ಯಾಕಪ್ಪ ಹೀಗಾಯ್ತು?!

!! ಜ್ಞಾನಾರ್ಪಣಮಸ್ತು !!


[ನನಗಾದ ಒಂದು ಮರೆಯಲಾಗದ ಅನುಭವವನ್ನು ಇವತ್ತು ನಿಮ್ಮ ಮುಂದೆ ಹಂಚಿಕೊಳ್ಳುತ್ತಿದ್ದೇನೆ.. ತುಂಬಾ ಇಂಟರೆಸ್ಟಿಂಗ್ ಅನಿಸಬಹುದು ಓದಿನೋಡಿ..]


~.~


ನನಗೆ ಅಂತಹ ಹೇಳಿಕೊಳ್ಳುವಂತಹ ಒಳ್ಳೆಯದೇನೂ ಆಗದಿದ್ದರೂ, ಕೆಲವು ದಿನಗಳಿಂದ ನಮ್ಮ ಮನೆದೇವರಾದ ತಿರುಪತಿ ವೆಂಕಟೇಶ್ವರನ ದರ್ಶನ ಮಾಡಬೇಕೆಂಬ ಆಸೆ ಬಂದಿತ್ತು,ಅಂತೆಯೇ ಪರೀಕ್ಷೆ ಮುಗಿಸಿ ಡಿಸೆಂಬರ್ ನ ಕೊನೆಯ ವಾರದಲ್ಲಿ ತಿರುಪತಿಗೆ ಹೋಗಬೇಕೆಂಬ ಯೋಜನೆಯಿದ್ದರೂ ಕಾರಣಾಂತರಗಳಿಂದ ಒಂದು ವಾರ ಮುಂದೂಡಿದೆವು..
ನಾನು ಮತ್ತು ನನ್ನ ಗೆಳೆಯ(ಬಲು ವಿಭಿನ್ನ,ಇವನು ಯಾವಾಗ ಹೇಗೆ ಅಂತ ಹೇಳೋಕಾಗೊಲ್ಲ) ಇಬ್ಬರೂ ಅವಸರವಸರದಲ್ಲಿ ಹೊರಡಲು ಸಿದ್ದರಾದೆವು.. ನನಗೆ ಇದೇ ಮೊದಲ ತಿರುಪತಿ ಪ್ರಯಾಣವಾದರೇ, ಅದಾಗಲೇ ಆತ ಎರಡು ಬಾರಿ ತಿರುಪತಿಗೆ ಹೋಗಿಬಂದಿದ್ದ,ಆದ್ದರಿಂದ ಆತ ಹೇಳಿದಂತೆಯೇ ನಾನು ಕೇಳುತ್ತಿದ್ದೆ..
ಗುರುವಾರ ಸಂಜೆ ಮಂಡ್ಯದಿಂದ ರೈಲಿನಲ್ಲಿ ಹೊರಟು ಶುಕ್ರವಾರ ದರ್ಶನ ಮುಗಿಸಿ ಬರೋಣ ಎಂದಿದ್ದ.
ಅಂತೆಯೇ ಆತ ತಾನು ಊರಿಗೆ(ಬೆಸಗರಹಳ್ಳಿ,ಮದ್ದೂರು) ಹೋಗಿ ರೆಡಿಯಾಗಿ ಮತ್ತೆ ಮಂಡ್ಯಕ್ಕೆ ಬರ್ತೀನಿ,ಇಬ್ಬರೂ ರೈಲಿನಲ್ಲಿ ಹೋಗೋಣ ನೀನು ರೆಡಿಯಾಗಿರು ಎಂದು ಹೇಳಿ ಊರಿಗೆ ಹೋದ.. ನಾನು ಸರಿಯೆಂದು ಮನೆಯವರ ಒಪ್ಪಿಗೆ ಪಡೆದು ಹೊಸಬಟ್ಟೆ ಖರೀದಿಸಿ ಸಂತೋಷದಿಂದ ಹೊರಟು ನಿಂತು ನನ್ನ ಗೆಳತಿಗೆ ವಿಷಯ ಮುಟ್ಟಿಸಿ ಸಂದೇಶ ಕಳಿಸಿ ಅವಳಿಂದ ಪ್ರತ್ಯುತ್ತರ ನಿರೀಕ್ಷಿಸಿ ಕಾಯುತ್ತಿದ್ದಾಗ ಅವಳು ಬೇರೊಂದು ನಂಬರಿನಿಂದ ಕರೆ ಮಾಡಿ ತನ್ನ ನಂಬರಿನಿಂದ ಮಸೇಜ್/ಕಾಲ್ ಹೋಗ್ತಿಲ್ಲ,ಔಟ್ ಗೋಯಿಂಗ್ ಸರ್ವಿಸ್ ಕಟ್ ಆಗಿದೆ,ಅದಿಕ್ಕೆ ಈ ನಂಬರಿನಿಂದ ಕಾಲ್ ಮಾಡಿದೆ,ಸರಿ ಹುಷಾರಾಗಿ ಹೋಗಿಬಾ ಎಂದು ಹಾರೈಸಿದಳು.. ಅವಳ ಫೋನ್ ಔಟ್ ಗೋಯಿಂಗ್ ಕಟ್ ಆಗಿದ್ದು ನನಗೆ ಅಪಶಕುನ ಎನಿಸಿತು,ನಾನೇ ಆ ಸಮಸ್ಯೆ ಬಗೆಹರಿಸಬೇಕು,ಆದರೆ ತಿರುಪತಿಗೆ ಹೋಗಿ ಮತ್ತೆ ಬರೋದು ಎರಡು ದಿನವಾಗುತ್ತೆ ಅಲ್ಲಿವರೆಗೆ ಅವಳು ಯಾರಿಗೂ ಮೆಸೇಜ್/ಕಾಲ್ ಮಾಡದೆ ಹೇಗೆ ಇರ್ತಾಳೆ ಎಂದು ಯೋಚಿಸಿ ಅಂದೇ ಆಫೀಸ್ ಗೆ ಹೋಗಿ ಐಡಿ ಪ್ರೂಫ್ ಕೊಟ್ಟು ಸಮಸ್ಯೆ ಬಗೆಹರಿಸಲು ಹೇಳಿ ಬಂದು ಇನ್ನು 24 ಗಂಟೆಯಲ್ಲಿ ಸರಿಹೋಗುತ್ತೆ ಅಲ್ಲಿವರೆಗೂ ಹೇಗಾದ್ರೂ ಅಡ್ಜಸ್ಟ್ ಮಾಡ್ಕೊ ಎಂದು ಹೇಳಿದೆ.
ಆಗ ನನ್ ಫ್ರೆಂಡ್ ಕಾಲ್ ಮಾಡಿ 'ಲೋ ಮಗಾ ನಾನು ಮದ್ದೂರಲ್ಲೇ ಇರ್ತೀನಿ,ಮಂಡ್ಯಕ್ಕೆ ಬರಕಾಗಲ್ಲ, ತುಂಬಾ ಕೆಲಸ ಇದೆ,ನೀನೆ ಮದ್ದೂರಿಗೆ ಬಾ'ಎಂದ.
ಸರಿ ಎಂದು ನಾನು ಬಸ್ ಹತ್ತಿ ಮದ್ದೂರಿಗೆ ಹೊರಟೆ,ನಾನು ಇದೇ ಮೊದಲಬಾರಿಗೆ ಮಂಡ್ಯ ಬಿಟ್ಟು ಬೇರೆ ಕಡೆ ಬಸ್ ಹತ್ತಿದ್ದು,ನಾನು ಎಂದೂ ಎಲ್ಲಿಯೂ ಹೋದವನಲ್ಲ.
ಮದ್ದೂರು ತಲುಪಿದಾಗ ಆತ 'ರೈಲಿನಲ್ಲಿ ಹೋಗೋದು ಬೇಡ,ತುಂಬಾ ರಷ್ ಇರತ್ತೆ,ಬಸ್ನಲ್ಲೇ ಹೋಗೋಣ' ಎಂದ. ಸಾಮಾನ್ಯವಾಗಿ ನಾನು ಸ್ವಲ್ಪ ಜಿಪುಣ ಆದ್ದರಿಂದ 'ಬೇಡ ಬಸ್ನಲ್ಲಿ ಹೋದರೆ ತುಂಬಾ ಖರ್ಚಾಗುತ್ತೆ,ರೈಲಿನಲ್ಲಿ ಹೋಗೋಣ' ಎಂದು ಎಷ್ಟೇ ಹೇಳಿದರೂ ಕೇಳದೆ 5.30ಕ್ಕೆ ಬೆಂಗಳೂರಿಗೆ ಬಸ್ ಹತ್ತಿಸಿದ.
ನಾನು ನನ್ನ ಗೆಳತಿಗೆ ಬೇರೊಂದು ಸಿಮ್ ಕೊಟ್ಟಿದ್ದೆ,ಅಂದು ಅದೇಕೋ ಅದರಿಂದಲೂ ಮೆಸೇಜ್ ಸೆಂಡ್ ಆಗ್ತಿಲ್ಲ ಎಂದಳು,ಅಯ್ಯೋ ಎಂದುಕೊಂಡು ನನ್ನ ಗೆಳತಿಯೊಂದಿಗೆ ಮೊಬೈಲ್ ಫೋನ್ ಫೇಸ್ಬುಕ್ ಮೂಲಕವೇ ಚಾಟ್ ಮಾಡುತ್ತ ಹೊರಟಿದ್ದೆ..
ನನ್ನ ಜೀವನದಲ್ಲಿ ಮೊಟ್ಟಮೊದಲ ಬಾರಿಗೆ ನಾನು ಬೆಂಗಳೂರಿಗೆ ಬಂದಿದ್ದೆ,ಮೊದಲಬಾರಿಗೆ ಬೆಂಗಳೂರಿಗೆ ಬಂದವರಿಗೆ ಆಗುವ ಪುಳಕಗಳು ನನಗೂ ಆದವು, ಜ್ಞಾನಮೂರ್ತಿಯವರಿಗೆ ವಿಷಯ ತಿಳಿಸಿದೆ.
ಬೆಂಗಳೂರಿನಲ್ಲೇ ಊಟ ಮುಗಿಸಿ ಅಲ್ಲಿಂದ 10.30ಕ್ಕೆ ತಿರುಪತಿ ಬಸ್ ಹತ್ತಿದೆವು,ಆ ಚಳಿಯಲ್ಲಿ ಬಸ್ನಲ್ಲಿ ಮೊದಲ ರಾತ್ರಿ ಪ್ರಯಾಣ ಆದ್ರಿಂದ ಅರೆಬರೆ ನಿದ್ದೆ ಮಾಡುತ್ತ ಬೆಳಿಗ್ಗೆ 4.30ಕ್ಕೆ ತಿರುಪತಿ ತಲುಪಿದೆವು,ತಿರುಪತಿಯಲ್ಲಿ ಇಳಿದಾಗ ನನಗೆ ಏನೋ ಒಂಥರ ಮೈ ಜುಮ್ಮೆನ್ನುವ ಅನುಭವ..
ಬೆಟ್ಟಕ್ಕೆ ಮೆಟ್ಟಿಲೇರುತ್ತ ಹೋಗೋಣವೆಂದು ಬೆಳಿಗ್ಗೆ 5.30ರಿಂದ ಸತತ 3 ಗಂಟೆಗಳ ಕಾಲ ಸುಮಾರು 3000 ಮೆಟ್ಟಿಲೇರುತ್ತ ತಿರುಮಲ ತಲುಪಿದೆವು,ಆ ಮುಂಜಾನೆಯಲ್ಲಿ ಬೆಟ್ಟಗಳ ರಮಣೀಯ ದೃಶ್ಯ ಸೆರೆಹಿಡಿಯಲೂ ಕ್ಯಾಮೆರ ಇರಲಿಲ್ಲ..
ಮೆಟ್ಟಿಲೇರಿ ಬಂದವರಿಗೆ ಬೇಗ ದರ್ಶನವಾಗುತ್ತೆ ಎಂದು ಗೆಳೆಯ ಹೇಳಿದ,ಅಂತೆಯೇ ಮೆಟ್ಟಿಲೇರಿದವರಿಗೆ ಪ್ರತ್ಯೇಕವಾಗಿ ಬೇಗ ದರ್ಶನ ಆಗುವ ದಿವ್ಯದರ್ಶನಕ್ಕೆಂದು ಟಿಕೆಟ್ ನೀಡಿದರು..
ಟಿಕೆಟ್ ಪಡೆದು ಖುಷಿಯಿಂದ ತಿಂಡಿ ತಿಂದು ಇಬ್ಬರೂ ಮುಡಿ ಕೊಟ್ಟು ಸ್ನಾನ ಮಾಡಿ 9.30ಕ್ಕೆ ದರ್ಶನಕ್ಕೆಂದು ಹೊರಟು ಟಿಕೆಟ್ ತೋರಿಸಿದಾಗ ನಮಗೆ ನಾಳೆ ದರ್ಶನ ಸಿಗುತ್ತದೆ,ಇಂದು ಸಿಗುವುದಿಲ್ಲ ಎಂದಾಗ ನಮ್ಮಿಬ್ಬರಿಗೂ ಆಘಾತವಾಯಿತು.. ಟಿಕೆಟ್ ನಲ್ಲಿ VALID ONLY FOR 07-01-12 ಎಂದಿದ್ದನ್ನು ಸರಿಯಾಗಿ ಗಮನಿಸಿರಲಿಲ್ಲ.. ನಾಳೆವರೆಗೂ ಕಾಯಲು ಆಗೊಲ್ಲವೆಂದು ತಕ್ಷಣವೇ 300 ರೂಪಾಯಿ ಕೊಟ್ಟು ಹೋಗುವ ಪ್ರತ್ಯೇಕ ದರ್ಶನಕ್ಕೆ ಹೋಗೋಣವೆಂದು ವಿಚಾರಿಸಿದಾಗ ಅದಾಗಲೇ ಅಲ್ಲಿ ಟಿಕೆಟ್ ಖಾಲಿಯಾಗಿದ್ದವು.. ನನ್ನ ಗೆಳೆಯ ಮುಂದೇನು ಎಂದು ತಲೆಕೆಡಿಸಿಕೊಂಡು ಅಡ್ಡಾಡುತ್ತಿದ್ದ,ನಾನೂ ಅವನ ಹಿಂದೆ ತಿರುಗುತ್ತಿದ್ದೆ...
ಕೊನೆಗೆ ಉಚಿತ ದರ್ಶನವಾದ ಧರ್ಮದರ್ಶನದ ಕ್ಯೂನಲ್ಲಿ ನಿಂತೆವು,ಅದಾಗಲೇ ಅದು ಆಂಜನೇಯನ ಬಾಲದಂತೆ ಬೆಳೆದಿತ್ತು,ಕ್ಯೂನಲ್ಲಿ ನಿಂತು ಕಾಯುತ್ತಿದ್ದರೆ ಸಾಕಪ್ಪ ಈ ತಿರುಪತಿ ಸಹವಾಸ ಎನಿಸುತ್ತಿದ್ದರೂ ಮನೆದೇವರ ದರ್ಶನ ಮಾಡಬೇಕೆಂಬ ಆಸೆಯಿಂದ ಸಹಿಸಿಕೊಂಡಿದ್ದೆ,ಕ್ಯೂ ಮುಗಿಸಿ ಒಂದು ಹಾಲ್ ನಲ್ಲಿ ಕೂರಿಸಲಾಯಿತು,ನಾನು ಅಂದುಕೊಂಡಿದ್ದ ಹಾಲ್ ಇದಾಗಿರಲಿಲ್ಲ. ಹಾಲ್ ನಿಂದ ನೇರ ದೇವರ ದರ್ಶನವೇ,ರಾತ್ರಿ ಹತ್ತಕ್ಕೆ ದರ್ಶನ ಆಗುತ್ತದಂತೆ, ಎಷ್ಟೊತ್ತಾದರೂ ಸರಿ ದರ್ಶನ ಮುಗಿಸಿ ಹೊರಟುಬಿಡೋಣ ನಾನು ಬೇಗ ಹೋಗಬೇಕು ಎಂದಿದ್ದ,ಅದಾಗಲೇ ಆತ ಕಾದು ಕಾದು ಸಾಕಾಗಿದ್ದ..
ಸುಮಾರು 3 ಗಂಟೆಗಳ ಕಾಲ ಹಾಲ್ ನಲ್ಲಿ ಕೂರಿಸಿ ಅಲ್ಲಿದ್ದವರಿಗೂ ನಾಳೆಯೇ ದರ್ಶನ ಸಿಗುವುದೆಂದು ತಿಳಿಸಿ ನಾಳೆ ನೇರ ದರ್ಶನಕ್ಕೆ ಬರಲು ಟಿಕೆಟ್ ನೀಡಿ ಹೊರಕಳಿಸಲಾಯಿತು.. ಏನೇ ಮಾಡಿದರೂ ನಾಳೆಯೇ ದರ್ಶನ ಎಂದು ತಿಳಿದಾಗ ತಲೆಕೆಟ್ಟಂತಾಯಿತು..

ಮಹಾತಿರುವು..:
ಅವನ ಗೆಳೆಯನೊಬ್ಬ ಅವನಿಗೆ ಕರೆ ಮಾಡಿ ತಕ್ಷಣವೇ ಅಲ್ಲಿಂದ ಹೊರಟು ಬಾ ಇಲ್ಲಿ ದೊಡ್ಡ ಸಮಸ್ಯೆ ಉಂಟಾಗಿದೆ ಎಂದಿದ್ದ,ಆಗ ನನ್ನ ಗೆಳೆಯ ನಾನು ಇರಲ್ಲ ಹೊರಡಬೇಕು ನೀನು ಬೇಕಾದರೆ ಉಳಿದುಕೊಂಡಿದ್ದು ದರ್ಶನ ಮಾಡಿ ಬಾ ಇಲ್ಲಾಂದ್ರೆ ಇಬ್ಬರೂ ಹೋಗೋಣ ಬಾ, ಮುಂದಿನ ವಾರ ಮತ್ತೆ ಬಂದು ದರ್ಶನ ಮಾಡೋಣ ಎಂದ.
ಅವನು ಹಾಗೆಂದಾಗ ನಾನು ತುಂಬಾ ದುಃಖಿತನಾಗಿ 'ಲೋ ಮೊದಲಬಾರಿ ಮನೆ ದೇವರಿಗೆ ಬಂದು ಮುಡಿ ಕೊಟ್ಟು ದರ್ಶನ ಮಾಡದೇ ಹೋಗೋದಾ.. ನಮ್ಮ ಮನೆಗೆ ಗೊತ್ತಾದ್ರೆ ಪೂಜೆ ಮಾಡ್ತಾರೆ ಅಷ್ಟೆ! ಹೀಗಾದ್ರೆ ಮೊದಲಸಲವೇ ಹೀಗಾಯ್ತಲ್ಲ ಅಂತ ನಾನು ದಿನಾಗಲೂ ತುಂಬಾ ಕೊರಗಿಬಿಡ್ತೀನಿ,ದರ್ಶನ ಆಗೋವರೆಗೂ ನಂಜೊತೆ ಇರು ಅಷ್ಟೆ! ಎಂದೆ. ಸುಮಾರು ಹೊತ್ತು ಗೋಗರೆದ ನಂತರ ಆತ ನಾಳೆಯೂ ಆಗಲ್ಲ ನನ್ ಮಾತ್ ಕೇಳು,ಮನೆಯವರಿಗೆ ದರ್ಶನ ಆಗಿದೆ ಅಂತ ಹೇಳು,ಮುಂದಿನವಾರ ಖಂಡಿತ ಕರೆದುಕೊಂಡು ಬರ್ತೀನಿ ಎಂದು ಏನೇ ಹೇಳಿದರೂ ನಾನು ಕೇಳದಿದ್ದಾಗ ಒಲ್ಲದ ಮನಸ್ಸಿಂದ ಇರಲು ಒಪ್ಪಿ ರಾತ್ರಿ ಇರಲು ಲಾಡ್ಜ್ ಬುಕ್ ಮಾಡುತ್ತಿದ್ದಾಗ ಆತನಿಗೆ ಮತ್ತೆ ಅವನ ಗೆಳೆಯ ಕರೆ ಮಾಡಿ ಬರಲೇಬೇಕು,ಏನೇ ಆದರೂ ಅಲ್ಲಿರದೆ ಬೇಗ ಬಾ... ಎಂದು ಏನೇನೋ ಹೇಳುತ್ತಿದ್ದ..
ಆಗ ನನ್ನ ಗೆಳೆಯ 'ಪ್ಲೀಸ್ ಅರ್ಥ ಮಾಡ್ಕೊ,ನಾನು ಹೋಗದಿದ್ದರೆ ನನ್ನ ಹುಡುಗಿಯನ್ನು ಕಳೆದುಕೊಳ್ಳಬೇಕಾಗುತ್ತೆ ಅವಳಿಲ್ಲ ಅಂದ್ರೆ ನಾನಿರ್ತೀನಾ,ಇದು ನನ್ನ ಲೈಫ್ ಪ್ರಶ್ನೆ,ಇರಕಾಗಲ್ಲ ಮಗಾ ಅರ್ಥ ಮಾಡ್ಕೊ' ಎಂದಾಗ ನನಗೆ ದಿಕ್ಕು ತೋಚದಂತಾಯಿತು.. ಕಣ್ಣೀರು ಬರೋದಷ್ಟೆ ಬಾಕಿ.
ಅವನು ಇರಲು ತಯಾರಿಲ್ಲ,ನಾನು ಹೊರಡಲು ತಯಾರಿಲ್ಲ.
ಸರಿಯೆಂದು ಅವನನ್ನು ಕಳಿಸಿ ಒಬ್ಬನೇ ಉಳಿದೆ,ನಾನು ಎಂದೂ ಮಂಡ್ಯ ಬಿಟ್ಟು ಬೇರೆ ಕಡೆ ಬಂದವನಲ್ಲ,ಇದ್ದವನಲ್ಲ, ಅಂತಹದರಲ್ಲಿ ಭಾಷೆಯೇ ತಿಳಿಯದ ಹೊರರಾಜ್ಯದಲ್ಲಿ ಇರೋದು ಹೇಗೆಂಬ ಭಯ ಆವರಿಸಿತ್ತು..
ಮೊಬೈಲ್ ಫೋನ್ ಬೇರೆ ಬ್ಯಾಟರಿ ಖಾಲಿ ಆಗಿ ಸ್ವಿಚ್ ಆಫ್ ಆಗಿತ್ತು ರಾತ್ರಿ ಲಾಡ್ಜ್ ನಲ್ಲಿರದೇ ಭಕ್ತರೆಲ್ಲ ಉಳಿದುಕೊಳ್ಳುವ ಹಾಲ್ ನಲ್ಲಿ ಉಳಿದು ಸ್ವಲ್ಪ ಚಾರ್ಜ್ ಮಾಡ್ಕೊಂಡು ಲಗೇಜನ್ನು ಲಾಕರ್ ನಲ್ಲಿ ಇಟ್ಟು ಜೀವ ಅಂಗೈಯಲ್ಲಿಡಿದು ಮಲಗಿದೆ,ಎಚ್ಚರವಾಗಿದ್ದುಕೊಂಡೆ ತುಸು ನಿದ್ರಿಸುತ್ತಾ ಬೆಳಿಗ್ಗೆ 4ಕ್ಕೆ ಎದ್ದು ರೆಡಿಯಾಗಿ ದರ್ಶನಕ್ಕೆ ಹೋಗಬೇಕಾದ ದಾರಿ ಹುಡುಕಿ 5.30ಕ್ಕೆ ಕ್ಯೂನಲ್ಲಿ ನಿಂತು ನಿಟ್ಟುಸಿರು ಬಿಟ್ಟೆ.
ಅಲ್ಲಿ ನನಗೆ ಗೊತ್ತಿದ್ದ ಅರ್ಧಂಬರ್ಧ ಇಂಗ್ಲಿಷ್ ಮಾತಾಡುತ್ತ ಒಬ್ಬರನ್ನು ಪರಿಚಯ ಮಾಡಿಕೊಂಡು ಆದದ್ದೆಲ್ಲ ತಿಳಿಸಿ ದರ್ಶನದವರೆಗೂ ಸಹಾಯ ಯಾಚಿಸಿದೆ,ಅವರು 'ಏನಾಗಲ್ ಎಂದು ಆತ್ಮವಿಶ್ವಾಸ ತುಂಬಿದರು.. ಕ್ಯೂನಿಂದ ಮತ್ತೆ ನಮ್ಮನ್ನು ಹಾಲ್ನಲ್ಲಿ ಕೂಡಿಹಾಕಿದಾಗ ಉರಿದು ಹೋಗಿತ್ತು,ಎಷ್ಟು ಹೊತ್ತಿಗೆ ದರ್ಶನವಾಗುತ್ತೋ ಎಷ್ಟು ಗಂಟೆಗೆ ಊರು ಸೇರುತ್ತೇನೋ ಎನಿಸಿತ್ತು. ಅವರನ್ನು ಕಚ್ಚಿಕೊಂಡೇ ಅವರ ಹಿಂದೆಯೇ ಓಡುತ್ತಾ ಅಂತೂ ಇಂತೂ 1 ಗಂಟೆಗೆ ಸಂತೃಪ್ತಿಯಾಗದಿದ್ದರೂ ತೃಪ್ತಿಯಾಗಿ ದರ್ಶನ ಮುಗಿಸಿದಾಗ ನನ್ನೆಲ್ಲ ಭಾರ ಇಳಿದಿತ್ತು.. ದರ್ಶನದವರೆಗೂ ಜೊತೆಗಿದ್ದ ಅವರಿಗೆ ಧನ್ಯವಾದ ಹೇಳುವಷ್ಟರಲ್ಲಿ ಕಾಣದಾದರು.
ಮತ್ತೆ ಕ್ಯೂ ನಿಂತು ಲಡ್ಡು ತೆಗೆದುಕೊಂಡು ಲಗೇಜ್ ಎತ್ಕೊಂಡಾಗ ಅದಾಗಲೇ ೧೮೦+ ಮಿಸ್ಡ್ ಕಾಲ್ ಬಂದಿದ್ದವು,ನನ್ನ ಗೆಳತಿಯಿಂದ ಒಂದೂ ಮೆಸೇಜ್/ಕಾಲ್ ಇರಲಿಲ್ಲ,ಅವಳ ನಂ. ಸರಿಯಾಗಿಲ್ಲವೆನಿಸಿತು,ಊರಿಗೆ ಹೋದ ತಕ್ಷಣ ಸರಿಮಾಡಿಸಬೇಕು ಎಂದುಕೊಂಡೆ.
ಮನೆಯವರಿಗೆ ದರ್ಶನವಾಯಿತೆಂದು ಕರೆ ಮಾಡಿ ಹೇಳಿದಾಗ ಅಲ್ಲಿಯೇ ಪಕ್ಕದಲ್ಲಿರುವ ಅಲುಮೇಲಮ್ಮನ ದರ್ಶನ ಮಾಡಿ ಆಕಾಶತೀರ್ಥ ನೋಡಿಕೊಂಡು ಬರಲು ಹೇಳಿದರು, ಅಲ್ಲಿ ವಿಚಾರಿಸಿದಾಗ ಅವುಗಳಿಗೆ ಮತ್ತೊಂದು ಬಸ್ ಹಿಡಿದು ಹೋಗಬೇಕೆಂದು ತಿಳಿದಾಗ ಮತ್ತೆ ರಿಸ್ಕ್ ತೆಗೆದುಕೊಳ್ಳುವ ಗೋಜಿಗೆ ಹೋಗದೆ ಸದ್ಯ ವೆಂಕಟೇಶ್ವರನ ದರ್ಶನಕ್ಕೆ ಸಮಾಧಾನ ಪಟ್ಟುಕೊಂಡು ಬೇಗ ಊರು ಸೇರುವ ತವಕದಲ್ಲಿ ತಿರುಪತಿಯಿಂದ ಬೆಂಗಳೂರಿನ ಬಸ್ ಏರಿ ಬೆಂಗಳೂರಿನಲ್ಲಿರುವ ಜ್ಞಾನಮೂರ್ತಿಯವರಿಗೆ ಕರೆ ಮಾಡಿ ದರ್ಶನ ಮುಗಿಸಿ ಬೆಂಗಳೂರಿನ ಬಸ್ ಹತ್ತಿದ್ದೇನೆ 10.30ಕ್ಕೆ ಮೆಜೆಸ್ಟಿಕ್ನಲ್ಲಿರುತ್ತೇನೆ ಎಂದಾಗ ಅವರು ಸರಿಬನ್ನಿ ನೀವು ರಾತ್ರಿ ಬೆಂಗಳೂರಿನಲ್ಲಿಯೇ ಇರಲು ವ್ಯವಸ್ಥೆ ಮಾಡುತ್ತೇನೆ ಬಂದು ಕಾಲ್ ಮಾಡಿ ಎಂದರು.. ಸರಿಯೆಂದು ಎಲ್ಲಿಯೂ ಕಣ್ಮುಚ್ಚದೆ ಬೆಂಗಳೂರು ಸೇರೋ ತವಕದಿಂದಿದ್ದೆ,ಕಾಲ್ ಮಾಡಲು ಫೋನ್ ಸ್ವಿಚ್ ಆಫ್ ಆಗಿತ್ತು,ಬಸ್ನಲ್ಲಿದ್ದವರೊಬ್ಬರ ಹತ್ತಿರ ಕರೆ ಮಾಡಲು ಫೋನ್ ಕೇಳಿದಾಗ ಅವರು ನಿರಾಕರಿಸಿದಾಗ ಮುಖ ಗಂಟಾಯಿತು ಮತ್ತೆ ಯಾರನ್ನು ಕೇಳಲಿಲ್ಲ..
ಬೆಂಗಳೂರು ತಲುಪಿ STD ಮೂಲಕ ಜ್ಞಾನಮೂರ್ತಿಯವರಿಗೆ ಕಾಲ್ ಮಾಡಿದಾಗ ಅವರು 'ನಾನು ತುಂಬಾ ದೂರ ಇದೀನಿ,ಬೈಕ್ ಕೂಡ ಇಲ್ಲ,ಬರಕಾಗಲ್ಲ,ಈಗ ಬಸ್ ಹತ್ತಿದರೆ 2 ಗಂಟೆಗೆ ಮಂಡ್ಯ ತಲುಪುತ್ತೀರಿ,ಅಷ್ಟೊತ್ತಿಗೆ ಊರಿಗೆ(ಮಂಡ್ಯದಿಂದ 12 ಕಿ.ಮೀ.) ಹೇಗೆ ಹೋಗ್ತೀರಿ.. ಒಂದು ಕೆಲಸ ಮಾಡಿ ನೀವು ರೈಲಿಗೆ ಹೋದರೆ ಬೆಳಿಗ್ಗೆ ಮಂಡ್ಯ ಸೇರ್ತೀರಿ ಅಲ್ಲಿಂದ ಬೆಳಿಗ್ಗೆ ಊರಿಗೆ ಹೋಗಿ,ಏನ್ ಮಾಡ್ತೀರಿ' ಎಂದಾಗ ಹೊಸ ಜಾಗದಲ್ಲಿ ಏನು ಮಾಡಲಿ ಎಂದು ಮತ್ತೊಮ್ಮೆ ಕಂಗಾಲಾದೆ.
ಆ ರಾತ್ರಿ 11ರ ಸಮಯದಲ್ಲಿ ಯಾವತ್ತೂ ತಿರುಗಾಡದ ಬೆಂಗಳೂರಲ್ಲಿ ರೈಲ್ವೆ ಸ್ಟೇಷನ್ ಎಲ್ಲಿ ಹುಡುಕಲಿ,ಅದೂ ಅಲ್ಲದೆ ರೈಲಿನಲ್ಲಿಯೂ ತಿರುಗಾಡಿದವನಲ್ಲ ನಾನು.
ಫೋನ್ ಆನ್ ನಲ್ಲಿದ್ದಿದ್ದರೆ ಬೆಂಗಳೂರಿನಲ್ಲಿದ್ದ ನಮ್ಮೂರಿನ ಕೆಲವರಿಗೆ ಕಾಲ್ ಮಾಡಿ ಪರಿಸ್ಥಿತಿ ತಿಳಿಸಿದ್ದರೆ ಏನಾದರೂ ಮಾಡುತ್ತಿದ್ದರು,ಆದರೆ ಬ್ಯಾಟರಿ ಖಾಲಿಯೆ.
ಏನು ಮಾಡುವುದೆಂದು ಯೋಚಿಸಿದೆ..
ಸದ್ಯ ಮಂಡ್ಯ (ಕಲ್ಲಹಳ್ಳಿ)ದ ಲ್ಲಿದ್ದ ನನ್ ರೂಮಿನ ಕೀ ತಂದಿದ್ದೆ.
ಈಗ ಮಂಡ್ಯ ತಲುಪಿ ರೂಮಿನಲ್ಲಿದ್ದು ಬೆಳಿಗ್ಗೆ ಊರಿಗೋಗೋಣವೆಂದು ನಿರ್ಧರಿಸಿ,ಮನೆಗೆ ಫೋನ್ ಮಾಡಿ ಈಗ ಮಂಡ್ಯಕ್ಕೆ ಬಂದು ಬೆಳಿಗ್ಗೆ ಬರುತ್ತೇನೆ ಎಂದು ತಿಳಿಸಿದೆ(ನಾನು ಒಂಟಿಯಿರುವ ವಿಷಯ ಮನೆಯವರಿಗೆ ತಿಳಿದಿರಲಿಲ್ಲ, ಗೆಳೆಯನ ಜೊತೆಯೇ ಇದ್ದೇನೆಂದು ತಿಳಿದಿದ್ದರು)..
ನಂತರ ಮೈಸೂರಿಗೆ ಹೊರಡುವ ಬಸ್ ವಿಚಾರಿಸಿದಾಗ ಪಕ್ಕದ ಸೆಟಲೈಟ್ ಬಸ್ ನಿಲ್ದಾಣಕ್ಕೆ ಹೋಗಬೇಕೆಂದರು,ಅಯ್ಯೋ ಅಲ್ಲಿಗೆ ಹೇಗೆ ಹೋಗಲಿ?
ಇಲ್ಲಿಂದಲೇ(ಮೆಜೆಸ್ಟಿಕ್) ಮೈಸೂರಿಗೆ ಬಸ್ ಇಲ್ಲವೇ ಎಂದು ಟಿಸಿಯವರನ್ನ ವಿಚಾರಿಸಿದಾಗ ರೇಗಿಬಿಟ್ಟರು.. ಆಗ ಟೆಲಿಫೋನ್ ಬೂತಿನವನು 17ನೇ ಪ್ಲಾಟ್ ಫಾರಂನಿಂದ ಸೆಟಲೈಟ್ ಗೆ ಬಸ್ ಹೋಗ್ತವೆ ಅಲ್ಲಿಂದ ಮೈಸೂರಿಗೆ ಬಸ್ ಇರ್ತವೆ ಎಂದ. ಅಷ್ಟೊತ್ತಿಗೆ ನಾನು ಪಕ್ಕದ ಯಾವುದೋ ಸ್ಟ್ಯಾಂಡೇ ಸೆಟಲೈಟ್ ಎಂದು ಅಲ್ಲಿ ನೋಡಿ ಬಂದಿದ್ದೆ.
ಅಲ್ಲೆಲ್ಲಿಯೂ ನಾನು ಬೆಂಗಳೂರಿಗೆ ಹೊಸಬನೆಂದು ತೋರಿಸಿಕೊಳ್ಳದೆ ಎಲ್ಲ ತಿಳಿದವನಂತೆ ಅಡ್ಡಾಡುತ್ತಿದ್ದೆ.
ಅಂದು ಬೆಳಿಗ್ಗೆ ಕ್ಯೂನಲ್ಲಿ 1 ಲೋಟ ಹಾಲು,ದರ್ಶನದ ನಂತರ ಒಂದಿಷ್ಟು ಪ್ರಸಾದ,ತಿರುಪತಿ-ಬೆಂಗಳೂರು ಮಧ್ಯೆ ಬಸ್ ನಿಲ್ಲಿಸಿದ್ದಾಗ 1 ಟೀ & ಬಾಳೆಹಣ್ಣು ಇಷ್ಟೇ ಸೇವಿಸಿದ್ದದ್ದು.
ಸರಿಯೆಂದು ಸೆಟಲೈಟ್ನಲ್ಲಿ ತಿನ್ನೋಕೆ ಏನಾದರೂ ತೆಗೆದುಕೊಂಡು ಹೋಗೋಣವೆಂದುಕೊಂಡು ಅಂತೂ ಇಂತೂ ಸೆಟಲೈಟ್ ತಲುಪಿದೆ. ಅಲ್ಲಿ ಅದಾಗಲೇ ಮೈಸೂರು-ಮಡಿಕೇರಿ ಎಂಬ ಹೆಸರಿನ ಬಸ್ಸೊಂದು ಹೊರಟು ನಿಂತಿತ್ತು,ತಿನ್ನಲು ಏನಾದರೂ ತೆಗೆದುಕೊಳ್ಳೋದನ್ನೂ ಮರೆತು ಅವಸರದಲ್ಲಿ ಬಸ್ ಹತ್ತಿ ಮಂಡ್ಯಕ್ಕೆ ಟಿಕೆಟ್ ತೆಗೊಂಡು ಇನ್ನೇನು ಇಲ್ಲವೆಂದು ನಿಶ್ಚಿಂತೆಯಿಂದ ಕುಳಿತೆ.
2 ದಿನದಿಂದ ನಿದ್ರೆಯಿಲ್ಲದೆ ಕಣ್ಣು ಚುಚ್ಚುತ್ತಿದ್ದವು,ಹೊಟ್ಟೆ ಬೇರೆ ಹಸಿಯುತ್ತಿತ್ತು,ನನ್ನ ಗ್ರಹಾಚಾರಕ್ಕೆ ಮತ್ತೆಲ್ಲೂ ಅಂಗಡಿಗಳು ತೆರೆದಿರಲಿಲ್ಲ.
ಹಾಗೂ ಹೀಗೂ 1.30ಕ್ಕೆ ಕಲ್ಲಹಳ್ಳಿಯಲ್ಲಿ ಇಳಿದೆ,ರೋಡ್ ಪಕ್ಕದಲ್ಲೇ ಇದ್ದ ನನ್ ರೂಮಿಗೆ ಹೋಗಿ ಲಗೇಜಿಳಿಸಿ ಅಂಗಿ ಬಿಚ್ಚೆಸೆದು ಅಲ್ಲಿದ್ದ ನೀರನ್ನು ಒಂದೇ ಸಮನೆ ಗಟಗಟ ಕುಡಿದು ಚೂರು ಲಡ್ಡು ತಿಂದು, ಬದುಕಿದೆನು ಎಂದುಕೊಂಡು ಮೊಬೈಲ್ ಚಾರ್ಜ್ ಹಾಕಿ ಆನ್ ಮಾಡಿದಾಗ ನನ್ನವಳ ನಂ.ನಿಂದ ಸಂದೇಶ ಬಂದಿದ್ದನ್ನು ನೋಡಿ ಅಬ್ಬಾ ಸರಿಯಾಗಿದೆ ಎಂದುಕೊಂಡು ಅವಳಿಗೊಂದು ಖಾಲಿ ಸಂದೇಶ ಕಳಿಸಿ,ಫ್ಯಾನ್ ಹಾಕೊಂಡು ಆರಾಮಾಗಿ ಕಣ್ಮುಚ್ಚಿದೆ.
ದೇವ್ರೆ ಯಾಕಪ್ಪ ಹೀಗಾಯ್ತು?!




~.~


Related Posts Plugin for WordPress, Blogger...