ಕನ್ನಡ ಮತ್ತು ನನ್ನ ಬದುಕು..



!!ಜ್ಞಾನಾರ್ಪಣಮಸ್ತು!!


ನಾನು ಕನ್ನಡಮಾಧ್ಯಮದಲ್ಲೇ ನನ್ನ ಪ್ರಾಥಮಿಕ & ಪ್ರೌಢ ಶಿಕ್ಷಣ ಮುಗಿಸಿದ್ದೇನೆ ಎಂಬ ವಿಷಯದಲ್ಲಿ ನನಗೆ ಹೆಮ್ಮೆ ಇದೆ.
ಹೈಸ್ಕೂಲು ಮುಗಿಸಿ ಪಿಯುಸಿನಲ್ಲಿ  ಸೈನ್ಸ್ ಆಯ್ದುಕೊಂಡಾಗ, ಅಲ್ಲಿ ಎಲ್ಲವೂ ಇಂಗ್ಲಿಷ್ನಲ್ಲೇ ಇರೋದ್ರಿಂದ, ಸಾಮಾನ್ಯವಾಗಿ ನನ್ನಂತೆ ಕನ್ನಡ ಮಾಧ್ಯಮದಿಂದ ಬಂದವರಿಗೆ ಆಗುವ ಇಂಗ್ಲಿಷಿನ ಸಮಸ್ಯೆಯ ಭಯ ನನಗೂ ಆಗಿದೆ. ಮೊದಮೊದಲು ನಾನು ಬರೆದುಕೊಂಡ ನೋಟ್ಸ್ಗಳನ್ನು ಇಂದು ತೆಗೆದು ನೋಡಿದರೆ ನಾನೇನ ಬರೆದಿದ್ದು!! ಎನಿಸುವಂತಹ ಭಯಂಕರ ಇಂಗ್ಲೀಶ್ ಸ್ಪೆಲಿಂಗ್ ಮಿಸ್ಟೇಕ್ಗಳಿಂದ ಮೂಡಿರುವ, ಯಾವ ಡಿಕ್ಷನರಿಯಲ್ಲೂ ಇರದ ಪದಗಳು. ನಾನು ಕನ್ನಡ ಚೆನ್ನಾಗಿ ಓದುತ್ತಿದ್ದಾಗ ಬರೆಯುತ್ತಿದ್ದಾಗ ಕನ್ನಡದಲ್ಲಿ ಹೆಚ್ಚು ಅಂಕ ಪಡೆಯುತ್ತಿದ್ದಾಗ ಸಹಪಾಠಿಗಳು ತಮಾಷೆಗಾಗಿಕನ್ನಡಪಂಡಿತ’ ಎಂದು ರೇಗಿಸುತ್ತಿದ್ದರೂ, ಪದಕ್ಕೂ ನನಗೂ ಸಂಬಂಧವೇ ಇಲ್ಲ.
ನಮ್ಮ ವಿಷಯಗಳು ಇಂಗ್ಲಿಷ್ನಲ್ಲೇ ಇದ್ರೂ ಕೂಡ ಕನ್ನಡದಲ್ಲಿ ಸುಲಲಿತವಾಗಿ ಅರ್ಥ ಹೇಳಿ ಕಲಿಸುತ್ತಿದ್ದ ಮೇಸ್ಟ್ರುಗಳು ನಮಗೆ ಅಚ್ಚುಮೆಚ್ಚು,ಅವರಿಂದಲೇ ನಾವು, ಅಂದರೆ ನನ್ನಂತವರು, ಪಿಯುಸಿ ಸೈನ್ಸ್ ಅನ್ನು ಬಿಡದೆ ಮುಂದುವರೆಸಿದ್ದೀವಿ,ಪಾಸಾಗಿದ್ದೀವಿ ಕೂಡ., ಹಾಗಾಗಿ ಅವ್ರಿಗೆ ಯಾವಾಗ್ಲೂ ನನ್ನ ಪ್ರಣಾಮಗಳನ್ನು ಅರ್ಪಿಸೋಕೆ ಇಷ್ಟಪಡ್ತೀನಿ. ಕೆಲವರಂತೂ ಒಂದು ಪದವೂ ಕನ್ನಡ ಬಳಸ್ತ ಇರ್ಲಿಲ್ಲ, ಹಾಗಾಗಿ ಅವರ ಮೇಲೆ ಕೋಪ ಇತ್ತು, ಅವರ ಪಾಠಗಳೂ ಅರ್ಥ ಆಗಿಲ್ಲ, ಅದರಲ್ಲಿ ಅವರ ತಪ್ಪಿಲ್ಲದೆ ಇರಬಹುದು. ಆದರೂ..  ಕನ್ನಡ ಮಾಧ್ಯಮದಿಂದ ಬಂದು, ಸೈನ್ಸ್ ಸೇರಿದ ಹಳ್ಳಿಯ ವಿದ್ಯಾರ್ಥಿಗಳು ಇಂಗ್ಲಿಷಿನ ಭಯಕ್ಕೆ ಹೆದರಿ, ಸೈನ್ಸ್ ಬಿಟ್ಟು ಬೇರಾವುದಕ್ಕೋ ನೆಗೆದುಬಿಡಲು ಇಂತಹ ಮೇಸ್ಟ್ರುಗಳು ಕೂಡ ಒಂದು ಕಾರಣ ಅಂತ ನನ್ನ ನಂಬಿಕೆ.

 ಹೇಗೋ ಪಿಯುಸಿ ಮುಗೀತು, ಡಿಗ್ರೀ., ಬಿ.ಎಸ್ಸಿ.

ಡಿಗ್ರೀ ಸೇರೋ ಹೊತ್ತಿಗೆ, ಅಂದರೆ ಪಿಯುಸಿಯಲ್ಲಿ ಇರಬೇಕಾದರೇನೆ, ನಾನು ಕನ್ನಡ ಬ್ಲಾಗಿಗರಲ್ಲಿ ಒಬ್ಬನಾಗಿ ಸೇರಿದ್ದೆ, ಹಾಗಾಗಿ ನನಗೆ ಕನ್ನಡ ಅಂದರೆ ಬಹಳ ಪ್ರೀತಿ. ನಾನು ಕನ್ನಡದಲ್ಲೇ ಎಂ. .  ಮಾಡಿ ಒಳ್ಳೊಳ್ಳೆ ಸಾಹಿತ್ಯ ಕಲಿತು ಓದಿ ಬರೆಯಬೇಕು ಅನ್ನೋ ಅಭಿರುಚಿಯನ್ನು ನನ್ನ ಮನಸ್ಸಿನಲ್ಲಿ ಮೂಡಿಸಿದ್ದು ಕನ್ನಡ ಬ್ಲಾಗಿನ ಸಾಹಿತ್ಯದ ಒಲವು. ಆಗಂತೂಎದೆ ತಟ್ಟಿ ಹೇಳು ನಾನೊಬ್ಬ ಕನ್ನಡಿಗ’,’ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ’,’ಅನ್ನ ತಿನ್ನುವ ಮುನ್ನ ನೆನೆಯೊ ಕನ್ನಡವನ್ನ’.. ಎಂಬ ಇಂತಹ ಘೋಷಣೆಗಳು, 'ಕನ್ನಡವೇ ಸತ್ಯ-ನಿತ್ಯ' ಎಂಬ ಪ್ರೀತಿಯ ವಾಕ್ಯಗಳು ತುಂಬಾನೇ ಇಷ್ಟ ಆಗ್ತಿದ್ದವು.
ಆರ್ಕುಟ್, ಫೇಸ್ ಬುಕ್(ಆಗಿನ್ನೂ ಅಷ್ಟಾಗಿ ಪ್ರಚಲಿತವಾಗಿರಲಿಲ್ಲ ಎನಿಸುತ್ತದೆ )ನಂತಹ ಸಾಮಾಜಿಕ ತಾಣಗಳಲ್ಲಿ ಕನ್ನಡದವರು ಕನ್ನಡದಲ್ಲೇ ತಲೆಬರಹ (ಪ್ರೊಫೈಲ್ ನೇಮ್/ ಕ್ಯಾಪ್ಶನ್) ಹಾಕಬೇಕು, ಕನ್ನಡದಲ್ಲೇ ಟೈಪ್ ಮಾಡ್ಬೇಕು ಎನ್ನುವ ಹುಚ್ಚು ಆಸೆ ನನ್ನಂತ ಅಂಧ ಅಭಿಮಾನಿಗಳದ್ದು. ಕನ್ನಡ ಅಕ್ಷರಗಳನ್ನು ಓದಲಾಗದ, ಬರೆಯಲಾಗದ ಕೆಲ ಕಂಪನಿಯ ಫೋನ್ ಗಳನ್ನು ಕಂಡರಂತೂ ನನಗೆ ತುಂಬಾ ಕೋಪ ಬರ್ತಿತ್ತು, ಈಗಲೂ ಬರುತ್ತೆ ಕೂಡ.
ಆಗಂತೂ ಇಂಗ್ಲೀಶ್ ಇಂಪಾರ್ಟೆಂಟ್ ಅಂತ ಯಾರಾದ್ರೂ ಹೇಳಿದ್ರೆ ಬೇಸರಾಗ್ತಿತ್ತು, ಕನ್ನಡವನ್ನು ಮಾತ್ರ ಕಲಿತವರಿಗೆ ಅವಕಾಶಗಳಿಲ್ಲವೇ.,  ಯಾಕೆ ಕಲಿಬೇಕು ಅನ್ನಿಸ್ತಿತ್ತು. ಆದರೆ ನಾನು ಆಯ್ದುಕೊಂಡಿದ್ದುದು ವಿಜ್ಞಾನ.
ಇಂತಹ ಒಂದು (ಕನ್ನಡ ಸಾಹಿತ್ಯದ ಗೀಳು), ಕನ್ನಡದ ಮೇಲಿನ ಹುಚ್ಚು ಅಂಧಪ್ರೀತಿ ನನ್ನಲ್ಲಿ ತುಂಬಿಕೊಂಡಿದ್ದಾಗ ನನ್ನಲ್ಲಿ ಹೇಗೆ ತಾನೇ ಇಂಗ್ಲೀಶ್ ಕಲಿಬೇಕು ಅನ್ನೋ ಭಾವನೆ ಹುಟ್ಟೋದಿಕ್ಕೆ. ಸಾಧ್ಯ?. ಹುಟ್ಟಲೇ ಇಲ್ಲ

ಡಿಗ್ರೀ ಮುಗಿಸಿ ಏನೋ ಮಾಡ್ಬೇಕು ಅಂತಿದ್ದವನು ಏನೋ ಮಾಡುವಂತಾಗಿ ಮಾಸ್ಟರ್ ಡಿಗ್ರೀ ಮೆಟ್ಟಿಲು ಕೂಡ ಹತ್ತಿಬಿಟ್ಟೆ. ಕಾರಣಾಂತರಗಳಿಂದ ಬ್ಲಾಗ್ ಬರೆಯೋದನ್ನ ನಿಲ್ಲಿಸಿದ್ದು, ಚೆನ್ನಾಗಿ ಓದಿ ರಾಂಕ್ ಪಡೆದದ್ದು.. ಎಲ್ಲವೂ ಒಂದೆಡೆ ಇರಲಿ, ಅಲ್ಲೂ ಇಂಗ್ಲೀಶ್ ಕಲಿಲೆ ಇಲ್ಲವಲ್ಲ. ಸೈನ್ಸ್ನಲ್ಲಿ ಮಾಸ್ಟರ್ಸ್ ಮಾಡಿದವರಿಗೆ ತಾನಾಗೇ ಇಂಗ್ಲೀಶ್ ಬಂದಿರುತ್ತೆ ಅಂತ ಅಂದುಕೊಂಡಿದ್ದ ಲೆಕ್ಕಾಚಾರವೇ ತಪ್ಪಾಗಿ ಹೋಯ್ತು.
ಆಗ ನನ್ನ ಗುರುಗಳು ಯಾವಾಗ್ಲೂ ಹೇಳ್ತಿದ್ರು: “ ಸೈನ್ಸ್ ಫೀಲ್ಡ್ ನಲ್ಲೇ ಮುಂದುವರಿಬೇಕಂದ್ರೆ ನೀನು ಇಂಗ್ಲೀಶ್ ಕಲಿಲೇಬೇಕು, ಕೇವಲ ವಿಷ್ಯ ತಿಳ್ಕೊಂಡ್ರೆ ಸಾಕಾಗಲ್ಲ. ತಿಳಿದಿರುವ ವಿಜ್ಞಾನವನ್ನ ಹೇಳೋದಿಕ್ಕೆ ಇಂಗ್ಲೀಷ್ ಮುಖ್ಯ. ಇರಬೇಕು ಕನ್ನಡಾಭಿಮಾನ ಎಷ್ಟಿರಬೇಕೋ ಅಷ್ಟು. ಅತಿಯಾಗಬಾರದು..   ಅದ್ಯಾಕಾಗಿ ದೇವರು ಭಾಷೆಗಳಲ್ಲಿ ವೈವಿಧ್ಯತೆ ಸೃಷ್ಟಿ ಮಾಡ್ಬಿಟ್ನೋ, ಎಲ್ಲರಿಗೂ ಒಂದೇ ಭಾಷೆ ಇದ್ದಿದ್ರೆ ತುಂಬಾ ಚೆನ್ನಾಗಿರ್ತಿತ್ತು..”
ಮಾತುಗಳು ನನಗೂ ಹೌದೆನಿಸಿ ಇಂಗ್ಲಿಶ್ ಕಲಿಯಲು ಆದಷ್ಟು ಪ್ರಯತ್ನ ಮಾಡ್ತಿದ್ದೆ. ಕೆಲವು ಇಂಗ್ಲೀಶ್ ಬುಕ್ಸ್ ಓದೋವಾಗಂತೂ ಒಂದೊಂದೇ ಪದಕ್ಕೆ ಅರ್ಥ ಹುಡುಕ್ತಾ ಹುಡುಕ್ತಾ ಸಾಕಾಗಿ ಓದೋದೇ ಬೇಡ ಅನ್ನಿಸ್ತಿತ್ತು. ಎಷ್ಟೋ ಒಳ್ಳೆಯ ಇಂಗ್ಲೀಶ್ ಪುಸ್ತಕಗಳನ್ನು ಓದೋದನ್ನು ಮಿಸ್ ಮಾಡ್ಕೊಳ್ತಾ ಇದ್ದೀನಿ ಅನ್ನಿಸ್ತಿತ್ತು.
ಅಂತೂ ಸ್ನಾತಕೋತ್ತರ ಪದವಿ ಕೂಡ ಮುಗೀತು. ಇಂಗ್ಲೀಶ್ ಬರಲೇ ಇಲ್ಲ.

ನನ್ನ ಎಂ.ಎಸ್ಸಿ. ಮುಗಿದ ಮೇಲೆ ನನ್ನ ಗುರುಗಳು ನನ್ನನ್ನು ಭಾರತೀಯ ವಿಜ್ಞಾನ ಮಂದಿರಕ್ಕೆ ತಂದು ಹಾಕಿಯೇ ಬಿಟ್ಟರು.
ಇಂಟರ್ವ್ಯೂ ಅಟೆಂಡ್ ಮಾಡಿದ್ದ ಮೊದಲ ದಿನ. ಸುಮಾರು ಒಂದು ಘಂಟೆಗಳ ಕಾಲ ಬರೆ ಇಂಗ್ಲಿಷ್ನಲ್ಲೇ ನಡೆದ ಸಂಭಾಷಣೆ. ಶುಡ್.ವಿಲ್,ಡಿಡ್ಇಂತಹ ಸುಮಾರು ಪದಗಳನ್ನು ಹೇಗೆ, ಯಾವಾಗ ಬಳಕೆ ಮಾಡಬೇಕು ಅಂತಾನೆ ಗೊತ್ತಿರದಿದ್ದ ನಾನು ನನ್ನದೇ  ಇಂಗ್ಲೀಶ್ ಪದಗಳಿಂದ ತೊದಲಿ ತೊದಲಿ ನುಡಿದಿದ್ದೆ. ‘ಲ್ಯಾಬ್ನಲ್ಲಿ ಎಲ್ಲರೂ ಇಂಗ್ಲಿಷ್ನಲ್ಲಿ ಮಾತಾಡ್ತಾರೆ, ಕನ್ನಡದವರು ಸಿಗೋದೆ ಅಪರೂಪ, ಅವರ ಜೊತೆ ವ್ಯವಹರಿಸೋದು ಹೇಗೆ, ಇಲ್ಲಿ ಸೈನ್ಸ್ ಲಿಟರೇಚರ್ ಇಂಗ್ಲೀಷ್ನಲ್ಲೇ ಇರುತ್ತೆ ಓದಿ ಅರ್ಥ ಮಾಡಿಕೊಂಡು ಬರೆಯೋದು ಹೇಗೆಎಂದು ಅವರು ಕೇಳುತ್ತಿದ್ದ ಮಾತಿಗೆ ನಾನು ಏನೆಂದು ಹೇಳಲು ಸಾಧ್ಯ. ಘಳಿಗೆಯಲ್ಲೇ ನನ್ನ ಬಂಡವಾಳ ನನಗೆ ಗೊತ್ತಾಗಿದ್ದು. ನನ್ನಲ್ಲಿದ್ದ ಕನ್ನಡದ ಅಂಧವ್ಯಾಮೋಹವೆಲ್ಲ ಸಂಪೂರ್ಣ ನಾಶವಾಗಿ, ಇಂಗ್ಲೀಶ್ ಕಲಿಲೇಬೇಕು  ಎನ್ನೋ ಭಾವನೆ ನನ್ನೊಳಗೆ ನುಗ್ಗಿದ್ದು ಅಂದ್ರೆ ಅದೇ ಘಳಿಗೆಯಲ್ಲಿ.

ಕನ್ನಡ ಕನ್ನಡ ಅಂತಿದ್ದ ನಾನು ನನ್ನ ಭಾಷವ್ಯಾಮೋಹವನ್ನು ಅಳೆದು ನೋಡುವ ಕಾಲ ಬಂತು. IISc ಸೇರಿ ಬಿಟ್ಟೆ. ಇಲ್ಲಿರುವ ನೂರಾರಕ್ಕಿಂತ ಹೆಚ್ಚು ಜನರಲ್ಲಿ ಕನ್ನಡದವರು ಬೆರಳಿಕೆಯಷ್ಟು ಮಾತ್ರ. ಯಾರಿಗಾದ್ರೂ ಏನಾದ್ರೂ ಹೇಳಬೇಕೆಂದ್ರೆ, ಅವ್ರು ಹೇಳಿದ್ದನ್ನು ಅರ್ಥ ಮಾಡಿಕೊಳ್ಳಬೇಕಾದರೆ ನನ್ನ ಪಾಡು ಶೋಚನೀಯ. ಒಂದು ಫೋನ್ ರಿಸೀವ್ ಮಾಡೋಕೂ ನನಗೆ ಭಯ, ಏನಂತಾರೋ ಏನನ್ನಬೇಕೋ ಅಂತ. ನನಗೆ ಇಂಗ್ಲೀಶ್ ಬರುತ್ತಿಲ್ಲವಲ್ಲ ಅನ್ನೋದರ ಕುರಿತು ನನ್ನ ಮೇಲೆ ನನಗೆ ಕೀಳಿರಿಮೆ ಹುಟ್ಟಿದ್ದು ಇಲ್ಲೆ. ನನ್ನ ಕನ್ನಡಪ್ರೇಮ,ಇಂಗ್ಲಿಷಿನ ಮೇಲಿದ್ದ ದ್ವೇಷ, ಅದೂ ಇದು ಎಂಬ ಒಣವೇದಾಂತ ಎಲ್ಲವನ್ನೂ ಮೂಟೆಕಟ್ಟಿ ಬಿಸಾಡಿ ಮುಚ್ಚಿಕೊಂಡು ಇಂಗ್ಲಿಷನ್ನು ಕಲಿಯಲೇಬೇಕಾದ ಪರಿಸ್ಥಿತಿ.
 ಇಂಗ್ಲೀಶ್ ಕಲಿಯದೆ ಇಲ್ಲಿ ಇರಲು ಸಾಧ್ಯವಿಲ್ಲ ಎಂದು ತಿಳಿದಾಗ, ಮತ್ತೆ ನಾನು ಬೇಡವೆಂದು ಬಿಸಾಡಿದ್ದ ಹಳೇ ಪುಸ್ತಕಗಳನ್ನು ತೆಗೆದುಕೊಂಡು ಮತ್ತೆ ಪ್ರಯೋಗಗಳನ್ನು ಶುರು ಮಾಡಿದೆ. ಮೊದಮೊದಲು ಅದೆಷ್ಟು ಪ್ರಯತ್ನ ಮಾಡಿದ್ರೂ ಕೂಡ ಅಡಿಪಾಯವೇ ಇಲ್ಲದ ಕಡೆ ಮನೆ ಕಟ್ಟಲು ಹೋಗುವಂತಿದೆ ಎನಿಸುತ್ತಿತ್ತು ನಾನು ಕನ್ನಡಮಾಧ್ಯಮದ ವಿದ್ಯಾರ್ಥಿ ಎನಿಸಿದಾಗ. ನನಗೆ ಇಷ್ಟವಾಗುತ್ತಿದ್ದ ಹಳೇ ಹೇಳಿಕೆಗಳು ನೆನಪಾದರೆ ಅವುಗಳ ಹಿಂದೆ ಸುತ್ತುತ್ತಿದ್ದ ನಾನು ಶತಮೂರ್ಖನೇನೋ ಎನಿಸುವಂತಹ ಭಾವ. ಇಂಗ್ಲೀಶ್ ನಮಗೆ ಬರದಿದ್ದರೇನು, ಅದಕ್ಕೂ ಜೀವನಕ್ಕೂ ಏನು ಸಂಬಂಧ, ನಮ್ಮ ಭಾಷೆ ಸಾಕಲ್ಲವೇ, ಎಂಬ ಹೇಳಿಕೆಗಳು ಹೇಳೋದಿಕ್ಕಷ್ಟೆ,ಕೇಳೋದಿಕ್ಕಷ್ಟೆ. ಅವುಗಳನ್ನು ಹೋಲಿಕೆ ಮಾಡುವ ಪ್ರಸಂಗ ನಿಜಜೀವನದಲ್ಲಿ ಬಂದಾಗಇಂಗ್ಲೀಶ್ಎಂಬ ಮಹಾ___ವನ್ನು ನನ್ನಿಂದ ಹೆದರಿಸಲು ಆಗಲಿಲ್ಲ.
ಇಲ್ಲಿಗೆ ಬಂದು 3-4 ತಿಂಗಳಲ್ಲೇ ಇಂಗ್ಲೀಶ್ ತಾನಾಗೇ ಬರುತ್ತೆ ಎಂದು ಕೆಲವರು ಹೇಳಬಹುದು, ಏನು ಬರೋದು ಮಣ್ಣು, ಅದಕ್ಕೆ ನನ್ನ ಪ್ರಯತ್ನ ಬೇಡವೇ, ಪ್ರಯತ್ನಕ್ಕೆ ಸಮಯ ಬೇಡವೇ,ಬಿಡುವು ಬೇಡವೇ, ಮುಖ್ಯವಾಗಿ ಮನಸ್ಸಿರಬೇಡವೇ..?
ಇದು ನನ್ನೊಬ್ಬನ ಮಾತಲ್ಲ, ಇಂಗ್ಲೀಶ್ ಬಾರದೆ ಮಾತೃಭಾಷೆಯನ್ನೇ ನೆಚ್ಚಿ ಓದಿಕೊಂಡು ಇಂತಹ ಕಡೆ ಬಂದ ಎಷ್ಟೋ ಜನರದ್ದು, ಕೆಲವರಿಗಂತೂ ಮೊದಮೊದಲು ಇಂಗ್ಲೀಶ್ ಬೆರ್ಚಪ್ಪನಂತೆ ಕಾಡಿಬಿಡುತ್ತೆ.. ಇದನ್ನು ಹೇಗೆ ಹೆದರಿಸಬೇಕು, ನನಗೇಕೆ ಇಂಗ್ಲಿಶ್ ಬರುತ್ತಿಲ್ಲ ಎಂಬ ಪ್ರಶ್ನೆ ಹುಟ್ಟಿದಾಗಲೆಲ್ಲ - 'ಬರುತ್ತಿಲ್ಲ ಎಂದರೆ ಹೇಗೆ, ಅದನ್ನು ಕಲಿಯುವುದಕ್ಕಾಗಿ ನಾನು ದಿನಾಗಲೂ ಎಷ್ಟು ಸಮಯ ಮೀಸಲಿಡುತ್ತಿದ್ದೇನೆ?' ಎಂದು ಕೇಳಿಕೊಳ್ಳುತ್ತೇನೆ.  ಇಂತಹ ಜನಗಳ ನಡುವೆ ತಮ್ಮದೇ ಭಾಷೆಯವರನ್ನು ಹುಡುಕಿ ಮಾತಾಡಿಸಿದಾಗ,ಅವರೂ ನಮ್ಮದೇ ಭಾಷೆಯಲ್ಲಿ ಮಾತಾಡಿದಾಗ ಏನೋ ಆನಂದ. ಆದರೆ ಇಂತಹ ಪರಿಸ್ಥಿತಿಗಳ ಹೆದರಿಸಿ, ಮಾತೃಭಾಷೆಯಿಂದ ಏನು ಉಪಯೋಗ ಆಗದೆ ಮೇಲೆ, ಅದಕ್ಕಾಗಿಯೇ ಅದರ ಮೇಲೆ ಹಗೆ ಸಾಧಿಸುವಂತಹವರು ಇದ್ದಾರೆ ಇಲ್ಲಿ.
ಭಾಷೆ ಮೇಲೆ ಅಂದಾಭಿಮಾನ ಇರಬಾರ್ದು, ಇಂತಹ ಕ್ಷೇತ್ರದಲ್ಲಿರಬೇಕಂದ್ರೆ ಎನ್ನುವುದಕ್ಕಿಂತ ಹೆಚ್ಚಾಗಿ ಈಗಿನ ಯುಗದಲ್ಲಿ ಇಂಗ್ಲೀಶ್ ಇರದೆ ಕಷ್ಟ ಎನಿಸುತ್ತೆ. ಇಂಗ್ಲೀಶ್ ಬರಲ್ಲ ಎಂಬ ಕಾರಣಕ್ಕೆ ಉದ್ಯೋಗಮೇಳಗಳಿಂದ ಹೊರಗೆ ಬಿದ್ದ ಕೆಲವರನ್ನೂ ನೋಡಿದ್ದೇನೆ.ಇಂಗ್ಲೀಶ್ ಬರದಿದ್ದುಕ್ಕೆ ಕೆಲವು ಕಡೆ ಹೋಗಿ ಮಂಗನಂತೆ ನಿಲ್ಲಬೇಕೆಂದು ಕೆಲವು ಆಸೆಗಳನ್ನು ತ್ಯಾಗ ಮಾಡುವವರೂ/ಮಾಡಿದವರೂ ಇದ್ದಾರೆ, ಇಂಗ್ಲೀಶ್ ಮುಖ್ಯ ಎಂದು ಅನುಭವದಿಂದ ತಿಳಿದು ಮಕ್ಕಳ ಇಂಗ್ಲೀಶ್ ಕಲಿಕೆಯ ಕಡೆ ಹೆಚ್ಚು ಗಮನ ಇಡುವ ಪೋಷಕರು, ಕಲಿಯಲೇಬೇಕಾದಾಗ ಸರ್ಕಸ್ ಮಾಡುವ ಸ್ವಕಲಿಕಾರ್ಥಿಗಳು, ಕನ್ನಡವ ಉಳಿಸುತ್ತೇನೆಂಬ ಮೊಂಡರು, ಕನ್ನಡ ಉಳಿಸುವ ಚಿಂತನೆ ನಡೆಸುವ ಸಾಹಿತಿಗಳು,ಹಿರಿಯರು.ಗೌರವಾನ್ವಿತರು, ಗೊಂದಲಕ್ಕೀಡಾದ ಜನ-ಮನ, ದಾರಿ ಕಾಣದ ಕನ್ನಡ.
ಇವೆಲ್ಲವನ್ನೂ ನೋಡಿದ್ರೆ ನನ್ನ ಗುರುಗಳ ಸಾನ್ನಿಧ್ಯದಲ್ಲಿ ಕೇಳಿದ ಮಾತು ಮತ್ತೆ ನೆನಪಾಗುತ್ತೆಯಾಕಾದ್ರೂ ಭಾಷೆಯಲ್ಲಿ ವೈವಿಧ್ಯತೆ ಇದೆಯೋ, ಎಲ್ಲರದೂ ಒಂದೇ ಭಾಷೆಯಾಗಿದ್ದರೆಷ್ಟು ಚೆಂದವಿರುತಿತ್ತುಎಂದು.

4 ಕಾಮೆಂಟ್‌ಗಳು:

sunaath ಹೇಳಿದರು...

ಗುರುಪ್ರಸಾದರೆ,
ಈಗಿನ ಆಧುನಿಕ ಯುಗದಲ್ಲಿ, ಕನ್ನಡ ಹಾಗು ಇಂಗ್ಲಿಶ್ ಅಲ್ಲದೆ ಇನ್ನೂ ಒಂದೆರಡು ಭಾಷೆಗಳನ್ನು ಕಲಿಯುವುದು ಅನಿವಾರ್ಯವಾಗಿದೆ. ಕನ್ನಡ ನಮ್ಮ ತಾಯಿನುಡಿ. ನಮಗೆ ಮಮತೆ ಸಿಗುವುದು ಕನ್ನಡದಲ್ಲಿಯೇ. ಉಳಿದಂತೆ ಇತರ ಭಾಷೆಗಳೂ ಸಹ ಬೇಕಾಗುತ್ತವೆ.

Unknown ಹೇಳಿದರು...

ಹೌದು ಭಾಷೆಯ ಬಗ್ಗೆ ಅಭಿಮಾನ ಇರಬಹುದು ಆದ್ರೆ ಅಂದಾಭಿಮಾನ ಇರಬಾರದು.ಆಧುನಿಕ ಯುಗದಲ್ಲಿ ಇಂಗ್ಲಿಷ್ ಇಲ್ಲದೆ ಏನೂ ನಡೆಯಲ್ಲ.ನನ್ college ನಲ್ಲಿ ಹೊರರಾಜ್ಯದ students ಕೂಡ ಇದ್ದಾರೆ .ಅವರೊಂದಿಗೆ ನನ್ ಮಲಯಾಳ ನಡೆಯಲ್ಲ.ಆಗ್ಲೆ ಗೊತ್ತಾಗೇೂದು english ನ importance

ಮನಸಿನಮನೆಯವನು ಹೇಳಿದರು...

ಸದಾ ಹತ್ತಿರದಲ್ಲಿದ್ದು ಮನೆಗೆ ಬಂದು ಪ್ರತಿಕ್ರಿಯಿಸುತ್ತಿರುವ ಸುನಾಥ್ ರೆ.. ಹಾಗೂ ದಿವ್ಯ ಅವರೇ..
ಹೌದು ಅನಿವಾರ್ಯತೆ ತಿಳಿಯುತ್ತಿದೆ ಈಗ.. ಒಂದಷ್ಟು ಬೇರೆ ಭಾಷೆಯ ಸಾಹಿತ್ಯ ತಿಳಿಯುವುದಕ್ಕಾದರೂ ಭಾಷಾಜ್ಞಾನ ಇರಬೇಕು.
ಧನ್ಯವಾದಗಳು ಪ್ರತಿಕ್ರಿಯೆಗೆ.

Kushi ಹೇಳಿದರು...

Haudu....naanu saha 7th varegu Kannada medium odi, nanthara English medium ge seri, patta kashta thumba...but today...english is must everywhere. English mathadadavarannu noduva reethiye bere...

Related Posts Plugin for WordPress, Blogger...