[ ನಾನು ಈಗ ಪರೀಕ್ಷೆಯ ಒತ್ತಡದಲ್ಲಿದ್ದು, ಬ್ಲಾಗನ್ನು ಖಾಲಿ ಬಿಡಬಾರದೆಂದು ಹಿಂದೆ ಎಂದೋ ಬರೆದಿದ್ದ ಈ ಕವನವನ್ನು ನಿಮ್ಮ ಮುಂದಿಡುತ್ತಿದ್ದೇನೆ.. ]

ಹೆತ್ತ ತಂದೆ-ತಾಯಿಗಳು ತಾತ್ಸಾರ ಮಾಡುವುದು
ಒಡಹುಟ್ಟಿದ ಜೀವಗಳು ಪಿಂಡಕ್ಕೆ
ಕಾದ ಕಾಗೆಗಳಂತೆ ಆಗಿರುವುದು
ಒಡನಾಟ ಆಡಿದ ಸ್ನೇಹಿತರೆಲ್ಲ
ಮಿತ್ರದ್ರೋಹಿಗಳಾಗಿ(ದ್ದುದು)ರುವುದು
ನಾ ಏನೂ ತಪ್ಪು ಮಾಡದಿದ್ದರೂ
ಎಲ್ಲರೂ ನನ್ನೆಡೆಗೆ ಬೆರಳು ಮಾಡುವುದು
ಹೃದಯ ಕಲಕುವ ದೃಶ್ಯಗಳು
ಮತ್ತೆ ಮತ್ತೆ ಕಣ್ಣೆದುರಾಗುವುದು
ಒಬ್ಬನೇ ಏಕಾಂತವಾಗಿ ಕುಳಿತು
ಬಿಕ್ಕಿ ಬಿಕ್ಕಿ ಅಳುವಂತಾಗುವುದು
ಎಲ್ಲವನ್ನೂ ನೋಡಿ ದೇವರೇ
ನೀ ನಗುತ್ತಲಿಯೇ ಇರುವುದು
ಇದು ಶಿಕ್ಷೆಯೋ ....? ಇಲ್ಲಾ
ನೀನೆ ಕೊಟ್ಟ ಭಿಕ್ಷೆಯೋ?
ಪರಿಚಯವಿಲ್ಲದವರೆಲ್ಲರೂ
ಆತ್ಮೀಯರಂತಾಗಿರುವುದು
ಕೆಲವೊಮ್ಮೆ ಅಂದುಕೊಂಡಂತೆ ಆಗಿ
ಅದೃಷ್ಟ ಖುಲಾಯಿಸುವುದು
ಹಲವೊಮ್ಮೆ ನಿರೀಕ್ಷೆಗೆ ಮೀರಿದ
ಅನಿರೀಕ್ಷಿತ ಫಲ ನೀಡುವುದು
ಗುರುತು ಇಲ್ಲದವರಿಂದ
ಸೋದರವಾತ್ಸಲ್ಯ ಪಡೆಯುವುದು
ಎಂದೂ ನೋಡದವರೆಲ್ಲಾ...
ಮಮತೆ ವಾತ್ಸಲ್ಯ ತೋರುವುದು
ಒಮ್ಮೊಮ್ಮೆ ಏನೇನೂ ಆಗಿ
ನನ್ನೊಳಗೆ ನಾನೇ ತುಸು ನಾಚಿ
ನೀರಾಗುವ ಕ್ಷಣಗಳು ಬರುವುದು
ಮನಸ್ಸು ಇಚ್ಚೆಬಂದಂತೆ ಮಾಡುವ
ಮಹಾಮರ್ಕಟವಾಗಿರುವುದು
ಇದು ಭಿಕ್ಷೆಯೋ ...ಇಲ್ಲಾ
ನೀನೆ ಕೊಟ್ಟ ಶಿಕ್ಷೆಯೋ ?
~-~