ಯೌವ್ವನದ ನಾಕ..!

[ಯೌವ್ವನ ನರಕವಾಗುವ ಪರಿಯನ್ನು ನನಗೆ ತಿಳಿದಷ್ಟು ಶಬ್ಧಗಳಲ್ಲಿ ಹಿಡಿದಿಡಲು ಪ್ರಯತ್ನಿಸಿದ್ದೇನೆ...]


ಕತ್ತಲೆಮನೆಯಾಗಿದೆ ಯೌವ್ವನದ ನಾಕ
ಆಸೆಪತಂಗಕಿದು ಬೆಲ್ಲದ ಬಿಸಿಪಾಕ..
ಮನಸು ಅಂದು ತಿಳಿ ತಿಳಿ ಹಾಲು
ಯೌವ್ವನದ ಹನಿ ಆ ಹಾಲಿಗಿಳಿಯಲು
ಆಸೆ ತರಂಗಗಳು ಹೊಮ್ಮುತಿರಲು
ಕಾಡಿವೆ ಅರಿಷಡ್ವರ್ಗಗಳ ಕವಲು..
ಏಕಾಂತವ ಪದೆಪದೆ ಬಯಸಲು
ತನುಮನಕೀಗ ಏಕಾಂತವೆ ಸ್ವರ್ಗವು..
ಕಾಡುತಿರಲು ವಿರಹವು
ಮೂಡುತಿರಲು ಸಿಹಿನೋವು
ಜೇನು ತುಂಬಿದ ಕುಸುಮಗಳ
ಕೆರಳಿಸಿ ಅರಳಿಸುವ ಆಸೆ..
ಆಸೆಪತಂಗಕೆ ಸಿಹಿಪಾಕಕಾದರೂ
ಅಂಟಿ ಕ್ಷಣಿಕ ಸುಖಿಯಾಗುವ ಆಸೆ
ಸುಡುವ ಬಿಸಿಜ್ವಾಲೆಯನೆ ಬಳಸಿ
ತಂಪುಗಾಳಿಯ ಬಿಸಿಯುಸಿರಾಗಿಸುವ ಆಸೆ..
ಸಾಗುತಿರಲು ಕಾಲಬ್ರಹ್ಮನು
ನೂಕುತಿರಲು ಜೀವನಚಕ್ರ
ನನ್ನ ಜೀವನದ ಹಾದಿಗಳು
ಮುಂದೆ ಹೆಜ್ಜೆ ಇಟ್ಟು ಸವೆಸಲಾಗಿ
ಕುಸಿದುಹೋಗಿ ಮರೆಯಾಗುತಿವೆ
ಮತ್ತೊಮ್ಮೆ ತಲುಪಲಾಗದಂತೆ ತಿರುಗಿ..
ನಾಗಾಲೋಟದಲ್ಲಿ ಓಡುತಿರುವ
ಹುಚ್ಚುಕುದುರೆಗಳ
ಮನೋರಥವ ನಿಯಂತ್ರಿಸಲು
ಸಾರಥಿಯಾಗಬೇಕಿದೆ ನಾ..
ಮದವೇರಿ ಮೈಮರೆಯದೆ..
ಮನಸಿನಮನೆಗೆ ತಂಗಲು ಬರುವ
ಮೋಹಕಮಾಯೆಗಳ
ಮುಚ್ಚಿ ಬಾಗಿಲ ಹಿಂದೆ ನಿಂತು
ಹೋಗೆನ್ನಬೇಕಿದೆ ನಾ..
ಎದೆಹಾಸಿ ಸ್ವಾಗತಿಸದೆ..
.~~-~~.~~-~~.~~-

~.~-~
Related Posts Plugin for WordPress, Blogger...