ಕೂಗೊಮ್ಮೆ ಪ್ರಾಣಪಕ್ಷಿಯ!!

!!ಜ್ಞಾನಾರ್ಪಣಮಸ್ತು!!

~.~


ಹೇ ಭಗವಂತಾ..
ಹೊಲಿ ನನ್ನ ತುಟಿಗಳನು
ಒಣಮಾತು ಉದುರದಿರಲಿ..
ಮೂಕಮನಸು ನನಗಿರಲಿ..

ಕತ್ತಲಾಗಿಸು ನನ್ನೀ ನೋಟವ
ಕಳ್ಳನೋಟ ಇಣುಕದಿರಲಿ..
ಶೂನ್ಯ ನೋಟವೆ ನನಗಿರಲಿ..

ಕೊಟ್ಟು ಬಿಡೋ ಕಿವುಡುತನವ
ತೆಗಳಿಕೆಗಳು ಕಿವಿ ತಟ್ಟದಿರಲಿ..
ಹೊಗಳಿಕೆಗಳೂ ಮುಟ್ಟದಿರಲಿ..

ಕಟ್ಟಿಬಿಡು ಈ ತೋಳುಗಳ
ಆಸರೆಗೆ ಚಾಚದಿರಲಿ..
ಆಸೆಯ ಬಾಚಿ ಅಂಗಲಾಚದಿರಲಿ..

ನಿಷ್ಕ್ರಿಯಗೊಳಿಸು ನನ್ನ ನಡೆಯ
ಕಾಣದ ಕಡೆ ಹೆಜ್ಜೆ ಹೊರಡದಿರಲಿ..
ನೆಮ್ಮದಿ ಹರಸಿ ಸಾಗದಿರಲಿ..

ಕಲ್ಲಾಗಿಸೋ ಈ ಎದೆಯ
ಕಷ್ಟಗಳಿಗೆ ಕುಗ್ಗದಿರಲಿ..
ಮರುಗಿ ಕರಗದಿರಲಿ..

ಆರಿಸಿಬಿಡು ಹೃದಯದೀಪವ
ಪ್ರೀತಿ ಪ್ರೇಮಗಳು ಬೆಳಗದಿರಲಿ..
ಬಾಳೇ ಹೊಳೆಯದಿರಲಿ..

ಮುಚ್ಚಿಬಿಡೋ ಕಣ್ ಕೊಡವ
ಕಂಬನಿ ತುಂಬಿ ತುಳುಕದಿರಲಿ..
ನೋವು ಸೋರದಿರಲಿ..

ಹೇ ಭಗವಂತಾ..
ಕೂಗೊಮ್ಮೆ ಈ ಪ್ರಾಣಪಕ್ಷಿಯ
ಮಲಗಿ ಬದುಕ ಕನಸ ಕಾಣದಿರಲಿ..

ಹೇ ಭಗವಂತಾ...
ಕೂಗೊಮ್ಮೆ ಪ್ರಾಣಪಕ್ಷಿಯ!!

~-~


Related Posts Plugin for WordPress, Blogger...