ಜೈ ಗಣೇಶ..

[ಈ ವರ್ಷ ನಮ್ಮೂರಿನಲ್ಲಿ ನಡೆದ ಗಣೇಶೋತ್ಸವ ಕುರಿತು ಈ ಲೇಖನ.. ]ನೋಡಿ ನೋಡಿ ಐಸ
ಗಣಪನ್ ನೋಡಿ ಐಸ
ಅವನ್ ಕಿರೀಟ ನೋಡಿ ಐಸ
ಅವನ್ ತಲೆ ನೋಡಿ ಐಸ
ಅವನ್ ಹಣೆ ನೋಡಿ ಐಸ
ಅವನ್ ಹುಬ್ಬು ನೋಡಿ ಐಸ
ಅವನ್ ಕಣ್ಣು ನೋಡಿ ಐಸ
ಅವನ್ ಕಿವಿ ನೋಡಿ ಐಸ
ಅವನ್ ಸೊಂಡ್ಳು ನೋಡಿ ಐಸ
ಅವನ್ ದಂತ ನೋಡಿ ಐಸ
ಅವನ್ ಸರ ನೋಡಿ ಐಸ
ಅವನ್ ಹೊಟ್ಟೆ ನೋಡಿ ಐಸ
ಅವನ್ ಹಾವ್ ನೋಡಿ ಐಸ
ಅವನ್ ಕೈ ನೋಡಿ ಐಸ
ಅವನ್ ಕಾಲು ನೋಡಿ ಐಸ
ಅವನ್ ಇಲಿ ನೋಡಿ ಐಸ

ಗೌರಮ್ಮನ್ ನೋಡಿ ಐಸ
ಅವಳ್ ಹೂ ನೋಡಿ ಐಸ
ಅವಳ್ ಕಣ್ ನೋಡಿ ಐಸ
ಅವಳ್ ಮುಖ ನೋಡಿ ಐಸ
ಅವಳ್ ಮೂಗ್ಬೆಟ್ ನೋಡಿ ಐಸ
ಅವಳ್ ವಾಲೆ ನೋಡಿ ಐಸ
ಅವಳ್ ಜುಮಕಿ ನೋಡಿ ಐಸ
ಅವಳ್ ಸರ ನೋಡಿ ಐಸ

ಹೀಗೆ ಘೋಷಣೆಗಳು ಮೊಳಗುತ್ತಲೇ ಇದ್ದವು..

ನಮ್ಮ "ಎಲೆಚಾಕನಹಳ್ಳಿ ಶ್ರೀ ಪಟ್ಟಲದಮ್ಮ ಗೆಳೆಯರ ಬಳಗ"ದ ಯುವಕರ ಗಣಪತಿ ಹಬ್ಬ ಉತ್ಸಾಹ ನೋಡ್ಬೇಕು..
ಸ್ವಲ್ಪ ಹೆಚ್ಚೇ ಎನ್ನುವಷ್ಟು ಪುಂಡಾಟಿಕೆಗಳಿಗೆ ಹೆಸ್ರಾದ ಈ ನಮ್ ಯುವಕರ ಬಳಗ ಪ್ರತಿ ವರ್ಷ ಗಣಪನನ್ನು ಕೂರಿಸಿ ಆಚರಣೆ ಮಾಡುವುದನ್ನು ಹಲವಾರು ವರ್ಷಗಳಿಂದ ನಡೆಸಿಕೊಂಡು ಬರುತ್ತಿದೆ..
ಈ ವರ್ಷ ಗಣೇಶನ ಹಬ್ಬದ ರಂಗೇ ಈ ಬಳಗದಲ್ಲಿ ಇರಲಿಲ್ಲ.. ಗಣೇಶನನ್ನು ಕೂರಿಸುವ ಯೋಚ್ನೆ ಯಾರೂ ಮಾಡಿರ್ಲಿಲ್ಲ..
ಹಬ್ಬಕ್ಕೆ ಇನ್ನೆರಡು ದಿನ ಇರುವಾಗ ಯಾರೋ ಒಬ್ಬ ಈ ವಿಷಯ ಪ್ರಸ್ತಾಪ ಮಾಡಿದಾಗ ಎಲ್ಲರೂ ಕೂರಿಸುವುದಾಗಿ ನಿರ್ಧರಿಸಿ ಸುಮಾರು ೩೦ ಜನರ ಪಟ್ಟಿ ಹಾಕಿ ತಲಾ ೩೦೦ ರೂಪಾಯಿ ನಿಗದಿ ಮಾಡಲಾಗಿತ್ತು.. ಅಂತೆಯೇ ಮಾರನೆಯ ದಿನ ತೆಂಗಿನಗರಿಗಳನ್ನು ಹೆಣೆದು ಚಪ್ಪರಕ್ಕೆ ಕೆಲವರು ಸಿದ್ದತೆ ಮಾಡಿಕೊಂಡರು ಅಷ್ಟೇ.. ಮತ್ತೆ ಆ ವಿಚಾರವೇ ಇಲ್ಲ.. ಎಲ್ಲ ತಣ್ಣಗಾಯಿತು.. ಹಬ್ಬಕ್ಕೆ ಇನ್ನೊಂದು ದಿನ ಬಾಕಿ ಉಳಿದಿದ್ದರೂ ೧೦೦೦ ರೂಪಾಯಿ ಕೂಡ ಸಂಗ್ರಹ ಆಗಿರಲಿಲ್ಲ.. ಹೆಣೆದ ಗರಿಗಳನ್ನು ಬಿಟ್ಟರೆ ಏನೂ ರೆಡಿ ಆಗಿರಲಿಲ್ಲ.. ಒಬ್ಬ ಹುಡುಗನೂ ಪತ್ತೆ ಇಲ್ಲ..
ರಾತ್ರಿ ಆಯ್ತು.."ಈ ಐಕ್ಳು ಗಣಪತಿ ಕುಂಡ್ರಿಸವ.. ಅದಾಗು ಮಾತ..?" ಎಂಬ ಮಾತುಗಳನ್ನು ಕೇರಿ ಜನರೆಲ್ಲಾ ಮಾತಾಡಿಕೊಳ್ಳುತ್ತಿದ್ದರು.. ಊರಿನ ಬೇರೆ ಕಡೆಯೆಲ್ಲ ಗಣಪತಿ ಮಂಟಪ ರೆಡಿ ಮಾಡಿ ತಂದ್ ಕೂರ್ಸೋದ್ ಒಂದ್ ಬಾಕಿ ಇತ್ತು.. ಆದ್ರೆ ಇಲ್ಲಿ ಇನ್ನು ಏನು ಆಗೇ ಇಲ್ಲ.. ಕುಂಡ್ರಿಸ್ತಿವಿ ಅಂತ ಗ್ಯಾರಂಟಿನೂ ಇಲ್ಲ.

ರಾತ್ರಿ ಒಂಬತ್ತು ಗಂಟೆ ಆದಂತೆ ಎಲ್ಲೋ ಒಬ್ಬೊಬ್ಬರು ಹುಡುಗರು ಅಡ್ಡಕ್ಕೆ ಬರತೊಡಗಿದರು.. ಅಲ್ಲಿ ಇಲ್ಲ ನೀಲಗಿರಿ ಗಳ ಹಂಬ್ರಿಸಿ ತಂದ್ರು.. ಹುಡುಗರು ಬರಬರುತ್ತ ಹೆಚ್ಚಾದ್ರು.. ಗರಿ,ತಾಟು,ಗಳ,ಎಲ್ಲಾನು ಹಂಬ್ರಿಸ್ಕಂಡು ತರೋ ಹೊತ್ಗೆ ರಾತ್ರಿ ಹತ್ ಘಂಟೆ ಆಗಿ ಊರ್ ಜನ್ವೆಲ್ಲ ಮಲಗಿದ್ರು.. ಎಲ್ರೂ ಒಂದೊಂದ್ ಕೆಲ್ಸ ಕೈಗೆತ್ಕೊಂಡು ಮಂಟಪ ರೆಡಿ ಮಾಡೋಕೆ ಶುರು ಮಾಡಿದ್ವು.. ಕೆಲವ್ರು ಆಗ್ಲೇ ತತ್ ಆಗಿದ್ರಿಂದ ಅವ್ರ್ ಗಲಾಟೆಗೆ ಬೀದಿನಾಯಿಗಳು ಅರ್ಚ್ತಾ ಇದ್ವು..

ಚಪ್ರ ಹಾಕೋಕೆ ಎನ್ಬೇಕೋ ಅದ್ನ ಕದ್ದಾದ್ರು ಸರಿ ಅಲ್ಲಿ ಇಲ್ಲಿ ಹೊಂಚಾಕೊಂಡ್ ಬಂದು ರಾತ್ರಿ ೨ ಗಂಟೆ ಹೊತ್ಗೆ ಚಪ್ರ ಫುಲ್ ರೆಡಿ ಮಾಡಿ ಎಲ್ರು ನಾಳೆ ದುಡ್ ಕೊಟ್ಬಿಡಿ ಅಂತ ಹೇಳಿ ನಾಳೆ ಆಗ್ಬೇಕಾದ ಕೆಲ್ಸ ತಿಳ್ಸಿ ಮನೆಗ್ಹೋಗಿ ಮಲ್ಕೊಂಡೊ.
ಬೆಳಿಗ್ಗೆ ಎದ್ ನೋಡಿದ ಜನ್ವೆಲ್ಲ "ಅಲಾಲೆ ಅದ್ಯಾವಾಗ್ ಚಪ್ರ ಹಾಕುದ್ರು.." ಅಂತ ಆಶ್ಚರ್ಯ ಪಡೊಹಂಗೆ ರಾತ್ರೋ ರಾತ್ರಿ ಚಪ್ರ ರೆಡಿ ಮಾಡಿದ್ದೋ. ಹಬ್ಬದ ದಿನ ಆದ್ರೂ ಇನ್ನು ಪೂರ್ತಿ ದುಡ್ ಬಂದಿಲ್ಲ..
ಸಾಯಂಕಾಲ ೩ ಗಂಟೆಗಂಟ ಬಾಳೆಕಂಬ,ಕಬ್ಬುನ್ ಗರಿ, ಮಾವುನ್ ಸೊಪ್ಪು.. ಎಲ್ಲಾನು ತಂದ್ ಚಪ್ರದ ಕೆಲ್ಸ ಫುಲ್ ಮಾಡಿದ್ವಿ.ಮಂಡ್ಯದಿಂದ ಒಬ್ಬ " ಬೇಗ್ ಬರ್ರುಲಾ.. ಈ ವರ್ಷ ಗಣಪತಿ ಕಡ್ಮೆ ಅವೆ.. ಬೇಗ್ ಬರ್ದಿದ್ರೆ ಚೆನಾಗಿರೋದ್ ಸಿಗುಕಿಲ್ಲ.. ತೀರೋಗುಕ್ ಮುಂಚಿಯೇ ಬೇಗ ಬನ್ರುಲ.." ಅಂತ ಫೋನ್ ಹಾಕಿದ್ದ..

ನಾವುನು ಗಣಪತಿ ತರೋಕ್ ಆಗೋವಷ್ಟು ದುಡ್ ಕಿತ್ಕಂದು ಮಂಡಿಕ್ ಹೋಗಿ ಗಣಪತಿ ಕಡ್ಮೆ ಇದ್ದುದ್ರಿಂದ ಯಾವ್ದೋ ಒಂದ್ ಗಣಪತಿನ ತಂದೆಬಿಟ್ವಿ..

ಗಣಪತಿ ಚಪ್ರುತಕ್ಕೆ ಮೈಕು,ಪೆಂಡಾಲ್.. ಅದು ಇದು ಅಂತ ತರೋಹೊತ್ಗೆ ೭ ಗಂಟೆ ಆಗೇ ಹೋಯ್ತು..
ಇದ್ದ ಒಂದೈದಾರ್ ಆಳ್ಗೊಳೆ ಸೇರ್ಕೊಂಡು ಹೆಂಗೋ ಅತಗೆ ಗಣಪತಿನ ಕೂರ್ಸಿ ಜೈ ಅಂದೇ ಬಿಟ್ವಿ.. ಮೈಕ್ಸೆಟ್ ಸರ್ಯಾಗ್ ವರ್ಕ್ ಆಗದೆ ಇದ್ದುದ್ಕೆ ಯಾರ್ ಮನೆಲೋ ಅತಗೆ ಹೋಂ ತಿಯೇಟ್ರು ತಂದು ಹಾಕ್ದೊ.

ಇನ್ಮೇಲೆ ಇರುದು ಕೆಲ್ಸ..
ದಿನ ಪೂಜೆ ಮಾಡ್ಸುದು,ಗಣಪತಿ ಕಾಯ್ಕೊಳುದು,ಬುಡು ದಿನ ಜೋರಾಗ್ ಮಾಡುದು.. ಹೀಗೆ ಬೇಜಾನ್ ಕೆಲ್ಸ ಐಕ್ಳು ತಲೆ ಮ್ಯಾಲಿತ್ತು.. ಇನ್ನು ಸುಮಾರ್ ಜನ್ರು ದುಡ್ನೆ ಕೊಟ್ಟಿರ್ಲಿಲ್ಲ.. ರಾಜಧಾನಿಗೆ ಹೋಗಿ ಸೇರ್ಕಂಡಿದ್ದ ಸ್ವಲ್ಪ್ ಹುಡುಗ್ರು ಪತ್ತೇನೆ ಇರ್ಲಿಲ್ಲ.. ಹೇಗೋ ಮಾಡಿ ಒಂಬತ್ ದಿನುಕೆ ಬುಟ್ ಬುಡುದು ಅಂತ ನಿರ್ಧಾರ ಮಾಡಿದ್ವಿ.. ಭಾನ್ವಾರ ಸಿಗೋದ್ರಿಂದ ಬೆಂಗಳೂರ್ ಹುಡುಗ್ರು ಬತ್ತಾರೆ ಅಂತ ನಮ್ ಲೆಕ್ಕಾಚಾರ.
ಗಣಪತಿ ಹತ್ರ ನೋಡ್ಕೋಕೆ ಯಾರೋ ಪತ್ತೇನೆ ಇರ್ತಿರ್ಲಿಲ್ಲ,ರಾತ್ರೆ ೭ ಗಂಟೆಗೆ ಪೂಜೆಗೆ ಸರ್ಯಾಗಿ ಬಂದ್ಬುಡುರು.. ಪ್ರಸಾದಕ್ಕೆ.,
ಎಲ್ರೂ ಅದು ಇದು ತಿಂದು ಸ್ನಾನ ಮಾಡ್ದೆ ಇರ್ತುದ್ರಿಂದ ಪೂಜೆ ಮಾಡುಕೆ ಯಾರ್ನದ್ರು ಹುಡ್ಕಿ ಕರಿಬೇಕಿತ್ತು.. ಹೇಗೋ ಒಂಬತ್ ದಿನ ಆಯ್ತಾ ಬತ್ತು,ಗಣಪತಿ ಕುಂಡ್ರಿಸ್ರುಲ ನೋಡ್ಕಮ ಅಂತ ಹೇಳಿದ್ದೊರ್ ಯಾರೂ ಪತ್ತೇನೆ ಇಲ್ಲ.. ಇನ್ನು ಬರ್ಬೇಕಾದ್ ದುಡ್ಡು ಸರ್ಯಾಗ್ ಬಂದಿಲ್ಲ..
ಕಳೆದ ಭಾನ್ವಾರ ಬುಡುಕೆ ಎಲ್ಲ ರೆಡಿ ಮಾಡ್ದೊ,ಊರಲಿ ಕೆಲವ್ರು ದೊಡ್ಡೋರ್ ಹತ್ರ ಒಂದ್ಅಷ್ಟ್ ದುಡ್ ಈಸ್ಕಂಡು ಪುಳಿಹೊಗ್ರೆ,ಬುಗ್ರಿಕಾಳು,ಪಂಚಾಮೃತ ಮಾಡ್ಸುಕೆ ಹೇಳಿದ್ದೊ.
ಈ ಸಲ ಸೌಂಡ್ ಸಿಸ್ಟಂ ತಂದು ಜೋರಾಗಿ ಮಾಡ್ಮ ಅಂತ ಅಂದ್ಕೊಂಡಿದ್ದೊ.. ದುಡ್ಡ್ ಹೇಗೋ ರೆಡಿ ಮಾಡ್ದೊ,ಆದ್ರೆ ಡಕ್ ಗಳು ಸಿಗಲೇ ಇಲ್ಲ.. ಹೇಗೋ ಸ್ವಲ್ಪ್ ಜನ ಸೇರ್ಕಂಡು ಅಡ್ಗೆಗೆ ರೆಡಿ ಮಾಡ್ ಕೊಟ್ವಿ.. ಅಡ್ಗೆ ಮಾಡೋಕೆ ಒಂದಿಬ್ರು ದೊಡ್ದೊರ್ಗೆ ಎಣ್ಣೆ ಹಾಕ್ಸಿ ಬಿಟ್ಟಿದ್ವಿ.. ಎಣ್ಣೆ ಪಾರ್ಟಿ ಅದೆ ಬನ್ರುಲ ಅಂದಿದ್ರೆ ಸಾಕು ತಕ್ಷಣವೇ ಬತ್ತಿದ್ದ ಬೆಂಗಳೂರ್ ನಲ್ಲಿದ್ದ ನಮ್ಮೂರ ಹುಡುಗ್ರು ಗಣಪತಿ ಹಬ್ಬಕ್ಕೆ ಬನ್ರಿ ಅಂದಿದ್ರೆ ಕಾಸಿಲ್ಲ ಬರುಕಿಲ್ಲ ಅಂದಿದ್ರು.. ಆಮೇಲೆ ಬೋದ್ ಹೇಳಿದ್ಮೇಲೆ ಬತ್ತಿವಿ ಅಂತ ಹೇಳಿದ್ರು.. ಇವತ್ ಹೆಂಗರ ಮಾಡಿ ಡಕ್ ತತ್ತಿವಿ ಅಂತ ಹೋಗಿದ್ದೊರು ರಾತ್ರಿ ಆಯ್ತಾ ಬತ್ತಿದ್ರು ಪತ್ತನೆ ಇಲ್ಲ.. ಸಾಯಂಕಾಲ ಆಯ್ತಿದ್ದಂಗೆ ಜನಾನೋ ಜನ.. ಸುತ್ತ ಹಸಿರು.. ಗಣಪತಿಗೆ ಪೂಜೆ ಮಾಡಿ ಟ್ರಾಕ್ಟರ್ ಗೆ ಕುಂಡ್ರಿಸಿ ಡಕ್ ತರುಕ್ ಹೋಗಿದ್ದೊರ್ನ ಕಾಯ್ತಾ ಕೂತಿದ್ವಿ.. ಅಷ್ಟೊತ್ಗೆ ಆಲೆ ಬಣ್ಣ ಏರ್ಚ್ಕಂಡು ಹುಡುಗ್ರೆಲ್ಲ ಗುರ್ತೆ ಹಿಡಿಕಾಗ್ದಂಗೆ ಆಗಿದ್ರು.. ತಮಟೆಗಳು ಅದಾಗಲೇ ಬಂದಿದ್ದೋ.. ಬೆಂಗಳೂರ್ ಹುಡುಗ್ರು ಅಷ್ಟೊತ್ಗೆ ಸಾವ್ರಾರುಪಾಯಿ ಕೊಟ್ಟು ಪಟಾಕಿ ತಕಂದು ಬಂದ್ರು.. ಪಟಾಕಿನು ಸಿಡ್ಸಿ ಪೂಜೆ ಮಾಡಿ ಎಲ್ರುಗೂ ಪ್ರಸಾದ ಕೊಟ್ಟು ರೆಡಿಯಾಗ್ ಕುತ್ಕಂಡೊ..ಯಾಕೋ ಡಕ್ ತರುಕ್ಹೊದೊರು ಇವತ್ ಬರಿಕಿಲ್ಲ ಅನ್ನಿಸ್ತು.. ರಾತ್ರೆ ಆಯ್ತಾ ಲೇಟ್ ಆಗ್ತಿತ್ತು..
ಸರಿ ಅವ್ರ್ ಬರುದಾದ್ರೆ ಆಮೇಲ್ ಬರ್ಲಿ ಅನ್ಕಂಡು ಹೊರಡೋಕೆ ಶುರು ಮಾಡ್ದೊ.. ಎಲ್ಲ ಹುಡುಗ್ರು ಕೈಲಿ-ಮೈಲಿ ಬಣ್ಣ.. ಪಟಾಕಿಗಳು.. ತಮಟೆ-ಕುಣಿತ.. ಸೂಪರ್ರಾಗಿತ್ತು..
ಇದೆ ಫಸ್ಟ್ ಟೈಮ್ ನಾನೂ ಈ ಸಂಭ್ರಮದಲ್ಲಿ ಭಾಗವಹಿಸಿದ್ದೆ..
ಸ್ವಲ್ಪ ದೂರ ಹೋದಂತೆ ಕೆಲವ್ರು ಎಣ್ಣೆ ಬಿಟ್ಕಂಡು ಕುಣಿಕೆ ಟೈಟ್ ಆಗ್ಬುಟ್ರು.. ಊರಲ್ಲಿ ಅರ್ಧ ಮೆರವಣಿಗೆ ಬತ್ತಿದ್ದಂಗೆ ಡಕ್ ಸಿಗ್ಲಿಲ್ಲ ಅನ್ಕಂಡು ಅವರು ವಾಪಸ್ ಬಂದು ಕುಣಿಕೆ ಸೇರ್ಕಂಡರು.. ಊರಿಗೆ ನಮ್ದೆ ದೊಡ್ ಗಣಪತಿ ಆದ್ದ್ರಿಂದ ಜೋರು ಸ್ವಲ್ಪ್ ಜಾಸ್ತಿನೆ ಇತ್ತು..ನಮ ಕೇರಿ ಹುಡುಗ್ರು ಅನ್ಮೇಲೆ ಊರ್ಗೆಲ್ಲ ಗೊತ್ತಿತ್ತು ಹೇಗೆ ಅಂತ.
ಕೆಲವು ಕಡೆ ಪಟಾಕಿ ಹೊಡಿಬೇಡಿ ಅಂತ ಕೆಲವ್ರು ಹೇಳಿದ್ರು ಜಗ್ಳಾನೆ ಮಾಡ್ಕಂಡು ಪಟಾಕಿ ಹೊಡ್ದು ಮತ್ತೊಮ್ಮೆ ನಮ್ ಪುಂಡಾಟಿಕೆ ತೋರ್ಸೇಬಿಟ್ವಿ.. ಊರಲೆಲ್ಲ ಮೆರವಣಿಗೆ ಹಾಕಿ ಬಟ್ಟೆ ಬಿಚ್ಕಂಡು ಇಚ್ಛೆ ಬಂದಂಗೆ ಹುಚ್ರು ಅನ್ನೋ ಹಾಗೆ ಕುಣ್ಕಂದು ಎಣ್ಣೆ ಹಾಕಿದ್ ಬಾಯಲ್ಲೇ ಘೋಷಣೆ ಹಾಕಂಡು ಜೋರಾಗಿ ಪಟಾಕಿ ಹೊಡ್ಕಂದು ಅರಚಾಡ್ಕಂಡು ಸಖತ್ ಜೋರಾಗಿ ಊರಿಗೆಲ್ಲ ನಮ್ ಏರಿಯಾದ ಪವರ್ ತೋರ್ಸ್ದೋ..
ಪಕ್ಕದೂರಿನ (ವಿಶ್ವೇಶ್ವರಯ್ಯ ನಾಲೆ) ಕಾವ್ಲಿಗೆ ಬುಡ್ಬೇಕಿತ್ತು..
ನಾವು ಕುಣ್ಕಂದು ಊರ್ ಬಿಟ್ಟಾಗ ಅದಾಗ್ಲೆ ೧೦ ಗಂಟೆ,ಅಷ್ಟೊತ್ಗೆ ಕೆಲವ್ರ್ ಮುಕ ಮೂತಿ ನೋಡಕ್ ಆಗ್ದಂಗೆ ಬಣ್ಣ ಆಗಿತ್ತು.. ಮೈಮೇಲ್ ಇರಬೇಕಾದ್ ಅಂಗಿ ಸೊಂಟದಲ್ಲಿತ್ತು.. ತಮಟೆ ಸದ್ ಕೇಳ್ತಾ ಕುಣಿತಿದ್ರೆ ಪಕ್ಕ್ದೊರು ಬಂದ್ ಕುಣಿಬೇಕು ಅನ್ನೋಹಾಗಿತ್ತು.. ಒಂದ್ಅಷ್ಟ್ ಜನ ಎಣ್ಣೆ ಪಾರ್ಟಿಗಳು ಅದೆಷ್ಟ್ ಸಲ ಬಿದ್ ಒದ್ದಾಡಿದ್ರೋ..
ಟ್ರಾಕ್ಟರ್ ನಲ್ಲಿ ಗಣೇಶ,ಇನ್ನೊಂದ್ ಟಾಟ ಏಸ್ ನಲ್ಲಿ ಅರೆಬೆತ್ಲೆ ಹುಡುಗ್ರು, ಪಕ್ದೂರ್ಗೆ ಹೋದಾಗ ಆ ಊರ್ ಜನ್ವೆಲ್ಲ ಮಲಗಿ ಕತ್ಲೆ ಗುವ್ ಅಂತಿತ್ತು.. ಕಾವ್ಲಿ ಹತ್ರ ಹೋದಾಗ ೧೧ ಗಂಟೆ..
ಕಾವ್ಲಿಗೆ ಕುಡ್ದೊರ್ ನೆಗುದ್ಬುಡ್ತಾರೆ ಅಂತ ಒಬ್ಬನ್ನ ಕಾವ್ಲು ಕಾಯಿಕೆ ನಿಲ್ಲಿಸ್ದೋ.. ನೆಟ್ಟಗಿರೋ ಐದಾರ್ ಜನ ಸೇರ್ಕಂಡು ಪೂಜೆ ಮಾಡಿ ನಿಧಾನಕ್ಕೆ,ಹುಷಾರಾಗಿ ಗಣೇಶನ ಕಾವ್ಲಿಗೆ ಮುಳ್ಗಿಸಿ ಕೈಮುಗ್ದು ಮನೆಗೆ ಬಂದಾಗ ಅದಾಗ್ಲೆ ೧೨.೩೦..
ಆಗ ಎಲ್ರೂ ಊಟ ಮಾಡಿ ಎಲ್ಬೇಕೋ ಅಲ್ಲೇ ಬಿದ್ಕಂಡ್ವಿ.. ಬೆಂಗಳೂರ್ ಹುಡುಗ್ರು ಬೆಳ್ಗೆ ಡ್ಯೂಟಿಗೆ ಹೋಗ್ಬೇಕು ಅಂತೇಳಿ ಬಂದಿದ್ ಕಾರ್ನಲ್ಲೇ ಆಗ್ಲೇ ಹೊರಟ್ರು..
ಮಾರನೆ ದಿನ ಚಪ್ರನ ಎಲ್ಲಾನು ಬಿಚ್ಚಿ ಏನೇನು ವಾಪಸ್ ಮಾಡ್ಬೇಕು ಅದ್ನ ವಾಪಸ್ ಮಾಡಿ ಈ ವರ್ಷದ ಗಣೇಶನ ಹಬ್ಬನ ಮುಗಿಸಿದ್ವಿ..
ಈ ವರ್ಷದ ಕಥೆ ನೋಡಿದ್ರೆ ಮುಂದ್ಲ್ ವರ್ಷ ಕೂರಿಸ್ಬಾರ್ದು ಅಂತ ಅಂದ್ಕಂಡಿವಿ.. ನೋಡೋಣ..ಗಣೇಶ ಎಲ್ರುಗೂ ಒಳ್ಳೇದ್ ಮಾಡ್ಲಿ..

"ಜೈ ಏಕದಂತ.."


~.~

"ಆಚಾರ್ಯ ದೇವೋಭವ!!"

ನನ್ನ ಕಲಿಕಾ ಜೀವನದಲ್ಲಿ 'ಗುರು' ಎಂಬ ಪಟ್ಟವನ್ನೇರಿದ್ದವರ ಸವಿ ನೆನಪಿನಲ್ಲಿ ಮೂಡಿಬಂದ ಲೇಖನ..]" ಗುರುಬ್ರಹ್ಮ ಗುರುವಿಷ್ಣು ಗುರುಮಹೇಶ್ವರ ಗುರುಸಾಕ್ಷಾತ್ ಪರಬ್ರಹ್ಮ ತತ್ಮೈಶ್ರೀ ಗುರುವೇ ನಮಃ ": ಈ ಸಾಲುಗಳನ್ನು ನಾನೂ ಸಂಪೂರ್ಣವಾಗಿ ಅರಿತುಕೊಂಡಿಲ್ಲವೆಂದೆನಿಸುತ್ತದೆ..
'ತಾಯಿಯೇ ಮೊದಲ ಗುರು' ಎಂಬುದರ ಬಗ್ಗೆಯೂ ನಂಗೆ ಅರಿವಿಲ್ಲ.. ತಂದೆ ನನಗೆ ಗುರುವಾಗಿದ್ದು ಅಕ್ಷರಶಃ ಸತ್ಯ..
'...ಕಾಲ(ಅನುಭವ)ವೇ ನನ್ನ ಗುರು...' ಎಂದೆನಿಸುತ್ತದೆ..

ನಾನು ಮೊದಲಬಾರಿಗೆ ಶಿಶುವಿಹಾರ ಸೇರಿದಾಗ ಅಲ್ಲಿನ ಶಿಕ್ಷಕಿ ಕಂಡರೆ ಭಯವಿತ್ತು..
ನಮ್ಮೂರಿನಲ್ಲಿ ಒಂದೇ ಕಾಂಪೌಂಡಿನ ಒಳಗಡೆ ಶಿಶುವಿಹಾರ,ಪ್ರಾಥಮಿಕ ಶಾಲೆ,ಆಸ್ಪತ್ರೆ... ಎಲ್ಲವೂ ಸೇರಿದ್ದವು..
ನಾನು ಶಿಶುವಿಹಾರದಲ್ಲಿದ್ದಾಗ ಅಲ್ಲಿ ಆಗೊಮ್ಮೆ ಈಗೊಮ್ಮೆ ಕಾಣುತಿದ್ದ ಶಾಲಾ ಶಿಕ್ಷಕರನ್ನು ಕಂಡರೆ ತುಂಬಾ ಭಯ-ಭಕ್ತಿ ಇತ್ತು..
ಶಿಶುವಿಹಾರದಲ್ಲಿ ಸಣ್ಣ -ಪುಟ್ಟ ಆಟಗಳನ್ನು ಕಲಿತು ಶಾಲೆಗೇ ಸೇರಿದ್ದು ಆಯಿತು..

ನಾನು ಪ್ರಾಥಮಿಕಶಾಲೆಯಲ್ಲಿ''ಬೋರಲಿಂಗಯ್ಯ,ಎನ್.ಬೆಟ್ಟಯ್ಯ,ಲಕ್ಷ್ಮಿನಾರಾಯಣಪ್ಪ,ಪುಷ್ಪಮಂಜುಳಾಬಾಯಿ ,ಅನಂತಕುಮಾರ್,ಪ್ರೇಮ,ಅನುಸೂಯ,ಪಾರ್ವತಿ,ಎನ್.ಮಲ್ಲಿಕಾರ್ಜುನ್,ಸರಸ್ವತಿ..' ಹೀಗೆ ತುಸುದೊಡ್ಡದೇ ಎನಿಸುವ ಶಿಕ್ಷಕ/ಕಿ ವೃಂದವನ್ನು ಕಂಡಿದ್ದೇನೆ..
ಬೋರಲಿಂಗಯ್ಯ ನಾನು ಶಾಲೆ ಸೇರಿದಾಗ ನಮ್ಮ ಶಾಲೆಯ ಮುಖ್ಯಶಿಕ್ಷಕರಾಗಿದ್ದರು..,ಅವರು ನಮ್ಮೂರಿನಲ್ಲಿಯೇ ಉಳಿಯುತ್ತಿದ್ದರು ಎಂದು ನೆನಪು,ಅವರಿದ್ದಾಗ ನಮ್ಮ ಶಾಲೆಯಲ್ಲಿ ಹಲವಾರು ಕಾರ್ಯಕ್ರಮಗಳು ನಡೆಯುತ್ತಿದ್ದವು..
ಎನ್.ಬೆಟ್ಟಯ್ಯ ಅವರು ನನ್ನ ತಾಯಿಗೂ ಶಿಕ್ಷಕರಾಗಿದ್ದರಂತೆ.. ಅವರು ಬಹುಪಾಲು ನನ್ನೂರಿನ ಜನರಿಗೆಲ್ಲ ಮೆಚ್ಚಿನ ಶಿಕ್ಷಕರು..
ಬೋರಲಿಂಗಯ್ಯ ಅವರ ವರ್ಗಾವಣೆ ನಂತರ ಎನ್.ಮಲ್ಲಿಕಾರ್ಜುನ್ ಅವರು ಬಂದಿದ್ದು ಅವರು ಒಂದು ರೀತಿಯ ತುಸು ವಿಶೇಷ ವ್ಯಕ್ತಿ..
'ಅನಂತಕುಮಾರ್ ಅವರು ಕನ್ನಡ ಅಕ್ಷರಗಳನ್ನು ಮುದ್ದಾಗಿ ಬರೆಯುವುದರಲ್ಲಿ ಅವರಿಗೆ ಅವರೇ ಸಾಟಿ..'
ನಾನು ಐದನೆಯ ತರಗತಿಗೆ ಬಂದಾಗ ಎನ್.ಬೆಟ್ಟಯ್ಯ ಅವರ ವರ್ಗಾವಣೆ ಯಾಗಿತ್ತು.. ಅವರು ವರ್ಗಾವಣೆಯಾಗುವ ಹಿಂದಿನ ದಿನ ತರಗತಿಗೆ ಬಂದು ಭಾವುಕರಾಗಿ ಈ ಶಾಲೆಯ ಅವರ ಋಣದ ಬಗ್ಗೆ ಮಾತಾಡುತ್ತಿದ್ದರು.. ಅದು ಅಷ್ಟಾಗಿ ನನಗೆ ತಿಳಿಯುತ್ತಿರಲಿಲ್ಲ..ನಾನು ಆರನೆಯ ತರಗತಿಗೆ ಬಂದಾಗ ಪುಷ್ಪಮಂಜುಳಾಬಾಯಿ ಅವರ ವರ್ಗಾವಣೆಯೂ ಆಯಿತು..
ಇನ್ನು ಲಕ್ಷ್ಮಿನಾರಾಯಣಪ್ಪ ಮಾಸ್ತರರು ಎಂದರೆ ಎಲ್ಲರಿಗೂ ಭಯ.. ಅವರ ಹೊಡೆತ ತಾಳಲಾರದೆ ಕೆಲವರು ಶಾಲೆ ಬಿಟ್ಟಿದ್ದಾರೆ ಎಂಬುದು ಮತ್ತೊಂದು ವಿಚಾರ.. ಅವರು ರೂಲರ್ ಹಿಡಿದು ಆವರಣದಲ್ಲಿ ನಿಂತಾಗ ಎಲ್ಲರೂ ಬಾಯಿಮೇಲೆ ಬೆರಳಿಟ್ಟು ಸದ್ದುಗದ್ದಲವೆಲ್ಲ ಅಡಗಿ ಮೌನ ಆವರಿಸುತ್ತಿತ್ತು.. ಅವರು ವರ್ಗಾವಣೆ ಆಗಿ ಒಮ್ಮೊಮ್ಮೆ ಕಾಣಸಿಗುತ್ತಾರೆ..
ಎನ್.ಮಲ್ಲಿಕಾರ್ಜುನ್ ಅವ್ರ ವಿಷಯದಲ್ಲಿ ಎಲ್ಲರಿಗೂ ಬೇಸರ ಇತ್ತು ಎಂದೆನಿಸುತ್ತಿತ್ತು.. ಅವರ ಕಾರ್ಯವೈಖರಿ ಸರಿಯಿಲ್ಲ ಎಂದು ಅಪವಾದಿಸಿ ಅವರನ್ನು ವರ್ಗಾವಣೆ ಮಾಡಿಸಿ ಅವರ ಜಾಗಕ್ಕೆ ಹಿಂದೊಮ್ಮೆ ಇದ್ದ ಎನ್.ಬೆಟ್ಟಯ್ಯ ಅವರನ್ನೇ ತರುವುದಾಗಿ ಘೋಷಿಸಿದ್ದ ನಮ್ಮೂರ ನಾಯಕರು ಅವರ ಮಾತಿನಂತೆ ಗೆದ್ದಿದ್ದರು.. ಅವರಂತೆಯೇ ಎನ್.ಬೆಟ್ಟಯ್ಯ ಅವರು ಬಂದ ಮೇಲೆ ನಮ್ಮ ಶಾಲೆಗೇ ಹೊಸಕಳೆ ಬಂದಿತ್ತು.. ಶಾಲೆಯ ಅಭಿವೃದ್ಧಿಗಾಗಿ ಬಹಳ ಶ್ರಮಿಸುತ್ತ ಎಲ್ಲರಿಗೂ ಅಚ್ಚುಮೆಚ್ಚಾಗಿದ್ದರವರು..
ಇತ್ತೀಚಿಗೆ ಅವರಿಗೆ ಪಾರ್ಶ್ವವಾಯು ಬಡಿದು ವಿಧಿ ತನ್ನ ಕ್ರೂರತೆಯನ್ನು ಮೆರೆದಿದೆ.. ಅವರನ್ನು ಈಗಲೂ ಶಾಲೆಗೇ ಕರೆತರಲಾಗುತ್ತಿದೆ.. ಸಮಯಸಾಧಕ,ಬಿರುಸಿನ ನಡಿಗೆಯ ಆ ದಿವ್ಯಜ್ಯೋತಿ,ಕೈಯಲ್ಲಿ ಕೋಲನ್ನು ಹಿಡಿದು ಗದರಿಸಿ ಬುದ್ದಿ ಹೇಳುತ್ತಿದ್ದ ಅವರು,ಇಂದು ಊರುಗೋಲನ್ನು ನೆಲಕ್ಕೂರಿ ಒಬ್ಬನ ಸಹಾಯದಿಂದ ಕುಂಟುತ್ತ ಕೃಶದೇಹಿಗಳಾಗಿ ಶಾಲೆಯ ಆವರಣದಲ್ಲಿ ಕಂಡೊಡನೆ ಕಣ್ಣುಗಳು ತೇವವಾಗಿ ಮನ ಮರುಗುವುದೆಕೋ..

ಅವರು ಹಿಂದೊಮ್ಮೆ ಅವರ ದೂರವಾಣಿಗೆ 'ಏನಾಗಲಿ ಮುಂದೆ ಸಾಗು ನೀ' ಹಾಡನ್ನು ಹಲೋಟ್ಯೂನಾಗಿ ಹಾಕಿಸಿದ್ದುದು ನೆನಪಾಗುತ್ತದೆ.. ಅವರ ಈ ಸ್ಥಿತಿಗೆ ಎಲ್ಲರೂ ಮರುಗುತ್ತ ದೇವರಿಗೆ ಹಿಡಿಶಾಪ ಹಾಕುವುದುಂಟು..ನಾನು ಪ್ರಾಥಮಿಕ ಶಾಲೆಯಲ್ಲಿ ಜಾಣನಾಗಿದ್ದು ಒಳ್ಳೆ ಹೆಸರು ಪಡೆದಿದ್ದೆ ಎನಿಸುತ್ತದೆ..

ನಾನು ಪ್ರಾಥಮಿಕ ಶಾಲೆ ಮುಗಿಸುವಷ್ಟರಲ್ಲಿ ನಮ್ಮೂರಿನಲ್ಲಿಯೇ ಪ್ರೌಢಶಾಲೆ ಆರಂಭವಾಗಿತ್ತು.. ಪ್ರೌಢಶಾಲೆಯ ಕಟ್ಟಡ ನಿರ್ಮಾಣಕ್ಕಾಗಿ ನಾನೂ ಓದಿದ ಶಿಶುವಿಹಾರ,ನಾನು ಆಟವಾಡಿದ ಜಾರುಗುಪ್ಪೆ ಮಣ್ಣಾಗಿ.. ಈಗ ಬರೀ ನೆನಪಾಗಿವೆ.. ಆಸ್ಪತ್ರೆ ಪ್ರೌಢಶಾಲಾ ಶಿಕ್ಷಕರ ಕೊಠಡಿಯಾಯಿತು..
ಅಂತೂ-ಇಂತೂ ಪ್ರೌಢಶಾಲೆ ಸೇರಿಯೂ ಆಯಿತು..
ಪ್ರೌಢಶಾಲೆಯಲ್ಲಿ 'ಮಂಜುನಾಥ್,ಮೂರ್ತಿ,ಮಹಮ್ಮದ್ ಖುರೇಶ್,ಕುಮಾರ್,ಯೋಗಾನರಸಿಂಹ,ಪುಷ್ಪಲತ,ಸುಧಾ,ನಾಗಾರಾಜ್.. 'ಇವರೆಲ್ಲರನ್ನು ಕಂಡಿದ್ದೇನೆ..
ಪುಷ್ಪಲತ ಅವರು ನಾನು ಓದುತ್ತಿದ್ದಾಗ ಮುಖ್ಯಶಿಕ್ಷಕಿಯಾಗಿದ್ದರು.. ಈಗ ವರ್ಗಾವಣೆಯಾಗಿದ್ದರಂತೆ..
ಮಂಜುನಾಥ ಅವರು ಕನ್ನಡ ಭೋಧನೆ ಮಾಡುತ್ತಿದ್ದರು.. ಜೊತೆಗೆ ಎಲ್ಲ ಸಭೆ-ಸಮಾರಂಭದಲ್ಲಿ ವಿದ್ಯಾರ್ಥಿಗಳನ್ನು ಭಾಷಣಕಾರರನ್ನಾಗಿ ಮಾಡುತ್ತಿದ್ದರು.. ನಾನು ಇಂದು ಪ್ರತಿ ಸಭೆ-ಸಮಾರಂಭಗಳಲ್ಲಿ ಯಾವುದೇ ಅಂಜಿಕೆಯಿಲ್ಲದೆ,ಎದೆಗುಂದದೆ ಧೈರ್ಯವಾಗಿ ಮಾತನಾಡುತ್ತೆನೆಂದರೆ ಆ ಪ್ರತಿಭೆ ಹೊರಹೊಮ್ಮಲು ಅವರದು ಬಹುಪಾಲು..ನಾನಷ್ಟೇ ಅಲ್ಲ ನಮ್ಮ ಶಾಲೆಯಲ್ಲಿ ಓದಿದ ಎಷ್ಟೋ ವಿಧ್ಯಾರ್ಥಿಗಳು ಭಾಷಣಕಾರರಾಗಲು ಅವರೇ ಪ್ರಮುಖರು..
ಅವರಿಗೆ ನಾನೆಂದೆಂದಿಗೂ ಕೃತಜ್ಞನಾಗಿದ್ದೇನೆ...
ಮೂರ್ತಿ ಅವರು ಇಂಗ್ಲಿಷ್ ಹಾಗೂ ರಸಾಯನಶಾಸ್ತ್ರ ಪಾಠ ಮಾಡುತ್ತಿದ್ದರು.. ಅವರು ನಾಸ್ತಿಕರಂತೆ ಮಾತನಾಡುತ್ತಿದ್ದರು..
ಮಹಮ್ಮದ್ ಖುರೇಶ್ ಅವರು ಹಿಂದಿ ವಿಷಯ ತೆಗೆದುಕೊಂಡಿದ್ದರು.. ಅವರು ತುಂಬಾ ತಾಳ್ಮೆ ಹೊಂದಿದ್ದರು,ಆದರೆ ಅವರ ತಾಳ್ಮೆ ಪರೀಕ್ಷೆ ಮಾಡಿದಲ್ಲಿ ಅವರ ಇನ್ನೊಂದು ಮುಖ ದಿಗ್ದರ್ಶನವಾಗುತ್ತಿತ್ತು.. ಅವರು ಸ್ನೇಹಿತರಂತೆ ಬೆರೆಯುತ್ತಿದ್ದರು.. ಅವರನ್ನು ನಾನು ತುಂಬಾ ವಿಧೇಯತೆಯಿಂದ ಕಾಣಲು ಪ್ರಯತ್ನಿಸುತ್ತಿದ್ದೆ.. ಅಕ್ಷರಗಳನ್ನು ವಿಶಿಷ್ಟವಾಗಿ ಬರೆಯುವುದರಲ್ಲಿ ಅವರು ಪರಿಣಿತರು.. ಈಗ ಅವರೂ ವರ್ಗಾವಣೆಯಾಗಿದ್ದಾರೆ..
ಕುಮಾರ್ ಅವರು ಗಣಿತ ವಿಷಯದವರಾಗಿದ್ದು ಪಾಠ ಅಚ್ಚುಕಟ್ಟಾಗಿ ಮಾಡುವುದರಲ್ಲಿ ಅವರ ಬಗ್ಗೆ ಇನ್ನೊಂದು ಮಾತಿಲ್ಲ..
ಯೋಗಾನರಸಿಂಹ ಅವರು ಭೌತಶಾಸ್ತ್ರ ಪಾಠ ಹೇಳುತ್ತಿದ್ದು ತುಂಬಾ ಹಾಸ್ಯಪ್ರಿಯರು..
ಸುಧಾ ಅವರು ವಿಶೇಷ ಶಿಕ್ಷಕಿಯಾಗಿದ್ದು ಅವರು ಮಾಡುತ್ತಿದ್ದ ವಿಶೇಷ ತರಗತಿಗಳಿಂದ ನನ್ನ ಬಹುಗುಣಗಳು ಸಹಪಾಠಿಗಳಿಗೆ ತಿಳಿದವು.. ಸಾಮಾಜಿಕವಾಗಿ ಮುಕ್ತವಾಗಿ ಚರ್ಚೆ ಮಾಡುತ್ತಿದ್ದರಾ ಸಮಾಜ ವಿಷಯದ ಶಿಕ್ಷಕಿ..
ನಾಗರಾಜ್ ಅವರು ದೈಹಿಕ ಶಿಕ್ಷಕರಾಗಿದ್ದು ಅವರೇ ಒಂದು ವಿಶೇಷ..
ಈ ಗುರುವೃಂದದ ನಡುವೆ ಕೆಂಪಮ್ಮ ಎಂಬುದೊಂದು ಮುಖ್ಯಪಾತ್ರ.. ಅವರು ಯಾವುದೇ ವಿಷಯದ ಶಿಕ್ಷಕಿಯಲ್ಲದಿದ್ದರೂ ಕೆಲವು ವಿದ್ಯಾರ್ಥಿಗಳು ಕೆಂಪಮ್ಮ ಅವರನ್ನು ಬಿಟ್ಟು ಮತ್ಯಾರನ್ನು ಸೌಜನ್ಯದಿಂದ ಕಾಣುವುದಿಲ್ಲ ಎಂಬುದು ಅವರ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿ..
ನಾನು ಪ್ರೌಢಶಾಲೆಯಲ್ಲಿ ಹೆಚ್ಚು ಸಮಯವನ್ನು ಆಟದ ಮೈದಾನದಲ್ಲೇ ಕಳೆದುದರಿಂದ ಅವರೆಲ್ಲರನ್ನು ಹೆಚ್ಚಾಗಿ ತಾಳೆ ಹಾಕುವುದು ತಿಳಿದಿಲ್ಲ..
ಪ್ರೌಢವಯಸ್ಕನಲ್ಲವೇ.. ತೀಟೆ,ತಕರಾರು,ತರಲೆ,.. ಎಲ್ಲ ಗುಣಗಳಿಂದ ಕಾಣಿಸಿಕೊಂಡೆ. ಇಲ್ಲಿನ ಶಿಕ್ಷಕರು ನನಗೆ 'ಅಹಂಕಾರಿ' ಎಂಬ ಪಟ್ಟ ಕೊಟ್ಟಿದ್ದು ನನ್ನ ಜನ್ಮಜರ ಮೂಲಕ ಹಲವು ದಿನಗಳ ನಂತರ ಗೊತ್ತಾಯಿತು..
ನನ್ನವರಾದ ಕೆಲವರ ನಾಮಬಲದಿಂದ ನನ್ನೆಲ್ಲ ತಪ್ಪುಗಳನ್ನು ಈ ಶಿಕ್ಷಕರು ಮನ್ನಿಸಿದ್ದರು ಎಂದು ಭಾವಿಸುತ್ತೇನೆ..
ನಾನು ಇಲ್ಲಿ ಹಲವಾರು ವಿವಾದಗಳನ್ನು ಸೃಷ್ಟಿಸಿಕೊಂಡಿದ್ದರೂ 'ನಾನು ನನಗೆ ತಿಳಿದಂತೆ ನನ್ನ ಆತ್ಮಸಾಕ್ಷಿಯಾಗಿ ಯಾವ ಶಿಕ್ಷಕರ ವಿಷಯದಲ್ಲೂ ತಪ್ಪೆಸಗಿಲ್ಲ ಎಂದು ಪ್ರಮಾಣ ಮಾಡುತ್ತೇನೆ.. ಪರೋಕ್ಷವಾಗಿ ನನ್ನ ಬಗ್ಗೆ ತಪ್ಪು ತಿಳಿದಿದ್ದರೆ ಅದಕ್ಕೆ ಕಾರಣ ನನಗೆ ತಿಳಿದಿಲ್ಲ.."ಈಗಲೂ ಆಗಿನ ಕೆಲವು ಶಿಕ್ಷಕರು ಕಣ್ಮುಂದೆ ಕಂಡಾಗ ನಮಸ್ಕರಿಸುವುದು ನಮಸ್ಕರಿಸಲೆಬೇಕಂತಲ್ಲ///

ಏನೇ ಇರಲಿ ನನ್ನ ಜೀವನದಲ್ಲಿ ಗುರು ಪಟ್ಟವನ್ನೇರಿದ್ದ ಎಲ್ಲರಿಗೂ ನಾನು ಚಿರಋಣಿ..
ಸೂಚನೆ:ಈ ಮೇಲ್ಕಂಡ ಕೆಲವು ಶಿಕ್ಷಕರ ನಡುವಿನ ಒಡನಾಟದಲ್ಲಿ ನಡೆದ ಕೆಲವು ಅಹಿತಕರ ಘಟನೆಗಳನ್ನು ಇಲ್ಲಿ ಈಗ ಪ್ರದರ್ಶನ ಮಾಡುವುದು ಸರಿಯಿಲ್ಲ ಎಂದು ಮರೆಮಾಚಲಾಗಿದೆ..


~-~

Related Posts Plugin for WordPress, Blogger...