~.~
ಯುಗಾದಿ
ಯುಗಾದಿ ಎಂದರೆ ಯುಗ+ಆದಿ. ಅಂದರೆ, ಯುಗದ ಪ್ರಾರಂಭ. ನಾವಿರುವ ಯುಗದ ಪ್ರಾರಂಭ ಆದ ದಿನ ಇದು ಎಂದೂ, ಅದಕ್ಕಾಗಿ ಇದನ್ನು ಹಿಂದೂ ವರುಷಾರಂಭ ಎಂದೂ ಆಚರಿಸುತ್ತರಂತೆ.
ಯುಗದ ಆರಂಭ ಆಗಿದ್ದು ಯಾರಿಗೆ ? ಹಿಂದುಗಳಿಗೆ ಮಾತ್ರವಾ ? ಇರಬೇಕು. ಯಾಕೆಂದರೆ ಆ ಯುಗ, ಈ ಯುಗಗಳು ಕಾಣಸಿಗೋದು ಹಿಂದೂ ಪುರಾಣಗಳಲ್ಲಿ. ಆದ್ದರಿಂದ ಹಿಂದುಗಳಿಗೆ ಯುಗಾರಂಭ ಎನ್ನಬಹುದೇನೋ. ಬೇರೆಯವರಿಗೂ ಆರಂಭ ಆಗಿರುತ್ತೆ ಅನ್ನಿ. ಅವರವರ ಯುಗ ಅವರವರಿಗೆ.
ಯುಗ ಪ್ರಾರಂಭ ಆಗಿದ್ಯೋ ಇಲ್ವೋ ಅದು ಹಾಗಿರಲಿ, ನಾವು ಬಳಸುತ್ತಾ, ಅನುಸರಿಸುತ್ತಾ ಇರೋ ಕ್ಯಾಲಂಡರ್ ಪ್ರಕಾರ ಡಿಸೆಂಬರ್ 31ರ ರಾತ್ರಿ /ಜನವರಿ 1 ಹೊಸ ವರುಷದ ಆರಂಭ. ಆದರೂ, ನಾವು ಹಿಂದುಗಳಾದ್ದರಿಂದ ಹಿಂದೂ ಕ್ಯಾಲೆಂಡರ್ ಪ್ರಕಾರ ನಮಗೆ ಹೊಸ ವರುಷ ಯುಗಾದಿ ಅಂತೆ. ಹಾಗಂತ ಜನವರಿ ೧ರಂದು ಸುಮ್ಮನಿರಲ್ಲ ಬಿಡಿ. ಸಂಭ್ರಮ ಜೋರಾಗೇ ನಡೆಯುತ್ತೆ ಯುಗಾದಿಗಿಂತ.
ಅದೇನೇ ಇರಲಿ, ಯುಗಾದಿಯ ಈ ಸಮಯ ಗಮನಿಸಿದರೆ, ಪ್ರಕೃತಿಯಲ್ಲೂ ಕೂಡ ನಿಜಕ್ಕೂ ಹೊಸದೇನೊ ಬದಲಾವಣೆಯ ಸಮಯ. ಒಣಗಿದೆಲೆಗಳೆಲ್ಲ ಉದುರಿ, ಹೊಸ ಚಿಗುರು ಮೂಡಿ, ಹೊಸ ವಸಂತಕ್ಕೆ ಕಾಲಿಡುತ್ತಾ, ಹರುಷ ಕಾಣುವುದು ನೋಡಿದ್ರೆ ಖಂಡಿತ ಈ ಸಮಯದಲ್ಲೇ, ಪ್ರಕೃತಿಯ ಮರ-ಮಾಮರಗಳು ಮರುಹುಟ್ಟು ಪಡೆದುದನ್ನು ನೋಡುತ್ತಾ, ನಾವೂ ನಮ್ಮ ಹಳೆಯ ಕಹಿ ನೆನಪನ್ನು ಮರೆತು ಹೊಸ ಸಿಹಿ ಕ್ಷಣಗಳಿಗೆ ತಯಾರಾಗಬೇಕು, ಮರುಹುಟ್ಟು ಪಡೆಯಬೇಕು ಬದುಕು ಎನಿಸುತ್ತೆ. ಇದೆ ಸೂಕ್ತ ಸಮಯ ಹೊಸ ವರುಷದಾರಂಭಕೆ.
ಹಿಂದೂ ದೇಶದಲ್ಲಿ ಮಾತ್ರ ಈ ಸಮಯದಲ್ಲಿ ಪ್ರಕೃತಿಯಲ್ಲಿ ಈ ವಸಂತದ ವಾತಾವರಣ, ಬೇರೆ ಕಡೆ ಬೇರೆ ಸಮಯ ಎನಿಸುತ್ತೆ. ಬೇರೆ ದೇಶದ ಕಥೆ ಬೇಡ, ಹಿಂದೂ ದೇಶದಲ್ಲಿ ಮೂಡುತಿದೆ ಅಂದರೆ ಹಿಂದೂ ದೇಶದವರೆಲ್ಲ ಧರ್ಮದಾಚೆಗೆ ನಿಂತು ಪ್ರಕೃತಿಯ ಈ ಸೊಬಗನ್ನು ನೋಡಿ ಹರುಷ ವ್ಯಕ್ತಪಡಿಸುತ್ತಾ ಹೊಸ ಬದುಕಿಗೆ ಸಂತೋಷದಿಂದ ತಯಾರಾಗಬೇಕು ಅಲ್ವಾ. ಆದರೆ ಹಾಗಾಗುತ್ತಿದೆಯಾ.
ಯುಗಾದಿ ಹಿಂದೂಗಳ ಹೊಸವರುಷ ಅಂತೇ. ಅಂದರೆ ಎಲ್ಲಾ ಹಿಂದೂಗಳಿಗೂ ತಾನೇ ? ಹಿಂದೂಗಳು ಅಂದರೆ ಅಖಂಡ ಭಾರತದಲ್ಲಿ ಜೀವಿಸಿರುವ ಪ್ರತಿಯೊಬ್ಬರೂ ಕೂಡ ಅಲ್ಲವಾ? ಬೇಡ, ರಾಮ-ಕೃಷ್ಣರ ಪೂಜಿಸುವ ಜನರೇ ಹಿಂದೂಗಳೆನ್ನೋಣ, ಅವರಾದರೂ ಎಲ್ಲರೂ ಆಚರಿಸಬೇಕಲ್ಲವ?
ಹಿಂದೂ ಹೊಸ ವರುಷ ಕನ್ನಡ,ತೆಲುಗು,ಮರಾಠಿ ಹಿಂದುಗಳಿಗೆ ಮಾತ್ರವಾ ?
ದಕ್ಷಿಣ ದೇಶದ ಕೆಲ ಪ್ರದೇಶಗಳು ಮಾತ್ರ ಅದ್ಧೂರಿ ಆಚರಣೆ ಮಾಡುತ್ತಾರೆ ಅನಿಸುತ್ತೆ, ಅದೂ 'ಯುಗಾದಿ' ಎಂಬ ಸೂಕ್ತ ಹೆಸರಿಂದ. ಯಾಕೆ ?
ಉಳಿದ ಪ್ರದೇಶಗಳಲ್ಲಿ ಕೆಲವು ಕಡೆ 'ಹಿಂದಿ ವರ್ಷ್ ಆರಂಭ್' ಅಂತ ಅನ್ಕೋತಾರೆ ನಿಜ, ಇಲ್ಲಿಯಂತೆ ಆಚರಿಸ್ತಾರಾ? ಸಂಭ್ರಮ ಜೋರಾಗಿರುತ್ತಾ ? ಗೊತ್ತಿಲ್ಲ. ಯಾಕೆ ?
ಹಿಂದೂ ದೇಶದಲ್ಲಿ ಕೇವಲ ಚಂದ್ರನ ಚಲನೆ ಅಥವಾ ಸೂರ್ಯನ ಚಲನೆ (ಸಿದ್ಧಾಂತ)ಯ ಆಧಾರದಲ್ಲಿರುವ ಕ್ಯಾಲೆಂಡರ್ ಪದ್ಧತಿ ಮತ್ತು ಸೂರ್ಯ-ಚಂದ್ರ ಎರಡನ್ನೂ ಗಮನದಲ್ಲಿಟ್ಟುಕೊಂಡು ತಯಾರಾದ ಕ್ಯಾಲೆಂಡರ್ ಪದ್ಧತಿ ಇವೆ . ಹಾಗಾಗಿ, ಅವರವರ ಕ್ಯಾಲೆಂಡರ್ ಪದ್ಧತಿಗನುಗುಣವಾಗಿ ಹೊಸ ವರುಷ ಆಚರಣೆ ಮಾಡುತ್ತಾರೆ.
ಕೆಲವು ಪ್ರದೇಶದಲ್ಲಿ ಜನವರಿ ೧ ಮಾತ್ರ ಆಚರಣೆ.
ಹಿಂದೂ ಹೊಸ ವರುಷಾರಂಭ ಎಂದಮೇಲೆ ಎಲ್ಲಹಿಂದೂಗಳಿಗೂ ಒಂದೇ ದಿನ ಇರಬೇಕಿತ್ತು ಅನಿಸುತ್ತೆ, ಆ ಹಿಂದೂಗೆ ಆಗ, ಈ ಹಿಂದೂಗೆ ಈಗ ಯುಗ ಆರಂಭ ಅನ್ನೋಕಾಗತ್ತಾ?
ಹಿಂದೂ ಹೊಸ ವರುಷಾರಂಭ ಎಂದಮೇಲೆ ಎಲ್ಲಹಿಂದೂಗಳಿಗೂ ಒಂದೇ ದಿನ ಇರಬೇಕಿತ್ತು ಅನಿಸುತ್ತೆ, ಆ ಹಿಂದೂಗೆ ಆಗ, ಈ ಹಿಂದೂಗೆ ಈಗ ಯುಗ ಆರಂಭ ಅನ್ನೋಕಾಗತ್ತಾ?
ಈ ದಿನವೇ ರಾಮ ವಾಲಿಯನ್ನು ಕೊಂದನಂತೆ, ಬ್ರಹ್ಮ ಸೃಷ್ಟಿ ಮಾಡಿದನಂತೆ, ಶಾಲಿವಾಹನ ಗೆದ್ದನಂತೆ, ಕೃಷ್ಣ ಯುಗ ಬಿಟ್ಟನಂತೆ, ಇತ್ಯಾದಿ ಪ್ರಸಂಗಗಳಿವೆ. ನಿಜವಾಗಿ ಯಾವ ಕ್ಯಾಲೆಂಡರ್ ಗೆ ಇವುಗಳನ್ನು ಸೇರಿಸೋದು ? ಯಾರು ಆಚರಿಸುವ ಹೊಸ ವರುಷಕ್ಕೆ ಇವನ್ನು ತಳುಕು ಹಾಕೋದು? ಯಾಕೆಂದರೆ ಘಟನೆ ಒಂದು ಸಲ ಮಾತ್ರ ನಡೆದಿರುತ್ತೆ. ಇವರಿಗಾಗಿ ಈಗ, ಅವರಿಗಾಗಿ ಇನ್ನೊಮ್ಮೆ ಅಂತ ಒಂದಕ್ಕಿಂತ ಹೆಚ್ಚು ಸಲ ಅವು ನಡೆದಿರೋಲ್ಲ ಅಲ್ವ.
ಹಿಂದೂ ಪಂಚಾಗದ ಪ್ರಕಾರ ನಾವಿರೋದು ಶಾಲಿವಾಹನ ಶಕೆ ಮತ್ತು ವಿಕ್ರಮ ಸಂವತ್ಸರದಲ್ಲಿ. ಆಫ್ಟರ್ ಕ್ರೈಸ್ಟ್ ನಲ್ಲಲ್ಲ. ಈ ಎರಡೂ ಕಾಲಘಟ್ಟ ಆರಂಭ ಆಗಿದ್ದು ಶಾಲಿವಾಹನ ಹಾಗೂ ವಿಕ್ರಮಾದಿತ್ಯ ಎಂಬ ರಾಜರ ಆಳ್ವಿಕೆ ಆರಂಭ ಆದಾಗ. ಅಂದರೆ ಒಂದು ಯೋಚನೆ ಬರುತ್ತೆ. ಈ ಇಬ್ಬರೂ ರಾಜರೂ ಆಳಿದ್ದು ಯುಗಾದಿಯನ್ನು ಆಚರಿಸೋ ಈ ಪ್ರದೇಶಗಳಲ್ಲಿ ಮಾತ್ರ, (ಆದರೆ ಈಗಿರುವಂತೆ ಕನ್ನಡನಾಡು, ತೆಲುಗುದೇಶ, ಮರಾಠಿ ನಾಡು, ಬೆಂಗಳೂರು ಅಂತ ಬಿಡಿ ಭಾಗಗಳಾಗಲ್ಲ). ಆ ರಾಜರು ಅವರ ಆಗಿನ ಕ್ಯಾಲೆಂಡರ್ ಗೆ ಮಹತ್ವ ಕೊಟ್ಟು ಆಚರಣೆ ಆರಂಭ ಮಾಡಿದ್ದಕ್ಕೆ ಇಂದಿಗೂ ಅದು ನಡೆದುಬರುತ್ತಿರಬೇಕು ಎನಿಸುತ್ತೆ.
ಶಾಲಿವಾಹನ ಶಕೆ ಅನುಸರಿಸುತ್ತಿದ್ದೇವೆ ಎಂದರೆ ಅರ್ಥ ಇರೊಲ್ಲ, ಯಾಕಂದರೆ ನನಗನಿಸುತ್ತೆ ಆತ ಹಿಂದೂ ರಾಜ ಅಲ್ಲ ಅಂತ. ಹಾಗಾದಮೇಲೆ ಹಿಂದೂ ಜನ ಅದನ್ನು ಯಾಕೆ ಅನುಸರಿಸಬೇಕು. ವಿಕ್ರಮ ಆದರೆ ಪರವಾಗಿಲ್ಲ. ಯಾರು ಮಾಡಿಟ್ಟದ್ದೇ ಆಗಲಿ, ಬಳಕೆಯಲ್ಲಿದೆ ಅದು ಮುಖ್ಯ ಅಂದರೂ ಸರಿ. ಈಗ ಬಿಫೋರ್ ಅಂಡ್ ಆಫ್ಟರ್ ಕ್ರಿಸ್ಟ್ ಕೂಡ ಬಳಕೆಯಲ್ಲಿಲ್ಲವೇ ಹಾಗೆ.
ಆ ಶಕೆ, ಈ ಸಂವತ್ಸರ, ರಾಮ, ಬ್ರಹ್ಮ, ಕೃಷ್ಣ, ಕಲಿಯುಗ, ಹಿಂದಿ-ಹಿಂದು ಅಂತ ಹೋದರೆ ಸಂಪೂರ್ಣವಾಗಿ ನಿಖರ ಮಾಹಿತಿ ಎಲ್ಲಿ ಸಿಗುತ್ತೊ ಗೊತ್ತಿಲ್ಲ. ಆದರೆ, ಕಣ್ಮುಂದಿನ ಪ್ರಕೃತಿ ಗಮನಿಸಿದರೆ, ಒಣಗಿದ, ಉಪಯೋಗಕ್ಕೆ ಬರದ ಎಲೆ ಉದುರಿಸಿ, ಹೊಸ ಚಿಗುರು ಮೂಡಿಸಿ, ಪ್ರಕೃತಿಯೂ ಹೊಸ ನಲಿವನ್ನು ತೋರುತ್ತಿರಲು, ಹೊಸ ವರುಷ ಆರಂಭ ಮಾಡ್ತಿದೆ ಅನ್ಸಲ್ವಾ. ಇದನ್ನು ಕಂಡು, ಆ ಮರುಹುಟ್ಟು ನೋಡಿ, ಅದರಿಂದ ಪ್ರೇರಿತವಾಗಿ, ನಾವೂ ಕೂಡ, ಹಳೆಯದ, ಬೇಡವಾದುದನ್ನು ಮನಸಿಂದ ಉದುರಿಸಿ, ಮರೆತು, ಹೊಸ ಯೋಚನೆ ಮೂಡಿಸಿಕೊಂಡು, ಹೊಸ ಅನುಭವಕ್ಕೆ ತಯಾರಾಗಿ ನಗುತ್ತಿರಬೇಕು, ನನಗೂ ಹೊಸ ಕಾಲ ಬಂತೆಂದು ನಲಿಯಲು, ಹೊಸ ವರುಷಾರಂಭ ಮಾಡಲು ಇದೇ ಸೂಕ್ತ ಸಮಯ ಅನಿಸಲ್ವಾ...
..... ಹೊಂಗೆ ಹೂವ ತೊಂಗಲಲಿ ಭೃಂಗದ ಸಂಗೀತ ಕೇಳಿ ಮತ್ತೆ ಕೇಳಿ ಬರುತಿದೆ
ಬೇವಿನ ಕಹಿ ಬಾಳಿನಲ್ಲಿ ಹೂವಿನ ನಸುಗಂಪು ಸೂಸಿ ಜೀವ ಕಳೆಯ ತರುತಿದೆ
ವರುಷಕೊಂದು ಹೊಸತು ಜನ್ಮ ವರುಷಕೊಂದು ಹೊಸತು ನೆಲೆಯು ಅಖಿಲ ಜೀವಜಾತಕೆ
ಒಂದೆ ಒಂದು ಜನ್ಮದಲ್ಲಿ ಒಂದೆ ಬಾಲ್ಯ ಒಂದೆ ಹರಯ ನಮಗದಷ್ಟೆ ಏತಕೋ
ನಿದ್ದೆಗೊಮ್ಮೆ ನಿತ್ಯ ಮರಣ ಎದ್ದ ಸಲ ನವೀನ ಜನನ ನಮಗೆ ಏಕೆ ಬಾರದೋ... -ದ.ರಾ. ಬೇಂದ್ರೆ.
ಶುಭವಾಗಲಿ.