ಸ್ವೀಕರಿಸು ನನ್ನನ್ನ..

!!ಜ್ಞಾನಾರ್ಪಣಮಸ್ತು!!


ಕಾರಣಗಳು ಕಾರಣಗಳಲ್ಲ ಎಂದರೂ ಕೂಡ ಕೆಲ ಕಾರಣಗಳಿಂದ ನಾನು ಬ್ಲಾಗ್ನಲ್ಲಿ ಬರೆಯುವುದನ್ನು ನಿಲ್ಲಿಸಿ(ಕವಿತೆ ಬರೆಯುವುದನ್ನು ನಿಲ್ಲಿಸಿರಲಿಲ್ಲ) ಹತ್ತತ್ತಿರ ಎರಡು ವರುಷಗಳಾಗುತ್ತಾ ಬಂದಿತ್ತು. ಯಾವ ಕಾರ್ಯಸಾಧನೆ!!?ಗಾಗಿ ನಾನು ಬ್ಲಾಗ್ ಕಡೆ ಬರುವುದನ್ನು ನಿಲ್ಲಿಸಿದ್ದೆನೋ ಆ ಕಾರ್ಯ ಮುಗಿಯುವ ಹಂತದಲ್ಲಿತ್ತು ಹಾಗೂ ಅದರಲ್ಲಿ ಗೆಲುವು ನಿಶ್ಚಿತ ಎಂದೂ ಒಳಮನಸ್ಸು ಹೇಳುತ್ತಿತ್ತು.

ರಾತ್ರಿಪೂರ ತುಂಬಾ ಹೊತ್ತು ಎಚ್ಚರವಿದ್ದು ಏನಾದರೊಂದು ಮಾಡುವುದು ನನಗಿಷ್ಟವಾದ ಒಂದು ಹವ್ಯಾಸ.
ಅಂದು ಮಧ್ಯರಾತ್ರಿ ಸರಿಸುಮಾರು 2 ಗಂಟೆ ಇರಬಹುದು, ಮನಸ್ಸು ಕೆಲ ಒತ್ತಡಗಳಿಂದ ಬಿಡುಗಡೆ ಹೊಂದಿ ನಿರಾಳ ಆಗಿದ್ದರಿಂದಲೋ ಏನೋ ಅಂದು ರಾತ್ರಿ ನನ್ನ ಬ್ಲಾಗ್ ನೆನಪಾಗುತ್ತಾ ಬಂತು, ನಾನು ಮತ್ತೆ ನನ್ನ ಬ್ಲಾಗ್ ಮುಖ ನೋಡಬೇಕು ಎನಿಸಿತು. ನನ್ನ ‘ಮನಸಿನಮನೆ’ಯನ್ನು ತೆರೆದು ಪುಟಗಳನ್ನು ತಿರುವುಹಾಕೋಕೆ ಶುರುಮಾಡಿದೆ. ಈ ಎರಡು ವರುಷಗಳಲ್ಲಿ ನನ್ನ ಮೇಲೆ ನಾನೇ ನಡೆಸಿದ ಹಲವು ಜೀವನಪ್ರಯೋಗಗಳಿಂದ ನನ್ನ ಮನಸ್ಥಿತಿಯ ಚಿತ್ರಣ ಹಿಂದಿಗಿಂತ ತುಂಬಾನೇ ಬದಲಾಗಿತ್ತು. ನಾನೇ ಬರೆದಿದ್ದ ನನ್ನ ಮನಸಿನಮನೆಯ ಕವಿತೆಗಳನ್ನು ಓದಿದಾಗ ಇವನ್ನೂ ಬರೆದಿದ್ದು ನಾನೇ ಎಂದು ನಂಬಲಾಗದೇ ಓದುತ್ತಾ ಸಾಗಿದೆ. (ನನಗನಿಸಿದಂತೆ) ಇಂದು ಜೀವನದಲ್ಲಿ ಆಶಾವಾದಿ ಬದುಕಿನ ಕುರಿತು ಏನಾದರೂ ಹೇಳುತ್ತಿರುವ ನಾನು., ನಾನೇ, ಹಿಂದೆ ಬರೆದಿದ್ದೆಲ್ಲಾ ನಿರಾಶವಾದವೇ ತುಂಬಿ ಹರಿದಿದ್ದ ಕವಿತೆಗಳು. ಜೀವನ ನಶ್ವರ ಎಂದು ಬರೆದಿದ್ದ ನನ್ನ ಆ ಹಿಂದಿನ ಸ್ಥಿತಿ ನೆನಪಾಗಿ ನನಗೆ ನನ್ನ ಮೇಲೆಯೇ ಏನೋ ಅನಿಸುತ್ತಿತ್ತು. ನನ್ನ ಆ ನಿರಾಶಾವಾದದ ಸಾಲುಗಳಿಗೆ ಪ್ರತಿಕ್ರಿಯಿಸಿ - ಈ ಖಿನ್ನತೆ ಬೇಡ, ಇದರ ದಾರಿ ಬಿಟ್ಟು ಬಾ ಎಂದು ಆಶಾವಾದದ ದಿಕ್ಕು ತೋರಿಸುತ್ತಿದ್ದ ನನ್ನ ಬ್ಲಾಗ್ ಹಿತೈಷಿಗಳ ಅಭಿಪ್ರಾಯಗಳು ನಿಜಕ್ಕೂ ನನ್ನನ್ನು ಮೌನಿಯಾಗಿಸಿದವು. ಮತ್ತೆ ಅವರೆಲ್ಲರ ಸ್ನೇಹ-ಸನಿಹ ಬೇಕೆನಿಸಿತು.
ಬ್ಲಾಗ್ ಕುರಿತಾದ ಎಲ್ಲ ಸಂಬಂಧ ದೂರವಾಗಿಸಿಕೊಳ್ಳಲು ನಾನು ತೆಗೆದುಹಾಕಿದ್ದ ನನ್ನೆಲ್ಲ ಅಕೌಂಟ್ ಗಳನ್ನು ಮತ್ತೆ  ತೆರೆದೆ. ನನ್ನ ಆ ಹಳೆಯ ಫೇಸ್ ಬುಕ್ನಲ್ಲೂ ಅದೇ ನಿರಾಶಾವಾದದ ಕಥೆಯೇ. ನನ್ನ ಆ ಪ್ರೊಫೈಲ್ ನೋಡಿ ನನ್ನ ಆ ನಿರಾಶವಾದಕ್ಕೆ ಕಾರಣ ಕೇಳುತ್ತಾ ನನ್ನ ಯೋಚನಾಶೈಲಿ ತಪ್ಪಾಗಿದೆ ಎಂದು ತುಂಬಾ ಜನರು ಉತ್ಸಾಹ ತುಂಬಲು ಯತ್ನಿಸಿ ಕಳುಹಿಸಿದ್ದ ಸಂದೇಶಗಳತ್ತ ಕಣ್ಣು ಹಾಯಿಸುತ್ತಿದ್ದೆ.

ಹೌದು. ಅಕ್ಕ. ಸ್ವಲ್ಪವೂ ಪರಿಚಯ ಇಲ್ಲದಿದ್ದರೂ ನನ್ನ ಬರಹದ ಹಿಂದಿನ ಮನೋಭಾವ ಅರಿತು, ನನ್ನ ಆ ವಯಸ್ಸಿಗೆ ಆ ಯೋಚನೆಗಳು ಸಲ್ಲದೆಂದು ತಿಳಿದು, ಜೀವನದ ಕುರಿತು ನನಗಿದ್ದ ದೃಷ್ಟಿಕೋನ ಬದಲಾಯಿಸಲು ಬಯಸಿ, ಸೋದರಿವಾತ್ಸಲ್ಯ ಕಾಣದ ನನಗೆ ತಮ್ಮಯ್ಯ ಎಂದು ಕರೆದು, ಪ್ರೀತಿಯ ಮಾತನಾಡಿ ನನ್ನ ನೋಟ ಬದಲಿಸಿಕೊಳ್ಳಲು ಬುದ್ಧಿಹೇಳಿದ್ದ ರೂಪಕ್ಕ. ಅವರು ನನ್ನೊಡನೆ ಸಂಭಾಷಿಸಿದ್ದ ಆ ಸಂಭಾಷಣೆಯನ್ನು ಅಂದು ಮತ್ತೆ ಮತ್ತೆ ಓದಬೇಕೆನಿಸಿತು, ಓದಿದಷ್ಟೂ ಮನದಾಳದ ಕಡಲ ನೀರಿಂದ ಜಾರಿ ಹೊರಬಿದ್ದ ಭಾವನೆಯ ಮೀನೊಂದು ಒದ್ದಾಡಿದಂತ ಅನುಭವ. ಅದ್ಯಾಕೋ ಕಾಣೆ ಕಣ್ಣುಗಳು ತುಂಬಿಕೊಳ್ಳತೊಡಗಿದವು. ಇವರೆಲ್ಲ ಯಾರು.., ಯಾಕಾಗಿ ನನ್ನ ಕುರಿತು ಕಾಳಜಿ ವಹಿಸಿ ಅನುಕಂಪ ತೋರಿಸುತ್ತಿದ್ದರು.., ಎನಿಸತೊಡಗಿ ನನಗೂ ಇವರಿಗೂ ಇದ್ದ ಬಂಧವಾದರೂ ಎಂತಹದು ಎಂದು ಮನಸ್ಸು ಚಿಂತಿಸತೊಡಗಿತು.  ಇಂತಹ ಹಿತೈಷಿಗಳೆಲ್ಲರನ್ನೂ ಮರೆತು ನಾನು ತಪ್ಪು ಮಾಡಿದ್ದೇನ ಎನಿಸಿತು,ಭಾವುಕನಾದೆ. ಮತ್ತೆ ಮತ್ತೆ ಈ ಜನಮಾನಸದ ಒಡನಾಟ ಬೇಕು ಎಂದು ತವಕ ಉಂಟಾಗಿ, ನಾನು ಮತ್ತೆ ಬ್ಲಾಗಿಗನಾಗಬೇಕು, ಮತ್ಯಾವ ಕಾರಣಕ್ಕೋ ದೂರಾಗಬಾರದೆಂದು ನಿಶ್ಚಯಿಸಿದೆ.

ಇಂದು ಬಂದಿದ್ದೇನೆ.

ಬ್ಲಾಗ್ ಲೋಕವೇ ನಿನ್ನನ್ನು ದೂರವಿರಿಸಿ ತಪ್ಪು ಮಾಡಿದೆನೇನೋ ಎಂಬ ಪಾಪಪ್ರಜ್ಞೆ ನಿರಂತರವಾಗಿ ಕಾಡುತ್ತಿತ್ತು.
ನಾನು ಭವಿಷ್ಯದಲ್ಲಿ ಏನಾಗಬೇಕು ಎಂದಿದ್ದೆನೋ ಅದು ಆಗೇ ಆಗುತ್ತೇನೆ, ಇಂದು ಮತ್ತೆ ಲೇಖನಿಯಿಡಿದು ಬ್ಲಾಗಿಗನಾಗಿ, ಹಿಂದಿರುಗದೆ ಮುಂದುವರೆಯಬಯಸುವ ನಿಟ್ಟಿನಲ್ಲಿದ್ದೇನೆ,ದಯವಿಟ್ಟು ಅವಕಾಶ ಮಾಡಿಕೊಡು. ನನ್ನೆಲ್ಲ ಭಾವನೆಗಳನ್ನು ಬಿತ್ತಲು ಎದೆಕೊಟ್ಟ ಓ ನನ್ನ ಪ್ರೀತಿಯ ಮನಸಿನಮನೆಯೇ ನಾನು ಮತ್ತೆ ನಿನ್ನ ಮಡಿಲಿಗೆ ಬಂದಿದ್ದೇನೆ ಸ್ವೀಕರಿಸು ನನ್ನನ್ನ. ನಿನ್ನಲ್ಲಿ ಮತ್ತೆ ಅಕ್ಷರಪುಷ್ಪವನ್ನು ಅರಳಿಸುವ ಪಣ ತೊಡುತ್ತಿದ್ದೇನೆ,ಸ್ವೀಕರಿಸು ನನ್ನನ್ನ. ಸ್ವೀಕರಿಸು.
(ಸೂಚನೆ: ಈ ಹತ್ತು ಸಾಲುಗಳು ‘ಮಠ’ ಚಿತ್ರದ ಒಂದು ದೃಶ್ಯದಿಂದ ಪ್ರೇರೇಪಿತವಾಗಿವೆ)

ಬಾಡಿದ ಕುಸುಮಗಳ
ಘಮಿಸುವಂತೆ ಅರಳಿಸಿ..
ಮನದಮನೆಗೆ ದೀಪತೋರಿ
ಕತ್ತಲೆಯ ದೂರವಿರಿಸಿ..
ಹೊಸದೊಂದು ಲೇಖನಿಯಿಂದ
ಅಕ್ಷರದ ಚಿತ್ರಬಿಡಿಸಿ.
ಮತ್ತೆ ಸ್ವಾಗತಿಸುತಿರುವೆ
ನಲ್ಮೆಯ ನಗುಹೂವಿರಿಸಿ..

ಮನಸಿನಾಮನೆಗೆ
ಬಲಗಾಲಿಟ್ಟು ಒಳಗೆ ಬಾ..
ಅರಳು ಬಾ ಕವಿತೆಯ ಚೆಲುವೆ..
ಬೆರೆವ ಬಾ ಕವನದ ಒಲವೆ..
ಮತ್ತೆ ಮರೆಯಲಾಗಲಾರದಂತೆ
ಅಗಲಿ ನೋವ ನೀಡದಂತೆ
ಬಿಗಿದಪ್ಪಿ ಆಲಂಗಿಸು.
ಸ್ವೀಕರಿಸು..
ಸ್ವೀಕರಿಸು ನನ್ನನ್ನ ಸ್ವೀಕರಿಸು.

4 ಕಾಮೆಂಟ್‌ಗಳು:

sunaath ಹೇಳಿದರು...

ಕನಸುಗಳನ್ನು ಹೊತ್ತುಕೊಂಡು, ಮತ್ತೆ ನೀವು ಮರಳಿರುವುದು ತುಂಬ ಸಂತೋಷವನ್ನು ಕೊಡುತ್ತಿದೆ. Wish you all happiness.

ಮನಸಿನಮನೆಯವನು ಹೇಳಿದರು...

sunaath ಅವ್ರೆ,
ನಿಮ್ಮಂತಹ ಹಿತೈಷಿಗಳ ನೆನಪೇ ನನ್ನನ್ನು ಮತ್ತೆ ಕರೆತಂದಿದೆ., ಧನ್ಯವಾದಗಳು.

ಅನಂತ್ ರಾಜ್ ಹೇಳಿದರು...

Taanagala lokakke nimage punaha swaagata. Hageye illinda valase hogiruvavarella marali tamma taanagalige barali endu haaraisuttene...

ಮನಸಿನಮನೆಯವನು ಹೇಳಿದರು...

ಅನಂತ್ ರಾಜ್,
ನಿಮ್ಮ ಸ್ವಾಗತಕ್ಕೆ ಧನ್ಯವಾದಗಳು. ಬ್ಲಾಗಿಗರಿಗೆ ಬ್ಲಾಗಿನ ಸೆಳೆತ ಬೇರೆ ಸೆಳೆತಗಳಿಗಿಂತ ಕಡಿಮೆ ಆದರೆ ದೂರವಾಗುತ್ತಾರೆ, ಬ್ಲಾಗಿನ ಸೆಳೆತ ಹೆಚ್ಚಾದಾಗ ಮತ್ತೆ ಬರುತ್ತಾರೆ ನನ್ನಂತೆ?! ಆ ರೀತಿಯ ಸೆಳೆತ ಇರಲು ಬ್ಲಾಗಿಗರೂ ಕಾರಣವಾಗುತ್ತಾರೆ.

Related Posts Plugin for WordPress, Blogger...