆಟ್ ಕೊಟ್ಟು ಬೈಕ್ ಏರಿ ಹೊರಟೇಬಿಟ್ಟ.!!
ಮತ್ತೊಂದು ದಿನ ಟ್ರಾಫಿಕ್ ಪೋಲಿಸ್ ಮಹಾಶಯ ಯಾವುದೋ ಟಿ.ವಿ.ಎಸ್ ಹಿಡಿದು ನಿಲ್ಲಿಸಿದ್ದ.. ಆ ಟಿ.ವಿ.ಎಸ್. ಮಾಲೀಕ ತನ್ನ ೫-೬ ವರ್ಷದ ಮಗನನ್ನು,ಹೆಂಡತಿಯ ಜೊತೆ ಆಸ್ಪತ್ರೆಗೆ ಕರೆದುಕೊಂಡು ಹೋಗ್ತಿದ್ದ.. ಅವನು ರಸ್ತೆ 'ಒನ್ ವೇ' ಆಗಿರೋದ್ನ ತಿಳಿಯದೆ ಬೈಕನ್ನು ಆರಸ್ತೆಯಲ್ಲಿ ಓಡಿಸಲು ಮುಂದಾಗಿದ್ದ ಅಷ್ಟೇ! ಅಷ್ಟಕ್ಕೇ ಹಿಡಿದು ಏನೇನೋ ಕೇಳಿ ಪಾಪ ಗಾಡಿನ ನಿಲ್ಲಿಸಿಕೊಂಡಿದ್ದ ಆ ಪೋಲಿಸ್. ಆ ಟಿ.ವಿ.ಎಸ್. ಗಾಡಿಯವನನ್ನು ನೋಡ್ತಾ ಇದ್ರೆ ಅವನೊಬ್ಬ ಏನೂ ಅರಿಯದ ಪಕ್ಕ ಹಳ್ಳಿಗುಗ್ಗು ತರಹ ಕಾಣುತ್ತಿದ್ದ. ಅವನ,ಅವನ ಫ್ಯಾಮಿಲಿಯ ವೇಷ-ಭೂಷಣ ನೋಡಿದ್ರೆ ಗೊತ್ತಾಗುತ್ತೆ ಅವನು ಕಡುಬಡವ ಅಂತ.ಅವನ ಹೆಂಡತಿ 'ಅದೇನೋ ನಂಗ್ ಗೊತ್ತಗಕ್ಕಿಲ್ಲ ಕಣಪ್ಪ.. ತಪ್ಪಾಯ್ತು ಬುಟ್ಬುಡಪ್ಪ.. ಆಸ್ಪತ್ರೆಗೆ ಹೋಗ್ಬೇಕು..' ಎಂದು ಎಷ್ಟು ಅಂಗಲಾಚಿದರೂ ಪ್ರಯೋಜನ ಆಗುತ್ತಿಲ್ಲ.
ಈ ಪ್ರಸಂಗಗಳನ್ನು ನೋಡಿ ಏನಂತೀರ..?
2.ಅದೊಂದು ಕಾಲೇಜು.. ಎಲ್ಲ ಕಾಲೇಜುಗಳಂತೆ ಅಲ್ಲೂ ಮೊಬೈಲ್ ಫೋನುಗಳ ನಿಷೇಧವಿದ್ದರೂ ಸೈಲೆಂಟ್ ಮೋಡ್ ನಲ್ಲಿ ಎಷ್ಟೋ ಮೊಬೈಲ್ ಫೋನುಗಳಿದ್ದವು..
ಈಗಿನ ಕೆಲವು ಹುಡುಗರು ಹುಡುಗಿಯರನ್ನು ಆಕರ್ಷಣೆ ಮಾಡೋದಕ್ಕೆ ಸ್ವಲ್ಪ ಜಾಸ್ತಿ ಸೌಂಡ್ ಬಾರೋ ಮೊಬೈಲ್ ಫೋನುಗಳನ್ನು ತಕೊಂಡು ಜೋರಾಗಿ ಹಾಡು ಹಾಕ್ತಾರೆ..
ಹಾಗೆಯೇ ಒಂದು ದಿನ ಬೆಳ್ಳಂಬೆಳಿಗ್ಗೆನೆ ೯ ಕ್ಕೆ ಕಾಲೇಜಿಗೆ ಬಂದ ಹುಡುಗನೊಬ್ಬ ಪಾಪ ಪೇಪರ್ ರೀಡಿಂಗ್ ಮಾಡೋಕೆ ಆ ಕಾಲೇಜ್ ನಲ್ಲಿ ಪೇಪರ್ ರೂಂ ನೆ ತೆಗೆಯೋದು ತುಂಬಾ ಅಪರೂಪ ಆದ್ದರಿಂದ ಒಂದು ಹುಡುಗ ಜೋರಾಗಿ ಹಾಡು ಹಾಕಿ ಕೂತಿದ್ದಾನೆ.. ಹಿಂದಿನಿಂದ ಒಬ್ಬ ಉಪನ್ಯಾಸಕರು ಬರುತ್ತಿರೋದ್ನ ಗಮನಿಸಿಲ್ಲ.. ಆ ಉಪನ್ಯಾಸಕರು ಬಂದವರೇ ಅವನಿಂದ ಮೊಬೈಲ್ ಕಸಿದುಕೊಂಡು ಹೊರಟೆಬಿಟ್ರು.. ಆ ಹುಡ್ಗ ಎಷ್ಟು ಬೇಡಿದರೂ ಉಪಯೋಗ ಆಗ್ಲಿಲ್ಲ..
ಅದೆ ಕಾಲೇಜಿನಲ್ಲಿ ಒಂದು ದಿನ ಭೌತಶಾಸ್ತ್ರ ಪ್ರಯೋಗಾಲಯದಲ್ಲಿ ವಿದ್ಯಾರ್ಥಿಗಳೆಲ್ಲ ಗುಂಪುಗುಂಪಾಗಿ ತಮ್ಮ ತಮ್ಮ ಎಕ್ಷ್ ಪರಿಮೆಂಟ್(ಪ್ರಯೋಗ) ಮಾಡ್ತಿದಾರೆ.. ಅಲ್ಲೇ ಇಬ್ಬರು ಉಪನ್ಯಾಸಕರು ಮಾತುಕತೆ ನಡೆಸುತ್ತಿದ್ದಾರೆ..ಒಂದು 'ಸುಂದರ' ಹುಡುಗಿಯ ಜನರಲ್ ಮೋಡ್ ನಲ್ಲೆ ಮೊಬೈಲ್ ಫೋನ್ 'ಹುಡುಗರು ಬೇಕು..' ಎಂದು ಹಾಡುತ್ತ ರಿಂಗಣಿಸಿತು.. ಆಕೆ ತಕ್ಷಣ ರಿಸೀವ್ ಮಾಡಿ ಮಾತನಾಡೋಕೆ ಶುರುಮಾಡಿದಳು.. ಪಾಪ ಆ ಎಕ್ಷ್ಪರಿಮೆಂಟ್ ಮಾಡ್ತಿದ್ದವರಿಂದ ಸ್ವಲ್ಪ ಡಿಸ್ಟರ್ಬ್ ಆಗಿರಬೇಕು.. ಫೋನು ಎತ್ತುಕೊಂಡು ಸೈಡಿಗೆ ಹೋಗಿ ಮೂಲೆಯಲ್ಲಿ ನಿಂತ್ಕೊಂಡು ಗೋಡೆಗೆ ಮುಖ ಮಾಡಿ ನಗು ನಗುತ್ತ ಮಾತನಾಡೋಕೆ ಶುರುಮಾಡಿದಳು..
ಒಂದೈದು ನಿಮಿಷದ ನಂತರ ಉಪನ್ಯಾಸಕರೊಬ್ಬರು ಅಲ್ಲೇ ಇದ್ದ ಒಂದು ಗುಂಪಿಗೆ ಪ್ರಯೋಗದ ಬಗ್ಗೆ ಸ್ವಲ್ಪ ವಿವರಣೆ ನೀಡಿ ಅಲ್ಲೇ ಅಡ್ಡಾಡುತ್ತಿದ್ದಾರೆ.. ಅವರಿಗೆ ಆ 'ಮಾತೆ' ಕಾಣಿಸುತ್ತಿದ್ದಾಳೆ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.. ಸುಮಾರು ೨೦ ನಿಮಿಷ ಮಾತಾಡಿ ಸುಸ್ತಾದ ಆ ಮಾತೆ ಪ್ರಯೋಗ ಮಾಡ್ತಿದ್ದ ಅವರ ಗುಂಪಿನೊಡನೆ ಬೆರೆತುಕೊಂಡಳು..
ಇದರ ಬಗ್ಗೆ ಏನು ಹೇಳಬಹುದು..?
3.ಒಂದು ತಾಲೋಕ್ ಆಫೀಸ್..ಬೆಳಿಗ್ಗೆ ೧೦ ಗಂಟೆ, ಇನ್ ಕಂ ಸರ್ಟಿಫಿಕೇಟ್ ಪಡೆಯಲು ಜನರೆಲ್ಲಾ ಸಾಲಾಗಿ ಕಿಟಕಿ ಬಾಗಿಲ ಬಳಿ ನಿಂತಿದ್ದಾರೆ..
ಒಬ್ಬಾತ ಬಂದ., ಸಾಲು ನೋಡಿ ನೇರವಾಗಿ ಆಫೀಸ್ ಒಳಗೆ ಹೋದವನೇ ೧೫ ರೂಪಾಯಿ ಕೊಟ್ಟು ಪಡೆಯಬೇಕಿದ್ದ ಸರ್ಟಿಫಿಕೇಟ್ಗೆ ೧೫೦ ಕೊಟ್ಟ. ತಕ್ಷಣ ಕ್ರಿಯಾಶೀಲನಾದ ಸರ್ಟಿಫಿಕೇಟ್ ವಿತರಕ ಎಲ್ಲೆಲ್ಲೋ ತಡಕಾಡಿದ.. ಆದರೆ ಆವ್ಯಕ್ತಿ ಇದಕ್ಕೆ ಮೊದಲು ಅಪ್ಲೈ ಮಾಡೇ ಇರ್ಲಿಲ್ಲ.. ಆದರಾಗಲೀ ಎಂದು ಅವರನ್ನು ಕುಳ್ಳಿರಿಸಿ ೧೦ ನಿಮಿಷದಲ್ಲಿ ರೆಡಿ ಮಾಡಿ ಸರ್ಟಿಫಿಕೇಟ್ ಕೊಟ್ಟುಕಳುಹಿಸಿದ.. ಅಷ್ಟೊತ್ತಿಗೆ ೧ ಗಂಟೆ ಆಯ್ತು.. ಕಿಟಕಿ ಬಾಗಿಲು ಮುಚ್ಚಿ ನಡೆದ ವಿತರಕ ಮತ್ತೆ ಬಾಗಿಲು ತೆರೆದಿದ್ದು ನಾಲ್ಕು ಘಂಟೆಗೆ.. ಈ ಮೂರು ಘಂಟೆ ಅವನಿಗಿದ್ದುದು ಊಟ ಮಾಡೋ ಕೆಲಸ..ಹದಿನೈದು ದಿನದ ಹಿಂದೆಯೇ ಅಪ್ಲೈ ಮಾಡಿ ಕಾದು ಕೂತಿದ್ದ ಜನರಲ್ಲಿ ಕೆಲವರು ಸಾಲು ಬಿಟ್ಟು ಹೊರಟುಹೋಗಿದ್ದರು.. ಅವರಿಗೂ ಹೊಟ್ಟೆ ಇದೆಯೆಂದು ನನ್ನ ಅನಿಸಿಕೆ.
ಇದರ ಬಗ್ಗೆ ನಿಮ್ಮ ಅಭಿಪ್ರಾಯ?
ಏನಾದರೂ ಹೊಸದಾಗಿ ಹೇಳಿದ್ನ..?




)()()()()()()()()()()()()()()()()()(


~.~

ಯೌವ್ವನದ ನಾಕ..!

[ಯೌವ್ವನ ನರಕವಾಗುವ ಪರಿಯನ್ನು ನನಗೆ ತಿಳಿದಷ್ಟು ಶಬ್ಧಗಳಲ್ಲಿ ಹಿಡಿದಿಡಲು ಪ್ರಯತ್ನಿಸಿದ್ದೇನೆ...]


ಕತ್ತಲೆಮನೆಯಾಗಿದೆ ಯೌವ್ವನದ ನಾಕ
ಆಸೆಪತಂಗಕಿದು ಬೆಲ್ಲದ ಬಿಸಿಪಾಕ..
ಮನಸು ಅಂದು ತಿಳಿ ತಿಳಿ ಹಾಲು
ಯೌವ್ವನದ ಹನಿ ಆ ಹಾಲಿಗಿಳಿಯಲು
ಆಸೆ ತರಂಗಗಳು ಹೊಮ್ಮುತಿರಲು
ಕಾಡಿವೆ ಅರಿಷಡ್ವರ್ಗಗಳ ಕವಲು..
ಏಕಾಂತವ ಪದೆಪದೆ ಬಯಸಲು
ತನುಮನಕೀಗ ಏಕಾಂತವೆ ಸ್ವರ್ಗವು..
ಕಾಡುತಿರಲು ವಿರಹವು
ಮೂಡುತಿರಲು ಸಿಹಿನೋವು
ಜೇನು ತುಂಬಿದ ಕುಸುಮಗಳ
ಕೆರಳಿಸಿ ಅರಳಿಸುವ ಆಸೆ..
ಆಸೆಪತಂಗಕೆ ಸಿಹಿಪಾಕಕಾದರೂ
ಅಂಟಿ ಕ್ಷಣಿಕ ಸುಖಿಯಾಗುವ ಆಸೆ
ಸುಡುವ ಬಿಸಿಜ್ವಾಲೆಯನೆ ಬಳಸಿ
ತಂಪುಗಾಳಿಯ ಬಿಸಿಯುಸಿರಾಗಿಸುವ ಆಸೆ..
ಸಾಗುತಿರಲು ಕಾಲಬ್ರಹ್ಮನು
ನೂಕುತಿರಲು ಜೀವನಚಕ್ರ
ನನ್ನ ಜೀವನದ ಹಾದಿಗಳು
ಮುಂದೆ ಹೆಜ್ಜೆ ಇಟ್ಟು ಸವೆಸಲಾಗಿ
ಕುಸಿದುಹೋಗಿ ಮರೆಯಾಗುತಿವೆ
ಮತ್ತೊಮ್ಮೆ ತಲುಪಲಾಗದಂತೆ ತಿರುಗಿ..
ನಾಗಾಲೋಟದಲ್ಲಿ ಓಡುತಿರುವ
ಹುಚ್ಚುಕುದುರೆಗಳ
ಮನೋರಥವ ನಿಯಂತ್ರಿಸಲು
ಸಾರಥಿಯಾಗಬೇಕಿದೆ ನಾ..
ಮದವೇರಿ ಮೈಮರೆಯದೆ..
ಮನಸಿನಮನೆಗೆ ತಂಗಲು ಬರುವ
ಮೋಹಕಮಾಯೆಗಳ
ಮುಚ್ಚಿ ಬಾಗಿಲ ಹಿಂದೆ ನಿಂತು
ಹೋಗೆನ್ನಬೇಕಿದೆ ನಾ..
ಎದೆಹಾಸಿ ಸ್ವಾಗತಿಸದೆ..
.~~-~~.~~-~~.~~-

~.~-~

ಜ್ಞಾನದೀವಿಗೆ ಬೆಳಗುತಿರಲು..







ನೂರೆಂಟು ನೋವ ಅಂಧಕಾರದೊಳಗೆ


ನೋವ ಮರೆಸಿ ಮಾತೊಂದು ಮೊಳಗುತಿರಲು


ದಿವ್ಯದೀವಿಗೆಯು ಆರಿಹೋಗಿರಲು


ಜ್ಞಾನದೀವಿಗೆಯು ಬೆಳಗುತಿರಲು


ಕತ್ತಲ ನುಂಗಿ ಬೆಳೆಯುತಿರಲು


ಮೂಕಮನಸು ಹೂಂಕರಿಸುತಿದೆ




ಗುರಿಯತ್ತ ನೆಟ್ಟಿರುವ ನೋಟದೊಳಗೆ


ನಿದಿರೆಯ ಮಂಪರು ಕಣ್ಣು ಕುಕ್ಕುತಿರಲು


ಕನಸಿಗೆ ಗಾಂಪರು ಬುದ್ಧಿ ಹೇಳಿರಲು


ಮುಗಿದ ಕೈಗಳು ಮುಗಿಯುತಲೇ ಇರಲು


ಬಾಯಿ ಮಂತ್ರವ ಜಪಿಸುತಲೇ ಇರಲು


ಮನಸು ಬೆತ್ತಲೆಯಾಗಿ ಓಡುತಿದೆ..




ಕತ್ತಲ ಮನಸಿನಮನೆಯೊಳಗೆ


ಗೆಲುವೆಂಬುದು ನೆರಳಾಗಿರಲು


ಕುರುಡುಮನ ಬೆಳಕಿಗೆ ಬಾರದಿರಲು


ನೆರಳಂತಿರುವ ಗೆಲುವ ಕಾಣದಿರಲು


ಗಗನತಾರೆಯ ಕೀಳಲೆತ್ನಿಸುತ್ತಿರಲು


ಕಾಣದ ಕೈ ಶೋಧಿಸುತ್ತಲೇ ಇದೆ..




ದಿವ್ಯದೀವಿಗೆಯು ಕತ್ತಲ ನೆಟ್ಟಿದೆ


ಜ್ಞಾನದೀವಿಗೆಯು ಬೆಳಕ ನೆಟ್ಟಿದೆ




..-..-..-..-..-..-..-..-..-..-..-..-..-..-..-..-..-..-..-..-..-..-..

ಆರ್ಕುಟ್ : http://www.orkut.co.in/Main#Profile?rl=fpp&uid=4606487278641111312,





~.~


ಮಳೆ ಬಂದಿದೆ ಮನ ತುಂಬಿದೆ

[ಎಂದೋ ಬರೆದಿದ್ದ ಈ ಮಳೆಹನಿಕವನವನ್ನು(ನನ್ನ ಪ್ರಕಾರ ಅಷ್ಟೇನೂ ಗಂಧವಿಲ್ಲದ...) ಇಂದು ನಿಮ್ಮ ಮುಂದಿಡುತ್ತಿದ್ದೇನೆ...]




ಬಿಸಿಲ ಝಳದಲಿ ನಿಂತು

ಬಿರಿದ ನೆಲದಲಿ ಕುಂತು

ಆಕಾಶವನ್ನೇ ದಿಟ್ಟಿಸುತ್ತಿದ್ದ

ಗುಳಿಹೋದ ಕಣ್ಣುಗಳೀಗ

ಛಾವಣಿಯ ನೆರಳಲಿ

ಬಲು ಸಂತಸದಿ

ಕಣ್ಮುಚ್ಚಿ ವಿಶ್ರಮಿಸುತ್ತಿವೆ..


ಕಾಡಿನಲ್ಲಿ ಕಾಲಿಡಲು

ಬಿರಿಬಿಸಿಲ ಬೇಗೆಯಲಿ

ಉದುರಿಹೋದ ಒಣ ಎಲೆಗಳು

ತೂರಿ ಹಾರಾಡುತ್ತಿದ್ದವು ಅಂದು

ಕಾಡಿನಲ್ಲಿ ನಡೆದಾಡಲು

ಬೀಸುವ ಸುಯ್ಯನೆ ಗಾಳಿಲಿ

ಚಿಗುರೆಲೆಗಳಲ್ಲಿ ಅಡಗಿರುವ ಹನಿಗಳು

ತಂಪನೆರಚುತ್ತಿವೆ ಇಂದು..


ಹಳ್ಳ-ತೊರೆಗಳು ತುಂಬಿ ಹರಿದು

ಮನದಲೂ ಕನಸ ಕೋಡಿ ಹೊಡೆದಿದೆ

ಹರುಷದ ಮಳೆ ಬಂದು..


ಬಿಸಿಲ ಬೇಡವೆಂದಿದ್ದ ಜೀವಗಳೆಲ್ಲ

ಮಳೆಯ ಚುಮುಚುಮುಚಳಿಗೆ

ಎಳೆಬಿಸಿಲು ಕಾಯಲು

ಹಾತೊರೆದು ಮೈಮುರಿದು ಕಾದಿವೆ..


ಒಣಭೂಮಿಗೆ ಬಾಯಾಕಿ

ಎಣಗುತ್ತಿದ್ದ ದನ-ಕರುಗಳು

ಚಿಗುರಿದ ಗರಿಕೆಲಿ ಕುಳಿತ

ಮಳೆಹನಿ ಸೋಕಲು

ಮುಸಿಮುಸಿ ನಕ್ಕು ಕುಣಿಯುತ್ತಿವೆ..


ಬಿರಿಬಿಸಿಲ ಲೆಕ್ಕಿಸದೆ ಓಡಾಡುತ್ತಿದ್ದ ಮಕ್ಕಳು

ಜಾರಿ ಬೀಳುವೆವೆಂಬ ಭಯದಿ

ಎಚ್ಚರಿಕೆಯ ಆಟವಾಡುತ್ತಿವೆ..


ಅಂತೂ ಇಂತೂ ಮಳೆ ಬಂದಿದೆ

ಮನ ತುಂಬಿ ಹರಿದಿದೆ..



~-~

ಕನ್ನಡಚಿತ್ರಗಳು v/s ಕನ್ನಡಚಿತ್ರರಂಗ


ಈ ಲೇಖನ ನೋಡಿ, "ಸಣ್ಣ ಬಾಯಲ್ಲಿ ದೊಡ್ಡ ಮಾತು","ದೊಡ್ಡೋರ ಇಚಾರ ಸಣ್ಣವರಿಗೆ ಯಾಕೆ.." ಅಂತ ಅನ್ಕೊತಿರೆನೋ..?
ಯಾಕಂದ್ರೆ ನಂಗೂ ಕೂಡ ಒಂದೊಂದ್ ಸಲ 'ನಾನು ಮುಚ್ಕಂಡು ನನ್ ಕೆಲಸ(ಓದೋದು) ಏನಾಯ್ತೋ ಅದ್ ಮಾಡ್ದೆ ಈ ವಿಚಾರಕ್ಕ್ಯಾಕ್ ಬಂದೆ' ಅಂತ ಅನ್ಸುತ್ತೆ..
ನಾನು ಈಗ ಕನ್ನಡ ಚಲಚಿತ್ರರಂಗದ(ಅಬ್ಬಾ!!) ಬಗ್ಗೆ ನಂಗ್ ತಿಳ್ದಷ್ಟು ವಿಷಯನ ಇಟ್ಕಂಡು ವಿಮರ್ಶೆ ಮಾಡ್ತೀನಿ.. ತಪ್ಪಿದ್ದರೆ ದಯವಿಟ್ಟು ಮನ್ನಿಸಿ..
"ಕನ್ನಡ ಚಿತ್ರರಂಗ 'ಗಂಧವಿಲ್ಲದ ಗಂಧದಮರ' ದಂತೆ ದೀನ ಸ್ಥಿತಿ ತಲುಪಿದೆ..
ಕೆಲವರು ರಾಜಕೀಯ ಹಾಗೂ ಚಿತ್ರರಂಗ ಎಂಬ ಎರಡೂ ದೋಣಿಗಳ ಮೇಲೂ ಕಾಲಿಟ್ಟು ಪಯಣಿಸುತ್ತಿದ್ದಾರೆ..
ನಟನೆಯನ್ನೇ ಉಸಿರಾಗಿಸಿಕೊಂಡಿದ್ದ ಕೆಲವು ಅಮೋಘ ನಟರು-ನಿರ್ದೇಶಕರು ಚಿತ್ರರಂಗವನ್ನು ಬಿಟ್ಟುಹೋಗಿರುವುದು ತುಂಬಲಾರದ ನಷ್ಟವಾಗಿದೆ..
ಇತ್ತೀಚಿಗೆ ದಿನಕ್ಕೊಬ್ಬರಂತೆ ನಟರು(ನಟನೆಯ ಗಂಧವೇ ಇಲ್ಲದವರು) ಉಧ್ಭವ ಆಗುವುದರ ಮೂಲಕ ಚಿತ್ರರಂಗವನ್ನು ಹಾಳುಗೆಡವುತ್ತಿದ್ದಾರೆ..
ಒಂದು ಕಾಲದಲ್ಲಿ ಅದ್ಭುತ ಚಿತ್ರಗಳನ್ನು ನೀಡಿದ್ದ ಕೆಲವು ಸೃಜನಾಶೀಲ ನಿರ್ದೇಶಕರು ಇಂದು ಪ್ರೇಕ್ಷಕನನ್ನು ೨.೩೦ ಗಂಟೆಗಳ ಕಾಲ ಚಿತ್ರಮಂದಿರದಲ್ಲಿ ಹಿಡಿದಿಡಲು ಎಣಗಾಟ ನಡೆಸುತ್ತಿದ್ದಾರೆ..
ಪ್ರತಿವಾರ ಚಿತ್ರಗಳು ತೆರೆ ಕಾಣುತ್ತಿದ್ದರೂ ಒಂದು ಚಿತ್ರವೂ ನೆಲೆನಿಲ್ಲದೆ ಬಂದಷ್ಟೇ ಬಿರುಸಾಗಿ ಹೋಗುತ್ತಿದೆ.. ಇತ್ಯಾದಿ..
ಹಲವಾರು ತಪ್ಪುಗಳನ್ನು ಪದೇ ಪದೇ ಮಾಡುತ್ತಾ ಕನ್ನಡ ಚಿತ್ರವೆಂದರೆ ಪ್ರೇಕ್ಷಕನಿಗೆ ಅಲರ್ಜಿ ಎನಿಸುವ ಮಟ್ಟಿಗೆ ಚಿತ್ರರಂಗ ಹೊಲಸಾಗಿ ಬೆಳೆದಿದೆ..ಇದು ಬಹುಶಃ ಎಲ್ಲರಿಗೂ ತಿಳಿದ ವಿಷಯವೇ."
ಇಂತಹ ಸಮಯದಲ್ಲಿ ಚಿತ್ರರಂಗದ ಕೀರ್ತಿಯನ್ನು ಸ್ವಲ್ಪವಾದರೂ ಹೆಚ್ಚಿಸಲು ಬರುತ್ತಿರುವ ಕೆಲವು ಚಿತ್ರಗಳು ''ಭೂಮಿಯಿಂದ ಮೊಳೆತು ಮೇಲೆದ್ದು ಸೂರ್ಯನಿಗೆ ಮುಖ ಮಾಡುವಷ್ಟರಲ್ಲೇ ಕತ್ತು ಮುರಿದು ಬಿದ್ದಂತೆ.." ಪ್ರೇಕ್ಷಕನಿಗೆ ತಲುಪುವಷ್ಟರಲ್ಲೇ ಮರೆಯಾಗುತ್ತಿವೆ.. ಅಂತಹ ಚಿತ್ರಗಳ ಬಗ್ಗೆ ಒಂದೆರಡು ಮಾತನಾಡಲು ಇಷ್ಟ ಪಡುತ್ತೇನೆ..;

"ದಿಲ್ದಾರ":

ಕೇವಲ ಮಚ್ಚು-ಲಾಂಗು,ರೌಡಿಸಂ,ಕಣ್ಣನ್ನು ಹುರಿಗೊಳಿಸುವ ವಿಚಿತ್ರ ಪ್ರೇಮ,ತಂಪೇ ಇಲ್ಲದ ಮಮತೆ-ವಾತ್ಸಲ್ಯ-ಸ್ನೇಹ-ಪ್ರೀತಿ,ಕೇವಲ ಅಂಗಾಂಗ ಪ್ರದರ್ಶನ,..ಹೀಗೆ ಅಸಹ್ಯ ವಿಷಯಗಳನ್ನೊಳಗೊಂಡ ಚಿತ್ರಗಳೇ ಇತ್ತೀಚಿಗೆ ಬರುತ್ತಿದ್ದ ಈ ಕಾಲದಲ್ಲಿ ಒಂದು ಸುಂದರ ಸೊಗಸಾದ(ಸ್ವಮೇಕ್) ಚಿತ್ರ :'ದಿಲ್ದಾರ' ಎಂಬ ತಲೆಬರಹದಲ್ಲಿ 'ನಾನಿನ್ನ ಹುಟ್ಸು ಅಂತ ಕೇಳಿದ್ನ..? ಆದ್ರು ಬೇಜಾರಿಲ್ಲ...!' ಎಂಬ ವಿಶೇಷ ತಲೆಬರಹದಡಿಯಲ್ಲಿ ಬೆಳ್ಳಿತೆರೆ ಮೇಲೆ ಕಾಣಿಸಿಕೊಂಡಿತ್ತು..
ನನ್ನ ಜೀವನದಲ್ಲಿ ನಾನು ಕಂಡ ಉತ್ತಮ,ಹೃದಯಸ್ಪರ್ಶಿ ಭಾವನಾತ್ಮಕ ಚಿತ್ರ ಇದು. ಹುಣ್ಣಿಮೆಯ ಚಂದ್ರನಂತಿದ್ದ ಈ ಚಿತ್ರದಲ್ಲಿ ಒಂದೆರಡು ಕಂಡೂ ಕಾಣದಂತ ಒಂದೆರಡು ಕಪ್ಪು ಚುಕ್ಕಿಗಳಿದ್ದವು..
'ತಂದೆಯ ಅಲ್ಲದ ತಂದೆಯ ವಿಶೇಷ ಪ್ರೀತಿ,ಮುದ್ದಾದ ಸೋದರಿ ವಾತ್ಸಲ್ಯ,ನಮ್ಮದೇ ಸಂಸ್ಕೃತಿಯಲ್ಲಿ ಕಾಣಿಸಿಕೊಂಡಿದ್ದ ಸುಸಂಸ್ಕೃತ ನಾಯಕಿಯ ಮೌನಮಾತು,ವಿಶೇಷವಾಗಿ ಕಾಣುವ ಅನಾಥನಾದರೂ ತಂದೆ ಪ್ರೀತಿ ಪಡೆದ ನಾಯಕ,ಭಾವುಕ ಸಂಭಾಷಣೆಗಳು,ತಂಪಾದ ದೃಶ್ಯಗಳು-ಹಾಡುಗಳು,ತುಸು ರಾಜಕಾರಣ(ಅವಶ್ಯಕವಿಲ್ಲ),ದುರಂತ ಮುಕ್ತಾಯ..' ಇಷ್ಟು ವಿಷಯಗಳನ್ನು ಹೊಂದಿದ್ದ ನವಿರಾದ ಈ ಚಿತ್ರಕ್ಕೆ ಪತ್ರಿಕೆಗಳಲ್ಲಿ ಉತ್ತಮ ವಿಮರ್ಶೆಯ ಬರಹಗಳು ಬಂದಿದ್ದೂ ಸಹ ಪ್ರೇಕ್ಷಕ ಚಿತ್ರತಂಡಕ್ಕೆ ಬೇಸರಗೊಳಿಸಿದ್ದ..
ಪರಿಣಿತರೆ ಒಳ್ಳೆ ಚಿತ್ರ ಕೊಡಲಾಗದ ಈ ಸಂದರ್ಭದಲ್ಲಿ ಹೊಸಮುಖಗಳ ಈ ಚಿತ್ರದ ಬಗ್ಗೆ ಪ್ರೇಕ್ಷಕನಿಗೆ ಅರಿವೇ ಇಲ್ಲವಾಯಿತೇನೋ./
ಎಲ್ಲೂ ಬಳಸಿರದ ದುಬಾರಿ ವಿಶೇಷ ಛಾಯಾಗ್ರಹಣವನ್ನು ಛಾಯಾಗ್ರಾಹಕ ಈ ಚಿತ್ರದಲ್ಲಿ ಬಳಸಿದ್ದುದು ಈ ಚಿತ್ರದ ಒಂದು ವಿಶೇಷ..
ಈ ಚಿತ್ರದ ವಿಷಯದಲ್ಲಿ ನನಗಂತೂ ತುಂಬಾ ಬೇಸರವಾಯಿತು..
ಆದರೂ ಆತ್ಮವಿಶ್ವಾಸ ಕಳೆದುಕೊಳ್ಳದ ನಿರ್ದೇಶಕ ಕೇವಲ ಪತ್ರಿಕೆ ವಿಮರ್ಶೆಗಳಿಗೆ ಖುಷಿಪಟ್ಟು ಇಂತಹುದೇ ಇನ್ನೊಂದಿಷ್ಟು ಕಥೆಗಳನ್ನು ಜೋಳಿಗೆಯಲ್ಲಿ ಇಟ್ಟುಕೊಂಡು ಪ್ರಯೋಗಕ್ಕೆ ಮುಂದಾಗುತ್ತಿದ್ದಾನೆ..
ನಂತರ ಬಂದ 'ನಾನು ನನ್ನ ಕನಸು' ಕೂಡ ಉತ್ತಮ ಚಿತ್ರವಾಗಿದ್ದರೂ ಅದು 'ರಿಮೇಕ್' ಚಿತ್ರವಾದ್ದರಿಂದ ನಾನು ಅದರ ಬಗ್ಗೆ ಮಾತನಾಡಲೂ ಇಷ್ಟ ಪಡುವುದಿಲ್ಲ..
ಸ್ವಲ್ಪ ಹಿಂದೆ ಹೋಗೋಣ...


~-~

ಶಿಕ್ಷೆಯೋ.. ಭಿಕ್ಷೆಯೋ..

[ ನಾನು ಈಗ ಪರೀಕ್ಷೆಯ ಒತ್ತಡದಲ್ಲಿದ್ದು, ಬ್ಲಾಗನ್ನು ಖಾಲಿ ಬಿಡಬಾರದೆಂದು ಹಿಂದೆ ಎಂದೋ ಬರೆದಿದ್ದ ಈ ಕವನವನ್ನು ನಿಮ್ಮ ಮುಂದಿಡುತ್ತಿದ್ದೇನೆ.. ]




ಹೆತ್ತ ತಂದೆ-ತಾಯಿಗಳು ತಾತ್ಸಾರ ಮಾಡುವುದು

ಒಡಹುಟ್ಟಿದ ಜೀವಗಳು ಪಿಂಡಕ್ಕೆ

ಕಾದ ಕಾಗೆಗಳಂತೆ ಆಗಿರುವುದು

ಒಡನಾಟ ಆಡಿದ ಸ್ನೇಹಿತರೆಲ್ಲ

ಮಿತ್ರದ್ರೋಹಿಗಳಾಗಿ(ದ್ದುದು)ರುವುದು

ನಾ ಏನೂ ತಪ್ಪು ಮಾಡದಿದ್ದರೂ

ಎಲ್ಲರೂ ನನ್ನೆಡೆಗೆ ಬೆರಳು ಮಾಡುವುದು

ಹೃದಯ ಕಲಕುವ ದೃಶ್ಯಗಳು

ಮತ್ತೆ ಮತ್ತೆ ಕಣ್ಣೆದುರಾಗುವುದು

ಒಬ್ಬನೇ ಏಕಾಂತವಾಗಿ ಕುಳಿತು

ಬಿಕ್ಕಿ ಬಿಕ್ಕಿ ಅಳುವಂತಾಗುವುದು

ಎಲ್ಲವನ್ನೂ ನೋಡಿ ದೇವರೇ

ನೀ ನಗುತ್ತಲಿಯೇ ಇರುವುದು

ಇದು ಶಿಕ್ಷೆಯೋ ....? ಇಲ್ಲಾ

ನೀನೆ ಕೊಟ್ಟ ಭಿಕ್ಷೆಯೋ?


ಪರಿಚಯವಿಲ್ಲದವರೆಲ್ಲರೂ

ಆತ್ಮೀಯರಂತಾಗಿರುವುದು

ಕೆಲವೊಮ್ಮೆ ಅಂದುಕೊಂಡಂತೆ ಆಗಿ

ಅದೃಷ್ಟ ಖುಲಾಯಿಸುವುದು

ಹಲವೊಮ್ಮೆ ನಿರೀಕ್ಷೆಗೆ ಮೀರಿದ

ಅನಿರೀಕ್ಷಿತ ಫಲ ನೀಡುವುದು

ಗುರುತು ಇಲ್ಲದವರಿಂದ

ಸೋದರವಾತ್ಸಲ್ಯ ಪಡೆಯುವುದು

ಎಂದೂ ನೋಡದವರೆಲ್ಲಾ...

ಮಮತೆ ವಾತ್ಸಲ್ಯ ತೋರುವುದು

ಒಮ್ಮೊಮ್ಮೆ ಏನೇನೂ ಆಗಿ

ನನ್ನೊಳಗೆ ನಾನೇ ತುಸು ನಾಚಿ

ನೀರಾಗುವ ಕ್ಷಣಗಳು ಬರುವುದು

ಮನಸ್ಸು ಇಚ್ಚೆಬಂದಂತೆ ಮಾಡುವ

ಮಹಾಮರ್ಕಟವಾಗಿರುವುದು

ಇದು ಭಿಕ್ಷೆಯೋ ...ಇಲ್ಲಾ

ನೀನೆ ಕೊಟ್ಟ ಶಿಕ್ಷೆಯೋ ?


~-~

ಕುಡುಕನಾದೆ ನಾ ಕುಡುಕನಾದೆ..

[ಕುಡುಕರ ಬಗ್ಗೆ ಒಂದು ಕವಿತೆ ಬರೆಯಬೇಕೆಂದು ನನ್ನ ಆಪ್ತ ಗೆಳೆಯರು ಹೇಳಿದ್ದರು.ಆದ್ದರಿಂದ ನಾನು ಸಾಧ್ಯವಾದಷ್ಟು ಪ್ರಯತ್ನಿಸಿ ಬರೆದ ಈ ಕವಿತೆ ಈಗ ನಿಮ್ಮಮುಂದೆ...]




ಕುಡುಕನಾದೆ ನಾ ಕುಡುಕನಾದೆ
ಪ್ರೀತಿ ಪ್ರೇಮ ನಂಬಿ
ಕುರುಡಾದ ದುಂಬಿ
ನಾ ಕುಡುಕನಾದೆ..


ಬುದ್ಧಿ ಹೇಳಬೇಕಾದ ಜ್ಞಾನಿ
ಬುದ್ಧಿ ಹೇಳಿಸಿಕೊಳ್ಳುವಂತಾದ ಅಜ್ಞಾನಿ
ನಾ ಕುಡುಕನಾದೆ..


ಸೋದರರ ವಾತ್ಸಲ್ಯ ಉಂಡು
ತಂದೆ-ತಾಯ ಜಪಿಸುತ್ತಿದ್ದ ಜ್ಞಾನಿ
ತಪ್ಪು ಮಾಡಿ ಶಿಕ್ಷೆ ಉಂಡು
ಮೋಸಹೋಗಿ ಕೊರಗುತ್ತಿರುವ ಮೌನಿ
ಸ್ನೇಹಕ್ಕಾಗಿ ಜೀವಿಸಿದ ಹುಂಬತನದ
ಪ್ರೀತಿಗಾಗಿ ಸ್ನೇಹ ಮರೆಸೋ ಜಂಭತನದ
ನಾ ಕುಡುಕನಾದೆ..


ಹೊಸಬೆಳಕು ಬರುವಾಗ
ಕಾರ್ಮೋಡ ಕವಿಸಿಕೊಂಡವ
ನಾ ಕುಡುಕನಾದೆ..


ಪ್ರೇಮದೆದೆಯ ಗೂಡದೀಪ
ಆರಿ ಹೋಗಿ ಕತ್ತಲಾಗಿ
ಒಡೆದ ಗಾಜಬಾಟಲಿಯಂತೆ
ಕನಸೆಲ್ಲ ಚೂರುಚೂರಾಗಿ
ಚುಚ್ಚುತ್ತಿರಲು ಮನವನೀಗ
ನಾ ಕುಡುಕನಾದೆ..


ಕಾಡುತಿರುವ ನೆನಪ ನೆರಳ
ಕತ್ತಲ ಕೋಣೆಲಿಡಲು
ಬೆಳಕ ಬಿಟ್ಟು ಕತ್ತಲಿಗೊರಗಿ
ನಾ ಕುಡುಕನಾದೆ..


ನಂಬಬೇಡ ನಂಬಬೇಡ
ಪ್ರೀತಿ-ಪ್ರೇಮ ನೋವು ನೋಡ
ಮಾಡಬೇಡ ಪ್ರೇಮಕೆಡುಕ
ಆಗಬೇಡ ಬೀದಿ ಕುಡುಕ


~.~


ಅಪ್ಪಾಜಿಯ ನೆನಪ ಬಂಧನದಲ್ಲಿ..


ಪ್ರತಿದಿನ ೫-೬ ರ ಹೊತ್ತಿಗೆ ನಿದ್ರೆಗೆ ಗುಡ್ ಬೈ ಹೇಳಿ ಸೂರ್ಯಂಗೆ ಗುಡ್ ಮಾರ್ನಿಂಗ್ ಹೇಳ್ತಿದ್ದ ನಾನು ಅಂದು ನಿದ್ರೆ ಮುಗಿಸಿ ಹೇಳುವಷ್ಟರಲ್ಲಿ ಸಮಯ ೬-೩೦ ಆಗಿತ್ತು.. ರಾತ್ರಿ ಕಂಡ ಕನಸಿನ ಚಿತ್ರಣ ಇನ್ನೂ ಕಣ್ಣಿನ ಪರದೆ ಸರಿಸಿ ಹೊರಟಿರಲಿಲ್ಲ..
ಎದ್ದ ತಕ್ಷಣ ಮಲಗಿದ್ದಲ್ಲಿಂದಲೇ ದೇವರ ಚಿತ್ರ ನೋಡಿ,ನಮಿಸಿ ಪಕ್ಕದಲ್ಲಿದ್ದ ಮೊಬೈಲ್ ಫೋನ್ ಕೈಗೆತ್ತಿಕೊಂಡಾಗ 'No space for new message' ಎಂದು ಮಿಂಚಿ ಮಿಂಚಿ ಮರೆಯಾಗುತ್ತಿತ್ತು.. ಇನ್ ಬಾಕ್ಸ್ ನಲ್ಲಿದ್ದ ಸುಮಾರು ಹತ್ತು ಸಂದೇಶಗಳನ್ನು ಡಿಲೀಟ್ ಮಾಡಿದ ಕೂಡಲೇ ೮-೧೦ ಸಂದೇಶಗಳು ನನ್ನ ಮೊಬೈಲ್ ಫೋನ್ ಗೆ ಕ್ಷಣಮಾತ್ರದಲ್ಲಿ ಬಂದುಕೂತವು..
ಮೊದಲೆರಡು ಸಿ.ಅಶ್ವಥ್ ರ ಸಾವಿಗೆ ಸಂಬಂಧ ಪಟ್ಟಿದ್ದವು..
ಹಾಗೆಯೇ, ಪ್ರತಿಯೊಂದನ್ನು ತೆರೆದು ನೋಡುತ್ತಿದ್ದಂತೆ ಕಣ್ಣಲ್ಲಿದ್ದ ಕನಸಿನ ಉಳಿಕೆ ಮರೆಯಾಗಿ ಕಣ್ಣುಗಳು ಅರಳಿನಿಂತವು,ಆಶ್ಚರ್ಯ ಉಂಟಾಯಿತು..
ವಿಷ್ಣುವರ್ಧನ್ ಸತ್ತ್ಹೊಗಿದಾರೆ,..ವಿಷ್ಣು ಇನ್ನಿಲ್ಲ.. ಎಂಬ ಹಲವಾರು ಸಂದೇಶಗಳನ್ನು ನೋಡಿ ನಾನು ವಿಷ್ಣುವರ್ಧನ್ ಅಭಿಮಾನಿಯೆಂದು ತಿಳಿದಿದ್ದ ನನ್ನ ಗೆಳೆಯ-ಗೆಳತಿಯರು ನನ್ನನ್ನು ಮೂರ್ಖನನ್ನಾಗಿ ಮಾಡುತ್ತಿದ್ದಾರೆ ಎನ್ನಿಸಿತು..
ಆದ್ರೆ ಎಲ್ಲರೂ ಒಟ್ಟಿಗೆ..!!?
ತಕ್ಷಣವೇ, ನಮ್ಮ ಮನೆಯಲ್ಲಿ ಟಿವಿ ಇಲ್ಲದಿದ್ದುದುರಿಂದ,ಒಂದೇ ಮನೆಗೆ ಅಂಟಿಕೊಂಡಿದ್ದ ದೊಡ್ಡಪ್ಪನ ಮನೆಗೆ ಕೂಗಿ 'ಅತ್ತಿಗೆ tv9 ಆನ್ ಮಾಡಿ ಎಂದೆ..
'ಅಲ್ಲಿಂದ ಕೇಳಿಬಂದ ಅತ್ತಿಗೆಯ ಮಾತುಗಳು ನನ್ನ ಊಹೆಯನ್ನು ಸುಳ್ಳುಮಾಡಿದ್ದವು.., ತಕ್ಷಣದಲ್ಲಿ ಕನ್ನಡಿಯಲ್ಲಿ ಮುಖ ನೋಡದೆ ಟಿವಿ ಮುಂದೆ ಹೋರಾಟ ನನಗೆ ಟಿವಿ ಪರದೆಯ ಮೇಲೆ 'ವಿಷ್ಣುವರ್ಧನ್' ರ ಪಾರ್ಥೀವ ಶರೀರದ ದರ್ಶನವಾಗಿ ಕಣ್ಣುಗಳು ತಾನೆತಾನಾಗಿ ತೇವಗೊಂಡವು,ದುಃಖ ಇಮ್ಮಡಿಸಿ ಇಮ್ಮಡಿಸಿ ಬರುತಿತ್ತು... ವಿಷ್ಣು ಸಾವಿನ ಸುದ್ದಿ ನಂಬಲಾರದ ಸತ್ಯವಾಗಿತ್ತು..
ಅದೇನೋ ನಾನು ಚಿಕ್ಕಂದಿನಿಂದಲೂ ವಿಷ್ಣುವರ್ಧನ್ ಅವರನ್ನು ತುಂಬಾನೇ ಹಚ್ಚಿಕೊಂಡಿದ್ದೆ,ಅವರ ಚಲನಚಿತ್ರಗಳೆಂದರೆ ನನಗೆ ಅಚ್ಚುಮೆಚ್ಚು.., ಅವರಂತೆ ಕೈಬಳೆ ಧರಿಸಿ ಮೆರೆದಿದ್ದು ಉಂಟು.
ತುಂಬಾನೇ ಹಚ್ಚಿಕೊಂಡವರನ್ನು ಕಳೆದುಕೊಂಡಾಗ ಆಗುವ ಅನುಭವ ನನಗೆ ಅಂದು ಮೊದಲನೆಯದಾಗಿತ್ತು..ವಿಷ್ಣು ಅವರನ್ನು ಎಂದಾದರೂ ಕಣ್ತುಂಬ ನೋಡಿ ಕೈಕುಲುಕಬೇಕು ಎಂದುಕೊಂಡಿದ್ದ ನನ್ನ ಕನಸು ಅಂದು ಎಳ್ಳು-ನೀರು ಬಿಡಿಸಿಕೊಂಡು ಕನಸಾಗೆ ಉಳಿಯಿತು..
ಪಕ್ಕದಲ್ಲಿಯೇ ಕೂತು ಮಾತನಾಡುತ್ತಿದ್ದವರು ಕಣ್ಮುಚ್ಚಿ ಬಿಡುವಷ್ಟರಲ್ಲಿ ಅದೃಶ್ಯವಾದಂತೆ ಭಾಸವಾಗುತ್ತಿತ್ತು,ಕಣ್ಣ ಮುಂದೆ ಶವ ಕಾಣುತ್ತಿದ್ದರೂ 'ಅದು ಸುಳ್ಳು..' ಎಂದು ಮನಸ್ಸು ಹಾತೊರೆಯುತ್ತಿತ್ತು.. ಆ ದಿನ ನನ್ನ ಜೀವನದಲ್ಲಿ 'ಕನ್ನಡಿ ನೋಡದ ದಿನ' ವಾಗೆ ಉಳಿದುಹೋಗಿದೆ..
ಇಂದಿಗೆ ವಿಷ್ಣು ಅವರ ದೇಹ ಮಣ್ಣಾಗಿ ನೂರಾರು ದಿನಗಳೇ ಸಂದಿವೆ,ಅದರೂ ಆ ಸತ್ಯ ಸುಳ್ಳೇನೋ ಎಂದೆನಿಸುತ್ತಿದೆ..
ಭಿತ್ತಿಪತ್ರಗಳಲ್ಲಿ ಮೀಸೆ ತಿರುಗುತ್ತಿರುವ ನಾಗಮಾಣಿಕ್ಯನ ನೋಡಿದರೆ ಮೈ ರೋಮಗಳು ನಿಂತು,ತುಟಿಯಲ್ಲಿ ಸುಳಿದಾಡುವ ನಗು, ಅದು 'ಮರೆಯಾಗಿ ಹೋದ ಮಾಣಿಕ್ಯ' ಎಂಬ ಸತ್ಯ ತಿಳಿಯುತ್ತಿದ್ದಂತೆ ಮಾಯವಾಗುತ್ತದೆ..ಅವರು ನಟಿಸಿರುವ ಚಿತ್ರಗಳ ಹಾಡುಗಳು ಕೇಳಿಬಂದರೆ ಇದ್ದಕ್ಕಿದ್ದಂತೆ ಭಾವುಕನಾಗುತ್ತೇನೆ..,ಅವು ಜೀವವಿಲ್ಲದ ಹಾಡುಗಳೇನೋ ಎನಿಸುತ್ತದೆ..
ಅದೆಷ್ಟೋ ಅಭಿಮಾನಿದೇವರುಗಳು ಅವರಿಗೆ ಏನೇನೋ ಹೃದಯದ ಕಾಣಿಕೆ ನೀಡಬೇಕೆಂದು ಕನಸು ಕಟ್ಟಿದ್ದರು,ಆದರೆ ಅವರ ಕನಸನ್ನು ನನಸಾಗಿಸಲು ಅವಕಾಶ ಕೊಡದೆ ಕೇವಲ ಹೃದಯವನ್ನು ಬಸಿದು ಕಣ್ಣಿಂದ ಒಂದು ಬಿಂದುವನ್ನು ಮಾತ್ರ ಅಪ್ಪಾಜಿಗೆ ಅರ್ಪಿಸಲು ಅವಕಾಶ ಮಾಡಿಕೊಟ್ಟ ವಿಧಿಯೇ ನಿನಗಿದು ಸರಿಯೇ..
ಅಪ್ಪಾಜಿ ಇಲ್ಲದ ಹೊಸವರ್ಷದ ಸಂಭ್ರಮ ನಮಗೇಕೆ ಎನ್ನುವ, ಕೋಟಿಗೊಬ್ಬನನ್ನು ಯಜಮಾನನನ್ನಾಗಿ ಮಾಡಿಕೊಂಡಿದ್ದ, ಅದೆಷ್ಟೋ ಕೋಟ್ಯಂತರ ಅಭಿಮಾನಿಗಳ ಕಣ್ಣೀರು ಇಷ್ಟು ಬೇಗ ನಿನಗೆ ಬೇಕಾಯಿತೇ,ಅವರ ಹೃದಯಕ್ಕೇ ಬೆಂಕಿ ಇಟ್ಟು ಆ ಬೆಂಕಿಯ ಆರಿಸಲು ಈ 'ಕಣ್ಣೀರಿನ ಕೊಯ್ಲು' ಮಾಡಿದೆಯ..
ಸಾವಿರಾರು ಅಂದಾಭಿಮಾನಿಗಳನ್ನು ಒಂಟಿಕುಡುಕರಾಗಿಸಿ,ಕೋಟಿ ಕೋಟಿ ಹೃದಯಗಳ ಒಡೆದು ಅವರನ್ನು ಒಂಟಿಯಾಗಿಸಬೇಕೆಂದು ಯೋಚಿಸಿ ಅಭಿಮಾನಿಗಳ ಹೃದಯಸಿಂಹಾಸನ ಕೋಟೆಯನ್ನು ಭೇದಿಸಿ ಕತ್ತಲಲ್ಲಿ ಬಂದು ವಿಷ್ಣುವನ್ನು ಕರೆದೊಯ್ದೆಯ,ಪುಣ್ಯಾತ್ಮನೊಬ್ಬನಿಗಾಗಿ ಹುಡುಕಾಡಿ ಸಿಗದಿರಲು ಅಪ್ಪಾಜಿಯನ್ನೇ ಕರೆದೊಯ್ದೆಯ,ಹೇಳು ಏಕೆ ಅಪ್ಪಾಜಿಯನ್ನೇ ಕರೆದೊಯ್ದೆ.
ಮುತ್ತೇ ಇಲ್ಲದ ಕಡಲ ನೀ ನೋಡಿರುವೆಯ.. ನೋಡೀಗ ಅಭಿಮಾನಿಗಳ ಕಡಲಲ್ಲಿ ಮುತ್ತೇ ಇಲ್ಲವಾಗಿದೆ.
ಅಭಿಮಾನಿಗಳೆಲ್ಲ ಈಗ ಗಂಧ ಚೆಲ್ಲದ ಹೂಗಳಂತೆ ಇದ್ದಾರೆ..
ಇಲ್ಲಿ ಕಂಗಾಲಾಗುವ ಅಭಿಮಾನಿಗಳ ಬಗ್ಗೆ,ಜೀವದ ಗೆಳೆಯರ ಬಗ್ಗೆ ತುಸು ಮುಂದಾಲೋಚನೆ ನೀ ಮಾಡದೇ ಹೋದೆಯಾ,ನಮ್ಮ ಶಾಪ ನಿನಗೆ ತಟ್ಟದಿರದು ಬ್ರಹ್ಮನೇ ತಟ್ಟದಿರದು..
ನಿನ್ನೀ ಘೋರತನದಿಂದ ಯಮನ ಕಣ್ಣೂ ಒದ್ದೆಯಾದದ್ದು ಕಾಣಲಿಲ್ಲವೇ..ವಿಧಿಯೇ ನೀ ನಗದಿರು.., ಮಣ್ಣಾಗಿರುವುದು ದೇಹ ಮಾತ್ರ !!
ಘೋರವರ್ಷ ಹೇ ೨೦೦೯ ನಿನಗೆ ಜೊತೆಗಾಗಿ ಕರೆದೊಯ್ಯಲು ಯಾರು ಸಿಗಲಿಲ್ಲವೇ.
ಅಪ್ಪಾಜಿ ನೆನಪು ಚಿರಾಯುವಾಗಲಿ..

-()-()-()-
ಅಪ್ಪಾಜಿಯ ಅಗಲಿಕೆಯಿಂದ ತುಂಬಾ ನೊಂದ ನನ್ನ ಆಪ್ತ ನಾಗೇಂದ್ರಕುಮಾರ್ (ನಾಗ್ ವಿಷ್ಣು) ಅವರ ಮಾತುಗಳು..:
ವಿಷ್ಣುವರ್ಧನ್ ಅವರು ಕನ್ನಡ ಚಿತ್ರರಂಗದಲ್ಲಿ 'ಮೇಣದ ಬತ್ತಿ'ಯಂತಿದ್ದು ತಾನು ಅಳುತಿದ್ದರೂ ಚಿತ್ರರಂಗಕ್ಕೆ ಬೆಳಕನ್ನು ನೀಡಿದ ಕರುಣಾಮಯಿ..
ಅವರೊಬ್ಬ ಅದ್ಭುತ ಕಲಾವಿದ..
ವಿಷ್ಣು ಅವರು ಕನ್ನಡದ ಸಾಯಿಬಾಬರಂತಿದ್ದರು..
ಅವರ ಅಗಲಿಕೆಯಿಂದ ನನ್ನ ಹೃದಯಕ್ಕೆ ಸುನಾಮಿ ಅಪ್ಪಳಿಸಿದೆ. ಹೃದಯಕ್ಕೆ ಬರಸಿಡಿಲು ಬಡಿದು ಮೋಡ ಕವಿದ ಕತ್ತಲೆ ತುಂಬಿದೆ, ಅವರ ಚಿತ್ರಗಳಿಗೆ ಇದೀಗ ಜೀವವೆ ಇಲ್ಲವೆನಿಸುತ್ತಿದೆ..
ಗಣೇಶನಿಲ್ಲದ ದೇವಸ್ಥಾನದಂತೆ,ವಿಷ್ಣು ಮಹಾರಾಜನಿಲ್ಲದ ಕನ್ನಡ ಚಿತ್ರರಂಗ ಹಾಳುಕೊಂಪೆಯಷ್ಟೇ ಸರಿ..
ಅಂದು ಅಣ್ಣ ಸತ್ತಾಗ ನಾನೇ ಸತ್ತಿದ್ದರೆ ಚೆನ್ನಾಗಿರುತ್ತಿತ್ತು ಎಂದೆನಿಸಿತು.. ಏಕೆಂದರೆ ನಾ ಸತ್ತರೆ ದುಃಖ ಪಡುತ್ತಿದ್ದವರು ಕೆಲವರಷ್ಟೆ.
"ವಿಷ್ಣು ಅಣ್ಣ ನೀ ಮತ್ತೆ ಹುಟ್ಟಿ ಬಾ.."
ನೀನಿಲ್ಲದೆ ನಮ್ಮ ಹೃದಯ ಸಿಂಹಾಸನ ಬರಿದಾಗಿ ಹೃದಯದಲ್ಲಿ ಮಾಸದ ರಂಧ್ರವಾಗಿದೆ..
~.~

ಹೂ ಚೆಲ್ಲಿ ಕರೆದಿರುವೆ..


[ ನಾನು ತುಂಬಾ ಸಂಕಷ್ಟಕ್ಕೆ ಸಿಲುಕಿ ತುಂಬಾ ನೊಂದು ಏಕಾಂಗಿಯಂತೆ ಇದ್ದಾಗ ಬರೆದ ಕವಿತೆ ನಿಮ್ಮ ಮುಂದೆ.. ]


ಢಮರೆ ಢಮರೆ ಢಮ ಢಮಢಮ ಢಮಢಮ
ಢಮರೆ ಢಮರೆ ಢಮ ಢಮಢಮ ಢಮಢಮ
ಎದ್ದೇಳು ಎದ್ದೇಳು ನೀನು ಎದ್ದೇಳು
ಹರಶಿವನೆ ಪರಶಿವನೇ
ಏಳು ಏಳು ಎದ್ದೇಳು

ಏಕೆ ನೀನು ಅಲ್ಲಿರುವೆ
ನಾನು ಇಲ್ಲಿ ನೊಂದಿರುವೆ


ಬದುಕಲು ಬೇಕು ಗುರಿಯೆಂದೆ
ನೀ ಕೊಟ್ಟಿದ್ದು ಕೆಡಿಸೋ ಮನಸೊಂದೆ

ಹೆತ್ತವರೆಲ್ಲ ವೈರಿಗಳಾಗಿ
ಕಾಣುತಿಹರು ಕಣ್ಣೆದುರಲ್ಲಿ
ಸೋದರತ್ವವು ದ್ವೇಷವಾಗಿ
ಕಾಡುತಿಹುದು ನನ್ನನಿಲ್ಲಿ


ಸ್ನೇಹಿತರೆಲ್ಲ ಬಂಧುಗಳೆಲ್ಲ
ಎತ್ತ ಹೋದರೂ ನನಗಿಲ್ಲ


ಪ್ರೇಮದ ದೀವಿಗೆ ನೀ ಕೊಟ್ಟು
ಕಾಮದ ಬೆಂಕಿ ಹಚ್ಚಿರುವೆ
ಜ್ಞಾನದ ಬುತ್ತಿ ನೀ ಕೊಟ್ಟು
ಕನಸನ್ನು ಇನ್ನು ಉಳಿಸಿರುವೆ

ತಪ್ಪನು ಮಾಡಿಸಿ ನಗುತಿಹ ಶಿವನೇ
ಶಿಕ್ಷೆಯ ನೀಡಿ ಹೊರಟಿರೊ ಹರನೇ
ನಿನ್ನಯ ಮೇಲೆಯೇ ಎಲ್ಲ ಭಾರ
ಬಂದು ನೀಡೋ ಪರಿಹಾರ

ನಿನ್ನಯ ದಾರಿಯ ಕಾದಿರುವೆ
ಹೂ ಚೆಲ್ಲಿ ಕರೆದಿರುವೆ
ಏಕೆ ನೀನು ಅಲ್ಲಿರುವೆ
ನಾನು ಇಲ್ಲಿ ನೊಂದಿರುವೆ
~.~ ~.~ ~.~ ~.~ ~.~ ~.~ ~.~

ಒಡೆದ ಕನ್ನಡಿ ಮುನ್ನುಡಿಯಾಗಿ..

ನಾನು ಬ್ಲಾಗ್ ಸಾಗರ ನೋಡಿ ಆಸೆಯಿಂದ ಚಡಪಡಿಸುವಷ್ಟರಲ್ಲೇ ಆ ಸಾಗರದಲ್ಲಿ ಈಜುತ್ತಿದ್ದೆ... ಈಜುತ್ತಾ ಈಜುತ್ತಾ ಬೇಸರವಾಯ್ತು.. ಜೊತೆಗಿದ್ದ ಒಂದು ಜೀವ ಕೂಡ ಈಜುವಿಕೆ ಸಾಕೆನಿಸಿ ದಡ ಸೇರಿತ್ತು.. ಬ್ಲಾಗ್ ನನಗೆ ಬೇಸರವಾಗಿ ಸಹಕಾರವಿಲ್ಲದೆ ಬರೆಯುವುದನ್ನೇ ನಿಲ್ಲಿಸಬೇಕು ಎಂದುಕೊಂಡೆ.. ಆದರೆ ಅದಕ್ಕೆ ಮನಸ್ಸು ಆಸ್ಪದ ಮಾಡಿಕೊಡಲಿಲ್ಲ..ಏನು ಬರೆಯಲಿ,ಏಕೆ ಬರೆಯಲಿ,ಸಹಕಾರ ಸಿಗುವುದೇ.. ಇನ್ನು ಮುಂತಾದ ಪ್ರಶ್ನೆಗಳಿಗೆ ಮನಸ್ಸು ನೀಡಿದ ಉತ್ತರವೇ ಈಗ ನಿಮ್ಮ ಮುಂದಿರುವ ಈ... 'ಮನಸಿನ ಮನೆ'ಯ ಕನ್ನಡಿ..


.-..-..-..-..-..-..-..-..-..-..-..-..-..-..-..-..-..-..-..-..-..-..-..-..-..-..-..-..-..-..-..-..-..-..-..-..-..-.


ಒತ್ತರಿಸಿ ಬರುವ ನಿನ್ನ ದುಃಖದ ಸ್ವರ
ನೀ ಬರೆಯಲೆಂದೇ ಬಂದ ಓಂ ಕಾರ.!

ಒಡೆದುಹೋದ ಕನ್ನಡಿ
ನೀ ಬರೆವ ಬರಹಕೆ ಮುನ್ನುಡಿ..!

ಅಳಿದುಳಿದ ನೆನಪುಗಳಿಗೆ
ಬಳಿದುಳಿದ ಬಣ್ಣ ತುಂಬು..!

ಬರೆಯಲಾಗದೆಂಬ ನಿನ್ನ ನಾಚಿಕೆ
ಬರೆಯಲು ನಿನಗೆ ಸಿಕ್ಕ ಶೀರ್ಷಿಕೆ..!

ಒಮ್ಮೆ ನೆನೆದು ದೇವರನ್ನು
ಹಿಡಿ ನೀ ಲೇಖನಿಯನ್ನು..!

ದೇವರ ಕಣ್ಣಿನ ತೇಜಸ್ಸು
ನಿನಗೆ ನೀಡುವುದು ಹುಮ್ಮಸ್ಸು..!

ನೊಂದ ನಿನ್ನ ಒಂಟಿಪಯಣದ ಸುಸ್ತು
ಬರೆಯಲು ಸಿಕ್ಕ ವಿಷಯವಸ್ತು..!

ಸುಳಿದು ಅಳಿದ ಪಠ್ಯಗಳು
ಬರಹವ ರಂಜಿಸಲು ನಾಟ್ಯಗಳು..!

ನಿನ್ನ ಕಾಡುವ ಹೆಜ್ಜೆಸದ್ದು
ಆ ನಾಟ್ಯಕೆ ಗೆಜ್ಜೆಸದ್ದು..!

ವಿರಹದ ಹೃದಯದ ಕೂಗು
ನಿನ್ನ ಕಾವ್ಯಕೆ ಮೌನರಾಗ..!

ನಿನ್ನ ಕ್ಷಣಿಕ ಮೌನಗಳು
ನಿನಗೆ ಸಿಗುವ ವಿರಾಮಗಳು..!

ನಿನ್ನ ತೋಯಿಸಿದ ಜೀವಗಳು
ಬರೆವ ಬರಹದ ಪಾತ್ರಗಳು..!

ಕಾಣದೆ ನಿನ್ನ ಸಂತೈಸುವ ಭಾವುಕರು
ನಿನ್ನ ಬರಹದ ಪಾಲಕರು..!


.-..-..-..-..-..-..-..-..-..-..-..-..-..-..-..-..-..-..-..-..-..-..-..-..-..-..-..-.

ನೆನಪಿನ ಕಾಣಿಕೆಯಲ್ಲಿ...



[ ಮೊದಲ ಲೇಖನದಲ್ಲೇ ತಿಳಿಸಿದಂತೆ 'ಜ್ಞಾನಮೂರ್ತಿ' ಯವರು ನನಗೆಅನಿರೀಕ್ಷಿತವಾಗಿ ಆರ್ಕುಟ್ನಲ್ಲಿ ಪರಿಚಯವಾದವರು.. ಕಾಲ ಕಳೆದಂತೆ ಆಪರಿಚಯ ನಮ್ಮಿಬ್ಬರ ನಡುವೆ ಗಾಢವಾದ ಸ್ನೇಹಕ್ಕೆ ಕಾರಣವಾಯಿತು,ಇಬ್ಬರುತುಂಬಾ ಆತ್ಮೀಯರಾದೆವು .. ಅವರ ಜನ್ಮದಿನದ ಸಂದರ್ಭದಲ್ಲಿ ಅವರು ನನಗೆಕಾಣಿಕೆ ಕೊಡುವೆನೆಂದು ಹೇಳಿ ಅವರ ಬ್ಲಾಗ್ ಲಿಂಕ್ ಕೊಟ್ಟಿದ್ದರು.. ಅದೇ ಪ್ರಥಮನಾನು ಬ್ಲಾಗ್ ನೋಡಿದ್ದು.. ನಂತರ ಬ್ಲಾಗ್ ಬಗ್ಗೆ ಸಂಪೂರ್ಣ ವಿವರಿಸಿ ನನ್ನನ್ನುಬ್ಲಾಗ್ ಮಾಡಲು ಪ್ರೇರೇಪಿಸಿದ್ದರು.. ಮೊದಮೊದಲು ನನಗೆ ಅದುಹಾಸ್ಯವೆನಿಸಿದರೂ ಬರುಬರುತ್ತಾ ನನಗೂ ಬರೆಯಬೇಕೆಂಬ ಆಸೆಮೊಳೆಯಿತು..ಅವರನ್ನು ಒಮ್ಮೆ ಭೇಟಿಯಾಗಿದ್ದಾಗ ಅವರು ನನಗೊಂದು ಕಾಣಿಕೆನೀಡಿದ್ದರು, ಮನೆಗೆ ಬಂದು ಅದನ್ನು ತೆರೆದಾಗಲೇ ತಿಳಿದಿದ್ದು ಅದು 'ಲೇಖನಿಯೆಂದು'.. ಅವರ ಲೇಖನಿಯಿಂದ ಹಾಗೂ ಅವರ ಮಾತಿನಿಂದ ಇನ್ನಷ್ಟುಪ್ರೇರೆಪಿತನಾದ ನಾನು ಅಂದೇ ಬರೆಯಲು ನಿರ್ಧರಿಸಿ ಆ ಲೇಖನಿಯ ಮೇಲೆಯೇನನ್ನ 'ಕೈಚಳಕ' ಪ್ರಯೋಗಿಸಿದೆ.. ಆಗ ಮೂಡಿಬಂದ 'ನೆನಪಿನ ಕಾಣಿಕೆಯಲ್ಲಿ' ಎಂಬ ಈ ಕವನವನ್ನು ಈಗ ನಿಮ್ಮ ಮುಂದಿಟ್ಟಿದ್ದೇನೆ..
ನನ್ನ ಮೊದಲ ಪ್ರಯೋಗದ ಬಗ್ಗೆ ನಿಮ್ಮ ಅನಿಸಿಕೆ ಹೇಗಿದೆ ಎಂದು ತಿಳಿಯುವ ಕುತೂಹಲದಲ್ಲಿದ್ದೇನೆ.. ]
...

ಬರೆಯಲೇ ಒಂದು ಲೇಖನವ
ನೀ ಕೊಟ್ಟ ಲೇಖನಿಯಲ್ಲಿ,
ಬರೆಯಲೇ ಒಂದು ಸಿಹಿಗವನವ
ನೀ ಕೊಟ್ಟ ಲೇಖನಿಯಲ್ಲಿ,
ಬರೆಯಲೇ ಒಂದು ಸವಿಗೀತೆಯ
ನೀ ಕೊಟ್ಟ ಲೇಖನಿಯಲ್ಲಿ,
ಬರೆಯಲೇ ನನ್ನ ಆತ್ಮಕಥೆಯ
ನೀ ಕೊಟ್ಟ ಲೇಖನಿಯಲ್ಲಿ,
ಬರೆಯಲೇ ನಿಮಗೊಂದು ಸಂದೇಶವ
ನೀ ಕೊಟ್ಟ ಲೇಖನಿಯಲ್ಲಿ,
ಆ ನೆನಪಿನ ಕಾಣಿಕೆಯಲ್ಲಿ..

ಪರೀಕ್ಷಾರಂಗ ಎಂಬ ರಣರಂಗದಿ
ಖಡ್ಗದಂತ ಈ ಲೇಖನಿಯ ಹರಿತದಿ
ಶ್ವೇತಪುಟದ ಮೇಲೆ ಶಾಯಿನೆತ್ತರ
ಎರಚಾಡಿ ಹೋರಾಡಲೇ
ನೀ ಕೊಟ್ಟ ಲೇಖನಿಯಲ್ಲಿ..

ಆ ಲೇಖನಿಯಲ್ಲಿ ತುಂಬಿಕೊಂಡಿದೆ
ಶಾಯಿಯೆಂಬ ಜೀವದ್ರವ್ಯ
ಆ ಜೀವದ್ರವ್ಯದ ಕಣಕಣದಲ್ಲಿದೆ
ನಮ್ಮಿಬ್ಬರ ಮಧುರಬಾಂಧವ್ಯ..
ಚಿರನೂತನ ಸವಿಸ್ನೇಹಬಾಂಧವ್ಯ..
ಆದ್ದರಿಂದ..
ಬರೆಯಲಾರೆನು ಗುರುವೇ ಈ ಲೇಖನಿಯಲ್ಲಿ
ನೀವು ಕೊಟ್ಟ ನೆನಪಿನ ಕಾಣಿಕೆಯಲ್ಲಿ..

ನೆನಪಿಡಿ ಗುರುವೇ...
ಅಂತರ್ಜಲ ಬತ್ತಿಹೋಗುವ ತನಕ
ಲೇಖನಿಯ ಬರಿದುಮಾಡದೇ
ಕಾಯ್ದುಕೊಳ್ಳುವೆ ಜೀವದ್ರವ್ಯವ
ಎಂದೆಂದಿಗೂ ಅಮರವಾದ
ನಮ್ಮಿಬ್ಬರ ಅನುಬಾಂಧವ್ಯವ..
ಬರೆಯದೆ ಈ ನೆನಪಿನ ಕಾಣಿಕೆಯಲ್ಲಿ..

~ . ~

ಆರಂಭದ ಮುನ್ನ...

ಜ್ಞಾನಮೂರ್ತಿ...

ಹೌದು ಅವ್ರೆ.

ನನ್ನ ಬದುಕು ಕಂಡ ಅನಿರೀಕ್ಷಿತ ತಿರುವುಗಳಲ್ಲಿ ಅನಿರೀಕ್ಷಿತವಾಗಿ ಪರಿಚಯವಾದವರು.,ನನ್ನ ಸಂಬಂಧಿ-ಮಿತ್ರರಿಂದಲೇ ನಾನು ದುಃಖಕ್ಕೀಡಾಗಿ ಜೀವನದ ಬಗ್ಗೆ ಬೇಸರಗೊಂಡಿದ್ದಾಗ 'ಸಂತೆಯೊಳಗೊಬ್ಬ ಸಂತ'ನಂತೆ ಸಿಕ್ಕಿ ಸಾಂತ್ವನ ಹೇಳಿದ ಆಪ್ತರು..

ಬ್ಲಾಗ್ ಎಂಬ ಸಾಗರದ ಹತ್ತಿರ ಕರೆದೊಯ್ದು,ಸಣ್ಣ-ಪುಟ್ಟ ದೋಣಿಗಳಿಂದ ಹಿಡಿದು ಬೃಹದಾಕಾರದ ನೌಕೆಗಳಿದ್ದ ಅಲ್ಲಿ ಅದಾಗಲೇ ಅಲ್ಲಿದ್ದ ಅವರ ಒಂದು ಪುಟ್ಟ ಹಡಗಿನಲ್ಲಿ ನೌಕಾಯಾನ ಮಾಡಿಸಿದರು... ಆ ಸಾಗರದ ಆಳ-ಅಗಲಗಳನ್ನು ನನಗೆ ವಿವರಿಸಿಕೊಟ್ಟು, ಆ ಸಾಗರದಿ ನನ್ನದೊಂದು ಪುಟ್ಟ ಹಾಯಿದೋಣಿ ಹಾಯ್ದುಬಿಡಲು ನನ್ನೊಂದಿಗೆ ಭಾಗಿಯಾದವರು.ನನಗೆ ತಿಳಿಯದೆ ನನ್ನಲ್ಲಿ ಅಡಕವಾಗಿದ್ದ ಪ್ರತಿಭೆಯನ್ನು ಬಡಿದೆಬ್ಬಿಸಿ ನನ್ನಲ್ಲಿ ಬರೆಯುವ ಉತ್ಸಾಹ ತುಂಬಿ,ನಾನೊಬ್ಬ ಬ್ಲಾಗಿಗನಾಗಲು ಕಾರಣರಾದವರು...


ನಾ ಕಂಡಂತೆ ಅವರು "ಬಿರುಗಾಳಿಯಲ್ಲಿ ಸಿಕ್ಕ 'ಹಡಗು' ''.

ಅದೇಕೋ ನಾನು ಬ್ಲಾಗಿಗೆ ಕಾಲಿಡುತ್ತಿದ್ದಂತೆ ನಾನಿಟ್ಟ ಹೆಜ್ಜೆಗಳು ಮರಳುಗಾಡಿನಲ್ಲಿ ಇಟ್ಟ ಅಂಬೆಗಾಲಿನ ಹೆಜ್ಜೆಯಂತೆ ಮರೆಯಾಗುತ್ತಾ, ಬ್ಲಾಗಿನಲ್ಲಿ ನಾ ಕಾಣುತ್ತಿದ್ದ ಸೋಲಿನ ಪ್ರಶ್ನೆಗೆ ಹಲವರ ಸಾಂತ್ವನ ಹಾಗೂ ನನ್ನ ವ್ಯರ್ಥಪ್ರಯತ್ನ ಉತ್ತರ ನೀಡಲೇ ಇಲ್ಲ...

ಜಾತಕವನ್ನು ನಂಬುವ ನಾನು ಈ ಸೋಲಿಗೆ ನನ್ನ ಜಾತಕದಲ್ಲಿ ಕಂಡುಬಂದ ''ರಾಹುದೆಸೆ"(ಕಳೆದ ಹದಿನೆಂಟು ವರ್ಷ ಕಾಡಿದ ವಿಷಘಳಿಗೆ) ಕಾರಣ ಎಂದುಕೊಂಡೆ.

ಮುಂದೊಂದು ದಿನ ಬ್ಲಾಗೆಂಬ ಸಾಗರದಲ್ಲಿ ನನ್ನ ಪುಟ್ಟ ದೋಣಿ ಕೇಂದ್ರಬಿಂದುವಾಗಿ ಅಲೆಯೆಬ್ಬಿಸಬಲ್ಲದು ಎಂಬ ನಿರೀಕ್ಷೆಯಲ್ಲಿ ಇಂದಿನಿಂದ ಆರಂಭವಾಗುವ "ಗುರುದೆಸೆ''ಯಲ್ಲಿ ಮತ್ತೊಮ್ಮೆ ಬ್ಲಾಗಿನತ್ತ ನನ್ನ ಪುಟ್ಟ ದೋಣಿಯನ್ನು ಪಾದಾರ್ಪಣೆ ಮಾಡಿಸುತ್ತಿದ್ದೇನೆ...

ಈ ನನ್ನ "ಮನಸಿನ ಮನೆ"ಯನ್ನು ಯಾವುದೇ ಬಿರುಗಾಳಿಯ ಹೊಡೆತಕ್ಕೆ ಸಿಲುಕದಂತೆ ಕಾಪಾಡಲು ತಾವೆಲ್ಲರೂ ಸಹಕರಿಸುತ್ತೀರೆಂದು ನಂಬಿದ್ದೇನೆ...

ನಮ್ಮ ನಾಡದೇವತೆ ಶ್ರೀ ಭುವನೇಶ್ವರಿಗೆ ನಮಿಸಿ, ಕುಲದೇವತೆ ಶ್ರೀ ವೆಂಕಟರಮಣಸ್ವಾಮಿಗೆ ಶರಣಾಗಿ, ಗ್ರಾಮದೇವತೆ ಶ್ರೀ ಪಟ್ಟಲದಮ್ಮನಿಗೆ ತಲೆಬಾಗಿ, ಮನೆದೇವತೆ ನಿರಾಭರಣ ಸುಂದರಿ ಚಾಲಮ್ಮನ ಪಾದಾರವಿಂದಗಳಿಗೆ ಎರಗಿ ಎಲ್ಲರ ಕೃಪೆ ಬೇಡುತ್ತಾ, ಸಮಸ್ತ ಬ್ಲಾಗಿಗರಿಗೂ.. ಎಲ್ಲ ಕನ್ನಡಿಗರಿಗೂ ವಂದಿಸುತ್ತಾ...



ಜೊತೆಗೆ,


'ಅಪ್ಪಾಜಿ' ಇಲ್ಲದ ಹೊಸವರ್ಷದ ಸಂಭ್ರಮ ನಮಗೇಕೆ..




















'ಕಂಬನಿಯ ಕುಯಿಲು'



೩ ದಶಕಗಳ ಕಾಲ ಕನ್ನಡಾಭಿಮಾನಿಗಳ ಹೃದಯ ಸಿಂಹಾಸನವನ್ನು ಆಳಿ ಇತ್ತೀಚಿಗಷ್ಟೇ ಸಿಂಹಘರ್ಜನೆ ನಿಲ್ಲಿಸಿ ನಮ್ಮನ್ನು ಅಗಲಿದ ಭಾವಶಿಲ್ಪಿ 'ಡಾ.ವಿಷ್ಣುವರ್ಧನ' ಅವರ ಆತ್ಮಕ್ಕೆ ಚಿರಶಾಂತಿ ಕೋರುತ್ತೇನೆ...

ವಂದನೆಗಳು..

ಇಂತಿ ನಿಮ್ಮವ /-
Related Posts Plugin for WordPress, Blogger...