ಸರ್ವರಿಗೂ ಹೊಸ ವರುಷಕೆ ಸುಸ್ವಾಗತ..
ಈ ಹೊಸವರುಷ ಎಲ್ಲರಿಗೂ ಶುಭತರಲಿ..
ಹೊಸ ವರುಷ ಹರುಷ ತರಲೆಂದು 'ಘನಮಹಿಮ ಜಗನ್ನಾಥ ವಿಠಲ ಪ್ರಿಯ ಶ್ರೀ ಗುರುರಾಯ'ರಲ್ಲಿ ಒಂದು ಪ್ರಾರ್ಥನೆ

(ಚಿತ್ರಕೃಪೆ:ಅಂತರ್ಜಾಲ)
ಸತ್ತ ಕನಸುಗಳು ಬದುಕಲೆಂದು ಕೇಳುತ್ತಿಲ್ಲ
ನರಳುತ್ತಿರುವವು ಉಳಿಯಲಿ ಸಾಕೆನಗೆ
ನಗುತ್ತಿರುವ ಕನಸುಗಳು ಅಳುವುದು ಬೇಡ ಗುರುವೇ..
ಮನದ ಮನೆ ಪ್ರಜ್ವಲಿಸಲೆಬೇಕೆಂದಿಲ್ಲ
ಮಿಣುಕು ದೀಪವೊಂದು ಮಿನುಗಲಿ ಸಾಕು
ಕತ್ತಲಲೆ ಮುಳುಗಿಸಬೇಡ ಗುರುವೇ..
ಸವಿಗನಸೆ ಬೀಳಲೆಂದು ಬೇಕುತ್ತಿಲ್ಲ
ನೆಮ್ಮದಿಯ ನಿದ್ರೆ ಸಾಕೆನಗೆ
ದುಷ್ಟ ಸ್ವಪ್ನಗಳು ಬೀಳುವುದು ಬೇಡ ಗುರುವೇ..
ಎಲ್ಲರ ಪ್ರೀತಿ ಬಯಸುತ್ತಿಲ್ಲ
ಪ್ರೀತಿಸುತ್ತಿರುವವರ ಪ್ರೀತಿ ಉಳಿದರೆ ಸಾಕೆನಗೆ
ಇರುವ ಪ್ರೀತಿಯನ್ನು ಕಳೆಯಬೇಡ ಗುರುವೇ..
ನಿನ್ನ ಮೊಗವನೇ ನೋಡಬೇಕೆಂದಿಲ್ಲ
ನಿನ್ನ ಪಾದ ಮುಟ್ಟುವಂತಾದರೆ ಸಾಕೆನಗೆ
ಪಾದದಡಿಯಲಿ ಮಾತ್ರ ಇಡಬೇಡ ಗುರುವೇ..
ನಿನ್ನ ಕೃಪಾನೋಟ ಸಿಗಲೆಬೇಕೆಂದಿಲ್ಲ
ಕರುಣೆಯ ನೋಟ ಸಾಕೆನಗೆ
ಕೆಂಡಾಮಂಡಲ ನೋಟ ಮಾತ್ರ ಬೇಡ ಗುರುವೇ..
ಸವಿಬೆಲ್ಲ ಮಾತ್ರವೇ ಫಲಿಸಬೇಕೆಂದಿಲ್ಲ
ಬೇವೊಡನೆ ಬೆಲ್ಲವಿರಲಿ ಸಾಕೆನಗೆ
ಬರಿಯ ಬೇವನ್ನೂ ಮಾತ್ರ ನೀಡಬೇಡ ಗುರುವೇ..
~.~