ಪುಟ್ಟಣ್ಣನವರ ಆಯ್ಕೆ..

~.~


ವಂಶವೃಕ್ಷ ಚಿತ್ರ ಬಂತು.  ಚೆನ್ನಾಗಿಯೂ ಇತ್ತು. ಅದರಲ್ಲಿ ಪ್ರೊಫೆಸರರ ಮಗನಾಗಿ ವಿಷ್ಣುವರ್ಧನ್ ರನ್ನು ಆಯ್ಕೆ ಮಾಡಿದ್ದರು ಪುಟ್ಟಣ್ಣ. ಆಗ ಹುಡುಗನ ಹೆಸರು ಕುಮಾರ್. ಅದು ಭಜಬೆಣ್ಣೆ ಹೆಸರು.  ಮನೆಯವರು ಈಗಲೂ ಅದೇ ಹೆಸರಿನಿಂದ ಕರೆಯುತ್ತಾರೆ. ಅದರಲ್ಲಿ ಹುಡುಗನಿಗೆ ಮಾತೇ ಇಲ್ಲ. ಇನ್ನೂ ಕೇವಲ ಹದಿನೆಂಟು ವರ್ಷಗಳಿರಬಹುದು. ಬಿ ವಿ ಕಾರಂತರು ಪ್ರೊಫೆಸರಾಗಿದ್ದರು. ಉಮಾ ಶಿವಕುಮಾರ್ ಮೊಟ್ಟ ಮೊದಲಾಗಿ ತೆರೆಯ ಮೇಲೆ ಕಾಣಿಸಿಕೊಂಡದ್ದು. ಪ್ರೊಫೆಸರರ ಥೀಸಿಸ್ ಬರವಣಿಗೆಯ ಸಹಾಯ ಮತ್ತು ಪ್ರೇಯಸಿ, ಅಮಾಯಕತನದ ಸಂಪ್ರದಾಯ ಶೀಲೆ ಪತಿವ್ರತೆ ಮಡದಿಯಿಂದ ದೂರಾಗಿದ್ದರು ಪ್ರೊಫೆಸರ್, ಡಾಕ್ಟರೇಟ್ ಬಂತು. ಕೆಲವೇ ದಿನಗಳಲ್ಲಿ ಪ್ರೊಫೆಸರ್ ಏನೋ ಕಾಯಿಲೆಯಿಂದ ತೀರಿಕೊಂಡರು. ಪ್ರೇಯಸಿ ತನ್ನೂರಿಗೆ ಹಿಂದಿರುಗುವ ಸಮಯ. ಮಕ್ಕಳನ್ನು ಪಡೆಯದ ಆಕೆಗೆ ಪ್ರೊಫೆಸರರ ಮಗನ ಕಂಡರೆ ಮಹಾ ಪ್ರೀತಿ. ಆದರೆ ಒಂದು ದಿನವೂ ಈ ಮಗ ತಂದೆಯನ್ನು ಕಾಣಲು ಹೋದವನಲ್ಲ. ತನ್ನ ತಾಯಿಯಂಥ ಮುಗ್ದ ಮಹಿಳೆಯನ್ನು ದೂರ ಮಾಡಿ ಈ ವಯಸ್ಸಿನಲ್ಲಿ ಯಾವುದೋ ದೇಶದ ಹೆಣ್ಣು ಬೇಕಾಯಿತೇ ತನ್ನ ತಂದೆಗೆ ! - ಅನ್ನುವ ರೋಷ.
ಆಕೆ ಊರು ಬಿಡುವ ಮುನ್ನ ಪ್ರೊಫೆಸರ ಮಗನನ್ನು ಕರೆದು ಕಂಬನಿ ದುಂಬಿ ಹೇಳುತ್ತಾಳೆ. 
"ಬಾ ಮಗು, ನನಗಂತೂ ಮಕ್ಕಳಿಲ್ಲ. ನೀನೆ ನನ್ನ ಮಗು. ಪ್ರೊಫೆಸರರ ಥೀಸಿಸ್ ಬರೆಯುವ ಸಹಾಯಕಿಯಾಗಿ ನಾ ಬಂದೆ. ನನ್ನ ಕರ್ತವ್ಯ ಪೂರೈಸಿತು. ನಿನ್ನ ತಂದೆಯ ಅನೇಕ ವರ್ಷಗಳ ಬಯಕೆ, ಪರಿಶ್ರಮ ಈ ಡಾಕ್ಟರೇಟ್ ಪದವಿ, ಈ ಗ್ರಂಥಗಳು ಅವರು ನಿನಗಾಗಿ ಇಟ್ಟಿರುವ ಆಸ್ತಿ ಇವೇ ಮಗು. ಇದನ್ನ ತೆಗೆದಿಕೋ. ನಾವು ಜೊತೆಯಾಗಿ ಬಂದೆವು. ಈಗ ಒಂಟಿಯಾಗಿ ಊರಿಗೆ ಹೊರಡುತ್ತಿದ್ದೇನೆ. ಅವರ ಆಸೆ ಈಡೇರಿತು. ನಾನು ನಿರಾಸೆಯಿಂದ ಹೊರಡುತ್ತಿದ್ದೇನೆ. ನೀನೂ ಅವರಂತೆ ಬುದ್ಧಿವಂತನಾಗು"
ಎಂದು ಹೇಳಿ ಆ ಗ್ರಂಥಗಳನ್ನು  ಹುಡುಗನ ಕೈಗೆ ಕೊಡುತ್ತಾಳೆ. ಆ ಹುಡುಗ ಆ ದಪ್ಪ ಹೊತ್ತಿಗೆಗಳನ್ನು ತೆಗೆದುಕೊಂಡು ಪಕ್ಕದಲ್ಲಿದ್ದ ಟೇಬಲಿನ ಮೇಲೆ ದೊಪ್ಪನೆ ಬಡಿಯುತ್ತಾನೆ. ಮಾತಿಲ್ಲ, ಕಥೆಯಿಲ್ಲ. ಕೆಂಗಣ್ಣು, ಉರಿಮುಖ, ಕೆದರಿದ ಕ್ರಾಪು, ಕಣ್ಣಿನಿಂದ ಆಕೆಯನ್ನು ಇರಿಯುವಂತೆ ನೋಡುತ್ತಾನೆ. ಆ ಒಂದು ನೋಟ, ಮುಖದ ಭಾವ ಅದೆಷ್ಟು ಮಾತಾಡುತ್ತದೆ,

(ಚಿತ್ರ ಕೃಪೆ : ಯು ಟ್ಯೂಬ್ ​)

'ನನ್ನ ಮುಗ್ದ ತಾಯಿಯಿಂದ ನನ್ನ ತಂದೆಯನ್ನು ಅಗಲಿಸಿದ ರಾಕ್ಷಸಿ. ಮೊದಲು ಇಲ್ಲಿಂದ ತೊಲಗು. ನಿರ್ದಯಿ ತಂದೆ. ಒಬ್ಬ ಮಗನೆಂದು ಪ್ರೀತಿಯಿಂದ ಒಂದು ದಿನ ಮಾತಾಡಿಸಲಿಲ್ಲ. ಇವೆಲ್ಲಕ್ಕೂ ನೀನೆ ಕಾರಣ. ಹೊರಡು' ಎಂಬ ಅದ್ಭುತ ಅಭಿನಯ ನೀಡಿ ಸರಸರನೆ ಹೊರಗಿನ ಅಂಗಳಕ್ಕೆ ಬಂದು ಅವಳು ಹೊರಡುವ ಕಾರಿನ ಹಿಂಬಾಗಿಲನ್ನು ತೆರೆದು ನಿಲ್ಲುತ್ತಾನೆ. ಅವಳು ಕಣ್ಣೊರಸಿಕೊಳ್ಳುತ್ತ ಬಂದು ಕಾರನ್ನೇರುತ್ತಾಳೆ.
"ತೊಲಗು ಪೀಡೆ !" ಎಂಬಂತೆ ಫಟಾರನೆ ಕಾರಿನ ಬಾಗಿಲನ್ನು ಹಾಕುತ್ತಾನೆ. ಕಾರು ಹೊರಟಾಗ ಅವಳು ಖಿನ್ನಳಾಗಿ ಕೈ ಆಡಿಸುತ್ತಾಳೆ. ಪ್ರತಿಯಾಗಿ ಹುಡುಗ ಎರಡು ತುಟಿ ಅಮುಕಿ ಬಲಗೈ ಬೆನ್ನಿಗಿಟ್ಟು ಕ್ರೂರಮೌನ ಆಚರಿಸುತ್ತಾನೆ.
ಅದಷ್ಟೇ ಆ ಹುಡುಗನ ಪಾತ್ರ. ಸಾವಿರ ಮಾತಾಡುವುದನ್ನು ಐದು ನಿಮಿಷದ ಅಭಿನಯದಲ್ಲಿ ತೋರಿದ್ದಾನೆ. ಕೇವಲ ಹದಿನೆಂಟರ ಹುಡುಗ, ಮಾತಿಲ್ಲ. ಮುದ್ದುಮುಖ. ಮಾತೃಪ್ರೇಮಿ. ಸ್ವಲ್ಪ ಕುಳ್ಳಾದರೂ ಛಲವೇ ಮೂರ್ತಿವೆತ್ತಂತ ಪಾತ್ರ.
ಚಿತ್ರ ಮುಗಿದು ಹೊರ ಬಂದಾಗ ಎಲ್ಲ ಪಾತ್ರಗಳಿಗಿಂತ ಹೆಚ್ಚಾಗಿ ನನ್ನ ಮನದಲ್ಲಿ ಮೆಚ್ಚಿಗೆಯಾಗಿ ನಿಂತ ಪಾತ್ರ ಕುಮಾರನದು. ನಾವು ಯಾರೋ ನಾಲ್ಕು ಜನ ಒಟ್ಟಾಗಿ ಚಿತ್ರಕ್ಕೆ ಹೋಗಿದ್ದೆವು. ಆಗಲೇ ಜನರ ಬಾಯಲ್ಲಿ ಸಾವಿರ ಬಗೆಯ ಅಭಿಪ್ರಾಯಗಳು ಹೊರಬೀಳುತ್ತಿದ್ದವು. ದಾರಿಯಲ್ಲಿ ನಾನಂದೆ " ಚಿತ್ರವೇನೋ ಬಹಳ ಚೆನ್ನಾಗಿದೆ. ಆದರೆ ಚೀನೀ ಪಾತ್ರಕ್ಕಿಂತ ಪ್ರೊಫೆಸರಿನ ಮಗನ ಪಾತ್ರ ಮಾಡಿದ, ಹುಡುಗ ಒಳ್ಳೆಯ ನಟನಾಗಬಹುದು. ಒಳ್ಳೆಯ ಡೈರೆಕ್ಟರ ಕೈಗೆ ಸಿಕ್ಕಿದರೆ ಮುಂದೆ ತುಂಬಾ ಒಳ್ಳೆಯ ಅದೃಷ್ಟವಿದೆ ಅವನಿಗೆ". ಅವರೆಲ್ಲ ಖೊಳ್ಳನೆ ನಕ್ಕರು. 
"ಏನಿದೆ ಆ ಹುಡುಗನ ಪಾತ್ರದಲ್ಲಿ, ಮಾತಿಲ್ಲ ಕಥೆಯಿಲ್ಲ. ಉರಿಮುಖದಿಂದ ಬಂದು ನಿಂತು ಪುಸ್ತಕ ತೆಗೆದು ಕುಕ್ಕಿ ರಪ್ಪನೆ ಕಾರಿನ ಬಾಗಿಲು ಹಾಕಿದಷ್ಟೇ, ಮತ್ತೇನು ಅಭಿನಯವಿಲ್ಲ" ಎಂದರು. 
ಇವರ ಹತ್ತಿರ ಚರ್ಚಿಸಿ ಪ್ರಯೋಜನವಿಲ್ಲ- ಎಂದುಕೊಂಡು ಸುಮ್ಮನಾದೆ. ಮತ್ತೆ ಆ ಚಿತ್ರದ ಸುದ್ದಿ ಬಂದಾಗಲೆಲ್ಲ ಹತ್ತಾರು ಬಾರಿ ಆ ಹುಡುಗನ ಸುದ್ದಿ ಎತ್ತಿದೆ. ಎಲ್ಲರದು ಒಂದೇ ಅಭಿಪ್ರಾಯ :
"ಒಂದು ನಿಮಿಷ ಬಂದು ಹೋಗುತ್ತಾನೆ ಆ ಹುಡುಗ. ಮತ್ತೇನಿದೆ ಅವನ ಅಭಿನಯ - ಅಲ್ಲದೇ ಹುಡುಗ ತೀರಾ ಗಿಡ್ಡು. ಹೀರೋ ಆಗುವ ಅವಕಾಶ ಇಲ್ಲ" ಎಂದರು.  ಈಗ ನಾನೇ ಪೆದ್ದಿಯಾದೆ, ಮುಂದೆ ಆ ಬಗ್ಗೆ ಯಾರ ಹತ್ತಿರವೂ ಚರ್ಚಿಸಲಿಲ್ಲ. ಮುಂದೆ ಒಂದೆರಡು ವರ್ಷಗಳ ನಂತರ "ನಾಗರಹಾವು " ಬಂತು. ಆಗ ಚಿತ್ರದ ನಾಯಕ ರಾಮಾಚಾರಿಯ ಬಗ್ಗೆ, ಪುಟ್ಟಣ್ಣನವರ ಆಯ್ಕೆಯ ಬಗ್ಗೆ ಎಲ್ಲಾ ಪತ್ರಿಕೆಗಳಲ್ಲೂ ಪುಟಗಟ್ಟಲೆ ವಿಮರ್ಶೆ, ಪ್ರಶಂಶೆ, ಪ್ರಶಸ್ತಿಗಳು, ಸನ್ಮಾನಗಳು ಬಂದವು. ಕುಳ್ಳ ಕುಮಾರ ಪುಟ್ಟಣನವರ ಕೈಚಳಕದಿಂದ ತ್ರಿವಿಕ್ರಮ ವಿಷ್ಣುವರ್ಧನನಾಗಿ ಬೆಳೆದು ನಿಂತ. ಇಂದು ವಿಷ್ಣುವರ್ಧನನ ಹಣಗಳಿಕೆ, ಯಶಸ್ಸು, ಕೀರ್ತಿಶಿಖರದ ತುದಿಯಲ್ಲಿದ್ದಾರೆ. ಕಾಡುಗಲ್ಲನ್ನು ಸುಂದರ ಶಿಲ್ಪವಾಗಿ ರೂಪಿಸಿ ಬಿಟ್ಟುಬಿಡುವುದು ಮಾತ್ರ ಪುಟ್ಟಣ್ಣನವರ ಹವ್ಯಾಸ.
- ಎಂ ಕೆ ಇಂದಿರಾ (೧೯೮೬ರ ಕಾದಂಬರಿಯಲ್ಲಿ) 

'ಟೀಚರ್ಸ್ ಡೇ' ಎಂಬ ...

~.~

ರಾಧಾಕೃಷ್ಣನ್ ಅವರ ಕುರಿತು ಅಷ್ಟಾಗಿ ಗೊತ್ತಿಲ್ಲ..
ಪಠ್ಯಪುಸ್ತಕಗಳಿಂದಷ್ಟೇ ಅವರ ಹೆಸರು ತಿಳಿದಿದ್ದು..
ಪುಟ್ಟಣ್ಣರ ಒಂದು ಚಿತ್ರದ್ದಲ್ಲಿ ವಿದೇಶದ ಒಬ್ಬಾಕೆ ಹಿಂದೂ ಧರ್ಮದ ಬಗ್ಗೆ ರಾಧಾಕೃಷ್ಣನ್ ಅವರ ಪುಸ್ತಕ ಓದಿ ತಿಳಿದಿರುತ್ತಾಳೆ.. ಅಂದರೆ ರಾಧಾಕೃಷ್ಣನ್ ಅವರು ಹಿಂದೂ ಧರ್ಮಶಾಸ್ತ್ರಗಳ ಕುರಿತು ಚೆನ್ನಾಗಿ ಅಧ್ಯಯನ ನಡೆಸಿರಬಹುದು ಎಂದುಕೊಂಡಿದ್ದೇನೆ..

ಅವರು ಆದರ್ಶ ಶಿಕ್ಷಕರಾಗಿದ್ದರಂತೆ.. ಹಾಗಾಗಿ ಅವರ ಜನ್ಮದಿನವನ್ನು ಟೀಚರ್ಸ್ ಡೇ ಎನ್ನುತ್ತಾರಂತೆ..

ಇವರ್ಯಾರೋ ಹೇಳ್ತಾರೆ.. ಹಿಂದೂ ಧರ್ಮದಲ್ಲಿ ಗುರುಗಳಿಗೆ ನಮಿಸೋದು ಗುರುಪೂರ್ಣಿಮದಂದು, ಟೀಚರ್ಸ್ ಡೇ ನಮ್ಮ ಸಂಸ್ಕೃತಿಗೆ ಸರಿಹೊಂದಲ್ಲ ಅಂತ. ಹಿಂದೂಧರ್ಮದ ಕುರಿತು ಅಧ್ಯಯನ ನಡೆಸಿದವರ ಜನ್ಮದಿನವನ್ನು ಹಿಂದುಗಳ ಸಂಸ್ಕೃತಿಗೆ ತಕ್ಕುದಲ್ಲದ ಟೀಚರ್ಸ್ ಡೇ ಯನ್ನಾಗಿ ಆಚರಿಸೋದು ಸರಿಯಾ.. ರಾಧಾಕೃಷ್ಣನ್ ಅವರ ಆತ್ಮಕ್ಕೆ ಸಂತೋಷ ಆಗುತ್ತಾ.. ಗೊತ್ತಿಲ್ಲ..

ವಿದ್ಯೆ ಕಲಿಸಿದ ಗುರುವಿಗೆ ನಮಿಸಲು ಗುರುಪೂರ್ಣಿಮಾ. ಈಗೀಗ ಎಲ್ಲ ವಿದ್ಯೆಗೂ ಅಂತ  ಮಾರ್ಪಾಡು ಮಾಡಿಕೊಂಡಿದ್ದಾರೆ ಅದರ ಬಗ್ಗೆ ಬೇಡ ಬಿಡಿ.. 

'ಟೀಚರ್ಸ್ ಡೇ' ಗುರುಗಳನ್ನು ಸ್ಮರಿಸಿ ಅವರಿಗೆ ನಮಿಸಲು ಅವಕಾಶವಿತ್ತ ದಿನವೇ ಹೌದು ಅಂದುಕೊಳ್ಳೋಣ.. ನಿಜವಾಗಿಯೂ 'ಗುರು' ಎಂಬ ಪದಕ್ಕೆ ಸರಿಯಾದ ಅರ್ಥವನ್ನು ಕಂಡುಕೊಳ್ಳಲು ನನಗೆ ಸಾಧ್ಯವಾಗಿಲ್ಲ.. ಪ್ರಯತ್ನವಿದೆ. 
ಗುರು ಎಂದರೆ ಯಾರು? ಎಂಬ ಪ್ರಶ್ನೆ ಸದಾ ಇದ್ದೇ ಇದೆ.
ಜೀವನ ಹೇಳಿಕೊಡುವುದು ಬೇಡ, ಪಠ್ಯಪುಸ್ತಕದಲ್ಲಿರೋದನ್ನು ಸರಿಯಾಗಿ ಹೇಳುವುದು ಟೀಚರ್ಸ್ ಧರ್ಮವಾದರೂ ಈಗಿನವರು ಅಧರ್ಮಿಗಳು, ಬಹುಪಾಲು. ಈಗಿನ ಪಠ್ಯಪುಸ್ತಕಗಳಲ್ಲಿ ಸರಿಯಾದ ಪಾಠಗಳೂ ಇಲ್ಲದಿರುವುದರಿಂದ ಅವನ್ನು ಕಲಿಸದಿದ್ದರೆ ಒಂದು ರೀತಿ ಸರಿ ಎನಿಸುತ್ತೆ, ನನಗೆ. ನನ್ನ ಮೂಗಿನ ನೇರಕ್ಕೆ ಹೇಳುತ್ತೇನೋ ಏನೋ, ಈಗಿನ ಶಿಕ್ಷಣವ್ಯವಸ್ಥೆ ಸರಿಯಿಲ್ಲ!ಸರಿಯಿಲ್ಲ ! ಸರಿಯಿಲ್ಲ!
ಶಿಕ್ಷಣವ್ಯವಸ್ಥೆ ಸರಿಯಿಲ್ಲ, ಶಿಕ್ಷಕರು ಸರಿಯಿಲ್ಲ, ಅವರನ್ನು ಆರಿಸುವವರಿಗೆ ಸರಿಯಾದ ಶಿಕ್ಷಣವಿಲ್ಲ, ಶಿಕ್ಷಣವೃತ್ತಿ ಆರಿಸುಕೊಳ್ಳುವ ಬಹುಪಾಲು ಜನರಿಗೆ 'ಶಿಕ್ಷಕ' ಎಂಬುದು ಪದ ಮಾತ್ರ, ಎಲ್ಲದರಂತೆ ಒಂದು ವೃತ್ತಿ ಮಾತ್ರ. ಅಂತಹದ್ದರಲ್ಲಿ ಶಿಕ್ಷಕರ ದಿನ ಎಂಬುದರಲ್ಲಿ ನನಗೆ ಅರ್ಥವೇ ಕಾಣುವುದಿಲ್ಲ..

ಮನಸ್ಸಿನಲ್ಲಿ ಶಿಕ್ಷಕರನ್ನು ಕಂಡರೆ ದ್ವೇಷಿಸುತ್ತ, ಅವರ ನಡತೆಗಳನ್ನು ಬೆನ್ನ ಹಿಂದೆ ಟೀಕಿಸುತ್ತಾ, ಮೇಲ್ನೋಟಕ್ಕೆ ಸುಮ್ಮನೆ 'ಟೀಚರ್ಸ್  ಡೇ ವಿಷಸ್' ಎಂದು ಹಲ್ಲುಕಿರಿಯುವವರು ಇಂದು ಜಾಸ್ತಿ.
ಶಿಕ್ಷಕರ ಮೇಲೆ ಭಕ್ತಿ, ಪ್ರೀತಿ ಏನೂ ಇಲ್ಲದಿದ್ದರೂ ದ್ವೇಷ. ಅಸಡ್ಡೆ ಮಾತ್ರ ಬೇಡ.
ಶಿಕ್ಷಕರಾಗುವವರಿಗೆ ಬದುಕ ಮೇಲೆ ಪ್ರೀತಿಯಿಲ್ಲದಿದ್ದರೂ ಪಾಠದ ಮೇಲಿರಬೇಕು. ಭಕ್ತಿ ವಿದ್ಯೆಯ ಮೇಲಿರಬೇಕು. ಆತ್ಮವಿಶ್ವಾಸವಿರಬೇಕು.

~-~

 

'ಅಷ್ಟವಿನಾಯಕ'

~.~


​​ಸಂಸ್ಕೃತದಲ್ಲಿ 'ಅಷ್ಟ' ಎಂದರೆ ಕನ್ನಡದಲ್ಲಿ 'ಎಂಟು' ಎಂಬ ಅರ್ಥ ಬರುತ್ತದೆ. 
ಅಷ್ಟಮಠ ಎಂದರೆ ಎಂಟು ಮಠಗಳು, ಅಷ್ಟಾಂಗ ಯೋಗ, ಅಷ್ಟವಕ್ರ,.. ಹೀಗೆ ಹಲವಾರು ಪದಗಳಿವೆ.

'ಅಷ್ಟವಿನಾಯಕ' ಎಂಬ ಪದ ಬಹುಷಃ ನಿಮಗೆ ಪರಿಚಯವಿರಬಹುದು..

ಅಷ್ಟವಿನಾಯಕ ಎಂದರೆ ಸಾಮಾನ್ಯ ಅರ್ಥ; ಅಷ್ಟ = ಎಂಟು, ವಿನಾಯಕ = ಗಣೇಶ. ಎಂಟು ಗಣೇಶಗಳು.
ನಮ್ಮೂರ ಸುತ್ತಲೂ, ನಿಮ್ಮೂರ ಸುತ್ತಲೂ, ಭಾರತ ದೇಶದಾದ್ಯಂತ, ದೇಶದ ಹೊರಗೂ ಹಲವಾರು ಗಣೇಶಗಳಿವೆ.. ಯಾವುದೋ ಎಂಟು ಗಣೇಶಗಳನ್ನು ಸೇರಿಸಿ 'ಅಷ್ಟ ವಿನಾಯಕ' ಎನ್ನಲಾಗುವುದಿಲ್ಲವಂತೆ... ಹಾಗಾದರೆ ಯಾವ ಎಂಟು ಗಣೇಶಗಳು 'ಅಷ್ಟವಿನಾಯಕ' ಎನಿಸಿಕೊಳ್ಳುತ್ತವೆ..


ಇದರ ಕುರಿತು ಒಂದು ಶ್ಲೋಕ ಇದೆ. ಅದು 'ಅಷ್ಟವಿನಾಯಕ ಸ್ತೋತ್ರ' ಅದರಲ್ಲಿ ಆ ಎಂಟು ಗಣೇಶಗಳು ಮತ್ತು ಅವು ಎಲ್ಲೆಲ್ಲಿ ಇವೆ ಎಂಬ ಉಲ್ಲೇಖವಿದೆ.

ಅಷ್ಟವಿನಾಯಕ ಸ್ತೋತ್ರ:
ಸ್ವಸ್ತಿ ಶ್ರೀಗಣನಾಯಕಂ ಗಜಮುಖಮಂ ಮೋರೇಶ್ವರಂ ಸಿದ್ಧಿದಾಂ ll
ಬಲ್ಲಾಳಮ್  ಮುರುಡೇ ವಿನಾಯಕಂಹಂ ಚಿಂತಾಮಣಿಂ ಥೇವರೇ ll
ಲೇಣ್ಯಾದ್ರೌ ಗಿರಿಜಾತ್ಮಜಂ ಸುವರದಾಂ ವಿಘ್ನೇಶ್ವರಂ ಓಝರೇ ll
ಗ್ರಾಮೇ ರಾಂಜಣನಾಮಕೇ ಗಣಪತಿಂ ಕುರ್ಯಾತ್ ಸದಾ ಮಂಗಳಂ ll

ಇದನ್ನು ಕನ್ನಡೀಕರಿಸಿದರೆ ಇದರ ಅರ್ಥ ಬಹುಶಃ ಹೀಗಿರಬಹುದು..

ಕ್ಷೇಮ ತರುವ ಶ್ರೀ ಗಣನಾಯಕನು, ಗಜ(ಆನೆಯ) ಮುಖ ಹೊತ್ತ "ಮೊರೇಶ್ವರ"ನು, "ಸಿದ್ಧಿದಾತ"ನು ll
"ಬಲ್ಲಾಳ"ನು, ಮುರುಡದ "ವಿನಾಯಕ"ನು, ಥೇವರೆಯ "ಚಿಂತಾಮಣಿ"ಯು  ll
ಲೇಣ್ಯಾದ್ರಿಯ "ಗಿರಿಜಾತ್ಮಜ"ನು, ಓಝರೆಯಲ್ಲಿ ವರನೀಡೊ "ವಿಘ್ನೇಶ್ವರ"ನು ll
ರಾಂಜಣ ಗ್ರಾಮದಲ್ಲಿ "ಗಣಪತಿ"ಯಾದವನು, ಯಾವಾಗಲು ಮಂಗಳವನ್ನು ಕರುಣಿಸುವನು ll

ಈ ಸ್ತೋತ್ರದಲ್ಲಿ ಆ ಎಂಟು ಗಣೇಶಗಳ ಉಲ್ಲೇಖವಿದೆ, ಅವುಗಳೆಂದರೆ..
೧. "ಮೊರೇಶ್ವರ" ಅಥವಾ ಮಯೂರೇಶ್ವರ - ಮಯೂರ(ನವಿಲು)ವನ್ನು ಏರಿ ಬಂದವನು - ಇದು ಪುಣೆಯ ಮೊರಗಾವ್ ನಲ್ಲಿದೆ.
೨. "ಸಿದ್ಧಿದಾತ" - ಸಿದ್ಧಿಗಳ ಕರುಣಿಸುವ ಸಿದ್ಧಿವಿನಾಯಕ - ಇದು ಅಹ್ಮದ್ ನಗರದ ಸಿದ್ಧಟೆಕ್ ನಲ್ಲಿದೆ. ಸಿದ್ಧಟೆಕ್ ಗಣೇಶ ಎಂದೇ ಹೆಸರುವಾಸಿಯಾಗಿದೆ.
೩. "ಬಲ್ಲಾಳ" - ಬಲ್ಲಾಳ ಎಂಬ ಭಕ್ತನಿಗೆ ವರ ನೀಡಿದ್ದಕ್ಕೆ ಬಲ್ಲಾಳೇಶ್ವರ ಎಂಬ ಹೆಸರಿದೆ - ಇದು ರಾಯಘಡದ ಪಾಳಿ ಎಂಬಲ್ಲಿದೆ.
೪. "ವಿನಾಯಕ" - ಮುರುಡದ ವಿನಾಯಕ - ಇದು ರಾಯಘಡದ ಮಹಡ(ಮುರುಡ)ದಲ್ಲಿದೆ.
೫. "ಚಿಂತಾಮಣಿ" - ಚಿಂತಾಮಣಿ ಎಂದರೆ ಇಚ್ಛೆ ಪೂರೈಸುವ ಮಣಿ - ಪುಣೆಯ ಥೇವರೆ (ಥೇವೂರ್) ನಲ್ಲಿದೆ.
೬. 'ಗಿರಿಜಾತ್ಮಜ" - ಗಿರಿಜೆಯ ಮಗ - ಪುಣೆಯಲ್ಲಿ ಲೇಣ್ಯಾದ್ರಿಯಲ್ಲಿದೆ.
೭. "ವಿಘ್ನೇಶ್ವರ" - ವಿಘ್ನನಿವಾರಕ - ಪುಣೆಯ ಓಜ್ಹರೆಯಲ್ಲಿದೆ.
೮. "ಗಣಪತಿ" - ಪುಣೆಯ ರಂಜಾಗಾವ್ ನಲ್ಲಿರುವ ಮಹಾಗಣಪತಿ.

ಸ್ತೋತ್ರದಲ್ಲಿ ಮೊರಗಾವ್, ಸಿದ್ಧಟೆಕ್ ಮತ್ತು ಪಾಳಿ ಪ್ರದೇಶಗಳನ್ನು ಹೊರತುಪಡಿಸಿ ಉಳಿದೆಲ್ಲ ಸ್ಥಳಗಳನ್ನು ಉಲ್ಲೇಖಿಸಲಾಗಿದೆ, ಗಮನಿಸಿ.
ವಿಶೇಷ ಎಂದರೆ ಎಲ್ಲ ಮೂರ್ತಿಗಳು ಮಹಾರಾಷ್ಟ್ರದ ಪುಣೆಯ ಸುತ್ತಮುತ್ತಲೇ ಇವೆ..  ಬಹುಶಃ ಇಲ್ಲಿದ್ದ ಜನರು ಅಥವಾ ಇಲ್ಲಿ ಆಳಿದ ಜನರು ಗಣಪತಿ ಮೇಲೆ ಬಹಳ ಭಕ್ತಿ ಹೊಂದಿದ್ದರು ಎನಿಸುತ್ತದೆ, ಹಾಗಾಗಿ ಇಲ್ಲಿಯೇ ಅಷ್ಟವಿನಾಯಕರ ಸೃಷ್ಟಿ ಆಗಿರಬಹುದು. ಪೇಶ್ವೇ ಮರಾಠರ ಮನೆದೇವರೇ "ಗಣಪತಿ" ಯಂತೆ.
ಇಲ್ಲಿನ ಎಲ್ಲಾ ಮೂರ್ತಿಗಳು 'ಸ್ವಯಂಭು'ವಾದವು. ಅಂದರೆ ಯಾರೋ ಈ ಶಿಲ್ಪಗಳನ್ನು ಕೆತ್ತಿದ್ದಲ್ಲ, ಪ್ರಕೃತಿದತ್ತವಾಗಿಯೇ ಉದ್ಭವವಾದವು - 'ಉದ್ಭವ ಮೂರ್ತಿ' ಗಳು ಎಂದು ಹೇಳುತ್ತಾರೆ.
ಈ ಮೂರ್ತಿಗಳು ಒಂದಕ್ಕೊಂದು ವಿಭಿನ್ನವಾಗಿದ್ದು, ಪ್ರತಿಯೊಂದಕ್ಕೂ ತನ್ನದೇ ಆದ ದಂತಕಥೆ ಇದೆ.. ಬರೆದರೆ ಒಂದೊಂದರ ಮೇಲೂ ಒಂದೊಂದು ಲೇಖನ ಬರೆಯಬಹುದು..
ಇನ್ನೊಂದು ವಿಶೇಷ ಎಂದರೆ ಅಷ್ಟವಿನಾಯಕ ದರುಶನ ಮಾಡಲು ಇಚ್ಚಿಸುವವರು ಸ್ತೋತ್ರದ ಪ್ರಕಾರ ಮೊದಲು ಕ್ರಮಬದ್ಧವಾಗಿ ಮೊದಲು ಮೊರೇಶ್ವರನ ದರ್ಶನ ಮಾಡಿ, ಎಂಟನೆಯದಾಗಿ ಮಹಾಗಣಪತಿ ದರ್ಶನ ಮಾಡಿ ಮತ್ತೆ ಕೊನೆಯಲ್ಲಿ ಮೊರೇಶ್ವರನ ದರ್ಶನ ಮಾಡಿದರೇನೇ ಅಷ್ಟವಿನಾಯಕ ಯಾತ್ರೆ ಸಂಪೂರ್ಣವಾಗುತ್ತಂತೆ... ಈಗಲೂ ಅದನ್ನೇ ಅನುಸರಿಸುತ್ತಿದ್ದಾರೆ. ಗೊತ್ತಿಲ್ಲ.
ಉದ್ಭವ ಮೂರ್ತಿಗಳಾದ ಮೇಲೆ ಅವುಗಳ ಮೇಲೆ ಸ್ತೋತ್ರ ರಚನೆಯಾಗಿರಬಹುದು, ಹೇಳಿ ಬರೆಯಿಸಿರಬಹುದು. ಅಥವಾ ಸ್ತೋತ್ರದ ಆಧಾರದ ಮೇಲೆ ಮೂರ್ತಿಗಳನ್ನು ಗುರುತಿಸಿರಬಹುದು, ಮಾಹಿತಿ ನನಗೆ ಗೊತ್ತಿಲ್ಲ.
ಅಷ್ಟವಿನಾಯಕರು ಯಾರು ಎಂಬ ಪ್ರಶ್ನೆಗೆ ನಾನು ಕಂಡುಕೊಂಡ ಸಮಾಧಾನಕರ ಸರಳ ಮಾಹಿತಿಯಷ್ಟೇ ಇದು.
ಅಷ್ಟವಿನಾಯಕರ ದರ್ಶನ ಮಾಡಿ, ಶುಭಾಲೋಚನೆ ಮಾಡಿ.


ವಂದನೆಗಳು

~-~


ವರಮಹಾಲಕ್ಷ್ಮಿ ಪೂಜೆ : ಅಷ್ಟ ಶಕ್ತಿಗೆ ನಮನ

~.~


ಶ್ರೀಗಣೇಶನನ್ನು ಬಿಟ್ಟರೆ ಈ ಮಣ್ಣಲ್ಲಿ ಹೆಚ್ಚು ಪೂಜೆ ಪಡೆವವಳು ತಾಯಿ ಲಕ್ಷ್ಮಿಯೇ ಇರಬೇಕು.

ವರಮಹಾಲಕ್ಷ್ಮಿ ಹಬ್ಬ..
ಇದು ಯಾವಾಗ ಆರಂಭವಾಗಿದ್ದು.. ವಿಶೇಷತೆಗಳೇನು.. ಯಾಕೆ ಈ ದಿನವೇ ಆಚರಿಸುತ್ತಾರೆ.. ಇವುಗಳಿಗೆ ಮನವರಿಕೆಯಾಗುವಂತ ಮಾಹಿತಿ ಸ್ಪಷ್ಟವಾಗಿಲ್ಲ, ನನಗೆ. 
ಹಾಗಂತ, ಒಂದೇ ಏಟಿಗೆ ಇದರ ಆಚರಣೆಯೇ ತಪ್ಪು, ಅವೈಜ್ಞಾನಿಕ, ಹಾಗೆ, ಹೀಗೆ ಎಂದು ಹೇಳಿಬಿಡಲಾರೆ..
ಓದಿ, ಕೇಳಿ, ಚಿಂತಿಸಿ ಒಂದು ಲೇಖನ ಬರೆದಿದ್ದೇನೆ..


ವರಮಹಾಲಕ್ಷ್ಮಿ ಹಬ್ಬ/ಪೂಜಾ/ವ್ರತ :

ಹಿಂದೂಗಳು 'ವಿಷ್ಣು' ವನ್ನು ಜಗದೊಡೆಯ, ರಕ್ಷಕ ಎಂದು ಆರಾಧಿಸುತ್ತಾರೆ.

ಈ ಜೀವನ ಪೂರೈಕೆಗೆ ಅವಶ್ಯಕವಾದವುಗಳು ಯಾವುವು ಎಂದು ಯಾರೋ, ಹಿಂದೆಯೇ ಜಿಜ್ಞಾಸೆ ಮಾಡಿ,- ಸಿರಿ, ಭೂ, ಸರಸ್ವತಿ, ಪ್ರೀತಿ, ಕೀರ್ತಿ, ಶಾಂತಿ, ಸಂತುಷ್ಟಿ ಮತ್ತು ಪುಷ್ಟಿ ಎಂಬ ಎಂಟು ಅಂಶಗಳನ್ನು ಗುರುತಿಸಿ ಇವು ಸುಂದರ ಜೀವನಕ್ಕೆ ಮೂಲವಾಗಿ ಬೇಕಾದವು ಎಂದು ಹೇಳಿದ್ದಾರೆ. ಇವುಗಳನ್ನು 'ಶಕ್ತಿಗಳು' ಎಂದೂ ಕರೆದಿದ್ದಾರೆ. 
ಈ ಜೀವನಕ್ಕೆ ಬೇಕಾದ ಇವು ಈ ಜಗದಿಂದಲೇ ಬರಬೇಕು. ವಿಷ್ಣು ಜಗದೊಡೆಯ ಆದ್ದರಿಂದ, ಈ ಎಲ್ಲವೂ ಅವನಿಂದಲೇ ಬರಬೇಕು.
ಲಕ್ಷ್ಮಿ ವಿಷ್ಣುವಿನ ಪತ್ನಿ. ವಿಷ್ಣು ಲಕ್ಷ್ಮಿಗೆ ಒಡೆಯ ಎನ್ನಬಹುದು.
ಹಾಗಾಗಿ ಲಕ್ಷ್ಮಿಯನ್ನು ಆ ಶಕ್ತಿಗೆ ಹೋಲಿಸಲಾಗಿದೆ. ಎಲ್ಲ ಎಂಟು ಶಕ್ತಿಗಳನ್ನೂ ಸೇರಿಸಿ 'ಅಷ್ಟ ಲಕ್ಷ್ಮಿ' ಎನ್ನಲಾಗಿದೆ. ಲಕ್ಷ್ಮಿಪತಿಯಾದ ವಿಷ್ಣು ಜಗದ ಆ ಎಲ್ಲಾ ಶಕ್ತಿಗಳ ಒಡೆಯನಾದ್ದರಿಂದ 'ಅಷ್ಟಲಕ್ಷ್ಮೀಪತಿ'ಯಾಗಿದ್ದಾನೆ.

ಎಂಥಹ ಸುಂದರವಾದ ಕಲ್ಪನೆ ಮತ್ತು ಹೋಲಿಕೆ. 


( ಚಿತ್ರಕೃಪೆ : ಅಂತರ್ಜಾಲ )

ನಮ್ಮ ಜೀವನಕ್ಕೆ ಮೂಲಭೂತವಾದ ಅವಶ್ಯಕತೆಗಳನ್ನು ಪೂಜಿಸಿ ಆರಾಧಿಸುವುದು ಹಿಂದೂಧರ್ಮದಲ್ಲಿ (ಬೇರೆ ಧರ್ಮಗಳ ಬಗ್ಗೆ ಗೊತ್ತಿಲ್ಲ ) ನಡೆದುಬಂದಿರುವ ಒಂದು ವಾಡಿಕೆ/ಪದ್ಧತಿ. ಉದಾಹರಣೆಗೆ ಪಂಚಭೂತಗಳು - ಬೇಕೇ ಬೇಕಾದ ಭೂಮಿ, ನೀರು, ಬೆಳಕು, ಗಾಳಿ ಮತ್ತು ಆಕಾಶ ಇವುಗಳ ಪೂಜೆ ಇದೆ.   
ಹಾಗೆಯೇ, ಜೀವನ ಸುಖವಾಗಿರಲು, ಈ ಎಂಟು ಶಕ್ತಿಗಳು ಅವಶ್ಯಕವಾದ್ದರಿಂದ ಅವುಗಳನ್ನು ಪೂಜಿಸಿ, ಆರಾಧಿಸುವ ಪದ್ಧತಿ ಆರಂಭವಾಗಿದೆ. ಶಕ್ತಿಗಳನ್ನೇ ಲಕ್ಷ್ಮಿ ಎಂದಿರುವುದರಿಂದ ಶಕ್ತಿಗಳ ಆರಾಧನೆ ಲಕ್ಷ್ಮೀಪೂಜೆ ಎಂದು ನಡೆದುಬಂದಿದೆ. 
ಅಂದರೆ, ನಾವು ಲಕ್ಷ್ಮಿಯನ್ನು ಪೂಜಿಸುತ್ತಿದ್ದೇವೆ, ಆದರೆ ಮೂಲದಲ್ಲಿ ಆ ಶಕ್ತಿಗಳಿಗೆ ನಮಿಸುತ್ತಿದ್ದೇವೆ.
ಖುಷಿಯಾಗುತ್ತದೆ ಹಾಗೆ ನೆನೆಯಲು. 

ಸಂತೋಷ.. ಆದರೆ ಇಂದೇ ಈ ಶುಕ್ರವಾರದಂದೇ ವರಲಕ್ಷ್ಮೀಪೂಜೆ ಏಕೆ ?
ಇದರ ಬಗ್ಗೆ ಸ್ಪಷ್ಟವಾಗಿ ನನಗೆ ತಿಳಿಯಲಿಲ್ಲ..
ಹಿಂದಿನ ಯಾವುದೋ ಒಂದು ಶ್ಲೋಕದಲ್ಲಿ ' ಶ್ರಾವಣಮಾಸದಲ್ಲಿ, ಶುಕ್ಲಪೂರ್ಣಿಮೆಯ ಹಿಂದೆ ಬರುವ ಎರಡನೇ ಶುಕ್ರವಾರದಂದು ಲಕ್ಷ್ಮಿಯನ್ನು ಪೂಜಿಸಲು ಯೋಗ್ಯದಿನ' ಎಂದು ಬರೆಯಲಾಗಿದೆ. ಇಂದು ಲಕ್ಷ್ಮೀಪೂಜೆ ಮಾಡಿದರೆ, ಅಷ್ಟಲಕ್ಷ್ಮೀ (ಅಷ್ಟಶಕ್ತೀ)ಗಳಿಗೂ ಪೂಜೆ ಮಾಡಿದಂತಾಗುತ್ತದೆ, ಲಕ್ಷ್ಮಿ ಪ್ರಸನ್ನಳಾಗಿ ವರಕೊಡುವ ವರಲಕ್ಷ್ಮಿಯಾಗಿ ಒಲಿಯುತ್ತಾಳೆ ಎಂಬ ನಂಬಿಕೆಯಿದೆ. 

[ಆದರೆ ಹಿಂದಿನಿಂದ ಈ ಶುಕ್ರವಾರದಂದೇ ನಡೆದುಬರುತ್ತಿದ್ದ ಪೂಜೆ ನೋಡಿ ಶ್ಲೋಕ ರಚನೆಯಾಯಿತಾ ಅಥವಾ ಶ್ಲೋಕ ರಚನೆಯಾದಮೇಲೆ ಶುಕ್ರವಾರದಲ್ಲಿ ಪೂಜೆ ಆರಂಭವಾಯಿತಾ ಎಂಬುದರ ಬಗ್ಗೆ ನನಗೆ ಗೊಂದಲವಿದೆ. ಇರಲಿ ಬಿಡಿ.]

ಹೀಗೆ ವರಮಹಾಲಕ್ಷ್ಮಿ ಪೂಜೆ ಆರಂಭವಾಯಿತು ಎಂದುಕೊಳ್ಳೋಣ. 

ಈ ಪೂಜೆಯ ಹಿಂದೆ ತುಂಬಾ ಕಥೆಗಳಿವೆ:

೧.  ಒಮ್ಮೆ ತಾಯಿ ಪಾರ್ವತಿದೇವಿ ತನ್ನ ಸಂಸಾರ (ಶಿವ ಮತ್ತು ಮಕ್ಕಳು) ಸುಖವಾಗಿರಲು ಒಂದು ವ್ರತ ಮಾಡಬೇಕೆಂದು ಆಸೆಪಟ್ಟು ಶಿವನನ್ನು ಕೇಳುತ್ತಾಳೆ. ಶಿವ ಪಾರ್ವತಿಗೆ 'ವರಮಹಾಲಕ್ಷ್ಮಿ ವ್ರತ' ಮಾಡಲು ಹೇಳಿ, ಅದನ್ನು ಹೇಗೆ ಆಚರಿಸಬೇಕೆಂದೂ ಹೇಳುತ್ತಾನೆ. ಈ ವ್ರತವನ್ನು ಹಿಂದೆ ಒಬ್ಬರು ಮಾಡಿ ಲಕ್ಷ್ಮೀಕೃಪೆಗೆ ಪಾತ್ರವಾಗಿದ್ದರು ಎಂದೂ ಹೇಳುತ್ತಾನೆ. ಆ ಒಬ್ಬಾಕೆಯೇ ಚಾರುಮತಿ. 
ಚಾರುಮತಿ ಹಿಂದಿನ ಕುಂದಿನ(ಕೌಂಡಿನ್ಯ) ದ ಒಬ್ಬ ಗೃಹಿಣಿ. ಆಕೆ ತನ್ನ ಸಂಸಾರವೇ ಸ್ವರ್ಗವೆಂದುಕೊಂಡು ಸದಾ ಅದಕ್ಕಾಗಿಯೇ ದುಡಿಯುತ್ತಿರುತ್ತಾಳೆ. ಆದರ್ಶ ಸತಿ, ಆದರ್ಶ ತಾಯಿ, ಸೊಸೆ ಯಾಗಲು ಬೇಕಾದ ಎಲ್ಲಾ ಗುಣಗಳಿದ್ದ ಆಕೆಯ ಸಂಸಾರ ಭಕ್ತಿಗೆ ಮೆಚ್ಚಿ ಲಕ್ಷ್ಮಿದೇವಿ ಆಕೆಯ ಕನಸಿನಲ್ಲಿ ಬಂದು ವರಲಕ್ಷ್ಮಿ ವ್ರತ ಮಾಡೆಂದು ಆದೇಶಿಸುತ್ತಾಳೆ. ಅಂತೆಯೇ, ಚಾರುಮತಿ ತನ್ನ ನೆರೆಹೊರೆಯ ಹೆಂಗಸರೊಡನೆ 'ವರಮಹಾಲಕ್ಷ್ಮಿ ವ್ರತ' ಮಾಡಿದ ನಂತರ, ಆಕೆಯ ಸಂಸಾರ ಹಾಗೂ ಆ ವ್ರತದಲ್ಲಿ ಭಾಗವಹಿಸಿದ್ದವರ ಸಂಸಾರವೂ ಲಕ್ಷ್ಮೀಕೃಪೆಗೆ ಪಾತ್ರರಾಗಿ ಅವರದು ಸುಖಸಂಸಾರವಾಯಿತು.
ಹೀಗೆ ಶಿವ ಪಾರ್ವತಿಗೆ ವಿವರಿಸುತ್ತಾನೆ. 

[ ಸ್ವತಃ ಆಕೆಯೇ ದೇವತೆಯಾಗಿದ್ದ ಪಾರ್ವತಿದೇವಿ ವ್ರತ ಮಾಡುವ ಅವಶ್ಯಕತೆಯಿತ್ತೇ? ಅಥವಾ ಆಕೆ ಸಂಸಾರ ಎಂದುಕೊಂಡಿದ್ದು ಸಕಲ ವಿಶ್ವವನ್ನೇ ಇರಬಹುದು, ಗೊತ್ತಿಲ್ಲ. ಚಾರುಮತಿ ಪಾರ್ವತಿದೇವಿಗೂ ಹಿಂದಿನವಳೇ, ಅದೂ ಗೊತ್ತಿಲ್ಲ... ಏನೇ ಇರಲಿ , ನಾವು ಪೂಜೆ ಮಾಡಲಾಗದಿದ್ದಾಗ ನೆರೆಹೊರೆಯ ಪೂಜೆಗೆ ಭಾಗವಹಿಸಿ ಲಕ್ಷ್ಮೀಕೃಪೆಗೆ ಪಾತ್ರವಾಗುವುದು ಈ ಕಥೆಯ ಹಿಂದಿನ ಉದ್ದೇಶ ಎನ್ನೋಣ]

೨. ಮಹಾಭಾರತದಲ್ಲಿ ಎಲ್ಲವನ್ನು ಕಳೆದುಕೊಂಡಿದ್ದ ಯುಧಿಷ್ಠಿರ, ಎಲ್ಲವನ್ನೂ ಮತ್ತೆ ಪಡೆದುಕೊಳ್ಳಲು ಏನು ಮಾಡಬೇಕೆಂದು ಶ್ರೀಕೃಷ್ಣನನ್ನು ಕೇಳಿದಾಗ, ಶ್ರೀಕೃಷ್ಣ, ಯುಧಿಷ್ಠಿರನಿಗೆ 'ವರಮಹಾಲಕ್ಷ್ಮಿ ಪೂಜೆ' ಮಾಡಿ ಲಕ್ಷ್ಮೀಕೃಪೆಗೆ ಪಾತ್ರನಾಗು, ಎಲ್ಲವೂ ಸಿಗುತ್ತದೆ ಎಂದನಂತೆ.

[ಎಲ್ಲವೂ ಶೂನ್ಯ ಎಂದು ಕೊನೆಯಲ್ಲಿ ಗೀತೆಹೇಳಿದ ಶ್ರೀಕೃಷ್ಣ, ಆಗ ಯುಧಿಷ್ಠಿರನಿಗೆ ಪ್ರಪಂಚದ ಸುಖಗಳಿಗೆ ಬಯಸುವುದು ತಪ್ಪೆಂದು ಹೇಳದೆ ಪೂಜೆ ಮಾಡಿ ಪಡೆದುಕೋ ಎಂದು ಯಾಕೆ ಹೇಳಿದನೋ ಗೊತ್ತಿಲ್ಲ. ಅದಿರಲಿ.
ಆದರೆ, ಎಲ್ಲವನ್ನೂ ಕಳೆದುಕೊಂಡರೂ ನಿರಾಶಾವಾದಿಯಾಗದೆ, ಆಶಾವಾದದಿಂದ ಬದುಕಬೇಕು ಎಂಬುದು ಮತ್ತು ಗಂಡಸರೂ ಪೂಜೆ ಮಾಡಬಹುದು ಎಂಬುದು ಈ ಕಥೆಯ ಉದ್ದೇಶ ಇರಬಹುದು.]  

ಕಥೆಗಳೇನೇ ಇರಲಿ, ಅವುಗಳ ಉದ್ದೇಶದ ಸಂದೇಶ ಸರಿಯಾಗಿದೆ. 

ಸಾಮನ್ಯವಾಗಿ 'ವರಮಹಾಲಕ್ಷ್ಮಿ ಪೂಜೆ'ಯನ್ನು ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡುಗಳಲ್ಲಿ ಕಾಣಬಹುದು.
ಕಥೆಯಲ್ಲಿ ಬಂದ ಚಾರುಮತಿಯ ಸ್ಥಳ ಈಗಿನ ಮಹಾರಾಷ್ಟ್ರಕ್ಕೆ ಹತ್ತಿರವಾದದ್ದು, ಕೌಂಡಿನ್ಯಕ್ಕೆ ಸಮೀಪವಾದದ್ದು. ಬಹುಶಃ ಅದು ವರದಾ ನದಿ ತೀರದ ವಿದರ್ಭ ಪ್ರದೇಶವಿರಬೇಕು.  ಬಹುಶಃ ಹಾಗಾಗಿ ಈ ಪೂಜೆ ಆಂಧ್ರದ ಗಡಿಯಿಂದ ಆರಂಭವಾಗಿ ಈ ರಾಜ್ಯಗಳಿಗೆ ಮಾತ್ರ ಸೀಮಿತವಾಯಿತೇನೋ. ಕಥೆಯ, ಪೂಜೆಯ ಹಿಂದಿನ ಉದ್ದೇಶ ಸುಂದರವಾಗಿದ್ದರೂ, ಸರಿಯಾಗಿ ಪ್ರಚಾರವಾಗದೆ ಬೇರೆ ರಾಜ್ಯಗಳಿಗೆ ಅಷ್ಟಾಗಿ ತಲುಪಿಲ್ಲದಿರುವುದು ಬೇಸರದ ಸಂಗತಿ.
ಹೊಸದಾಗಿ ಮದುವೆಯಾದವರು, ಬದುಕಿನ ಬಗ್ಗೆ ಹೊಸ ಕನಸು ಕಾಣುತ್ತಿರುತ್ತಾರಲ್ಲ ಅದಕ್ಕೆ ಅವರೇ ಈ ಪೂಜೆಯಲ್ಲಿ ಹೆಚ್ಚು ಭಾಗವಹಿಸುವುದನ್ನು ಕಾಣಬಹುದು. 

ಭಕ್ತಿಯ ಶಕ್ತಿ, ಶುದ್ಧತೆ, ಸಂಕಲ್ಪ,..  ಎಲ್ಲದರಲ್ಲೂ ಹೆಣ್ಣೇ ಗಂಡಿಗಿಂತ ಹೆಚ್ಚು ಶಕ್ತಿಯುಳ್ಳವಳು ಎಂದೇನೋ ಆ ಶಕ್ತಿಪೂಜೆಗೆ ಈ ಶಕ್ತಿ - ಹೆಣ್ಣು ಸೂಕ್ತ ಎಂದಿರಬಹುದು. ಸುಖಸಂಸಾರಕ್ಕೆ ಹೆಣ್ಣು ಮುಖ್ಯ ಪಾತ್ರ ವಹಿಸುವುದರಿಂದ, ಆಕೆಯೇ ಬೇಡಲಿ ಇದನ್ನು - ನನ್ನ ಅಭಿಮತವಿದೆ.
ಗಂಡಸರೇ ಹೆಚ್ಚು ಭಾಗವಹಿಸುವ ಹಲವು ಹಬ್ಬ ಆಚರಣೆಗಳಿರುವಾಗ ಈ ಹಬ್ಬದಲ್ಲಿ ತನ್ನ ಭಕ್ತಿಶಕ್ತಿ ಬಳಸಲು, ಅಧ್ಯಾತ್ಮದ ಮಟ್ಟ ಏರಲು ಹೆಣ್ಣಿಗಿದು ಸುಂದರ ಅವಕಾಶ ಎನ್ನೋಣವೇ. ತನ್ನ ಹಬ್ಬ ಎಂದು ಹೆಮ್ಮೆಯಿಂದ ಆಕೆ ಹೇಳಲಿ.

ಇನ್ನೂ ಪೂಜಾವಿಧಾನಕ್ಕೆ ಬಂದರೆ,
ಅವರವರ ಸಂಪ್ರದಾಯಕ್ಕನುಗುಣವಾಗಿ, ಅವರವರ ಸಮಯ, ಸಾಧ್ಯತೆಗೆ ತಕ್ಕಂತೆ ಒಂದೊಂದು ಕಡೆ ಒಬ್ಬೊಬ್ಬರೂ ಒಂದೊಂದು ತರಹ ಪೂಜಿಸುತ್ತಾರೆ. ಸಂಪತ್ತಿಗೆ ತಕ್ಕಂತೆಯೂ.(ಪೂಜಾ ವಿಧಾನಗಳ ಕುರಿತು ಚರ್ಚಿಸುವ ಆಸಕ್ತಿಯಿಲ್ಲ)
ಆದರೆ, ಹೀಗೆಯೇ, ಇಂತೆಯೇ ಪೂಜಿಸಬೇಕೆಂಬ ನಿಯಮವಿಲ್ಲ.
ಮನಶುದ್ಧಿಯಿಂದ, ಭಕ್ತಿಯಿಂದ ಮನದಲ್ಲಿ ನಮಿಸಿದರೂ ಆ ಅಷ್ಟಲಕ್ಷ್ಮೀ ಒಲಿದು, ಅಷ್ಟಶಕ್ತಿಗಳನ್ನೂ ಕರುಣಿಸುತ್ತಾಳೆ.
ಸಂಸ್ಕೃತ ಶ್ಲೋಕ ಹೇಳಿಯೇ ಪೂಜೆ ಮಾಡಬೇಕಿಲ್ಲ. 'ತಾಯೇ ಲಕ್ಷ್ಮಿ, ಒಳ್ಳೆಯದು ಮಾಡು' ಎಂದರಾಯಿತು. ಇನ್ನೂ ಹೆಚ್ಚೆಂದರೆ, ಭಾವುಕರಾಗಿ
'ಕಮಲದ ಮೇಲೆ ಕುಂತವಳೇ, ಕಮಲವನ್ನು ಹಿಡಿದವಳೇ, ಕೃಪೆತೋರೆ ತಾಯೇ ಎಲ್ಲರಿಂದ ಪೂಜೆ ಪಡೆವವಳೇ..' ಎಂದರಾಯಿತು.


ಏನೇ ಇರಲಿ, ಮೂಲಭೂತ ಅವಶ್ಯಕತೆಗಳ ಗುರುತಿಸಿ, ಅವುಗಳನ್ನು ಪೂಜಿಸುವುದು (ಯಾವ ಹೆಸರಿಟ್ಟರೂ ಸರಿ ) ಸುಂದರ, ಒಳ್ಳೆಯ ಕಲ್ಪನೆ.
ಪ್ರತಿಯೊಬ್ಬರಿಗೂ ಈ ಶಕ್ತಿಗಳು ಅವಶ್ಯವಾದ್ದರಿಂದ, ಜಾತಿ,ಬೇಧ,ದೇಶ,ಭಾಷೆ ತೊರೆದು ಎಲ್ಲರೂ ಮಾಡಬೇಕಾದ ಪೂಜೆಯಿದು, ಅವರವರ ಸಂಪ್ರದಾಯದಂತೆ.

[ಹೇಳಬೇಕಾದ ವಿಚಾರ ಎಷ್ಟರ ಮಟ್ಟಿಗೆ ಮನವರಿಕೆ ಮಾಡಿಸಿದನೋ ತಿಳಿಯದು, ಮಧ್ಯೆ ಮಧ್ಯೆ ಎತ್ತಿರುವ ಪ್ರಶ್ನೆ ನನ್ನ ಪೂರ್ವಗ್ರಹ ಪೀಡಿತವಾದವು, ಅವನ್ನು ಬಿಡಿ]

~.~

​ಯುಗಾದಿ

~.~

​ಯುಗಾದಿ

ಯುಗಾದಿ ಎಂದರೆ ಯುಗ+ಆದಿ. ಅಂದರೆ, ಯುಗದ ಪ್ರಾರಂಭ. ನಾವಿರುವ ಯುಗದ ಪ್ರಾರಂಭ ಆದ ದಿನ ಇದು ಎಂದೂ, ಅದಕ್ಕಾಗಿ ಇದನ್ನು ಹಿಂದೂ ವರುಷಾರಂಭ ಎಂದೂ ಆಚರಿಸುತ್ತರಂತೆ.
ಯುಗದ ಆರಂಭ ಆಗಿದ್ದು ಯಾರಿಗೆ ? ಹಿಂದುಗಳಿಗೆ ಮಾತ್ರವಾ ? ಇರಬೇಕು. ಯಾಕೆಂದರೆ ಆ ಯುಗ, ಈ ಯುಗಗಳು ಕಾಣಸಿಗೋದು ಹಿಂದೂ ಪುರಾಣಗಳಲ್ಲಿ. ಆದ್ದರಿಂದ ಹಿಂದುಗಳಿಗೆ ಯುಗಾರಂಭ ಎನ್ನಬಹುದೇನೋ. ಬೇರೆಯವರಿಗೂ ಆರಂಭ ಆಗಿರುತ್ತೆ ಅನ್ನಿ. ಅವರವರ ಯುಗ ಅವರವರಿಗೆ.
ಯುಗ ಪ್ರಾರಂಭ ಆಗಿದ್ಯೋ ಇಲ್ವೋ ಅದು ಹಾಗಿರಲಿ, ನಾವು ಬಳಸುತ್ತಾ, ಅನುಸರಿಸುತ್ತಾ ಇರೋ ಕ್ಯಾಲಂಡರ್ ಪ್ರಕಾರ ಡಿಸೆಂಬರ್ 31ರ ರಾತ್ರಿ /ಜನವರಿ 1 ಹೊಸ ವರುಷದ ಆರಂಭ. ಆದರೂ, ನಾವು ಹಿಂದುಗಳಾದ್ದರಿಂದ ಹಿಂದೂ ಕ್ಯಾಲೆಂಡರ್ ಪ್ರಕಾರ ನಮಗೆ ಹೊಸ ವರುಷ ಯುಗಾದಿ ಅಂತೆ. ಹಾಗಂತ ಜನವರಿ ೧ರಂದು ಸುಮ್ಮನಿರಲ್ಲ ಬಿಡಿ. ಸಂಭ್ರಮ ಜೋರಾಗೇ ನಡೆಯುತ್ತೆ ಯುಗಾದಿಗಿಂತ.

ಅದೇನೇ ಇರಲಿ, ಯುಗಾದಿಯ ಈ ಸಮಯ ಗಮನಿಸಿದರೆ, ಪ್ರಕೃತಿಯಲ್ಲೂ ಕೂಡ ನಿಜಕ್ಕೂ ಹೊಸದೇನೊ ಬದಲಾವಣೆಯ ಸಮಯ. ಒಣಗಿದೆಲೆಗಳೆಲ್ಲ ಉದುರಿ, ಹೊಸ ಚಿಗುರು ಮೂಡಿ, ಹೊಸ ವಸಂತಕ್ಕೆ ಕಾಲಿಡುತ್ತಾ, ಹರುಷ ಕಾಣುವುದು ನೋಡಿದ್ರೆ ಖಂಡಿತ ಈ ಸಮಯದಲ್ಲೇ, ಪ್ರಕೃತಿಯ ಮರ-ಮಾಮರಗಳು ಮರುಹುಟ್ಟು ಪಡೆದುದನ್ನು ನೋಡುತ್ತಾ, ನಾವೂ ನಮ್ಮ ಹಳೆಯ ಕಹಿ ನೆನಪನ್ನು ಮರೆತು ಹೊಸ ಸಿಹಿ ಕ್ಷಣಗಳಿಗೆ ತಯಾರಾಗಬೇಕು, ಮರುಹುಟ್ಟು ಪಡೆಯಬೇಕು ಬದುಕು ಎನಿಸುತ್ತೆ. ಇದೆ ಸೂಕ್ತ ಸಮಯ ಹೊಸ ವರುಷದಾರಂಭಕೆ.

ಹಿಂದೂ ದೇಶದಲ್ಲಿ ಮಾತ್ರ ಈ ಸಮಯದಲ್ಲಿ ಪ್ರಕೃತಿಯಲ್ಲಿ ಈ ವಸಂತದ ವಾತಾವರಣ,  ಬೇರೆ ಕಡೆ ಬೇರೆ ಸಮಯ ಎನಿಸುತ್ತೆ.  ಬೇರೆ ದೇಶದ ಕಥೆ ಬೇಡ, ಹಿಂದೂ ದೇಶದಲ್ಲಿ ಮೂಡುತಿದೆ ಅಂದರೆ ಹಿಂದೂ ದೇಶದವರೆಲ್ಲ ಧರ್ಮದಾಚೆಗೆ ನಿಂತು ಪ್ರಕೃತಿಯ ಈ ಸೊಬಗನ್ನು ನೋಡಿ ಹರುಷ ವ್ಯಕ್ತಪಡಿಸುತ್ತಾ ಹೊಸ ಬದುಕಿಗೆ ಸಂತೋಷದಿಂದ ತಯಾರಾಗಬೇಕು ಅಲ್ವಾ. ಆದರೆ ಹಾಗಾಗುತ್ತಿದೆಯಾ.

ಯುಗಾದಿ ಹಿಂದೂಗಳ ಹೊಸವರುಷ ಅಂತೇ. ಅಂದರೆ ಎಲ್ಲಾ ಹಿಂದೂಗಳಿಗೂ ತಾನೇ ? ಹಿಂದೂಗಳು ಅಂದರೆ ಅಖಂಡ ಭಾರತದಲ್ಲಿ ಜೀವಿಸಿರುವ ಪ್ರತಿಯೊಬ್ಬರೂ ಕೂಡ ಅಲ್ಲವಾ? ಬೇಡ, ರಾಮ-ಕೃಷ್ಣರ ಪೂಜಿಸುವ ಜನರೇ ಹಿಂದೂಗಳೆನ್ನೋಣ, ಅವರಾದರೂ ಎಲ್ಲರೂ ಆಚರಿಸಬೇಕಲ್ಲವ?
ಹಿಂದೂ ಹೊಸ ವರುಷ ಕನ್ನಡ,ತೆಲುಗು,ಮರಾಠಿ ಹಿಂದುಗಳಿಗೆ ಮಾತ್ರವಾ ?
ದಕ್ಷಿಣ ದೇಶದ ಕೆಲ ಪ್ರದೇಶಗಳು ಮಾತ್ರ  ಅದ್ಧೂರಿ ಆಚರಣೆ ಮಾಡುತ್ತಾರೆ ಅನಿಸುತ್ತೆ, ಅದೂ 'ಯುಗಾದಿ' ಎಂಬ ಸೂಕ್ತ ಹೆಸರಿಂದ. ಯಾಕೆ ?
ಉಳಿದ ಪ್ರದೇಶಗಳಲ್ಲಿ ಕೆಲವು ಕಡೆ 'ಹಿಂದಿ ವರ್ಷ್ ಆರಂಭ್' ಅಂತ ಅನ್ಕೋತಾರೆ ನಿಜ, ಇಲ್ಲಿಯಂತೆ ಆಚರಿಸ್ತಾರಾ? ಸಂಭ್ರಮ ಜೋರಾಗಿರುತ್ತಾ ? ಗೊತ್ತಿಲ್ಲ. ಯಾಕೆ ?
ಹಿಂದೂ ದೇಶದಲ್ಲಿ ಕೇವಲ ಚಂದ್ರನ ಚಲನೆ ಅಥವಾ ಸೂರ್ಯನ ಚಲನೆ (ಸಿದ್ಧಾಂತ)ಯ ಆಧಾರದಲ್ಲಿರುವ ಕ್ಯಾಲೆಂಡರ್ ಪದ್ಧತಿ ಮತ್ತು ಸೂರ್ಯ-ಚಂದ್ರ ಎರಡನ್ನೂ ಗಮನದಲ್ಲಿಟ್ಟುಕೊಂಡು ತಯಾರಾದ ಕ್ಯಾಲೆಂಡರ್ ಪದ್ಧತಿ ಇವೆ . ಹಾಗಾಗಿ, ಅವರವರ ಕ್ಯಾಲೆಂಡರ್ ಪದ್ಧತಿಗನುಗುಣವಾಗಿ ಹೊಸ ವರುಷ ಆಚರಣೆ ಮಾಡುತ್ತಾರೆ.   
ಕೆಲವು ಪ್ರದೇಶದಲ್ಲಿ ಜನವರಿ ೧ ಮಾತ್ರ ಆಚರಣೆ.

ಹಿಂದೂ ಹೊಸ ವರುಷಾರಂಭ ಎಂದಮೇಲೆ ಎಲ್ಲಹಿಂದೂಗಳಿಗೂ ಒಂದೇ ದಿನ ಇರಬೇಕಿತ್ತು ಅನಿಸುತ್ತೆ, ಆ ಹಿಂದೂಗೆ ಆಗ, ಈ ಹಿಂದೂಗೆ ಈಗ ಯುಗ ಆರಂಭ ಅನ್ನೋಕಾಗತ್ತಾ?

ಈ ದಿನವೇ ರಾಮ ವಾಲಿಯನ್ನು ಕೊಂದನಂತೆ, ಬ್ರಹ್ಮ ಸೃಷ್ಟಿ ಮಾಡಿದನಂತೆ, ಶಾಲಿವಾಹನ ಗೆದ್ದನಂತೆ, ಕೃಷ್ಣ ಯುಗ ಬಿಟ್ಟನಂತೆ, ಇತ್ಯಾದಿ ಪ್ರಸಂಗಗಳಿವೆ. ನಿಜವಾಗಿ ಯಾವ ಕ್ಯಾಲೆಂಡರ್ ಗೆ ಇವುಗಳನ್ನು ಸೇರಿಸೋದು ? ಯಾರು ಆಚರಿಸುವ ಹೊಸ ವರುಷಕ್ಕೆ ಇವನ್ನು ತಳುಕು ಹಾಕೋದು? ಯಾಕೆಂದರೆ ಘಟನೆ ಒಂದು ಸಲ ಮಾತ್ರ ನಡೆದಿರುತ್ತೆ. ಇವರಿಗಾಗಿ ಈಗ, ಅವರಿಗಾಗಿ ಇನ್ನೊಮ್ಮೆ ಅಂತ ಒಂದಕ್ಕಿಂತ ಹೆಚ್ಚು ಸಲ ಅವು ನಡೆದಿರೋಲ್ಲ ಅಲ್ವ.

ಹಿಂದೂ ಪಂಚಾಗದ ಪ್ರಕಾರ ನಾವಿರೋದು ಶಾಲಿವಾಹನ ಶಕೆ ಮತ್ತು ವಿಕ್ರಮ ಸಂವತ್ಸರದಲ್ಲಿ. ಆಫ್ಟರ್ ಕ್ರೈಸ್ಟ್ ನಲ್ಲಲ್ಲ. ಈ ಎರಡೂ ಕಾಲಘಟ್ಟ ಆರಂಭ ಆಗಿದ್ದು ಶಾಲಿವಾಹನ ಹಾಗೂ ವಿಕ್ರಮಾದಿತ್ಯ ಎಂಬ ರಾಜರ ಆಳ್ವಿಕೆ ಆರಂಭ ಆದಾಗ. ಅಂದರೆ ಒಂದು ಯೋಚನೆ ಬರುತ್ತೆ. ಈ ಇಬ್ಬರೂ ರಾಜರೂ ಆಳಿದ್ದು ಯುಗಾದಿಯನ್ನು ಆಚರಿಸೋ ಈ ಪ್ರದೇಶಗಳಲ್ಲಿ ಮಾತ್ರ, (ಆದರೆ ಈಗಿರುವಂತೆ ಕನ್ನಡನಾಡು, ತೆಲುಗುದೇಶ, ಮರಾಠಿ ನಾಡು, ಬೆಂಗಳೂರು ಅಂತ ಬಿಡಿ ಭಾಗಗಳಾಗಲ್ಲ). ಆ ರಾಜರು ಅವರ ಆಗಿನ ಕ್ಯಾಲೆಂಡರ್ ಗೆ ಮಹತ್ವ ಕೊಟ್ಟು ಆಚರಣೆ ಆರಂಭ ಮಾಡಿದ್ದಕ್ಕೆ  ಇಂದಿಗೂ ಅದು ನಡೆದುಬರುತ್ತಿರಬೇಕು ಎನಿಸುತ್ತೆ.
ಶಾಲಿವಾಹನ ಶಕೆ ಅನುಸರಿಸುತ್ತಿದ್ದೇವೆ ಎಂದರೆ ಅರ್ಥ ಇರೊಲ್ಲ, ಯಾಕಂದರೆ ನನಗನಿಸುತ್ತೆ ಆತ ಹಿಂದೂ ರಾಜ ಅಲ್ಲ ಅಂತ. ಹಾಗಾದಮೇಲೆ ಹಿಂದೂ ಜನ ಅದನ್ನು ಯಾಕೆ ಅನುಸರಿಸಬೇಕು. ವಿಕ್ರಮ ಆದರೆ ಪರವಾಗಿಲ್ಲ. ಯಾರು ಮಾಡಿಟ್ಟದ್ದೇ ಆಗಲಿ, ಬಳಕೆಯಲ್ಲಿದೆ ಅದು ಮುಖ್ಯ ಅಂದರೂ ಸರಿ. ಈಗ ಬಿಫೋರ್ ಅಂಡ್ ಆಫ್ಟರ್ ಕ್ರಿಸ್ಟ್ ಕೂಡ ಬಳಕೆಯಲ್ಲಿಲ್ಲವೇ ಹಾಗೆ. 

ಆ ಶಕೆ, ಈ ಸಂವತ್ಸರ, ರಾಮ, ಬ್ರಹ್ಮ, ಕೃಷ್ಣ, ಕಲಿಯುಗ, ಹಿಂದಿ-ಹಿಂದು ಅಂತ ಹೋದರೆ ಸಂಪೂರ್ಣವಾಗಿ ನಿಖರ ಮಾಹಿತಿ ಎಲ್ಲಿ ಸಿಗುತ್ತೊ ಗೊತ್ತಿಲ್ಲ. ಆದರೆ, ಕಣ್ಮುಂದಿನ ಪ್ರಕೃತಿ ಗಮನಿಸಿದರೆ, ಒಣಗಿದ, ಉಪಯೋಗಕ್ಕೆ ಬರದ ಎಲೆ ಉದುರಿಸಿ, ಹೊಸ ಚಿಗುರು ಮೂಡಿಸಿ, ಪ್ರಕೃತಿಯೂ ಹೊಸ ನಲಿವನ್ನು ತೋರುತ್ತಿರಲು, ಹೊಸ ವರುಷ ಆರಂಭ ಮಾಡ್ತಿದೆ ಅನ್ಸಲ್ವಾ. ಇದನ್ನು ಕಂಡು, ಆ ಮರುಹುಟ್ಟು ನೋಡಿ, ಅದರಿಂದ ಪ್ರೇರಿತವಾಗಿ, ನಾವೂ ಕೂಡ, ಹಳೆಯದ, ಬೇಡವಾದುದನ್ನು ಮನಸಿಂದ ಉದುರಿಸಿ, ಮರೆತು, ಹೊಸ ಯೋಚನೆ ಮೂಡಿಸಿಕೊಂಡು, ಹೊಸ ಅನುಭವಕ್ಕೆ ತಯಾರಾಗಿ ನಗುತ್ತಿರಬೇಕು,  ನನಗೂ ಹೊಸ ಕಾಲ ಬಂತೆಂದು ನಲಿಯಲು, ಹೊಸ  ವರುಷಾರಂಭ ಮಾಡಲು ಇದೇ ಸೂಕ್ತ ಸಮಯ ಅನಿಸಲ್ವಾ...


..... ಹೊಂಗೆ ಹೂವ ತೊಂಗಲಲಿ ಭೃಂಗದ ಸಂಗೀತ ಕೇಳಿ ಮತ್ತೆ ಕೇಳಿ ಬರುತಿದೆ
ಬೇವಿನ ಕಹಿ ಬಾಳಿನಲ್ಲಿ ಹೂವಿನ ನಸುಗಂಪು ಸೂಸಿ ಜೀವ ಕಳೆಯ ತರುತಿದೆ
ವರುಷಕೊಂದು ಹೊಸತು ಜನ್ಮ ವರುಷಕೊಂದು ಹೊಸತು ನೆಲೆಯು ಅಖಿಲ ಜೀವಜಾತಕೆ
ಒಂದೆ ಒಂದು ಜನ್ಮದಲ್ಲಿ ಒಂದೆ ಬಾಲ್ಯ ಒಂದೆ ಹರಯ ನಮಗದಷ್ಟೆ ಏತಕೋ
ನಿದ್ದೆಗೊಮ್ಮೆ ನಿತ್ಯ ಮರಣ ಎದ್ದ ಸಲ ನವೀನ ಜನನ ನಮಗೆ ಏಕೆ ಬಾರದೋ... -ದ.ರಾ. ಬೇಂದ್ರೆ. 

ಶುಭವಾಗಲಿ.

ಮಸಿಯೋ ರಂಗೋ..

!! ಜ್ಞಾನಾರ್ಪಣಮಸ್ತು !!

~.~

'ಮಸಿ' ಬಳಿದುಕೊಂಡ ಗೋಡೆಗಳ ನಡುವೆ ಎಷ್ಟೇ ಜಾಗರೂಕತೆಯಿಂದ ನಿಂತರೂ 'ಮಸಿ' ಹೇಗಾದರೂ ತಾಗಿಬಿಡುತ್ತದೋ, ಹಾಗೆಯೇ ಹೆಂಗಳೆಯರ ನಡುವೆ ಇದ್ದಾಗ ತಿಳಿದೋ ತಿಳಿಯದೋ ಕಾಮದ ವಾಸನೆ ತಾಗಿಬಿಡುತ್ತದೆ’ - ಪರಮಹಂಸರು.

ನಾನು ಹುಡುಗಿಯರ ಜೊತೆ ಬೆರೆಯುತ್ತಿದ್ದುದು ತುಂಬಾ ವಿರಳ, ಇಲ್ಲವೇ ಇಲ್ಲ ಎನುವಷ್ಟು.
ನನ್ನ ಈ ಶೈಲಿಯ ಬಗ್ಗೆ ಸಮರ್ಥನೆಗಾಗಿ ಈ ಮೇಲಿನ ಮಾತು ಹೇಳಿದಾಗ ‘ತಪ್ಪು.. ನೀನು ಹುಡುಗಿಯರ ಜೊತೆ ಬೆರೆಯುತ್ತಿಲ್ಲವೆಂದರೆ, ನೀನು Strong ಅಂತ ಅಂದುಕೊಬೇಡ.  ಅದು ನಿನ್ನ Weakness ಅಷ್ಟೆ. ಬೆರೆಯಬೇಕು. ಮುಂದಿನ ಬದುಕಲ್ಲಿ ನೀನೊಬ್ಬನೇ ಇರುವುದಿಲ್ಲ, ಕೇವಲ ಗಂಡಸರೇ ಇರುವುದಿಲ್ಲ.. ಹೆಂಗಸರ ನಡುವೆ ಬೆರೆಯುವುದನ್ನು ಅಭ್ಯಾಸ ಮಾಡಿಕೊ.. ' ಎಂದಿದ್ದರು ನನ್ನ ಗುರುಗಳು. ಪ್ರಯತ್ನಿಸಿದ್ದೆ ಕೂಡ.
ಇರಲಿ, 
ಆ ಮೊದಲ ಹೇಳಿಕೆ ನನ್ನದಲ್ಲ. ಸನಾತನ ಸಂಸ್ಕೃತಿಯ ಮಹಾಪುರುಷ ಪರಮಹಂಸರು ತುಂಬಾ ಹಿಂದೆಯೇ ಹೇಳಿರೋದು. ಯಾವ ಅರ್ಥದಲ್ಲಿ.. ಗೊತ್ತಿಲ್ಲ.  ನಾನು ಓದಿದ್ದು ಅಷ್ಟೆ. ನನ್ನ ಅಂದಿನ ಮನಸ್ಥಿತಿಗೆ ಆಗ ಅದು ಇಷ್ಟವೂ ಆಗಿದ್ದು ನಿಜ. 
ಇದನ್ನ ಇಂದಿಗೆ ಹೋಲಿಸಿ ತೂಗಿ ಅಳೆದು ನೋಡಿದರೆ....


(ಫೋಟೋ ಕೃಪೆ : ಅಂತರ್ಜಾಲ )

ಮಣ್ಣಿಗೆ ಹಲವಾರು ಔಷದ ಸೇರಿಸುತ್ತಾ ಹೋದಾಗ ಮಣ್ಣಿನ ಬಣ್ಣ ಬದಲಿಸಬಹುದಾದ್ರೂ ಮಣ್ಣು ಮಣ್ಣಾಗಿಯೇ ಇರುತ್ತದೆ, ಹಾಗೆಯೇ,
ಸ್ನೇಹ, ಸಮಾನತೆ, ಹಕ್ಕು, ಅರಿವು, ಹೀಗೆ ಹಲವಾರು ಬದಲಾವಣೆಗಳ ಬಣ್ಣ ಹಚ್ಚುತ್ತಿದ್ದರೂ ನಮ್ಮ ಈ ಮಣ್ಣು ತನ್ನತನವನ್ನು ಇಂದಿಗೂ  ಉಳಿಸಿಕೊಂಡಿದೆ ಎನ್ನಬಹುದಾ.. ಅಂದರೆ, ಈ ಮಣ್ಣಲ್ಲಿ ನಾವೆಷ್ಟೇ ಬದಲಾವಣೆ ನಮ್ಮಲ್ಲಿ ಮಾಡಿಕೊಳ್ಳುತ್ತಿದ್ದರೂ ನಮ್ಮ ಮಣ್ಣಿನ ಗುಣ ನಮ್ಮ ರಕ್ತದಲ್ಲಿ ಸೇರಿ ಕಾಣದೆ ಹರಿಯುತ್ತಿರಬಹುದು, ಅದಕ್ಕೆ ನಾವು ಸ್ಪಂದಿಸುತ್ತಲೂ ಇರಬಹುದು. ಹಿಂದಿನವರು ಹೇಳಿದವು, ಅವರ ಆಚರಣೆ,ನಿಯಮಗಳು, ನಂಬಿಕೆಗಳು ನಿಜ, ಅದರ ಹಿಂದಿನ ಅರ್ಥ ಸರಿಯಾಗಿ ತಿಳಿಯುತ್ತಿಲ್ಲ ಎಂದೆನಿಸೋ ಸಮಯಗಳು ಒಮ್ಮೊಮ್ಮೆ ಎದುರಾಗುತ್ತಾ, ಇದು ಈ ಮಣ್ಣಿನ ಪ್ರಭಾವ ಎನಿಸುತ್ತಿರಲೂಬಹುದು.

ನಾವು ತುಂಬಾ ದೂರ ಹೋಗುತ್ತಿದ್ದೇವಾ.. ಅಳತೆ ಮೀರುತ್ತಿದ್ದೇವಾ.. ಅಥವಾ ಕೆಲವನ್ನು ವಿಚಾರ ಮಾಡಿ ತಪ್ಪೆಂದು ಹೇಳಿ ಒಪ್ಪದೆ ಸರಿ ಎನಿಸಿದ ಉತ್ತಮ ಹಾದಿಯಲ್ಲೇ ಸಾಗುತ್ತಿದ್ದೇವಾ..?

ಆ ಹೇಳಿಕೆ ಕುರಿತು, ಇಲ್ಲಾ, ಹಾಗೇನಿಲ್ಲ ‘ಇದು purely uneducated human beings ಮಾತ್ರ ಹಾಗಂದುಕೊಳ್ಳಬಲ್ಲರು ಎಂದುಕೊಳ್ಳೋಣ.., ಆದರೆ ಹಿಂದಿನ/ಈಗಿನ ಸಮಾಜವನ್ನೊಮ್ಮೆ ಅವಲೋಕಿಸಿದರೆ ಯಾರು ಬುದ್ಧಿಶಾಲಿಗಳು, ತಿಳಿದವರು, ವೀರರು, ಸ್ವಾಮಿಗಳು, ಮಹಾಪುರುಷರು ಎಂದೆನಿಸಿಕೊಳ್ಳುವರೋ ಅವರೇ ಮಸಿ ಬಳಿದುಕೊಳ್ಳೋದು ಕಾಣಿಸುತ್ತಿದೆ.
'ಮಸಿ' ಆಗೋದು ತಪ್ಪೇನಿಲ್ಲ ಅದು ಸಹಜ ಎನ್ನೋದು ಇನ್ನೊಂದು ಮಾತು. 

ಇಲ್ಲ,.. ಅದೆಲ್ಲ ಅರ್ಥ ಹೀನ ಎಂದುಕೊಳ್ಳೋಣ.
ಅರಿವಿರುವವರು,  ವಿದ್ಯಾವಂತರು ಎಂದು ಹೇಳಿಕೊಳ್ಳೋ ಎಷ್ಟೋ ಆಧುನಿಕ ಜನಗಳ ಜೀವನ ಜಂಜಾಟದಲ್ಲಿ ಜಾರಿಹೋಗಿ ಅವರ ಸ್ನೇಹ-ಸಂಬಂಧಗಳಲ್ಲಿ ಕೆಲವೊಮ್ಮೆ ಮನಸ್ಸು ಜಾರಿ-ಮೀರಿರುತ್ತದೆ, ಮೀರಲೂ ಬಹುದು. 'ಮಸಿ' ಮೆತ್ತಿಕೊಂಡಿರಬಹುದು.  
ಆದರೆ ಆ 'ಮಸಿ'ಯ ಗುರುತನ್ನು ಬಚ್ಚಿಡಲು ಬಯಸಿದರೆ, ಆ ಸತ್ಯ ಹೇಳಲು, ಅದನ್ನು ನೆನೆಯಲು ಅಂಜುವಂತಾಗಿ-ಅಸಹ್ಯ ಹುಟ್ಟಿ, ತನ್ನ ಸ್ಥಿತಿಗೆ ಮರುಗಿ, ಅದು ತಪ್ಪೇ - ಸರಿಯೆ ಎನ್ನುತ್ತಾ ಹೇಳಿಕೊಳ್ಳಲಾಗದಂತಹ ಗೊಂದಲವನ್ನುಆ ಸತ್ಯಕ್ಕೆ ಸಾಕ್ಷಿಯಾದ 'ಮಸಿ' ಮೆತ್ತಿಕೊಂಡ ಮನಸ್ಸುಗಳು ಅನುಭವಿಸುತ್ತವೆ/ತ್ತಿವೆ ಎಂದರೆ ಆ ಮನಸ್ಸುಗಳು ಇನ್ನೂ WEAK ಆಗಿಯೇ ಇವೆ ಎನ್ನಬಹುದಾ.. ಅದಿರಲಿ,'ಮಸಿ'ಯಾದ ಮೇಲೆ ಭುಗಿಲೇಳುವ ಆ ಗೊಂದಲ ಸೃಷ್ಟಿಗೆ ಕಾರಣ - ಆ ಮನಸ್ಸು ಬೆಳೆದಿದ್ದು, ಅದರ ಯೋಚನೆಗಳು ಚಿಗುರಿದ್ದು ಈ ಮಣ್ಣಲ್ಲಿ ಎಂದಾ..? ಅದಕ್ಕೆ ಈ ರೀತಿ ಸ್ಪಂದಿಸುತ್ತಿದೆಯಾ..?  ನಮ್ಮ ಮಣ್ಣಿನ ಗುಣವೇ ಅಂತಹುದು ಎನ್ನಬಹುದೇ... ಗೊತ್ತಿಲ್ಲ. 

ತನ್ನ ಮನಸ್ಸು Weak ಇರುವವರು ಮಾತ್ರ ಅಂತಹ ಹೇಳಿಕೆಗಳನ್ನು, ಮಾತುಗಳನ್ನು ಆಡಬಲ್ಲರು ಎಂದುಕೊಂಡರೆ, ಖಂಡಿತವಾಗಿ ಸ್ಪಷ್ಟವಾಗಿ ಹೇಳಬೇಕಾಗುತ್ತದೆ ಆ ಹೇಳಿಕೆ ನೀಡಿದವರು ಮನಸ್ಸು STRONG ಇಲ್ಲ ಎಂದು. ಅವರ ದೃಷ್ಟಿಕೋನ ತಪ್ಪೆಂದು. 
ಇಲ್ಲ ಹೇಳಲಾಗುವುದೇ ಇಲ್ಲ. ಆದರೆ, ಎಲ್ಲದರಲ್ಲೂ ಉತ್ತಮ ಮಾರ್ಗದರ್ಶನ ನೀಡಿರುವವರ ಮಾತಲ್ಲಿ ಕೆಲವೊಮ್ಮೆ ಇಂತಹ ಅರ್ಥವಿಲ್ಲದ ಮಾತುಗಳು ಬಂದಿರಬಹುದು ಎಂದಿಟ್ಟುಕೊಳ್ಳೋಣ. ಅಂತಹ ಮಹನೀಯರ ಮಾತಲ್ಲಿ, ಒಪ್ಪವಾದವನ್ನು ಒಪ್ಪಿ ತಪ್ಪಿದ್ದಲ್ಲಿ ಅಂತಹವುಗಳನ್ನು ತಿದ್ದಿ ಸರಿಯಾದ ಅರ್ಥ ನಾವು ಕಂಡುಕೊಳ್ಳುತ್ತಿದ್ದೇವೆ ಎಂದು ಭಾವಿಸೋಣ..

ಹೆಣ್ಣು-ಗಂಡಿನ ಸ್ನೇಹದಲ್ಲಿ ಅಂತಹ ಭಾವನೆ ಬರುತ್ತಿದ್ದರೆ,  ಅದಕ್ಕೆ ಕಾರಣ ನಮ್ಮ ಮಣ್ಣಿನ ಗುಣ, ನಾವು ನಡೆದು ಬಂದ ದಾರಿ, ನಮ್ಮ ಆಲೋಚನೆಗಳು ಏನೇ ಇರಲಿ ಅಥವಾ ಸತ್ಯವಾಗಿ ಅದು ಪರಿಸರ ಸಹಜ ಧರ್ಮವಿರಬಹುದು.
ಪರಿಸರ ಧರ್ಮವೇ ಸರಿ, ಯಾಕೆಂದರೆ ಅದು ಈ ಮಣ್ಣಲ್ಲಲ್ಲ ಎಲ್ಲ ನೆಲದಲ್ಲೂ ಕಾಣುವ ಸಹಜತೆಯ ಭಾವ.
ಹೊತ್ತಿಬರುವ ಆ ಭಾವಗಳ ತಡೆದು, ಹತ್ತಿಕ್ಕಿ, ಮೀರಿನಿಂತು ನಡೆಯುವುದು ನಮ್ಮ ನೆಲದಲ್ಲೇ ಹೆಚ್ಚಾಗಿ ಕಂಡ/ಕಾಣಬಲ್ಲ ಇನ್ನೊಂದು ಬಗೆ. 
ಅಂತಹ  ಪ್ರಕೃತಿ-ಧರ್ಮವನ್ನು ಗೊಂದಲಗಳಿಲ್ಲದೇ, ಪಾಪ-ಪ್ರಜ್ಞೆಗಳಿಲ್ಲದೆ ಸ್ವೀಕರಿಸುವಷ್ಟು STRONG MIND ಇರುವವರು ನಾವಾಗಬೇಕು ಎಂದರೆ ಅದು ಕೂಡ ಸರಿ. ಬೇರೆಯದೇ ನೆಲದಲ್ಲಿ ಕಾಣುವ ಆ ಗುಣ ಇಲ್ಲಿ ಅನುಕರಣೆ ಆಗಬಹುದು. 

ಅದೇನೇ ಆಗಲಿ, ಎಂತಹ ಬದಲಾವಣೆ ಆಗುತ್ತಿದ್ದರೂ ಇಲ್ಲಿನ ಮನಸ್ಸುಗಳು ತುಡಿಯುವ ರೀತಿಯೇ ಬೇರೆ,  ಇನ್ನೂ ಕೂಡ ಸೂಕ್ಷ್ಮ ಭಾವಗಳಿಗೆ ಸ್ಪಂದಿಸುತ್ತವೆ... ಅಷ್ಟು ಬೇಗ ಅಂತಹ ದಿಟ್ಟತನ ತೋರಲಾರವಾದರೂ ಕೂಡ ಒಂದು ಮಾತು:
ಹೆಣ್ಣು ಪವಿತ್ರ ಅಂತ ಹೇಳಿರೋದು ಅದು ನಮಗೆ ಮಾತ್ರ ಸೇರಿದ ಸ್ವತ್ತಾಗಬೇಕು ಎಂಬ ಮನಸ್ಸುಗಳಿಂದ’ ಎಂದ ಜನರು ನಮ್ಮ ಜನರ ಮನಸ್ಸನ್ನು ಬದಲಾಯಿಸುವಲ್ಲಿ ಈಗೀಗ ಯಶಸ್ವಿಯಾಗುತ್ತಿದ್ದಾರೆ, ಅದಕ್ಕೆ ಪೂರಕವಾಗಿ ಆಧುನಿಕತೆಯ ಗಾಳಿ ಬೀಸುತ್ತಿದೆ,ಹಸಿವು ಆಸೆಯಾಗುತ್ತಿದೆ,  ನಮ್ಮದೇ ನೆಲವ ಅದೇಕೋ ಕಾರಣವಿಲ್ಲದೆ ನಾವೇ ವಿರೋಧಿಸುವ, ಅಣಕಿಸುವ ಮನಸ್ಥಿತಿ ಅದಕ್ಕೆ ಸಹಕಾರ ನೀಡುತ್ತಿದೆ ಕೂಡ.
ಹೆಣ್ಣು-ಗಂಡು ಎಂಬ ಬೇಧವಿಲ್ಲದೆ ಸಮಾನತೆಯ ಕಡೆ ಹೆಜ್ಜೆ ಸಾಗುತ್ತಿವೆ. ಇಲ್ಲಿ ಮಸಿ-ಮಣ್ಣು ಪದಗಳಿಗೆ ಅರ್ಥವಿಲ್ಲ ಎನ್ನೋಣ.
ಆಗಲಿ, ವಿದ್ಯೆ, ಅರಿವು ಕಾಣದ ಜನಗಳಲ್ಲೂ ಇಂತಾ ಮಸಿ ಪ್ರಸಂಗಗಳು ಹೊಸದೇನಲ್ಲ. ಪ್ರಪಂಚದ ಇತರ ಬಹುಪಾಲು ಜೀವಿಗಳ ಬಾಳು ಸಹಜಧರ್ಮ ಮೀರಿದ್ದಲ್ಲ. ಹಾಗಾಗಿ ಅದು ಮಣ್ಣನ್ನು ಮೀರಿದ ಪ್ರಕೃತಿ ಧರ್ಮದ ಸ್ಪಂದನ.

ಇಂತಹವನ್ನು ಸಣ್ಣ ಪುಟ್ಟ ವಿಚಾರಗಳೆಂದು, ಸಾಮಾನ್ಯವೆಂದು ಪರಿಗಣಿಸಿ, ಹೊಂದಿಕೊಂಡು ನಡೆದರೂ ಸಂತೋಷ.. 
ಹಿಂದಿನವರ ಮಾತಲ್ಲಿಯೇ ಸ್ವಲ್ಪ ತಪ್ಪಿದೆ ಎನ್ನೋಣ.
ಅಂತಹ ಹಾದಿಗಳಲ್ಲಿ 'ಮಸಿ' ಆಗದಂತೆ ಜಾಗರೂಕತೆಯಿಂದ ಸಾಗಿದರೂ ಖುಷಿ, ಕೆಲವೊಮ್ಮೆ 'ಮಸಿ' ಆದರೂ ಅದು ಸಾಮಾನ್ಯವೆಂದು ತಿಳಿದು ಲೆಕ್ಕಿಸದೆ ಅಥವಾ ಅದು 'ಮಸಿ' ಅಲ್ಲ 'ರಂಗು' ಎಂದು ಮೆಚ್ಚಿಕೊಂಡರೂ, ಮುಂದೆಂದೂ ಅದರ ತಪ್ಪು - ಒಪ್ಪುಗಳನ್ನು ನೆಲ-ಧರ್ಮ ಎಂಬ ವಿಷಯದಲ್ಲಿ ತೂಗಿ ನೋಡಿ ಪಾಪ-ಪ್ರಜ್ಞೆಗಳಿಗೆ ಸಿಲುಕದಂತೆ, ಕೊರಗದಂತೆ, ದಿಟ್ಟತನದಿ ದೃಷ್ಟಿಕೋನ ಬದಲಿಸಿ ಬೆಳೆದು ನಿಂತು ಬದುಕಿ STRONGNESS ತೋರಿದರೆ ಮಾತ್ರ ಆ ಹೇಳಿಕೆ ಅಲ್ಲ ಅಂತಹ ನೂರು ಹೇಳಿಕೆಗಳನ್ನುಅರ್ಥವಿಲ್ಲದವು, ಅದನ್ನು ಹೇಳಿದವರು ಕೂಡ ಸರಿಯಾಗಿ ಬಲಿತಿಲ್ಲದ ಮನದವರು, WEAK MINDED ನವರು ಎನ್ನಬಹುದು. ಹೊಸ ಅರ್ಥ ಕೊಡಬಹುದು. 
ಅಂತಹ ಭಾವಗಳ ಮೀರುವುದು ಸುಲಭದ ಮಾತಲ್ಲವಾದರೂ ಸಾಧ್ಯವಿದೆ, ಪ್ರಯತ್ನಿಸಿ. ನೋಡೋಣ.
ದೃಷ್ಟಿಕೋನ ಬದಲಿಸಿಕೊಳ್ಳೋಣ.

ಮಸಿ ಕತ್ತಲೆಯೋ, ಬಣ್ಣದಾಸೆಗಳೋ, ರಂಗು ಬಯಕೆಗಳೋ ಕಾಣೆ, ಒಂದೆರಡು ಸಾಲಿನ ಕುರಿತು ಈ ರೀತಿ ಇಷ್ಟು ತರ್ಕ ಮಾಡುವುದು ಎಷ್ಟು ಸರಿ.



~-~
Related Posts Plugin for WordPress, Blogger...