ಕುಡುಕನಾದೆ ನಾ ಕುಡುಕನಾದೆ..

[ಕುಡುಕರ ಬಗ್ಗೆ ಒಂದು ಕವಿತೆ ಬರೆಯಬೇಕೆಂದು ನನ್ನ ಆಪ್ತ ಗೆಳೆಯರು ಹೇಳಿದ್ದರು.ಆದ್ದರಿಂದ ನಾನು ಸಾಧ್ಯವಾದಷ್ಟು ಪ್ರಯತ್ನಿಸಿ ಬರೆದ ಈ ಕವಿತೆ ಈಗ ನಿಮ್ಮಮುಂದೆ...]




ಕುಡುಕನಾದೆ ನಾ ಕುಡುಕನಾದೆ
ಪ್ರೀತಿ ಪ್ರೇಮ ನಂಬಿ
ಕುರುಡಾದ ದುಂಬಿ
ನಾ ಕುಡುಕನಾದೆ..


ಬುದ್ಧಿ ಹೇಳಬೇಕಾದ ಜ್ಞಾನಿ
ಬುದ್ಧಿ ಹೇಳಿಸಿಕೊಳ್ಳುವಂತಾದ ಅಜ್ಞಾನಿ
ನಾ ಕುಡುಕನಾದೆ..


ಸೋದರರ ವಾತ್ಸಲ್ಯ ಉಂಡು
ತಂದೆ-ತಾಯ ಜಪಿಸುತ್ತಿದ್ದ ಜ್ಞಾನಿ
ತಪ್ಪು ಮಾಡಿ ಶಿಕ್ಷೆ ಉಂಡು
ಮೋಸಹೋಗಿ ಕೊರಗುತ್ತಿರುವ ಮೌನಿ
ಸ್ನೇಹಕ್ಕಾಗಿ ಜೀವಿಸಿದ ಹುಂಬತನದ
ಪ್ರೀತಿಗಾಗಿ ಸ್ನೇಹ ಮರೆಸೋ ಜಂಭತನದ
ನಾ ಕುಡುಕನಾದೆ..


ಹೊಸಬೆಳಕು ಬರುವಾಗ
ಕಾರ್ಮೋಡ ಕವಿಸಿಕೊಂಡವ
ನಾ ಕುಡುಕನಾದೆ..


ಪ್ರೇಮದೆದೆಯ ಗೂಡದೀಪ
ಆರಿ ಹೋಗಿ ಕತ್ತಲಾಗಿ
ಒಡೆದ ಗಾಜಬಾಟಲಿಯಂತೆ
ಕನಸೆಲ್ಲ ಚೂರುಚೂರಾಗಿ
ಚುಚ್ಚುತ್ತಿರಲು ಮನವನೀಗ
ನಾ ಕುಡುಕನಾದೆ..


ಕಾಡುತಿರುವ ನೆನಪ ನೆರಳ
ಕತ್ತಲ ಕೋಣೆಲಿಡಲು
ಬೆಳಕ ಬಿಟ್ಟು ಕತ್ತಲಿಗೊರಗಿ
ನಾ ಕುಡುಕನಾದೆ..


ನಂಬಬೇಡ ನಂಬಬೇಡ
ಪ್ರೀತಿ-ಪ್ರೇಮ ನೋವು ನೋಡ
ಮಾಡಬೇಡ ಪ್ರೇಮಕೆಡುಕ
ಆಗಬೇಡ ಬೀದಿ ಕುಡುಕ


~.~


ಅಪ್ಪಾಜಿಯ ನೆನಪ ಬಂಧನದಲ್ಲಿ..


ಪ್ರತಿದಿನ ೫-೬ ರ ಹೊತ್ತಿಗೆ ನಿದ್ರೆಗೆ ಗುಡ್ ಬೈ ಹೇಳಿ ಸೂರ್ಯಂಗೆ ಗುಡ್ ಮಾರ್ನಿಂಗ್ ಹೇಳ್ತಿದ್ದ ನಾನು ಅಂದು ನಿದ್ರೆ ಮುಗಿಸಿ ಹೇಳುವಷ್ಟರಲ್ಲಿ ಸಮಯ ೬-೩೦ ಆಗಿತ್ತು.. ರಾತ್ರಿ ಕಂಡ ಕನಸಿನ ಚಿತ್ರಣ ಇನ್ನೂ ಕಣ್ಣಿನ ಪರದೆ ಸರಿಸಿ ಹೊರಟಿರಲಿಲ್ಲ..
ಎದ್ದ ತಕ್ಷಣ ಮಲಗಿದ್ದಲ್ಲಿಂದಲೇ ದೇವರ ಚಿತ್ರ ನೋಡಿ,ನಮಿಸಿ ಪಕ್ಕದಲ್ಲಿದ್ದ ಮೊಬೈಲ್ ಫೋನ್ ಕೈಗೆತ್ತಿಕೊಂಡಾಗ 'No space for new message' ಎಂದು ಮಿಂಚಿ ಮಿಂಚಿ ಮರೆಯಾಗುತ್ತಿತ್ತು.. ಇನ್ ಬಾಕ್ಸ್ ನಲ್ಲಿದ್ದ ಸುಮಾರು ಹತ್ತು ಸಂದೇಶಗಳನ್ನು ಡಿಲೀಟ್ ಮಾಡಿದ ಕೂಡಲೇ ೮-೧೦ ಸಂದೇಶಗಳು ನನ್ನ ಮೊಬೈಲ್ ಫೋನ್ ಗೆ ಕ್ಷಣಮಾತ್ರದಲ್ಲಿ ಬಂದುಕೂತವು..
ಮೊದಲೆರಡು ಸಿ.ಅಶ್ವಥ್ ರ ಸಾವಿಗೆ ಸಂಬಂಧ ಪಟ್ಟಿದ್ದವು..
ಹಾಗೆಯೇ, ಪ್ರತಿಯೊಂದನ್ನು ತೆರೆದು ನೋಡುತ್ತಿದ್ದಂತೆ ಕಣ್ಣಲ್ಲಿದ್ದ ಕನಸಿನ ಉಳಿಕೆ ಮರೆಯಾಗಿ ಕಣ್ಣುಗಳು ಅರಳಿನಿಂತವು,ಆಶ್ಚರ್ಯ ಉಂಟಾಯಿತು..
ವಿಷ್ಣುವರ್ಧನ್ ಸತ್ತ್ಹೊಗಿದಾರೆ,..ವಿಷ್ಣು ಇನ್ನಿಲ್ಲ.. ಎಂಬ ಹಲವಾರು ಸಂದೇಶಗಳನ್ನು ನೋಡಿ ನಾನು ವಿಷ್ಣುವರ್ಧನ್ ಅಭಿಮಾನಿಯೆಂದು ತಿಳಿದಿದ್ದ ನನ್ನ ಗೆಳೆಯ-ಗೆಳತಿಯರು ನನ್ನನ್ನು ಮೂರ್ಖನನ್ನಾಗಿ ಮಾಡುತ್ತಿದ್ದಾರೆ ಎನ್ನಿಸಿತು..
ಆದ್ರೆ ಎಲ್ಲರೂ ಒಟ್ಟಿಗೆ..!!?
ತಕ್ಷಣವೇ, ನಮ್ಮ ಮನೆಯಲ್ಲಿ ಟಿವಿ ಇಲ್ಲದಿದ್ದುದುರಿಂದ,ಒಂದೇ ಮನೆಗೆ ಅಂಟಿಕೊಂಡಿದ್ದ ದೊಡ್ಡಪ್ಪನ ಮನೆಗೆ ಕೂಗಿ 'ಅತ್ತಿಗೆ tv9 ಆನ್ ಮಾಡಿ ಎಂದೆ..
'ಅಲ್ಲಿಂದ ಕೇಳಿಬಂದ ಅತ್ತಿಗೆಯ ಮಾತುಗಳು ನನ್ನ ಊಹೆಯನ್ನು ಸುಳ್ಳುಮಾಡಿದ್ದವು.., ತಕ್ಷಣದಲ್ಲಿ ಕನ್ನಡಿಯಲ್ಲಿ ಮುಖ ನೋಡದೆ ಟಿವಿ ಮುಂದೆ ಹೋರಾಟ ನನಗೆ ಟಿವಿ ಪರದೆಯ ಮೇಲೆ 'ವಿಷ್ಣುವರ್ಧನ್' ರ ಪಾರ್ಥೀವ ಶರೀರದ ದರ್ಶನವಾಗಿ ಕಣ್ಣುಗಳು ತಾನೆತಾನಾಗಿ ತೇವಗೊಂಡವು,ದುಃಖ ಇಮ್ಮಡಿಸಿ ಇಮ್ಮಡಿಸಿ ಬರುತಿತ್ತು... ವಿಷ್ಣು ಸಾವಿನ ಸುದ್ದಿ ನಂಬಲಾರದ ಸತ್ಯವಾಗಿತ್ತು..
ಅದೇನೋ ನಾನು ಚಿಕ್ಕಂದಿನಿಂದಲೂ ವಿಷ್ಣುವರ್ಧನ್ ಅವರನ್ನು ತುಂಬಾನೇ ಹಚ್ಚಿಕೊಂಡಿದ್ದೆ,ಅವರ ಚಲನಚಿತ್ರಗಳೆಂದರೆ ನನಗೆ ಅಚ್ಚುಮೆಚ್ಚು.., ಅವರಂತೆ ಕೈಬಳೆ ಧರಿಸಿ ಮೆರೆದಿದ್ದು ಉಂಟು.
ತುಂಬಾನೇ ಹಚ್ಚಿಕೊಂಡವರನ್ನು ಕಳೆದುಕೊಂಡಾಗ ಆಗುವ ಅನುಭವ ನನಗೆ ಅಂದು ಮೊದಲನೆಯದಾಗಿತ್ತು..ವಿಷ್ಣು ಅವರನ್ನು ಎಂದಾದರೂ ಕಣ್ತುಂಬ ನೋಡಿ ಕೈಕುಲುಕಬೇಕು ಎಂದುಕೊಂಡಿದ್ದ ನನ್ನ ಕನಸು ಅಂದು ಎಳ್ಳು-ನೀರು ಬಿಡಿಸಿಕೊಂಡು ಕನಸಾಗೆ ಉಳಿಯಿತು..
ಪಕ್ಕದಲ್ಲಿಯೇ ಕೂತು ಮಾತನಾಡುತ್ತಿದ್ದವರು ಕಣ್ಮುಚ್ಚಿ ಬಿಡುವಷ್ಟರಲ್ಲಿ ಅದೃಶ್ಯವಾದಂತೆ ಭಾಸವಾಗುತ್ತಿತ್ತು,ಕಣ್ಣ ಮುಂದೆ ಶವ ಕಾಣುತ್ತಿದ್ದರೂ 'ಅದು ಸುಳ್ಳು..' ಎಂದು ಮನಸ್ಸು ಹಾತೊರೆಯುತ್ತಿತ್ತು.. ಆ ದಿನ ನನ್ನ ಜೀವನದಲ್ಲಿ 'ಕನ್ನಡಿ ನೋಡದ ದಿನ' ವಾಗೆ ಉಳಿದುಹೋಗಿದೆ..
ಇಂದಿಗೆ ವಿಷ್ಣು ಅವರ ದೇಹ ಮಣ್ಣಾಗಿ ನೂರಾರು ದಿನಗಳೇ ಸಂದಿವೆ,ಅದರೂ ಆ ಸತ್ಯ ಸುಳ್ಳೇನೋ ಎಂದೆನಿಸುತ್ತಿದೆ..
ಭಿತ್ತಿಪತ್ರಗಳಲ್ಲಿ ಮೀಸೆ ತಿರುಗುತ್ತಿರುವ ನಾಗಮಾಣಿಕ್ಯನ ನೋಡಿದರೆ ಮೈ ರೋಮಗಳು ನಿಂತು,ತುಟಿಯಲ್ಲಿ ಸುಳಿದಾಡುವ ನಗು, ಅದು 'ಮರೆಯಾಗಿ ಹೋದ ಮಾಣಿಕ್ಯ' ಎಂಬ ಸತ್ಯ ತಿಳಿಯುತ್ತಿದ್ದಂತೆ ಮಾಯವಾಗುತ್ತದೆ..ಅವರು ನಟಿಸಿರುವ ಚಿತ್ರಗಳ ಹಾಡುಗಳು ಕೇಳಿಬಂದರೆ ಇದ್ದಕ್ಕಿದ್ದಂತೆ ಭಾವುಕನಾಗುತ್ತೇನೆ..,ಅವು ಜೀವವಿಲ್ಲದ ಹಾಡುಗಳೇನೋ ಎನಿಸುತ್ತದೆ..
ಅದೆಷ್ಟೋ ಅಭಿಮಾನಿದೇವರುಗಳು ಅವರಿಗೆ ಏನೇನೋ ಹೃದಯದ ಕಾಣಿಕೆ ನೀಡಬೇಕೆಂದು ಕನಸು ಕಟ್ಟಿದ್ದರು,ಆದರೆ ಅವರ ಕನಸನ್ನು ನನಸಾಗಿಸಲು ಅವಕಾಶ ಕೊಡದೆ ಕೇವಲ ಹೃದಯವನ್ನು ಬಸಿದು ಕಣ್ಣಿಂದ ಒಂದು ಬಿಂದುವನ್ನು ಮಾತ್ರ ಅಪ್ಪಾಜಿಗೆ ಅರ್ಪಿಸಲು ಅವಕಾಶ ಮಾಡಿಕೊಟ್ಟ ವಿಧಿಯೇ ನಿನಗಿದು ಸರಿಯೇ..
ಅಪ್ಪಾಜಿ ಇಲ್ಲದ ಹೊಸವರ್ಷದ ಸಂಭ್ರಮ ನಮಗೇಕೆ ಎನ್ನುವ, ಕೋಟಿಗೊಬ್ಬನನ್ನು ಯಜಮಾನನನ್ನಾಗಿ ಮಾಡಿಕೊಂಡಿದ್ದ, ಅದೆಷ್ಟೋ ಕೋಟ್ಯಂತರ ಅಭಿಮಾನಿಗಳ ಕಣ್ಣೀರು ಇಷ್ಟು ಬೇಗ ನಿನಗೆ ಬೇಕಾಯಿತೇ,ಅವರ ಹೃದಯಕ್ಕೇ ಬೆಂಕಿ ಇಟ್ಟು ಆ ಬೆಂಕಿಯ ಆರಿಸಲು ಈ 'ಕಣ್ಣೀರಿನ ಕೊಯ್ಲು' ಮಾಡಿದೆಯ..
ಸಾವಿರಾರು ಅಂದಾಭಿಮಾನಿಗಳನ್ನು ಒಂಟಿಕುಡುಕರಾಗಿಸಿ,ಕೋಟಿ ಕೋಟಿ ಹೃದಯಗಳ ಒಡೆದು ಅವರನ್ನು ಒಂಟಿಯಾಗಿಸಬೇಕೆಂದು ಯೋಚಿಸಿ ಅಭಿಮಾನಿಗಳ ಹೃದಯಸಿಂಹಾಸನ ಕೋಟೆಯನ್ನು ಭೇದಿಸಿ ಕತ್ತಲಲ್ಲಿ ಬಂದು ವಿಷ್ಣುವನ್ನು ಕರೆದೊಯ್ದೆಯ,ಪುಣ್ಯಾತ್ಮನೊಬ್ಬನಿಗಾಗಿ ಹುಡುಕಾಡಿ ಸಿಗದಿರಲು ಅಪ್ಪಾಜಿಯನ್ನೇ ಕರೆದೊಯ್ದೆಯ,ಹೇಳು ಏಕೆ ಅಪ್ಪಾಜಿಯನ್ನೇ ಕರೆದೊಯ್ದೆ.
ಮುತ್ತೇ ಇಲ್ಲದ ಕಡಲ ನೀ ನೋಡಿರುವೆಯ.. ನೋಡೀಗ ಅಭಿಮಾನಿಗಳ ಕಡಲಲ್ಲಿ ಮುತ್ತೇ ಇಲ್ಲವಾಗಿದೆ.
ಅಭಿಮಾನಿಗಳೆಲ್ಲ ಈಗ ಗಂಧ ಚೆಲ್ಲದ ಹೂಗಳಂತೆ ಇದ್ದಾರೆ..
ಇಲ್ಲಿ ಕಂಗಾಲಾಗುವ ಅಭಿಮಾನಿಗಳ ಬಗ್ಗೆ,ಜೀವದ ಗೆಳೆಯರ ಬಗ್ಗೆ ತುಸು ಮುಂದಾಲೋಚನೆ ನೀ ಮಾಡದೇ ಹೋದೆಯಾ,ನಮ್ಮ ಶಾಪ ನಿನಗೆ ತಟ್ಟದಿರದು ಬ್ರಹ್ಮನೇ ತಟ್ಟದಿರದು..
ನಿನ್ನೀ ಘೋರತನದಿಂದ ಯಮನ ಕಣ್ಣೂ ಒದ್ದೆಯಾದದ್ದು ಕಾಣಲಿಲ್ಲವೇ..ವಿಧಿಯೇ ನೀ ನಗದಿರು.., ಮಣ್ಣಾಗಿರುವುದು ದೇಹ ಮಾತ್ರ !!
ಘೋರವರ್ಷ ಹೇ ೨೦೦೯ ನಿನಗೆ ಜೊತೆಗಾಗಿ ಕರೆದೊಯ್ಯಲು ಯಾರು ಸಿಗಲಿಲ್ಲವೇ.
ಅಪ್ಪಾಜಿ ನೆನಪು ಚಿರಾಯುವಾಗಲಿ..

-()-()-()-
ಅಪ್ಪಾಜಿಯ ಅಗಲಿಕೆಯಿಂದ ತುಂಬಾ ನೊಂದ ನನ್ನ ಆಪ್ತ ನಾಗೇಂದ್ರಕುಮಾರ್ (ನಾಗ್ ವಿಷ್ಣು) ಅವರ ಮಾತುಗಳು..:
ವಿಷ್ಣುವರ್ಧನ್ ಅವರು ಕನ್ನಡ ಚಿತ್ರರಂಗದಲ್ಲಿ 'ಮೇಣದ ಬತ್ತಿ'ಯಂತಿದ್ದು ತಾನು ಅಳುತಿದ್ದರೂ ಚಿತ್ರರಂಗಕ್ಕೆ ಬೆಳಕನ್ನು ನೀಡಿದ ಕರುಣಾಮಯಿ..
ಅವರೊಬ್ಬ ಅದ್ಭುತ ಕಲಾವಿದ..
ವಿಷ್ಣು ಅವರು ಕನ್ನಡದ ಸಾಯಿಬಾಬರಂತಿದ್ದರು..
ಅವರ ಅಗಲಿಕೆಯಿಂದ ನನ್ನ ಹೃದಯಕ್ಕೆ ಸುನಾಮಿ ಅಪ್ಪಳಿಸಿದೆ. ಹೃದಯಕ್ಕೆ ಬರಸಿಡಿಲು ಬಡಿದು ಮೋಡ ಕವಿದ ಕತ್ತಲೆ ತುಂಬಿದೆ, ಅವರ ಚಿತ್ರಗಳಿಗೆ ಇದೀಗ ಜೀವವೆ ಇಲ್ಲವೆನಿಸುತ್ತಿದೆ..
ಗಣೇಶನಿಲ್ಲದ ದೇವಸ್ಥಾನದಂತೆ,ವಿಷ್ಣು ಮಹಾರಾಜನಿಲ್ಲದ ಕನ್ನಡ ಚಿತ್ರರಂಗ ಹಾಳುಕೊಂಪೆಯಷ್ಟೇ ಸರಿ..
ಅಂದು ಅಣ್ಣ ಸತ್ತಾಗ ನಾನೇ ಸತ್ತಿದ್ದರೆ ಚೆನ್ನಾಗಿರುತ್ತಿತ್ತು ಎಂದೆನಿಸಿತು.. ಏಕೆಂದರೆ ನಾ ಸತ್ತರೆ ದುಃಖ ಪಡುತ್ತಿದ್ದವರು ಕೆಲವರಷ್ಟೆ.
"ವಿಷ್ಣು ಅಣ್ಣ ನೀ ಮತ್ತೆ ಹುಟ್ಟಿ ಬಾ.."
ನೀನಿಲ್ಲದೆ ನಮ್ಮ ಹೃದಯ ಸಿಂಹಾಸನ ಬರಿದಾಗಿ ಹೃದಯದಲ್ಲಿ ಮಾಸದ ರಂಧ್ರವಾಗಿದೆ..
~.~
Related Posts Plugin for WordPress, Blogger...