~.~
ಸಂಸ್ಕೃತದಲ್ಲಿ 'ಅಷ್ಟ' ಎಂದರೆ ಕನ್ನಡದಲ್ಲಿ 'ಎಂಟು' ಎಂಬ ಅರ್ಥ ಬರುತ್ತದೆ.
ಅಷ್ಟಮಠ ಎಂದರೆ ಎಂಟು ಮಠಗಳು, ಅಷ್ಟಾಂಗ ಯೋಗ, ಅಷ್ಟವಕ್ರ,.. ಹೀಗೆ ಹಲವಾರು ಪದಗಳಿವೆ.
'ಅಷ್ಟವಿನಾಯಕ' ಎಂಬ ಪದ ಬಹುಷಃ ನಿಮಗೆ ಪರಿಚಯವಿರಬಹುದು..
ಅಷ್ಟವಿನಾಯಕ ಎಂದರೆ ಸಾಮಾನ್ಯ ಅರ್ಥ; ಅಷ್ಟ = ಎಂಟು, ವಿನಾಯಕ = ಗಣೇಶ. ಎಂಟು ಗಣೇಶಗಳು.
ನಮ್ಮೂರ ಸುತ್ತಲೂ, ನಿಮ್ಮೂರ ಸುತ್ತಲೂ, ಭಾರತ ದೇಶದಾದ್ಯಂತ, ದೇಶದ ಹೊರಗೂ ಹಲವಾರು ಗಣೇಶಗಳಿವೆ.. ಯಾವುದೋ ಎಂಟು ಗಣೇಶಗಳನ್ನು ಸೇರಿಸಿ 'ಅಷ್ಟ ವಿನಾಯಕ' ಎನ್ನಲಾಗುವುದಿಲ್ಲವಂತೆ... ಹಾಗಾದರೆ ಯಾವ ಎಂಟು ಗಣೇಶಗಳು 'ಅಷ್ಟವಿನಾಯಕ' ಎನಿಸಿಕೊಳ್ಳುತ್ತವೆ..
ಇದರ ಕುರಿತು ಒಂದು ಶ್ಲೋಕ ಇದೆ. ಅದು 'ಅಷ್ಟವಿನಾಯಕ ಸ್ತೋತ್ರ' ಅದರಲ್ಲಿ ಆ ಎಂಟು ಗಣೇಶಗಳು ಮತ್ತು ಅವು ಎಲ್ಲೆಲ್ಲಿ ಇವೆ ಎಂಬ ಉಲ್ಲೇಖವಿದೆ.
ಅಷ್ಟವಿನಾಯಕ ಸ್ತೋತ್ರ:
ಸ್ವಸ್ತಿ ಶ್ರೀಗಣನಾಯಕಂ ಗಜಮುಖಮಂ ಮೋರೇಶ್ವರಂ ಸಿದ್ಧಿದಾಂ ll
ಬಲ್ಲಾಳಮ್ ಮುರುಡೇ ವಿನಾಯಕಂಹಂ ಚಿಂತಾಮಣಿಂ ಥೇವರೇ ll
ಲೇಣ್ಯಾದ್ರೌ ಗಿರಿಜಾತ್ಮಜಂ ಸುವರದಾಂ ವಿಘ್ನೇಶ್ವರಂ ಓಝರೇ ll
ಗ್ರಾಮೇ ರಾಂಜಣನಾಮಕೇ ಗಣಪತಿಂ ಕುರ್ಯಾತ್ ಸದಾ ಮಂಗಳಂ ll
ಇದನ್ನು ಕನ್ನಡೀಕರಿಸಿದರೆ ಇದರ ಅರ್ಥ ಬಹುಶಃ ಹೀಗಿರಬಹುದು..
ಕ್ಷೇಮ ತರುವ ಶ್ರೀ ಗಣನಾಯಕನು, ಗಜ(ಆನೆಯ) ಮುಖ ಹೊತ್ತ "ಮೊರೇಶ್ವರ"ನು, "ಸಿದ್ಧಿದಾತ"ನು ll
"ಬಲ್ಲಾಳ"ನು, ಮುರುಡದ "ವಿನಾಯಕ"ನು, ಥೇವರೆಯ "ಚಿಂತಾಮಣಿ"ಯು ll
ಲೇಣ್ಯಾದ್ರಿಯ "ಗಿರಿಜಾತ್ಮಜ"ನು, ಓಝರೆಯಲ್ಲಿ ವರನೀಡೊ "ವಿಘ್ನೇಶ್ವರ"ನು ll
ರಾಂಜಣ ಗ್ರಾಮದಲ್ಲಿ "ಗಣಪತಿ"ಯಾದವನು, ಯಾವಾಗಲು ಮಂಗಳವನ್ನು ಕರುಣಿಸುವನು ll
ಈ ಸ್ತೋತ್ರದಲ್ಲಿ ಆ ಎಂಟು ಗಣೇಶಗಳ ಉಲ್ಲೇಖವಿದೆ, ಅವುಗಳೆಂದರೆ..
೧. "ಮೊರೇಶ್ವರ" ಅಥವಾ ಮಯೂರೇಶ್ವರ - ಮಯೂರ(ನವಿಲು)ವನ್ನು ಏರಿ ಬಂದವನು - ಇದು ಪುಣೆಯ ಮೊರಗಾವ್ ನಲ್ಲಿದೆ.
೨. "ಸಿದ್ಧಿದಾತ" - ಸಿದ್ಧಿಗಳ ಕರುಣಿಸುವ ಸಿದ್ಧಿವಿನಾಯಕ - ಇದು ಅಹ್ಮದ್ ನಗರದ ಸಿದ್ಧಟೆಕ್ ನಲ್ಲಿದೆ. ಸಿದ್ಧಟೆಕ್ ಗಣೇಶ ಎಂದೇ ಹೆಸರುವಾಸಿಯಾಗಿದೆ.
೩. "ಬಲ್ಲಾಳ" - ಬಲ್ಲಾಳ ಎಂಬ ಭಕ್ತನಿಗೆ ವರ ನೀಡಿದ್ದಕ್ಕೆ ಬಲ್ಲಾಳೇಶ್ವರ ಎಂಬ ಹೆಸರಿದೆ - ಇದು ರಾಯಘಡದ ಪಾಳಿ ಎಂಬಲ್ಲಿದೆ.
೪. "ವಿನಾಯಕ" - ಮುರುಡದ ವಿನಾಯಕ - ಇದು ರಾಯಘಡದ ಮಹಡ(ಮುರುಡ)ದಲ್ಲಿದೆ.
೫. "ಚಿಂತಾಮಣಿ" - ಚಿಂತಾಮಣಿ ಎಂದರೆ ಇಚ್ಛೆ ಪೂರೈಸುವ ಮಣಿ - ಪುಣೆಯ ಥೇವರೆ (ಥೇವೂರ್) ನಲ್ಲಿದೆ.
೬. 'ಗಿರಿಜಾತ್ಮಜ" - ಗಿರಿಜೆಯ ಮಗ - ಪುಣೆಯಲ್ಲಿ ಲೇಣ್ಯಾದ್ರಿಯಲ್ಲಿದೆ.
೭. "ವಿಘ್ನೇಶ್ವರ" - ವಿಘ್ನನಿವಾರಕ - ಪುಣೆಯ ಓಜ್ಹರೆಯಲ್ಲಿದೆ.
೮. "ಗಣಪತಿ" - ಪುಣೆಯ ರಂಜಾಗಾವ್ ನಲ್ಲಿರುವ ಮಹಾಗಣಪತಿ.
ಸ್ತೋತ್ರದಲ್ಲಿ ಮೊರಗಾವ್, ಸಿದ್ಧಟೆಕ್ ಮತ್ತು ಪಾಳಿ ಪ್ರದೇಶಗಳನ್ನು ಹೊರತುಪಡಿಸಿ ಉಳಿದೆಲ್ಲ ಸ್ಥಳಗಳನ್ನು ಉಲ್ಲೇಖಿಸಲಾಗಿದೆ, ಗಮನಿಸಿ.
ವಿಶೇಷ ಎಂದರೆ ಎಲ್ಲ ಮೂರ್ತಿಗಳು ಮಹಾರಾಷ್ಟ್ರದ ಪುಣೆಯ ಸುತ್ತಮುತ್ತಲೇ ಇವೆ.. ಬಹುಶಃ ಇಲ್ಲಿದ್ದ ಜನರು ಅಥವಾ ಇಲ್ಲಿ ಆಳಿದ ಜನರು ಗಣಪತಿ ಮೇಲೆ ಬಹಳ ಭಕ್ತಿ ಹೊಂದಿದ್ದರು ಎನಿಸುತ್ತದೆ, ಹಾಗಾಗಿ ಇಲ್ಲಿಯೇ ಅಷ್ಟವಿನಾಯಕರ ಸೃಷ್ಟಿ ಆಗಿರಬಹುದು. ಪೇಶ್ವೇ ಮರಾಠರ ಮನೆದೇವರೇ "ಗಣಪತಿ" ಯಂತೆ.
ಇಲ್ಲಿನ ಎಲ್ಲಾ ಮೂರ್ತಿಗಳು 'ಸ್ವಯಂಭು'ವಾದವು. ಅಂದರೆ ಯಾರೋ ಈ ಶಿಲ್ಪಗಳನ್ನು ಕೆತ್ತಿದ್ದಲ್ಲ, ಪ್ರಕೃತಿದತ್ತವಾಗಿಯೇ ಉದ್ಭವವಾದವು - 'ಉದ್ಭವ ಮೂರ್ತಿ' ಗಳು ಎಂದು ಹೇಳುತ್ತಾರೆ.
ಈ ಮೂರ್ತಿಗಳು ಒಂದಕ್ಕೊಂದು ವಿಭಿನ್ನವಾಗಿದ್ದು, ಪ್ರತಿಯೊಂದಕ್ಕೂ ತನ್ನದೇ ಆದ ದಂತಕಥೆ ಇದೆ.. ಬರೆದರೆ ಒಂದೊಂದರ ಮೇಲೂ ಒಂದೊಂದು ಲೇಖನ ಬರೆಯಬಹುದು..
ಇನ್ನೊಂದು ವಿಶೇಷ ಎಂದರೆ ಅಷ್ಟವಿನಾಯಕ ದರುಶನ ಮಾಡಲು ಇಚ್ಚಿಸುವವರು ಸ್ತೋತ್ರದ ಪ್ರಕಾರ ಮೊದಲು ಕ್ರಮಬದ್ಧವಾಗಿ ಮೊದಲು ಮೊರೇಶ್ವರನ ದರ್ಶನ ಮಾಡಿ, ಎಂಟನೆಯದಾಗಿ ಮಹಾಗಣಪತಿ ದರ್ಶನ ಮಾಡಿ ಮತ್ತೆ ಕೊನೆಯಲ್ಲಿ ಮೊರೇಶ್ವರನ ದರ್ಶನ ಮಾಡಿದರೇನೇ ಅಷ್ಟವಿನಾಯಕ ಯಾತ್ರೆ ಸಂಪೂರ್ಣವಾಗುತ್ತಂತೆ... ಈಗಲೂ ಅದನ್ನೇ ಅನುಸರಿಸುತ್ತಿದ್ದಾರೆ. ಗೊತ್ತಿಲ್ಲ.
ಉದ್ಭವ ಮೂರ್ತಿಗಳಾದ ಮೇಲೆ ಅವುಗಳ ಮೇಲೆ ಸ್ತೋತ್ರ ರಚನೆಯಾಗಿರಬಹುದು, ಹೇಳಿ ಬರೆಯಿಸಿರಬಹುದು. ಅಥವಾ ಸ್ತೋತ್ರದ ಆಧಾರದ ಮೇಲೆ ಮೂರ್ತಿಗಳನ್ನು ಗುರುತಿಸಿರಬಹುದು, ಮಾಹಿತಿ ನನಗೆ ಗೊತ್ತಿಲ್ಲ.
ಅಷ್ಟವಿನಾಯಕರು ಯಾರು ಎಂಬ ಪ್ರಶ್ನೆಗೆ ನಾನು ಕಂಡುಕೊಂಡ ಸಮಾಧಾನಕರ ಸರಳ ಮಾಹಿತಿಯಷ್ಟೇ ಇದು.
ಅಷ್ಟವಿನಾಯಕರ ದರ್ಶನ ಮಾಡಿ, ಶುಭಾಲೋಚನೆ ಮಾಡಿ.
ವಂದನೆಗಳು
~-~