ಕಾಡದಿರು ಪ್ರಭುವೆನ್ನ ನೊಂದಿರುವೆ ಸಾಕಷ್ಟು..

[ಬರೆಯಲೇನೂ ವಿಷಯವಿಲ್ಲದೆ ಬರೆದದ್ದು.. ]



ಈ ಲೇಖನ ಅವಶ್ಯಕವೋ ಅನಾವಶ್ಯಕವೋ ನನಗೆ ತಿಳಿದಿಲ್ಲ.. ಬರೀಬೇಕು ಅನಿಸಿತು ಬರೆಯುತ್ತಿದ್ದೇನೆ..
ನಾನು ದ್ವಿತೀಯ ಪಿ.ಯು.ಸಿ. ವಿಜ್ಞಾನ ವಿಭಾಗದಲ್ಲಿ ಉತ್ತಮ ಅಂಕಗಳನ್ನೇ ಪಡೆದೆನಾದರೂ ಯಾರ ಮಾತು ಕೇಳದೆ ಬಿ. ಎಸ್ಸಿ. ಆಯ್ಕೆ ಮಾಡಿಕೊಂಡದ್ದು ಎರಡನೇ ವಿಷಯ..
ಮೊದಲ ಸೆಮಿಸ್ಟರ್ ನಲ್ಲಿ ಯಾವುದೋ ಒಂದು ಕೆಲಸಕ್ಕೆ ಅರ್ಜಿ ಹಾಕಿದ್ದು ಆ ಕೆಲಸ ಸಿಕ್ಕೆ ಸಿಗುವುದೆಂಬ ಅಪೇಕ್ಷೆಯಿಂದ ಓದುವುದರ ಕಡೆ ಗಮನ ಬಿಟ್ಟಿದ್ದೆ.. ಆದರೆ ಕೆಲಸವೂ ಸಿಗಲಿಲ್ಲ.. ಓದುವುದರ ಕಡೆ ಗಮನ ಕೊಡದೆ ಇದ್ದುದರಿಂದ ಸುಮಾರಾಗಿ ಮಾತ್ರ ಅಂಕ ಗಳಿಸಲು (೬೦%) ಸಾಧ್ಯವಾಯ್ತು..
ಎರಡನೇ ಸೆಮಿಸ್ಟರ್ ನಲ್ಲಿ ಓದುವುದರ ಕಡೆ ಗಮನ ಹರಿಸಿದ್ದರೂ ವಯಸ್ಸಲ್ಲವೇ ಕೆಲವು ವಿಷಯಗಳು ಮನಸಿನ ಮೇಲೆ ದಾಳಿ ಮಾಡಿದ್ದವು.. ಆದರೂ ದೇವರ ಕೃಪೆಯಿಂದ ಮೊದಲ ಸೆಮಿಸ್ಟರ್ ಗಿಂತ ಹೆಚ್ಚು ಅಂಕ (೭೫%) ಗಳಿಸಲು ಸಾಧ್ಯವಾಯಿತು..
ಇನ್ಮುಂದೆ ಬೇರೆ ಕಡೆ ಗಮನ ಕೊಡದೆ ಓದುವುದರ ಕಡೆ ಹೆಚ್ಚು ಗಮನ ಕೊಡಬೇಕು ಎಂದುಕೊಂಡು ಮೂರನೇ ಸೆಮಿಸ್ಟರ್ ಆರಂಭ ಮಾಡಿದೆ.. ಅಂತೆಯೇ ಮೊದಮೊದಲು ಓದುವುದರ ಕಡೆ ಗಮನ ಹರಿಸಿ ಓದುತ್ತಲೇ ಇದ್ದೆ.. ನೂರೆಂಟು ಕನಸುಗಳನ್ನು ಕಟ್ಟಿದ್ದೆ..
ಕೆಲವು ದಿವಸಗಳ ನಂತರ ಇದ್ದಕ್ಕಿದ್ದಂತೆ ಓದುವುದರ ಕಡೆ ಗಮನ ಕಡಿಮೆಯಾಯಿತು.. ತರಗತಿಗಳಿಗೆ ಹೋಗಲು ಮನಸ್ಸು ಒಪ್ಪದಾಯಿತು.. ಓದು ಅಂತಲ್ಲ ಯಾವುದೇ ಬೇರೆ ವಿಷಯದ ಕಡೆಗೂ ಗಮನ ಇರದಾಯಿತು.. ನಿರುತ್ಸಾಹಿಯಾಗಿಬಿಟ್ಟೆ.. ಪ್ರತಿಯೊಂದಕ್ಕೂ ಕಾರಣ ಇರಲೇಬೇಕೆಂದು ಎಲ್ಲರಿಗೂ ಹೇಳುತ್ತಿದ್ದ ನನಗೇ ಈಗ ನನಗೆ ಉತ್ಸಾಹ ಕುಗ್ಗಿ ಹೋಗಲು ಕಾರಣ ತಿಳಿದುಬರುತ್ತಿಲ್ಲ..
ಮನಸ್ಸು ಏನೇನೋ ಹಳೆಯ ಕಹಿನೆನಪನ್ನು ಮೆಲುಕು ಹಾಕುತ್ತದೆ ಸದಾ..
ಈ ಹಿಂದೆ ನನ್ನ ಭವಿಷ್ಯದ ಬಗ್ಗೆ ನಾ ತೆಗೆದುಕೊಂಡ ಕೆಲವು ನಿರ್ಧಾರಗಳು ತಪ್ಪೆಂದು ಅರಿವಾಗುತ್ತಿವೆ..
ಹಳೆಯದೆಲ್ಲ ಕಹಿ ನೆನಪುಗಳು ಬೇಡ ಬೇಡವೆಂದರೂ ನನ್ನ ಮನದಂಗಳಕ್ಕೆ ಸತ್ತ ಭೂತಗಳನ್ನು ತಂದು ಬಿಸಾಡುತ್ತಿವೆ..
ನನ್ನ ಬದುಕೀಗ ಮುಳ್ಳಿನ ಹಾಸಿಗೆ ಮೇಲೆ ಮಲಗಿ ಶಾಂತಿಗಾಗಿ ಅತ್ತಿತ್ತ ಹೊರಳಾಡುತ್ತಿರುವಂತಾಗಿದೆ..
ಎಲ್ಲ ಸಂಬಂಧಗಳನ್ನು ಕಳಚಿಕೊಂಡು ಒಂಟಿಯಾಗಬೇಕು ಎನಿಸುತ್ತದೆ..
ಕೆಲವೊಮ್ಮೆ ದೇಹಕ್ಕೆ ಆತ್ಮದೊಂದಿಗಿರುವ ಬಂಧವನ್ನು ತೊರೆಯಬೇಕೆಂದು ಎನಿಸುತ್ತದೆ..
ಇಂಥ ಸಮಯದಲ್ಲಿ ಸಮಾಧಾನ ಹೇಳುವ ಜೀವಗಳೇ ಬಳಿ ಇಲ್ಲ.. ನಾನಿರುವುದು ಹಂಗಿಸುವ ಜೀವಗಳ ಎಡೆಯಲ್ಲಿ.. ಬಲಿಪಶು ಮಾಡುವವರ ಮಧ್ಯದಲ್ಲಿ.
ಹಲವಾರು ಉತ್ತರಗಳಿಲ್ಲದ ಪ್ರಶ್ನೆಗಳು ಪದೇ ಪದೇ ಕಾಡುತ್ತವೆ..
ಬ್ಲಾಗ್ ಕಡೆ ಬರಲು ಸಾಧ್ಯವಾಗುತ್ತಿಲ್ಲ..
ನನಗೇನಾಗಿದೆ ಅಂತ ಹೇಳೋಕೆ ನನಗೇ ಆಗುತ್ತಿಲ್ಲ..
ವಿದ್ಯಾಭ್ಯಾಸ ಮುಂದುವರೆಸಿ ಏನನ್ನಾದರೂ ಸಾಧಿಸುತ್ತೇನೆ ಎಂಬುದರ ಬಗ್ಗೆ ನಂಬಿಕೆಯೇ ಇಲ್ಲವಾಗಿದೆ.. ಓದುವುದರ ಬಗ್ಗೆ ಸಂಪೂರ್ಣ ಆಸಕ್ತಿ ಕುಗ್ಗಿಹೋಗಿದೆ..
ಇತ್ತೀಚೆಗಷ್ಟೇ ನಡೆದ ಪರೀಕ್ಷೆಯನ್ನು ಬಹಳ ಕೆಟ್ಟದಾಗಿ ಮಾಡಿದ್ದೇನೆ..
ಈ ಅಶಾಂತಿ ತುಂಬಿದ ಸಮಯದಲ್ಲಿ ಒಂದು ಹುದ್ದಗೆ ಅರ್ಜಿ ಆಹ್ವಾನ ಬಂದಿತ್ತು.
ಹೇಗಿದ್ದರೂ ಓದುವುದರ ಗಮನ ಕಡಿಮೆಯಿದೆ ಎಂದು ಈ ಕೆಲಸಕ್ಕೆ ಅರ್ಜಿ ಸಲ್ಲಿಸಿ ಸಿಕ್ಕೆ ಸಿಗುವುದೆಂಬ ನಂಬಿಕೆಯಿಂದಿದ್ದೇನೆ..
ಇದೇ ಡಿಸೆಂಬರ್ ೨ ರಿಂದ ಮೂರನೇ ಸೆಮಿಸ್ಟರ್ ಅಂತಿಮ ಪರೀಕ್ಷೆ ಇದ್ದು ನನ್ನ ತಯಾರಿ ಆರಂಭವಾಗೆ ಇಲ್ಲ..
ಒಟ್ಟಿನಲ್ಲಿ ಈ ವರ್ಷದ ಕೊನೆಯಲ್ಲಿ ನನ್ನ ಬದುಕು ಮಹಾತಿರುವು ಕಾಣಲಿದೆ.. ಹೊಸವರುಷಕ್ಕೆ ಹೊಸಬೆಳಕು ಬಾಳಿನಲ್ಲಿ ಮೂಡುವುದೋ ಇಲ್ಲವೋ ಕಾದು ನೋಡಬೇಕಾಗಿದೆ..
ಮತ್ತೆ ಉತ್ಸಾಹ ಮರುಕಳಿಸುವ ತನಕ ನಾನು ಇತ್ತ ಬರಲಾರೆನು ಕ್ಷಮಿಸಿ..
ಮರೆಯದಿರಿ..



-..-..-..-..-..-..-..-..-..-..-..-..-
ಪದೇ ಪದೇ ಕೇಳುವಂತೆ ನನ್ನ ಕಾಡುವ ಸಾಲುಗಳು :


ನಿನ್ನ ನೆರವಿಲ್ಲದೆಯೇ
ತೊಳಲಿರುವೆ ನೆಲದಲ್ಲಿ
ಚೇತನವನುದ್ಘರಿಸೋ ದೇವ ದೇವ
ಹಗಲಿರುಳು ನಿನ್ನೊಂದು
ಕೃಪೆಗಾಗಿ ಕಾದಿರುವೆ
ನಿನ್ನ ಕಂದನ ಸಲಹೋ ದೇವ ದೇವ
ನಿನ್ನ ನೆರವಿಲ್ಲದೆಯೇ
ತೊಳಲಿರುವೆ ನೆಲದಲ್ಲಿ

ಎನರ ಹಾ...ದಿಯ ನಂಬಿ
ನಾವೇ ತಾನುಲಿವಂತೆ
ಎನರ ಹಾ...ದಿಯ ನಂಬಿ
ನಾವೇ ತಾನುಲಿವಂತೆ
ಗುರಿಯಿಲ್ಲದಲೆದಿರುವೆ ನೆಲೆಯನರಸೀ..
ದಿವ್ಯಅಂಬಿಗ ನೀನು
ಬಂದೆನ್ನ ಪೊರೆಯ...ಯ್ಯ
ದಿವ್ಯಅಂಬಿಗ ನೀನು
ಬಂದೆನ್ನ ಪೊರೆಯ...ಯ್ಯ
ದೂರತೀರದ ಬಳಿಗೆ ನನ್ನ ನಡೆಸೀ..
ನಿನ್ನ ನೆರವಿಲ್ಲದೆಯೇ
ತೊಳಲಿರುವೆ ನೆಲದಲ್ಲಿ

ತೋರು ಶಾಂ..ತಿಯ ತಂದೆ
ನನ್ನ ಸೋ..ತಿರುವೆದೆಗೆ
ತೋರು ಶಾಂ..ತಿಯ ತಂದೆ
ನನ್ನ ಸೋ..ತಿರುವೆದೆಗೆ
ಭಕ್ತಿ-ಭಾವವ ಉಳಿದ ಶಕ್ತಿದೇವಾ..
ಕಾ...ಡದಿರು ಪ್ರಭುವೆನ್ನ
ನೊಂದಿರುವೆ ಸಾ...ಕಷ್ಟು
ಕಾ...ಡದಿರು ಪ್ರಭುವೆನ್ನ
ನೊಂದಿರುವೆ ಸಾ...ಕಷ್ಟು
ನಿನ್ನ ಅಭಯದ ಹಸ್ತ ನೀಡು ದೇವಾ..

ನಿನ್ನ ನೆರವಿಲ್ಲದೆಯೇ
ತೊಳಲಿರುವೆ ನೆಲದಲ್ಲಿ
ಚೇತನವನುದ್ಘರಿಸೋ ದೇವ ದೇವಾ..
ಹಗಲಿರುಳು ನಿನ್ನೊಂದು
ಕೃಪೆಗಾಗಿ ಕಾದಿರುವೆ
ನಿನ್ನ ಕಂದನ ಸಲಹೋ ದೇವ ದೇವಾ..
ನಿನ್ನ ನೆರವಿಲ್ಲದೆಯೇ..
~.~
ಒಂದೆರಡು ಸಾಲಿನಲ್ಲಿ:
'ಕಣ್ಣಿಗೇಳದೆ ನೋವು ನುಂಗುತ್ತ ಬಿಕ್ಕಳಿಸುವ ತುಟಿಗಳು..
ತುಟಿಗಳಿಗೆ ತಿಳಿಸದೇ ನೀರು ತುಂಬಿಕೊಳ್ಳುವ ಕಣ್ಣುಗಳು..
ಅವೆರಡರ ಗಮನಕ್ಕೂ ಕೊಡದೆ ಒಳಗೆ ನೋವು ನುಂಗಿ ಬಿರಿಯುತ್ತಿರುವ ಎದೆ..
ನನ್ನದೆ!!"
~.~
ಎ.ಕಾ.ಗುರುಪ್ರಸಾದಗೌಡ.

ಬಾ ನನ್ನೆದೆಯ ಅಂಗಳಕೆ..

ಮೊದಲನೆಯದಾಗಿ ಎಲ್ಲರಿಗೂ ನಲ್ಮೆಯ 'ನ್ನ ರಾಜ್ಯೋತ್ಸವ' ದ ಶುಭಾಶಯಗಳು..
ಹಾಗೂ
'ದೀಪಾವಳಿ ಹಬ್ಬ' ದ ಶುಭ ಹಾರೈಕೆಗಳು..





ಬಾ ನನ್ನೆದೆಯ ಅಂಗಳಕೆ
ನನ್ನ ಮನಸಿನಮನೆಗೆ
ಚೂರಾದ ಕನಸುಗಳ ಗುಡಿಸು ಬಾ..
ರಂಗೋಲಿ ಇಟ್ಟು ಬಲಗಾಲಿಟ್ಟು ಬಾ ..
ಕತ್ತಲ ಮನೆಗೆ ದೀವಿಗೆ ಹಿಡಿದು ಬಾ..
ಮನದಂಗಳಕೆ ಬೆಳದಿಂಗಳ ಬಾಲೆಯಾಗಿ ನೀ ಬಾ..
ನನ್ನೆದೆಯ ವೀಣೆ ನುಡಿಸಲು
ನನ್ನೊಂದಿಗೆ ಕೈ ಜೋಡಿಸು ಬಾ..
ಬಂಧ ತೊರೆದಿಹ ಜೀವಕ್ಕಿಲ್ಲಿ..
ಬಂಧುವಾಗಿ ನೀ ಬಾ..
ಎದೆಗೆ ನಾಟಿದ ಮುಳ್ಳುಗಳ
ಹೆಕ್ಕಿ ನೇವರಿಸು ಬಾ..
ನೊಂದ ಮನಸಿಗೆ ಸಾಂತ್ವನಿಸಲು
ನಗುವ ಹೂ ಹಿಡಿದು ಬಾ..
ನೋವನ್ನೆಲ್ಲ ತೋಡಿಕೊಳ್ಳಲು
ಮಡಿಲ ನೀಡು ಬಾ..
ಕಣ್ಣ ನೀರ ಒರೆಸಲು
ಸೆರಗ ನೀಡು ಬಾ..
ಹುಚ್ಚು ಮನಸಿಲ್ಲಿ ಬೆಚ್ಚಿ ಕುಳಿತಿಹುದಿಲ್ಲಿ..
ಅನಾಥಮಗುವಂತೆ ಅಳುತಿಹುದಿಲ್ಲಿ
ಮಗುವಿನಂತೆ ಮುದ್ದುಮಾಡಿ
ಕಣ್ಣೀರೊರೆಸಿ ಕೈ ಹಿಡಿವೆ ಬಾ..

.~-~.~-~.


ಎರಡು ಸಾಲಿನಲ್ಲಿ..:
ಅವಳು ಕೊಟ್ಟ ಖಾಲಿ ಪತ್ರವನ್ನೇ ಮತ್ತೆ ಮತ್ತೆ ಓದುತ್ತಾನಿವನು..!!



~.~-~
Related Posts Plugin for WordPress, Blogger...