ನಿಮ್ಮ ನಗುವ ನೆರಳಲಿ ನಾ..

!!ಜ್ಞಾನಾರ್ಪಣ ಮಸ್ತು!!


~.~

ಇಂದು ನನ್ನ ಬ್ಲಾಗ್ ಲೋಕದ ಪಯಣಕ್ಕೆ ಗುರುವಾದ ಜ್ಞಾನಮೂರ್ತಿ ಅವರ ಜನ್ಮದಿನ..
ಅವರಿಗೆ ಶುಭಾಷಯ ಹೇಳುತ್ತಾ ನನ್ನ ಮನಸಿನಮನೆಗೆ ಮತ್ತೆ ಬೆಳಕು ತೋರುತ್ತಿದ್ದೇನೆ..


ಆತುರವಸರದಲ್ಲಿ ಹುಟ್ಟಿದ ಸಾಲುಗಳು ಅವರಿಗಾಗಿ..

ನನ್ನ ಬಾಳಪಯಣದಲ್ಲಿ ಆಕಸ್ಮಿಕವಾಗಿ
ಪರಿಚಯವಾದವರು ನೀವು..
ಸಂತೆಯೊಳಗೆ ನಾ ದಿಕ್ಕು ತೋಚದೆ ಮರುಗಲಾಗಿ
ಸಂತನಂತೆ ಕಂಡವರು ನೀವು..

ಯಾರು ಅರ್ಥ ಮಾಡಿಕೊಳ್ಳದ
ನನ್ನ ಭಾವನೆಗಳಿಗೆ
ಜೀವ ತುಂಬಿದವರು ನೀವು..
ಸಂಬಂಧಿಗಳೇ ಪ್ರೀತಿಸಿದ
ಈ ಒಂಟಿಜೀವಕೆ
ತುಸು ಪ್ರೀತಿ ತಂದವರು ನೀವು..

ಆಸರೆಯಿಲ್ಲದೆ ಜಾರಿ ಚೂರಾಗುತ್ತಿದ್ದ
ನನ್ನ ಕನಸುಗಳ ಕೈಹಿಡಿದು
ಕಾಪಾಡಿದವರು ನೀವು..
ನನ್ನೊಳಗೆ ಮತ್ತೆ
ಉತ್ಸಾಹ ಚಿಗುರೊಡೆಯಲು
ಕಾರಣರು ನೀವು..

ನಿಮ್ಮದೇ ಅದೆಷ್ಟೋ ಒತ್ತಡಗಳ ನಡುವೆಯೂ
ಬಿಡುವಾಗಿ ನನ್ನೊಡನೆ
ಭಾವನೆ ಹಂಚಿಕೊಂಡವರು ನೀವು..
ನನ್ನಲ್ಲಿ ಗುಪ್ತವಾಗಿದ್ದ ಬರವಣಿಗೆಯ
ಪ್ರತಿಭೆಗೆ ಜೀವತುಂಬಿ
ಲೇಖನಿ ಕೊಟ್ಟವರು ನೀವು..
ನನ್ನ ಪ್ರತಿಭೆ ಹೊರತರಲು
ಹೊಸದೊಂದು ಲೋಕ
ಪರಿಚಿಯಿಸಿದವರು ನೀವು..

ನಿಮ್ಮ ನಗುವ ನೆರಳಲಿ ನಾನಿರುವೆ..
ನೀವು ನೊಂದರೆ ನಾ ಬಾಡುವೆ...

ನಿಮ್ಮನ್ನು ಏನೆನ್ನಲಿ ನಾ..
ಈ ಪ್ರಶ್ನೆಗೆ ಹುಟ್ಟಲಾರದ ಉತ್ತರವೊಂದಿದೆ ಆತ್ಮೀಯರೇ..


ನಿಮಗೆ 'ಜನ್ಮದಿನದ ಹಾರ್ದಿಕ ಶುಭಾಷಯಗಳು..'
ನೀವು ನಗುನಗುತ ನೂರ್ಕಾಲ ಬಾಳಬೇಕು..
ದೈವವು ನಿಮಗೆ 'ಇಷ್ಟಾರ್ಥ ಸಿದ್ಧಿರಸ್ತು' ಎಂದು ಹರಸಲಿ..

ಕತ್ತಲಾಗಿರುವ ನಿಮ್ಮ 'ಬ್ಲಾಗು' ಬೆಳಗಲಿ ಎಂಬ ಆಸೆ..,
ಮಂಕಾಗಿರುವ ನಿಮ್ಮ ಆರ್ಕುಟ್,ಫೇಸ್ ಬುಕ್ ಗಳಲ್ಲಿ ನಗೆ ನೋಡಬೇಕೆಂಬ ಆಸೆ..


~.~

ಕೂಗೊಮ್ಮೆ ಪ್ರಾಣಪಕ್ಷಿಯ!!

!!ಜ್ಞಾನಾರ್ಪಣಮಸ್ತು!!

~.~


ಹೇ ಭಗವಂತಾ..
ಹೊಲಿ ನನ್ನ ತುಟಿಗಳನು
ಒಣಮಾತು ಉದುರದಿರಲಿ..
ಮೂಕಮನಸು ನನಗಿರಲಿ..

ಕತ್ತಲಾಗಿಸು ನನ್ನೀ ನೋಟವ
ಕಳ್ಳನೋಟ ಇಣುಕದಿರಲಿ..
ಶೂನ್ಯ ನೋಟವೆ ನನಗಿರಲಿ..

ಕೊಟ್ಟು ಬಿಡೋ ಕಿವುಡುತನವ
ತೆಗಳಿಕೆಗಳು ಕಿವಿ ತಟ್ಟದಿರಲಿ..
ಹೊಗಳಿಕೆಗಳೂ ಮುಟ್ಟದಿರಲಿ..

ಕಟ್ಟಿಬಿಡು ಈ ತೋಳುಗಳ
ಆಸರೆಗೆ ಚಾಚದಿರಲಿ..
ಆಸೆಯ ಬಾಚಿ ಅಂಗಲಾಚದಿರಲಿ..

ನಿಷ್ಕ್ರಿಯಗೊಳಿಸು ನನ್ನ ನಡೆಯ
ಕಾಣದ ಕಡೆ ಹೆಜ್ಜೆ ಹೊರಡದಿರಲಿ..
ನೆಮ್ಮದಿ ಹರಸಿ ಸಾಗದಿರಲಿ..

ಕಲ್ಲಾಗಿಸೋ ಈ ಎದೆಯ
ಕಷ್ಟಗಳಿಗೆ ಕುಗ್ಗದಿರಲಿ..
ಮರುಗಿ ಕರಗದಿರಲಿ..

ಆರಿಸಿಬಿಡು ಹೃದಯದೀಪವ
ಪ್ರೀತಿ ಪ್ರೇಮಗಳು ಬೆಳಗದಿರಲಿ..
ಬಾಳೇ ಹೊಳೆಯದಿರಲಿ..

ಮುಚ್ಚಿಬಿಡೋ ಕಣ್ ಕೊಡವ
ಕಂಬನಿ ತುಂಬಿ ತುಳುಕದಿರಲಿ..
ನೋವು ಸೋರದಿರಲಿ..

ಹೇ ಭಗವಂತಾ..
ಕೂಗೊಮ್ಮೆ ಈ ಪ್ರಾಣಪಕ್ಷಿಯ
ಮಲಗಿ ಬದುಕ ಕನಸ ಕಾಣದಿರಲಿ..

ಹೇ ಭಗವಂತಾ...
ಕೂಗೊಮ್ಮೆ ಪ್ರಾಣಪಕ್ಷಿಯ!!

~-~


ಜೈ ಗಣೇಶ..!

!!ಜ್ಞಾನಾರ್ಪಣ ಮಸ್ತು!!


[
ಸಲದ ನಮ್ಮ 'ಶ್ರೀ ಪಟ್ಟಲದಮ್ಮ ಗೆಳೆಯರ ಬಳಗ'ದವರ ಗಣಪತಿ ಹಬ್ಬದ ಸಂಭ್ರಮ..]


ಕಳೆದ ವರ್ಷ ಗಣಪತಿ ಕೂರಿಸುವಲ್ಲಿ ನಮ್ಮನಮ್ಮಲ್ಲೆ ಕೆಲವು ಮನಸ್ತಾಪಗಳುಂಟಾಗಿ ಮುಂದಿನ ವರ್ಷದಿಂದ ನಮ್ಮ ಏರಿಯಾದ ನಮಗಿಂತ ಕಿರಿಯರಿಗೆ ಈ ಕೆಲಸ ವಹಿಸಿ ನಾವು ಜೊತೆಗಿದ್ದು ಸಹಾಯ ಮಾಡುವುದೆಂದು ಮಾತಾಗಿತ್ತು. ಆದರೆ ಅದೇಕೋ ಮನಸು ಬದಲಿಸಿದ ನಮ್ಮವರು ತಾವೇ ಗಣಪತಿ ಕೂರಿಸೋ ಕಾರ್ಯಕ್ಕೆ ಮುಂದಾದರು.
ಯಾವ ವರ್ಷವೂ ಗಣಪತಿ ಹಬ್ಬದಂದು ಕಟ್-ಔಟ್ ಹಾಕಿಸುತ್ತಿರಲಿಲ್ಲ,ಈ ಸಲ ಕೆಳಗಿನ ಏರಿಯಾದವರು ಸುಮಾರಾದ 1 ಕಟೌಟ್ ಕಟ್ಟಿದ್ದರು,ಇದನ್ನು ಕಂಡ ನಮ್ ಹುಡುಗರಿಗೆ ಏನಾಯ್ತೊ ಮಾರನೆಯ ದಿನ ತಾವು 1 ಕಟೌಟ್ ಹಾಕಿಸಿಯೇ ಬಿಟ್ಟಿದ್ರು. ಎಂಥ ಕಟೌಟ್ ಅಂತೀರ ಅಬ್ಬಬ್ಬ! ಹಿಂದೆ ಯಾರು ಹಾಕಿಸಿರಬಾರದು,ಮುಂದೆ ಯಾರು ಹಾಕಿಸಬಾರದು ಅಂತಹ ಬಹುದೊಡ್ಡ 45 ಜನರ ಪೋಟೊಗಳನ್ನೊಳಗೊಂಡ ಕಟೌಟ್.
ಈ ಸಲ ಸ್ವಲ್ಪ ಜೋರಾಗಿಯೇ ಗಣಪತಿ ಕೂರಿಸಬೇಕೆಂದುಕೊಂಡಿದ್ದರಿಂದ ನಮ್ಮ ಬಳಗದ ಪ್ರತಿಯೊಬ್ಬರೂ 500 ರೂಪಾಯಿ ಕೊಡಬೇಕೆಂದು ತೀರ್ಮಾನವಾಗಿತ್ತು. 10 ಅಡಿ ಎತ್ತರದ ಗಣಪನನ್ನು ಬುಕ್ ಮಾಡಿಯೂ ಆಗಿತ್ತು.ಹಬ್ಬದ ಹಿಂದಿನ ದಿನ ಗಣಪನನ್ನು ಕೂರಿಸಲಾಗುವಷ್ಟು ದೊಡ್ಡ ಚಪ್ಪರ ಹಾಕಲು ಒಂದು ದಾರಿಯಲ್ಲಿ ವಿಸರ್ಜನೆಯವರೆಗೆ ಪ್ರಯಾಣವನ್ನೇ ರದ್ದುಗೊಳಿಸಲಾಯಿತು.
ಅಂತೂ ಇಂತೂ ಊರಿನ ಕೆಲವೂ ಯಜಮಾನರುಗಳಿಂದಲೂ ಹಣ ಸಂಗ್ರಹಿಸಿಕೊಂಡು 16000 ಕೊಟ್ಟು ಗಣಪತಿಯನ್ನು ತಂದೆವು. ಆ ದೊಡ್ಡ ಮೂರ್ತಿಯನ್ನು ರಸ್ತೆಯಲ್ಲಿದ್ದ ವಿದ್ಯುತ್/ದೂರವಾಣಿ/ಕೇಬಲ್ ವೈರುಗಳ ಜೊತೆ ಎಣಗಾಡಿಕೊಂಡು ತರುವಷ್ಟರಲ್ಲಿ ಸಾಕು ಸಾಕಾಗಿತ್ತು,ಆ ಮಣಬಾರದ ಗಣಪತಿಯನ್ನು ಚಪ್ಪರದಡಿ ಕೂರಿಸಲು ಹರಸಾಹಸ ಮಾಡಬೇಕಾಯಿತು,ಅದು ಮಣ್ಣಿನದ್ದಾಗಿದ್ದರಂತು ಎತ್ತಲಾಗುತ್ತಲೇ ಇರಲಿಲ್ಲ ಬಿಡಿ. ಸಾವಿರಾರು ರುಪಾಯಿಯ ಹೂಹಾರ ಹಾಕಿದ್ದರೂ ಆ ದೊಡ್ಡಮೂರ್ತಿಗೆ ಹೂ ಸಾಕಾಗಿರಲಿಲ್ಲ. ನಾವು ಕಟ್ಟಿದ್ದ ಚಪ್ಪರದಲ್ಲಿ ಅಡ್ಜಸ್ಟ್ ಮಾಡಿಕೊಂಡು ಗಣಪ ಕುಳಿತಿದ್ದ.
ಪ್ರತಿ ಸಲ ಕೂರಿಸುವ ದಿನ ನಮ್ಮ ಹುಡುಗರಲ್ಲೆ ಯಾರಾದರೊಬ್ಬರು ಪೂಜೆ ಮಾಡಿ ಮುಗಿಸುತ್ತಿದ್ದೆವು, ಈ ಸಲ ನಾವು ತಂದಿದ್ದ ಗಣಪತಿ ಶ್ರೇಷ್ಠ ಬಲಮುರಿ ಗಣಪತಿಯೆಂದೂ (ಇಲಿ ಇರಲಿಲ್ಲ),ತುಂಬಾ ಮಡಿವಂತಿಕೆಯಿಂದ ಪೂಜಿಸಬೇಕೆಂದು ಕೆಲವರಿಂದ ತಿಳಿದ ಮೇಲೆ ಪೂಜಾರಿಯೊಬ್ಬರನ್ನು ಕರೆಯಿಸಿ ವಿಧಿ-ವಿಧಾನಗಳಿಂದ ಪೂಜಿಸಲಾಯಿತು.
ಅನ್ನ ಸಂತರ್ಪಣೆ ಮಾಡಿರಿ,ನಾವು ಸಹಾಯಕ್ಕಿರುತ್ತೇವೆ ಎಂದು ಕೆಲವರು ನೆರವಾದಾಗ ತಯಾರಿ ನಡೆಸಿಕೊಂಡೆವು.
5 ದಿನಕ್ಕೆ ಅಂದರೆ ಸೋಮವಾರ ವಿಸರ್ಜನೆ ಮಾಡಬೇಕೆಂದು ನಿರ್ಧಾರವಾಯಿತು. ಭಾನುವಾರ ಸಂಜೆಯಿಂದಲೇ ನಾಳೆಯ ಅನ್ನಸಂತರ್ಪಣೆಗೆ ತಯಾರಿ ಆರಂಭವಾಯಿತು. ಕೆಲವರು ತೆಂಗಿನಕಾಯಿ,ಕೆಲವರು ಅಕ್ಕಿ,ಕೆಲವರು ತರಕಾರಿ ಹೀಗೆ ಒಬ್ಬೊಬ್ಬರು ಒಂದೊಂದು ಪದಾರ್ಥ ನೀಡುತ್ತ ನೆರವಾದರು. ರಾತ್ರಿಯೆಲ್ಲ ಏರಿಯಾದವರೆಲ್ಲರೂ ತಮ್ಮ ಮನೆಕಾರ್ಯದಲ್ಲಿ ಭಾಗಿಯಾಗುವಂತೆ ಭಾಗಿಯಾದರು.

ಅನ್ನ ಸಂತರ್ಪಣೆ ಎಂಬ ಮಹತ್ಕಾರ್ಯ ನಮಗೆ ಮೊದಲಾದ್ದರಿಂದ ಹೇಗೊ ಏನೊ ಎನಿಸಿತ್ತು,ಆದರೆ ಎಲ್ಲರ ಸಹಾಯದಿಂದ ಸೋಮವಾರ ಬೆಳಿಗ್ಗೆ 7.30 ರಿಂದ 11ರವರೆಗೆ ನಡೆದ ಈ ಕಾರ್ಯದಲ್ಲಿ 1000 ಜನರಿಗೆ ಅನ್ನ ಸಂತರ್ಪಣೆ ಮಾಡುವಲ್ಲಿ ಸಫಲರಾದೆವು.
ಸಂಜೆ ವಿಸರ್ಜನೆ ಮಾಡಲು ತಮಟೆ,ನಗಾರಿ,ಬಣ್ಣ,ಪಟಾಕಿ ಎಲ್ಲವೂ ರೆಡಿಯಾಯಿತು. ಬೇಗ ಗಣಪತಿ ಎತ್ತೋಣವೆಂದು ಎಷ್ಟು ಪ್ರಯತ್ನ ಮಾಡಿದರೂ ಪ್ರತಿಸಲದಂತೆ ಈ ಸಲವೂ ತಡವಾಗಿ 8 ಗಂಟೆಯಾಯಿತು. ಇದೇ ಮೊದಲಸಲ ಸೌಂಡ್ ಸಿಸ್ಟಮನ್ನೂ ಕರೆಸಿದ್ದೆವು. ನಮ್ಮೂರಿನಿಂದ 2 ಕಿ.ಮೀ. ದೂರದಲ್ಲಿ ನಾವು ವಿಸರ್ಜನೆ ಮಾಡಬೇಕಿದ್ದರಿಂದ ಹಿರಿಯರೆಲ್ಲರೂ ಬೇಗ ಹೊರಡಿರೆಂದು ಹೇಳುತ್ತಿದ್ದರು. ಅಂತೂ ಇಂತೂ ಮೆರವಣಿಗೆ ಆರಂಭವಾದಾಗ ಆ ವಿಜೃಂಭಣೆ ನೋಡಲು ನಮಗೆರಡು ಕಣ್ಣು ಸಾಲುತ್ತಿರಲಿಲ್ಲ. ನಗರಗಳಲ್ಲಿ ನಮಗಿಂತ ಜೋರಾಗಿ
ಅಬ್ಬರಿಸಿದರೂ ನಮ್ಮೂರಿಗಿದು ಪ್ರಥಮ,ಇಷ್ಟು ಜೋರಾಗಿ ಯಾರೂ ಮಾಡಿರಲಿಲ್ಲ. ಆ ತಮಟೆಗೆ,ಸೌಂಡಿಗೆ ನಮ್ಮ ಕುಣಿತ,ಬಣ್ಣದೋಕುಳಿ.. ಆ ರಾತ್ರಿ ಊರಿಗೆ ಒಂದು ಹೊಸ ಕಳೆ ಬಂದಿತ್ತು.ನಮ್ಮ ಬಳಗದ ಕೆಲವರು ನಮ್ಮೂರಿನ ಬೇರೆ ಏರಿಯಾದ ಹುಡುಗಿಯರನ್ನು ಲವ್ ಮಾಡುತ್ತಿದ್ದುದರಿಂದ ಅವರ ಏರಿಯಾಗೆ ಮೆರವಣಿಗೆ ಹೋದಾಗಂತೂ ಅವನನ್ನು ಎತ್ತಿ ಕುಣಿಸುತ್ತಿದ್ದವು,ಮೆರೆಸುತ್ತಿದ್ದವು.. ಕೆಲ ಹಿರಿಯರು ನಮ್ಮ ಜೊತೆ ಒಂದೆರಡು ಕುಣಿತ ಹಾಕಿದ್ದರು.ಕೆಲವರಂತು ಟೈಟಾಗಿ ಕುಣಿದಿದ್ದರು,ನಮ್ಮ ಈ ಸಂಭ್ರಮಕ್ಕೆ ಕೆಲವರು ಬಾಯಿ ಮೇಲೆ ಬೆರಳಿಟ್ಟುಕೊಂಡಿದ್ದರು.
ಅಂತೂ ಕುಣಿಯುತ್ತ ಕಾಲುವೆಗೆ ಹೊರಟಾಗ ಬರೋಬ್ಬರಿ 1 ಗಂಟೆಯಾಗಿತ್ತು. ಅಷ್ಟು ದೊಡ್ಡ ಗಣಪನನ್ನು ನೀರಿಗಿಳಿಸುವಷ್ಟರಲ್ಲಿ ಸಾಕು ಸಾಕಾಯಿತು. ಮಣ್ಣಿನದಲ್ಲವಾದ್ದರಿಂದ ನೀರಿಗೆ ಬಿಟ್ಟೊಡನೆ ಮುಳುಗದೆ ಕರಗದೆ ಉರುಳಿಕೊಂಡು ಹೋಯಿತು.
ಕ್ಯಾಮೆರ ಕೊಳ್ಳುವ ನನ್ನ ಕನಸು ಇನ್ನೂ ನೆರವೇರಿಲ್ಲವಾದ್ದರಿಂದ ಆ ದೃಶ್ಯವನ್ನೆಲ್ಲ ನಿಮ್ಮೊಡನೆ ಹಂಚಿಕೊಳ್ಳಲಾಗದೆ ಇರುವುದಕ್ಕೆ ಬೇಸರವಿದೆ.

ಎಲ್ಲರಿಗೂ ಗಣಪನ ಕೃಪೆ ಇರಲಿ.

~.~



ಚಿಂತನಾ ಕೂಟ..

!!ಜ್ಞಾನಾರ್ಪಣಮಸ್ತು!!

[ಇದು ಒಂದು ದೊಡ್ಡ ಲೇಖನವೆನಿಸುತ್ತದೆ.. ಸಂಪೂರ್ಣ ಓದಲು ಸಮಯದ ಕೊರತೆ ಇದ್ದವರಿಗಾಗಿ ಮುಖ್ಯವಾದ ಸಾಲುಗಳಿಗೆ ಬಣ್ಣ ತುಂಬಿದ್ದೇನೆ..]




ಅಂದು ಪ್ರಜಾವಾಣಿ ದಿನ ಪತ್ರಿಕೆಯ ಉಪಸಂಪಾದಕರಾಗಿ ಕಾರ್ಯ ನಿರ್ವಹಿಸಿದ್ದ ವಾದಿರಾಜ್ ಅವರು ಮಂಡ್ಯದ ಕಮಲಮಂದಿರಕ್ಕೆ ಆರ್.ಎಸ್.ಎಸ್. ವಿದ್ಯಾರ್ಥಿಗಳೊಂದಿಗೆ ಚಿಂತನಾಕೂಟ ನಡೆಸಲು ಬಂದಿದ್ದರು..
ಒಂದು ಮಾತು ಹೇಳಲೇಬೇಕು.. ಅಂತ ಕೂಟಗಳ ವಿಚಾರಮಂಥನ ನಮ್ಮ(?) ಮನೋಭಾವಕ್ಕೆ ಒಪ್ಪುವಂತಹದಲ್ಲ..
ನಾನು ಆರ್.ಎಸ್.ಎಸ್. ವಿದ್ಯಾರ್ಥಿ ಅಲ್ಲದಿದ್ದರೂ ನನ್ನ ಲೇಖನ ಪತ್ರಿಕೆಯಲ್ಲಿ ಪ್ರಕಟವಾಗಿದ್ದನ್ನು ತಿಳಿದಿದ್ದ ನನ್ನ ಗೆಳೆಯ ಯೋಗೇಶ್ ನನಗೆ ಸಂಪಾದಕರೊಬ್ಬರನ್ನು ಅವರನ್ನು ಭೇಟಿ ಮಾಡಿಸುವುದಾಗಿ ಹೇಳಿ ಕರೆದುಕೊಂಡು ಬಂದಿದ್ದ.., ನನಗೂ ಉಪಯೋಗವಾಗಬಹುದೆಂದು ಬಂದಿದ್ದೆ.
ಸುಮಾರು ೪೦-೫೦ ವಿದ್ಯಾರ್ಥಿಗಳು(ಅಷ್ಟೆ ವಿದ್ಯಾರ್ಥಿಗಳು ಕುಳಿತುಕೊಳ್ಳುವ ಸ್ಥಳವದು) ಸೇರಿದ್ದರು.
ಅಲ್ಲಿದ್ದ ಒಂದು ಕುರ್ಚಿಯ ಮೇಲೆ ಬಂದು ವಾದಿರಾಜ್ ಅವರು ಆಸೀನರಾದರು, ಅವರ ಪರಿಚಯವನ್ನು ಗೆಳೆಯನೊಬ್ಬ ನಮಗೆಲ್ಲ ನೀಡಿದ.
ಕೂಟ ಆರಂಭಿಸಿದ ವಾದಿರಾಜ್ ಅವರು ಮೊದಲಿಗೆ ವಿದ್ಯಾರ್ಥಿಗಳನ್ನು ಕುರಿತು ಏನು ಓದುತ್ತಿದ್ದೀರಿ?,ಹಳ್ಳಿಯಿಂದ ಬರುವವರೆಷ್ಟು?,ನಗರದಲ್ಲೇ ಇರುವವರೆಷ್ಟು?,ಇಲ್ಲಿಗೆ ಓದು ಮುಗಿಸುವವರೆಷ್ಟು, ಮುಂದುವರಿಸುವವರೆಷ್ಟು? ಎಂದು ಕೇಳಿದರು.
ನಂತರ,
'ನಮ್ಮ ದೇಶಕ್ಕೆ ಸ್ವಾತಂತ್ರ ತಂದುಕೊಡಲು ಭಗತ್ ಸಿಂಗ್,ಸಾವರ್ಕರ್, ಹೀಗೆ ಲಕ್ಷ ಜನರು ಶ್ರಮಿಸಿದ್ದಾರೆ ಅವರ ಹೆಸರೆಲ್ಲ ನಿಮಗೆ ತಿಳಿದಿದೆಯೇ..? ಒಂದು ಹಾಳೆಯನ್ನು ನಿಮಗೆ ನೀಡಿ ಸ್ವಾತಂತ್ರ್ಯ ಹೋರಾಟಗಾರರ ಹೆಸರನ್ನು ಬರೆಯಿರಿ ಎಂದರೆ ನಿಮ್ಮಲ್ಲಿ ಯಾರಾದರೂ ಮತ್ತೊಂದು ಹೆಚ್ಚುವರಿ ಹಾಳೆ ಕೇಳುವಿರಾ?' ಎಂದರು, ನಾವೆಲ್ಲಾ ತಲೆತಗ್ಗಿಸಿ ಕೂತೆವು.
'ನಿಮಗೆ ಸ್ವಾತಂತ್ರ್ಯ ತಂದುಕೊಟ್ಟವರ ಹೆಸರೇ ನೆನಪಿಲ್ಲವಲ್ಲ. ಅದೇ ಸಿನಿತಾರೆಯರ ಹೆಸರನ್ನೋ,ಕ್ರಿಕೆಟಿಗರ ಹೆಸರನ್ನೋ ಬರೆಯಿರಿ ಎಂದರೆ ಹೆಚ್ಚುವರಿ ಹಾಳೆಗಳು ಅದೆಷ್ಟು ಬೇಕಾಗುತ್ತವೆಯೋ..?' ಎಂದರು. ನಿಜಕ್ಕೂ ಮಾತುಗಳು ಆತ್ಮಾವಲೋಕನ ಮಾಡುವಂತಿದ್ದವು.

ನಂತರ ಅವರು, 'ನಾವೀಗ ಎಲ್ಲಿದ್ದೇವೆ..?,'ಸ್ವಾತಂತ್ರ್ಯ ಭಾರತದಲ್ಲಿ.', ಹಾಗಾದರೆ ಮತ್ತೊಮ್ಮೆ ನಾವು ಸ್ವಾತಂತ್ರ್ಯ ತಂದುಕೊಡುವ ಅಗತ್ಯವಿಲ್ಲ,ಅದಾಗಲೇ ಬಂದಿದೆ.. ಹಾಗಾದ್ರೆ ನಾವು ದೇಶಭಕ್ತರೆಂದು ತೋರಲು ಏನು ಮಾಡಬೇಕು..?' ಎಂದರು..
ನಾವೆಲ್ಲಾ ಉತ್ತರ ತೋಚದೆ ಮೌನವಾದೆವು.. 'ಪ್ರಜ್ಞಾವಂತರಾಗಿ ಬಾಳಬೇಕು,ನಮಗೆ ಬಂದಿರುವ ಸ್ವಾತಂತ್ರ್ಯಕ್ಕೆ ಅರ್ಥ ತರುವಂತೆ ಬಾಳಬೇಕು,ನಮ್ಮ ಹಕ್ಕುಗಳಿಗೆ ಹೋರಾಡಬೇಕು,ಅದು ಮತ್ತೆ ಬೇರೊಬ್ಬರ ಪಾಲಾಗದಂತೆ ಕಾಪಾಡಬೇಕು..' ಎಂದು ಹೇಳಬೇಕೆಂದು ನನಗನಿಸಿದರೂ ನನ್ನಲ್ಲಿದ್ದ ಅಂಜಿಕೆಯಿಂದ ಸುಮ್ಮನೆ ಕುಳಿತಿದ್ದೆ., ಆಗ ಅಒಂದಿಬ್ಬರು ಸಮಂಜಸವಲ್ಲದ ಉತ್ತರ ನೀಡಿದರು.
ಆಗ ಅವರು,
'ನಿಮಗೇಕೆ ಯೋಧರಾಗಬೇಕು ಎಂದೆನಿಸಲಿಲ್ಲ.. ಎಂದು ಹೇಳಿ ಯೋಧರ ಕುರಿತು ಹೇಳಲು ಮುಂದಾದರು.
ಅಲ್ಲಿ ಅವರಿರುವುದರಿಂದಲೇ ನಾವಿಲ್ಲಿ ಸುರಕ್ಷಿತ., ಭಾರತದ ತುದಿಯಲ್ಲಿ ಸಿಯಾಚಿನ್ ಎಂಬ ಭಾರತದ್ದೆ ಭಾಗವಿದೆ ಕೇಳಿದ್ದೀರಾ.. ಅಲ್ಲಿ ಕಲ್ಪನೆ ಮಾಡಿಕೊಳ್ಳಲಾಗದಷ್ಟು ಚಳಿ ಇರುತ್ತದೆ. ಎಷ್ಟೆಂದರೆ ಮೂತ್ರ ಮಾಡಲು ಮುಂದಾದರೆ ಮೂತ್ರ ನೆಲವನ್ನು ಸಾಕುವ ಮೊದಲೇ ಮಂಜುಗಡ್ಡೆಯಾಗುವಷ್ಟು! ಅಂತಹ ಭಾಗಗಳೆಲ್ಲ ಅವರು ಹೊಂದಿಕೊಂಡು ಹೋಗುತ್ತಾರೆ..',
'ರವಿಬೆಳಗೆರೆಯವರ 'ಹಿಮಾಲಯನ್ ಬ್ಲೆನ್ಡರ್' ಎಂಬ ಪುಸ್ತಕ ಓದಿದ್ದೀರ.. ಓದಿರಿ, ಅದರ ಒಂದು ಭಾಗ ಹೇಳುತ್ತೇನೆ
'ಅದು ಭಾರತ-ಚೀನಾ ಯುದ್ಧ ನಡೆಯುವ ಸಮಯ.. ೭೦೦ ಜನರಿದ್ದ ಒಂದು ಸೇನಾ ತುಕಡಿಯ ಮುಖ್ಯಸ್ಥರಾಗಿದ್ದವರೊಬ್ಬರ ಅನುಭವವಿದು.. ಸೇನಾತುಕಡಿಯನ್ನು ಒಂದೊಂದು ಕಡೆಗೆ ಮತ್ತೆ ಮತ್ತೆ ಕಳುಹಿಸುವಂತೆಯೇ ಇವರ ತುಕಡಿಯನ್ನು ಬೇರೊಂದು ಕಡೆಗೆ ಒಮ್ಮೆ ಸ್ಥಳಾಂತರ ಮಾಡಲಾಯಿತು, ಹೊಸ ಪ್ರದೇಶಕ್ಕೆ ಸೇನೆ ಬಂದ ದಿನ ಸೈನಿಕರಿಗೆ ರೊಟ್ಟಿಯ ಬದಲಾಗಿ ಅನ್ನವನ್ನು ಮಾತ್ರ ನೀಡಲಾಗುತ್ತಿದ್ದುದನ್ನು ಕಂಡ ಮುಖ್ಯಸ್ಥರು 'ಸೈನಿಕರಿಗೆ ಅನ್ನ ಮಾತ್ರ ನೀಡಿದರೆ ಅನ್ನ ತಿಂದು ಯುದ್ಧ ಮಾಡಲಾಗುತ್ತದೆಯೇ.. ಎಂದು ಅಡುಗೆಯವರನ್ನು ಪ್ರಶ್ನಿಸಿದರು. ಆಗ ಒಬ್ಬರು 'ನೋಡಿ ಸ್ವಾಮಿ ೭೦೦ ಜನರಿಗೆ ರೊಟ್ಟಿ ಮಾಡುವುದು ಸುಲಭದ ಮಾತಲ್ಲ,ಹಳೆ ಜಾಗದಲ್ಲಿ ೭೦೦ ಜನರಿಗೆ ರೊಟ್ಟಿ ಬೇಯಿಸುತ್ತಿದ್ದ ನೂರಾರು ಕೆ.ಜಿ. ತೂಕದ ರೊಟ್ಟಿಕಲ್ಲುಗಳನ್ನು ಇಲ್ಲಿಗೆ ತಂದಿಲ್ಲ, ಕಲ್ಲನ್ನು ಹೊತ್ತು ತರುವ ಬದಲಾಗಿ ಅಷ್ಟೆ ತೂಕದ ಮದ್ದು-ಗುಂಡುಗಳನ್ನು ತಂದಿದ್ದೇವೆ.. ಊಟದಲ್ಲಿ ಕೊರತೆಯಾದರೆ ಹೇಗೋ ನಡೆಯುತ್ತದೆಅ ಆದರೆ ಮುಖ್ಯವಾಗಿ ಬೇಕಾದ್ದು ಮದ್ದು-ಗುಂಡಲ್ಲವೇ..!' ಎಂದು ಉತ್ತರಿಸಿದ್ದರು.'

ಈ ಕಥೆ ಹೇಳಿದ ವಾದಿರಾಜ್ ಅವರು 'ಅವರು ಅಲ್ಲಿ ಗಡಿ ಕಾಯ್ತಾರೆ, ನೀವು ದೇಶದೊಳಗೆ ಕಾಯಬೇಕು, ಈಗ ಭಾರತದ ಕೆಲವು ಭಾಗಗಳು ಭಾರತದ ಭಾಗದಂತೆ ಕಾಣುವುದೇ ಇಲ್ಲ.
ಭಾರತದೊಳಗೆ ಸಿಕ್ಕಸಿಕ್ಕಲ್ಲಿ ಹಲವಾರು ಚರ್ಚ್ ಗಳು,ಮಸೀದಿಗಳು ತಲೆಎತ್ತುತ್ತಾ ಮಿನಿ ಪಾಕಿಸ್ತಾನಗಳು,ಮಿನಿ ಇಂಗ್ಲೆಂಡ್ ಗಳು ಹುಟ್ಟಿಕೊಂಡಿವೆ..ಅದನ್ನು ತಡೆಯಬೇಕು ನಮ್ಮ ಜಾಗವನ್ನು ಬೇರೆಯವರು ಆಕ್ರಮಿಸಿಕೊಳ್ಳದಂತೆ ಕಾಪಾಡಬೇಕು. ಇಲ್ಲದಿದ್ದರೆ ಮತ್ತೆ ನಾವು ಬೇರೆಯವರ ಅಧೀನದಲ್ಲಿ ಇರಬೇಕಾಗುತ್ತದೆ.

ಹೀಗೆ ಹೇಳಿ ಭಗತ್ ಸಿಂಗ್ ವಿಷಯ ಎತ್ತಿಕೊಂಡರು.
'ಅಂದಿನ ಕಾಲದಲ್ಲಿ ಭಾರತದ ಶಕ್ತಿ ಎಷ್ಟಿದೆ ಎಂದು ತೋರಿಸಲು ಜನರಿಲ್ಲದ ಕಡೆ ಬಾಂಬುಗಳನ್ನು ಸಿಡಿಸುತ್ತ ಬ್ರಿಟಿಷರಿಗೆ ನಡುಕ ಹುಟ್ಟಿಸುತ್ತಿದ್ದರು, ಹಾಗೊಮ್ಮೆ ಭಗತ್ ಸಿಂಗ್ ಅವರನ್ನು ಬ್ರಿಟಿಷ್ ಸರ್ಕಾರ ಬಂಧಿಸಿ ನೇಣುಗೇರಿಸುವುದಾಗಿ(ನೂರಾರು ಜನರು ವಿರೋಧ ವ್ಯಕ್ತಪಡಿಸಿದರೂ) ಹೇಳಿತು. ಆಗ ಭಾರತೀಯರೆಲ್ಲ ನೇಣುಗೇರಿಸಿದ ನಂತರ ಶವವನ್ನು ಹೊತ್ತು ಲಕ್ಷಾಂತರ ಜನರ ಅಭಿಮುಖದಲ್ಲಿ ಮೆರವಣಿಗೆ ಮಾಡಿ ಅಂತ್ಯಕ್ರಿಯೆ ಮಾಡುವುದಾಗಿ ನಿರ್ಧರಿಸಿಕೊಂಡಿತು. ಇದನ್ನು ತಿಳಿದ ಸರ್ಕಾರದವರು ಮತ್ತೆ ಜನರೆಲ್ಲಾ ಕೂಡಿದರೆ ತಮಗೆ ತೊಂದರೆಯಾಗುತ್ತದೆ ಎಂಬುದನ್ನು ಅರಿತು ಗೊತ್ತು ಮಾಡಿದ್ದ(ಜನರಿಗೆ ತಿಳಿಸಿದ್ದ) ಹಿಂದಿನ ದಿನವೇ ನೇಣು ಹಾಕಲು ನಿರ್ಧರಿಸಿ ಭಗತ್ ಸಿಂಗರ ಕೊನೆ ಆಸೆ ಕೇಳಿದ್ದ ಭಗತ್ ಸಿಂಗರು 'ನನ್ನ ತಾಯಿ ಮಾಡಿದ ರೊಟ್ಟಿ ತಂದುಕೊಟ್ಟರೆ ಅದನ್ನು ತಿಂದು ನೆಮ್ಮದಿಯಿಂದ ಸಾಯುತ್ತೇನೆ ಎಂದರಂತೆ.. ಆಗ ನೇಣಿಗೇರಿಸುವವನು ಯೋಚಿಸಿ 'ಈಗ ೨೦೦ ಕಿಲೋಮೀಟರ್ ದೂರ ಹೋಗಿ ಇವನ ತಾಯಿಯಿಂದ ರೊಟ್ಟಿ ತರುವಷ್ಟರಲ್ಲಿ ಮರುದಿನವಾಗುತ್ತದೆ,ಆಗ ಜನ ಸೇರಿಬಿಡುತ್ತಾರೆ.. ಈಗೇನು ಮಾಡುವುದು..' ಎಂದು ಚಿಂತಿಸುತ್ತಿದ್ದಾಗ, ಭಗತ್ ಸಿಂಗ್ ' ನನ್ನ ತಾಯಿ ಮಾಡಿದ ರೊಟ್ಟಿ ಎಂದರೆ ನೀವು ಆಕೆ ಇರುವಲ್ಲಿಗೆ ಹೋಗಬೇಕಿಲ್ಲ.. ಜೈಲಿನ ಪಕ್ಕ ತೇಲೂರಾಮ( ಜೈಲಿನ ಚರಂಡಿ,ಮೋರಿ ಸುದ್ಧ ಮಾಡುವವನು..) ಮನೆಯಿಂದ ತಂದರೆ ಸಾಕು.. ಯಾಕೆಂದರೆ ಆತ ಮಾಡುವ ಕೆಲಸ ಮಾಡಲು ತಾಯಿಹೃದಯ ಬೇಕು.. ನಾವು ಚಿಕ್ಕವರಿದ್ದಾಗ ನಮ್ಮ ಹೊಲಸನ್ನು ತಾಯಿ ಹೇಸಿಗೆ ಪಟ್ಟುಕೊಳ್ಳದೆ ತೆಗೆಯುತ್ತಿದ್ದಳೋ, ಹಾಗೆ ಹೇಸಿಗೆ ತೆಗೆಯಲು ತಾಯಿ ಹೃದಯವಿದ್ದರೆ ಮಾತ್ರ ಸಾಧ್ಯ, ತೇಲೂರಾಮನಿಗೆ ಅದಿದೆ., ಹಾಗಾಗಿ ಅವನು ನನ್ನ ತಾಯಂತೆಯೇ,ಅವನಿಂದಲೇ ರೊಟ್ಟಿ ಮಾಡಿಸಿ ತನ್ನಿ..' ಎಂದು ಹೇಳಿ ತರಿಸಿಕೊಂಡು ತಿಂದು ನೇಣಿಗೇರಿದರಂತೆ.'

ಎಂದು ಹೇಳಿದ ವಾದಿರಾಜ್ ಅವರು ಒಗ್ಗಟ್ಟಾಗಿ ದೇಶ ಕಾಪಾಡಿ ಎಂದು ಹೇಳಿ ಕೂಟಕ್ಕೆ ತೆರೆ ಎಳೆದರು..
ಅವರು ಹೇಳಿದ ಮಾತುಗಳು ಆತ್ಮಸಾಕ್ಷಿಯನ್ನು ಬಡಿದೆಬ್ಬಿಸುವಂತಿದ್ದವು..

~.

ಸಂತಸ ಅರಳಿದ ಸಮಯ..


~.ಜ್ಞಾನಾರ್ಪಣಮಸ್ತು.~


ಇಂದು ನಾನು ತುಂಬಾ ಉತ್ಸಾಹಿತನಾಗಿದ್ದೇನೆ...
ನಾ ಬರೆದ ಒಂದು ಲೇಖನ ಇಂದು ಉದಯವಾಣಿ ಪತ್ರಿಕೆಯ ಕ್ಯಾಂಪಸ್ ವಿಭಾಗದಲ್ಲಿ ಪ್ರಕಟ ಆಗಿದೆ..
ಸುಮಾರು ದಿನಗಳ ಹಿಂದೆ ಉದಯವಾಣಿ ಪತ್ರಿಕೆಯ 'ರಾಜೇಶ್ ಸರ್ ಅವರು ನನಗೆ ಫೋನಾಯಿಸಿ 'ಗುರು ಅವರೇ ನಿಮ್ಮ ಬ್ಲಾಗ್ ನೋಡ್ದೆ,ತುಂಬಾ ಚೆನ್ನಾಗಿದೆ' ಎಂದಾಗ ನನಗೆ ತುಂಬಾ ಸಂತೋಷವಾಗಿತ್ತು.. ಮತ್ತೆ ಅವರು ಗುರು ನಮ್ಮ ಪತ್ರಿಕೆಯಲ್ಲಿ ಕ್ಯಾಂಪಸ್ ವಿಭಾಗಕ್ಕೆ ನೀವು ಒಂದು ಲೇಖನ ಕೊಡ್ತೀರ..? ಎಂದಾಗ ನಿಜಕ್ಕೂ ನನಗೆ ಗೊಂದಲ ಉಂಟಾಗಿತ್ತು..
ನಾನು ಪತ್ರಿಕೆಗೆ ಲೇಖನ ಬರೆಯಬಲ್ಲನಾ? ಎಂಬ ಪ್ರಶ್ನೆ ಹುಟ್ಟಿಕೊಂಡಿತು..
ಆದರೂ ಆ ಕ್ಷಣಕ್ಕೆ 'ಆಗಲಿ ಸರ್ ಪ್ರಯತ್ನ ಮಾಡುತ್ತೇನೆ.. ನಾನು ಅಷ್ಟಾಗಿ ನಿಮ್ಮ ಪತ್ರಿಕೆ ನೋಡಿಲ್ಲ.. ನೋಡಿದ ನಂತರ ಯಾವ ರೀತಿ ಬರೆಯಬಹುದು ಎಂದು ತಿಳಿದು ನಂತರ ಹೇಳುತ್ತೇನೆ..'ಎಂದಿದ್ದೆ.
ಆ ವಿಷಯವಾಗಿ ನನ್ನ ಗುರು 'ಜ್ಞಾನಮೂರ್ತಿ' ಅವರ ಹತ್ತಿರ ಮಾತನಾಡಿದ್ದೆ..
ಜ್ಞಾನಮೂರ್ತಿಯವರು 'ಒಳ್ಳೆ ಅವಕಾಶ ಗುರು ಸದುಪಯೋಗ ಪಡೆದುಕೋ.. ನಿನ್ನ ಕೈಲಾದಷ್ಟು ಮಟ್ಟಿಗೆ ಪ್ರಯತ್ನ ಮಾಡಿ ಬರೆದು ಕಳಿಸು.. ನನ್ನ ಬರಹಕ್ಕೆ ಯೋಗ್ಯತೆ ಇದ್ದರೆ ಪ್ರಕಟಿಸಿ ಎಂದು ಹೇಳು.. ಬರೆಯದೆ ಇರಬೇಡ..' ಎಂದಿದ್ದರು..
ಬರೆಯಬೇಕೆಂದು ನನಗೂ ಆಸೆಯೇ. ಆದರೂ ನಾನು ಎಷ್ಟು ಪ್ರಯತ್ನಿಸಿದರೂ ಆಗಲಿಲ್ಲ..
ರಾಜೇಶ್ ಅವರು ಮತ್ತೆ ಮತ್ತೆ ಫೋನಾಯಿಸಿ ಕೇಳತೊಡಗಿದರು..
ಒಂದು ದಿನ ಹೇಗಾದರೂ ಬರೆಯಲೇಬೇಕೆಂದು ನಿರ್ಧರಿಸಿ ಕುಳಿತು ಒಂದು ಲೇಖನ ಬರೆದು ಕಳಿಸಿದೆ..
ಅದು ಆಯ್ಕೆ ಆಗಲ್ಲ ಎಂದು ತಿಳಿದಿದ್ದೆ..
ಅದನ್ನು ಕಳಿಸಿದ ಕೆಲವು ದಿನಗಳ ನಂತರ ನೆನ್ನೆ ರಾಜೇಶ್ ಅವರು ನನ್ನ ಲೇಖನ ಆಯ್ಕೆ ಆಗಿದೆ ಎಂದಾಗ ತುಂಬಾನೇ ಖುಷಿಪಟ್ಟೆ..
ನನಗೆ ಉತ್ಸಾಹ ತುಂಬಿ ಈ ಖುಷಿಗೆ ಕಾರಣವಾದ ಜ್ಞಾನಮೂರ್ತಿ ಅವರಿಗೆ ಹಾಗೂ ಉದಯವಾಣಿಯ ರಾಜೇಶ್ ಅವರಿಗೆ ಧನ್ಯವಾದಗಳು..


ನಾನು ರಾಜೇಶ್ ಅವರಿಗೆ ಕಳಿಸಿದ್ದು..:

ಒಬ್ಳು ಲವರ್(ಗರ್ಲ್ ಫ್ರೆಂಡ್) ಇದ್ರೆ ಲೈಫೇ ಕಲರ್ಫುಲ್ ಆಗಿರುತ್ತೆ ಅಂತ ಕೆಲವ್ರು ಹೇಳ್ತಿದ್ದಾಗ ಈ ಲವ್ವು-ಗಿವ್ವುಗಳ ಬಗ್ಗೆ ಯಾವ್ ಇಂಟರೆಸ್ಟ್ ಕೂಡ ಮನೋರಥನಿಗೆ ಬತ್ತಿರ್ಲಿಲ್ಲ..
ಆದ್ರೆ ಕಾಲ ಕಳೆದಂತೆ ಮನೋರಥನ ಮಾನಸಗುಹೆಯಲ್ಲೂ ಪ್ರೀತಿಯ ಪಿಸುಗಾಳಿ ತೇಲಿಬಂದಂತಾಗಿ ಆಸೆಯಲೆಗಳು ಎದ್ದಿದ್ದವು..
'ಪ್ರೀತಿ'ಎಂದು ಹೆಸರಿಟ್ಟುಕೊಂಡು ಜೊತೆಗಾರರು ಮಾಡುತ್ತಿದ್ದ ಅದ್ಯಾವುದೋ ವಿಭಿನ್ನ ಕೆಲಸ ಮನೋರಥನಿಗೂ ಇಷ್ಟವಾಗತೊಡಗಿತು..ಮನಸು ವಿಚಲಿತಗೊಂಡು ತಾ ಒಂಟಿ, ತನಗೊಂದು ಜೋಡಿ ಬೇಕೆಂದು ಹಂಬಲಿಸತೊಡಗಿತು..ತಾನು ಕೂಡ 'ಒಂಟಿಹಕ್ಕಿ' ಪಕ್ಷ ಬದಲಾಯಿಸಿ 'ಜೋಡಿಹಕ್ಕಿ' ಪಕ್ಷ ಸೇರಬೇಕೆಂಬ ತುಮುಲ ಆರಂಭವಾಯಿತು..ಪ್ರೀತಿಯ ಕೊಳದಲ್ಲಿ ತಾನು ಕೂಡ ಬೀಳಬೇಕು, ತನಗೂ ಒಬ್ಬಳು ಗೆಳತಿ ಬೇಕು ಮನ ತವಕಿಸತೊಡಗಿತು..
ಹೀಗೆ ಹಲವಾರು ಆಸೆ ಹೊತ್ತು ಮನೋರಥ್ ಕಣ್ಮುಚ್ಚಿ ಕನಸಿಗೆ ಜಾರಿದ...:
ಪ್ರತಿದಿನ ಕನ್ನಡಿಗೆ ಮೂತಿ ತೋರಿಸಿ ತನ್ನ ಮುಖವನ್ನು ಕನ್ನಡಿಯಲ್ಲಿ ಸರಿ ಮಾಡಿಕೊಂಡು ಯಾರಿಗಾದರೂ ಅಪ್ಪ್ಲಿಕೇಷನ್ ಹಾಕಬೇಕೆಂದು ಕಾಲೇಜ್ ಗೆ ಹೋಗ್ತೀನಂತ, ಹುಡುಗಿಯರು ಹೆಚ್ಚಾಗಿ ಸುಳಿದಾಡುವ ಬಸ್ ಸ್ಟ್ಯಾಂಡ್, ಕಾಲೇಜ್ ಗಳತ್ತ ಜೋಡಿ ಹುಡುಕಲು ಹೋಗೋದು..
ಯಾವ್ದಾದ್ರು ಹುಡುಗಿ ಇವನಿಗೆ ಇಷ್ಟವಾದ್ರೆ ಸಾಕು ಅವ್ಳಿಗೆ ಅಪ್ಪ್ಲಿಕೇಷನ್ ಕೂಡ ತೋರಿಸದೆ ತಾನೇ ಅದನ್ನ ಅಕ್ಸೆಪ್ಟ್ ಮಾಡ್ಕೊಂಡು ಅವಳು ಕೊಡೋ ಒಂದೇ ಒಂದು 'ಸ್ಮೈಲ್' ಗಾಗಿ ತನ್ನ ಎಲ್ಲ ಕೆಲ್ಸ ಬಿಟ್ಟು ಕಾಲೇಜ್ ಗೂ ಹೋಗದೆ ಅವಳ ಹಿಂದೇನೆ ಅಲೆಯೋದು.. ಅವಳ ಹೆಸರನ್ನು ಹೇಗೋ ತಿಳ್ಕೊಂಡು ಅವಳ ನಾಮಜಪ ಮಾಡೋದು..ಸಾದ್ಯವಾದರೆ ಆಕೆ ಹತ್ರ ಮೊಬೈಲ್ ಫೋನ್ ಇದ್ರೆ ಅದರನಂಬರನ್ನು ಕೂಡ ತಿಳ್ಕೊಂಡು ಅವ್ಳಿಗೆ ಹಾಯ್ ಗುಡ್ ಮಾರ್ನಿಂಗ್/ಗುಡ್ ನೈಟ್ ಸ್ವೀಟ್ ಹಾರ್ಟ್ ಅಂತ ಮೆಸೇಜ್ ಮಾಡಲು ಶುರುಮಾಡೋದು.. ಅವ್ಳು ಏನೇ ಮೆಸೇಜ್ ಮಾಡಿದ್ರು ರಿಪ್ಲೇ ಮಾಡದೆ ಇರೋದು..ತಮ್ಮ ಬತ್ತಳಿಕೆಯಲ್ಲಿರುವ ಎಲ್ಲ ರೀತಿಯ ಬಾಣ ಪ್ರಯೋಗ ಮಾಡಿ ಹೇಗೋ ಪರಿಚಯ ಮಾಡ್ಕಂಡು ಮಾತನಾಡ್ಸೋಕೆ ಶುರುಮಾಡೋದು..ಅವಳ ಮುಂದೆ ಡಿಫರೆಂಟ್ ಆಗಿ ಕಾನಿಸ್ಕೊಳೋದು ಇವರದೋ ಮಂಗನಾಟಕ್ಕೆ ಆಕೆ ನಕ್ಬಿಟ್ರೆ ಸಾಕು ಇನ್ನೂ ಚಿತ್ರವಿಚಿತ್ರವಾಗಿ ಕಾಣಿಸಿಕೊಳ್ಳೋಕೆ, ಮಾತಾಡೋಕೆ ಶುರು ಮಾಡಿ ಹೇಗೋ ಅವಳ ಸ್ನೇಹ ಗಿಟ್ಟಿಸಿಕೊಂಡು ನಂತರ ಅದ್ನ ಪ್ರೀತಿ ಮಾಡ್ಬಿಡೋದು..
ಆ ಲವ್ ಓಕೆ ಆದ್ರೆ ಸಾಕು ಲೈಫ್ ಅವತ್ನಿಂದ ಫುಲ್ಲೇ ಡಿಫರೆಂಟ್..
ತನಗೆ ಬಂದ ಎಲ್ಲ ಮೆಸೇಜನ್ನು ಅವಳಿಗೆ ಫಾರ್ವರ್ಡ್ ಮಾಡೋದು,ಮಿಸ್ ಮಾಡದೆ ಗುಡ್ ಮಾರ್ನಿಂಗ್/ಗುಡ್ ನೈಟ್ ಮೆಸೇಜ್ ಮಾಡೋದು.. ಸ್ಲೋ ಸಾಂಗ್ಸ್ ಕೇಳೋಕೆ ಶುರು ಮಾಡೋದು.
ತನಗೂ ಒಬ್ಳು ಲವರ್ ಇದಾಳೆ ಅಂತ ಗೆಳೆಯರ ಜೊತೆ ಹೇಳ್ಕೊಂಡ್ ಹೆಮ್ಮೆಯಿಂದ ಬೀಗೋದು..ಬೆಳಿಗ್ಗೆನೆ ಬೇಗ ಬಂದು ಅವ್ಳು ಬರೋದನ್ನೇ ಕಾಯ್ತಾ ಅವಳ್ ಜೊತೇನೆ ಅವಳ್ ಕಾಲೇಜ್ ವರ್ಗೂ ಹೋಗಿದ್ ಬಂದು ಅವಳ್ ಬರೋವರ್ಗೂ ತಾನು ಕಾಲೇಜ್ ಗೆ ಹೋಗದೇನೆ ಕಾದು ಅವಳನ ಮನೆಗ್ ಕಳ್ಸಿ ದಿನಾಪೂರ್ತಿ ಅವಳ್ ಜೊತೆ ಸಮಯ ಸಿಕ್ದಾಗೆಲ್ಲ ಚಾಟ್ ಮಾಡ್ತ ಕಾಲ ಕಳೆಯೋದು..
ಸಾಧ್ಯ ಆದ್ರೆ ಅವಳ್ ಜೊತೆ ಸಿನಿಮಾ, ಪಾರ್ಕು ಅಂತ ಸುತ್ತಾಡೋದು..
ಹೀಗೆ ಕನಸು ಕಾಣುತ್ತ ತೇಲುತ್ತಿದ್ದ ಮನೋರಥನ ಕನಸಿನ ಸ್ಟೋರಿ ಮುಗಿಯುವಷ್ಟರಲ್ಲಿ ಕಣ್ ತೆರೆದು ವಾಸ್ತವಕ್ಕೆ ಬಂದಿದ್ದ..
ಈಗ ಮನೋರಥ ತಾ ಕಂಡಿದ್ದ ಕನಸಿನ ಕಥೆಗೆ ಮುಕ್ತಾಯ ನೀಡಲು ಕ್ಲೈಮಾಕ್ಸ್ ಕುರಿತು ಯೋಚ್ನೆ ಮಾಡುತ್ತಿದ್ದಾಗ ಆತನಿಗೆ ಕ್ಲೈಮ್ಯಾಕ್ಸ್ ಸಿಕ್ಕಿದ್ದವು..
ಒಂದು ಕ್ಲೈಮ್ಯಾಕ್ಸ್ನಲ್ಲಿ ನಾಯಕ ನಾಯಕಿ ಮಿಸ್ ಕಾಲ್ ಕೊಟ್ಟಾಗೆಲ್ಲಾ ಕಾಲ್ ಮಾಡಿ,ಅವ್ಲ್ಗೊಸ್ಕರ ಸಾಲಗಾರನಾಗೋದು.. ಆಕೆಯೂ ಅವನನ್ನ ಚೆನ್ನಾಗಿ ಬಳಸಿಕೊಂಡು ಬುದ್ದಿ ಕಲ್ಸೋದು.. ಮಿಸ್ ಕಾಲ್ ಮಾಡ್ದಾಗ ಕಾಲ್ ಮಾಡದಿದ್ರೆ ಸಾಕು ಅವ್ರ ಸಂಬಂಧ ಕಟ್...
ಇನ್ನೊಂದು ಕ್ಲೈಮ್ಯಾಕ್ಸ್ನಲ್ಲಿ ಡೀಸೆಂಟಾಗಿ ಇಬ್ರೂ ಪ್ರೀತ್ಸಿ ಕೊನೇಲಿ ಒಂದಾಗೋಲ್ಲ ಅಂತ ಗೊತ್ತಾದ್ಮೇಲೆ ಫ್ರೆಂಡ್ಸ್ ಆಗಿ ಇರೋಣ ಅನ್ಕಂಡು ಇಬ್ರು ಸಮಾಧಾನ ಮಾಡ್ಕೊಂಡು ಅತ್ತುಬಿಡೋದು..
ಮತ್ತೊಂದು ಕ್ಲೈಮ್ಯಾಕ್ಸ್ನಲ್ಲಿ ವಯಸ್ಸಿನ ತನುವಾಸೆಗೆ ಪ್ರೀತಿಸಿ ಅವಶ್ಯಕತೆ ಪೂರೈಸಿಕೊಂಡು ಕಿಸಕ್ ಅಂತ ನಕ್ಕು ದೂರವಾಗೋದು..
ಮಗದೊಂದು ಕ್ಲೈಮ್ಯಾಕ್ಸ್ನಲ್ಲಿ ಇಬ್ರೂ ಒಂದಾಗಲೇಬೇಕು ಎಂದುಕೊಂಡರೂ ಮನೆಅಯವರ/ಸಮಾಜದ ಒಪ್ಪಿಗೆ ಸಿಗದಿದ್ದಾಗ ಹೇಡಿಗಳಂತೆ ಸಾಯೋದು ಅಥವಾ ಧೃತಿಗೆಡದೆ ಎಲ್ಲರನ್ನೂ ಎದುರುಹಾಕಿಕೊಂಡು ಬಾಳುವೆವು ಎಂದುಕೊಂಡು ಓಡಿಹೋಗಿ ಹೊಸಬಾಳು ಆರಂಭಿಸೋದು..
ಮನೋರಥನಿಗೆ ಹೊಳೆದ ಈ ಕ್ಲೈಮ್ಯಾಕ್ಸ್ಗಳು ಯಾವುವು ಸೂಕ್ತವಲ್ಲ ಎಂದೆನಿಸಿ ಇದೆಲ್ಲ ಗೋಜಿಗೆ ಸಿಕ್ಕಿಸುವ ಪ್ರೀತಿ,ಅದನ್ನ ನಂಬಿದರೆ ಹಾಳಾಗೋದೆ ಹೆಚ್ಚು,ಎಲ್ಲರಿಗೂ ದ್ರೋಹ ಮಾಡಬೇಕಾಗುತ್ತದೆ... ಎಂದು ಅವನ ಪ್ರೀತಿಯ ಆಸೆ ಕೈಬಿಟ್ಟು ಬೊಮ್ಮ ನಿರ್ಧರಿಸಿದ ಬಾಳಸಂಗಾತಿ ಬರುವವರೆಗೆ ಕಾದು ಅವಳನ್ನೇ ಪ್ರೀತಿ ಮಾಡೋಣ ಎಂದುಕೊಂಡು ತನ್ನ ಕೆಲಸದ ಕಡೆಗೆ ಗಮನಹರಿಸಿದ..

ಪ್ರಕಟವಾಗಿರುವುದರ ಸ್ಕ್ಯಾನ್ ಕಾಪಿ:

~.~





ಈ ಒಂದು ವರ್ಷದಲ್ಲಿ..




~.ಇಂದು ನನ್ನ 'ಮನಸಿನಮನೆ'ಗೆ ಒಂದು ವರ್ಷ ತುಂಬಿದ ಸಂಭ್ರಮ..

ಮೊದಲನೆಯದಾಗಿ ಈ ಶುಭಸಂದರ್ಭದಲ್ಲಿ ನನ್ನ ಬ್ಲಾಗಿನ ಪಯಣಕ್ಕೆ ಕಾರಣಕರ್ತರಾದ'ಜ್ಞಾನಮೂರ್ತಿ.ಟಿ.' ಎಂಬ ಓರ್ವ ಭಾವಜೀವಿಗೆ ಮನತುಂಬಿ ನನ್ನ ಹೂನಮನಗಳನ್ನುಅರ್ಪಿಸುತ್ತೇನೆ..

ಅವರ ಮಾರ್ಗದರ್ಶನದಲ್ಲಿ ಮೊದಲಿಗೆ ನಾನು 'ಬಲಿಪಶು' ಎಂಬ ಒಂದು ಬ್ಲಾಗನ್ನು ರಚಿಸಿದ್ದೆ..

ಬ್ಲಾಗ್ ಪರಿಚಿತವಾಗಬೇಕೆಂಬ ಆಸೆ ಕೆಲವರಿಗಿರುವಂತೆ ನನಗೂ ಇತ್ತು..

ಸಮಯದ ಅಭಾವದಿಂದಲೂ,ಭಾವಬಂಧನದಲ್ಲಿ ಸಿಲುಕಿ ಕ್ರಿಯಾಶೀಲತೆ ಕಳೆದುಕೊಂಡಿದ್ದರಿಂದಲೂನನ್ನ 'ಬಲಿಪಶು' ಬ್ಲಾಗ್ ಸಾಗರದ ಅಭಿವೃದ್ಧಿ ಪಥದಲ್ಲಿ ಆಮೆನಡಿಗೆಯಲ್ಲಿಸಾಗುತ್ತಿತ್ತು..

ನನ್ನ 'ಬಲಿಪಶು'ವಿಗೆ ಮೊದಲಾಗಿ ಪರಿಚಿತವಾದ ಬ್ಲಾಗಿಗರು- ಶಿವಶಂಕರ ಯಳವತ್ತಿ..ಬ್ಲಾಗ್ ಕುರಿತಾಗಿ ಕೆಲವು ವಿಷಯಗಳನ್ನು ನನ್ನ ಅರಿವಿಗೆ ತಂದ ಅವರಿಗೆ ನನ್ನಧನ್ಯವಾದಗಳನ್ನು ಅರ್ಪಿಸುತ್ತೇನೆ..

ಆ ಸಮಯದಲ್ಲಿ ನನ್ನ ಜೀವನದಲ್ಲಿ ಬಿರುಗಾಳಿಯೆದ್ದು ಮೈಮನಗಳ ಸುಳಿಯಲ್ಲಿ ಸಿಲುಕಿ ಹಲವುತಿರುವಿನ ದಾರಿಗಳಲ್ಲಿ ನಾನು ಸೋಲುಂಡ ಕಾರಣ ನಾನು ಬ್ಲಾಗ್ ಕಡೆ ಗಮನ ಹರಿಸಲಿಲ್ಲ..[ಆಸ್ತಿಕನಾದ ನಾನು ನನ್ನ ಆ ದು(ಪರಿ)ಸ್ಥಿತಿಗೆ ನನಗಿದ್ದ 'ರಾಹುದೆಸೆ'ಯೇ ಕಾರಣವೆಂದುಹೇಳುತ್ತೇನೆ..(ಜಾತಕ ಆಧಾರದ ಮೇಲೆ)]

ಅಲ್ಲಿಗೆ ನನ್ನ 'ಬಲಿಪಶು'ವಿನ ಪಯಣ ಸಂಪೂರ್ಣವಾಗಿ ನೆಲಕಚ್ಚಿತು..


ಕಾಲಕ್ರಮೇಣ ನನಗೆ ಬ್ಲಾಗ್ ಬಗೆಗಿದ್ದ ಆಸಕ್ತಿ ಕಡಿಮೆಯಾಗದೇ ಇದ್ದ ಕಾರಣ ದೀರ್ಘಬಿಡುವಿನ ನಂತರ ('ಗುರುದೆಸೆ' ಆರಂಭವಾದ ಮೇಲೆ..) ಬ್ಲಾಗ್ ಕುರಿತು ಹಲವಾರುಮಹದಾಸೆಗಳನ್ನು ಹೊತ್ತು 'ಮನಸಿನಮನೆ'ಯನ್ನು ಆರಂಭಿಸಿದೆ..

ಬ್ಲಾಗ್ ಚಿರಪರಿಚಿತವಾಗಿಸಬೇಕೆಂಬ ಆಸೆ ನನ್ನನ್ನು ದಿನೇ ದಿನೇ ಆವರಿಸುತ್ತಿತ್ತು..

ಕಾರಣಾಂತರಗಳಿಂದ ಕೇವಲ ಹುಣ್ಣಿಮೆ-ಅಮಾವಾಸ್ಯೆಗಳಲ್ಲಿ ಮಾತ್ರ ನನ್ನ 'ಮನಸಿನಮನೆ'ಯನ್ನುನವೀಕರಿಸುತ್ತಿದ್ದೆ..

"ಯಾವ ಬ್ಲಾಗಿಗರೂ ತಾವಾಗಿಯೇ ನಿನ್ನ ಬ್ಲಾಗನ್ನು ಹುಡುಕಿಕೊಂಡು ಬರುವುದಿಲ್ಲ.. ಅವರಬ್ಲಾಗುಗಳಿಗೆ ನೀನು ಪುನಃ-ಪುನಃ ಭೇಟಿ ಕೊಡುತ್ತ ನಿನ್ನ ಹೆಜ್ಜೆಗುರುತುಗಳನ್ನು ಅಲ್ಲಿಉಳಿಸಿ ಬರುತ್ತಿರಬೇಕು..

ಅವರ ಬ್ಲಾಗಿನ ಹಿಂಬಾಲಕರ ಪಟ್ಟಿಯಲ್ಲಿ ನೀನು ಸೇರಿಕೊಳ್ಳಬೇಕು..

ಹೀಗಾದಲ್ಲಿ ಮಾತ್ರ ಅವರಿಗೆ ನಿನ್ನ ಅಸ್ತಿತ್ವದ ಅರಿವಾಗಿ ಅವರು ನಿನ್ನ ಬ್ಲಾಗಿನಕಡೆಗೆ ಬರುತ್ತಾರೆ..

ಆಗ ಮಾತ್ರ ನಿನ್ನ ಬ್ಲಾಗು ಪರಿಚಿತವಾಗಲು ಸಾಧ್ಯ''ಎಂದು ಗುರುಗಳು ಕಿವಿಮಾತು ಹೇಳಿದರು..

ಅಂತೆಯೇ ನಾನು ನೂರಾರು ಬ್ಲಾಗುಗಳನ್ನು ಜಾಲಾಡಿ ಅಲ್ಲಿ ನನ್ನ ಹೆಜ್ಜೆಗುರುತನುಳಿಸಿಬರಲು ಶುರುಮಾಡಿದೆ..

ನನ್ನ ಜಾಲಾಟದಲ್ಲಿ ಕಂಡ ಬ್ಲಾಗುಗಳಲ್ಲಿ ನಾನು ವಿಧವಿಧದ ಬಣ್ಣದಕ್ಷರಗಳನ್ನು ಕಂಡಿದ್ದೇನೆ..:

*ಸಮಾಜದ ಸ್ಥಿತಿ-ಗತಿಯನ್ನು ವಿಮರ್ಶಿಸಿ ಬರೆಯುವ ಉತ್ತಮ ಸಕಾಲಿಕ ಲೇಖನಗಳು..

*ಎಲ್ಲೋ ಅಡಗಿದ್ದ ನಮ್ಮ ಕಣ್ಣಿಗೇ ಬೀಳದ ಹಲವು ಅಮೂಲ್ಯ ಪುರಾಣೇತಿಹಾಸಗಳ ವಿಷಯವನ್ನುನಮ್ಮ ಜ್ಞಾನದರಿವಿಗೆ ತರುವ ಉತ್ತಮ ಲೇಖನಗಳು..

*ಪ್ರೇಮ-ಪ್ರೀತಿ-ವಿರಸ-ಗೆಳತಿ-ಗೆಳೆಯ-ಸನಿಹ ಈ ವಸ್ತುಗಳ ಸುತ್ತಲೇ ಸುತ್ತುತ್ತ ಬರೆದ(ಭಗ್ನ)ಕವಿತೆ(ವ್ಯಥೆ)ಗಳು..

*ಅವರವರ ಕಥೆಯನ್ನೇ ಬರೆದ ಕಥಾನಕಗಳು..

*ಅವರು ಕೈಗೊಂಡಿದ್ದ ಪ್ರವಾಸದ ಕುರಿತು ಬರೆದು ಪ್ರವಾಸೀಯ ತಾಣಗಳ ಪರಿಚಯಿಸುವ ಕಥನಗಳು..

*ನಾಲ್ಕಾರು ಸಾಲಿನಲ್ಲಿ ನಗು ತುಂಬಿಸಿ ಬರೆದ ಹನಿಕವನಗಳು..

*ವಿಶೇಷ ರೀತಿಯ ಕಾದಂಬರಿಗಳು..

*ಪ್ರಕೃತಿ ವರ್ಣಿಸಿ ಬರೆದ ಸೌಂದರ್ಯ(ಕವಿ)ತೆಗಳು..

*ರುಚಿರುಚಿ ತಿಂಡಿ ತುಂಬಿದ ಅಡುಗೆಮನೆಯ ಪರಿಚಯಿಸುವ ಒಂದೆರಡೇ ವಿಶೇಷ ಅಭಿರುಚಿ ಲೇಖನಗಳು..

*ಕರುನಾಡಲ್ಲಿ ಕೊಲೆಯಾಗುತ್ತಿರುವ ಕನ್ನಡದ ಚಿತ್ರವಿಚಿತ್ರಗಳು..

*ಅಚ್ಚರಿ ತರಿಸುವ ವಿಸ್ಮಯಕಾರಿಗಳು..

*ರಸಿಕ ಮಹಾಮಣಿಗಳ ರಸಿ-ಕತೆಗಳು..

(ನನ್ನ ಬ್ಲಾಗು ಈ ಮೇಲಿನ ಯಾವುದಾದರೂ ಗುಂಪಿಗೆ ಸೇರುವುದೇ..)

ಕೊನೆಗೂ ನನ್ನ ಜಾಲಾಟದ ಶ್ರಮ ವ್ಯರ್ಥವಾಗದೆ ಗುರುಗಳು ಹೇಳಿದ್ದಂತೆ ಅನೇಕ ಬ್ಲಾಗಿಗರುನನ್ನ 'ಮನಸಿನಮನೆ'ಗೆ ಬರಲು ಶುರುವಾದರು..

ಹಲವಾರುಬ್ಲಾಗಿಗರ ನೆಂಟಸ್ತಿಕೆ ನನ್ನ 'ಮನಸಿನಮನೆ'ಗೆ ಇರುವುದು ನನಗೆ ಖುಷಿ ತಂದಿದೆ..(ಹೆಸರು ನಮೂದಿಸಿಲ್ಲ..)

ಈ ಬ್ಲಾಗ್ ಆರಂಭಿಸಿದ ಮೇಲೂ ಕೆಲವೊಮ್ಮೆ ಕಾರಣಗಳಲ್ಲದ ಕಾರಣ ನೀಡಿ ಬ್ಲಾಗ್ ನವೀಕರಿಸದೆಖಾಲಿ ಬಿಟ್ಟಿದ್ದಕ್ಕೆ ಕ್ಷಮೆ ಇರಲಿ..

ಕೆಲವು ಬ್ಲಾಗಿಗರ 'ಮನೆ'ಗೆ ಎಷ್ಟು ಸಲ ಭೇಟಿ ಕೊಡುತ್ತಲಿದ್ದರೂ ಅವರು ನನ್ನ ಬ್ಲಾಗಿನಕಡೆ ತಿರುಗಿಯೂ ನೋಡದೆ ಇರುವುದು ತುಸು ಬೇಸರದ ಸಂಗತಿಯಾಗಿದೆ.. ಅದಕ್ಕೆ ಕಾರಣತಿಳಿದುಬರುತ್ತಿಲ್ಲ..

ನನಗೆ ಅವರ ಬ್ಲಾಗ್ ಕಾಣದೆ ನಾನು ಅವರ ಬ್ಲಾಗಿಗೆ ಭೇಟಿ ಕೊಡದಿದ್ದರೂ ಸ್ವತಃ ನನ್ನಬ್ಲಾಗಿಗೆ ಬಂದು ಪ್ರೋತ್ಸಾಹ ನೀಡುತ್ತಿರುವ ಹಲವಾರು ಮಿತ್ರವರ್ಯರಿಗೆ ವಿಶೇಷವಾಗಿಧನ್ಯವಾದಗಳು..


ಬ್ಲಾಗಿನ ಬಗ್ಗೆ ನನಗೆ ಇನ್ನೂ ಸಂಪೂರ್ಣವಾಗಿ ತಿಳುವಳಿಕೆ ಇಲ್ಲ..
ಅದಕ್ಕಾಗಿ ಕೆಲ ಮಿತ್ರ ಬ್ಲಾಗಿಗರಿಂದ ಮಾಹಿತಿ ಸಂಗ್ರಹ ಮಾಡಿಕೊಳ್ಳಬೇಕೆಂಬ ಹಂಬಲದಿಂದ,ನನಗೆ ಕೀಳಿರಿಮೆ ಉಂಟಾಗಬಹುದು ಎಂಬ ಕೊಂಕಿದ್ದರೂ,ಅವರಿಗೆ ನನ್ನ ಸಂಪರ್ಕಕೊಂಡಿ ನೀಡಿಅವರ ಸಂಪರ್ಕಕ್ಕಾಗಿ ಹಾತೊರೆದೆ..

ಇದರಿಂದ ಏನೂ ಪ್ರಯೋಜನವಾಗದೆ ನಾನು ಸೋತು ಸುಣ್ಣವಾದೆ..

ಇದರ ಕುರಿತು ಸ್ವಲ್ಪ ಬೇಸರವಿದೆ..

ಇಷ್ಟು ಮಾತ್ರ ಹೊರತುಪಡಿಸಿ ಈ ಒಂದುವರ್ಷದ ನನ್ನ ಬ್ಲಾಗಿನ ಪಯಣ ಸಂತೋಷ ತಂದಿದೆ..

ಈಸಂತೋಷಕ್ಕೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಪ್ರೋತ್ಸಾಹ ನೀಡಿದ ಎಲ್ಲರಿಗೂ ನನ್ನ ಅನಂತಅನಂತ ಧನ್ಯವಾದಗಳು..


ನಾನು ಇನ್ನೂ ಬ್ಲಾಗ್ ಬಗ್ಗೆ ತಿಳಿದುಕೊಳ್ಳುವುದು ಬೇಕಾದಷ್ಟಿದೆ.. ತಿಳಿದುಕೊಳ್ಳಲುನಿಮ್ಮ ಸಹಕಾರ ಬೇಕಿದೆ..

ಇನ್ನೂ ಹೆಚ್ಚಿನ ಪ್ರೋತ್ಸಾಹ ನೀಡುತ್ತಿರಿ ಎಂದು ಮತ್ತೊಮ್ಮೆ ಎಲ್ಲರಿಗೂ ಮನತುಂಬಿ ವಂದಿಸುತ್ತಾ....~
~.~
Related Posts Plugin for WordPress, Blogger...