ಶ್ರೀ ರಾಯರ ನೆರಳು

 !!ಜ್ಞಾನಾರ್ಪಣಮಸ್ತು!!
~.~
ದೇವಲೋಕದಲ್ಲಿ ತ್ರಿಮೂರ್ತಿಗಳಾದ ಬ್ರಹ್ಮ-ವಿಷ್ಣು-ಮಹೇಶ್ವರರು ಮೌನದಿ ಆಸೀನರಾಗಿದ್ದಾರೆ..
ಹರೆಯದ ಯುವಕ. ಅವನ ಸೋತಿರುವ ಆಸೆಯ ಕಂಗಳು, ಮೂಡಿಯೂ ಮೂಡದಂತಿರುವ ಮಂದಹಾಸ,ಮತ್ತೆ ಮತ್ತೆ ಮುಳುಗಿ ಬದಲಾಗಿ ಹೇಳುತ್ತಿರುವ ಅದೆಷ್ಟೋ ಭಾವಗಳು ಅವನ ಖಿನ್ನತೆಯನ್ನು ಸಾರುತ್ತಿವೆ..
ಮೌನ ಮುರಿದು ತುಟಿ ತೆರೆದ ಮಹೇಶ್ವರ- 'ಮಗೂ ಹೀಗೆ ಸುಮ್ಮನಿದ್ದರಾಯಿತೆ.. ಅದೇನಾಗಿದೆಯೆಂದು ತಿಳಿಹೇಳಬಾರದೆ..' ಎನ್ನಲು 'ನಿನಗೆ ತಿಳಿಯದ್ದೇನಿದೆ ಶಿವಾ...' ಎಂದಾಗ, ನಗುತ್ತ ಶಿವ ಕಣ್ಮುಚ್ಚಿದ.
'ಯಾರಿಗೂ ಬರೆಯದ ಹಣೆಬರಹ ನನಗೆ ಬರೆದಿದ್ದೇಕೆ.. ಯಾರಿಗೂ ಕೊಡಬಾರದ ಮನಸ್ಸು ನನಗೆ ಕೊಟ್ಟಿದ್ದೇಕೆ.. ನನ್ನ ಜೀವನದಲ್ಲಿ ದೇವತೆಗಳು ಅತಿಯಾಗಿ ಹುಡುಗಾಟ ಆಡುತ್ತಿರುವುದೇಕೆ...' ಎಂದು ತ್ರಿಮೂರ್ತಿಗಳೆದುರು ಬಂದಿರುವುದು ತಿಳಿಯಿತು.
ಯಾರಿಗೂ ಆಗದಂತದ್ದು ಇವನಿಗೆ ಆಗಿಲ್ಲ.. ಖಿನ್ನತೆಗೆ ಒಳಗಾಗಿ ಹೀಗೆ ಮಾತಾಡುತ್ತಿದ್ದಾನೆ ಎಂದು ಒಳಗೆ ನಗುತ್ತ, 'ಮಗೂ,ನಿನಗಾಗಿರುವ ತಪ್ಪಿಗೆ ಯಾರು ಕಾರಣ ಎಂಬುದನ್ನಾದರೂ ಹೇಳಬಾರದೆ.' ಎಂದಾಗ,
'ಏನು ಹೇಳಲಿ ತಂದೆ.. 'ಸೃಷ್ಟಿಕರ್ತ ನೀನೆ ಎಲ್ಲಾ..' ಎಂದು ಬದಲಾಯಿಸಲಾಗದ ಹಣೆಬರಹ ಬರೆದ ಬ್ರಹ್ಮದೇವನ ಮೇಲೆ ತಪ್ಪು ಹೊರಿಸಲೇ.. ಅಥವಾ ಕುಲದೇವನೆಂದು ಪ್ರೀತಿಯಿಂದ ಪೂಜಿಸುತ್ತಿದ್ದರೂ ನನ್ನತ್ತ ನೋಡುತ್ತಿರದ ಶ್ರೀಹರಿಯನ್ನು ದೂಷಿಸಲೋ.., ಅಥವಾ ಜೀವನಬುಗುರಿಯ ಚಾಟಿ ಹಿಡಿದ ವಿಶ್ವೇಶ್ವರ ನಿನ್ನನ್ನೇ ಈ ಆರೋಪಕ್ಕೆ ಗುರಿಮಾಡಲೋ.. ತಿಳಿಯುತ್ತಿಲ್ಲ.' ಎಂದು ನುಡಿಯುತ್ತಾನೆ..
ಆಗ ಈಶ್ವರ 'ಈ ಮಾತಿಗೆ ನೀವೆನನ್ನುವಿರಿ..' ಎಂದು ಬ್ರಹ್ಮನನ್ನು ಪ್ರಶ್ನಿಸಲು, 'ಮಹೇಶ್ವರ ನಾನೇನು ಹೇಳಲಿ ಈತ ತಿಳಿದಿರುವಂತೆ ಇವನಿಗೆಂದೆ ಪ್ರತ್ಯೇಕ ಹಣೆಬರಹ ಬರೆದಿಲ್ಲ ಎಂಬುದು ನಿನಗೆ ತಿಳಿದ ವಿಷಯವೇ., ಭೂಲೋಕದಲ್ಲಿ ಇವನಂತೆ ಹಲವರು ಇದ್ದಾರೆ,ಅವರು ತಮ್ಮ ದೇವರ ಕೃಪೆಯಿಂದ ನೋವು-ಸಂಕಷ್ಟಗಳನ್ನು ಎದುರಿಸುತ್ತ ಹಣೆಬರಹವನ್ನು ದೂಷಿಸುವುದನ್ನು ಕಡಿಮೆ ಮಾಡಿದ್ದಾರೆ. ಇವನ ದೇವ ಶ್ರೀವಿಷ್ಣು ಒಮ್ಮೆಯಾದರೂ ಇವನ ನೋವುಗಳಿಗೆ ಸ್ಪಂದಿಸಿದ್ದಲ್ಲಿ ಇವನ ಬಾಯಿಂದ ಈ ಮಾತುಗಳು ಹರಿಯುತ್ತಿರಲಿಲ್ಲ ಎಂಬುದು ನನ್ನ ಮಾತು..' ಎನ್ನುತ್ತಾರೆ.
ಆಗ ಶ್ರೀವೆಂಕಟರಮಣ 'ಮಹಾದೇವ ನಿನಗೆ ತಿಳಿದಿರುವಂತೆ ನನ್ನ ಅವತಾರಗಳಿಗೆಲ್ಲ ಅದೆಷ್ಟು ಭಕ್ತರಿದ್ದಾರೆ,ಅವರನ್ನೆಲ್ಲ ಗಮನಿಸಿ ಬರುವಷ್ಟರಲ್ಲಿ ವಿಳಂಬವಾಗಿರಬಹುದೇನೋ ಎನಿಸುತ್ತದೆ.. ಹೆಚ್ಚೇನು ಹೇಳಲಾರೆ, ಆದರೂ ಈ ನನ್ನ ಭಕ್ತನ ಪುಟ್ಟ ಮನಸ್ಸಿಗೆ ಇಷ್ಟು ನೋವಾಗುವಂತೆ ಅದೆಂತ ಹಣೆಬರಹ ಕೆತ್ತಿರಬಹುದು..' ಎಂದು ಮತ್ತೆ ಬ್ರಹ್ಮನನ್ನೇ ದೂರುತ್ತಾರೆ.
ಆಗ ಯುವಕ 'ಶಿವ ನನಗೆ ತಿಳಿದಂತೆ ಒಬ್ಬಾತನ ಜೀವನ ಸಂತುಷ್ಟಗೊಳ್ಳಲು ಮೂಲದಲ್ಲೇ ಅವನ ಹಣೆಬರಹವನ್ನು ಅತ್ಯುತ್ತಮವಾಗಿ ಬ್ರಹ್ಮದೇವ ಬರೆದಿರಬೇಕು ಅಥವಾ ಅವನಣೆಬರಹ ಅಷ್ಟು ಚೆನ್ನಾಗಿಲ್ಲದಿದ್ದರೂ ಬ್ರಹ್ಮದೇವನ ಸ್ವತ್ತಾದ ಸರಸ್ವತಿ ದೇವಿಯಾದರೂ ಒಲಿಯಬೇಕು.. ಹಾಗಾಗಿ...' ಎನ್ನುವಷ್ಟರಲ್ಲಿ ಸರಸ್ವತಿ ಪ್ರವೇಶಿಸಿ,
'ಮಹಾದೇವ, ನನ್ನ ಬ್ರಹ್ಮ ಈತನಿಗೆ ಸ್ವಲ್ಪ ಕಠಿಣವಾಗಿ ಹಣೆಬರಹ ಬರೆದಿರುವುದು ಸರಿಯೆಂದುಕೊಂಡರೂ, ಮುಂದೊಮ್ಮೆ ಈತನಿಂದ ಆರೋಪಕ್ಕೆ ಬ್ರಹ್ಮದೇವ ಗುರಿಯಾಗಬಾರದೆಂದು ನಾನು ಈತನಿಗೆ ಸ್ವಲ್ಪ ಹೆಚ್ಚೇ ಒಲಿದು ವರ ನೀಡಿ ಹರಸಿರುವುದಕ್ಕೆ ಇವನ ತಿಳುವಳಿಕೆ,ಬುದ್ಧಿವಂತಿಕೆಗಳೇ ಸಾಕ್ಷಿ. ಬೇಕಿದ್ದರೆ ಪರೀಕ್ಷಿಸಿ ನೋಡಿ.ಹಾಗಾಗಿ ನಮ್ಮನ್ನು ದೂರುವಂತಿಲ್ಲ..'ಎಂದು ಹೇಳಿಬಿಡುತ್ತಾರೆ.
ಮುಂದೆ ಎಲ್ಲರೂ ಮೌನವಾದಾಗ ಸರಸ್ವತಿದೇವಿಯೇ ಮುಂದುವರೆದು 'ಮಹದೇವ ನಿನಗೆ ತಿಳಿದಂತೆ ಭೂಲೋಕದಲ್ಲಿ ಮಾನವರಿಗೆ ನಾನು-ಯಾರು ಒಲಿದರೇನು ಶ್ರೀ ಲಕ್ಷ್ಮಿ-ವೆಂಕಟೇಶ್ವರರು ಒಲಿದು ಮಾನವನ ಅಂಗೈಗೆ ಹಣ ಬರದಿದ್ದರೆ ಮೊಗದಲ್ಲಿ ಸಂತಸ ಮೂಡುವುದೇ.. ಶ್ರೀಲಕ್ಷ್ಮೀಶ ತನ್ನ ಭಕ್ತ ಈತನಿಗೆ ಕೊಂಚವಾದರೂ ಹಣ ನೀಡಿದ್ದರೆ,ಈತನಲ್ಲಿ ಸಂತಸ ಮೂಡುತ್ತಿತ್ತೇನೋ..' ಎಂದಾಗ ಶಿವನಿಗೆ ಹೌದೆನಿಸುತ್ತದೆ.
ಶಾರದಾ ಮಾತೆ ಹೀಗೆ ಹೇಗೆ ಹೇಳುತ್ತಿದ್ದಂತೆ ಮಹಾಲಕ್ಷ್ಮಿ ಪ್ರತ್ಯಕ್ಷವಾಗಿ,
'ನನ್ನ ಪತಿಯ ಮೇಲೆ ಆರೋಪ ಸಲ್ಲದು,ಶ್ರೀನಿವಾಸ ತನ್ನಲ್ಲಿ ಎಷ್ಟೇ ಸಂಪತ್ತಿದರೂ ತನ್ನ ಭಕ್ತಸಂಕುಲಕ್ಕೆ ಕಿಂಚಿತ್ತೂ ನೀಡುವುದಕ್ಕೂ ಸ್ವಲ್ಪ ಹಿಂದೆ-ಮುಂದೆ ನೋಡುವುದು ಸರಿಯೆನಿಸಿದರೂ ಈ ಭಕ್ತನಿಗೆ ಶ್ರೀನಿವಾಸನಿಗೆ ತಿಳಿಯದಂತೆ ನಾನು ಒಲಿದು ಇವನ ಕಷ್ಟಗಳಲ್ಲಿ ಸ್ಪಂದಿಸಿರುವುದಕ್ಕೆ,ಇವನ ಆರ್ಥಿಕ ಸ್ಥಿತಿಯೇ ಸಾಕ್ಷಿ..' ಎನ್ನುತ್ತಾರೆ.
ಆಗ ಶಿವ ಯೋಚಿಸಿ 'ಬ್ರಹ್ಮ ಅದ್ಹೇಗೆ ಹಣೆಬರಹ ಬರೆದರೂ ಅದು ಮುಖ್ಯವಲ್ಲ, ಶ್ರೀಹರಿ ತನ್ನ ಭಕ್ತಸಂಕುಲಕ್ಕೆ ಸೇರಿದವರೆಲ್ಲರನ್ನೂ ಸರಿಯಾಗಿ ಗಮನಿಸಬೇಕಿತ್ತು....'ಎನ್ನುತ್ತಿದ್ದಂತೆ ಆರೋಪ ಒಪ್ಪದ ಲಕ್ಷ್ಮಿ ವಾದಿಸುತ್ತಿರಲು, ಶಾರದೆಯೂ  ವಾದಕ್ಕಿಳಿಯುತ್ತಾರೆ.
ಹೀಗೆ ಒಬ್ಬರನ್ನೊಬ್ಬರು ದೂರುತ್ತಾ ಇವರೇ ಕಿತ್ತಾಡುವಾಗ ಏನು ಮಾಡುವುದೆಂದು ತಿಳಿಯದೆ ಯೋಚಿಸುತ್ತಿದ್ದಾಗ..,
ನಿರಾಶೆಯ ಮುಖ ಹೊತ್ತು ಕುಳಿತಿದ್ದ ಆ ಯುವಕನೆದೆಯಾಂತರಾಳದಲ್ಲಿ ಸಂತಸದ ದೀವಿಗೆಯೊಂದು ಕಣ್ಣು ಮಿಟುಕಿಸಿ ಅವನ ಮುಖದಲ್ಲಿ ನಿರಾಸೆಯ ಗೆರೆ ಮಾಯವಾಗುತ್ತಾ ಮಂದಹಾಸವೊಂದು ಮಿಂಚಿ ಮರೆಯಾಗುವುದು ವಿಶ್ವೇಶ್ವರನರಿವಿಗೆ ಬಂದು ಆ ಸಂಚಲನಕ್ಕೆ ಕಾರಣರಾದವರು ಇಲ್ಲೇ ಎಲ್ಲೋ ಪಾದವಿತ್ತಿದ್ದಾರೆ.., ಅವರಾರೆಂದು ತಿಳಿಯುವಲ್ಲಿ ಆ ಸಂಚಲನಕ್ಕೆ ಕಾರಣವಾದ ಘನಮಹಿಮ ಜಗನ್ನಾಥ ವಿಠಲ ಪ್ರಿಯ ಶ್ರೀ ಗುರುರಾಯರು ಹೆಜ್ಜೆಯಿಡುತ್ತಾ..
'ಶ್ರೀಜಗದೀಶ್ವರ ನನ್ನ ಶ್ರೀಹರಿಯ ಮೇಲೆ ಅಪವಾದ ಸಲ್ಲದು.. ಈ ಯುವಕನ ಸುಖ-ದುಃಖ ಒಮ್ಮೆ ಕಂಡು ಕಾಣದಂತೆ ಮಿಂಚಂತೆ ಬಂದು ಮರೆಯಾಗುತ್ತವೆ.. ಹಾಗಾಗಿ ಶ್ರೀ ಹರಿ ಗಮನಿಸುವಲ್ಲಿ ಸ್ವಲ್ಪ ತಡವಾಗುತ್ತಿದೆ ಹೌದು',
'ನನ್ನೀ ದೊರೆ ಶ್ರೀಹರಿಯ ಮೇಲೆ ಈ ಆರೋಪ ಬರಬಾರದೆಂದೇ ನಾನೀ ಯುವಕನತ್ತ ಇತ್ತೀಚಿಗೆ ಗಮನವಿಟ್ಟಾಗ ಇವನಲ್ಲಿ ಶಿವರೂಪ ಕಾಮಭಾವವು,ಕೃಷ್ಣರೂಪ ಲಜ್ಜೆ ಪ್ರೇಮಭಾವವು,ಆಸೆಯೂ ಹೆಚ್ಚು ಬೆರೆತು ಮನಸ್ಸು ವಿಚಲಿತವಾಗಿತ್ತು, ಅದೇ ಸಮಯಕ್ಕೆ ಮನೆ-ಮನಗಳಿಂದ ಇವನಿಗೆ ನೋವುಂಟಾಗಿ ಈತ ಒಂಟಿಯಾಗಿ ಆಘಾತ ಅನುಭವಿಸಿ ಖಿನ್ನನಾಗಲು ಸಕಲ ಲೋಕದ ಅಣು-ರೇಣುಗಳಿಂದ ಹಿಡಿದು ಎಲ್ಲರನ್ನೂ ತನ್ನ ದ್ರುಷ್ಟಿಯಿಂದಲೇ ಹೆದರಿಸಿ, ಗೌರಿಸುತ ವಿಘ್ನೇಶ್ವರನನ್ನೂ,ರಾಮಭಕ್ತ ಹನುಮನನ್ನೂ ಹೆದರಿಸಲಾಗದ ಶ್ರೀ ಕಾಲಭೈರವನ ಪೂಜಿಸುವ ಶ್ರೀ ಶನಿಮಹಾಪರಮಾತ್ಮ ಇವನತ್ತ ಸ್ವಲ್ಪ ದೃಷ್ಟಿ ನೆಟ್ಟಿದ್ದೆ ಕಾರಣವಿರಬೇಕು.. ಜೊತೆಗೆ ಲಕ್ಷ್ಮಿ-ಶಾರದೆಯರು ಇವನಿಗೆ ಒಲಿದು ಈತನ ಕಷ್ಟಗಳಿಗೆ ಸ್ಪಂದಿಸದಿದ್ದಲ್ಲಿ ಅದೆನಾಗುತ್ತಿತ್ತೋ...'ಎನ್ನುತ್ತಾರೆ.
ಆಗ ಮಹೇಶ್ವರ 'ಶ್ರೀರಾಯರು ನಿಮ್ಮ ಪಾದಧೂಳು ಇವನ ಸೋಕಿದೊಡನೆ ಇವನಿಗಾದ ಆನಂದ ಕಂಡೆ.. ಇವನ ಕಷ್ಟ-ಸುಖಗಳನ್ನು ಅರಿತ ನೀವೇ ಇವನಿಗೆ ಪರಿಹಾರ ತಿಳಿಸಿರಿ..' ಎಂದಾಗ ರಾಯರು,
' ಮಹಾದೇವೀಶ್ವರ, ಈತನಿಗೆ ಸದ್ಯಕ್ಕೆ ಲಕ್ಷ್ಮಿ-ಸರಸ್ವತಿಯರು ಸ್ವಲ್ಪ ಹೆಚ್ಚು ಅನುಗ್ರಹಿಸಬೇಕು.. ಈತನ ತನುಮನ ಯಾವ ಶಕ್ತಿಗೂ ಕುಗ್ಗದೆ ಶಕ್ತಿಯುತವಾಗಲು ಶ್ರೀಹನುಮನ ಅನುಗ್ರಹವೂ ಸ್ವಲ್ಪ ಬೇಕು.. ಇನ್ನೂ ವಿಶ್ವೇಶ್ವರ ನಿನ್ನ ನೆರವೂ ಇರಬೇಕು..' ಎಂದಾಗ ಮಹೇಶ್ವರ 'ನಮ್ಮೆಲ್ಲರ ನೆರವು ಶ್ರೀರಾಯರ ನೆರಳಿನಲ್ಲೆ ಆಗಲಿ' ಎನ್ನುವಾಗ ಈತನಲ್ಲಿ ಸಂತಸ ಅರಳುತ್ತದೆ.
ಶ್ರೀಗುರುರಾಯರ ನೆರಳಿರಲಿ..
[ಸೂಚನೆ: ವರುಷಗಳ ಕೆಳಗೆ ನನ್ನಲ್ಲಿ ಮೂಡಿದ್ದ ಒಂದು ಕಲ್ಪನೆಗೆ ಶ್ರೀರಾಯರ ಆಗಮನ ಸೇರಿಸಿ ಬರೆದಿದ್ದೇನೆ..
ದೇವರಮೇಲೆ ನನಗೆ ತಿಳಿದಂತೆ ಬರೆದ ನನ್ನ ಪದಗಳ ಮೇಲೆ ದೂರಿದ್ದರೆ ಹೇಳಿ,ತಿದ್ದಿಕೊಳ್ಳುತ್ತೇನೆ..]
~-~
Related Posts Plugin for WordPress, Blogger...