[ಎಂದೋ ಬರೆದಿದ್ದ ಈ ಮಳೆಹನಿಕವನವನ್ನು(ನನ್ನ ಪ್ರಕಾರ ಅಷ್ಟೇನೂ ಗಂಧವಿಲ್ಲದ...) ಇಂದು ನಿಮ್ಮ ಮುಂದಿಡುತ್ತಿದ್ದೇನೆ...]

ಬಿಸಿಲ ಝಳದಲಿ ನಿಂತು
ಬಿರಿದ ನೆಲದಲಿ ಕುಂತು
ಆಕಾಶವನ್ನೇ ದಿಟ್ಟಿಸುತ್ತಿದ್ದ
ಗುಳಿಹೋದ ಕಣ್ಣುಗಳೀಗ
ಛಾವಣಿಯ ನೆರಳಲಿ
ಬಲು ಸಂತಸದಿ
ಕಣ್ಮುಚ್ಚಿ ವಿಶ್ರಮಿಸುತ್ತಿವೆ..
ಕಾಡಿನಲ್ಲಿ ಕಾಲಿಡಲು
ಬಿರಿಬಿಸಿಲ ಬೇಗೆಯಲಿ
ಉದುರಿಹೋದ ಒಣ ಎಲೆಗಳು
ತೂರಿ ಹಾರಾಡುತ್ತಿದ್ದವು ಅಂದು
ಕಾಡಿನಲ್ಲಿ ನಡೆದಾಡಲು
ಬೀಸುವ ಸುಯ್ಯನೆ ಗಾಳಿಲಿ
ಚಿಗುರೆಲೆಗಳಲ್ಲಿ ಅಡಗಿರುವ ಹನಿಗಳು
ತಂಪನೆರಚುತ್ತಿವೆ ಇಂದು..
ಹಳ್ಳ-ತೊರೆಗಳು ತುಂಬಿ ಹರಿದು
ಮನದಲೂ ಕನಸ ಕೋಡಿ ಹೊಡೆದಿದೆ
ಹರುಷದ ಮಳೆ ಬಂದು..
ಬಿಸಿಲ ಬೇಡವೆಂದಿದ್ದ ಜೀವಗಳೆಲ್ಲ
ಮಳೆಯ ಚುಮುಚುಮುಚಳಿಗೆ
ಎಳೆಬಿಸಿಲು ಕಾಯಲು
ಹಾತೊರೆದು ಮೈಮುರಿದು ಕಾದಿವೆ..
ಒಣಭೂಮಿಗೆ ಬಾಯಾಕಿ
ಎಣಗುತ್ತಿದ್ದ ದನ-ಕರುಗಳು
ಚಿಗುರಿದ ಗರಿಕೆಲಿ ಕುಳಿತ
ಮಳೆಹನಿ ಸೋಕಲು
ಮುಸಿಮುಸಿ ನಕ್ಕು ಕುಣಿಯುತ್ತಿವೆ..
ಬಿರಿಬಿಸಿಲ ಲೆಕ್ಕಿಸದೆ ಓಡಾಡುತ್ತಿದ್ದ ಮಕ್ಕಳು
ಜಾರಿ ಬೀಳುವೆವೆಂಬ ಭಯದಿ
ಎಚ್ಚರಿಕೆಯ ಆಟವಾಡುತ್ತಿವೆ..
ಅಂತೂ ಇಂತೂ ಮಳೆ ಬಂದಿದೆ
ಮನ ತುಂಬಿ ಹರಿದಿದೆ..
~-~