ಸಿಗರೇಟ್ ಫಿಲ್ಟರ್ ಮತ್ತು ಹಕ್ಕಿಗೂಡು

ಸಾಮಾನ್ಯವಾಗಿ ಕೆಲವೊಂದು ಪಕ್ಷಿಗಳ ಗೂಡಲ್ಲಿ ಸಿಗರೇಟಿನ ಫಿಲ್ಟರ್ ಗಳು ಇರುವುದನ್ನು ನೀವು ನೋಡಿರಬಹುದು.
ಹೌದು. ಏನು ವಿಶೇಷ? ಸಿಗರೇಟ್ ಫಿಲ್ಟರ್ ಯಾಕೆ ? ಎಂಬ ಕುತೂಹಲವನ್ನು ಬೆನ್ನಟ್ಟಿ ೨೦೧೨ರಲ್ಲಿ ಮೆಕ್ಸಿಕನ್ ನ ವಿಜ್ಞಾನಿಗಳ ತಂಡದವರು ಒಂದು ಪ್ರಯೋಗ ನಡೆಸಿ 'ರಾಯಲ್ ಸೊಸೈಟಿಯ ವಿಜ್ಞಾನದ ನಿಯತಕಾಲಿಕೆಯಲ್ಲಿ' ಕೆಲವೊಂದು ಸೋಜಿಗದ ಅಂಶಗಳನ್ನು ಪ್ರಕಟಿಸಿದ್ದಾರೆ.(ಚಿತ್ರಕೃಪೆ : ಅಂತರ್ಜಾಲ)

ಕೆಲವೊಂದು ಹಕ್ಕಿಗಳು ಹತ್ತಿ ಅಥವಾ ಹತ್ತಿಯಂತಿರುವ ಒಂದು ಜಾತಿಯ ಹೂವನ್ನು ಗೂಡಿನ ಒಳಗೆ ಹಾಸಿಗೆಯಂತೆ ಹಾಸಿಕೊಂಡಿರುತ್ತವೆ. ಮೊಟ್ಟೆ ಇಡುವುದಕ್ಕೆ ಬೆಚ್ಚನೆಯ ವಾತಾವರಣ ಬೇಕಿರುತ್ತದೆ. ಹತ್ತಿ 'Soft & Thermally Insulator' ಅಂತ ಅದೇಗೋ ಹಕ್ಕಿಗಳಿಗೆ ಗೊತ್ತಿದೆ. ಬೆಚ್ಚನೆ ಜೊತೆಗೆ ಹಲವು ಅನುಕೂಲಕರ ವಾತಾವರಣವನ್ನು ಹತ್ತಿ ಒದಗಿಸಿಕೊಳ್ಳುತ್ತದೆ. ಇದು ಸಾಮಾನ್ಯದ ಸಂಗತಿ.
ಒಮ್ಮೊಮ್ಮೆ ಸಿಗರೇಟ್ ಫಿಲ್ಟರಿನ ಹತ್ತಿಯಿಂದಲೇ ತಯಾರಾದ ಹಾಸಿಗೆ ಕಾಣುತ್ತದೆ. ಹತ್ತಿ ಸಿಗದಿದ್ದಾಗ ಹಾಗೆ ಮಾಡಬಹುದು ಎಂದುಕೊಳ್ಳೋಣವೆಂದರೆ, ಎಲ್ಲ ಗೂಡುಗಳಲ್ಲಿ ಆ ಹಾಸಿಗೆ ಇರೋದಿಲ್ಲ, ಆದರೆ ಫಿಲ್ಟರ್ ಗಳು ಮಾತ್ರ ಚೆಲ್ಲಾಪಿಲ್ಲಿಯಾಗಿ ಅಲ್ಲೊಂದು ಇಲ್ಲೊಂದು ಬಿದ್ದಿರುತ್ತವೆ.

ಇದರ ಕುರಿತು ಅನ್ವೇಷಣೆ ಮಾಡಲೆಂದು ಆ ವಿಜ್ಞಾನಿಗಳು ಸಿಗರೇಟ್ ಫಿಲ್ಟರ್ ಇರುವ ಎರಡು ಗೂಡುಗಳನ್ನು ಗುರುತಿಸಿ ಒಂದು ಗೂಡಿನಲ್ಲಿರುವ ಸಿಗರೆಟ್ ಫಿಲ್ಟರ್ ಗಳನ್ನು ಹೊರಹಾಕಿ ಸಾಮನ್ಯ ಹತ್ತಿ ಇಡುತ್ತಾರೆ.  ಹಲವು ದಿನಗಳ ನಂತರ ಗಮನಿಸಿದಾಗ, ಸಾಮಾನ್ಯವಾಗಿ ಗೂಡುಗಳಲ್ಲಿ ಕಾಣಸಿಗುವ ಹುಳು-ಉಪ್ಪಟೆಗಳ ಸಂಖ್ಯೆಯಲ್ಲಿ ಆ ಗೂಡುಗಳು ವ್ಯತ್ಯಾಸ ತೋರುತ್ತವೆ. ಲೆಕ್ಕಕ್ಕೆ ಪರಿಗಣಿಸುವಷ್ಟು ಸುಮಾರು ಸಣ್ಣ ಹುಳುಗಳು ಸಾಮನ್ಯ ಹತ್ತಿಯ ಗೂಡಲ್ಲಿ ಮತ್ತು ಸಿಗರೇಟ್ ಫಿಲ್ಟರ್ ಇದ್ದ ಗೂಡಲ್ಲಿ ಅವುಗಳ ಸಂಖ್ಯೆ ಕೇವಲ ೬%.
ಈ ಒಂದು ಪ್ರಯೋಗದಿಂದ ಹಕ್ಕಿಗಳು ಸಿಗರೇಟ್ ಫಿಲ್ಟರ್ ನ್ನೇ ಏಕೆ ಬಳಸುತ್ತವೆ ಎಂಬುದರ ಬಗ್ಗೆ ಹೊಸ ಮಾಹಿತಿಗಳು ಬೆಳಕಿಗೆ ಬರುತ್ತವೆ.

ಸಾಮಾನ್ಯವಾಗಿ ಕೆಲವೊಂದು ಪರಾವಲಂಬಿ ಹುಳುಗಳು(ಕೀಟ) ಹಕ್ಕಿಗಳ ಗೂಡನ್ನೇ ಅವಲಂಬಿಸಿರುತ್ತವೆ. ಆ ಕೀಟಗಳಿಂದ ಹಕ್ಕಿಗಳು ಕೆಲವು ತೊಂದರೆಗಳಿಗೆ ಒಳಗಾಗುವ ಸಂಭವವಿವೆ. ಒಮ್ಮೊಮ್ಮೆ ರಕ್ತ ಹೀರುವ ಕೀಟಗಳೂ ಸೇರಿಕೊಳ್ಳುತ್ತವೆ. ಅವುಗಳನ್ನು ತಡೆಯಲು ಹಸಿಯಾದ ಹುಲ್ಲು/ಸಸಿಯ ಎಳೆ ಒಮ್ಮೊಮ್ಮೆ ಕೆಲಸಕ್ಕೆ ಬರುತ್ತದೆ. ಯಾಕೆಂದರೆ ಹಸಿ ಸಸಿ ಹೊರಸೂಸುವ ​ಒಂದು ವಾಸನೆ(smell from some secondary volatile compounds) ಆ ಹುಳುಗಳಿಗೆ ಪ್ರತಿರೋಧ ಒಡ್ಡುತ್ತದೆ. i.e., acts as repellant. ಜೊತೆಗೆ ಆ ಹಸಿ, ಹಕ್ಕಿಮೊಟ್ಟೆ/ಮರಿಗಳಿಗೆ ಅನುಕೂಲಕರ ಕೂಡ. 

'ನಿಕೋಟಿನ್' ಎಂಬ ಕೆಮಿಕಲ್ ನಿಸರ್ಗದತ್ತವಾಗಿ ದೊರಕುವ ಒಂದು ಪ್ರಬಲ ಕೀಟನಾಶಕ ಎಂದು ಗುರುತಿಸಿಕೊಂಡಿದೆ. ಕೆಲವು ಸಸಿಗಳಲ್ಲಿ ಈ ಕೀಟನಾಶಕ ಇರುವುದರಿಂದ ಕೆಲವೊಂದು ಕೀಟಗಳು ಅವುಗಳ ಹತ್ತಿರ ಸುಳಿಯುವುದೇ ಇಲ್ಲ.

ಆ ಹಕ್ಕಿಗಳು ಕಂಡುಕೊಂಡಿರೋದು ಇದನ್ನೇ. 
ಸಾಮಾನ್ಯವಾಗಿ ಬಳಸಿದ (ಸೇದಿದ) ಸಿಗರೇಟಿನ ಫಿಲ್ಟರ್ನಲ್ಲಿ ಉಳಿದಿರುವ ಹಲವಾರು ಕೆಮಿಕಲ್ ಗಳ ಜೊತೆಗೆ ನಿಕೋಟಿನ್ (Rich alkaloid Nicotin) ಸ್ವಲ್ಪ ಪ್ರಮಾಣದಲ್ಲಿ ಉಳಿದಿರುತ್ತದೆ. ಹಕ್ಕಿಗಳು ಅವುಗಳನ್ನು ಬಳಸಿದಾಗ ಆ ನಿಕೋಟಿನ್ ಕ್ರಿಮಿನಾಶಕವಾಗಿ ಉಪಯೋಗವಾಗುತ್ತದೆ.
ಬಳಸಿದ ಮತ್ತು ಬಳಸದೆ ಇರುವ ಸಿಗರೇಟ್ ಫಿಲ್ಟರ್ ಇಟ್ಟು ಗಮನಿಸಿದಾಗ ಸೇದಿದ ಸಿಗರೇಟಿನ ಫಿಲ್ಟರ್ ಮಾತ್ರ ಗೂಡುಗಳಲ್ಲಿ ರಿಪೆಲ್ಲಂಟ್ ಆಗಿ ಕೆಲಸ ಮಾಡಬಲ್ಲದು ಎಂಬ ಅಂಶ ಕೂಡ ಬೆಳಕಿಗೆ ಬಂದಿದೆ.

ನೋಡಿ 'new ingredients for old recipe' ಎಂದು ಆ ವಿಜ್ಞಾನಿಗಳು ಪ್ರಕಟಿಸಿರೋ ಹಾಗೆ ಬೇಕಿರೋ ಅದೇ ಹಳೆ ಔಷದವನ್ನು ಹೊಸ ವಸ್ತುಗಳಿಂದ ಹಕ್ಕಿಗಳು ಕಂಡುಕೊಂಡಿವೆ.
ಸಿಗರೇಟ್ ಸೇವನೆಯ ಕುರಿತು ಕೇವಲ ನೆಗಟಿವ್ ಮಾತುಗಳೇ ಕೇಳಿಬರುತ್ತಿರುವ ಈ ಕಾಲದಲ್ಲಿ ಸಿಗರೇಟ್ ಸೇವನೆ ಉಪಯೋಗಕ್ಕೆ ಬರುತ್ತಿದೆ ಅಂದರೆ ಅದು ಇಲ್ಲಿ - ಈ ಹಕ್ಕಿಗಳ ಗೂಡುಗಳಲ್ಲಿ. ಅದೂ ಕೂಡ ಸೇದಿ ಬೀಸಾಡಿರೋ ಫಿಲ್ಟರ್ ಗಳು.. ಹೊಗೆ ಬಿಡುವವರೇ ಕೇಳಿ!! ಸೇದಿದ ಫಿಲ್ಟರ್ ಅನ್ನು ಯಾವುದೊ ಕಾಣದ ಕಡೆ ಎಸಿಯೋ ಬದಲು ಆರಿಸಿದ ನಂತರ ಈ ಪುಟ್ಟ ಹಕ್ಕಿಗಳಿಗೆ ಕಾಣೋ ಹಾಗೆ ಹೆಮ್ಮೆಯಿಂದ ಬಿಸಾಡಿ.

ಸಿಗರೇಟ್ ಫಿಲ್ಟರ್ ಅನ್ನು ಈ ರೀತಿ ವಿಭಿನ್ನವಾಗಿ ಬಳಸುವ ಹಕ್ಕಿಗಳು ಹೆಚ್ಚಾಗಿ ನಗರವಾಸಿಗಳು. ಬಹುಶಃ ಬದಲಾಗುತ್ತಿರುವ ಪರಿಸರಕ್ಕೆ ಹೊಂದಿಕೊಳ್ಳಲೋ ಏನೋ ಈ ಹೊಸ ವಿಧಾನ ಕಂಡುಕೊಂಡಿರಬಹುದು.
ಆ ಪುಟಾಣಿ ಹಕ್ಕಿಗಳು ಸಿಗರೇಟ್ ಫಿಲ್ಟರ್ ಬಳಸುತ್ತಿರುವ ಮೂಲ ಉದ್ದೇಶ ಇದೇನಾ.. ಅಲ್ಲಿ ನಿಕೋಟಿನ್ ಉಪಯೋಗವಾಗುತ್ತಿದೆಯಾ ಅಥವಾ ಬೇರೆಯೇ ಕೆಮಿಕಲ್ ಇರಬಹುದಾ.. ಆ ಹಕ್ಕಿಗಳು ಅದನ್ನು ಹೇಗೆ ಕಂಡುಕೊಂಡವೋ. ಸಿಗರೇಟಿನ ಫಿಲ್ಟರ್ ನಲ್ಲಿರುವ ಇತರೆ ರಾಸಾಯನಿಕ ವಸ್ತುಗಳು ಹೇಗೆ ಅವುಗಳ ಮೇಲೆ ಪರಿಣಾಮ ಬೀರಬಲ್ಲವು,... ಇನ್ನೂ ಪ್ರಶ್ನೆಗಳಿಗೆ ಉತ್ತರ ಸಿಗಬೇಕಿದೆ.
Related Posts Plugin for WordPress, Blogger...