ನಂದೂ ಒಂದ್ ವಿಚಾರ..

!!ಜ್ಞಾನಾರ್ಪಣಮಸ್ತು!!
~.~

[ ಭದ್ರವಿಲ್ಲದ ಬ್ಲಾಗಿಗೆ ಬದರಿಯವರ ಗದರಿಕೆಯ ಎಚ್ಚರಿಕೆಯಿಂದಾಗಿ ಒಂದು ಲೇಖನ ಬರೆಯಬೇಕೆನಿಸಿತು.  ]

ನನ್ನ SSLC ಮುಗಿದ ನಂತರ ಅದರ ಬಗ್ಗೆಯಾಗಲಿ ಅದರ ಫಲಿತಾಂಶದ ವಿಚಾರಕ್ಕಾಗಲೀ ನಾನು ಹೋಗಿಲ್ಲ, ಅಂದರೆ ಯೋಚಿಸಿಲ್ಲ.
ನನ್ನ ಊರಿನ ವಾತಾವರಣದಲ್ಲಿ ನನಗೆ ಕಂಡಂತೆ SSLC  ಬಗ್ಗೆ ಅನಿಸಿದ್ದನ್ನ ಬರೀತಿದ್ದೀನಿ, ಈಗ.
ನನ್ನ ತಂದೆಯ ಕಾಲದಲ್ಲಿ ಬೆರಳಿಕೆಯಷ್ಟು ಜನ ಮಾತ್ರ SSLC ಮುಗಿಸಿದ್ದರಂತೆ., ಆಗ SSLC ಪರೀಕ್ಷೆ ಬರೆಯೋಕೆ ಮಂಡ್ಯ ಸಿಟಿಗೆ ಹೋಗಬೇಕಿತ್ತಂತೆ, ನಮ್ಮ ತಂದೆ ಪರೀಕ್ಷೆ ಸಮಯದಲ್ಲಿ ಮಂಡ್ಯ ಸಿಟಿಯಲ್ಲಿ ರೂಮ್ ಮಾಡ್ಕೊಂಡು ಓದಿದರಂತೆ..ಗೊತ್ತಿಲ್ಲ. ನಮ್ಮ ತಂದೆಗಿಂತ ದೊಡ್ಡವರ ಕಾಲದಲ್ಲಿ ನಮ್ಮೂರಲ್ಲಿ ಯಾರಾದ್ರೂ SSLC ಮಾಡಿದ್ದವರು ಇದ್ರೆ, ಮನೆ ಬಾಗಿಲಿಗೆ ಬಂದು ಕರೆದು ಕೆಲ್ಸ ಕೊಡುತ್ತಿದ್ದರಂತೆ,ಗೊತ್ತಿಲ್ಲ. ಸಿಕ್ಕ ಸರ್ಕಾರಿ ಕೆಲ್ಸಾನ ತುಚ್ಚವಾಗಿ ತಿಳಿದು 'ಅಪ್ಪ ಮಾಡಿದ್ ಆಸ್ತಿ ಆಯ್ತೆ., ಮನೆ ಹತ್ರ ಆರಂಭ ಮಾಡ್ಕಂಡು ಇದ್ದು ಯಜಮಾನಿಕೆ ಮಾಡ್ಕಂಡ್ ಮೀಸೆ ತಿರುವ್ತಾ ಬದುಕ್ಬೋದು ಹೋಗಯ್ಯ' ಅಂತ ಕೆಲ್ಸ ಬಿಟ್ಟು ಓಡಿಬಂದವ್ರು ನಮ್ಮ ಅಯ್ಯನ ಮನೆಯವ್ರು. ವಯಸ್ಸಾದಾಗ,ಪರಿಸ್ಥಿತಿ ಬದಲಾಗಿದ್ದಾಗ  ಅವರಿಗೆ ಅವ್ರು ಮಾಡಿದ್ದು ತಪ್ಪು ಎನಿಸಿತ್ತು.
SSLC ಮುಗಿಸಿದರೆ ಒಳ್ಳೆ ಕೆಲಸ ಸಿಗುತ್ತೆ ಅನ್ನೋ ಕಾರಣಕ್ಕೆ ಆಸೆ,ಪ್ರೀತಿ ಮತ್ತು ಅದು ಪಬ್ಲಿಕ್ ಪರೀಕ್ಷೆ, ಕಷ್ಟ ಅನ್ನೋ ಕಾರಣಕ್ಕೆ ಭಯ,ಶ್ರದ್ಧೆಯಿಂದ ಅದನ್ನು ಗಂಭೀರವಾಗಿ ಪರಿಗಣಿಸುತ್ತಿದ್ದರು.. ನಾನು 3 ಅಥವಾ 4ನೇ ತರಗತಿ ಓದೋವಾಗ(ಸರಿಯಾಗಿ ನೆನಪಿಲ್ಲ) ನಮ್ಮೂರಿಗೆ ತರಗತಿ 6 ಮತ್ತು 7 ಪ್ರಾರಂಭವಾದದ್ದು. ನಾನು 7 ಪಾಸಾಗೋವಷ್ಟರಲ್ಲಿ ಹೈಸ್ಕೂಲು ಬಂದಿತ್ತು. ಈಗಲೂ ಸುತ್ತ ಮುತ್ತಲ ಊರಿನವರೆಲ್ಲ ನಮ್ಮೂರಿಗೆ ಬರ್ತಾರೆ SSLC ಗೆ (ಇಂತಹವರಿಗೆ ಉಪಯೋಗ ಆಗ್ಲಿ ಅಂತ ಬೈಸಿಕಲ್ ಯೋಜನೆ ಇದ್ರೂ ನಮ್ಮೂರ್ ಕಡೆ ಆ ಸೈಕಲ್ ನ ಮನೆಯವ್ರು ಹುಲ್ಲು, ಮೇವು ತರೋಕೆ ಇಟ್ಕೋತಾರೆ ಮತ್ತು ಸ್ಟೂಡೆಂಟ್ಸ್ ನಡ್ಕೊಂಡೇ ಹೋಗ್ತಾರೆ. ಇದರ ಕುರಿತು ಸಭೆ ಚರ್ಚೆ ಆಗಿದ್ದವು ಅದ್ ಬಿಡಿ), ಇಲ್ಲಾಂದ್ರೆ ನನ್ನ ಹಿರಿಯವರಂತೆ ನಾನೂ ಕೂಡ ಮಂಡ್ಯ ಸಿಟಿಗೆ ಹೋಗಬೇಕಿತ್ತೇನೋ SSLC ಓದೋಕೆ.
ಆಗ 7 ನೇ ತರಗತಿಗೆ ಪಬ್ಲಿಕ್ ಇತ್ತು.. ಆದರೆ ನಾನು 7ಕ್ಕೆ ಬರೋವಷ್ಟರಲ್ಲಿ ಅದೂ ಕೂಡ ಕ್ಲಾಸ್ ಎಕ್ಸಾಮ್ ಆಗಿತ್ತು., ಹಾಗಾಗಿ ಭಯ ಹೋಗಿತ್ತು ಅನುಭವ ಕಡಿಮೆ ಆಗಿತ್ತು. 10ನೇ ತರಗತಿಗೆ ಮಲ್ಟಿಪಲ್ ಚಾಯ್ಸ್ ಟೈಪ್ ಪ್ರಶ್ನೆ ಪತ್ರಿಕೆ ಆರಂಭವಾದ  ವರ್ಷದ 2ನೆ ಬ್ಯಾಚ್ SSLC ನಾನು. ಮಲ್ಟಿಪಲ್ ಚಾಯ್ಸ್ ಎಂಬ ಕಾರಣಕ್ಕೆ ಕಾಪಿ ಮಾಡಿಸೋದಕ್ಕೆ ಸುಲಭವಾಗಿ, ಫೇಲ್ ಆಗಿ ತುಂಬಾ ವರ್ಷದಿಂದ ಊರಲ್ಲಿದ್ದವರೆಲ್ಲ SSLC ಮುಗಿಸ್‌ಕೊಂಡು, ದೇವ್ರ್ಗ್ ಕೈಮುಗ್ದು ನಿರಾಳರಾದರು.
ಆದ್ರೂ SSLC ಪಬ್ಲಿಕ್ ಪರೀಕ್ಷೆ ಎಂಬ ಕಾರಣಕ್ಕೆ ಸ್ವಲ್ಪ ಭಯದಿಂದಲೇ ಓದಿದ್ವಿ, ಗೈಡ್,ನೋಟ್ಸ್, ಜಾಸ್ತಿ ಕಿರುಪರೀಕ್ಷೆಗಳು, SSLC ಓದ್ತಿರೋರು ಅಂತ ಚೆನ್ನಾಗಿ ಓದೋಕೆ ಹೇಳೋರು ಎಲ್ಲ. ಯಾವ ರೀತಿ ಬರೆಯಬೇಕು, ಯಾವ ಭಾಗ ಮೊದಲು ಬರೆಯಬೇಕು, ಹಳೇ ಪ್ರಶ್ನೆಪತ್ರಿಕೆಗಳನ್ನೂ ತೋರಿಸುತ್ತಿದ್ದರು., ಹೇಗೆ ಸಮಯ ಉಪಯೋಗಿಸಿಕೊಳ್ಳಬೇಕು ಎಂಬ ತರಬೇತಿಗಳೂ ಇರುತ್ತಿದ್ದವು. ಪೂರ್ವಸಿದ್ಧತೆ.
ಅಂತೂ ಪರೀಕ್ಷೆ ಬಂತು,ಸುಮಾರು 8 ಕಿಲೋಮೀಟರ್ ದೂರದ ಒಂದು ಊರಿನಲ್ಲಿ ಪರೀಕ್ಷೆ ಸೆಂಟರ್. ಬೆಳಿಗ್ಗೆ ಬಸ್ನಲ್ಲಿ ಹೋಗಬೇಕಿತ್ತು. ನಾವು ಹೋಗೋವಷ್ಟ್ರಲ್ಲ್ಲಿ ನಮ್ಮ್ ಮೇಸ್ಟ್ರುಗಳು,ನಮ್ಮ ಸೀನಿಯರ್ಸ್ (ಕಾಲೇಜ್ ಮೆಟ್ಟಿಲೇರಿ ಬಸ್ನಲ್ಲಿ ಸಿಟಿ ಸುತ್ತಿ ಅನುಭವ ಇದ್ದೋರು), ಊರಿನ ಕೆಲವ್ರು(ಪ್ರಗತಿಪರ/ಮುಖಂಡರು) ಅಲ್ಲಿಗೆ ಬಂದಿರ್ತಿದ್ರು., ನಮ್ಮ ಭಯ ಹೋಗಲಾಡಿಸಿ, ಧೈರ್ಯ,ಉತ್ಸಾಹ ತುಂಬೋಕೆ.
………….
ಆ ಪರೀಕ್ಷೆ ಸೆಂಟರ್ಗೆ ಬೀಳೋ ಎಲ್ಲ ಶಾಲೆಗಳಲ್ಲಿ ಒಂದು ಸಬ್ಜೆಕ್ಟ್ ನಲ್ಲಿ  ತುಂಬಾ ಚೆನ್ನಾಗಿ ಪಾಠ ಮಾಡೋರು, ಅಂದರೆ ಇಂಗ್ಲಿಷ್‌ನಲ್ಲಿ ಅಷ್ಟು ಸ್ಕೂಲ್ಗೆಲ್ಲ ಚೆನ್ನಾಗಿ ಪಾಠ ಮಾಡೋರು, ಹಾಗೆ ಹಿಂದಿ, ವಿಜ್ಞಾನ ಹೀಗೆ., ಆಯಾಯ ಪರೀಕ್ಷೆಯ ದಿನ ಪ್ರತಿ ಕೊಠಡಿಗೂ ಬಂದು ಮಲ್ಟಿಪಲ್ ಚಾಯ್ಸ್ ಪ್ರಶ್ನೆಗಳಿಗೆ ಉತ್ತರ ಹೇಳಿ ಹೋಗ್ತಿದ್ರು., ಮಲ್ಟಿಪಲ್ ಚಾಯ್ಸ್ ಬಂದಮೇಲೆ ಹೀಗೆ ಸುಲಭವಾಗಿತ್ತು ಕಾಪಿ ಮಾಡಿಸೋಕೆ. ಕಳೆದ  ಅಂದರೆ ಮಲ್ಟಿಪಲ್ ಚಾಯ್ಸ್ ಬಂದ ಮೊದಲ ಬ್ಯಾಚ್ನಲ್ಲಿ, ಇರೋ ನಾಲ್ಕು ಆಯ್ಕೆಯಲ್ಲಿ ಸರಿಯಾದ ಒಂದನ್ನು ಟಿಕ್ ಮಾಡಿ ಬರೋದಷ್ಟೇ ಇತ್ತು, ಹಾಗಾಗಿ ಬರೆಯೋಕೆ ಬಾರದವರೂ ಪಾಸಾದರು ಅಂತ  ಸ್ವಲ್ಪ ವಿರೋಧ ಉಂಟಾಗಿ ನಮಗೆ (2ನೆ ಬ್ಯಾಚ್) ಟಿಕ್ ಜೊತೆಗೆ ಆ ಕ್ರಮವಾದ ಉತ್ತರವನ್ನು ಬರೆಯಬೇಕಿತ್ತು.
ಹೀಗೆ ಅವರು ಬಂದು ಆನ್ಸರ್ ಹೇಳಿ ಹೋದಮೇಲೆ ಗುರುತುಹಾಕಿಕೊಂಡದ್ದನ್ನು ವಿದ್ಯಾರ್ಥಿಗಳು ಬರೆಯುತ್ತಿದ್ದರು.
ಆದರೆ ಎಲ್ಲ ಮಲ್ಟಿಪಲ್ ಚಾಯ್ಸ್ ಪ್ರಶ್ನೆಗಳಿಗೆ ಅವ್ರು ಹೇಳಿದ್ದು ಸರಿ ಇರಬೇಕಿತ್ತಲ್ಲ, ಅವರಿಗೂ ಕಷ್ಟವಾಗಿದ್ದ ಪ್ರಶ್ನೆಗಳು ಇದ್ದವಲ್ಲಾ. ಹಾಗಾಗಿ ಸಣ್ಣ-ಪುಟ್ಟ, ಬೇಗ ಉತ್ತರ ಬರೆಯಬಹುದಾದ ಪ್ರಶ್ನೆಗಳಿಗೆ ಉತ್ತರ ಬರೆಸಿ ಕಳುಹಿಸಿದ ಕಾಪಿ ಚೀಟಿಗಳು ರೂಮಿಗೆ ಬಂದು ಒಬ್ಬರಿಂದೊಬ್ಬರಿಗೆ ಓಡಾಡುತ್ತಿದ್ದವು. ಅಲ್ಲಿ ಇರುತ್ತಿದ್ದ ರೂಮ್ ಇನ್ವಿಜಿಲೇಟರ್ ಯಾವ ಊರಿನ ಶಿಕ್ಷಕರೋ ಆ ಊರಿನ ಶಾಲೆಯ ವಿದ್ಯಾರ್ಥಿಗಳಿಗೆ ಅವರ ಪ್ರಾಧಾನ್ಯತೆ ಇರುತ್ತಿತ್ತು. ತಾವು ಓದಿದ್ದೇವಾ.. ತಾವು ಓದಿರೋದು ಬಂದಿದೆಯಾ ಎಂಬುದನ್ನು ಯೋಚಿಸದೆ, ಪ್ರಶ್ನೆ ಪತ್ರಿಕೆ ಮೇಲೂ ಕಣ್ಣಾಡಿಸದೇ ಕಾಪಿ ಚೀಟಿಗಾಗಿ ಕೈ ಹಿಚುಕಿಕೊಳ್ಳುತ್ತಾ ಕಾಯುತ್ತಿದ್ದ ವಾತಾವರಣ.
೬೦ ಚಾಯ್ಸ್ ೪೦ ಬರೆಯೋದು ಇತ್ತು ಮೊದಲ ವರ್ಷ.  ನಂತರ ನಮಗೆ ಸ್ವಲ್ಪ ಬರೆಯೋದನ್ನು ಹೆಚ್ಚಿಸಿದ್ದರು., ಯಾರೂ ೪೦ ರ ಕಡೆ ಗಮನ ಹರಿಸುತ್ತಿಲ್ಲ ೬೦ ರಲ್ಲೇ ಫಸ್ಟ್ ಕ್ಲಾಸ್ ಸಿಗತ್ತೆ ಅಂತ . 
ಎಲ್ಲ ವಿದ್ಯಾರ್ಥಿಗಳು ಪಾಸಾಗಬೇಕು,ಅವರಿಗೆ ಒಳ್ಳೆದಾಗಬೇಕು.,  ಜೊತೆಗೆ ವಿದ್ಯಾರ್ಥಿಗಳೆಲ್ಲ ಪಾಸಾದರೆ ತಾನೇ ಆ ಶಾಲೆಗೆ ಗೌರವ, ಆ ಕೇಂದ್ರಕ್ಕೂ ಹೆಸರು. ಇಲ್ಲಾಂದ್ರೆ ಶಿಕ್ಷಕರ ಮೇಲೆ ಕ್ರಮ ತೆಗೆದುಕೊಳ್ಳುತ್ತಾರಲ್ಲ., ಸೆಂಟರ್ ಕ್ಯಾನ್ಸಲ್ ಮಾಡಿಬಿಡುತ್ತಾರಲ್ಲ,.. ಇದನ್ನೆಲ್ಲ ಮನಸಲ್ಲಿಟ್ಟುಕೊಂಡು ಶಿಕ್ಷಕರು ಈ ದಾರಿ ತುಳಿಯುತ್ತಿದ್ದರೆನಿಸುತ್ತದೆ.
ಕೆಲವೊಮ್ಮೆ ಸ್ಕ್ವಾಡ್ ಬಂದಾಗ ತಕ್ಷಣ ಕಾಪಿ ಚೀಟಿನ ವಿದ್ಯಾರ್ಥಿಗಳಿಂದ ಈಸ್ಕೊಂಡು ಬಟ್ಟೆಯೊಳಗೆ ತುರುಕಿಕೊಂಡು ಮುಗ್ದರಂತೆ ನಿಭಾಯಿಸಿಬಿಡುತ್ತಿದ್ದರಲ್ಲ ಅಹ ಅದಪ್ಪ.

ಹೀಗೆ ಮೊದಲ ದಿನವೇ ನನಗೆ SSLC ಪರೀಕ್ಷೆಯ ಮಹತ್ವ ಗೊತ್ತಾಗಿತ್ತು., ಹೀಗಾದಾಗ ಮುಂದಿನ ಪರೀಕ್ಷೆಗೆ ಓದೋಕಾಗತ್ತ ಹೇಳಿ., ಮೊದಲಂತೆ.. ಮಾರನೆಯ ದಿನ ಬೇಗ ಹೋಗಿ ಯಾವ ಊರಿನ ಮಾಸ್ಟರ್ ಇವತ್ತು ಬರ್ತಾರೆ ಆನ್ಸರ್ ಹೇಳಿಕೊಡೋಕೆ, ಸ್ಕ್ವಾಡ್ ಬರ್ತಾರಾ ಇಲ್ವಾ., ಯಾವ ಶಾಲೆಗೆ ಪ್ರಶ್ನೆಗಳು ಗೊತ್ತಾಗಿವೆ.,.. ಹೀಗೆ ಮಾತುಕತೆ ಸಾಗುತ್ತಿತ್ತು.
ಶಿಕ್ಷಕರು ಹೇಳಿದ ಆನ್ಸರ್ ಬರೆಯದೆ ತನ್ನದೇ ಸ್ವಂತಬುಧ್ಧಿ ಉಪಯೋಗಿಸಿದ್ದಕ್ಕೆ ಕೆಲವು ಮಾರ್ಕ್ಸ್ ಕಳೆದುಕೊಂಡೆ.
ಹೀಗಾಯ್ತು ನನ್ನ SSLC. 

............

ಈ ರೀತಿಯಾಗಿ SSLC ತನ್ನ ಮಹತ್ವವನ್ನೇ ಕಳೆದುಕೊಂಡಿತ್ತು/ಕಳೆದುಕೊಳ್ಳುತ್ತಿತ್ತು.
ನಾನು ಆಗ ತಾನೇ ಕಾಲೇಜ್ ಸೇರಿ ನನ್ನ ನೆಚ್ಚಿನ ಗುರುಗಳ ಹತ್ತಿರ ಮನೆಪಾಠಕ್ಕೆ ಹೋದ ಮೊದಲ ದಿನ.
SSLC ಕಥೆ ಕಂಡಿದ್ದ ಗುರುಗಳು ಯಾರ್ಯಾರು SSLC ನಲ್ಲಿ ಯಾವ್ಯಾವ ಸಬ್ಜೆಕ್ಟ್ ನಲ್ಲಿ ಟಾಪರ್ಸ್ ಅಂತ ಕೇಳ್ತಿದ್ರು- “ಯಾರ್ಯಾರು ಸೈನ್ಸ್ ಮ್ಯಾಥ್ಸ್ ನಲ್ಲಿ 90+ ತೆಗೆದಿದ್ದೀರಿ ಕೈ ಮೇಲೆತ್ತುದು”
ತುಂಬಾ ಜನ ಕೈ ಎತ್ತಿದ್ರು.. “ಹಹಹಾ.. ತುಂಬಾ ಜನ ಚೆನ್ನಾಗೇ ಕೆರ್ದಿದ್ದೀರಿ ಇರ್ಲಿ ಈಗ ಒಂದು ಲೆಕ್ಕ ಕೊಡ್ತೀನಿ ಮಾಡುದು.. “ ಅಂತ ಹೇಳಿ 1.3459x 22.963 , 22.65/0.223 ಹೀಗೆ ದಶಮಾಂಶಗಳ ಲೆಕ್ಕ ಬರೆದು ಮಾಡೋಕೆ ಹೇಳ್ತಿದ್ರು..ಲ.ಸಾ.ಅ. , ಮ.ಸಾ.ಅ ಕೇಳ್ತಿದ್ರು.
ಯಾರು ಮಾಡ್ತಿರ್ಲಿಲ್ಲ, ಗೊತ್ತಿಲ್ಲ ಅಂತಿದ್ರು. “ಹ್ಮಹಮ್ ಗೊತ್ತಾಯ್ತಲ್ಲ.. ನೀವೆಲ್ಲ SSLC ನಲ್ಲಿ ಹೇಗೆ ಇಷ್ಟೊಂದು ಮಾರ್ಕ್ಸ್‌ನ ಕೆರ್ಕೊಂಡು, ಗೋರ್ಕಂಡು ಗುಡ್ಡೆ ಹಾಕೊಂಡು ಬಂದಿದೀರಿ ಅಂತ ನಂಗ್ ಗೊತ್ತು.. ನಾನು ಬೇರೆಯವ್ರ್ ತರ ಇದನ್ನ SSLCನಲ್ಲಿ ಓದಿದ್ದೀರಿ ಮತ್ತೆ ಅಷ್ಟೊಂದು ಡೀಟೇಲ್ ಬೇಡ ಅಂತ ಹೇಳಿ ಮುಂದೆ ಹೋಗೋಲ್ಲ.. ನಿಮಗೆ ಇದುವರೆಗೆ ಏನು ಗೊತ್ತಿಲ್ಲ, ನೀವು ಸ್ಕೂಲ್ ಓದೇ ಇಲ್ಲ., ಕೇವಲ ಹೇಳಿದ್ದನ್ನ ಬರೆದುಕೊಳ್ಳೋಕೆ ಇಂಗ್ಲಿಷ್ನ 24 ಲೆಟರ್ ಮಾತ್ರ ಗೊತ್ತು ಅಂತ ನನ್ ಮನಸಲ್ ಇಟ್ಕೊಂಡ್ ಪಾಠ ಮಾಡ್ತೀನಿ.., ಬೇಕಾದ್ರೆ ಕಲ್ತ್ಕೊಳೋದು” ಅಂತ ಹೇಳಿ ಅದೇ ತರಹ ಪಾಠ ಮಾಡ್ತಿದ್ರು..
ಹಾಗಂತ ಎಲ್ರೂ ಕಾಪಿ ಮಾಡಿಯೇ ಬಂದಿರ್ತಿದ್ರು ಅಂತ ಅಲ್ಲ. ಬಹುಪಾಲು ಸರಿಯಾದ ರೀತಿಯಲ್ಲಿ ಓದದೆ ಬಂದವರಿದ್ದರು. 
ನಾ ತಿಳಿದಿರೋ ಹಾಗೆ ಆದರ್ಶ ಗುರುಗಳೆನಿಸುವ  ಅವರಿಂದ ತುಂಬಾ ಜೀವನ ಪಾಠಗಳನ್ನು ಕಲಿತಿದ್ದೇನೆ., ನನ್ನ ಡಿಗ್ರೀ ಜೀವನದಲ್ಲಿ ಅವ್ರಿಗೆ ತಕ್ಕ(?!) ವಿದ್ಯಾರ್ಥಿ ನಾನಾಗಲಿಲ್ಲ ಎಂಬ ಭಾವದಿಂದ ಅವರನ್ನು ನೋಡೋಕೆ ಮಾತಾಡಿಸೋಕೆ ನಾಚಿಕೆ ಆಗಿತ್ತು., ಈಗ ನಾನೊಬ್ಬ ಅವ್ರ ಹೆಮ್ಮೆಯ ವಿದ್ಯಾರ್ಥಿಗಳಲ್ಲೊಬ್ಬ ಎಂಬ ಭಾವದಿಂದ ಅವರ ವಿದ್ಯಾರ್ಥಿ ನಾನು ಎಂದು ಹೇಳಿಕೊಳ್ಳಬಹುದು ಎನಿಸಿದೆ. ಇವತ್ತೂ ನನ್ನ ಮಾರ್ಗದರ್ಶಿಗಳಾದ ಅವ್ರಿಗೆ ನನ್ನ ವಂದನೆ ಅರ್ಪಿಸಿ ಮುಂದಕ್ಕೆ ಹೋಗೋಣ.. “ದೊಡ್ದಾಚಾರ್ಯ ದೇವೋಭವ”
..........

ಅಂದಿನಿಂದ ಇಂದಿನವರೆಗೆ ಬದಲಾಗಿರಬಹುದಾದ SSLC - PUC ಮಟ್ಟದ ಶಿಕ್ಷಣಕ್ರಮದ ಬಗ್ಗೆ ಅಷ್ಟು ಮಾಹಿತಿ ಗೊತ್ತಿಲ್ಲ.. ನನಗನಿಸಿದ್ದನ್ನು ಹೇಳುತ್ತೇನೆ.

 SSLC ನಲ್ಲಿ ಅಂತಹ ಗಮನ ಹರಿಸಿ ಕೆಲವು ಖುಷಿ ಹಾಳುಮಾಡಿಕೊಂಡು ಹೆದರಿ ಓದಬೇಕಾದ್ದಿಲ್ಲ. ಓದಿದ್ದರೂ ಮತ್ತೆ ಅದೇ ವಿಷ್ಯಗಳನ್ನೂ ಮೊದಲಿಂದ(ನನಗೆ ಸಿಕ್ಕಿದ್ದ ತರಹದ ಗುರುಗಳು ಸಿಕ್ಕಿದರೆ) ಇನ್ನೂ ಆಳವಾಗಿ ಓದೋದೇ ಇರತ್ತೆ ಮುಂದೆ. SSLC ಮಾರ್ಕ್ಸ್ ಹೆಸರಾಂತ ಕಾಲೇಜಲ್ಲಿ ಸೀಟು ತೆಗೆದುಕೊಳ್ಳೋಕೆ ಉಪಯೋಗ ಆಗಬಹುದು ಎಂದರೂ ಮಾರ್ಕ್ಸ್ ಇಲ್ಲದೆ ಸೀಟ್ ಪಡೆಯುವವರೂ ಇದ್ದಾರಲ್ಲ. SSLCನಲ್ಲಿ ಚೆನ್ನಾಗಿ ಓದೋ ಕಡೆ ಗಮನ ಹರಿಸುವವರು ಆ ವಿದ್ಯಾರ್ಥಿಜೀವನದ ಕೆಲವು ಆನಂದದ ಅನುಭವ ಕಳೆದುಕೊಳ್ಳುತ್ತಾರೋ ಹಾಗೆಯೇ, ಕೇವಲ ಆಟ,ಮೋಜು, ವಿನೋದಗಳ ಬಗ್ಗೆ ಗಮನ ಹರಿಸಿದವರು, ಮುಂದೆ., ಓದಿದ್ದರೆ ಆಗಬಹುದಾಗಿದ್ದ ಉಪಯೋಗ ನೆನೆದು ಪಶ್ಚಾತ್ತಾಪ ಪಡುವುದರ ಜೊತೆಗೆ, ಓದಿನಲ್ಲಿದ್ದ ಆನಂದ ಕಳೆದುಕೊಂಡಿರುತ್ತಾರೆ., ಹಿಡಿತವನ್ನೂ. ಕೆಲವರು.
ಆದರೂ SSLC ನಂತರ ತೆಗೆದುಕೊಳ್ಳೋ ನಿರ್ಧಾರ ನಮ್ಮ ವಿದ್ಯಾರ್ಥಿ ಭವಿಷ್ಯವನ್ನು ನಿರ್ಧರಿಸುವ ಪುಟ್ಟ ಕವಲುದಾರಿಯಾಗಬಹುದು.
ಓದುವ ಮಕ್ಕಳ ಮನಸ್ಸನ್ನು ಅರಿಯದೆ ಯಾವ ವಿಭಾಗಕ್ಕೆ ಸೇರಿಸಬೇಕೆನ್ನುವುದರಲ್ಲಿ ಕೆಲವು ಪೋಷಕರು ಎಡವಿರುತ್ತಾರೆ. ಸ್ವಂತ ನಿರ್ಧಾರ ತೆಗೆದುಕೊಳ್ಳೋ ಪ್ರಬುದ್ಧತೆಯೂ ಮಕ್ಕಳಲ್ಲಿ ಇರುವುದಿಲ್ಲ ಎಂಬುದೂ ಸತ್ಯವೇ.
ಕಲೆ,ವಿಜ್ಞಾನ,ವಾಣಿಜ್ಯ,ತಂತ್ರಜ್ಞಾನ,.. ಯಾವುದನ್ನು ತೆಗೆದುಕೊಂಡರೂ ಪ್ರಯೋಜನವಿದೆ ತೆಗೆದುಕೊಂಡಿದ್ದನ್ನು ಶ್ರದ್ಧೆಯಿಂದ ಅಭ್ಯಾಸ ಮಾಡಿದರೆ ಮಾತ್ರ. ಶ್ರದ್ಧೆಯಿಂದ ಅಭ್ಯಸಿಸದಿದ್ದರೆ ಯಾವುದಾದರೂ ವ್ಯರ್ಥವೇ.
SSLC ಯಲ್ಲಿ ಹೆಚ್ಚು ಮಾರ್ಕ್ಸ್ ಬಂದಿದೆಯೆಂಬ ಕಾರಣಕ್ಕೋ., ಈಗಿನ ಕಾಲದಲ್ಲಿ ವಿಜ್ಞಾನಕ್ಕೆ ಮಾತ್ರ ಬೆಲೆ ಎಂದೋ., ತಮ್ಮ ಹಿಂದಿನ ವಿದ್ಯಾರ್ಥಿ ಬದುಕನ್ನು ನೆನೆದೋ ಅಥವಾ ಬೇರೆಯವರ ಮಕ್ಕಳ ಕಂಡು ಗೌರವ-ಪ್ರತಿಷ್ಟೆಗೋ ಮಕ್ಕಳ ಮನಸ್ಸು ಕುರಿತು ಸೂಕ್ಷ್ಮವಾಗಿ ವಿಚಾರ ಮಾಡದೆ ಓದುವವ್ರು ಅವ್ರು ಎಂಬುದನ್ನು ಮರೆತು ನಿರ್ಧಾರ ಮಾಡಿರುತ್ತಾರೆ ಪೋಷಕರು.
ತಮಗೆ ಓದಿದವರು,ತಿಳಿದವರು ಎನಿಸೋ ಕೆಲವರನ್ನು ಕಂಡು ಕೇಳಿ ತಿಳಿಯುತ್ತಾರೆ, ಮಕ್ಕಳ ವಿದ್ಯಾಭ್ಯಾಸ ಭವಿಷ್ಯದ ಕುರಿತು,ಮುತುವರ್ಜಿಯಿಂದ. ಬೆಳೆದ ವಾತಾವರಣಗಳು ಒಂದೇ ಅಲ್ಲದಿದ್ದರೂ.
ಪಾಪ! ಕಲಾ ಅಥವಾ ವಾಣಿಜ್ಯ ವಿಭಾಗಕ್ಕೋ ಸೇರಿಸಿದ್ದರೆ ಮೊದಲ ಸ್ಥಾನದಲ್ಲಿರುತ್ತಿದ್ದ ಕೆಲ ಬುಧ್ದಿವಂತ ಮಕ್ಕಳನ್ನು ವಿಜ್ಞಾನಕ್ಕೆ ಸೇರಿಸಿ, ಅದು ಆ ಮಕ್ಕಳಿಗೆ ಕ್ಲಿಷ್ಟವೆನಿಸಿ, ವಿಜ್ಞಾನ ಬಿಟ್ಟು ಕಲಾ ಭಾಗಕ್ಕೆ ಅದನ್ನೂ ಬಿಟ್ಟು ವಾಣಿಜ್ಯಕ್ಕೆ ಅಲ್ಲೂ ನಿಲ್ಲದೆ...  ಹೀಗೆ ಓದೋ ಆಸಕ್ತಿ ಕಳೆದುಕೊಂಡು ಅಥವಾ ಕಡಿಮೆಯಾಗಿ ಅತ್ಲಗೂ ಇಲ್ಲ ಇತ್ಲಾಗೂ ಇಲ್ಲ ಎಂಬ ಎಡಬಿಡಂಗಿ ಮಾಡಿಬಿಟ್ಟವರ ಉದಾಹರಣೆಗಳು ತುಂಬಾ ಇವೆ. ಹಾಗೆಯೇ ವಿಜ್ಞಾನ ಓದೋ ಶಕ್ತಿ-ಆಸಕ್ತಿ ಇದ್ದ ಮಕ್ಕಳು SSLC ಅಂಕ ಕಡಿಮೆಯಾದ ಕಾರಣವೋ, ಪೋಷಕರ ಬೇಜವಾಬ್ದಾರಿ/ಅವಿದ್ಯೆಯೋ, ಹಣಕಾಸಿನ  ಸೌಲಭ್ಯವೋ, ಮಾರ್ಗದರ್ಶನದ ಕೊರತೆಯೋ ಅಥವಾ ಮತ್ತೇನೋ., ಕಲಾ ಅಥವಾ ವಾಣಿಜ್ಯ ಸೇರುತ್ತಾರೆ ಅಥವಾ ಸೇರದೆಯೂ ಇದ್ದುಬಿಟ್ಟ ಉದಾಹರಣೆಗಳೂ ತುಂಬಾ ಇವೆ.

ಏನಪ್ಪಾ ವಿಷಯ ಅಂದ್ರೆ..
SSLC ನಲ್ಲಿದ್ದಾಗ, ಇದೊಂದು ವರ್ಷ ಚೆನ್ನಾಗಿ ಓದಿದ್ರೆ, ಮುಂದೆ ಒಳ್ಳೆ ಭವಿಷ್ಯ ಅಂತಾರೆ.. PUC (ಮುಖ್ಯವಾಗಿ ಸೈನ್ಸ್) ನಲ್ಲಿದ್ದಾಗ ಇದು ಮಹಾತಿರುವು ಈ ಎರ್ಡು ವರ್ಷ ಕಷ್ಟ ಪಟ್ರೆ ಮುಂದೆ 3-4 ವರ್ಷ ಆರಾಮು ಅಂತಾರೆ.. ಹೌದು ಇಂಜಿನಿಯರ್, ಮೆಡಿಕಲ್ ಸೀಟ್ ತೆಗೆದುಕೊಳ್ಳೋಕೆ ಉಪಯೋಗ ಆಗತ್ತೆ (ಮಾರ್ಕ್ಸ್ ತೆಗೆದಿದ್ರೂ ತೆಗೋಬಹುದು ಓದಲೇಬೇಕು (ಕೊಡಿಸಲೇಬೇಕು ಅನ್ನೋ ಆಸಕ್ತಿ) ಅನ್ನೋ ಶಕ್ತಿ,  ಸೀಟು ತೆಗೊಳ್ಳೋ ರಾಜಕೀಯ ಗೊತ್ತಿದ್ರೆ . ಅದು ಬೇರೆ ವಿಚಾರ).. ಡಿಗ್ರೀಗೆ ಬಂದಾಗ ಇದೊಂದು ಶ್ರದ್ಧೆಯಿಂದ ಓದ್ಬಿಟ್ರೆ ಮುಂದೆ ಜೀವನ ಸೂಪರ್ರು ಅಂತಾರೆ.. ಇನ್ನೂ ಓದಬೇಕಲ್ಲೋ ಎನಿಸೋ, ಇಷ್ಟ್ ಓದಿದ್ ಸಾಕು ಈಗ ಸ್ವಲ್ಪ ಜಾಲೀ ಮಾಡೋಣ ಎನಿಸೋ., ವಯಸ್ಸಿನ ಭರದ ಭಾವಪ್ರವಾಹದಲ್ಲಿ ಏನೇನೋ ಯೋಚನೆಗಳ ಅಲೆಗಳೆದ್ದು ಡಿಗ್ರೀಯಲ್ಲಿ ಏನೇನಾಗಿರತ್ತೋ ಹೇಳೋಕೆ ಆಗಿರಲ್ಲ.. ಕೆಲವ್ರು ಎಕ್ಸೆಪ್ಶನ್ಸ್. 
ಇಲ್ಲಿ ಒಂದು ಆಸೆ ಪಟ್ರೆ, ಮತ್ತೊಂದು ಕಳೆದುಕೊಳ್ಳಬೇಕಿರತ್ತೆ. ಓದಿದ್ರೆ ಮುಂದೆ ಒಳ್ಳೆ ಭವಿಷ್ಯ ಅನ್ನೋ ದೃಷ್ಟಿಲಿ ನೋಡಿದ್ರೆ ಆ ವಯಸ್ಸಿನ ಮನಸ್ಸಿನ ಸೂಕ್ಷ್ಮತೆಯ ಆಸೆಗಳನ್ನು ನಡೆಸೋದಕ್ಕೆ ಆಗಿರುವುದಿಲ್ಲ. ಆ ಸೂಕ್ಷ್ಮತೆ ಜಡವಾಗಿ ಮುಂದೆ ಆನಂದದ ಜೀವನ ನಡೆಸೋ ಪರಿ ಹೇಗೋ ನಂಗೊತ್ತಿಲ್ಲ. ಇತ್ಲಾಗೆ ಸ್ನಾತಕೋತ್ತರ ಸೇರಿದರೂ ಆ ಆರಾಮು ಅಂತಾರಲ್ಲ ಅದು ಬಂದಿರೋದೇ ಇಲ್ಲ. ಮುಂದೆ ಮುಂದೆ ಮುಂದೆ ಅಂತ ಕೇಳಿ ಅದು ಇನ್ನೂ ಮುಂದೆ ಹೋಗಿರತ್ತೆ. ಸ್ನಾತಕೋತ್ಟರದಲ್ಲಿ ಮುಂದೆ ಮಾಡಬೇಕಾದ ಕೆಲ್ಸದ ಬಗ್ಗೆ ಯೋಚಿಸಿಯೇ, ಕೇಳಿಯೇ  ತುಂಬಾ ದಿನ ಕಳೆದಿರುತ್ತೆ  ಅದೂ ಮುಗಿದರೂ ಕೆಲವೊಮ್ಮೆ ಆ ಆರಾಮಿನ ಆನಂದ ಬರಲ್ಲ, ತಾನಾಗಿಯೇ. ಯಾವಾಗ ಬೇಕಾದರೂ ಅದನ್ನು ಹತ್ತಿರ ತಂದುಕೊಳ್ಳಬಹುದು, ನಾವೇ, ಬೇಕೆನಿಸಿದಾಗ. 

ಈ ಮನದ ಮಂಗನ ಆಟಕ್ಕೆ ಉದಾಹರಣೆ ಎಂಬಂತೆ SSLC ಯಲ್ಲಿ ಚೆನ್ನಾಗಿ ಓದೀದವ್ರು PUC ಢಮಾರ್ ಅಥವಾ PUCನಲ್ಲಿ ಚೆನ್ನಾಗಿದ್ದವ್ರು ಡಿಗ್ರೀಯಲ್ಲಿ ಮಂಗಮಾಯ. ಎಲ್ಲೋ ಓದದೇ ಬಂದವ್ರು ಸ್ನಾತಕೋತ್ತರದಲ್ಲೋ ಡಿಗ್ರೀಯಲ್ಲೋ ಮೊದಲಿರುತ್ತಾರೆ.. ಯಾವಾಗ ಯಾವ ಮರ ಏರುತ್ತೋ ಮನಸ್ಸಿನ ಮಂಗ ಗೊತ್ತಿಲ್ಲ, ಅದನ್ನ ಹಿಡಿಯೋದು ಮಜವಾಗಿರುತ್ತೆ.
ನನ್ನೇ ಉದಾಹರಣೆ ತೆಗೊಂಡ್ರೆ SSLC  ನಲ್ಲಿ ಫಸ್ಟ್. 1 ನೆ PUC ಹೈ, 2ನೆ PUC  ಆನ್ ದಿ ಗ್ರೌಂಡ್. ಡಿಗ್ರೀ ಪಾತಾಳ ಅಲ್ಲ ಮಹಾತಳ. ಮಾಸ್ಟರ್ಸ್ ನಲ್ಲಿ ಪ್ರಥಮ ರ್ಯಾಂಕ್ . ಈಗಂತೂ ಮನಸ್ಸಿನ ಮಂಗದ ಬಾಲ ಹಿಡಿಯೋ ಆಟ ಜೋರಾಗಿದೆ.

ಆದಷ್ಟು ಮಕ್ಕಳ ಮನಸ್ಸನ್ನು ಅರ್ಥ ಮಾಡಿಕೊಳ್ಳೋದಕ್ಕೆ ಪೋಷಕರು ಪ್ರಯತ್ನಿಸಬೇಕು.. ಕಲಿಯುವ ವಯಸ್ಸಲಿ ಕಲಿಯುವಷ್ಟನ್ನು ಕಲಿತು, ಅನುಭವಿಸುವಂತದ್ದೆಲ್ಲ ಅನುಭವಿಸಿ, ಕಳೆದುಕೊಳ್ಳುವಂತದ್ದನ್ನೆಲ್ಲ ಕಳೆದುಕೊಂಡು ಎಲ್ಲ ಅನುಕ್ಷಣಗಳಲ್ಲ್ಲಿ ಮನಸ್ಸು ಅನುಭವಿ ಆಗುವಂತಹ ಅವಕಾಶ ಮಾಡಿಕೊಡಬೇಕು.
ಪೋಷಕರು, ಗುರುಗಳು ಹೇಳೋದಕ್ಕಿಂತ ಹೆಚ್ಚಾಗಿ ಕಾಲವೇ ಪಾಠ ಹೇಳಿರುತ್ತದೆ,ಚೆನ್ನಾಗಿ. ಆ ಕಾಲ ಮೀರಿ ಜಾರದಂತೆ ಜಾಗೃತೆ ವಹಿಸಿ, ಸಣ್ಣ ಬ್ರೇಕ್ ಹಾಕಿ ಟರ್ನ್ ಕೊಟ್ಟು ಮುಂದೆ ಕಳಿಸೋ ಕರ್ತವ್ಯ ಪೋಷಕರದ್ದಾಗಿರಲಿ.
ಕೇವಲ ಓದಿದರೆ ಡಿಗ್ರೀ ಬಿಟ್ಟು, ಬೇರೇನೂ ಬರಲ್ಲ.. ಮನಸ್ಸು ತನ್ನೊಳಗಿನ ಖುಷಿ ಹುಡುಕೋ ವಿವೇಕದ ದಾರಿ ತೋರಿಸಿ ಸಾಕು.
ಆಧುನಿಕತೆಯ(?) ಪರಿಣಾಮವೋ ಏನೋ ಮಕ್ಕಳ ಮನಸ್ಸನ್ನು ಡೈವರ್ಟ್ ಮಾಡುವ ವರ್ಗದವರು ಹೆಚ್ಚು. ತಾವು ಹೆಮ್ಮೆಯಿಂದ ಬೀಗೋಕೆ ಮಕ್ಕಳ ಮೇಲೆ ಒತ್ತಡ ಏರಬಾರದು., ಓದಿದರೆ ಬೀಗುವ ಓದದಿದ್ದರೆ ಬೇರೆಯವರ ಬೀಗುವಿಕೆ ಕಂಡು ಮರುಗುವ ನೊಂದುಕೊಳ್ಳುವ ಜನರಿದ್ದಾರೆ ಪಾಪ. ಮಕ್ಕಳ ಓದದಿದ್ದರೂ ತನ್ನ ಮಗು ಓದದಿದ್ದರೂ ಅದರಲ್ಲಿ ಪ್ರವೀಣ, ಇದರಲ್ಲಿ ಚುರುಕು ಎಂದು ಹೇಳಿ ಮಗು ಮನಸ್ಸನ್ನು ಪ್ರೀತಿಯಿಂದ ಗೆಲ್ಲುವವರಿದ್ದಾರೆ, ಅದೇ ಕಾರಣ ನೀಡಿ ಪ್ರತಿಷ್ಟೆಗಾಗಿ ಸೋಲೊಪ್ಪದವರಿದ್ದಾರೆ. ಆಡಿಕೊಂಡು ನಗಬೇಕೆಂದರೆ ನೂರು ವಿಧದವರು ನೂರು ಉತ್ತರಗಳೊಡನೆ ಇದ್ದಾರೆ. ಪ್ರಶ್ನೆ ಎತ್ತಿ ಸಾಕು.
ಅಂಕ ತೆಗೆಯುವುದು ಕಲೆ ಅಷ್ಟೇ, ಆ ವಿದ್ಯಾಭ್ಯಾಸಲ್ಲಿ ಆ ವಯಸ್ಸಿಗಿರಬೇಕಾದ ಬುಧ್ಧಿಬೆಳವಣಿಗೆ, ವಿಚಾರವಂತಿಕೆ ಇರುವಂತೆ ಗಮನವಿಟ್ಟರೆ ಸಾಕಲ್ಲವೇ.
ಹಂಗಿಸುವುದು, ನೋಯಿಸುವುದು, ಬೀಗುವುದು ಎಲ್ಲ ಸಲ್ಲವಲ್ಲ. ಸೋತಾಗ ಗೆದ್ದವರ ಕಂಡು, ಹಂಗಿಸುವವರ ನೆನೆದು, ನೊಂದ ಅನುಭವವೂ ಇದೆ, ನಂ 1 ಆದಾಗ, ಗೆದ್ದಾಗ ಹಿಂದಿನ ಮುಂದಿನ ನನ್ನದೇ ಸ್ಥಿತಿ ನೆನೆದು ಬೀಗಿ ಸುಮ್ಮನಾಗಿದ್ದು ಅನುಭವವಿದೆ. ಯಾವುದಕ್ಕೂ ಅರ್ಥವಿಲ್ಲ ಎನಿಸುತ್ತದೆ, ಈಗ. ಡಿಗ್ರೀ ಬಿಟ್ಟು ಅಥವಾ ಜೊತೆಗೆ ಬೇರೆ ಇನ್ನೂ ಹೆಚ್ಚು ಅನುಭವಗಳಲ್ಲಿ ಇನ್ನೂ ಮೀಯಬೇಕಿತ್ತೇನೋ, ಕಳೆದುಕೊಂಡೆನ? ಎನಿಸುತ್ತದೆ.
ಶಾಲೆಯ ಗೌರವಕ್ಕೋ, ಕೇಂದ್ರ ಉಳಿಸಿಕೊಳ್ಳುವ ಸಲುವಾಗೋ, ಸ್ವಾರ್ಥಕ್ಕೋ, ವ್ಯಕ್ತಿತ್ವ ಮಾರಿಕೊಂಡೋ ರಾಜಕೀಯದಲ್ಲಿ ಸಿಲುಕಿದ ಶಿಕ್ಷಕರಿದ್ದಾರೆ. ಹೇಗಾದರೂ ತನ್ನ ಮಕ್ಕಳನ್ನು ಮುಂದೆ ತನ್ನಿ ಎಂದು ಹಲ್ಲು ಕಿರಿದು ಹೇಳುವ ಜನರನ್ನೂ ಕಂಡಿದ್ದೇನೆ., ಇಂತಹವರ ನಡುವೆ ಕೇವಲ ಪುಸ್ತಕದ ಹುಳುವಾಗಿ ಬಂದರೆ ಗೆದ್ದಂತೆ ಎನಿಸುವುದೇನು. ಅರ್ಥೈಸಿಕೊಂಡವರ ಮನಸ್ಥಿತಿಗನುಗುಣವಾಗಿ ಅರ್ಥವಿದೆ. ಬದುಕುವ ರಾಜಕೀಯವಿದೆ ಎಲ್ಲೆಲ್ಲೂ.
ತನ್ನ ಮಗು ಹೀಗೆ ಇದ್ದರೆ ನನಗೆ ಸಂತೋಷ ಎಂಬುದು ಮನದಲ್ಲಿರಲಿ, ಸಮಾಜದ ದೃಷ್ಟಿಯಲ್ಲಿ ಹೇಗಿರಬೇಕು ಎಂಬುದೂ ಅರಿವಿರಲಿ, ಮಕ್ಕಳ ಮನಸ್ಸಿನಲ್ಲಿರಬಹುದಾದ ಕನಸುಗಳ ಕಡೆಯೂ ಇಣುಕು ನೋಟವಿರಲಿ. ಹೇಗಾದರೂ ಇರಲಿ “ಒಬ್ಬ ಮನುಷ್ಯ ಏನಾಗ್ತಾನೋ ಅದು ಅವನ ತಂದೆ ತಾಯಿಯರ/ಪೋಷಕರ ಮೇಲೆ ನಿರ್ಧಾರ ಆಗುತ್ತೆ” ಎಂಬುದು ಸತ್ಯ ಎನಿಸುತ್ತೆ.
ಮನಸ್ಸಿಗೆ ತೋಚಿದ್ದನ್ನು ಮಾಡಿ ಆದರೆ ಮುಂದೆ, ಹೀಗೆ ಮಾಡಿಬಿಟ್ಟನಲ್ಲ, ಹೀಗೆ ಆಗಿಹೋಗಬಾರದಿತ್ತಲ್ಲ, ಇದು ಸಿಗಲಾರದಲ್ಲ, ಅದು ಮಾಡಿದರೆ ಸರಿಯಿತ್ತಲ್ಲ.. ಎಂಬ ಪಶ್ಚಾತಾಪ ಕೊರಗು ಮಾತ್ರ ಇರಬಾರದು.
ಅಷ್ಟೇ.
~.~

Related Posts Plugin for WordPress, Blogger...