~.~
ವಂಶವೃಕ್ಷ ಚಿತ್ರ ಬಂತು. ಚೆನ್ನಾಗಿಯೂ ಇತ್ತು. ಅದರಲ್ಲಿ ಪ್ರೊಫೆಸರರ ಮಗನಾಗಿ ವಿಷ್ಣುವರ್ಧನ್ ರನ್ನು ಆಯ್ಕೆ ಮಾಡಿದ್ದರು ಪುಟ್ಟಣ್ಣ. ಆಗ ಹುಡುಗನ ಹೆಸರು ಕುಮಾರ್. ಅದು ಭಜಬೆಣ್ಣೆ ಹೆಸರು. ಮನೆಯವರು ಈಗಲೂ ಅದೇ ಹೆಸರಿನಿಂದ ಕರೆಯುತ್ತಾರೆ. ಅದರಲ್ಲಿ ಹುಡುಗನಿಗೆ ಮಾತೇ ಇಲ್ಲ. ಇನ್ನೂ ಕೇವಲ ಹದಿನೆಂಟು ವರ್ಷಗಳಿರಬಹುದು. ಬಿ ವಿ ಕಾರಂತರು ಪ್ರೊಫೆಸರಾಗಿದ್ದರು. ಉಮಾ ಶಿವಕುಮಾರ್ ಮೊಟ್ಟ ಮೊದಲಾಗಿ ತೆರೆಯ ಮೇಲೆ ಕಾಣಿಸಿಕೊಂಡದ್ದು. ಪ್ರೊಫೆಸರರ ಥೀಸಿಸ್ ಬರವಣಿಗೆಯ ಸಹಾಯ ಮತ್ತು ಪ್ರೇಯಸಿ, ಅಮಾಯಕತನದ ಸಂಪ್ರದಾಯ ಶೀಲೆ ಪತಿವ್ರತೆ ಮಡದಿಯಿಂದ ದೂರಾಗಿದ್ದರು ಪ್ರೊಫೆಸರ್, ಡಾಕ್ಟರೇಟ್ ಬಂತು. ಕೆಲವೇ ದಿನಗಳಲ್ಲಿ ಪ್ರೊಫೆಸರ್ ಏನೋ ಕಾಯಿಲೆಯಿಂದ ತೀರಿಕೊಂಡರು. ಪ್ರೇಯಸಿ ತನ್ನೂರಿಗೆ ಹಿಂದಿರುಗುವ ಸಮಯ. ಮಕ್ಕಳನ್ನು ಪಡೆಯದ ಆಕೆಗೆ ಪ್ರೊಫೆಸರರ ಮಗನ ಕಂಡರೆ ಮಹಾ ಪ್ರೀತಿ. ಆದರೆ ಒಂದು ದಿನವೂ ಈ ಮಗ ತಂದೆಯನ್ನು ಕಾಣಲು ಹೋದವನಲ್ಲ. ತನ್ನ ತಾಯಿಯಂಥ ಮುಗ್ದ ಮಹಿಳೆಯನ್ನು ದೂರ ಮಾಡಿ ಈ ವಯಸ್ಸಿನಲ್ಲಿ ಯಾವುದೋ ದೇಶದ ಹೆಣ್ಣು ಬೇಕಾಯಿತೇ ತನ್ನ ತಂದೆಗೆ ! - ಅನ್ನುವ ರೋಷ.
ಆಕೆ ಊರು ಬಿಡುವ ಮುನ್ನ ಪ್ರೊಫೆಸರ ಮಗನನ್ನು ಕರೆದು ಕಂಬನಿ ದುಂಬಿ ಹೇಳುತ್ತಾಳೆ.
"ಬಾ ಮಗು, ನನಗಂತೂ ಮಕ್ಕಳಿಲ್ಲ. ನೀನೆ ನನ್ನ ಮಗು. ಪ್ರೊಫೆಸರರ ಥೀಸಿಸ್ ಬರೆಯುವ ಸಹಾಯಕಿಯಾಗಿ ನಾ ಬಂದೆ. ನನ್ನ ಕರ್ತವ್ಯ ಪೂರೈಸಿತು. ನಿನ್ನ ತಂದೆಯ ಅನೇಕ ವರ್ಷಗಳ ಬಯಕೆ, ಪರಿಶ್ರಮ ಈ ಡಾಕ್ಟರೇಟ್ ಪದವಿ, ಈ ಗ್ರಂಥಗಳು ಅವರು ನಿನಗಾಗಿ ಇಟ್ಟಿರುವ ಆಸ್ತಿ ಇವೇ ಮಗು. ಇದನ್ನ ತೆಗೆದಿಕೋ. ನಾವು ಜೊತೆಯಾಗಿ ಬಂದೆವು. ಈಗ ಒಂಟಿಯಾಗಿ ಊರಿಗೆ ಹೊರಡುತ್ತಿದ್ದೇನೆ. ಅವರ ಆಸೆ ಈಡೇರಿತು. ನಾನು ನಿರಾಸೆಯಿಂದ ಹೊರಡುತ್ತಿದ್ದೇನೆ. ನೀನೂ ಅವರಂತೆ ಬುದ್ಧಿವಂತನಾಗು"
ಎಂದು ಹೇಳಿ ಆ ಗ್ರಂಥಗಳನ್ನು ಹುಡುಗನ ಕೈಗೆ ಕೊಡುತ್ತಾಳೆ. ಆ ಹುಡುಗ ಆ ದಪ್ಪ ಹೊತ್ತಿಗೆಗಳನ್ನು ತೆಗೆದುಕೊಂಡು ಪಕ್ಕದಲ್ಲಿದ್ದ ಟೇಬಲಿನ ಮೇಲೆ ದೊಪ್ಪನೆ ಬಡಿಯುತ್ತಾನೆ. ಮಾತಿಲ್ಲ, ಕಥೆಯಿಲ್ಲ. ಕೆಂಗಣ್ಣು, ಉರಿಮುಖ, ಕೆದರಿದ ಕ್ರಾಪು, ಕಣ್ಣಿನಿಂದ ಆಕೆಯನ್ನು ಇರಿಯುವಂತೆ ನೋಡುತ್ತಾನೆ. ಆ ಒಂದು ನೋಟ, ಮುಖದ ಭಾವ ಅದೆಷ್ಟು ಮಾತಾಡುತ್ತದೆ,
(ಚಿತ್ರ ಕೃಪೆ : ಯು ಟ್ಯೂಬ್ )
'ನನ್ನ ಮುಗ್ದ ತಾಯಿಯಿಂದ ನನ್ನ ತಂದೆಯನ್ನು ಅಗಲಿಸಿದ ರಾಕ್ಷಸಿ. ಮೊದಲು ಇಲ್ಲಿಂದ ತೊಲಗು. ನಿರ್ದಯಿ ತಂದೆ. ಒಬ್ಬ ಮಗನೆಂದು ಪ್ರೀತಿಯಿಂದ ಒಂದು ದಿನ ಮಾತಾಡಿಸಲಿಲ್ಲ. ಇವೆಲ್ಲಕ್ಕೂ ನೀನೆ ಕಾರಣ. ಹೊರಡು' ಎಂಬ ಅದ್ಭುತ ಅಭಿನಯ ನೀಡಿ ಸರಸರನೆ ಹೊರಗಿನ ಅಂಗಳಕ್ಕೆ ಬಂದು ಅವಳು ಹೊರಡುವ ಕಾರಿನ ಹಿಂಬಾಗಿಲನ್ನು ತೆರೆದು ನಿಲ್ಲುತ್ತಾನೆ. ಅವಳು ಕಣ್ಣೊರಸಿಕೊಳ್ಳುತ್ತ ಬಂದು ಕಾರನ್ನೇರುತ್ತಾಳೆ.
"ತೊಲಗು ಪೀಡೆ !" ಎಂಬಂತೆ ಫಟಾರನೆ ಕಾರಿನ ಬಾಗಿಲನ್ನು ಹಾಕುತ್ತಾನೆ. ಕಾರು ಹೊರಟಾಗ ಅವಳು ಖಿನ್ನಳಾಗಿ ಕೈ ಆಡಿಸುತ್ತಾಳೆ. ಪ್ರತಿಯಾಗಿ ಹುಡುಗ ಎರಡು ತುಟಿ ಅಮುಕಿ ಬಲಗೈ ಬೆನ್ನಿಗಿಟ್ಟು ಕ್ರೂರಮೌನ ಆಚರಿಸುತ್ತಾನೆ.
ಅದಷ್ಟೇ ಆ ಹುಡುಗನ ಪಾತ್ರ. ಸಾವಿರ ಮಾತಾಡುವುದನ್ನು ಐದು ನಿಮಿಷದ ಅಭಿನಯದಲ್ಲಿ ತೋರಿದ್ದಾನೆ. ಕೇವಲ ಹದಿನೆಂಟರ ಹುಡುಗ, ಮಾತಿಲ್ಲ. ಮುದ್ದುಮುಖ. ಮಾತೃಪ್ರೇಮಿ. ಸ್ವಲ್ಪ ಕುಳ್ಳಾದರೂ ಛಲವೇ ಮೂರ್ತಿವೆತ್ತಂತ ಪಾತ್ರ.
ಚಿತ್ರ ಮುಗಿದು ಹೊರ ಬಂದಾಗ ಎಲ್ಲ ಪಾತ್ರಗಳಿಗಿಂತ ಹೆಚ್ಚಾಗಿ ನನ್ನ ಮನದಲ್ಲಿ ಮೆಚ್ಚಿಗೆಯಾಗಿ ನಿಂತ ಪಾತ್ರ ಕುಮಾರನದು. ನಾವು ಯಾರೋ ನಾಲ್ಕು ಜನ ಒಟ್ಟಾಗಿ ಚಿತ್ರಕ್ಕೆ ಹೋಗಿದ್ದೆವು. ಆಗಲೇ ಜನರ ಬಾಯಲ್ಲಿ ಸಾವಿರ ಬಗೆಯ ಅಭಿಪ್ರಾಯಗಳು ಹೊರಬೀಳುತ್ತಿದ್ದವು. ದಾರಿಯಲ್ಲಿ ನಾನಂದೆ " ಚಿತ್ರವೇನೋ ಬಹಳ ಚೆನ್ನಾಗಿದೆ. ಆದರೆ ಚೀನೀ ಪಾತ್ರಕ್ಕಿಂತ ಪ್ರೊಫೆಸರಿನ ಮಗನ ಪಾತ್ರ ಮಾಡಿದ, ಹುಡುಗ ಒಳ್ಳೆಯ ನಟನಾಗಬಹುದು. ಒಳ್ಳೆಯ ಡೈರೆಕ್ಟರ ಕೈಗೆ ಸಿಕ್ಕಿದರೆ ಮುಂದೆ ತುಂಬಾ ಒಳ್ಳೆಯ ಅದೃಷ್ಟವಿದೆ ಅವನಿಗೆ". ಅವರೆಲ್ಲ ಖೊಳ್ಳನೆ ನಕ್ಕರು.
"ಏನಿದೆ ಆ ಹುಡುಗನ ಪಾತ್ರದಲ್ಲಿ, ಮಾತಿಲ್ಲ ಕಥೆಯಿಲ್ಲ. ಉರಿಮುಖದಿಂದ ಬಂದು ನಿಂತು ಪುಸ್ತಕ ತೆಗೆದು ಕುಕ್ಕಿ ರಪ್ಪನೆ ಕಾರಿನ ಬಾಗಿಲು ಹಾಕಿದಷ್ಟೇ, ಮತ್ತೇನು ಅಭಿನಯವಿಲ್ಲ" ಎಂದರು.
ಇವರ ಹತ್ತಿರ ಚರ್ಚಿಸಿ ಪ್ರಯೋಜನವಿಲ್ಲ- ಎಂದುಕೊಂಡು ಸುಮ್ಮನಾದೆ. ಮತ್ತೆ ಆ ಚಿತ್ರದ ಸುದ್ದಿ ಬಂದಾಗಲೆಲ್ಲ ಹತ್ತಾರು ಬಾರಿ ಆ ಹುಡುಗನ ಸುದ್ದಿ ಎತ್ತಿದೆ. ಎಲ್ಲರದು ಒಂದೇ ಅಭಿಪ್ರಾಯ :
"ಒಂದು ನಿಮಿಷ ಬಂದು ಹೋಗುತ್ತಾನೆ ಆ ಹುಡುಗ. ಮತ್ತೇನಿದೆ ಅವನ ಅಭಿನಯ - ಅಲ್ಲದೇ ಹುಡುಗ ತೀರಾ ಗಿಡ್ಡು. ಹೀರೋ ಆಗುವ ಅವಕಾಶ ಇಲ್ಲ" ಎಂದರು. ಈಗ ನಾನೇ ಪೆದ್ದಿಯಾದೆ, ಮುಂದೆ ಆ ಬಗ್ಗೆ ಯಾರ ಹತ್ತಿರವೂ ಚರ್ಚಿಸಲಿಲ್ಲ. ಮುಂದೆ ಒಂದೆರಡು ವರ್ಷಗಳ ನಂತರ "ನಾಗರಹಾವು " ಬಂತು. ಆಗ ಚಿತ್ರದ ನಾಯಕ ರಾಮಾಚಾರಿಯ ಬಗ್ಗೆ, ಪುಟ್ಟಣ್ಣನವರ ಆಯ್ಕೆಯ ಬಗ್ಗೆ ಎಲ್ಲಾ ಪತ್ರಿಕೆಗಳಲ್ಲೂ ಪುಟಗಟ್ಟಲೆ ವಿಮರ್ಶೆ, ಪ್ರಶಂಶೆ, ಪ್ರಶಸ್ತಿಗಳು, ಸನ್ಮಾನಗಳು ಬಂದವು. ಕುಳ್ಳ ಕುಮಾರ ಪುಟ್ಟಣನವರ ಕೈಚಳಕದಿಂದ ತ್ರಿವಿಕ್ರಮ ವಿಷ್ಣುವರ್ಧನನಾಗಿ ಬೆಳೆದು ನಿಂತ. ಇಂದು ವಿಷ್ಣುವರ್ಧನನ ಹಣಗಳಿಕೆ, ಯಶಸ್ಸು, ಕೀರ್ತಿಶಿಖರದ ತುದಿಯಲ್ಲಿದ್ದಾರೆ. ಕಾಡುಗಲ್ಲನ್ನು ಸುಂದರ ಶಿಲ್ಪವಾಗಿ ರೂಪಿಸಿ ಬಿಟ್ಟುಬಿಡುವುದು ಮಾತ್ರ ಪುಟ್ಟಣ್ಣನವರ ಹವ್ಯಾಸ.
- ಎಂ ಕೆ ಇಂದಿರಾ (೧೯೮೬ರ ಕಾದಂಬರಿಯಲ್ಲಿ)